ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಕನ್ನಡ ಬರಹಗಾರರಿಗೆ ಆಹ್ವಾನ

By Shami
|
Google Oneindia Kannada News

Toto Funds the Arts
ಟೊಟೊ ಪುರಸ್ಕಾರ 2011| ಕನ್ನಡ ಸೃಜನಶೀಲ ಸಾಹಿತ್ಯ | ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ | ಕೊನೆಯ ದಿನಾಂಕ 15 ಅಕ್ಟೋಬರ್ 2010 |

ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಈವರೆಗೆ ಇಂಗ್ಲಿಷ್ ಲೇಖಕರಿಗೆ ಮಾತ್ರ ಸೀಮಿತವಾಗಿತ್ತು. ಈ ವರ್ಷದಿಂದ ಅದು ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ.

ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2011 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು 18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ನೀವು 1 ಜನವರಿ 1981 ರ ನಂತರ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಪ್ರವೇಶಗಳನ್ನು ಕಳಿಸಬಹುದು. ಈ ಎಲ್ಲ ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ. ಪುರಸ್ಕೃತರು 25,000 ರೂಪಾಯಿಗಳ ನಗದು ಬಹುಮಾನವನ್ನು ಪಡೆಯುವರು. ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2010

ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಬಹುದು. ಈ ಪುರಸ್ಕಾರದ ಉದ್ದೇಶವೇ ಹೊಸ ಬರಹಗಾರರನ್ನು ಗುರುತಿಸುವುದಾಗಿರುವುದರಿಂದ ನೀವು ಈಗಾಗಲೇ ಪ್ರಸಿದ್ಧಿ ಪಡೆದಿರುವ ಲೇಖಕರಾದರೆ ಇದಕ್ಕೆ ಪ್ರವೇಶಗಳನ್ನು ಕಳಿಸಬೇಡಿ. ಪ್ರತಿ ಪ್ರವೇಶವು 7,500 ಶಬ್ದಗಳನ್ನು ಮೀರಬಾರದು. ಕವಿತೆಗಳನ್ನು ಕಳುಹಿಸುವವರು 6 ರಿಂದ 10 ಕವಿತೆಗಳನ್ನು ಕಳಿಸಬಹುದು.

ಕಥೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು ಆದರೆ ಎಲ್ಲ ಕತೆಗಳೂ ಸೇರಿ 7,500 ಶಬ್ದಗಳನ್ನು ಮೀರಬಾರದು. ನೀವು ಎಲ್ಲ ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನು ಕಳುಹಿಸಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕು. ಉದಾಹರಣೆಗೆ ನೀವು ಎಲ್ಲ ಮೂರೂ ಪ್ರಕಾರಗಳಿಗೆ ಪ್ರವೇಶಗಳನ್ನು ಕಳಿಸಬಯಸಿದರೆ, ನಿಮ್ಮ ಕವಿತೆಗಳನ್ನು ಮೊದಲ ಪ್ರವೇಶವಾಗಿಯೂ, ಕತೆಗಳನ್ನು ಎರಡನೆಯ ಪ್ರವೇಶವಾಗಿಯೂ, ನಾಟಕವನ್ನು ಮೂರನೆಯ ಪ್ರವೇಶವಾಗಿಯೂ ಕಳಿಸಬೇಕು. ಪ್ರತಿಯೊಂದು ಪ್ರವೇಶದ ಮಿತಿ 7,500 ಶಬ್ದಗಳು. ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕಥೆ, ಕವಿತೆ, ನಾಟಕಗಳನ್ನು ಕಳುಹಿಸಬಹುದು.


ನೀವು ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ನಿಮ್ಮ ಹುಟ್ಟಿದ ದಿನಾಂಕ, ಕೃತಿಯು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ ಪ್ರಕಟನೆಯ ವಿವರಗಳನ್ನು ನಮೂದಿಸಿ, ಇದು ನಿಮ್ಮದೇ ಸ್ವಂತ ಸೃಜನಶೀಲ ಕೃತಿಯೆಂಬುದನ್ನು ದೃಢೀಕರಿಸಿದ ಲಿಖಿತ ಹೇಳಿಕೆಯನ್ನು ಲಗತ್ತಿಸಬೇಕು. ಜೊತೆಗೆ ನಿಮ್ಮ ಅಂಚೆಯ ವಿಳಾಸ, ಈಮೇಲ್ ವಿಳಾಸ, ಫೋನ್ ನಂಬರುಗಳು (ಚರ ಮತ್ತು ಸ್ಥಿರ ದೂರವಾಣಿ ಸಂಖ್ಯೆಗಳು) ಹಾಗೂ ನಿಮ್ಮ ಸ್ವವಿವರಗಳುಳ್ಳ ಚಿಕ್ಕ ಬಯೋಡಾಟಾ ಕೂಡ ಪ್ರತ್ಯೇಕ ಹಾಳೆಯ ಮೇಲೆ ಬರೆದು ಕಳಿಸಿ.

ನಿಮ್ಮ ಪ್ರವೇಶಗಳನ್ನು ಸಾದಾ ಅಂಚೆಯ ಮೂಲಕ ಅಥವಾ ಕೊರಿಯರ್ ಮೂಲಕ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳಿಸಿ. ಹಸ್ತಪ್ರತಿಗಳನ್ನು ಹಾಳೆಯ ಒಂದೇ ಮಗ್ಗಲಿಗೆ ಕಂಪ್ಯೂಟರ್ ಬಳಸಿ ಅಥವಾ ಟೈಪ್ ಮಾಡಿ ಕಳಿಸಬೇಕು. ಹಸ್ತಪ್ರತಿಯಲ್ಲದೇ ನೀವು ಈಮೇಲ್ ಮೂಲಕ ಕೂಡ ಪ್ರವೇಶಗಳನ್ನು ಕಳಿಸಬಹುದು. ಕನ್ನಡ ಅಕ್ಷರಗಳಿಗೆ ಬರಹ/ನುಡಿ ಮಾತ್ರ ಬಳಸಿ. ಕೇವಲ ಈಮೇಲ್ ಮೂಲಕ ಮಾತ್ರ ಬಂದ ಪ್ರವೇಶಗಳನ್ನು ಪರಿಗಣಿಸಲಾಗುವುದಿಲ್ಲ. ಮುದ್ರಿತ ಪ್ರತಿ ಕಳಿಸುವುದು ಕಡ್ಡಾಯ. ಪುರಸ್ಕಾರದ ಕುರಿತು ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಪ್ರವೇಶಗಳನ್ನು ಈ ವಿಳಾಸಕ್ಕೆ ಕಳಿಸಿ:

Toto Funds the Arts (TFA)
H 301, Adarsh Gardens, 8th Block, 47th Cross,
Jayanagar, Bangalore 560 082
Phone 080 2699 0549

ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಪುರಸ್ಕಾರವನ್ನು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾದುದು ಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದು.

ಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಗಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವಾ ಸಂಸ್ಥೆಯ ವೃತ್ತಪತ್ರದಲ್ಲಿ ಪುರಸ್ಕಾರದ ಪ್ರಚಾರಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ.ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇ ಆಗಿರುತ್ತದೆ.

ಟಿ.ಎಫ್.ಎ. ಸಂಸ್ಥೆಯು ಆಂಗಿರಸ 'ಟೊಟೊ' ವೆಲ್ಲಾನಿಯ ಸ್ಮರಣಾರ್ಥ 2004 ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X