• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ತ್ರೀವಾದ, ಕುಟುಂಬ ವ್ಯವಸ್ಥೆಯ ಕವಲು

By * ವಿನಾಯಕ ಎಲ್ ಪಟಗಾರ್ ಬೆಟ್ಕುಳಿ, ಕುಮಟಾ
|
Google Oneindia Kannada News
"ಆವರಣದ" ಗುಂಗಿನಿಂದ ಹೊರಬಂದು ವಿಶ್ರಮಿಸಿಕೊಳ್ಳುತ್ತಿರುವ ಹೊತ್ತಿಗೆ ಎಸ್ ಎಲ್ ಭೈರಪ್ಪನವರು ಓದಲು "ಕವಲು" ಕೊಟ್ಟಿದ್ದಾರೆ. ಕನ್ನಡ ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನುವ ಕೂಗುಗಳ ನಡುವೆ "ಕವಲು". ಪ್ರಕಟಣೆಗೊಂಡ ಒಂದೇ ವಾರದಲ್ಲಿ ನಾಲ್ಕನೇ ಮುದ್ರಣ ಕಾಣುತ್ತಿರುವುದು ನಿಜಕ್ಕೂ ಕನ್ನಡಿಗರಿಗೆ ಸಂತೋಷದ ಸಂಗತಿ. ಇದು ಎಸ್ ಎಲ್ ಭೈರಪ್ಪನವರ ಕೃತಿಗಳಿಗೆ ಇರುವ ಜನಪ್ರಿಯತೆಯನ್ನು ತೋರಿಸುತ್ತದೆ

"ಆವರಣ"ದಂತೆ "ಕವಲು" ಯಾವುದೇ ವಿವಾದಗಳನ್ನು ಇನ್ನುವವರೆಗೂ ಹುಟ್ಟುಹಾಕಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಪರ ಕಾನೂನುಗಳ ದುರುಪಯೋಗ, ಮಹಿಳಾ ಮಣಿಗಳ ಹೋರಾಟದ ರೀತಿ, ಆಧುನಿಕ ಮಹಿಳಾವಾದ ಕಾರಣ ಛೀದ್ರವಾಗುತ್ತಿರುವ ಭಾರತೀಯ ಕೌಟುಂಬಿಕ ವ್ಯವಸ್ಥೆಗಳ ಬಗ್ಗೆ ಕವಲಿನಲ್ಲಿ ಚೆನ್ನಾಗಿ ಮನಸ್ಸಿಗೆ ನಾಟುವಂತೆ ಚಿತ್ರಿತವಾಗಿದೆ.

ಮುಖ್ಯವಾಗಿ ಎರಡು ಮಧ್ಯಮ ವರ್ಗದ ಉನ್ನತ ಕೆಲಸದಲ್ಲಿರುವ ಕುಟುಂಬಗಳಲ್ಲಿ ಉಂಟಾಗುವ ತಲ್ಲಣಗಳ ಬಗ್ಗೆ ಕವಲಿನಲ್ಲಿ ವಿಸ್ತೃತವಾಗಿ ಚಿತ್ರಿತವಾಗಿದೆ. ಕಾದಂಬರಿಯ ಪ್ರಮುಖ ಪಾತ್ರಧಾರಿಯಾದ ಜಯಕುಮಾರ ಸ್ವಂತ ಪರಿಶ್ರಮದಿಂದ ಕಂಪನಿ ಕಟ್ಟಿ ಬೆಳಸಿದ ಸಾಹಸಿ.

ಈತನ ಬೆಳವಣಿಗೆಗೆ ಜೊತೆ ಜೊತೆಯಾಗಿ ಹೆಗಲುಕೊಟ್ಟು ದುಡಿದವಳು ಮಡದಿ ವೈಜಯಂತಿ ಅಪಘಾತದಲ್ಲಿ ಮರಣಹೊಂದಿದಾಗ ಎರಡನೇ ಹೆಂಡತಿಯಾಗಿ ಅದು ಒಂದು ರೀತಿಯಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಅವನ ಮನೆಗೆ ಕಾಲಿಟ್ಟವಳು ಮಹಿಳಾವಾದದಿಂದ ಪ್ರೇರಣೆಗೊಂಡು ಬದುಕುತ್ತಿರುವ ಮಂಗಳೆ.

ಅಪಘಾತದಿಂದ ಮಂದ ಬುದ್ಧಿಯಾಗಿರುವ ಮಗಳು ಪುಟ್ಟಕ್ಕನನ್ನು ಅತ್ಯಂತ ಪ್ರೀತಿಯಿಂದ ಮಾನವೀಯತೆಯಿಂದ ನೋಡಿಕೊಳ್ಳುತ್ತಿರುವ ತಂದೆ ಜಯಕುಮಾರ. ಇವರಿಬ್ಬರ ತಂದೆ ಮಗಳ ಸಂಬಂಧ ಬಗ್ಗೆನೆ ಅಪಾರ್ಥ ಕಲ್ಪಿಸಿ ನೋಡುವ ಮಂಗಳ ತಾನು ಮದುವೆಯಾದ ಮೇಲು ಮೊದಲ ಪ್ರೇಮಿಯೊಡನೆ ಸಂಬಂಧ ಮುಂದುವರಿಸಿಕೊಂಡು ಹೊಗುತ್ತಾಳೆ.

ತನ್ನಿಚ್ಚೆಯಂತೆ ನಡೆದುಕೊಳ್ಳಲಿಲ್ಲವೆಂದು ಪೋಲಿಸರಿಗೆ ದೂರು ಕೊಟ್ಟು ಗಂಡನನ್ನು ಜೈಲಿಗೆ ಹಾಕುತ್ತಾಳೆ. ಮುಂದೆ ಡೈವೋರ್ಸ್ ಗೆ ಅರ್ಜಿ ಹಾಕಿ ಅವನು ಕಷ್ಟಪಟ್ಟು ದುಡಿದು ಸಂಪಾದಿಸಿದ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಯಾವುದೇ ಪರಿಶ್ರಮವಿಲ್ಲದೇ ಪಡೆಯುತ್ತಾಳೆ. ಜಯಕುಮಾರ ಬುದ್ಧಿಮಾಂದ್ಯ ಮಗಳ ಜೊತೆ ಬೀದಿಗೆ ಬೀಳುತ್ತಾನೆ.

ಇನ್ನೊಂದು ಕುಟುಂಬದಲ್ಲಿ ವಿನಯಚಂದ್ರ ಕಂಪನಿಯೊಂದರಲ್ಲಿ ಉನ್ನತ್ತ ಹುದ್ದೆಯಲ್ಲಿದ್ದರೂ ತನ್ನ ಹಳ್ಳಿಯ ಜೀವನವನ್ನು, ತನ್ನ ತಾಯಿ ತಮ್ಮಂದಿರನ್ನು ಮರೆಯದಂತಹ ಸಹೃದಯ ಜೀವಿ. ಇದಕ್ಕೆ ವಿರುದ್ಧವಾಗಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ಯೂನಿವರ್ಸಿಟಿಯೊಂದರಲ್ಲಿ ಇಂಗ್ಲೀಷ್ ಅಧ್ಯಾಪಕಿಯಾಗಿರುವ ಇಳಾ ಅವನ ಹೆಂಡತಿ.

ಅವರಿಬ್ಬರ ಮುದ್ದಿನ ಮಗಳು ಸುಜಯಾಳಿಗೆ ತಂದೆಯಂತೆ ಹಳ್ಳಿ ವಾತಾವರಣ ಇಷ್ಟ. ಭಡ್ತಿ ಸಿಕ್ಕು ದೆಹಲಿಗೆ ಹೋಗಬೇಕಾಗಿ ಬಂದಾಗ ಅವನ ಜೊತೆ ಹೋಗಲು ಒಪ್ಪದೆ, ಇಳಾ ಬೆಂಗಳೂರಿನಲ್ಲಿ ಉಳಿಯುತ್ತಾಳೆ. ಅಲ್ಲದೆ ಮುಂದೆ ಮಂತ್ರಿಯೊಬ್ಬನ ಜೊತೆ ಸ್ನೇಹ ಬೆಳಸಿ ಅದು ದೈಹಿಕ ಸಂಬಂಧದವರೆಗೂ ಮುಂದುವರಿಯುತ್ತದೆ. ಅದನ್ನು ಮಗಳು ಪ್ರಶ್ನಿಸಿದಾಗ ನೀನು ಬಾಯ್ ಫ್ರೆಂಡ್ ನ ಮಾಡಿಕ್ಕೊ ಎನ್ನುವ ಮಾತು ತಾಯಿಯಿಂದ ಬರುತ್ತದೆ.

ಇದು ಅನಿಲ್ ಕುಮಾರನಿಗೆ ಗೊತ್ತಾಗಿ ಗುಟ್ಟಾಗಿ ಮಂತ್ರಿ ಮತ್ತು ಅವಳ ಸಂಬಂಧಗಳ ಪೋಟೋ ತೆಗೆದು ಅವಳಿಗೆ ಒಂದು ರೀತಿಯಲ್ಲಿ ಬ್ಲಾಕ್ ಮೇಲ್ ಮಾಡುವುದರ ಮೂಲಕ ಯಾವುದೇ ಪರಿಹಾರ ನೀಡದೇ ಅವಳಿಂದ ಡೈವೋರ್ಸ್ ಪಡೆದುಕೊಳ್ಳಲು ಯಶಸ್ವಿಯಾಗುತ್ತಾನೆ.

ಮಂಗಳೆ ಮತ್ತು ಇಳಾ ಪಾತ್ರಗಳು ಆಧುನಿಕ ಮಹಿಳಾವಾದವನ್ನು ಪ್ರತಿನಿಧಿಸಿದ್ದಾರೆ. ಇವರಿಬ್ಬರು ತಾವೂ ಗಂಡನ ಶೋಷಣೆಯಿಂದ ಮುಕ್ತರಾಗಬೇಕು, ನಾವೂ ಅವರಿಗೆ ಸಮಾನರು, ನಮಗೂ ಸಮಾನವಾದ ಹಕ್ಕಿದೆ ಎಂದು ಹೋರಾಟಮಾಡಿದರೂ, ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳುವದರ ಮೂಲಕ ಇನ್ನೊಂದು ರೀತಿಯಲ್ಲಿ ತಮಗೆ ಗೊತ್ತಿಲ್ಲದ ರೀತಿಯಲ್ಲಿ ಪುರುಷರ ದೌರ್ಜನ್ಯಕ್ಕೆ ಒಳಗಾದ ಹಾಗಾಗಿಲ್ಲವೇ?

ಗಂಡನ ವಿರುದ್ಧ ಸಾರ್ವಜನಿಕವಾಗಿ ಹೋರಾಡುವ ಆಧುನಿಕ ಮಹಿಳಾ ಮಣಿಗಳು ತಮ್ಮ ವಿವಾಹೇತರ ಸಂಬಂಧಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳಲು ಯಾಕೆ ಹಿಂಜರಿಯುತ್ತಾರೆ? ಮಂಗಳೆ ತಾನೂ ಗಂಡನ ವಿರುದ್ಧದ ಹೋರಾಟದಲ್ಲಿ ಗೆದ್ದೆ ಎಂದು ಕೊಂಡರೂ ಪುಟ್ಟಕ್ಕನಂತಹ ಬುದ್ಧಿಮಾಂದ್ಯಳನ್ನು ಬೀದಿಗೆ ತಳ್ಳಿದ್ದು ಇನ್ನೊಂದು ಮಹಿಳೆಯ ಶೋಷಣೆಯಲ್ಲವೇ? ಇದು ಮಹಿಳಾ ವಾದಕ್ಕಾಗಲಿ, ಮಹಿಳಾಪರ ಕಾನೂನುಗಳಿಗಾಗಲಿ ತಪ್ಪು ಎನಿಸಲಿಲ್ಲವೇ?ಮಹಿಳೆಯರಿಂದ ಮಹಿಳೆಗೆ ಆಗುವ ಶೋಷಣೆಗೆ ಮಹಿಳಾ ಹೋರಾಟಗಾರರು ಏನನ್ನುತ್ತಾರೆ?

ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಇಂದು ಗಂಡ ಹೆಂಡತಿ ಸಂಬಂಧಗಳಲ್ಲಿ ಪ್ರೀತಿ, ನಂಬಿಕೆ, ಭಾವನಾತ್ಮಕ ಸಂಬಂಧಗಳು ಮರೆಯಾಗಿ ಕೇವಲ ವ್ಯವಹಾರ ಮಾತ್ರ ಉಳಿದುಕೊಂಡಿದೆ ಎನ್ನುವದನ್ನು ಕವಲಿನಲ್ಲಿ ಹೇಳಿದ್ದಾರೆ. ಕಾದಂಬರಿ ಓದುತ್ತ ಹೊಗುತ್ತಿದ್ದಂತೆ ಅದರಲ್ಲಿನ ಪಾತ್ರಗಳು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಆಪ್ತವಾಗಿದೆ.

ಉನ್ನತ ಶಿಕ್ಷಣಗಳಲ್ಲಿ ಪಾಶ್ಚಿಮಾತ್ಯದ ಪ್ರಭಾವೋ ಏನೋ ಆಧುನಿಕ ಮಹಿಳೆಯರು, ಮುಕ್ತ ಸಂಸ್ಕೃತಿಯನ್ನು ಬಿಡಲಾಗದೆ, ಇತ್ತ ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಳ್ಳಲಾಗದೆ ಒದ್ದಾಡುವ ಸಂದಿಗ್ಧ ಪರಿಸ್ಥಿತಿಯನ್ನು "ಕವಲು"ನಲ್ಲಿ ಚಿತ್ರಿಸಿದ್ದಾರೆ. ಕವಲು ಪೂರ್ತಿ ಓದಿ ಮುಗಿಸಿದಾಗ ಏಲ್ಲೋ ಒಂದು ಕಡೆ ನಮ್ಮ ಮನದ ಮೂಲೆಯಲ್ಲಿ ಇಂದಿನ ಆಧುನಿಕ ಮಹಿಳೆಯರ ಬಗ್ಗೆ ನಕರಾತ್ಮಕ ಭಾವನೆ ಮೂಡಿದರೆ ತಪ್ಪು ನಮ್ಮದಲ್ಲ. "ಕವಲು" ಕಾದಂಬರಿಯದು. ಓದುವ ಖುಷಿ ನಿಮ್ಮದಾಗಲಿ.

ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X