ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಅಮಿತಾಭ್ ಒಬಾಮಾ ಮತ್ತು ನಿಮ್ಮ ಪ್ರೀತಿಯ

By ವಿನಾಯಕ ಪಟಗಾರ, ಬೆಟ್ಕುಳಿ, ಕುಮಟಾ
|
Google Oneindia Kannada News

ಲೆಫ್ಟಿ, ಎಡಚ, ರೊಡ್ಡ ಎಂದೆಲ್ಲಾ ಕರೆಯಲಾಗುವ ಎಡಗೈ ಶೂರರು ಮಹಾ ಕ್ರಿಯಾಶೀಲರು. ಎಡಗೈಯಲ್ಲಿ ಊಟ ಮಾಡುವುದು, ಸಹಿ ಹಾಕುವುದು, ಫೈಟ್ ಮಾಡುವುದು, ಮೇಷ್ಟ್ರು ಎಡಗೈಯಲ್ಲಿ ಬೆತ್ತ ಹಿಡಿದಿರುವುದನ್ನು ನೋಡುವುದೇ ಒಂದು ಮಜಾ. ಜಗತ್ತಿನಲ್ಲಿ ಬಲಗೈಗಳೇ ಅಧಿಕವಾಗಿದ್ದರೇನಂತೆ ಅವರೂ ಎಡಗೈಯನ್ನು ಒಂದಿಲ್ಲ ಒಂದು ಹಂತದಲ್ಲಿ ಬಳಸೇಬಳಸುತ್ತಾರೆ ಅಲ್ಲವೆ? ಇನ್ನು ಎಡಚ ಎಂದು ಕೀಳರಿಮೆ ಏಕೆ? ಎಡಚರಾಗಿದ್ದಕ್ಕೆ ಹೆಮ್ಮೆಪಡಿ. ಇಂದು ಅಂತಾರಾಷ್ಟ್ರೀಯ ಎಡಚರ ದಿನಾಚರಣೆಯಂತೆ. ಎಡಚರಿಗೆಲ್ಲ ಅಭಿನಂದನೆಗಳು.

***
ನಾನು ಚಿಕ್ಕವನಿದ್ದಾಗ ನಡೆದ ಒಂದು ಚಿಕ್ಕ ಘಟನೆ. ಮನೆಯಲ್ಲಿ ಸತ್ಯನಾರಾಯಣ ಪೂಜೆ. ಪೂಜೆ ಮುಗಿಸಿದ ಭಟ್ಟರು ಮನೆವರಿಗೆಲ್ಲ ದೇವರ ಕಳಸಕ್ಕೆ ತೆಂಗಿನಕಾಯಿ ಒಡೆಯಲು ಹೇಳಿದ್ದರು. ಅದರಂತೆ ನಾನು ತೆಂಗಿನಕಾಯಿ ಒಡೆದೆ. ಆಗ ಭಟ್ಟರು ದೇವರಿಗೆ ಬಲಗೈಯಲ್ಲೇ ತೆಂಗಿನ ಕಾಯಿ ಒಡೆಯಬೇಕು, ತೆಂಗಿನಕಾಯಿ ಸರಿಯಾಗಿ ಒಡೆಯಲು ಬರುದಿಲ್ಲವಾ ಎನ್ನುವ ರೀತಿಯಲ್ಲಿ ಆಕ್ಷೇಪವೆತ್ತಿದ್ದರು. ಆಗಲೇ ನನಗೆ ಗೊತ್ತಾಗಿದ್ದು. ನಾನು ಸಹಜವಾಗಿ ಎಡಗೈಯಲ್ಲಿ ಕತ್ತಿ ಹಿಡಿದು ತೆಂಗಿನಕಾಯಿ ಒಡೆದಿದ್ದನೆ ಅಂದು. ಅಂದರೆ ನಾನು ಎಡಚರನಾಗಿದ್ದೆ. ಅಲ್ಲಿ ಸೇರಿದ ಸಂಬಂಧಿಕರಿಂದ ಅಪಹಾಸ್ಯಕ್ಕೊಳಗಾಗಿದ್ದೆ. ಅಂದೇ ಕೊನೆ. ಇಲ್ಲಿಯವರೆಗೂ ಯಾವುದೇ ದೇವರಿಗೆ ನಾನು ಕಾಯಿ ಒಡೆಯಲು ಹೋಗಿಲ್ಲ. ಯಾವುದೇ ಧಾರ್ಮಿಕ ಕಾರ್‍ಯಕ್ರಮಗಳಲ್ಲಿ ಮುಂದಾಗಿ ಭಾಗವಹಿಸುತ್ತಿಲ್ಲ. ಎಡಚನಾಗಿದ್ದಕ್ಕೆ ನನಗೆ ನೆನಪಿನಲ್ಲಿದ್ದಂತೆ ಮೊದಲು ಬಾರಿ ಅನುಭವಿಸಿದ ಅವಮಾನ ಅದು.

International left handers day

ಮುಂದೆ ಹೈಸ್ಕೂಲ್, ಕಾಲೇಜ್ ದಿನಗಳಲ್ಲಿ ಗೆಳೆಯರಿಂದ ರೊಡ್ಡ ಎಂದು ಗೇಲಿ ಮಾಡಿಸಿಕೊಳ್ಳುವುದು ಮಾಮೂಲಾಗಿತ್ತು. ಆ ರೀತಿ ಗೇಲಿಗೊಳಗಾದಾಗ ಮೊದಮೊದಲು ಮನಸ್ಸಿಗೆ ಹಿಂಸೆ ಎನಿಸಿದರೂ ನಂತರ ಅದನ್ನೇ ಕಾಂಪ್ಲಿಮೆಂಟ್ ಅನ್ನೋ ರೀತಿ ಸ್ವೀಕರಿಸತೊಡಗಿದೆ. ಇಂಟರ್ನೆಟ್ ದಿನಮಾನದಲ್ಲಿ ಎಡಚರರ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಗಲಾರಂಬಿಸಿದ್ದವು. ಎಲ್ಲರಿಗೂ ಒಂದೊಂದು ದಿನಾಚರಣೆ ಇರುವಂತೆ ನಮ್ಮಂತ ಎಡವಟ್ಟುಗಳಿಗೊಂದು ದಿನಾಚರಣೆ ಇರುವುದು ಗೊತ್ತಾಗಿ ತುಂಬಾ ಸಂತೋಷವಾಯಿತು. ಅದೇ ಅಗಷ್ಟ 13. ಅಂತಾರಾಷ್ರೀಯ ಎಡಚರ ದಿನಾಚರಣೆ ಈ ಸಂದರ್ಭದಲ್ಲಿ ದಿನನಿತ್ಯ ಎಡಚರರು ಅನುಭವಿಸುವ ಕಷ್ಟಗಳ ಬಗ್ಗೆ ಜನಸಾಮನ್ಯರಲ್ಲಿ ಇರುವ ತಪ್ಪು ನಂಬಿಕೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸೋಣ.

ಸಮೀಕ್ಷೆಯೊಂದರ ಪ್ರಕಾರ ಪ್ರಪಂಚದ ಜನಸಂಖ್ಯೆಯ ಕೇವಲ ಶೇಕಡ 7ರಷ್ಟು ಎಡಚರಿದ್ದಾರೆ. ಎಡಚರು ಅಲ್ಪಸಂಖ್ಯಾತರಾಗಿರುವ ಕಾರಣ ನಿರ್ಲಕ್ಷ್ಯಕ್ಕೂ ಕಾರಣರಾಗಿದ್ದಾರೆ ಎನ್ನಬಹುದು. ಜಗತ್ತಿನ ಎಲ್ಲ ಕಡೆ ಬಲ ಎನ್ನುವ ಶಬ್ಧ ಒಳ್ಳೆಯದು, ಸರಿ, ಶುಭ ಎನ್ನುವ ಅರ್ಥದಲ್ಲಿಯೂ, ಎಡ ಎನ್ನುವ ಶಬ್ಧವನ್ನು ತಪ್ಪು, ಅಶುಭ, ಕೆಟ್ಟದು ಎನ್ನುವ ಅರ್ಥದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರಗಳಲ್ಲಿ ಬಲಕ್ಕೆ ಇರುವ ಮಹತ್ಯ ಎಡಕ್ಕೆ ಇಲ್ಲ.ಇಂತಹ ಪರಿಸ್ಥಿತಿಯಲ್ಲಿ ಎಡಚ ಹೆಣ್ಣುಮಕ್ಕಳ ಪರಿಸ್ಥಿತಿ ಏನಾಗಿರಬೇಡ ಹೇಳಿ? ಸಮಧಾನದ ಸಂಗತಿಯೆಂದರೆ ಸಮೀಕ್ಷೆಯೊಂದರ ಪ್ರಕಾರ ಎಡಚ ಹೆಣ್ಣುಮಕ್ಕಳ ಸಂಖ್ಯೆ ತೀರ ಕಡಿಮೆ.

ಹುಟ್ಟುಗುಣ : ನಮ್ಮಲ್ಲಿ ಎಷ್ಟೋ ಜನ ಎಡಚರರಾಗುವುದು ರೂಢಿಯಿಂದ ಬಂದಿರುವಂತಹದು, ಚಿಕ್ಕಂದಿದಲ್ಲೇ ಸರಿಯಾಗಿ ಅಭ್ಯಾಸ ಮಾಡಿದ್ದರೆ ಎಡಚರರಾಗುವುದನ್ನು ತಪ್ಪಿಸಬಹುದು ಎಂದು ತಪ್ಪು ತಿಳಿದುಕೊಂಡಿದ್ದಾರೆ. ನನ್ನದೇ ಉದಾಹರಣೆ ತೆಗೆದುಕೊಳ್ಳಿ. ಚಿಕ್ಕವನಿದ್ದಾಗ ನಾನು ಎಲ್ಲದ್ದಕ್ಕೂ ಎಡಗೈ ಮುಂದೆ ಮಾಡತೊಡಗಿದ್ದಾಗ ಡಾಕ್ಟರೊಬ್ಬರ ಹತ್ತಿರ ತಾಯಿಯವರು ಸಲಹೆ ಕೇಳಿದ್ದಾರೆ. ಅವರು ಕೊಟ್ಟ ಸಲಹೆ ಏನು ಗೊತ್ತೆ? ಎಡಗೈಗೆ ಏನು ಮಾಡಲಿಕ್ಕಾಗದಂತೆ ಗಾಯಗೊಳಿಸುವಂತೆ ಹೇಳಿದ್ದಾರೆ. ಆದರೆ ತಾಯಿಯವರಿಗೆ ಅದು ಒಪ್ಪಿಗೆಯಾಗದೆ ಬೇರೆ ಬೇರೆ ರೀತಿ ಅನುಸರಿಸಿ ನಾನು ಎಡಗೈಯಲ್ಲಿ ಬರೆಯುವದನ್ನು ತಪ್ಪಿಸಲು ಪ್ರಯತ್ನಿಸಿ ಸೋತಿದ್ದಾರೆ. ಒಮ್ಮೆ ಬಿದ್ದು ಎಡಗೈ ನೋವಾದರೂ ಅದರಲ್ಲೇ ಬರೆದಿದ್ದೆನೇ ಹೊರತು ಬಲಗೈ ಮುಂದೆ ಬರಲಿಲ್ಲಾ.

ಪಾಲಕರಲ್ಲಿ ಒಂದು ವಿನಂತಿ. ಮಕ್ಕಳು ಎಡಗೈಯನ್ನು ಹೆಚ್ಚಾಗಿ ಬಳಸುತ್ತಿದ್ದರೆ, ಅದನ್ನು ಊನವೆಂದಾಗಲಿ, ಅಶುಭವೆಂದು ಪರಿಗಣಿಸಿದಿರಿ. ಹಾಗೂ ಮಕ್ಕಳನ್ನು ಹಿಂಸಿಸಿ, ಹೆದರಿಸದಿರಿ. ಅವು ಸಹಜ ಬೆಳವಣಿಗೆಯಿಂದ ಕುಠಿತವಾಗಬಹುದು. ಮೆದುಳಿನ ಎಡ ಭಾಗ ಪ್ರಬಲವಾಗಿರುವವರು ಬಲಗೈ ಬಳಸುವವರಾಗಿ ಬೆಳೆಯುತ್ತಾರೆ. ಆದರೆ ಎಡಚರರಲ್ಲಿ ಮಾತ್ರ ಮೆದುಳಿನ ಬಲ ಭಾಗ ಪ್ರಬಲವಾಗಿರುತ್ತದೆ. ಹುಟ್ಟಿನಿಂದಲೇ ಎಡ ಬಲ ಎಂದು ನಿರ್ಧರಿತವಾಗುವುದರಿಂದ ಅದಕ್ಕೆ ಸಂಪ್ರದಾಯ, ನಂಬಿಕೆ ಹೆಸರಿನಲ್ಲಿ ನಮ್ಮನ್ನು ಕಡೆಗಣಿಸುವುದು ಸರಿಯೇ?

ಇನ್ನು ಎಡಚರರಿಗೆ ಹುಟ್ಟಿನಿಂದ ಮುಂದೆ ಪ್ರತಿಯೊಂದು ಹಂತದಲ್ಲಿ ಜೀವನ ಸುಲಭವೇನಲ್ಲ. ಯಾಕೆಂದರೆ ಮಾನವ ಬಳಸುವ ಎಲ್ಲ ವಸ್ತುಗಳು ಬಲಗೈ ಬಳಸುವವರಿಗೆ ಅನೂಕೂಲವಾಗಿರುತ್ತದೆ. ದಿನ ನಿತ್ಯ ಬಳಸುವ ಕತ್ತರಿಯಿಂದ ಹಿಡಿದು ಕಂಪ್ಯುಟರಿನ ಕೀ ಬೊರ್ಡ್, ಮೌಸ್ ವರೆಗಿನ ಎಲ್ಲ ರಚನೆ ಬಲಗೈ ಇರುವವರಿಗೆ ಅನೂಕೂಲವಾಗಿರುತ್ತದೆ. ಅದನ್ನು ನಾವೂ ಸಹಜವಾಗಿ ಬಳಸಲು ಸಾಧ್ಯವಾಗದೇ ಕಷ್ಟಪಟ್ಟು ನಾವೂ ಕಲಿಯಬೇಕಾಗುತ್ತದೆ. ಹಸ್ತಲಾಘವ ಮಾಡುವಾಗ ಎಡಗೈ ಮುಂದೆ ಹೋಗಿ ಮುಜುಗರಕ್ಕೆ ಒಳಗಾಗುವುದು, ದೇವರ ಪ್ರಸಾದ ತೀರ್ಥ ತೆಗೆದುಕೊಳ್ಳುವಾಗ ಎಡಗೈ ಮುಂದೆ ಹೋಗಿ ಪುರೋಹಿತನ ಕೆಂಗಣ್ಣಿಗೆ ಒಳಗಾಗುವುದು, ದಿನನಿತ್ಯ ಆಫೀಸಿನಲ್ಲಿ ಸಹಿ ಮಾಡುವಾಗ, ಬರೆಯುವಾಗ ನೆಟ್ಟಗೆ ಇದ್ದ ರಿಜಿಸ್ಟರನ್ನು ಅಡ್ಡ ಇಟ್ಟುಕೊಂಡು ಬರೆದು ಅಪಹಾಸ್ಯಕ್ಕೆ ಒಳಗಾಗುವುದು, ಒಂದೇ ಎರಡೇ... ಹೀಗೇ ದಿನಚರಿಯಲ್ಲಿ ನಾವೂ ಸಹಜವಾಗಿ ಇರಲೂ ಆಗದೇ ಪ್ರತಿಯೊಂದಕ್ಕೂ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಕರ್ಮ ನಮ್ಮದು. ಎಲ್ಲ ಕೆಲಸಕ್ಕೆ ಎಡಗೈ ಮುಂದೆ ಮಾಡುವುದು ಎಡಚರರ ಸಹಜ ನಡವಳಿಕೆ. ಅದನ್ನು ಅಪದ್ದ ಎಂದಾಗಲೀ, ಅಸಹಜ ನಡವಳಿಕೆ ಎಂದಾಗಲಿ, ನಮ್ಮನ್ನು ಪ್ರತ್ಯೇಕ ಎಂದು ಪರಿಗಣಿಸಬೇಡಿ.. ನಾವೂ ನಿಮ್ಮಂತೆ ಮನುಷ್ಯರು.

ದಿನಾಚರಣೆ : ಮೊದಲ ಅಂತಾರಾಷ್ರೀಯ ಎಡಚರ ದಿನಾಚರಣೆ 1976 ಆಗಷ್ಟ 13ರಂದು ಆಚರಿಸಲಾಯಿತು. ಎಡಚರಾಗಿರುವುದಕ್ಕೆ ನಿಜಕ್ಕೂ ಹೆಮ್ಮೆ ಪಟ್ಟುಕೊಳ್ಳುವಂತೆ ಅನೇಕರು ಸಾಧನೆ ಗೈದಿದ್ದಾರೆ. ಬರಾಕ್ ಒಬಾಮಾ ಸೇರಿದಂತೆ ಒಂಬತ್ತು ಮಂದಿ ಎಡಚರು ಅಮೆರಿಕದ ಅಧ್ಯಕ್ಷರಾಗಿದ್ದಾರೆ. ಎಡಚ ಆಟಗಾರರನ್ನು ಸೌತ್ ಪಾ ಎಂದು ಸಹ ಕರೆಯಲಾಗುತ್ತದೆ. ಯುವರಾಜಸಿಂಗ್ ಸತತ ಆರು ಸಿಕ್ಸರ್ ಹೊಡೆದಿದ್ದು ಎಡಗೈಯಲ್ಲಿ. ನಮ್ಮ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಎಡಚ. ಈಜು ಪಟುಗಳಲ್ಲಿ ಹೆಚ್ಚಿನವರು ಎಡಚರು.

ಎಡಚರು ಸಹ ತಾವೂ ಒಬ್ಬಂಟಿ ಎಂದಾಗಲಿ, ಎಡಚರಾಗಿರುವುದು ಒಂದು ಊನ ಎಂದು ಕೊರಗಬೇಕಾಗಿಲ್ಲ. ಮಾನಸಿಕವಾಗಿ ಕುಗ್ಗಬೇಕಾಗಿಲ್ಲ. ಇವತ್ತು ಸಾಕಷ್ಟು ಸೆಲೆಬ್ರಿಟಿಗಳು, ಪ್ರಸಿದ್ಧ ವ್ಯಕ್ತಿಗಳು ಎಡಚರರು ಎನ್ನುವದನ್ನು ಮರೆಯದಿರಿ. ಬರಾಕ್ ಒಬಾಮ್, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಚಿತ್ರನಟರಾದ ಅಮಿತಾಬ್, ಅಭಿಷೇಕ್ ಬಚ್ಚನ್, ಕನ್ನಡದ ವಿಷ್ಣುವರ್ಧನ್, ಸಾಪ್ಟವೇರ್ ದಿಗ್ಗಜ ಬಿಲ್ ಗೆಟ್ಸ್, ವಿಜ್ಞಾನಿಗಳಾದ ಐಸಾಕ್ ನ್ಯೂಟನ್, ಮೇರಿಕ್ಯೂರಿ, ಸುಂದರಿ ಮರ್ಲಿನ್ ಮನ್ರೋ, ತತ್ವಜ್ಞಾನಿ ಅರಿಸ್ಟಾಟಲ್, ನೆಲ್ಸನ್ ಮಂಡೆಲಾ, ಹೀಗೇ ಎಡಚ ಸೆಲೆಬ್ರಿಟಿಗಳ, ಪ್ರಸಿದ್ಧ ವ್ಯಕಿಗಳ ಪಟ್ಟಿ ದೊಡ್ಡದಾಗುತ್ತ ಹೊಗುತ್ತದೆ. ಎಡಚರರೆಂದು ಕುಗ್ಗುವವರಿಗೆ ಇವರೆಲ್ಲ ಸ್ಪೂರ್ತಿಯಾಗಲಿ.

ಅಂದ ಹಾಗೇ ಈ ಲೇಖನ ಕೂಡ ಎಡಗೈಯಲ್ಲೇ ಬರೆದಿದ್ದು. ಕಂಪ್ಯೂಟರ್ ಕೀ ಬೊರ್ಡ ಕುಟ್ಟಿದ್ದು ಸಹ ಎಡಗೈಯಲ್ಲೇ.

English summary
August 13 is observed as International left handers day. Let's wish left handers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X