ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಪ್ರಭದಲ್ಲಿ ಯುಬಿ ಪವನಜರ e-ಪಾಠಶಾಲೆ

By Shami
|
Google Oneindia Kannada News

Dr. UB Pavanaja
ವಿಶ್ವಕನ್ನಡ ಅಂತರ್ಜಾಲತಾಣದ ಮೂಲಕ ಇ-ಕನ್ನಡಿಗರಿಗೆ ಪರಿಚಿತರಾದವರು ಡಾ.ಯುಬಿ ಪವನಜ. ಮೂಲತಃ ವಿಜ್ಞಾನಿಯಾದರೂ ವಿಜ್ಞಾನ ಮಾಹಿತಿಗಳೊಂದಿಗೆ ನಿತ್ಯ ಸರಸವಾಡುವುದು ಅವರ ಪ್ರಿಯವಾದ ಹವ್ಯಾಸ. ಸದ್ಯ ಅವರು ಕನ್ನಡದ ಹೆಸರಾಂತ ಪತ್ರಿಕೆ 'ಕನ್ನಡಪ್ರಭ'ದಲ್ಲಿ ಒಂದು ಸಾಪ್ತಾಹಿಕ ಅಂಕಣವನ್ನು ನಿಭಾಯಿಸುತ್ತಿದ್ದಾರೆ. ಸರಳಗನ್ನಡದಲ್ಲಿ ಸರಳವಾಗಿ ಮಾಹಿತಿ ನೀಡುವ 'ಗಣಕಿಂಡಿ' ಅಂಕಣವನ್ನು ಕನ್ನಡಲ್ಲಿ ಒಂದು ಇ-ಪಾಠಶಾಲೆಯೆಂದರೆ ತಪ್ಪಾಗದು. ಅದರಿಂದ ಆಯ್ದ ಒಂದು ಬರಹದ ರುಚಿಯನ್ನು ದಟ್ಸ್ ಕನ್ನಡ ಓದುಗರಿಗೆ ಪರಿಚಯಿಸುವುದಕ್ಕೆ ಸಂತಸಪಡುತ್ತೇವೆ. ಪ್ರತೀವಾರ ಓದುವ ಆಸಕ್ತಿಯಿರುವ ಕನ್ನಡಿಗರು ಕನ್ನಡಪ್ರಭದ ಸೋಮವಾರದ ಆವೃತ್ತಿಯನ್ನು ತೆರೆದುನೋಡಬಹುದು - ಸಂಪಾದಕ.

* ಡಾ. ಯು.ಬಿ. ಪವನಜ

ಆಟವಾಡೋಣವಾ : ಆಟ ಆಡುವುದು ಯಾರಿಗೆ ಇಷ್ಟವಿಲ್ಲ? ಗಣಕಾಧಾರಿತ ಆಟಗಳಲ್ಲಿ ಪ್ರಮುಖವಾಗಿ ಎರಡು ಬಗೆ. ಗಣಕದಲ್ಲೇ ಆಡುವಂತದ್ದು ಮತ್ತು ಅಂತರಜಾಲತಾಣದಲ್ಲಿ ಆಡುವಂತದ್ದು. ಅಂತರಜಾಲದಲ್ಲೇ ಅಂದರೆ ಜಾಲತಾಣದಲ್ಲಿ ಆಡುವಂತಹ ಆಟಗಳನ್ನು ನೀಡುವಂತಹ ಜಾಲತಾಣಗಳು ಹಲವಾರಿವೆ. ಅಂತಹ ಒಂದು ಭಾರತೀಯ ಜಾಲತಾಣ zapak.com. ಈ ಜಾಲತಾಣದಲ್ಲಿ ಉಚಿತವಾಗಿ ಆಡಬಲ್ಲ ಆಟಗಳು ಹಲವಾರಿವೆ. ಸಾಮಾನ್ಯವಾಗಿ ಆಟಗಳ ಕಡತಗಳು ತುಂಬ ದೊಡ್ಡ ಗಾತ್ರದಾಗಿರುತ್ತವೆ. ಅಂದರೆ ಒಳ್ಳೆಯ ಬ್ರಾಡ್‌ಬ್ಯಾಂಡ್ ಸಂಪರ್ಕ ಇದ್ದರೆ ಈ ಆಟಗಳನ್ನು ಚೆನ್ನಾಗಿ ಆಡಬಹುದು. ಭಾರತದಲ್ಲಿ ಎಲ್ಲರಿಗೂ ಇಂತಹ ಸಂಪರ್ಕ ಇಲ್ಲವೆಂದು ಅರಿತಿರುವ ಈ ಜಾಲತಾಣದವರು ಕಡಿಮೆ ವೇಗದ ಸಂಪರ್ಕ ಇರುವವರಿಗೆಂದೇ ಇನ್ನೊಂದು ಆವೃತ್ತಿಯನ್ನೂ ನೀಡಿದ್ದಾರೆ.

ಈಗ ಡೌನ್‌ಲೋಡ್ ಮಾಡಿಕೊಂಡು ಆಟ ತಯಾರಿಸೋಣವಾ : ಗಣಕದಲ್ಲಿ ಆಟ ಆಡುವುದೇನೋ ಸರಿ. ಅದರಲ್ಲಿ ನಿಮ್ಮದೇನು ಸಾಧನೆ? ಸಾಧ್ಯವಿದ್ದರೆ ಆಟ ತಯಾರಿಸಿ ನೋಡೋಣ ಎಂದು ಯಾರಾದರು ನಿಮಗೆ ಪಂಥಾಹ್ವಾನ ಮಾಡಿದ್ದಾರೆಯೇ? “ಅಯ್ಯೋ ಅದಕ್ಕೆ ತುಂಬ ವರ್ಷಗಳಿಂದ ಪ್ರೋಗ್ರಾಮ್ಮಿಂಗ್ ಕಲಿತಿರಬೇಕು. ಅದು ಕಲಿಯದವರಿಂದ ಅಸಾಧ್ಯ" ಎಂದು ಕರುಬಬೇಕಿಲ್ಲ. ಯಾವುದೇ ಪ್ರೋಗ್ರಾಮ್ಮಿಂಗ್ ಕಲಿಯದೆಯೇ ಆಟ ತಯಾರಿಸಲು ಅನುವು ಮಾಡಿಕೊಡುವ ತಂತ್ರಾಂಶ Gamemaker. ಇದರಲ್ಲಿ ಉಚಿತ ಮತ್ತು ಹಣ ನೀಡಬೇಕಾಗಿರುವ ಎಂಬ ಎರಡು ಆವೃತ್ತಿಗಳಿವೆ. ಉಚಿತ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಅದನ್ನು ಕಲಿತ ನಂತರ ಬೇಕಿದ್ದರೆ ಹಣ ನೀಡಿ ಪೂರ್ತಿ ಆವೃತ್ತಿಯನ್ನು ಕೊಂಡುಕೊಳ್ಳಬಹುದು. ಗಣಕ ಆಟ ತಯಾರಿಸಿ ಅದನ್ನು ಮಾರಿ ಹಣ ಸಂಪಾದಿಸಲೂಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/9Sz28S.

ಒಂದು e-ಸುದ್ದಿ : ಚಿತ್ರವ ತಿದ್ದಿದರೆ ಶಿಕ್ಷೆಯ ತಿದ್ದಿದಂತೆಯೇ? ಅಮೇರಿಕದ ಡಾರಿಲ್ ಸೈಮನ್ ಎಂಬಾತನಿಗೆ ಹಲವು ಕಲೆಗಳು ತಿಳಿದಿದ್ದವು. ಅವುಗಳಲ್ಲಿ ಪ್ರಮುಖವಾದವು, ಕ್ರೆಡಿಟ್ ಕಾರ್ಡ್ ನಕಲು ಮಾಡುವುದು, ಕಾರು ಕಳವು ಮಾಡುವುದು, ಜಾದೂ ಮಾಡುವುದು ಹಾಗೂ ಫೋಟೋಶಾಪ್ ಮಾಡುವುದು. ಈತನ ಪಾಂಡಿತ್ಯ ಈ ಕಲೆಗಳಲ್ಲಿ ಚೆನ್ನಾಗಿದ್ದವು, ಒಂದನ್ನು ಹೊರತು ಪಡಿಸಿ. ಅದುವೇ ಫೋಟೋಶಾಪ್ ಬಳಸಿ ಪೋಟೋ ತಿದ್ದುವ ಕಲೆ. ಅದೊಂದರಲ್ಲಿ ಆತನ ಪರಿಣತಿ ಕಡಿಮೆಯಾಗಿತ್ತು. ಆತ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ, ತಾನು ಸಮಾಜ ಸೇವೆ ಕೂಡ ಮಾಡಿದ್ದೇನೆ ಎಂದು ತೋರಿಸಿ ಕಡಿಮೆ ಶಿಕ್ಷೆಗೆ ಪ್ರಯತ್ನಿಸಿದ. ಅದಕ್ಕಾಗಿ ಕೆಲವು ಸಮಾಜ ಸೇವೆಯ ಸಂಸ್ಥೆಗಳಲ್ಲಿ ಅನಾಥ ಮಕ್ಕಳಿಗೆ ತಾನು ಸಹಾಯ ಮಾಡುತ್ತಿರುವಂತೆ ತೋರಿಸುವ ಚಿತ್ರಗಳನ್ನು ಫೋಟೋಶಾಪ್ ಬಳಸಿ ತಯಾರಿಸಿ ಆತ ನ್ಯಾಯಾಧೀಶರಿಗೆ ನೀಡಿದ್ದ. ಆದರೆ ಈ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ತಂತ್ರಜ್ಞರು ಆತನ ಕರಾಮತಿಯನ್ನು ಪತ್ತೆಹಚ್ಚಿದರು. ಈಗ ಆತನಿಗೆ 24 ವರ್ಷ ಶಿಕ್ಷೆಯಾಗಿದೆ.

e- ಪದ : ಫೋಟೋಶಾಪ್ (photoshop) ಗಣಕದಲ್ಲಿ ಚಿತ್ರ (ಗ್ರಾಫಿಕ್ಸ್) ತಯಾರಿಸಲು, ಛಾಯಾಚಿತ್ರಗಳನ್ನು ತಿದ್ದಲು ಅನುವು ಮಾಡಿಕೊಡುವ ಅಡೋಬಿ ಕಂಪೆನಿಯವರ ಜಗತ್ಪ್ರಸಿದ್ಧ ತಂತ್ರಾಂಶ. ಇದು ಎಷ್ಟು ಜನಪ್ರಿಯವೆಂದರೆ ಫೋಟೋಶಾಪ್ ಪದವನ್ನು ಇಂಗ್ಲಿಷ್ ನಿಘಂಟುವಿಗೆ ಸೇರಿಸಲಾಗಿದೆ. ಛಾಯಾಚಿತ್ರಗಳನ್ನು ತಿದ್ದುವುದಕ್ಕೆ ಫೋಟೋಶಾಪ್ ಮಾಡಿದೆ ಎಂದು ಹೇಳುವ ವಾಡಿಕೆಯೇ ಆಗಿಬಿಟ್ಟಿದೆ.

e - ಸಲಹೆ : ಚಿತ್ರದುರ್ಗದ ತಿಪ್ಪೇಸ್ವಾಮಿಯವರ ಪ್ರಶ್ನೆ: ನನಗೆ ಛಾಯಾಚಿತ್ರಗಳನ್ನು ಚಲನಚಿತ್ರವಾಗಿಸಿಕೊಡುವ ತಂತ್ರಾಂಶ ಬೇಕು (ಫೋಟೋ ಸ್ಲೈಡ್‌ಶೋ ಮೇಕರ್). ನಾನು ಕೆಲವನ್ನು ಡೌನ್‌ಲೋಡ್ ಮಾಡಿ ನೋಡಿದೆ. ಅವು ಫ್ಲಾಶ್ ಫೈಲ್ ಮಾಡಿಕೊಡುತ್ತವೆ. ನನಗೆ ಡಿ.ವಿ.ಡಿ. ಪ್ಲೇಯರ್‌ನಲ್ಲಿ ಬಳಸಬಲ್ಲ ಡಿ.ವಿ.ಡಿ.ಯನ್ನಾಗಿಸಿಕೊಡುವ ಉಚಿತ ತಂತ್ರಾಂಶ ಬೇಕು. ಅಂತಹ ತಂತ್ರಾಂಶ ಸಿಗುತ್ತದೆಯೇ?

ಉ: ನೀವು DVD slideshow GUI ಬಳಸಬಹುದು. ಇದು http://bit.ly/bE3pJO ಜಾಲತಾಣದಲ್ಲಿ ಸಿಗುತ್ತದೆ. ಇದು ನಿಮ್ಮ ಫೊಟೋಗಳನ್ನು ಡಿ.ವಿ.ಡಿ. ಸಿನಿಮಾದ ISO ಆಗಿ ಮಾಡಿಕೊಡುತ್ತದೆ. ನಂತರ ಇದನ್ನು ಡಿ.ವಿ.ಡಿ.ಗೆ ನೀವು ಬರೆದರೆ ನಿಮಗೆ ಡಿ.ವಿ.ಡಿ. ಪ್ಲೇಯರ್‌ನಲ್ಲಿ ಚಲಾಯಿಸಬಲ್ಲ ಚಲನಚಿತ್ರ ಸಿಗುತ್ತದೆ.

ಕಂಪ್ಯೂತರ್ಲೆ : ಒಮ್ಮೆ ಕೈಲಾಸದಲ್ಲಿ ಸುಬ್ರಹ್ಮಣ್ಯನಿಗೂ ಗಣಪನಿಗೂ ಪಂದ್ಯ ಏರ್ಪಟ್ಟಿತ್ತು ; ಯಾರು ಮೊದಲು ಇಡೀ ಪ್ರಪಂಚಕ್ಕೆ ಮೂರು ಸಲ ಸುತ್ತು ಬರುತ್ತಾರೆ ಎಂದು. ಶಿವ ತೀರ್ಪುಗಾರ. ಆತ ಒಂದು ನಿಯಮ ರೂಪಿಸಿದ. ಅದರಂತೆ ಸುಬ್ರಹ್ಮಣ್ಯ ಮತ್ತು ಗಣಪ ಇಬ್ಬರೂ ಪ್ರಪಂಚ ಸುತ್ತಿದ್ದಕ್ಕೆ ದಾಖಲೆಗೆ ಎಲ್ಲ ಪ್ರಮುಖ ಸ್ಥಳಗಳಲ್ಲಿ ತಾನು ಇರುವ ಫೋಟೋ ನೀಡಬೇಕಿತ್ತು. ಸುಬ್ರಹ್ಮಣ್ಯ ನವಿಲು ಹತ್ತಿ ನಿಧಾನವಾಗಿ ಪ್ರಪಂಚ ಸುತ್ತಿ ಎಲ್ಲ ಜಾಗಗಳ ಫೋಟೋ ಸಮೇತ ಹಿಂತಿರುಗಿ ಬಂದ. ಆದರೆ ಗಣಪ ಆಗಲೇ ಪಂದ್ಯ ಗೆದ್ದಿದ್ದಾನೆ ಎಂದು ಘೋಷಿಸಲಾಗಿತ್ತು. ಆತ ಮಾಡಿದ್ದೇನೆಂದರೆ ಗೂಗ್ಲ್ ಮೂಲಕ ಎಲ್ಲ ಖ್ಯಾತ ಸ್ಥಳಗಳ ಚಿತ್ರ ಪಡೆದು ಅದನ್ನು ಫೊಟೋಶಾಪ್ ಮಾಡಿ ಎಲ್ಲ ಸ್ಥಳಗಳಲ್ಲಿ ತಾನಿರುವಂತೆ ಮೂಡಿಸಿ ಶಿವನಿಗೆ ಒಪ್ಪಿಸಿದ್ದ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X