• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬದಲಾವಣೆಗಳೆಲ್ಲವೂ ಅಭಿವೃದ್ಧಿಯ ಸಂಕೇತವೇ?

By * ಮತ್ತೂರು ರಘು
|

ಒಬ್ಬರು ಹಿರಿಯರು ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತುಬಿಟ್ಟಿದೆ. ದಿನದ ಬಹಳಷ್ಟು ಸಮಯ ನನ್ನನ್ನು ಕಾಡುತ್ತದೆ. ಅವರು ಹೇಳಿದ್ದು, 'ಇತಿಹಾಸದಲ್ಲಿ ನಡೆದಿರುವ ಎಷ್ಟೋ ಘಟನೆಗಳನ್ನು, ಅನ್ಯಾಯಗಳನ್ನು, ಅವಘಡಗಳನ್ನು ನಾವು ಖಂಡಿಸುತ್ತೇವೆ. ಅದಕ್ಕೆ ಕಾರಣಕರ್ತರಾದವರನ್ನೂ ದೂಷಿಸುತ್ತೇವೆ. ಆದರೆ ನಮ್ಮ ಕಣ್ಣ ಮುಂದೆಯೇ ಆ ಘಟನೆಗಳು ಮತ್ತೊಮ್ಮೆ ನಡೆದರೂ ಕೈ ಕಟ್ಟಿ ಕೂತುಬಿಡುವಷ್ಟು ಹೇಡಿಗಳಾಗಿಬಿಟ್ಟಿರುತ್ತೇವೆ' ಎಂದು.

ಶಿವಮೊಗ್ಗದ ಕುವೆಂಪು ರಂಗಮಂದಿರದ ಮುಂದೆ ಇದ್ದಂತಹ ಹತ್ತಾರು ಬೃಹತ್ ಮರಗಳನ್ನು ಜಿಲ್ಲಾಡಳಿತ ಕಡಿದಾಗ ಕಾಲೇಜಿನಲ್ಲಿ ಕೂತು ಖಂಡಿಸಿದ್ದೇ ಖಂಡಿಸಿದ್ದು , ಮನೆಯಲ್ಲಿ ಕೂತು ಅಂದದ್ದೇ ಅಂದದ್ದು. ಆದರೆ ನಮ್ಮೂರಿನಲ್ಲೇ ನಮಗೇ ತಿಳಿದವರೋ ಅಥವಾ ನಮ್ಮ ರಕ್ತ ಸಂಬಂಧಿಗಳೋ ನಮ್ಮ ಕಣ್ಣ ಮುಂದೆಯೇ ಹತ್ತಾರು ವರ್ಷಗಳ ಬೃಹತ್ ಮರವನ್ನು ಕಡಿದಾಗ ಪ್ರತಿಭಟನೆ ಒತ್ತಟ್ಟಿಗಿರಲಿ, ಆ ಕುರಿತು ಕನಿಷ್ಟ ನಮ್ಮ ಕಾಳಜಿಯನ್ನು ವ್ಯಕ್ತಪಡಿಸಲೂ ಆಗಲಿಲ್ಲ. ದೇಶದ ಎಲ್ಲ ಮೋಸಗಾರರನ್ನು, ಕಳ್ಳರನ್ನು, ಭ್ರಷ್ಟರನ್ನು ಬಾಯಿಗೆ ಬಂದಂತೆ ಬೈಯುತ್ತೇವೆ, ಆ ಶಿಕ್ಷೆ ನೀಡಬೇಕು, ಈ ಶಿಕ್ಷೆ ನೀಡಬೇಕು ಎಂಬಂತೆಲ್ಲ ತೀರ್ಪು ಕೊಡುತ್ತೇವೆ. ಆದರೆ ನಮ್ಮ ಕಣ್ಣ ಮುಂದೆಯೇ ನಮ್ಮೂರಿನವರೋ ಅಥವಾ ನಮ್ಮ ಬಂಧುಗಳೋ ಅದೇ ಕೆಲಸ ಮಾಡಿದಾಗ ತೆಪ್ಪಗಿರುತ್ತೇವೆ!

ದೇಶದ ಸಂಸ್ಕೃತಿ ನಾಶದ ಬಗ್ಗೆ, ದೇಶದಲ್ಲಿನ ಪ್ರಕೃತಿ ದತ್ತವಾದ ಪರಿಸರ ನಾಶದ ಬಗ್ಗೆ ಭಾಷಣ ಮಾಡುತ್ತೇವೆ. ಇತರರಿಗೆ ಬುದ್ಧಿವಾದ ಹೇಳುತ್ತೇವೆ. ಆದರೆ ನಮ್ಮ ಕಣ್ಣೆದುರಿನಲ್ಲಿ ನಮ್ಮೂರಿನಲ್ಲೇ ಇವೆಲ್ಲ ನಡೆಯುತ್ತಿದ್ದರೂ ನಮ್ಮ ಕೆಲಸ ಅಲ್ಲ ಇದು ಎಂಬ ಉದಾಸೀನತೆಯಿಂದಲೋ ಅಥವಾ ನಮ್ಮ ಬಳಿ ಏನು ಮಾಡಲಾಗದು ಎಂಬ ಹತಾಶೆಯಿಂದಲೋ ಅಥವಾ ದೊಡ್ಡವರ ಸಹವಾಸ, ಸಮಾಜದ ಪ್ರಬಲ ಶಕ್ತಿಗಳ ಸಹವಾಸ ಬೇಡೆಂಬ ಭಯದಿಂದಲೋ ನೋಡಿದರೂ ನೋಡದಿದ್ದರ ಹಾಗೆ ಸುಮ್ಮನಿರುತ್ತೇವೆ. ಎಂತಹ ಜೀವನ ನಮ್ಮದು ಎಂದು ಸದಾಕಾಲ ಗೊಣಗುವುದೇ ನಮ್ಮ ದೇಶಸೇವೆಯಾಗಿಬಿಟ್ಟಿದೆ!

ಬೆಂಗಳೂರಿನಂತಹ ನಗರಗಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಅಗಲೀಕರಣದಂತಹ ಕೆಲಸಗಳು ಸಾಕಷ್ಟು ಅನಿವಾರ್ಯತೆಯನ್ನು ಸೃಷ್ಟಿಸಿರುವುದು ಕಟು ವಾಸ್ತವ. ಆದರೆ ಪ್ರಕೃತಿಮಾತೆಯ ಸಾಕ್ಷಾತ್ಕಾರ ದಂತಿರುವ, ನೆಮ್ಮದಿ ಜೀವನದ ತವರಾದಂತಹ, ನಮ್ಮತನ ವನ್ನು ಹುಡುಕಿ ದಕ್ಕಿಸಿಕೊಳ್ಳಬಹುದಾದಂತಹ, ಹಳ್ಳಿಗಳನ್ನು, ಗ್ರಾಮಗಳನ್ನು ಇದೇ ರೀತಿಯ 'ಅಭಿವೃದ್ಧಿಯ'(?) ಕೆಲಸಗಳಿಗೆ ಅಡ ಇಟ್ಟರೆ ಇದಕ್ಕಿಂತ ಅವಿವೇಕದ ಕೆಲಸ ಮತ್ತೊಂದು ಉಂಟೇ? ಇತ್ತೀಚೆಗೆ ರಾಜ್ಯದ ಕೆಲವು ಗ್ರಾಮಗಳ, ಹಳ್ಳಿಗಳ ಅಂದವನ್ನು 'ಅಭಿವೃದ್ಧಿ', 'ಸ್ವಚ್ಛ ಗ್ರಾಮ-ಸುವರ್ಣ ಗ್ರಾಮ' ಎಂಬಂತಹ ಹೆಸರುಗಳಿಂದ ಕರೆಯುವ ಯೋಜನೆಗಳಡಿ ಹಾಳು ಮಾಡುತ್ತಿರುವುದು ನಿಜಕ್ಕೂ ಬೇಸರದ ವಿಚಾರವಾಗಿದೆ. ಟಾರ್ ರಸ್ತೆಗಳು, ಮಾಲ್ ಗಳು, ಬೃಹತ್ ಕಟ್ಟಡಗಳು ನಗರಕ್ಕೆ ಅನಿವಾರ್ಯವಾದರೂ ಅವುಗಳ ಅನಿವಾರ್ಯತೆ ಹಳ್ಳಿಗಳಿಗಾಗಲೀ ಅಥವಾ ಗ್ರಾಮಗಳಿಗಾಗಲೀ ಇಲ್ಲ. ಉತ್ತಮ ಟಾರ್ ರಸ್ತೆಗಳು ಖಂಡಿತ ನಗರಕ್ಕೆ ಬೇಕು.

ಆದರೆ ಹಳ್ಳಿಗಳಲ್ಲಿನ ಉತ್ತಮ ಹಾಗು ಆರೋಗ್ಯದಾಯಕವಾದ ಮಣ್ಣಿನ ರಸ್ತೆಗಳನ್ನು ಕಸಿದು ಟಾರ್ ರಸ್ತೆಗಳನ್ನಾಗಲಿ, ಅಥವಾ ಬೆಂಗಳೂರಿನ ಪುಟ್ ಪಾತ್ ಗಳಲ್ಲಿರುವ ಸಿಮೆಂಟಿನ ಕಲ್ಲುಗಳ ರಸ್ತೆಗಳನ್ನಾಗಲೀ ಮಾಡುವ ಅವಶ್ಯಕತೆ ಏನಿದೆ? ಅಕಸ್ಮಾತ್ ಮಣ್ಣಿನ ರಸ್ತೆಗಳು ಸರಿಯಿಲ್ಲದಿದ್ದರೆ ಅದನ್ನೇ ಸಮತಟ್ಟಾಗಿ ಮಾಡಿ ಉತ್ತಮಗೊಳಿಸುವುದನ್ನು ಬಿಟ್ಟು ಮಣ್ಣಿನ ರಸ್ತೆಯನ್ನು ತೆಗೆದರೆ? ದೈವದತ್ತವಾದ ಮಣ್ಣಿನ ರಸ್ತೆಗಳ ಮೇಲೆ ಸಿಮೆಂಟಿನ 'ಮಾನವ ನಿರ್ಮಿತ' ಕಲ್ಲುಗಳಿಂದ ರಸ್ತೆಗಳನ್ನು ಮಾಡಿ 'ಮಹದುಪಕಾರ' ಮಾಡಿದ್ದೇವೆ, 'ಅಭಿವೃದ್ಧಿ' ಮಾಡಿದ್ದೇವೆ ಎಂದು ತಪ್ಪು ತಿಳಿದುಕೊಂಡಿದೆ ಸರ್ಕಾರ!

ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವವರು ಕಡಿಮೆ. ನಗರಕ್ಕೆ ಅಥವಾ ಶಾಲೆಗೆ ಹೋಗುವಾಗ ಮಾತ್ರ ಚಪ್ಪಲಿ ಬಳಸುವುದು ಅಭ್ಯಾಸ. ಆದರೆ ಈಗ ಚಪ್ಪಲಿ ಅನಿವಾರ್ಯ. ಮಣ್ಣಿನ ರಸ್ತೆಗಳಿದ್ದಾಗ, ಆಟವಾಡುತ್ತಿದ್ದ ಮಕ್ಕಳು ಬಿದ್ದರೆ ಸಣ್ಣ ತರಚಿದ ಗಾಯವಾಗುತ್ತಿತ್ತು. ಆದರೆ ಈಗ ಆಸ್ಪತ್ರೆ ಪ್ರಯಾಣ ಖಚಿತ! ಮಣ್ಣಿನ ನೆಲದಲ್ಲಿ ಬೆಳಗಿನ ಜಾವ ನಮ್ಮ ತಾಯಂದಿರು ಹಾಕುತ್ತಿದ್ದ ರಂಗೋಲಿಯನ್ನು ನೋಡಲು ಎರಡು ಕಣ್ಣು ಸಾಲದಿತ್ತು. ಅದೂ ಊರಿನ ಜಾತ್ರೆಗಳ ಸಂದರ್ಭಗಳಲ್ಲಿ, ರಥೋತ್ಸವಗಳ ಸಮಯದಲ್ಲಿ, ಎಲ್ಲರ ಮನೆಯ ಮುಂದೆ ಕಂಗೊಳಿಸುತ್ತಿದ್ದ ರಂಗೋಲಿಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಆದರೆ ಈಗ ನಮ್ಮ ತಾಯಂದಿರಿಗೆ ರಂಗೋಲಿಯಲ್ಲಿ ಮನಸ್ಸಿಲ್ಲದ ಮನಸ್ಸು!

ಮಣ್ಣಿನ ನೆಲವಿದ್ದಾಗ ಕೊಳೆಗಳಾಗಲೀ, ಪ್ರಾಣಿಗಳ ತ್ಯಾಜ್ಯಗಳಾಗಲೀ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿತ್ತು. ಆದರೆ ಈಗ ? ಆಗ ಕಸವೂ ಮಣ್ಣಾಗುತ್ತಿತ್ತು. ಆದರೆ ಈಗ ಮಣ್ಣೂ ಕಸವಾಗುತ್ತದೆ. ಈ ರೀತಿಯ 'ಅಭಿವೃದ್ಧಿ'ಗಳನ್ನು ನೋಡಿ ಒಬ್ಬರು ಹಿರಿಯರು ಹತಾಶೆಯಿಂದ ಹೇಳಿದ್ದು ನಗೆಯನ್ನು ತರಿಸುವಂತಿತ್ತು. 'ಇಷ್ಟು ದಿನ ಮಣ್ಣಿನ ರಸ್ತೆಯಲ್ಲಿ ಒಮ್ಮೊಮ್ಮೆ ಕಸಗಳು ಕಾಣಿಸುತ್ತಿತ್ತು. ಆದರೆ ಇನ್ಮೇಲೆ ಕಸಗಳು ಮಾತ್ರವೇ ಕಾಣಿಸುತ್ತೆ' ಅಂತ.

ಈ ವಿಷಯವನ್ನು ಸಮರ್ಥನೆ ಮಾಡಿಕೊಳ್ಳಲು 'ಮಳೆಗಾಲದಲ್ಲಿ ಕೊಚ್ಚೆಯಾಗುವುದಿಲ್ಲ' ಎಂಬ ಅವಿವೇಕದ ಕಾರಣವನ್ನು ಕೊಡುವ ಸಂಭವವಿದೆ. ವರ್ಷದ ಕೆಲವು ದಿನಗಳ ಕಾಲ ಬರುವ ಮಳೆ ಉಂಟುಮಾಡುವ 'ಪ್ರಾಣ ಹಾನಿ'ಯಲ್ಲದ ಕೆಸರಿನ ಕಾರಣ ಕೊಟ್ಟು ಪ್ರತಿದಿನ ಓಡಾಡುವ ರಸ್ತೆಯನ್ನೇ ಹಾಳು ಮಾಡಿದರೆ ಹೇಗೆ? ಮಳೆಯ ನೀರಿನಿಂದ ಈ ರಸ್ತೆಗಳ ಮೇಲೆ ಉಂಟಾಗುವ ಪಾಚಿಗಳು ನಡೆಯುವವರಿಗೂ, ವಾಹನ ಸವಾರರಿಗೂ ಎಂತಹ ಜಾರಿಕೆಯನ್ನುಂಟು ಮಾಡುತ್ತವೆ ಎಂದು ಬಿದ್ದವರಿಗೇ ಗೊತ್ತಿರುತ್ತದೆ. ಬೇಸಿಗೆ ಕಾಲದಲ್ಲಂತೂ ತೆಗೆದುಕೊಂಡ ಸೂರ್ಯನ ಶಾಖವನ್ನು ಹಾಗೆಯೇ ಉಗುಳುವ ಈ ನಮ್ಮ ಹೊಸ ರಸ್ತೆಗಳ ಮೇಲೆ ಬರಿಗಾಲಿನಲ್ಲಿ ರಸ್ತೆಗಿಳಿದರೆ ಕಾಲು ಬೆಂದು ಹೋಗುವುದು ನಿಶ್ಚಯ.

'ಅಭಿವೃದ್ಧಿ' ಎಂಬುದಕ್ಕೆ ಸರಿಯಾದ ವ್ಯಾಖ್ಯಾನ ನೀಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಮೂಲ ಸೌಕರ್ಯದ ಪೂರೈಕೆಯನ್ನು ಬಿಟ್ಟು ಬರೇ ಬೃಹತ್ ಕಟ್ಟಡಗಳು, ರಸ್ತೆಗಳು, ಮಾಲ್ ಗಳಿಂದ ಹಳ್ಳಿಗಳನ್ನು, ಗ್ರಾಮಗಳನ್ನು ತುಂಬಿಸುವುದೇ 'ಅಭಿವೃದ್ಧಿ' ಎಂಬ ತಪ್ಪು ಕಲ್ಪನೆ ಬಂದು ಎಲ್ಲೆಡೆಯಲ್ಲೂ 'ವ್ಯಾಪಾರಿ ಭಾವದ ಮನೋವೈಕಲ್ಯ' ಆಕ್ರಮಣ ಮಾಡೀತು. ಇರುವುದನ್ನು ಹಾಳುಮಾಡಿ ಹೊಸದನ್ನು ಮಾಡುವುದೆಲ್ಲವೂ 'ಅಭಿವೃದ್ಧಿ' ಎಂಬ 'ಗುಮ್ಮ' ಎಲ್ಲರ ಮನಸ್ಸಿನಲ್ಲಿ ಆವರಿಸಿದರೆ ಆಗುವ ಅನಾಹುತಗಳನ್ನು ಸರಿಮಾಡಲು ಯಾರಿಂದಲೂ ಸಾಧ್ಯವಿಲ್ಲ.

ಈ ನನ್ನ ತರ್ಕವನ್ನ ಓದಿದವರು ನನ್ನನ್ನು ದೂಷಣೆ ಮಾಡಬಹುದು, ಯಾವ ಕಾಲದಲ್ಲಿ ಇದ್ದೇನೆ ನಾನು?, ಕಾಲಕ್ಕೆ ತಕ್ಕಂತೆ ಬದಲಾಗಬೇಕು ಅಂತೆಲ್ಲ ಮಾತಾಡಬಹುದು. ಆದರೆ ಕಾಲಕ್ಕೆ ತಕ್ಕಂತೆ ಬದಲಾಗೋದು ಅಂದ್ರೆ ಬದಲಾವಣೆಗಳನ್ನು ತರುತ್ತಿರುವುದು ಎಂದಲ್ಲ. ಅವ್ಯವಸ್ಥೆಗಳನ್ನು ವ್ಯವಸ್ಥೆ ಗೊಳಿಸುವ ದಿಕ್ಕಿನಲ್ಲಿ, ಅನಾನುಕೂಲವಾಗಿರುವುದನ್ನು ಅನುಕೂಲವಾಗಿಸುವ ದಿಕ್ಕಿನಲ್ಲಿ ಮಾಡಬೇಕಾದ ಬದಲಾವಣೆಗಳು, ಅಭಿವೃದ್ಧಿ ಎಂದು ಕರೆಸಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಬಲಗೈ ನಲ್ಲಿ ಊಟ ಮಾಡುತ್ತಿದ್ದರು ಎಂದು ಈಗ ಕಾಲ ಬದಲಾಗಿದೆ, ಎಡಗೈ ನಲ್ಲಿ ಊಟ ಮಾಡಲು ಪ್ರಾರಂಭಿಸೋಣ ಎಂದರೆ ಆಗುತ್ತದೆಯೇ?

ರೈತರು ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ ಕೊಟ್ಟು ಒಳ್ಳೆಯ ಮಾರುಕಟ್ಟೆ ಒದಗಿಸಲಿ, ಫಲವತ್ತಾದ ಭೂಮಿಯನ್ನು 'ಅಭಿವೃದ್ಧಿ' ಗಾಗಿ ಎಂದು ಕಸಿಯುವುದನ್ನು ನಿಲ್ಲಿಸಲಿ, ಕೃಷಿ ವಿಧಾನದ ಔನ್ನತ್ಯಕ್ಕೆ ಒತ್ತು ನೀಡಲಿ, ಕೃಷಿಯಲ್ಲಿ ಸಾಧನೆಗೈದ ರೈತರಿಗೆ ಪ್ರಶಸ್ತಿಗಳನ್ನ, ಪ್ರೋತ್ಸಾಹಗಳನ್ನ ನೀಡಲಿ. ಅದನ್ನು ಬಿಟ್ಟು ಅಭಿವೃದ್ಧಿ ಅನ್ನೋ ಹೆಸರಿನಲ್ಲಿ, ಅಧಿಕಾರವಿದೆ, ನನ್ನ ಬಳಿ ಸಾಧ್ಯವಿದೆ, ನಾನು ಏನಾದರೂ ಮಾಡಬೇಕು ಎಂಬ ಅಹಂಕಾರದಲ್ಲಿ ಇರೋದನ್ನೆಲ್ಲ ಬದಲಾಯಿಸೋದು ಹುಂಬತನವಾಗುವುದು. ಈ ಕುರಿತು ನಮ್ಮೆಲ್ಲರ ಮನದಲ್ಲಿ ಚಿಂತನೆ ಮೊಳಗಲಿ ಎಂಬುದೇ ನನ್ನ ಉದ್ದೇಶ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more