ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವ ತರಂಗದಲ್ಲಿ ಕರಗಿಸುವ ನಾಟಕ 'ಶ್ರದ್ಧಾ'

By * ಜಯಶ್ರೀ
|
Google Oneindia Kannada News

Kannada actor Vinayak Joshi
'ನಿಶ್ಚಿಂತನಾಗಬೇಕಂತಿ, ಬಲು ದುಶ್ಚಿಂತಿಯೊಳಗೆ ನೀ ಕುಂತಿ..." ಶಿಶುನಾಳ ಶರೀಫರ ರಚನೆ ಪದೇಪದೆ ತನ್ನ ಇರುವಿಕೆಯನ್ನು ತೋರುವ ಗಾನ ಸುಧೆ, ಗಾಯಕ ಪ್ರದೀಪ್ ಕಂಚಿನ ಕ೦ಠದಿಂದ ಸಭಿಕರನ್ನು ಅಲುಗಾಡದಂತೆ ಕಟ್ಟಿ ಕುಳ್ಳರಿಸಿದ್ದರು. ಅಪ್ಪ ಮಗನ ಬಾಂಧವ್ಯವನ್ನು ರಂಗದ ಮೇಲೆ ವೀಕ್ಷಿಸುತ್ತಾ ಮೂಕವಿಸ್ಮಿತರಾಗಿದ್ದ ಕಲಾಸಕ್ತರು. ಒಮ್ಮೆ ಭಾವುಕತೆ, ಮತ್ತೊಮ್ಮೆ ಕಟ್ಟೆಯೊಡೆದ ನಗೆ ಭಾವ ತರಂಗಗಳಲ್ಲಿ ತಮ್ಮನ್ನು ಕರಗಿಸಿಕೊಳ್ಳುವಂತೆ ಮಾಡಿದ ನಾಟಕ 'ಶ್ರದ್ಧಾ'.

ನಗರದ ಹನುಮಂತ ನಗರದಲ್ಲಿನ ಕೆಎಚ್ ಕಲಾಸೌಧದಲ್ಲಿ ಅದ್ಭುತವಾಗಿ ನಡೆದಿಯಿತು. ಈ ನಾಟಕದ ಬೆನ್ನೆಲುಬಾಗಿದ್ದವರು ವಿನಾಯಕ ಜೋಶಿ. ಸ್ಯಾಂಡಲ್ ವುಡ್ಡಿನಲ್ಲಿ ಬಾಲನಟರಾಗಿ ಎಂಟ್ರಿ ಕೊಟ್ಟ ವಿನಾಯಕ ಜೋಶಿಗೆ ಪ್ರಸಿದ್ಧ ನಟರೊಂದಿಗೆ ನಟಿಸಿದ ಸುಂದರ ಬಯೋಡೇಟಾ ಇದೆ. ಅಪ್ಪ ವಾಸುದೇವ್ ಜೋಶಿ, ಅಮ್ಮ ಶಾಲಿನಿ ಜೋಶಿ ಮಗನ ಪ್ರತಿಭೆಯನ್ನು ಪ್ರೋತ್ಸಾಹಿಸಿದರು. ಅದೇ ಉತ್ಸಾಹದಿಂದ ಕನ್ನಡ ಚಿತ್ರರಂಗದಲ್ಲಿ ಮುನ್ನಡೆಯಲು ಪ್ರಯತ್ನಿಸಿದ ಕುಟುಂಬಕ್ಕೆ ಸೋಲು ಬೆನ್ತಟ್ಟಿತು, ಅದು ವಾಸುದೇವ್ ಜೋಶಿ ಅವರ ಸಾವನ್ನು ಬೇಡಿತು. ಅಪ್ಪನ ಆಕಸ್ಮಿಕ ಮರಣ, ಅಮ್ಮನ ನಿಸ್ಸಹಾಯಕತೆ, ಧುತ್ತೆಂದು ಎದುರಾದ ಸಾಲದ ಮೂಟೆ ಎಲ್ಲವನ್ನು ಅಂದು ಸಮರ್ಥವಾಗಿ ಹೊತ್ತಿತು ಬಾಲಕ ವಿನಾಯಕ್ ಎಳೆಯ ಭುಜಗಳು! ಆದರೆ ಈ ಪ್ರತಿಭೆಯನ್ನು ಮುರುಟಲು ಬಿಡದೆ ಕಾಯ್ದ ಬಲಿಷ್ಠ ಭುಜ ಸ್ಯಾಂಡಲ್ ವುಡ್ಡಿನ ಮೇರುನಟ ಸುದೀಪ್ ಎನ್ನುವ ದೈತ್ಯ ಪ್ರತಿಭೆ. ನಟ ಸುದೀಪರ ಸಾಮಿಪ್ಯದಿಂದ ಬದುಕು ಉಸಿರಾದುವಂತಾಯಿತು. ಮುಂದೆ ವಿನಾಯಕ ಗಮನ ಹರಿದಿದ್ದು ರೇಡಿಯೋದತ್ತ ಹಾಗೂ ರಂಗಭೂಮಿ ಕಡೆಗೆ!

ನಾನು ನಿಮ್ಮ V+ ನಾಯಕ, ವಿನಾಯಕ ಜೋಶಿ, ಹೀಗೆ ತಮ್ಮ ಹೆಸರನ್ನು ಅನೇಕ ರೀತಿಯಲ್ಲಿ ಹೇಳುತ್ತಾ , ಸ್ಟಿಲ್ ಸಿಂಗಲ್ ರೆಡಿ ಟು ....! ರೆಡಿಯೋ ಸಿಟಿಯ ಸಿಟಿ ಮಾತಿನಲ್ಲಿ ಅಪಾರ ಸಂಖ್ಯೆಯ ಶ್ರೋತೃಗಳ ಹೀರೋ ಆಗಿದ್ದಾರೆ ಜೋ. ಇವೆಲ್ಲದರ ನಡುವೆ ರಂಗಭೂಮಿ ತಮ್ಮ ಕಲಾಸೇವೆಯಲ್ಲಿ ನಿರತರಾಗಿದ್ದಾರೆ. ಇನ್ನು ವಿನಾಯಕ ಜೋಶಿ ಹೃದಯವೆಂದೆ ಕರೆಯಬಹುದಾದ 'ಶ್ರದ್ಧಾ' ನಾಟಕ ತಂದೆ ಮಕ್ಕಳ ನಡುವಿನ ಬಾಂಧವ್ಯವನ್ನು ಎತ್ತಿತೋರುವ ಕಥನ.

ದೂರ್ವಾಸ-ಜಮದಗ್ನಿ ಮುನಿಗಳ ಅಪರಾವತಾರ ಅಪ್ಪ, ಮೂಗಿನ ತುದಿ ಸದಾ ಕೋಪದಿಂದ ಕೆಂಪು ಕೆಂಪು! ಮಕ್ಕಳು ಬೆದರಿದ ಗುಬ್ಬಿಗಳು. ಇವರಿಬ್ಬರ ಸೇತುವೆಯಾದ ಅಮ್ಮ, ಬಿಸಿ-ತಂಪುಗಾಳಿಯನ್ನು ಒಟ್ಟೊಟ್ಟಿಗೆ ಎದುರಿಸುವ ಮಧ್ಯಮ ವರ್ಗದ ಐವತ್ತರ ದಶಕದ ಸ್ತ್ರಿ ಪ್ರತೀಕ. ಎಲ್ಲದಕ್ಕೂ ತಪ್ಪು ಎಣಿಸುವಂತೆ ಭಾಸವಾಗುತ್ತದೆ ಅಪ್ಪನ ಮಾತು ಮಗನಿಗೆ. ಮಾತೆತ್ತಿದರೆ ಅಪ್ಪನ ಬಾಯಿಂದ ಉದುರುವ ತಲೆ ಬೋಳಿಸ್ಕೋ ಅನ್ನುವ ಪದ ಕಾದ ಸೀಸದಂತೆ ಮಗನ ಕಿವಿಯನ್ನು ಸುಡುತ್ತಿರುತ್ತದೆ. ಆದರೆ ಅದನ್ನು ಪ್ರತಿಭಟಿಸಲಾಗದ ಅಸಹಾಯಕತೆ. ಅಕ್ಕ ಸರೋಜಳ ಮೇಲೆ ತೋರುವ ಪ್ರೀತಿಯಲ್ಲಿ ಕಿಂಚಿತ್ತಾದರೂ ತನ್ನ ಬಗ್ಗೆ ತೋರಿದ್ದರೆ ಎಂದು ಹಲಬುವ ಮಗನಿಗೆ ಅಪ್ಪನ ಕಲ್ಲು ಹೃದಯದಲ್ಲಿ ಅಬೋಧ ಪ್ರೀತಿಯ ಸೆಲೆ ತನ್ನ ಬಗ್ಗೆ ಇದ್ದೆ ಇದೆ ಎನ್ನುವು ಅರಿವಾಗುವುದು ಕಾಲೇಜು ಮೆಟ್ಟಿಲು ಹತ್ತಿದ ಬಳಿಕ. ಅಪ್ಪನ ಸಾವಿನ ನಂತರ ಮಗ ಮಾಡುವುದು ಯಾಂತ್ರಿಕ ಶ್ರಾದ್ಧವಲ್ಲ, ಶ್ರದ್ಧೆಯಿಂದ ಮಾಡುವ ಪ್ರೀತಿಯ ನಮನ ಎಂದು ಸಾರುವುದೇ ನಾಟಕದ ಮೂಲ ಉದ್ದೇಶ.

ಸುಂದರ ಹಾಗೂ ಲವಲವಿಕೆಯ ನಿರೂಪಣೆ, ಅತ್ಯದ್ಭುತ ಕನ್ನಡ, ಮನವನ್ನು ಮುದ ಗೊಳಿಸುವ ಹಾಸ್ಯ, ಹೃದಯ ತುಂಬಿ ಬರುವ ಸನ್ನಿವೇಶಗಳು, ಉತ್ತಮ ರಂಗಸಜ್ಜಿಕೆ, ಅತ್ಯುತ್ತಮ ನೆರಳು-ಬೆಳಕಿನ ಬಳಕೆ, ಆಗಾಗ ಮನಸ್ಸಿನ ರೂಪವನ್ನು ವ್ಯಕ್ತಿಯೊಬ್ಬ ನರ್ತಿಸುವ ಮೂಲಕ ತೋರುವ ರೀತಿ ಪ್ರತಿಯೊಬ್ಬ ಕಲಾವಿದರ ತಾಜಾ ಎನ್ನಿಸುವ ನಟನೆ ಎಲ್ಲವೂ ನಾಟಕದ ಉಸಿರಾಗಿದೆ. ಶ್ರದ್ಧಾ ನಾಟಕದ ನಿರ್ದೇಶನ ಹಾಗೂ ಅಪ್ಪನ ಪಾತ್ರವನ್ನು ವಿನಾಯಕ ಜೋಶಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರೊಂದಿಗೆ ಕೈ ಜೋಡಿಸಿರುವ ಮಗನಾಗಿ ಪ್ರಭಾಕರ್ ರಾವ್, ಪ್ರಾಂಕ್ ಸ್ಟಾರ್ ಗಳಾಗಿ ನಕ್ಷತ್ರ, ತೇಜಸ್, ಮನಸ್ಸಾಗಿ-ಉಮೇಶ್, ಎಲ್ಲರ ನಟನೆ ಅದ್ಭುತ.

ಶ್ರೀನಿವಾಸ್ ವೈದ್ಯ ಅವರ ರಚನೆಯ ಈ ನಾಟಕಕ್ಕೆ ಪ್ರವೀಣ್, ಪ್ರದೀಪ್ ಹಾಗೂ ವರುಣ್ ಸಂಗೀತವಿದೆ. ಜೋಶಿ ನಿರ್ಮಾಣದ ಈ ನಾಟಕ ಪ್ರತಿಯೊಬ್ಬರೂ ತಪ್ಪದೆ ನೋಡಲೇಬೇಕು. ಈಗಾಗಲೇ ಇಪ್ಪತ್ತಾರು ಪ್ರದರ್ಶನಗಳನ್ನು ಕಂಡಿರುವ ಈ ನಾಟಕ ಪ್ರತಿಯೊಂದು ಪ್ರದರ್ಶನದಲ್ಲೂ ಭಿನ್ನತೆಯನ್ನು ತೋರಿದೆ.

'ಶ್ರದ್ಧಾ' ಬಗ್ಗೆ ಅಪಾರವಾದ ಕನಸು ಇಟ್ಟುಕೊಂಡಿರುವ ವಿನಾಯಕ್ ಜೋಶಿ-ಸಮಾನಮನಸ್ಕ ಗ್ರೂಪ್ಗೆ ಇದು ಮತ್ತಷ್ಟು ಜನರನ್ನು ತಲುಪಬೇಕೆಂಬ ಮುಗ್ಧ ಆಸೆ. ಅದನ್ನು ಸಾಧ್ಯ ಮಾಡಿಸುವವರು ಕಲಾರಸಿಕರು. ಕೇವಲ ಭಾರತದಲ್ಲಿ ಮಾತ್ರವಲ್ಲ ಕಡಲಾಚೆಗೂ ಶ್ರದ್ಧಾ ತಲುಪ ಬೇಕು ಎನ್ನುವ ಪ್ರಾಮಾಣಿಕ ತುಡಿತ ಈ ಟೀಮ್ಗಿದೆ. ಅವರ ಕನಸು ನನಸಾಗಲಿ ಎನ್ನುವ ಶುಭ ಹಾರೈಕೆ ನಮ್ಮದು.

ಹೆಚ್ಚಿನ ಮಾಹಿತಿಗಾಗಿ : 9886719559, [email protected], [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X