ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್ ದುರಂತ ನಮ್ಮನ್ನು ಎಚ್ಚರಿಸುವುದೆಂದು?

By * ಡಾ||ಕೆ.ಎಸ್. ಶರ್ಮಾ, ಹುಬ್ಬಳ್ಳಿ
|
Google Oneindia Kannada News

Warren Anderson
ಮಧ್ಯಪ್ರದೇಶದ ಭೋಪಾಲ್ ನಗರದ ಯೂನಿಯನ್ ಕಾರ್ಬೈಡ್ ಕಂಪನಿಯ ಕಾರ್ಖಾನೆಯಲ್ಲಿ ಡಿಸೆಂಬರ್ 3, 1984ರಲ್ಲಿ ಸಂಭವಿಸಿದ ಅನಿಲ ಮಹಾದುರಂತ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೊಂದು ಮರೆಯಲಾರದ ಅನಾಹುತವಾಗಿದೆ. ಈ ಅನಿಲ ಸೋರುವಿಕೆಯಲ್ಲಿ 42 ಟನ್ ವಿಷಾನಿಲ (ಮಿಥೈಲ್‌ಐಸೋ ಸೈನೇಟ್) ವಾತಾವರಣದಲ್ಲಿ ಸೇರಿಕೊಂಡ ಪರಿಣಾಮವಾಗಿ, ಈ ಕಾರ್ಖಾನೆಯ ಸುತ್ತಲಿನ ಕೊಳಚೆ ಪ್ರದೇಶಗಳಲ್ಲಿದ್ದ ಸುಮಾರು 3,800 ಜನ ತಕ್ಷಣ ಅಸುನೀಗಿದರೆ; ನಂತರದ ಎರಡು ದಶಕಗಳಲ್ಲಿ ಈ ಸೋರುವಿಕೆಯ ಪರಿಣಾಮವಾಗಿ 20,000 ಜನ ಸತ್ತ ವರದಿಯಾಗಿದೆ. ಇದಲ್ಲದೆ, ಸುಮಾರು 5 ಲಕ್ಷ ಜನ, ಅಂದರೆ ಬೋಪಾಲದ ಅರ್ಧದಷ್ಟು ಜನಸಂಖ್ಯೆ, ಅನೇಕ ಬಗೆಯ ಅಂಗವಿಕಲತೆಗಳು ಹಾಗೂ ಅನಾರೋಗ್ಯಪೀಡಿತರಾಗಿ, ಉಸಿರಾಡುವ ಶವಗಳಂತಿದ್ದಾರೆ.

ಈ ವಾಸ್ತವಾಂಶಗಳನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ಎಡೆವರ್ಡ್ ಬ್ರೋಟನ್, ತನ್ನ ಕೃತಿ "ಎನ್‌ವಿರನ್‌ಮೆಂಟಲ್ ಹೆಲ್ತ್" ನಲ್ಲಿ ಬರೆದಿದ್ದಾರೆ. ಡಿಸೆಂಬರ್ 3, 1984ರಂದು ಭೋಪಾಲ್ ನಗರದಲ್ಲಿ ಈ ಕಾರ್ಖಾನೆಯ ಸುತ್ತುಮುತ್ತಲಿನ ರಸ್ತೆಗಳಲ್ಲಿ, ವಾಸಸ್ಥಾನಗಳಲ್ಲಿ ಕಂಡುಬಂದುದು ಮಾನವರ ಹಾಗೂ ಮೃಗಗಳ ಶವಗಳ ರಾಶಿ. ಇಡೀ ನಗರವೇ ಸ್ಮಶಾನದಂತಾಗಿತ್ತು. ಸುಮಾರು ಇಪ್ಪತ್ತಾರು ವರುಷಗಳ ನಂತರ, ಭೋಪಾಲ್ ಅನಿಲ ದುರಂತದ ಪುನರಾವಲೋಕನ ತೀವ್ರಗತಿಯಲ್ಲಿ ರಾಷ್ಟ್ರಾದ್ಯಂತ ನಡೆದಿದೆ. ಈ ಪುನರಾವಲೋಕನದ ದುರಂತವೆಂದರೆ, ನಾವು ಕೇಳುತ್ತಿರುವುದು ಎಲ್ಲ ಪ್ರಶ್ನೆಗಳ ಪ್ರವಾಹ; ಆದರೆ, ಉತ್ತರಗಳು ಮಾತ್ರ ಇನ್ನೂ ಅಲಭ್ಯ? ಇದು ಇದರ ಇನ್ನೊಂದು ಮಹಾದುರಂತವಾಗಿದೆ.

ಇಪ್ಪತ್ತಾರು ವರುಷಗಳ ಕಾಲ ನಡೆದ ಅಪರಾಧ ವಿಚಾರಣೆಯಲ್ಲಿ ಭೋಪಾಲದ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿ ಇಂಡಿಯಾದ ಚೇರ್ಮನ್ ಕೇಶವ್ ಮಹೇಂದ್ರ ಹಾಗೂ ಇತರ ಆರು ಆರೋಪಿಗಳಿಗೆ ಎರಡು ವರುಷಗಳ ಶಿಕ್ಷೆಯನ್ನು ವಿಧಿಸಿದೆ. ಹಾಗೂ ಅಮೆರಿಕೆಯ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವಾರೆನ್ ಆಂಡರ್‌ಸನ್, ಈ ಮಹಾದುರಂತ ನಡೆದ ಕೆಲವೇ ದಿನಗಳಲ್ಲಿ ಅಮೆರಿಕೆಗೆ ಪರಾರಿಯಾಗಿದ್ದು, ಈತ ಯಾವುದೇ ವಿಚಾರಣೆಯಾಗಲೀ, ಶಿಕ್ಷೆಯಾಗಲೀ ಇಲ್ಲದೇ ಪಾರಾಗಿದ್ದಾನೆ.

ಈ ದುರಂತ ಕುರಿತಾಗಿ ಅನೇಕಾನೇಕ ಪ್ರಶ್ನೆಗಳು ಏಳುತ್ತವೆ. ಅವುಗಳಲ್ಲಿ ಒಂದು ಪ್ರಶ್ನೆ ಆಂಡರ್‌ಸನ್‌ಗೆ ಸಂಬಂಧಪಟ್ಟಿದ್ದು. ದುರಂತ ನಡೆದನಂತರ, ಡಿಸೆಂಬರ್ 7, 1984ರಂದು ಭೋಪಾಲದ ಪೊಲೀಸ್ ಮುಖ್ಯಸ್ಥ ಸ್ವರಾಜ್ ಪುರಿಯು ಆಂಡರ್‌ಸನ್‌ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ. ಆದರೆ ನ್ಯಾಯಾಂಗವು ಆಂಡರ್‌ಸನ್‌ನನ್ನು ರೂ.25 ಸಾವಿರ ಜಾಮೀನನ್ನು ಪಡೆದು, ನ್ಯಾಯಾಲಯ ಕರೆದಾಗ ಹಾಜರಾಗಬೇಕೆಂಬ ಕರಾರಿನ ಮೇಲೆ ಬಿಡುಗಡೆಮಾಡಿತ್ತು. ದುರಂತವೆಂದರೆ, ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಅರ್ಜುನ್‌ಸಿಂಗ್, ಆಂಡರ್‌ಸನ್ ಅನ್ನು ಸರ್ಕಾರಿ ವಿಮಾನದಲ್ಲಿ, ಸರ್ಕಾರಿ ಅಧಿಕಾರಿಗಳ ರಕ್ಷಣೆಯಲ್ಲೇ ದಿಲ್ಲಿಗೆ ಕಳುಹಿಸಿ, ಅಲ್ಲಿಂದ ತಕ್ಷಣವೇ ವಿಮಾನದ ಮೂಲಕ ಅಮೆರಿಕೆಗೆ ಪಾರಾಗಲು ವ್ಯವಸ್ಥೆ ಮಾಡಿದ್ದು ಈಗ ಬೆಳಕಿಗೆ ಬಂದಿದೆ. ಆಗ ರಾಷ್ಟ್ರದ ಪ್ರಧಾನಮಂತ್ರಿಯಾಗಿದ್ದ ರಾಜೀವ್‌ ಗಾಂಧಿಯ ಆದೇಶದ ಮೇಲೆ ಅರ್ಜುನ್‌ಸಿಂಗ್ ಈ ಕಾರ್ಯಮಾಡಿದ್ದರೇ, ಅಥವಾ ತಾವೇ ಈ ಕಾರ್ಯವನ್ನು ಮಾಡಿದ್ದರೇ? ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಆಗ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಿ.ಸಿ. ಅಲೆಕ್ಸಾಂಡರ್, ಈಗ ಒಂದು ಹೇಳಿಕೆಯನ್ನು ನೀಡಿ, ಅರ್ಜುನ್‌ಸಿಂಗ್ ಮಾಡಿದ ಕೃತ್ಯವು ರಾಜೀವ್‌ಗಾಂಧಿಗೆ ಗೊತ್ತಿತ್ತು ಎಂದಿದ್ದಾರೆ. ಇದನ್ನು ಬಲವಾಗಿ ಅಲ್ಲಗಳೆದಿರುವ ಕೇಂದ್ರ ಕಾನೂನು ಸಚಿವರಾದ ವೀರಪ್ಪ ಮೊಯ್ಲಿ, ಅಲೆಕ್ಸಾಂಡರ್ ಹೇಳಿಕೆಯನ್ನು ಖಂಡಿಸಿ, ಅಲೆಕ್ಸಾಂಡರ್ ಬಿಜೆಪಿ ಹಾಗೂ ಶಿವಸೇನೆಯನ್ನು ಸೇರಿರುವುದರಿಂದ ಈಗ ರಾಜಕೀಯ ಪ್ರೇರಿತರಾಗಿ ಈ ಹೇಳಿಕೆ ನೀಡಿದ್ದಾರೆಂದು ಟೀಕಿಸಿದ್ದಾರೆ. ಆದರೆ ಸಿಐಎದ ಕೆಲವು ದಾಖಲೆಗಳನ್ನು ಡಿಕೋಡ್ ಮಾಡಲಾಗಿದ್ದು, ಅವುಗಳ ಮೇರೆಗೆ ರಾಜೀವ್‌ಗಾಂಧಿ ಈ ವಿಷಯದಲ್ಲಿ ಅಮೆರಿಕೆಯ ರಾಷ್ಟ್ರಪತಿಗಳೊಡನೆ ಸಂಪರ್ಕ ವಹಿಸಿದ್ದರೆಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷವು ರಾಜೀವ್‌ಗಾಂಧಿಯನ್ನು ಈ ಜಾಲದಿಂದ ಪಾರುಮಾಡುವ ಕಾರ್ಯದಲ್ಲಿ ತೊಡಗಿದೆ. ಅರ್ಜುನ್‌ಸಿಂಗ್‌ರನ್ನು ಈ ಪ್ರಕರಣದ ಹರಕೆಯ ಕುರಿ ಮಾಡುವರೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಒಂದು ಹೇಳಿಕೆಯನ್ನು ಕೊಟ್ಟು, ಯೂನಿಯನ್ ಕಾರ್ಬೈಡ್ ಅನಿಲ ದುರಂತವಾದೊಡನೆ ಬೋಪಾಲ್‌ದಲ್ಲಿ ಕಾನೂನು ಸುವ್ಯವಸ್ಥೆಯ ಪ್ರಶ್ನೆಯು ಉಂಟಾಗಿದ್ದು, ಈ ಕಾರಣಕ್ಕೆ ಅರ್ಜುನ್‌ಸಿಂಗ್ ಇವರು ಆಂಡರ್‌ಸನ್ ಇವರನ್ನು ಪಾರುಮಾಡುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. 1984ರಲ್ಲಿ ಪಾರಾದ ಆಂಡರ್‌ಸನ್, ವಿಚಾರಣೆಗೂ ಹಾಜರಾಗಿಲ್ಲ; ಶಿಕ್ಷೆಯಿಂದಲೂ ಪಾರಾಗಿದ್ದಾನೆ. 1984ರಿಂದ 2010ರವರೆಗೆ ಮಧ್ಯಪ್ರದೇಶದಲ್ಲಿ ಅನೇಕ ಸರ್ಕಾರಗಳು ಬಂದಿವೆ, ಅಂತೆಯೇ ಕೇಂದ್ರದಲ್ಲಿಯೂ ಅನೇಕ ಸರ್ಕಾರಗಳು ಆಗಿಹೋಗಿವೆ. ಈವರೆಗೆ ಆಂಡರ್‌ಸನ್‌ನನ್ನು ವಿಚಾರಣೆಗೆ ಭಾರತಕ್ಕೆ ಕರೆಸಿಕೊಳ್ಳುವಲ್ಲಿ ಯಾರೂ ಯಶಸ್ವಿಯಾಗಿಲ್ಲ. ಮಧ್ಯಕಾಲದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಡ ಕೇಂದ್ರದಲ್ಲಿ ಆಳುತ್ತಿತ್ತು.

ವಿಚಿತ್ರವೆಂದರೆ, ಆಗ ಅಟಾರ್ನಿ ಜನರಲ್ ಆಗಿದ್ದ ಸೋಲಿ ಸೊರಾಬ್ಜಿ ಕೂಡ ದ್ವಿಮುಖ ಧೋರಣೆ ತಾಳಿದ್ದರು. ಆಂಡರ್‌ಸನ್ ಇವರ ಎಕ್ಸ್‌ಟ್ರಾಡಿಷನ್ ಬಗ್ಗೆ "ಭಾರತದಲ್ಲಿ ಐ.ಪಿ.ಸಿ. ಕಲಂ 304ಎ(ನಿಷ್ಕಾಳಜಿಯಿಂದ ಉಂಟುಮಾಡಿದ ಸಾವು) ತೆಳಗಿನ ಅಪರಾಧವು, ಅಮೆರಿಕನ್ ಕಾನೂನಿನನ್ವಯ ಮ್ಯಾನ್‌ಸ್ಲಾಟರ್ ಅಪರಾಧವಾಗುವುದರಿಂದ ಎಕ್ಸ್‌ಟ್ರಾಡಿಷನ್ ಟ್ರೀಟಿಯ ಮೇರೆಗೆ ಈ ಅಪರಾಧಕ್ಕಾಗಿ ವಿಚಾರಣೆಗೆ ಭಾರತಕ್ಕೆ ಆಂಡರ್‌ಸನ್‌ಅನ್ನು ಎಕ್ಸ್‌ಟ್ರಾಡೈಟ್ ಮಾಡಬೇಕಾಗುತ್ತದೆ" ಎಂದು ಅಭಿಪ್ರಾಯವನ್ನು ನೀಡಿದ್ದ ಸೋಲಿ ಸೊರಾಬ್ಜಿ, ನಂತರ ಈ ಕುರಿತು ಅಮೆರಿಕೆಯ ಕಾನೂನು ಸಂಸ್ಥೆಯಾದ ವೆರ್‌ನರ್, ಲಿವಿಪ್‌ಫರ್ಟ್, ಬೆರ್ನ್‌ಹಾರ್ಡ್, ಮೆಕ್‌ಫರ್‌ಸನ್ ಅಂಡ್ ಹ್ಯಾಂಡ್ ಚಾರ್ಟ್‌ರ್ಡ್‌ದಿಂದ ಆಂಡರ್‌ಸನ್ ಸಂಬಂಧ ಕಾನೂನು ಸಲಹೆಯನ್ನು ಪಡೆದು ಆಂಡರ್‌ಸನ್ ಇವರ ಎಕ್ಸ್‌ಟ್ರಾಡಿಷನ್ ಪಡೆಯುವ ಪ್ರಯತ್ನದಲ್ಲಿ ಯಾವ ಅರ್ಥವೂ ಇಲ್ಲ ಎಂದಿದ್ದರು. ಅಂದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಕೂಡ, ಆಂಡರ್ಸನ್ ಇವನನ್ನು ವಿಚಾರಣೆಗೆ ಭಾರತಕ್ಕೆ ಕರೆಸಿಕೊಳ್ಳುವುದರ ಕಾರ್ಯ ಯಶಸ್ವಿಯಾಗಿ ಮಾಡಲಾಗಿಲ್ಲ ಎಂದು ಇದರಿಂದ ಸಾಬೀತಾಗುತ್ತದೆ. ಈಗ ಬಿಜೆಪಿ ಕಾಂಗ್ರೆಸ್ ಮೇಲೆ ಗೂಬೆ ಕೂಡಿಸುವ ಕಾರ್ಯದಲ್ಲಿ ತೊಡಗಿದೆ. ಈಗ ಇನ್ನೊಂದು ವಿಚಿತ್ರ ವಾದವನ್ನು ಮಂಡಿಸಲಾಗುತ್ತಿದೆ. ಆಂಡರ್ಸನ್ ಹೆಂಡತಿಯು ಹೇಳುತ್ತಿದ್ದಾಳೆ, "ಆಂಡರ್ಸನ್‌ಗೆ ಈಗ 90 ವರುಷಗಳಾಗಿವೆ. ಈ ಇಳಿವಯಸ್ಸಿನಲ್ಲಿ ಎಂಥ ವಿಚಾರಣೆ?" ಎಂದು.

ಇನ್ನು ಭೋಪಾಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕೊಟ್ಟಿರುವ ಶಿಕ್ಷೆ ಬಗ್ಗೆ ವಾದ-ವಿವಾದ ನಡೆದಿದೆ. ಈ ಕುರಿತು ಏಳುವ ಪ್ರಶ್ನೆ ಗಮನಾರ್ಹ. 1984ರಲ್ಲಿ ಭೋಪಾಲ್ ಅನಿಲ ದುರಂತದಲ್ಲಿ ಸಿ.ಬಿ.ಐ. ಮೂಲ ಚಾರ್ಜ್‌ಷೀಟ್ ಹಾಕಿದಾಗ, ಆರೋಪಿಗಳ ಮೇಲೆ ಐ.ಪಿ.ಸಿ.ಯ ಕಲಂ 304(2)ರ ಮೇರೆಗೆ ಆರೋಪವನ್ನು ಹೊರಿಸಿತ್ತು. ಇದು "ಕಲ್ಪಬಲ್ ಹೋಮಿಸೈಡ್ ನಾಟ್ ಅಮೌಂಟಿಂಗ್ ಟು ಮರ್ಡರ್" (ಕೊಲೆಯಾಗದ ಅಪರಾಧಾರ್ಹ ಸಾವು) ಆರೋಪವಾಗಿದ್ದು, ಇದಕ್ಕೆ ಹತ್ತು ವರುಷಗಳವರೆಗೆ ಜೈಲು ಶಿಕ್ಷೆ ಇದೆ. ಇದನ್ನು ಆರೋಪಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಮುಖ್ಯ ನ್ಯಾಯಮೂರ್ತಿ ಅಹಮದಿಯವರು ಈ ಆರೋಪವನ್ನು ತಳ್ಳಿಹಾಕಿ, ಈ ಆರೋಪಿಗಳನ್ನು ಐ.ಪಿ.ಸಿ. ಕಲಂ 304(ಎ), ಅಂದರೆ, "ರ್‍ಯಾಷ್ ಅಂಡ್ ನೆಗ್ಲಿಜೆಂಟ್ ಆಕ್ಟ್" ಎಂಬ ಅಪರಾಧಕ್ಕೆ ವಿಚಾರಣೆಯನ್ನು ನಡೆಸುವಂತೆ ತೀರ್ಪನ್ನಿತ್ತರು. ಈ ಆರೋಪಕ್ಕೆ ಕಾನೂನಿನ ಮೇರೆಗೆ ಶಿಕ್ಷೆ ಎರಡು ವರ್ಷಗಳ ಜೈಲು ಆಗಿದೆ. ಈ ತೀರ್ಪನ್ನು ರೆವ್ಯೂ ಪೆಟಿಷನ್ ಹಾಕಿ ಆಹ್ವಾನಿಸಬಹುದಾಗಿತ್ತು. ಸಿ.ಬಿ.ಐ. ಈ ಕ್ರಮವನ್ನು ಆಗ ಕೈಗೊಳ್ಳಲಿಲ್ಲ ಎಂಬುದು ಇನ್ನೊಂದು ದುರಂತವೇ ಅಲ್ಲವೇ? ಅಂತೆಯೇ 26 ವರುಷಗಳ ವಿಚಾರಣೆಯ ನಂತರ ಏಳು ಆರೋಪಿಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿರುವುದು.

ಇನ್ನು ಪರಿಹಾರ ಕುರಿತು ಪ್ರಶ್ನೆ? ಇದೂ ಇನ್ನೊಂದು ದುರಂತವೇ ಸರಿ. ಕೇಂದ್ರ ಸರ್ಕಾರವು ಮಾರ್ಚ್, 1985ರಲ್ಲಿ ಒಂದು ಕಾನೂನನ್ನು ಮಾಡಿ, ಭೋಪಾಲ್ ದುರಂತದಲ್ಲಿ ನೊಂದವರೆಲ್ಲರ "ಸೋಲ್ ಟ್ರಸ್ಟಿ" ಭಾರತ ಸರ್ಕಾರ ಎಂದು ಜವಾಬ್ದಾರಿಯನ್ನು ಹೊತ್ತಿತ್ತು. ಈ ಕಾರಣದಿಂದ ಅನಿಲ ದುರಂತದಲ್ಲಿ ನೊಂದವರೆಲ್ಲರ ಪರವಾಗಿ ಯೂನಿಯನ್ ಕಾರ್ಬೈಡ್ ಕಂಪನಿಯಿಂದ 3.3 ಲಕ್ಷಕೋಟಿ ಡಾಲರ್ ಪರಿಹಾರವನ್ನು ಬೇಡಿತು. ಆದರೆ ಕೊನೆಗೆ 470 ದಶಲಕ್ಷ ಡಾಲರ್‌ಗಳ ಪರಿಹಾರಕ್ಕೆ ಒಪ್ಪಂದವನ್ನು ಮಾಡಿಕೊಂಡಿತು. ಅಂದರೆ ಮೂಲತಮವಾಗಿ ಮಾಡಿದ ಬೇಡಿಕೆಯಲ್ಲಿ ಒಂದನೆಯ ಆರಾಂಶದಷ್ಟು ಮೊತ್ತಕ್ಕೆ ಯೂನಿಯನ್ ಕಾರ್ಬೈಡ್ ಜೊತೆಗೆ ಕೇಂದ್ರ ಸರ್ಕಾರವು ಒಪ್ಪಂದ ಮಾಡಿಕೊಂಡಿತಲ್ಲದೆ, ಈ ಒಪ್ಪಂದದ ಪರಿಣಾಮವಾಗಿ, ಎಲ್ಲ ಸಿವಿಲ್ ಹಾಗೂ ಕ್ರಿಮಿನಲ್ ಹೊಣೆಗಾರಿಕೆಯಿಂದ ಯೂನಿಯನ್ ಕಾರ್ಬೈಡನ್ನು ಮುಕ್ತಮಾಡುವ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪಿನ ಭಾಗವಾಗಿ ಮಾಡಲಾಗಿತ್ತು. ಈ ಒಪ್ಪಂದ ಆದಾಗ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ರಾಮ್ ಜೇಠಮಲಾನಿಯವರು ಮಾಡಿದ ಟೀಕೆ ಗಮನಾರ್ಹ: "ಈ ಒಪ್ಪಂದದ ಹಿಂದೆ ಬೃಹತ್ ಭ್ರಷ್ಟಾಚಾರ ಅಡಗಿದೆ" ಎಂದು ಅವರು ಆರೋಪಿಸಿದ್ದರು. ವಿಚಿತ್ರವಾದರೂ ಸತ್ಯವೆಂದರೆ, ಅಮೆರಿಕೆಯಲ್ಲಿ ಈ ಬಗೆಯ ದುರಂತಗಳಲ್ಲಿ ನೀಡುವ ಪರಿಹಾರದ ಶೇಕಡ 5ರಷ್ಟಕ್ಕೆ ಭಾರತದಲ್ಲಿ ನೀಡುವ ಪರಿಹಾರದ ಒಪ್ಪಂದವಾಗಿತ್ತು ಎನ್ನುವುದು.

ಭೋಪಾಲ್ ದುರಂತದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೂ, ವಿಶ್ವವಿಖ್ಯಾತ ನ್ಯಾಯತಜ್ಞರಾದ ವಿ.ಆರ್. ಕೃಷ್ಣಅಯ್ಯರ್ "ಭೋಪಾಲ್ ಪರಿಣಾಮದ ಕೆಲ ಪಾಠಗಳು" ಎಂಬ ಲೇಖನವನ್ನು ಬರೆದಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ: "ಭಾರತದ ನ್ಯಾಯಾಲಯಗಳು ವಿಕ್ಟೋರಿಯನ್ ಯುಗದ ಮೆಕಾಲೆ ನ್ಯಾಯದಾನವು ಇಂದಿಗೂ ಭಾರತವನ್ನು ಆಳುತ್ತಿದೆಯೋ ಎಂಬಂತಿದೆ. ಭಾರತವು ಸಮಾಜವಾದಿ ಪ್ರಜಾಸತ್ತೆಯೆಂದು ಹೆಸರಿಗಿದ್ದು, ಇದು ಶ್ರೀಸಾಮಾನ್ಯನಿಗೆ ಮಾರಕವಾಗಿದೆ. ಈ ವೈರುಧ್ಯ ಕೊನೆಗೊಳ್ಳಬೇಕು" ಎಂದು ಹೇಳುವುದರೊಡನೆ ಭಾರತದಲ್ಲಿ ಪ್ರಚಲಿತವಾಗಿರುವ ಸಂಸತ್ತು, ಕಾರ್ಯಾಂಗ ಹಾಗೂ ನ್ಯಾಯಾಂಗ ಇವೆಲ್ಲವೂ ತಮ್ಮ ಕಾರ್ಯನಿರ್ವಹಣೆಯಲ್ಲಿ ವಿಫಲವಾಗಿದ್ದು, ಭಾರತ "ಡಾಲರ್ ಕಾಲನಿ"ಯಾಗಿದೆ ಎಂದಿದ್ದಾರೆ. ಈ ದೇಶದಲ್ಲಿಯ ಕಾನೂನು ಕೇವಲ ಮುನಿಸಿಪಾಲಿಟಿಗಳು ಹಾಗೂ ಪಂಚಾಯಿತಿಗಳಿಗೆ ಸೀಮಿತಗೊಂಡಿದ್ದು, ಬಹುರಾಷ್ಟ್ರೀಯ ಕಂಪನಿಗಳು ತಮ್ಮದೇಆದ ಕಾನೂನನ್ನು ಚಲಾಯಿಸುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X