ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ ಕನ್ನಡದಾಗ ಏನಿಲ್ಲ?

By * ಮಹೇಶ್ ಗಜಬರ, ಚಿಕ್ಕೋಡಿ
|
Google Oneindia Kannada News

Mahesh Gajabar, Belgaum
ಧಾರವಾಡ ಪ್ರಾಂತ್ಯದಲ್ಲಿ ಆಡಲಾಗುವ ಮಾತು, ಅಲ್ಲಿನ ವಿಶಿಷ್ಟ ಪದಗಳಲ್ಲಿ ವಿಶೇಷವಾದ ಸೊಗಡಿದೆ. ಕೆಲ ಪದಗಳು ಅನ್ಯ ಭಾಷೆಯ ಪ್ರಭಾವದಿಂದ ಹುಟ್ಟಿಕೊಂಡಿದ್ದರೂ ಅವು ಕನ್ನಡದ ಪದಗಳೇ ಆಗಿಹೋಗಿವೆ. ಆದರೂ, ಅವುಗಳ ಬಳಕೆಯಲ್ಲಿ ಕೃತಕತೆಯಿಲ್ಲ, ಧಾರವಾಡದ ಕಡೆ ಇಂಗ್ಲಿಷಿನ ಪ್ರಭಾವವಂತೂ ಭಾರೀ ಕಡಿಮೆ. ಉತ್ತರ ಕರ್ನಾಟಕದ ಭಾಷೆಯ ಕೆಲ ಪದಗಳನ್ನು ರಾಜ್ಯದ ಇತರ ಸಹೋದರ, ಸಹೋದರಿಯರಿಗೆ ಪರಿಚಯಿಸುವ ಉದ್ದೇಶದಿಂದ ಕೆಲ ಪದಗಳು, ಅವುಗಳ ಅರ್ಥ ಮತ್ತು ಕೆಲ ಉದಾಹರಣೆಗಳನ್ನು ನೀಡಲಾಗಿದೆ. ಪಟ್ಟಿ ದೊಡ್ಡದಿರುವುದರಿಂದ 'ಅ'ದಿಂದ 'ಓ'ತನಕ ಕೆಲ ಪದಗಳನ್ನು ಇಲ್ಲಿ ನೀಡಲಾಗಿದೆ. ಉಳಿದ ಪದಗಳನ್ನು ಮುಂದೆ ಪರಿಚಯಿಸಲಾಗುವುದು. ಓದುಗರು, ಸಹೃದಯತೆಯಿಂದ ಸ್ವೀಕರಿಸುತ್ತಾರೆಂದು ನಮ್ಮ ಆಶಯ. - ಸಂಪಾದಕ.


ಅಗದೀ, ಅಗದಿ = ತುಂಬ. ಉದಾ: ಅಂವ ಅಗದೀ ಛೊಲೊ ಇದ್ದಾನ.
ಅಡಸಳ, ಬಡಸಳ = ಅವ್ಯವಸ್ಥ
ಅಂವ = ಆತ. ಉದಾ: ಅಂವ ಇದ್ದಾನಲ್ಲ ಮಹಾ ಅರಿವುಗೇಡಿ ಅದಾನ.
ಅಚ್ಚಿಮೊನ್ನೆ = ಮೊನ್ನೆಯ ಹಿಂದಿನ ದಿನ (ಆಚೆಮೊನ್ನೆ ). ಉದಾ: ಅಚ್ಚಿಮೊನ್ನೆ ನಿತ್ಯಾನಂದಗ ಜಾಮೀನು ಸಿಕ್ಕಿತು.
ಅನಕಾತ = ಸದ್ಯಕ್ಕೆ. ಉದಾ: ಮ್ವಾಡೆಲ್ಲಾ ಚೆದುರಿ ಹೋದು ಅನಕಾತ ಮಳಿ ಬರೋಹಂಗ ಕಾಣಂಗಿಲ್ಲ.
ಅನಾತನಕ = ಅಲ್ಲಿವರೆಗೂ
ಅರಿಬಿ = ಬಟ್ಟೆ. ಉದಾ: ಹಳೇ ಅರಬಿ(ವಿ) ಹೊಸಾ ಭಾಂಡೀ.
ಅರಬಟ್ = ಬಲು ಹುರುಪು
ಅಂಜು = ಹೆದರು
ಅಡಕಲ ಖೋಲಿ = ಸ್ಟೋರ್ ರೂಂ
ಅಗಳಿ = ಬಾಗಿಲು ಮುಚ್ಚಿದ ನಂತರ ಹಾಕುವ ತಡೆ
ಅಗಸಿ ಬಾಗಿಲು = ಊರ ದ್ವಾರ ಬಾಗಿಲು. ಉದಾ: ಊರ ಕೊಳ್ಳಿ ಹೊಡದ ಮ್ಯಾಲ ಅಗಸಿ ಬಾಗಲಾ ಹಾಕಿದರೇನು ಬಂತು?
ಅಂಗಾರ = ಗುಡಿಯಲ್ಲಿ ಕೊಡುವ ಭಸ್ಮ
ಅತ್ಯಾ = ಅತ್ತೆ. ಉದಾ: ಮೂಡಲ ಮನೆ ಧಾರಾವಾಹಿದಾಗ ಅತ್ಯಾ ಹೆಸರು ಕೇಳಿರಬೇಕಲ್ಲ?
ಅಂಗಾತ = ಮುಖ ಮೇಲೆ ಮಾಡಿ ಬೆನ್ನು ಕೆಳಗೆ ಇರುವಂತೆ
ಅಂಗಳ = ಮನೆ ಮುಂದಿನ ಅಂಗಣ
ಅಂಜಪುಕ್ಕಳಿ = ಹೆದರುಪುಕ್ಕಲ
ಅಡ್ಡಮಳಿ = ಅಕಾಲ ಮಳೆ. ಉದಾ: ಅವನೌನ ಅಡ್ಡಮಳಿ ಹೊಡದ ಬೆಳಿ ಎಲ್ಲಾ ಹಾಳಾಗ್ಯಾವ.
ಅಚಾನಕ = ಅನೀರಿಕ್ಷಿತ
ಅಟ್ಟ = ಮನೆಯಲ್ಲಿ ಸಾಮಾನುಗಳನ್ನು ಇಡಲು ಛಾವಣಿ ಮೇಲೆ ಇರುವ ಅಂತಸ್ತು.. ಉದಾ: ಅಟ್ಟದ ಮ್ಯಾಲ ಮಂಗ್ಯಾ ಬಂದಾವ ಓಡಿಸಹೋಗ್ರಿ.
ಅಡ್ಡೆಸ್ರು, ಅಡ್ದಹೆಸರು = ಮನೆತನದ ಹೆಸರು
ಅತ್ತರ್ = ಸುಗಂಧ ದ್ರವ್ಯ. ಉದಾ: ಮದವಿ ಗಂಡು ಬಂದ ಅತ್ತರ ತೊಗೊಂಡು ಬರ್ರಿ.
ಅಳುಬುರಕ = ಸದಾ ಅಳುತ್ತಿರುವವ
ಅಳುಬುರುಕಿ = ಸದಾ ಅಳುತ್ತಿರುವವಳು
ಅರಚು = ಕೂಗಾಡು
ಅದಾನ = ಇದ್ದಾನೆ
ಅದಾರ = ಇದ್ದಾರೆ. ಉದಾ: ಸಾಹೇಬ್ರು ಅದಾರೋ ಇಸ್ಪೇಟಾಡಾಕ ಹೋಗ್ಯಾರೋ?
ಅಳ್ಳು = ಪಾಪ್-ಕಾರ್ನ್


ಆಕಿ = ಅವಳು. ಉದಾ: ಏ ಇವನ, ನಿಮ್ಮಾಕಿ ಗುಡಿಗೆ ಹೋಗ್ಯಾಳೇನು?
ಆಜೂಬಾಜು = ಅಕ್ಕಪಕ್ಕ. ಉದಾ: ಪರೀಕ್ಷಾಕ್ಕ ಕೂತಾಗ ಆಜೂಬಾಜೂ ನೋಡಬ್ಯಾಡ.
ಆತು = ಆಯಿತು. ಉದಾ: ಆತ ಬಿಡಪಾ, ಇವತ್ತಿಗೆ ನಂದೂ ನಿಂದೂ ದೋಸ್ತಿ ಮುಗೀತು.
ಆಯಿ = ಅಜ್ಜಿ.
ಅಂಬರಾ, ಅಂಬಲಿ = ಮಜ್ಜಿಗೆಗೆ ಜೋಳದ ಹಿಟ್ಟು ಕಲಸಿ, ಬಿಸಿ ಮಾಡಿ ಕೊತ್ತಂಬರಿ ಹಾಕಿ ಮಾಡಿದ ಗಂಜಿ.
ಆಕಳು = ಹಸು, ಗೋಮಾತೆ (ಹಸು ಎನ್ನುವ ಶಬ್ದ ಬಳಕೆಯಲ್ಲಿ ಇಲ್ಲ)
ಆಣಿ = ಆಣೆ. ಉದಾ: ಆಣಿ ಮಾಡಿ ಹೇಳು ಕಿಶೇದಾಗಿಂತ ಪೈಸಿ ಕದ್ದಿಲ್ಲಂತ.
ಆನಿ = ಆನೆ. ಉದಾ: ಅಡಕಿಗೆ ಹೋದ ಮಾನ ಆನಿ ಕೊಟ್ರೂ ಬರಂಗಿಲ್ಲ.


ಇಯತ್ತೆ = ತರಗತಿ("ಉದಾ: ಬಿನ್ನೆತ್ತೆ(ಬಾಲವಾಡಿ), ಐದನೆತ್ತೆ , ಹತ್ತನೆತ್ತೆ)
ಇಣಚಿ = ಅಳಿಲು.
ಇನಾಂದಾರ = ಜಮೀನ್ದಾರ.


ಈರ್ಷೆ = ಹಗೆ, ದ್ವೇಷ. ಉದಾ: ಯಾರ ಈರ್ಷಾ ಕಟಗೊಂಡು ಏನ ಆಗಬೇಕಾಗೇದ ಹೇಳು?


ಉಳ್ಳಾಗಡ್ಡಿ = ಈರುಳ್ಳಿ(ಈರುಳ್ಳಿ ಶಬ್ದ ಬಳಕೆಯಲ್ಲಿ ಇಲ್ಲ). ಉದಾ: ಉಳ್ಳಾಗಡ್ಯಂತೇಳಿ ಕುಡಕಾ ತತ್ತಿ ತಿನಿಸಿದಲ್ಯೋ!
ಉತ್ತತ್ತಿ = ಒಣ ಖರ್ಜೂರ. ಉದಾ: ಬಂದ ನೋಡು ಉತ್ತತ್ತಿ ಗಿಡ್ಡ (ತಮಾಷೆಗೆ)
ಉಂಡಿ = ಲಾಡು.
ಉಂಬೋದು = ಉಣ್ಣುವುದು. ಉದಾ: ಉಂಬೋದಿಲ್ಲ, ತಿಂಬೋದಿಲ್ಲ ಹೆಂಗ ಸಣಕಲ ಕಡ್ಡಿ ಆಗ್ಯಾನೋಡು.
ಉಡಾಳ = ತುಂಟ, ಪೋಕರಿ. ಉದಾ: ಮಗಾ ಏನ ಉಡಾಳ ಆಗ್ಯಾನಂತೀ, ಹಿಡ್ಯೋದ ಆಗವಲ್ತು.
ಉಡಗೋಲು = ಪೊರಕೆ, ಕಸಬರಿಗೆ
ಉಸುಕು = ಮರಳು.
ಉಸಾಬರಿ = ಜವಾಬ್ದಾರಿ. ಉದಾ: ಯಾವನಿಗೆ ಬೇಕಾಗೇದ ಅವನ ಉಸಾಬರಿ.
ಉಡಿ = ಮಡಿಲು. ಉದಾ: ಮನಿಗೆ ಹೆಣಮಗಳು ಬಂದಾಳ, ಉಡಿ ತುಂಬ್ರಿ.
ಉಡದಾರ = ಸೊಂಟಕ್ಕೆ ಕಟ್ಟೊ ದಾರ.
ಉಣ್ಣು = ತಿನ್ನು (ಬೆಂಗಳೂರಿನಲ್ಲಿ ಈ ಶಬ್ದ ತನ್ನ ಮೌಲ್ಯ ಕಳೆದುಕೊಂಡಿದೆ). ಉದಾ: ಬ್ಯಾಡಬಿಡ್ರೀಯಪ್ಪಾ!
ಉದ್ರಿ, ಉದ್ದರಿ = ಅಂಗಡಿಯಲ್ಲಿ ಸಾಲ.
ಉದ್ರಿ ಸಲಹೆ = ಬಿಟ್ಟಿ ಸಲಹೆ-ಉಪದೇಶ. ಉದಾ: ಉದ್ರಿ ಸಲಹೆ ಕೊಡಾಕ ಅಷ್ಟ ಬರೋಬ್ಬರಿ ಅದಾನ ಅವಾ.
ಉದುರು ಅನ್ನ = ಒಂದಕ್ಕೊಂದು ಅಗಳು ಅಂಟಿಕೊಳ್ಳದೆ ಇರುವ ಅನ್ನ.
ಉದ್ದು = ಉದ್ದಿನ ಬೇಳೆ (ಬೈಗಳಿನಲ್ಲಿ ಉದ್ದು ಹರಿತಾ ಇದ್ದಿ ಏನಲೇ? ಅಂತಾ ಬೈದ್ರೆ ಖಾಲಿ ಬಿದ್ದಿದಿಯಾ ಏನು? ಅಂತಾ ಅರ್ಥ)
ಉರೋಲು = ಸೌದೆ (ಸೌದೆ ಶಬ್ದ ಬಳಕೆಯಲ್ಲಿ ಇಲ್ಲ)


ಊದಣಿಕೆ, ಊದವಣಿಕೆ, ಊದನಳಿಕೆ = ಒಲೆಯಲ್ಲಿ ಕೆಂಡ ಊದಲೂ ಬಳಸುವ ನಳಿಕೆ, ಊದುಕೊಳವೆ
ಊದ್ದಿನಕಡ್ಡಿ, ಊದಕಡ್ಡಿ = ಅಗರಬತ್ತಿ. ಉದಾ: ಯಾವಲೇ ಅವ ಹೂಸ ಬಿಟ್ಟಾಂವ. ಊದಿನಕಡ್ಡಿ ಹಚ್ರಿ.


ಎರಿನೆಲ = ಬಿತ್ತಲು ತಯಾರಾದ ನೆಲ.
ಎಲಿ = ಎಲೆ. ಉದಾ: ಊಟಕ್ಕ ತಡಾ ಆಗೇತಿ ಎಲಿ ಹಾಕ್ರ್ಯಪಾ.
ಎಸಿ = ಎಸೆ.
ಎಳಿ = ಎಳೆ. ಉದಾ: ಬಾಗಿಲ ಜೋರಾಗಿ ಎಳಿ.
ಎಬಡ = ದಡ್ಡ. ಉದಾ: ಏನ್ ಎಬಡ ಅದಾನಲೇ ಅವಾ.
ಎದಿ = ಎದೆ. ಉದಾ: ಇದ್ದದ್ದಿಂಗ ಹೇಳಿದ್ರ ಎದ್ದು ಬಂದು ಎದಿಗೆ ಒದ್ದಂಗಾತು.
ಎಸರು = ಕುದಿನೀರು. ಉದಾ: ಸ್ನಾನಕ್ಕ ನೀರು ಎಸರು ಆಗ್ಯಾವಿಲ್ಲಪಾ?
ಎಳಕ್ = ಎಳೆಯದಾದ.


ಏಕದಂ, ಏಗದಂ = ಇದ್ದಕ್ಕಿದ್ದಂತೆ, ಒಮ್ಮಿಂದೊಮ್ಮಲೆ. ಉದಾ: ಹೀಂಗ ಹೊಂಟಿನ್ನಿ, ಏಕದಂ ಅಡ್ಡಬಂದ ನೋಡ.


ಐತಿ = ಇದೆ. ಉದಾ : ಮಾವಾ ನಿನ್ನ ಮಗಳ ಹತ್ತಿರ ಏನೈತಿ?


ಒಲ್ಲೆ = ಬೇಡ. ಉದಾ : ದೇವರ ಪ್ರಸಾದ ಒಲ್ಲೆ ಅನಬಾರದು.
ಒದರು = ಕೂಗಾಡು. ಉದಾ : ಹಿಂಗ್ಯಾಕ ಕಿವ್ಯಾಗ ಒದರಾಕತ್ತೀ?
ಒರಸು = ಬಳೆ, ಸ್ವಚ್ಚಗೊಳಿಸು. (ಇದಕ್ಕೆ 'ಸಾಪ ಮಾಡು' ಅನ್ನುವ ಬಳಕೆಯೂ ಇದೆ. ಉದಾ : ಏ ಟೇಬಲ್ ಸಾಪ ಮಾಡೋ ಮಾಣಿ.)
ಒಳ್ಳೆಣ್ಣೆ = ಅಡಿಗೆಗೆ ಉಪಯೋಗಿಸುವ ಎಣ್ಣೆ.


ಓಣಿ = ಬಡಾವಣೆಯ ರಸ್ತೆ , ಗಲ್ಲಿ, ವಠಾರ. ಉದಾ : ಕೊಟಾರಗೇರಿ ಓಣಿದಾಗ ರಂಗಿನಾಟ ನಡದೈತಿ.

ಗಮನಕ್ಕೆ ಬಂದಿರುವ ಪದಗಳನ್ನು ಇಲ್ಲಿ ನೀಡಲಾಗಿದೆ. ಬಿಟ್ಟು ಹೋದ ಪದಗಳನ್ನು ಓದುಗರು ತುಂಬಬಹುದು. ಜೊತೆಗೆ ಇತರ ಜಿಲ್ಲೆಗಳಲ್ಲಿ ಬಳಸಲಾಗುವ ವಿಶಿಷ್ಟ ಪದಬಳಕೆಯ ಬಗ್ಗೆಯೂ ಓದುಗರು ಬೆಳಕು ಚೆಲ್ಲಬಹುದು, ಲೇಖನ ಬರೆಯುವ ಮೂಲಕ. 'ಕ'ದಿಂದ 'ಹ'ವರೆಗಿನ ಪದಗಳು ಮತ್ತು ಅರ್ಥಗಳಿಗಾಗಿ ನಿರೀಕ್ಷಿಸಿ.

ಮುಂದಿನ ಪದಸಂಗ್ರಹ : ಗರಿಗರಿ ಧಾರವಾಡ ಕನ್ನಡ ಪದಗಳ ಗಿರಮಿಟ್ಟು »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X