• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಕಲವನ್ನೂ ನೀಡುವ ಗೋಮಾತೆಗೆ ನಮನ

By * ಸುಮತಿ ಕೆ.ಸಿ.ಭಟ್, ಆದೂರು
|
ಅನಾದಿ ಕಾಲದಿಂದಲೂ ಮಾನವನಿಗೂ ಗೋವಿಗೂ ಅವಿನಾಭಾವ ಸಂಬಂಧ ಇದೆ. ವೇದ ಕಾಲದಲ್ಲಿ ಋಷಿಮುನಿಗಳ ಹೋಮ ಹವನ ಯಾಗ ಯಜ್ಞಗಳಿಗೆ ಪ್ರಾಮುಖ್ಯವಾಗಿ ಬೇಕಾದ ಗೋ ಮೂತ್ರ , ಗೋ ಮಯ, ಹಾಲು ತುಪ್ಪ, ಇತ್ಯಾದಿಗಳಿಗಾಗಿ ಅವರು ತಮ್ಮ ಆಶ್ರಮಗಳಲ್ಲಿ ಗೋವುಗಳನ್ನು ಸಾಕುತ್ತಿದ್ದರು. ಬೆಳಗ್ಗಿನ ಜಾವವೇ ಎದ್ದು ಹಸುವನ್ನು ಮೀಯಿಸಿ ಹಣೆಗೆ ತಿಲಕವಿಟ್ಟು ಪೂಜಿಸಿ ನಂತರವೇ ಹಾಲನ್ನು ಹಿಂಡುತ್ತಿದ್ದರು. ದನಗಳನ್ನೂ ಮಕ್ಕಳಂತೆಯೇ ಪ್ರೀತಿಸಿ ಪೋಷಿಸುತ್ತಿದ್ದರು. ಹಾಲನ್ನು ಕಾಯಿಸಿ ದೇವರಿಗರ್ಪಿಸಿಯೇ ತಾವು ಉಪಯೋಗಿಸುತ್ತಿದ್ದರು. ಹಸುವಿಗೆ ಗೋಗ್ರಾಸ ನೀಡಿದ ಬಳಿಕವೇ ತಾವು ಭೋಜನ ಸೇವಿಸುತ್ತಿದ್ದರು. ಕೆಲವು ಮನೆತನಗಳಲ್ಲಿ ಇಂದಿಗೂ ಗೋಗ್ರಾಸ ನೀಡದೆ ಊಟ ಮಾಡುವ ಪದ್ಧತಿ ಇಲ್ಲ!

ಗೋ ಮಾತೆ ಎಂದೇ ಕರೆಯಲ್ಪಡುವ ಗೋವಿನಿಂದ ಮನುಷ್ಯನು ಅನೇಕ ರೀತಿಯಲ್ಲಿ ಪ್ರಯೋಜನ ಪಡೆಯುತ್ತಿದ್ದಾನೆ. ಹಾಲಿನಿಂದಲೇ ಮನುಷ್ಯನ ದಿನದ ಕೆಲಸ ಆರಂಭ. ಹಾಲು ಹಾಕಿದ ಕಾಫಿ ಅಥವಾ ಚಹಾ ಒಂದು ಕಪ್ ಕುಡಿದರೆ ಜನರಿಗೆ ಹೊಸ ಚೈತನ್ಯ ಮೂಡುತ್ತದೆ. ಒಂದೇ ಒಂದು ದಿನವಾದರೂ ಹಾಲಿಲ್ಲದಿದ್ದರೆ ಮನುಷ್ಯ ಕಂಗಾಲು. ಹಾಗೇನೇ ಗಂಜಿಗೊಂದಷ್ಟು ತುಪ್ಪ ಅಥವಾ ಮೊಸರು ಯಾ ಮಜ್ಜಿಗೆ ಹಾಕಿ ಊಟ ಮಾಡಿದಲ್ಲಿ ಅದು ಮೃಷ್ಟಾನ್ನ ಭೋಜನವಾಗುತ್ತದೆ. ಅಮೃತ ಸಮಾನವಾದ ಹಾಲು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಿಂದಿನ ಕಾಲದಲ್ಲಿ ಬಹುತೇಕ ಮನೆಗಳಲ್ಲಿ ಹಟ್ಟಿತುಂಬಾ ಜಾನುವಾರುಗಳಿದ್ದವು. ಅದರಲ್ಲಿ ಗರ್ಭ ಧರಿಸಿದವುಗಳು, ಆಗತಾನೇ ಕರುಹಾಕಿದವುಗಳು, ಹೋರಿಗಳು ಹೀಗೆ ವಿಧ ವಿಧದ ಜಾನುವಾರುಗಳು ಇರುತ್ತಿದ್ದವು. ಹಿಂದೆ ಈಗಿನಂತೆ ವಿದೇಶೀ ತಳಿಗಳ ಜಾನುವಾರುಗಳಿರಲಿಲ್ಲ. ಏನಿದ್ದರೂ ಊರ ತಳಿಗಳೇ. ಆಗ ಜಾನುವಾರುಗಳ ಮೇವಿಗಾಗಿ ವಿಶಾಲವಾದ ಗೋಮಾಳವಿರುತ್ತಿತ್ತು. (ಈಗಲೂ ಬಹುಕಡೆಗಳಲ್ಲಿ ಗೋ ಮಾಳ ಇದೆಯಾದರೂ ಅದು ಅತಿಕ್ರಮಣಗೊಳ್ಳುತ್ತಿವೆ.) ಹಳ್ಳಿ ಮನೆಗಳಲ್ಲಿ ಬೆಳಗ್ಗಿನ ಜಾಗವೇ ಎದ್ದು ಮಡ್ಡಿ ಅಕ್ಕಚ್ಚು ಕೊಟ್ಟು ಹಾಲು ಕರೆದು ಜಾನುವಾರುಗಳನ್ನು ಗೋಮಾಳಕ್ಕೆ ಅಟ್ಟುತ್ತಿದ್ದರು. ಊರಿನ ಎಲ್ಲಾ ಮನೆಗಳ ಜಾನುವಾರುಗಳೂ ಹಿಂಡು ಹಿಂಡಾಗಿ ಅಲ್ಲಿ ಮೇಯುತ್ತಿದ್ದವು. ದನಗಳಿಗೆ ಗಂಗೇ , ಗೌರಿ, ತುಂಗಭದ್ರೆ ಇತ್ಯಾದಿ ಹೆಸರಿಡುತ್ತಿದ್ದರು.

ಸಂಜೆಯಾಗುತ್ತಿದ್ದಂತೆಯೇ ಗೋ ಪಾಲಕರು ತಮ್ಮ ತಮ್ಮ ಜಾನುವಾರುಗಳನ್ನು ಹೆಸರೆತ್ತಿ ಕೂಗಿದೊಡನೆ ಅವುಗಳು ಓಡೋಡಿ ತಮ್ಮ ಮನೆಯತ್ತ ಸಾಗುತ್ತಿದ್ದವು. ಎಳೆಯ ಕರುಗಳಿದ್ದ ಹಸುಗಳು ಅದಕ್ಕೆ ಮುನ್ನವೇ ಅಂಬಾ ಎಂದು ಕೂಗುತ್ತಾ ಹಟ್ಟಿ ಸೇರುತ್ತಿದ್ದವು. ದೇಶೀ ತಳಿಗಳ ಹಾಲು, ಮಜ್ಜಿಗೆ, ಕ್ಷೀರೋತ್ಪನ್ನಗಳು ಹೆಚ್ಚಿನ ಔಷಧೀಯ ಗುಣವನ್ನೂ ಹೊಂದಿವೆ. ಮನುಷ್ಯನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಗೋವು ಪ್ರಾಧಾನ್ಯತೆಯನ್ನು ಪಡೆದಿದೆ. ಕೆಲವರ್ಷಗಳ ಹಿಂದೆ ಕಣ್ಣಳತೆಯುದ್ದಕ್ಕೂ ಭತ್ತ, ಜೋಳ , ಕಬ್ಬಿನ ಗದ್ದೆಗಳಿರುತ್ತಿದ್ದವು. ಗದ್ದೆಯನ್ನು ಹಸನುಗೊಳಿಸಲು ಎತ್ತುಗಳನ್ನು ಬಳಸುತ್ತಿದ್ದರು. ಆದರೆ ಈಗ ಅಲ್ಲೊಂದು ಇಲ್ಲೊಂದು ಎಂಬಂತೆ ಮಾತ್ರ ಉಳುವ ಎತ್ತುಗಳು ಕಾಣಸಿಗುತ್ತವೆ.

ಆ ಸ್ಥಾನವನ್ನು ಟಿಲ್ಲರು ಟ್ರಾಕ್ಟರು ಆಕ್ರಮಿಸಿಕೊಂಡಿದೆ. ಅಷ್ಟು ಮಾತ್ರವಲ್ಲ ಜಾನುವಾರುಗಳ ಸೆಗಣಿಯಿಂದ ಗೋ ಬರ್ ಗ್ಯಾಸ್ ಮಾಡಿ ಅದರಿಂದಲೂ ಮನುಷ್ಯ ಪ್ರಯೋಜನ ಪಡೆದುಕೊಳ್ಳುತ್ತಾನೆ. ಬೆರಣಿ ತಟ್ಟಿ ಒಣಗಿಸಿದರೆ ಅದನ್ನು ಉರುವಲಾಗಿಯೂ ಉಪಯೋಗಿಸಲಾಗುತ್ತದೆ. ಬೆರಣಿ ಸುಟ್ಟರೆ ವಿಭೂತಿಯೂ ಸಿದ್ಧವಾಗುತ್ತದೆ. ಹಟ್ಟಿಗೊಬ್ಬರ ಉಪಯೋಗಿಸಿದ ಕೃಷಿಭೂಮಿ ಸಮೃದ್ಧವಾಗಿ ಬೆಳೆದು ನಿಲ್ಲುತ್ತದೆ. ಹಟ್ಟಿಗೊಬ್ಬರದಿಂದ ಬೆಳೆದ ತರಕಾರಿಗಳು ರುಚಿಕರವಾಗಿರುತ್ತವೆ. ಹೂವಿನ ಗಿಡಕ್ಕೆ ಹಾಕಿದರೂ ಹೂವುಗಳೂ ಸಮೃದ್ಧವಾಗಿ ಬೆಳೆಯುತ್ತವೆ. ಮನುಷ್ಯ ಗೋವುಗಳನ್ನು ಎಷ್ಟರ ಮಟ್ಟಿಗೆ ಅವಲಂಬಿಸಿದ್ದಾನೆ ಎಂದರೆ ಸುಮಾರು ವರ್ಷಗಳ ಹಿಂದೆ ಒಂದೂರಿನಿಂದ ಇನ್ನೊಂದೂರಿಗೆ ಸಂಚಾರಕ್ಕೆ, ಸಾಮಾನು ಸಾಗಾಟಕ್ಕೆ ಎತ್ತಿನ ಗಾಡಿಯನ್ನೇ ಬಳಸುತ್ತಿದ್ದರು. ಆಗ ಈಗಿನಂತೆ ಮೋಟಾರು ವಾಹನಗಳಿರಲಿಲ್ಲ. ಸಾಮಾನು ಸಾಗಾಟಕ್ಕೆ ಮಾತ್ರವಲ್ಲ ; ಮದುವೆ ದಿಬ್ಬಣಕ್ಕೂ ಇದೇ ಎತ್ತಿನ ಗಾಡಿ! ಎಂದರೆ ಈಗಿನವರಿಗೆ ಅಚ್ಚರಿಯಾಗಬಹುದು. ಕಮಾನು ಕಟ್ಟಿ ಅಲಂಕರಿಸಿದ ಗಾಡಿ ಸಿಂಗರಿಸಿದ ಎತ್ತುಗಳು ಕೂತು ಕೊಳ್ಳಲು ಗಾಡಿಯೊಳಗೆ ಹಾಸಿದ ಮೆತ್ತೆ ಹಾಗೂ ದಿಂಬುಗಳು ಗಾಡಿಯೆತ್ತುಗಳ ಕೊರಳಗೆಜ್ಜೆಯ ಗಿಜಿ ಗಿಜಿ ಸದ್ದಿನೊಂದಿಗೆ ಸಾಲು ಸಾಲಾಗಿ ಮದುವೆ ದಿಬ್ಬಣ ಹೊರಟರೆ ನೋಡಲೆರಡು ಕಣ್ಣುಗಳು ಸಾಲದು.

ಹಾಗೇನೇ ಒಂದು ಹೊಸ ಮನೆ ನಿರ್ಮಾಣ ಮಾಡಿದರೆ ಅದರ ಪ್ರವೇಶೋತ್ಸವಕ್ಕೂ ಇದೇ ಗೋವು ಬೇಕು. ಧಾರ್ಮಿಕ ಕಾರ್ಯಕ್ರಮದಲ್ಲೂ ಗೋವಿನ ಪಾತ್ರ ಇದ್ದೇ ಇದೆ. ಪಂಚಗವ್ಯಕ್ಕೆ ಗೋ ಮೂತ್ರ, ಗೋ ಮಯ, ನೈವೇದ್ಯಕ್ಕೆ ಹಾಲು, ಹೋಮಕ್ಕೆ ತುಪ್ಪ, ಇತ್ಯಾದಿಗಳಿಲ್ಲದೆ ನೂತನ ಗೃಹ ಪ್ರವೇಶವಾಗುವುದಿಲ್ಲ. ದೀಪಾವಳಿ ಹಬ್ಬದ ಪಾಡ್ಯದಂದು ಗೋ ಪೂಜೆ ಮಾಡಲಾಗುತ್ತದೆ. ಜಾನುವಾರುಗಳನ್ನು ಮೀಯಿಸಿ ಹಣೆಗೆ ತಿಲಕವಿಟ್ಟು ಕೊರಳಿಗೆ ಹೂ ಹಾರಹಾಕಿ ಆರತಿ ಬೆಳಗಿ ಗೋವಿಗೆಂದೇ ವಿಶೇಷವಾಗಿ ತಯಾರಿಸಿದ ಸಿಹಿ ಕಡುಬು ತಿನ್ನಿಸುವುದು ಹಿಂದಿನಿಂದಲೂ ನಡೆದು ಬಂದ ಕ್ರಮವಾಗಿದ್ದು ಇಂದಿಗೂ ಆಚರಣೆಯಲ್ಲಿದೆ.

ಇನ್ನು ದೇವಿಯ ಆರಾಧನೆಯಲ್ಲಿ ದೇವಿಗೆ ಪ್ರಿಯವಾದ ನೈಪಾಯಸ'ವನ್ನು ತುಪ್ಪದಿಂದಲೇ ಮಾಡಲಾಗುತ್ತದೆ. ಆ ಪಾಯಸ ಅತ್ಯಂತ ಮಹತ್ವದ್ದಾಗಿದೆ. ಮಾತ್ರವಲ್ಲದೆ ಮಧುರವೂ ಆಗಿರುತ್ತದೆ. ದೇವಿಗೆ ತುಪ್ಪದಾರತಿಯನ್ನೂ ಬೆಳಗಲಾಗುತ್ತದೆ. ಅದರಿಂದ ದೇವಿ ಪ್ರಸನ್ನಳಾಗುತ್ತಾಳೆ, ಇಷ್ಟಾರ್ಥ ಸಿದ್ಧಿಸುತ್ತಾಳೆಂಬ ನಂಬಿಕೆಯಿದೆ. ಮಾನವನ ಹೆಜ್ಜೆಗೆ ಹೆಜ್ಜೆ ಸೇರಿಸುವ ಮನುಷ್ಯರಿಗಾಗಿಯೇ ಬದುಕುವ, ದುಡಿಯುವ, ಜೀವ ಸವೆಸುವ ಗೋವುಗಳನ್ನು ವಧೆ ಮಾಡುವ ಬದಲಾಗಿ ಉಳಿಸಿ ಬೆಳೆಸುವ, ಪೋಷಿಸುವ ನಿಟ್ಟಿನಲ್ಲಿ ನಾವು ಯೋಚಿಸಬೇಕಾಗಿದೆ.

ಪ್ರತಿಯೊಂದು ಮನೆಯಲ್ಲಿಯೂ ದೇಸೀ ತಳಿಗಳ ಹಸುವನ್ನು ಸಾಕಬೇಕು. ಅವುಗಳ ಸಂತತಿ ವೃದ್ಧಿಸಬೇಕು. ಅದಕ್ಕಾಗಿ ನಾವು ಕಾರ್ಯ ಪ್ರವೃತ್ತರಾಗಬೇಕು'' ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಮಹಾಸ್ವಾಮಿಗಳು ಕರೆನೀಡಿದ್ದರು. ಹಾಗೇನೇ ಹಸುಗಳ ಉಳಿವು, ಬೆಳೆವಿಗಾಗಿ ಅನೇಕ ಕಡೆಗಳಲ್ಲಿ ಗೋಶಾಲೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ. ಇದಕ್ಕೆಲ್ಲ ಪೂರಕವಾಗಿ ಈಗಾಗಲೇ ವಿಶ್ವವೇಗಮನಿಸುವಂತಹ ವಿಶ್ವಗೋ ಸಮ್ಮೇಳನವನ್ನು' ನಭೂತೋ ಎಂಬಂತೆ ಯಶಸ್ವಿಗೊಳಿಸಿದ್ದು ಶ್ರೀಗಳ ಕಾಳಜಿಗೊಂದು ಕೈಗನ್ನಡಿ. ಗೋ ಸಂಪತ್ತು ದೇಶದ ಸಂಪತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more