ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮದು ಯಾವ ಬಗೆಯ ಗಣರಾಜ್ಯ?

By Prasad
|
Google Oneindia Kannada News

Republic Day - What one needs to think today
61ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ, ರಾಜಕೀಯ ವ್ಯವಸ್ಥೆಯನ್ನು ವಿಮರ್ಶಿಸಿ ನೋಡುವ ಸನ್ನಿವೇಶ ಎದುರಾಗಿದೆ. ರಾಜಕೀಯ ವ್ಯವಸ್ಥೆಯೆಂಬುದು ಲಾಭದ ಉದ್ದಿಮೆಯಾಗಿ ಪರಿವರ್ತಿತವಾಗಿದೆ. ಯಥಾ ರಾಜಾ ತಥಾ ಪ್ರಜಾ ಎನ್ನುವ ಮಾತಿಗೆ ತಕ್ಕಂತೆ ಮತದಾರ ಕೂಡ ಭ್ರಷ್ಟನಾಗುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಪ್ರಜ್ಞಾವಂತರಾದ ನಾವು ಮಾಡಬೇಕಾಗಿರುವುದಾದರೂ ಏನು?

* ವಿನಾಯಕ ಪಟಗಾರ, ಬೆಟ್ಕುಳಿ

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ಭಾರತದ್ದು. ಇದು ನಮ್ಮ ದೇಶದ ಹೆಗ್ಗಳಿಕೆಯೂ ಹೌದು, ವಿಷಾದನೀಯವೂ ಹೌದು. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಗಣರಾಜ್ಯ. ನಿಜವಾಗಿಯೂ ಆ ಗಣರಾಜ್ಯ ಇವತ್ತು ನಮ್ಮಲ್ಲಿದೆಯೇ ಎಂದು ಇವತ್ತಿನ ರಾಜಕೀಯ ವ್ಯವಸ್ಥೆ ನೋಡಿದಾಗ ಅನಿಸದಿರದು. ನಮ್ಮ ರಾಜಕೀಯ ವ್ಯವಸ್ಥೆ, ಆಳುವವರ ವರ್ತನೆ, ರೀತಿ ನೀತಿಗಳನ್ನು ನೋಡಿದಾಗ ಈ ಪ್ರಶ್ನೆ ಯಾರಿಗಾದರೂ ಏಳುವುದು ಸಹಜ.

ಒಂದು ಕಾಲದಲ್ಲಿ ರಾಜಕೀಯ ಹೋರಾಟ, ಸಮಾಜಸೇವೆ ಎನ್ನುವುದು ತತ್ವ, ಸಿದ್ದಾಂತ, ನೈತಿಕತೆ, ಪ್ರಾಮಾಣಿಕತೆಗಳ ಸಂಗಮವಾಗಿತ್ತು. ಆದರೆ ಇವತ್ತು ಹಾಗಿಲ್ಲ. ಇಷ್ಟಕ್ಕೂ ನಮ್ಮನ್ನು ಆಳುವವರು, ರಾಜಕೀಯ ಪಕ್ಷಗಳು ಬದಲಾಗಲೂ ಕಾರಣವೇನು? ಒಂದು ಕಾಲದಲ್ಲಿ ಜನಪರ ಹೋರಾಟಗಳಿಗೆ, ಸೀಮಿತವಾಗಿದ್ದ ರಾಜಕೀಯ ಇಂದು ಪಕ್ಕಾ ವ್ಯವಹಾರವಾಗಿ ಪರಿಣಮಿಸಿರುವುದು ನಮ್ಮ ದುರ್ದೈವ. ಇವತ್ತು ಎನಿದ್ದರೂ ರಾಜಕೀಯದಲ್ಲಿ ಲಾಭ - ನಷ್ಟದ ಲೆಕ್ಕಾಚಾರವೇ ಮುಖ್ಯ ಹೊರತು ನೈತಿಕತೆ, ಪಕ್ಷ, ಸಿದ್ದಾಂತಗಳಲ್ಲ. ಬೇರೇ ಎಲ್ಲಾ ಉದ್ದಿಮೆಗಳಲ್ಲಿ ನಷ್ಟ ಅನುಭವಿಸುವವರನ್ನು ನೊಡಬಹುದು. ಆದರೆ ಪುಡಿಗಾಸಿಲ್ಲದೇ ರಾಜಕೀಯಕ್ಕೆ ಬಂದವರು ಮಾತ್ರ ಇಂದು ಕೋಟ್ಯಾಧಿಪತಿಗಳಾಗಿ ಮೆರೆಯುತ್ತಿರುವದನ್ನು ನೋಡಿದರೆ ಮೇಲಿನ ಪ್ರಶ್ನೆಗೆ ಉತ್ತರ ತಾನಾಗೇ ದಕ್ಕುತ್ತದೆ.

ರಾಜಕೀಯ ಪಕ್ಷಗಳು ಬಹುರಾಷ್ಟ್ರೀಯ ಕಂಪನಿಗಳಂತೆ ಪರಿವರ್ತಿತವಾಗುತ್ತಿವೆ. ಮತದಾರರನ್ನು ಗ್ರಾಹಕರಂತೆ ಕಾಣಲಾಗುತ್ತಿದ್ದೆಯೇ ಹೊರತು ಮತದಾರ ಪ್ರಭುಗಳಂತೆ ಅಲ್ಲ. ಇದಕ್ಕೆ ಪೂರಕವಾಗಿ ಮತದಾರರು ಕೂಡ ರಾಜಕೀಯ ಪಕ್ಷಗಳಿಗೆ ಗ್ರಾಹಕರಂತೆ ವರ್ತಿಸತೊಡಗಿದ್ದಾನೆ. ಇದು ನಿಜಕ್ಕೂ ವಿಪರ್ಯಾಸದ ಸಂಗತಿ. ಚುನಾವಣೆ ಸಂದರ್ಭಗಳಲ್ಲಿ ಯಾರು ಆಕರ್ಷಕ ಆಫರ್ ಕೊಡುತ್ತಾರೋ ಆ ಪಕ್ಷಗಳಿಗೆ ಬೆಂಬಲ ನೀಡುತ್ತಾನೆ. ಕ್ಷಣಿಕ ಆಸೆ ಆಮಿಷಗಳಿಗೆ ಒಳಗಾಗಿ ತನ್ನ ವೋಟನ್ನು ಹೆಚ್ಚಿನ ರೇಟಿಗೆ ಮಾರಿಕೊಳ್ಳುತ್ತಿದ್ದಾನೆ. ಇಲ್ಲಿಂದಲೇ ಗಣರಾಜ್ಯದ ಅಧಃಪತನ ಪ್ರಾರಂಭವಾಗುತ್ತದೆ. ನಂತರ ಆರಿಸಿ ಹೋದ ಜನ ನಾಯಕ, ತನ್ನ ಚುನಾವಣೆ ಖರ್ಚನ್ನು ಬಡ್ಡಿ, ಚಕ್ರಬಡ್ಡಿ ಸಮೇತ ಮತದಾರನಿಂದಲೇ ವಸೂಲಿ ಮಾಡುತ್ತಾನೆ.

ದೇಶದ ಆಡಳಿತ ಶಕ್ತಿ ಕೇಂದ್ರಗಳಾದ ಲೋಕಸಭೆ ವಿಧಾನಸಭೆಗಳು ಬಹುತೇಕ ಕೋಟ್ಯಾಧಿಪತಿಗಳಿಂದ ತುಂಬಿಹೊಗಿವೆ. ಇಂಥವರಿಗೆ ಜನಸಾಮನ್ಯರ ರೈತರ ಹಸಿವು ನೋವು ಅರ್ಥವಾಗಲು ಸಾಧ್ಯವೇ? ಇಂಥವರಿಂದ ರೈತರಿಗೆ, ಜನಸಾಮನ್ಯರಿಗೆ ಅನೂಕೂಲವಾಗುವಂತಹ ಶಾಸನಗಳ ರಚನೆ ಆಗುತ್ತೆ ಎಂದು ಕನಸು ಕಾಣುವುದು ಸಹ ಮೂರ್ಖತನದ್ದು. ಬಹುರಾಷ್ಟ್ರೀಯ ಕಂಪನಿಗಳಿಗೆ ಅನೂಕೂಲವಾಗುವಂತಹ ಕಾಯಿದೆ ಕಾನೂನುಗಳು ರಚನೆಯಾಗುತ್ತದೆ. ಪರಿಣಾಮ ರೈತ ತನ್ನ ಫಲವತ್ತಾದ ಭೂಮಿ ಕಳೆದುಕೊಂಡು ಅತಂತ್ರನಾಗುತ್ತಾನೆ. ಜನಸಾಮನ್ಯರು ಬಹುರಾಷ್ಟ್ರೀಯ ಕಂಪನಿಗಳ ಗುಲಾಮರಾಗುತ್ತಾರೆ.

ಚುನಾಯಿತ ಸದಸ್ಯರಿಗೆ ಲೋಕಸಭೆ, ವಿಧಾನಸಭೆಗಳು ಒಂದು ರೀತಿಯ ಟೈಮ್ ಪಾಸ್ ಮಾಡುವ ಮನರಂಜನೆಯ ತಾಣಗಳಾಗಿವೆ. ಜನಸಾಮನ್ಯರಿಗೆ ಶಕ್ತಿ ಕೇಂದ್ರಗಳ ಮೇಲಿನ ಭರವಸೆಯು ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ ಶ್ರೀಮಂತ ಮತ್ತು ಜನಸಾಮನ್ಯರ ನಡುವಿನ ಕಂದಕ ಹಚ್ಚಾಗಿ ಮುಂದೆ ವರ್ಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟರೂ ಆಶ್ಚರ್‍ಯ ಪಡಬೇಕಾಗಿಲ್ಲ. ಒಟ್ಟಿನಲ್ಲಿ ಇವತ್ತಿನ ಗಣರಾಜ್ಯದ ವ್ಯವಸ್ಥೆ ನೋಡಿದರೆ ಉತ್ತಮ ಬೆಳವಣಿಗೆಯ ಭರವಸೆಯ ಯಾವ ಸುಳಿವು ಸಿಗುತ್ತಿಲ್ಲ. ಕೆಲವು ಪ್ರಾಮಾಣಿಕ ರಾಜಕೀಯ ನಾಯಕರು ಇದ್ದರೂ ಸಹ ಅವರ ಪರಿಸ್ಥಿತಿ ಕೊಳೆತ ಮಾವಿನ ಹಣ್ಣಿನ ಬುಟ್ಟಿಯಲ್ಲಿ ಒಳ್ಳೆ ಹಣ್ಣಿನ ಪರಿಸ್ಥತಿ ಆದ ಹಾಗೇ ಆಗಿದೆ. ಪ್ರಜೆಗಳಂತೆ ರಾಜ, ರಾಜನಂತೆ ಪ್ರಜೆಗಳು ಎನ್ನುವ ಮಾತಿದೆ. ಹಾಗಾದರೆ ಮೊದಲು ಕೆಟ್ಟವರು ಯಾರು? ಉತ್ತರ ಗೊತ್ತಿದ್ದರೆ ಹೇಳಿ.

ಇವತ್ತಿನ ರಾಜಕೀಯದಲ್ಲಿ ನೀವೂ ಒಬ್ಬ ಯಶಸ್ವಿ ರಾಜಕಾರಣಿಯಾಗಿ ಕೋಟ್ಯಾಧಿಪತಿಯಾಗಬೇಕೇ? ಈ ಕೆಳಗಿನ ದಶ ಅಂಶಗಳನ್ನು ಮೈಗೂಡಿಸಿಕೊಳ್ಳಿ. ಯಶಸ್ಸು ಕಟ್ಟಿಟ್ಟ ಭುತ್ತಿ. (ಭಾರತ ಮಾತೆಯ ಕ್ಷಮೆ ಕೋರಿ ಈ ಅಂಶಗಳನ್ನು ಸೂಚಿಸುತ್ತಿದ್ದೇನೆ.)

* ಸುಳ್ಳನು ಹೇಳುವ, ವಿರೋಧಿಗಳನ್ನು ವಾಚಮ ಗೊಚರವಾಗಿ ಬಯ್ಯುವ, ಅವಶ್ಯಕತೆ ಬಿದ್ದರೆ ಅವರನ್ನೇ ಅಪ್ಪಿಕೊಳ್ಳುವ ಇನ್ನೊಬ್ಬರಿಗೆ ಟೋಪಿ ಹಾಕುವ ಗುಣ ಹೊಂದಿರಬೇಕು.
* ನಾಚಿಕೆ, ಮುಜುಗರ, ಮಾನ-ಮರ್ಯಾದೆ, ನೈತಿಕತೆ, ಕಳಕಳಿ ನಿಮ್ಮ ಹತ್ತಿರ ಸುಳಿಯಕೂಡದು. ಎಂದಿಗೂ ಮತದಾರರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಡಿ.
* ದಾಂಧಲೆ, ಗಲಾಟೆ, ಆಸ್ತಿ ಪಾಸ್ತಿ ಹಾನಿ ಮಾಡಿರುವ, ಕೃಷ್ಣ ಜನ್ಮ ಸ್ಥಾನ ಕಂಡಿರುವ ಅನುಭವ ಇದ್ದರೆ ಒಳ್ಳೆಯದು.
* ಹೆಣ್ಣು , ಮಣ್ಣು, ಹೊನ್ನು ಇವುಗಳ ಬಗ್ಗೆ ಅತಿಯಾದ ಸೆಳೆತ ಇಟ್ಟುಕೊಳ್ಳಿ.
* ಒಮ್ಮೆ ಆರಿಸಿ ಬಂದರೆ ನಿಮ್ಮ ಕ್ಷೇತ್ರದಲ್ಲಿನ ಎಷ್ಟು ಸಾಧ್ಯವೋ ಅಷ್ಟೂ ಭೂಮಿಯನ್ನು ನಿಮ್ಮ ಹೆಸರಿನಲ್ಲಿ ಇಲ್ಲವೇ ಬೇನಾಮಿ ಹೆಸರಿನಲ್ಲಿ ಕಬಳಿಸಿ.
* ಮೋಜಿನ ಪ್ರವಾಸ ಮಾಡಬೇಕು ಅನಿಸಿದರೆ, ಕ್ಷೇತ್ರದ ಅಭಿವೃದ್ದಿ ಹೆಸರಿನಲ್ಲಿ ದೂರದ ದೇಶಕ್ಕೆ ಸರಕಾರಿ ದುಡ್ಡಿನಲ್ಲಿ ಪ್ರವಾಸಕ್ಕೆ ಹೋಗಿ.
* ಹೇಗೆ ಹೆಚ್ಚು ದುಡ್ಡು ಮಾಡಬೇಕೆಂದು ಗೊತ್ತಾಗದಿದ್ದರೆ ನಿಮ್ಮ ಆಪ್ತವಲಯದಲ್ಲಿ ಭ್ರಷ್ಟ (ಲೋಕಾಯುಕ್ತರಿಂದ ದಾಳಿಗೊಳಗಾದ)ಅಧಿಕಾರಿಗಳನ್ನೆ ಇಟ್ಟುಕೊಳ್ಳಿ. ಮನೆ ಹಾಳು ಮಾಡುವ ಬೇಕಾದಷ್ಟು ಐಡಿಯಾಗಳು ಅವರಲ್ಲಿದೆ. ನಿಮ್ಮನ್ನು ಉದ್ದಾರ ಮಾಡುತ್ತಾರೆ, ತಾವೂ ಉದ್ಧಾರ ಆಗುತ್ತಾರೆ.
* ಎನೇ ಮಾಡುವುದಿದ್ದರೂ ಅದು ಕ್ಷೇತ್ರದ ಅಭಿವೃದ್ದಿಗಾಗಿ ಎಂದು ಹೇಳಲು ಮರೆಯದಿರಿ. ಕ್ಷೇತ್ರದ ಅಭಿವೃದ್ಧಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎನ್ನುವ ವಾಕ್ಯವನ್ನು ಕಂಠ ಪಾಠ ಮಾಡಿರಿ.
* ಮಂತ್ರಿಗಳು ಯಾರಾದರೂ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅನ್ನಿಸಿದರೆ, ಮಾಧ್ಯಮಗಳ ಮುಂದೆ ಅವರ ವಿರುದ್ಧ ರೇಗಾಡಿ. ಅವರ ವಿರೋಧಿಗಳನ್ನು ಸುಮ್ಮನ್ನೇ ಭೇಟಿಯಾಗಿ ಮಾತುಕತೆ ನಡೆಸಿದಂತೆ ಮಾಡಿ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರುವಂತೆ ಮಾಡಿ.
* ಮಾಧ್ಯಮಗಳ ಮುಂದೆ ಸದಾ ನಿಮ್ಮ ಪೋಟೊ, ಹೇಳಿಕೆ, ಬರುವಂತೆ ಮಾಡಿ. ಮಾಧ್ಯಮದವರಿದ್ದಾಗ ವಿನಯದಿಂದ ಅವರ ಕುಶಲೋಪರಿ ವಿಚಾರಿಸಿ, ಕೆಲಸ ಮಾಡಿಕೊಡದ ಅಧಿಕಾರಿಗಳಿಗೆ ಛೀಮಾರಿ ಹಾಕುವಂತೆ ನಟಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X