• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಳುವರ ಆತ್ಮ ವಿಮರ್ಶೆಯ ಸಮ್ಮೇಳನ

By Staff
|

ತುಳುವರ ಪಾಲಿಗೆ ಈದಿನ ಐತಿಹಾಸಿಕವಾದುದು. ಶ್ರೀಕ್ಷೇತ್ರ ಧರ್ಮಸ್ಥಳದ ಸನಿಹದಲ್ಲಿರುವ ಉಜಿರೆಯಲ್ಲಿ ಮೊಟ್ಟಮೊದಲ ವಿಶ್ವತುಳು ಸಮ್ಮೇಳನ ನಡೆಯುತ್ತಿದ್ದು ಇದು ಹೆಮ್ಮೆಯ ಸಂಗತಿ. ಈ ಮೂಲಕ ಪ್ರತಿಯೊಬ್ಬ ತುಳುವ ತನ್ನಮೂಲ ನೆಲೆಯನ್ನು, ಹುಟ್ಟಿ ಬೆಳೆದು ಬಂದ ಮೂಲ ಬೇರನ್ನು ನೆನಪಿಸಿಕೊಳ್ಳಲು ಅನುವಾಗುತ್ತಿರುವ ಕ್ಷಣ.

* ಚಿದಂಬರ ಬೈಕಂಪಾಡಿ

ಒಂದು ಮಾತು ನಿಜ. ಅದೆಷ್ಟೋ ಮಂದಿಗೆ ಮೂಲಬೇರನ್ನು ನೆನಪಿಸಿಕೊಳ್ಳಬೇಕಾದ ಅನಿವಾರ್ಯತೆಯಿಲ್ಲ, ಯಾಕೆಂದರೆ ಅವರು ಮೂಲಬೇರಿನಿಂದ ಕಳಚಿಕೊಂಡು ಬೇರಿಲ್ಲದೆ ಹುಟ್ಟಿದವರಂತೆ ಬೆಳೆದುಬಿಟ್ಟಿದ್ದಾರೆ. ಅಂಥವರಿಗೂ ಈ ಸಮ್ಮೇಳನ ಮೂಲಬೇರನ್ನು ನೆನಪಿಸುವಂತಾಗಬೇಕು, ಇದು ಪ್ರಸಕ್ತ ಸಮ್ಮೇಳನದ ಮೊದಲ ಅಜೆಂಡ ಆಗಬೇಕು.

ವಿಜಯನಗರ ಸಾಮ್ರಾಜ್ಯ ಕಾಲವನ್ನು ಸ್ಮರಿಸಿಕೊಂಡರೆ ತುಳುನಾಡಿನ ಕಲ್ಪನೆ ಥಟ್ಟನೆ ಹೊಳೆಯುತ್ತದೆ. ತುಳುನಾಡಿನ ರಾಜಧಾನಿಯಾಗಿದ್ದ ಬಾರ್ಕೂರು ಈಗ ತುಳುವರೊಂದಿಗೆ ಸಂಬಂಧ ಕಡಿದುಕೊಂಡಿದೆ. ಅಲ್ಲಿ ಮುನ್ನೂರ ಅರವತ್ತೈದು ದೇವಸ್ಥಾನಗಳಿದ್ದವು ಎನ್ನುತ್ತಾರಲ್ಲ ಅದರ ಹಿಂದಿರುವ ಉದ್ದೇಶವಾದರೂ ಏನಾಗಿತ್ತು ಎನ್ನುವುದನ್ನು ಸುಮ್ಮನೆ ನಮ್ಮೊಳಗೇ ಪ್ರಶ್ನಿಸಿಕೊಂಡರೆ ನಾವೆಷ್ಟು ಸುಖಿಗಳಾಗಿದ್ದೆವು ಅನ್ನಿಸುವುದಿಲ್ಲವೇ? ಆದರೆ ಬಾರ್ಕೂರು ತುಳುವರೊಂದಿಗೆ ಸಂಬಂಧ ಕಡಿದುಕೊಳ್ಳಲು ಕಾರಣವೇನು ? ಯೋಚಿಸಿ ಈ ಸಮ್ಮೇಳನದಲ್ಲಿ ವಿದ್ವಾಂಸರು ಈಗಿನ ಯುವಪೀಳಿಗೆಗೆ ತಿಳಿಸಬೇಕಾಗಿದೆ.

ತುಳುವರು ಯಾರು? ಅವರ ಸಂಸ್ಕೃತಿ ಏನು ? ಅವರ ಆಹಾರ ಪದ್ದತಿ ಹೇಗಿತ್ತು ? ಅವರ ನಂಬಿಕೆ, ನಡವಳಿಕೆಗಳು ಹೇಗಿದ್ದವು ? ಎನ್ನುವ ವಿಚಾರಗಳ ತಳಸ್ಪರ್ಶಿ ಅನುಭವವನ್ನು ಈಗಿನ ಯುವಕರು ನಿರೀಕ್ಷಿಸುತ್ತಿದ್ದಾರೆ. ಹರಪ್ಪ ಮೊಹಂಜದಾರೋ ಪ್ರದೇಶಗಳಲ್ಲಿ ಸಿಕ್ಕಿದ ಪಳೆಯುಳಿಕೆಗಳ ಆಧಾರದಲ್ಲಿ ಆಗಿನ ಜನರ ಮೂಲಬೇರನ್ನು ಶೋಧಿಸುವುದು ವಿದ್ವಾಂಸರಿಗೆ ಸಾಧ್ಯವಾಗಿದ್ದರೆ ಈಗ ಬದುಕಿರುವಾಗಲೇ ಆಧುನಿಕತೆಯ ತಂಪುಗಾಳಿಗೆ ನಮ್ಮತನವನ್ನು ತೇಲಿಬಿಟ್ಟಿರುವ ನಾವು ಅದೆಂಥ ತಪ್ಪು ಎಸಗಿದ್ದೇವೆ ಎನ್ನುವ ಸತ್ಯವನ್ನು ಮುಕ್ತವಾಗಿ ವೇದಿಕೆಯಲ್ಲಿ ಹೇಳಿಕೊಳ್ಳಬೇಕು.

ನಮ್ಮೊಳಗಿದ್ದ ವೈರುಧ್ಯಗಳನ್ನು ಎಳೆಎಳೆಯಾಗಿ ಬಿಡಿಸಲು ಈಗಿನ ವಿದ್ವಾಂಸರಿಗೆ ಸಾಧ್ಯವಿಲ್ಲವೇ? ಶೋಷಣೆ, ಅನುಭವಿಸಿದ ಅವಮಾನಗಳೆಷ್ಟು ? ಯಾವ ಜಾತಿ ಎಷ್ಟು ಅವಮಾನ ಸಹಿಸಿ ಬೆಳೆಯಿತು, ಯಾಕಾಗಿ ಅವಮಾನ ತುಳುವನಿಗಾಯಿತು ಎನ್ನುವುದನ್ನು ಆತ್ಮವಂಚನೆ ಇಲ್ಲದೆ ಬಹಿರಂಗವೇದಿಕೆಯಲ್ಲಿ ಹೇಳಬೇಕು. ಆಗ ಈಗ ಆಧುನಿಕ ದಿರಿಸು ಹಾಕಿಕೊಂಡು ತುಳುಸಮ್ಮೇಳನದಲ್ಲಿ ಹೆಮ್ಮೆಯಿಂದ ಭಾಗವಹಿಸುತ್ತಿರುವ ಕುಡಿಗಳಿಗೆ ಗೊತ್ತಾಗುತ್ತದೆ. ಯಾಕೆಂದರೆ ಈಗಿನ ಪೀಳಿಗೆಗೆ ನಿನ್ನೆ (ಕೋಡೆ)ಯ ದಿನಗಳ ನೆನಪಿಲ್ಲ, ಅವರಿಗೆ ಆದಿನಗಳ ನೋವು ಗೊತ್ತಿಲ್ಲ.

ಗೆಡ್ಡೆಗೆಣಸು ತಿಂದು ಕೋಣಗಳಂತೆ ಗದ್ದೆ ಉತ್ತು ಬಿತ್ತಿ ಬೆಳೆಬೆಳೆದು ಧಣಿಗಳಿಗೆ ಕೊಟ್ಟು ಅವರ ಸುಖವನ್ನು ಅಂಗಳದ ಹೊರಗೆ ಕುಳಿತು ಗೆರಟೆಯಲ್ಲಿ ನೀರು, ಚಹಾ ಕುಡಿದು, ಬಾಳೆ ಎಲೆಯಲ್ಲಿ ಉಂಡು ಎಂಜಲನ್ನು ತೆಗೆದು ಸೆಗಣಿ ಹಾಕಿ ಶುಚಿಗೊಳಿಸಿದ ಹಿನ್ನೆಲೆ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಅನೇಕ ಮಂದಿಗಿದೆ.

ವರ್ಷಕ್ಕೊಮ್ಮೆ ಬರುವ ಗ್ರಾಮದ ನೇಮ, ಜಾತ್ರೆಯ ನೆನಪನ್ನು ಮಾಡಿಕೊಳ್ಳಬೇಕು. ಒಂದಾಣೆ (ಆರು ಪೈಸೆ) ಪಡೆದುಕೊಂಡು ನೇಮ, ಜಾತ್ರೆಗೆಹೋಗಿ ಮಜಾ ಉಡಾಯಿಸಿ ಮತ್ತೊಂದು ವರ್ಷದ ತನಕ ಅದೇ ನೆನಪಿನಲ್ಲಿ ಕಾಲಕಳೆಯುತ್ತಿದ್ದ ಅದೆಷ್ಟೋಮಂದಿ ಈಗ ಬೆಳೆದು ದೊಡ್ಡವರಾಗಿದ್ದೇವೆ ಮಾತ್ರವಲ್ಲ ಕ್ರೆಡಿಟ್ ಕಾರ್ಡ್ ಮೂಲಕವೇ ವ್ಯವಹಾರ ಮಾಡುವಷ್ಟರಮಟ್ಟಿಗೆ ಬಲಹೊಂದಿದ್ದೇವೆ. ಯಾಕೆಂದರೆ ನೋಟುಗಳನ್ನು ಎಣಿಸಿಕೊಂಡು ಕಾಲಹರಣ ಮಾಡುವಷ್ಟು ಮೂರ್ಖರು ನಾವಲ್ಲ. ನಮ್ಮ ಈ ಬೆಳವಣಿಗೆ ಹಿಂದೆ ನಮ್ಮ ಹಿರಿಯರ ಶ್ರಮ ಇದೆ, ನಮ್ಮ ದುಡಿಮೆಯೂ ಇದೆ. ಇದನ್ನೆಲ್ಲ ನಾವು ಮರೆಯುವಂತೆಯೇ ಇಲ್ಲ.

ನಮ್ಮ ದೈವಗಳಿಗೆ ಹರಕೆಯೆಂದು ಶೇಂದಿ ಶರಾಬು ಸಮರ್ಪಿಸಿದ್ದೇವೆ, ಚಕ್ಕುಲಿ ಒಪ್ಪಿಸಿದ್ದೇವೆ, ನಮ್ಮ ಇಷ್ಟಾರ್ಥಸಿದ್ದಿಗಾಗಿ ಕೋಳಿ ಬಲಿಕೊಟ್ಟು ಮತ್ತೆ ಆ ಕೋಳಿಯನ್ನು ಅಡುಗೆಮಾಡಿ ಶೇಂದಿ ಶರಾಬು ಕುಡಿದು ಎಲ್ಲರೂ ಉಂಡು ಸಂಭ್ರಮಿಸಿದ್ದೆವು ಹಿಂದೆ, ಈಗಲೂ ಈ ಪರಂಪರೆ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಇದನ್ನು ಮರೆಯಬೇಕಾ ಅಥವಾ ನೆನಪುಟ್ಟುಕೊಳ್ಳಬೇಕಾ ?

ಸತ್ತವರ ಸದ್ಗತಿಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾ ಬಂದ ಹಿನ್ನೆಲೆ ಇದೆ. ಆದರೆ ಇವೊತ್ತು ನಾವು ಯಾವ ರೀತಿ ನಮ್ಮವರ ಸದ್ಗತಿಯನ್ನು ಮಾಡುತ್ತಿದ್ದೇವೆ ? ಸಾಮೂಹಿಕವಾಗಿ ಅಡುಗೆ ಮಾಡಿ ಬಡಿಸಲು ನಮಗೆ ಪುರುಸೊತ್ತಿಲ್ಲ. ಕ್ಯಾಟರಿಂಗ್‌ಗೆ ವಹಿಸುತ್ತೇವೆ, ಹಣ ಎಷ್ಟೇ ಖರ್ಚಾದರೂ ಸರಿ ಸ್ವಲ್ಪವೂ ಲೋಪವಾಗಬಾರದು ಎನ್ನುವ ತಾಕೀತು ಮಾಡುತ್ತೇವೆ, ಯಾಕೆಂದರೆ ಸತ್ತವರು ಸ್ವರ್ಗಕ್ಕೆ ಹೋಗುವುದು ಬೇಡವೇ ? ಅಂದಹಾಗೆ ರಾತ್ರಿ ಮನೆಯಲ್ಲಿ ಅಡುಗೆ ಮಾಡಿ (ವಿಶೇಷವಾಗಿ ಮಾಂಸಾಹಾರ) ಬಡಿಸುವ ಕ್ರಮ, ಸತ್ತವರನ್ನು ಮನೆಗೆ ಕರೆದುಕೊಳ್ಳುವ ನಂಬಿಕೆ. ಆದರೆ ಈಗ ಪುರುಸೊತ್ತಿಲ್ಲ, ಆದ್ದರಿಂದ ಮಧ್ಯಾಹ್ನವೇ ರಾತ್ರಿಯ ಕರ್ಮಕ್ರಿಯೆಯನ್ನೂ ಮಾಡಿ ಮುಗಿಸುತ್ತೇವೆ. ಹಾಗಾದರೆ ನಾವೆಷ್ಟು ಬದಲಾಗಿದ್ದೇವೆ, ನಮ್ಮ ಆಚಾರ, ನಡವಳಿಕೆ ಅದೆಷ್ಟು ಬದಲಾಗಿವೆ ಅಲ್ಲವೇ ? ಇದನ್ನು ಏನೆಂದು ಕರೆಯಬೇಕು ?

ಇಂಥ ಅನೇಕ ಸಂಶಯಗಳನ್ನು ವಿಶ್ವತುಳು ಸಮ್ಮೇಳನ ನಿವಾರಿಸಬೇಕು ಎನ್ನುವುದು ನನ್ನಕೋರಿಕೆ. ತುಳು ಭಾಷೆ, ಸಂಸ್ಕೃತಿ, ಆಚರಣೆಗಳು ಬದಲಾಗಬೇಕೇ ? ಎಷ್ಟು ಬದಲಾಗಬೇಕು ? ಕುಟ್ಟಿ ದೊಣ್ಣೆ ಆಟ, ಕೊತ್ತಲಗೆ ಬ್ಯಾಟ್‌ನ ಕ್ರಿಕೆಟ್, ಲಗೋರಿ, ಟೊಂಕ ಇತ್ಯಾದಿ ಆಟಗಳು ಮತ್ತೆ ತಮ್ಮ ಹಿರಿಮೆ ಪಡೆಯಲು ಸಾಧ್ಯವೇ? ತಾರಾಯಿ ಕುಟ್ಟುನವು, ಕೋರಿದಕಟ್ಟ ಇನ್ನೂ ಹಲವು ತುಳುವರ ಗೊಬ್ಬುಗಳು (ತುಳುವರ ಆಟಗಳು) ಮತ್ತೆ ಹಾದಿಬೀದಿಗಳಲ್ಲಿ ಕಾಣಿಸಿಕೊಳ್ಳುತ್ತವೆಯೇ ?

ವಿಶ್ವತುಳು ಸಮ್ಮೇಳನ ತುಳುವರ ಆತ್ಮವಿಮರ್ಶೆಗೆ ಒಡ್ಡಿಕೊಳ್ಳಬೇಕು, ಆತ್ಮ ವಂಚನೆಗೆ ಆಸ್ಪದವಾಗಬಾರದು. ಧರ್ಮದೇವತೆಗಳು, ಅಣ್ಣಪ್ಪಸ್ವಾಮಿ, ಮಾತುಬಿಡ ಮಂಜುನಾಥ ನೆಲೆಯಾಗಿರುವ ತಾಣದಲ್ಲಿ, ನಡೆದಾಡುವ ಮಂಜುನಾಥ ಎಂದೇ ಕರೆಯಲ್ಪಡುವ ಖಾವಂದರ ಉಸ್ತುವಾರಿಯಲ್ಲಿ ನಡೆಯುತ್ತಿರುವ ವಿಶ್ವ ತುಳು ಸಮ್ಮೇಳನ ಮುಂದಿನ ಪೀಳಿಗೆಗೂ ದಾರಿದೀವಿಗೆಯಾಗಬೇಕು, ಹೀಗೇ ಆಗಲಿ ಎನ್ನುವುದು ನನ್ನ ಆಶಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X