ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓ ಅರಗಿಣಿ ಸವಿ ಮಾತೊಂದ ನುಡಿವೆಯಾ

|
Google Oneindia Kannada News

Parrot, the most beautiful and talked about bird
ಕೆಂಪು ಚುಂಚು ಇರುವ ಗಿಳಿ, ಕೆಂಪು ಹಣ್ಣನ್ನು ಅರ್ಧ ತಿಂದಾಗ ಕಾಣುವ ಕೆಂಬಣ್ಣದ ಓಕುಳಿಯಂತೆ ಇವಳ ತುಟಿಗಳು ಕೆಂಪಾಗಿ ಇರುತ್ತಿದ್ದವು. ತುಟಿಗಳನ್ನು ಕೆಂಪಾಗಿಸಲು ಅವಳಿಗೆ ತಾಂಬೂಲ ಬೇಕಾಗಿರಲಿಲ್ಲ. ಇಂತಹ ತುಟಿಗಳು ಈಗ ಬಣ್ಣಗೆಟ್ಟಿವೆ. ಮುಖದ ಕಳೆಯೇ ಬದಲಾಗಿದೆ- ನೋವನ್ನುಂಡ ಜೀವವ ಕಂಡು -ನೀ ಹಿಂಗ ನೋಡಬ್ಯಾಡ ನನ್ನ...

* ವಾಣಿ ರಾಮದಾಸ್, ಸಿಂಗಪುರ

ಇಂದು ಸಂಜೆ ಆಫೀಸಿನಿಂದ ಹೊರಟಾಗ ಮೋಡ ಮುಚ್ಚಿತ್ತು. ಮಳೆರಾಯ ತನ್ನ ಬರುವಿಕೆಯ ಸೂಚನೆ ನೀಡಿದ್ದ. ಹಾದಿಯುದ್ದಕ್ಕೂ ಹಸಿರು ಸಾಲುಮರಗಳಲಿ ಅಡಗಿದ್ದ ಹಕ್ಕಿಗಳ ಕಲರವ ಇಂಪೆನಿಸಿತ್ತು. ಪಟಪಟನೆ ಬಿದ್ದ ಮಳೆಯ ಹನಿಗಳು ಹತ್ತಿರವಿದ್ದ ಬಸ್ ನಿಲ್ದಾಣದತ್ತ ಧಾವಿಸುವಂತೆ ಮಾಡಿತು. ಎಲ್ಲಿಂದಲೋ ಹಾರಿಬಂದ ಎರಡು ಗಿಣಿಗಳು ತಮ್ಮ ರೆಕ್ಕೆಗಳ ಬಡಿಯುತ್ತಾ ಬಸ್ ನಿಲ್ದಾಣದ ಛಾವಣಿಯ ಮೇಲೆ ಕೂತು ಸರಸ-ಸಲ್ಲಾಪದಲಿ ತೊಡಗಿದವು. ಆ ದೃಶ್ಯ ನನ್ನಾದಿನದ ದಣಿವಾರಿಸಿತ್ತು. ಅರೆರೆರೆ ಗಿಣಿರಾಮಾ, ಹೊಯ್ ಪಂಚರಂಗೀ ರಾಮಾ.

ಬಸ್ಸಿಗೆ ಕಾಯುತ್ತಾ ಆ ಹಕ್ಕಿಗಳ ಸರಸ-ಸಲ್ಲಾಪ ನೋಡುತ್ತಾ ನಿಂತೆ. ಬೆಳ್ಳಿಮೋಡ ಚಿತ್ರದ ಮುದ್ದಿನ ಗಿಣಿಯೆ ಬಾರೋ, ಮುತ್ತನು ಕೊಡುವೆ ಬಾರೊ ನೆನಪಾಯ್ತು. ಅವುಗಳ ಸಲ್ಲಾಪವ ಬಿಟ್ಟ ಕಣ್ಣಿಂದ ನೋಡುತ್ತಾ ಅಬ್ಬಾ ಗಿಳಿ ನಮ್ಮ ಜೀವನದಲ್ಲಿ, ನೀತಿ ಕಥೆಗಳಲಿ, ಕವನ, ಸಂಗೀತ, ಸಾಹಿತ್ಯಗಳಲಿ ಅದೆಷ್ಟು ಹಾಸು ಹೊಕ್ಕಾಗಿದೆ ಎಂದು ಯೋಚಿಸಿದಂತೆ ಗಿಳಿಪಠಣಕ್ಕೆ ಅಣಿಯಾದೆ.

ಮದುವೆಯಾಗುವ ಮೊದಲು ನಲ್ಲೆಯ ಮಾತು ಅರಗಿಣಿಯಂತೆ, ಎಲ್ಲೇ ನನ್ನ ಅರಗಿಣಿ ಎನ್ನುವವರೇ. ಅದೇ ಮದುವೆಯಾಗಿ ವರುಷಗಳು ಕಳೆದಂತೆ ಅದೇ ಅರಗಿಣಿಯ ಮಾತು ಕಾಕಾ ಎಂಬಂತೆ! ಹಾಗೆ ಮಕ್ಕಳ ತೊದಲ್ ನುಡಿ ಕೂಡ ಗಿಳಿಯ ಮಾತಿನಂತೆ ಮುದ್ದಾಗಿರುತ್ತೆ. ಆದ್ರೆ ದೊಡ್ದವರಾದಂತೆ ಅವರಾಡುವ ಕೆಲವು ಮಾತುಗಳು ಕುಟುಕುವ ಕುಕ್ಕುಟದಂತೆ. ಏನ್ ಮಾಡ್ತೀರ ಸ್ವಾಮಿ ಜೀವನವೇ ಹಾಗೆ?

ಗಿಣಿ ಮೂತಿ ಮಾವಿನಕಾಯಿಗೆ ಉಪ್ಪು, ಖಾರ ಹಾಕಿ ತಿಂದರೆ...ಬಾಯಲ್ಲಿ ನೀರು ಬರುತ್ತೆ ಅಲ್ವಾ? ಬಾಲ್ಯದ ಕಥೆಗಳಲಿ ಸಪ್ತ ಸಮುದ್ರದಾಚೆ, ಮರದ ಪೊಟರೆಯೊಳಗೆ ವಾಸಿಪ ಗಿಣಿಯಲಿ ಅಡಗಿರುತ್ತಿತ್ತು ಜಾದೂಗಾರ, ಮಾಟಗಾರ, ಅಸುರರ ಪ್ರಾಣ. ಕಥೆಯ ಅಂತ್ಯ ಗಿಣಿ ಕತ್ತು ಲೊಟಕ್, ಮಾಯಾಸುರನ ಪ್ರಾಣ ಗೊಟಕ್.

ಕಲಿಸಿದನು ಉಲಿವ ಗಿಣಿ, ಮಾತನಾಡುವ ಗಿಣಿ, ಪಂಚವರ್ಣದ ಗಿಣಿ.. ಅದಕ್ಕೆ ಬಹುತೇಕರು ಇಡುವ ಹೆಸರು ರಾಮ ಅಥವಾ ಬಿಟ್ಟು. ಮನುಜನ ಹೊಟ್ಟೆಪಾಡಿಗೂ ಸಹಾಯಹಸ್ತ ನೀಡುತ್ತೆ ಪಾಪದ ಗಿಣಿ. ಅಂದ ಹಾಗೆ ಗಿಣಿಶಾಸ್ತ್ರ ನಂಬೋವ್ರು ಬರೀ ಭಾರತದಲ್ಲೇ ಅಲ್ಲ ಸಿಂಗಪುರದ ಲಿಟಲ್ ಇಂಡಿಯಾದಲ್ಲಿ ಕೂಡ ವರ್ಣಭೇದವಿಲ್ಲದೆ ಶಾಸ್ತ್ರ ಕೇಳೋವ್ರನ್ನ ಕಾಣಬಹುದು.

ಮನ್ಮಥನ ವಾಹನ ಗಿಣಿ. ಗಿಣಿಯ ಮೈ ಪಚ್ಚೆ ಪ್ರಕೃತಿ-ಕೆಂಪು ಕೊಕ್ಕು ಫಲವತ್ತತೆಯ ಸಂಕೇತ. ಅದರ ಕೆಂಪು ಕೊಕ್ಕು-ಕೆಂಪು ಈಡೆರದ ಬಯಕೆಗಳ ಕುರುಹಾದಲ್ಲಿ-ಹಸಿರು ಪೂರ್ಣವಾದ ಬಯಕೆಗಳ ಕುರುಹು. ಮತ್ತೊಂದು ಹೋಲಿಕೆ, ಗಿಳಿಯ ಕೆಂಪು ಕೊಕ್ಕು ಮಳೆಬರುವ ಮುನ್ನ ಭುವಿಯ ಕಂಪು ಪ್ರತಿಬಿಂಬಿಸಿದರೆ, ಪಚ್ಚೆ ಮಳೆಯ(ವಸಂತಾಗಮನ) ನಂತರದ ಭೂಮಿಯನು ಪ್ರತಿಬಿಂಬಿಸುತ್ತದೆ. ಋಗ್ವೇದದಲ್ಲೂ ಹಾಗೂ ಕಾಮಸೂತ್ರದಲ್ಲೂ ಗಿಣಿಯ ಬಗ್ಗೆ ಬಹಳಷ್ಟು ಉಲ್ಲೇಖನವಿದೆಯಂತೆ. ಸಂಸ್ಕೃತದ ಶುಕಸಪ್ತತಿ ಎಂಬುದು ಗಿಳಿ ತನ್ನೊಡತಿಗೆ ಹೇಳಿದ 70 ಕಥೆಗಳ ಸಂಗ್ರಹ. ನಾವಿಕನೊಬ್ಬ ತನ್ನ ಮದುವೆಯ ರಾತ್ರಿಯಂದು ನವ ವಧುವನ್ನು ಬಿಟ್ಟು ವ್ಯಾಪಾರಕ್ಕೆ ತೆರಳುತ್ತಾನೆ. ಆಕೆ ವಿರಹದಿಂದ ವಿಹ್ವಲಳಾಗಿ, ಕಾಮಾತುರಳಾಗಿ ಮತ್ತೋರ್ವನತ್ತ ತೆರಳಲು ಅಣಿಯಾಗುತ್ತಾಳೆ. ಇದನು ಅರಿತ ಅವಳು ಸಾಕಿದ ಗಿಣಿಯು ತನ್ನೊಡತಿಯ ಯಜಮಾನ ಮನೆಗೆ ಮರಳಿ ಬರುವ ತನಕ ಕಥೆಯೊಂದನ್ನು ಹೇಳಿತಂತೆ ಅದು ಶುಕ ಸಪ್ತತಿ.

ಮಧುರೆ ಮೀನಾಕ್ಷಿಯ ಕೈಯಲ್ಲಿ, ಕನ್ನಿಕಾ ಪರಮೇಶ್ವರಿಯ ಕೈಯಲ್ಲಿ ಹಾಗೂ ಆಂಡಾಳ್(ಗೋದ) ಕೈಯಲ್ಲಿ ಪಚ್ಚೆ ಗಿಣಿ. ದೇವಿಯರೂ ನೇರವಾಗಿ ತಮ್ಮ ಪ್ರೀತಿಯನ್ನು ದೇವನಿಗೆ ಅರುಹಲಾರದೆ ಶುಕಭಾಷಿಣಿಯರಾಗಿ ತಮ್ಮಗಳ ಪ್ರೀತಿ ಆ ದೇವನಿಗೆ ಅರುಹಿದರೇನೋ? ಪ್ರಕೃತಿ-ಪುರುಷನ ಸಮಾಗಮಕ್ಕೂ ಗಿಣಿ ಬೇಕಾಯಿತೇ?

ಶುಕ-ಮುನಿ. ಮಹಾಭಾರತದ ಕರ್ತೃ ವೇದವ್ಯಾಸರ ಮತ್ತು ಘೃತಾಚಿ(ಅಪ್ಸರೆ)ಯ ಪುತ್ರ. ಈತನ ಮುಖ ಶುಕ-ಮೈ ಮಾನವ. ಭಾರತೀಯ ಪುರಾಣಗಳಲ್ಲಿಯೇ ಶ್ರೇಷ್ಠವಾದ ಶ್ರೀಮದ್ಭಾಗವತವು ಶುಕಮುನಿಯಿಂದ ಶಾಪಗ್ರಸ್ತ ಪರೀಕ್ಷಿತ ಮಹಾರಾಜನಿಗೆ ಏಳು ದಿನಗಳಲ್ಲಿ ಹೇಳಲ್ಪಟ್ಟಿತು. ಶುಕಮುನಿ ಜಗತ್ತಿನ ಮಹಾಜ್ಞಾನಿಗಳಲ್ಲೊಬ್ಬ. ಈತ ಭ್ರೂಣಾವಸ್ಥೆಯಲ್ಲಿದ್ದಾಗಲೇ ಜ್ಞಾನಿಯಾದವನು. ಭಗವಂತನು ಕೆಲವು ಕ್ಷಣಗಳ ಕಾಲ ಮಾಯೆಯ ಆಟವನ್ನು ನಿಲ್ಲಿಸಿದ್ದರಿಂದಲೇ ಈತ ಜನಿಸುವಂತಾಯಿತಂತೆ. ಹುಟ್ಟುತ್ತಲೇ ಸರ್ವಸಂಗ ಪರಿತ್ಯಾಗಿಯಾದವನೀತ. ಶುಕ್ಕ-ಶೌನಕರು ಇಲ್ಲದ ದೇವರ ಸ್ತೋತ್ರಗಳಿಲ್ಲ.

ಇಂತಹ ಶುಕವನ್ನು ನಮ್ಮ ದಾಸರು ಬಿಡುವರೇ? "ಗಿಣಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ ಬರಿದೆ ಪಂಜರವಾಯಿತಲ್ಲಾ" ಎಂದು ಉಲಿದರು. ಹಾಗೆಯೇ ಬೆಕ್ಕನು ಇಲಿ ನುಂಗುವ ತನಕ, ಕಡು ರಕ್ಕಸಿಯ ಕಂಡು ಗಿಣಿ ನುಂಗುವ ತನಕ ಮಕ್ಕಳ ಭಕ್ಷಿಸುವ ತನಕ, ಮದ ಸೊಕ್ಕಿದ ಗಜವನ್ನು ನರಿ ನುಂಗುವ ತನಕ ಎಂದು ಗಿಳಿಯನ್ನು ಪದಗಳಲಿ ತಂದರು. ಭಕ್ತ ರಾಮದಾಸರು ಶುಕ-ಶೌನಕ ಕೌಶಿಕ ಮುಖ ಪೀತಂ..ಪಿಬರೇ ರಾಮರಸಂ ಎಂದು ರಾಮನನ್ನು ಸ್ತುತಿಸಿದರು.

ಮುಂದೆ ಓದಿ : ವಚನ, ಕವನ, ಚಿತ್ರಗೀತೆ, ಗಾದೆಗಳಲಿ ಗಿಣಿವರ್ಣನೆ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X