ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಚನ, ಕವನ, ಚಿತ್ರಗೀತೆ, ಗಾದೆಗಳಲಿ ಗಿಣಿವರ್ಣನೆ

|
Google Oneindia Kannada News

Parrot in Kannada poems, movie songs, vachanas
ವಚನಗಳಲಿ ಗಿಣಿ :

ಆಡದೇ ನವಿಲು, ಹಾಡದೇ ತಂತಿ, ಓದದೇ ಗಿಳಿ, ಭಕ್ತಿ ಇಲ್ಲದವರನ್ನು ಒಲ್ಲ ಕೂಡಲಸಂಗಮದೇವ! ಎಂದರು ಬಸವಣ್ಣನವರು.

ಗಗನದ ಮೇಲೊಂದಭಿನವ ಗಿಳಿ ಹುಟ್ಟಿ, ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು! ಒಂದು ದಿನ ಗಿಳಿ ಇಪ್ಪತೈದು ಗಿಳಿಯಾಯಿತ್ತು! ಬ್ರಹ್ಮನಾ ಗಿಳಿಗೆ ಹಂಜರವಾದ! ವಿಷ್ಣುವಾ ಗಿಳಿಗೆ ಕೊರೆಕೂಳಾದ! ರುದ್ರನಾ ಗಿಳಿಗೆ ತಾ ಕೋಲಾದ! ಇಂತೀ ಮೂವರ ಮುಂದಣ ಕಂದನ ನುಂಗಿ ದೃಷ್ಟನಾಮ ನಷ್ಟವಾಯಿತ್ತು-ಇದೆಂತೋ ಗುಹೇಶ್ವರ!

ಅಂಬರದೊಳಗಾಡುವ ಗಿಳಿ!ಪಂಜರದೊಳಗಣ ಬೆಕ್ಕ ನುಂಗಿ! ರಂಭೆಯ ತೋಳಿಂದಗಲಿತ್ತು ನೋಡಾ-ಗುಹೇಶ್ವರ- ಅಲ್ಲಮಪ್ರಭುಗಳು.

ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನೆಯ್ಯ! ಕಂದ, ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯ ಚೆನ್ನಮಲ್ಲಿಕಾರ್ಜುನ-ಅಕ್ಕಮಹಾದೇವಿ.

ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ! ದೇವರಿಲ್ಲದ ದೇಗುಲಕ್ಕೆ ಮಂತ್ರ ಅಭಿಷೇಕವುಂಟೆ! ಅರಿವು ನಷ್ಟವಾಗಿ ಕುರುಹಿನ ಹಾವಚೆಯ ನಾನರಿಯೆನೆಂದ! ಮಾತನಾಡುವುದು ಗಿಣಿ ಮಾತ್ರ, ಪಂಜರವಲ್ಲ! ಅಭಿಷೇಕ ದೇವರಿಗೇ ಹೊರತು ದೇಗುಲಕ್ಕಲ್ಲ. ಪಂಜರ, ದೇಗುಲ ಇವು ಕೇವಲ ಕುರುಹುಗಳು. ಅರಿವಿಲ್ಲದ ಕುರುಹು ಕೇವಲ ಹಾವಸೆ, ಅಥವಾ ಪಾಚಿ. ಅದರ ಹಂಗು ಬೇಡ ಎನುತ್ತಾನೆ ಅಂಬಿಗ ಚವುಡಯ್ಯ.

ಕವನಗಳಲಿ ಗಿಣಿ:

ಆದಿಕವಿ ಪಂಪ ಕುಂದಕುಂದಾನ್ವಯ ನಂದನವನ ಶುಕ ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿದ್ದಾನೆ.

ರಾಷ್ಟ್ರಕವಿ ಎಮ್.ಗೋವಿಂದ ಪೈ ಅವರ ಗಿಳಿವಿಂಡು ಕವನ ಸಂಕಲನ ಜೀವನ, ನಾಡು, ನಾಣ್ನುಡಿ, ಪ್ರಕೃತಿಗಳನ್ನು ಬಣ್ಣಿಸಿದ 46 ಕವನಗಳ ಸಂಗ್ರಹ.

ಏನೇ ಶುಕಭಾಷಿಣಿ! ಏನೇ ಮನೋಲ್ಲಾಸಿನಿ... ಕಲಿಯದುಲಿಯನುಲಿಯುವ ಗಿಣಿ! ತಿಳಿಯಲಹುದೇ ನಿನ್ನ ಮನಯ! "ಚತುರೆಯೊಡನೆ ಮಾತನಾಡುತ್ತಿರುವ ಗಿಳಿಯು ಕೇಶವನಿಗೆ ತನ್ನ ಅನುರಾಗವನು ತಿಳಿಸಲು ಪ್ರಯತ್ನಿಸುತ್ತಿದ್ದಾಳೋ ಏನೋ"- ಡಿ.ವಿ.ಜಿಯವರ ಅಂತಃಪುರಗೀತೆಗಳ ಶಿಲಾಬಾಲಿಕೆಯರು.

ವರಕವಿ ಬೇಂದ್ರೆ -ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತ; ತನ್ನ ಮೈಮರ ಮರತಿತ್ತ-ಮುಗಿಲ ಮಾರಿಗೆ.

ಬಾಯ ಹವಳ ತುಟಿಯ ಹಿಂಡುತ್ತ ನಿವಳ ನಿಂತಾಳ ನಿಳವೀಲೆ ಗಿಣಿ ಹೇಳ ಇವಳ ಮನವೆಲ್ಲಿ ಇರಬಹುದೆಂದು-ನಾದಲೀಲೆ, ನಲ್ಲನ ಅನಿಸಿಕೆಯನು ವರ್ಣಿಸಿದ್ದಾರೆ.

ಕೆಂಪು ಚುಂಚು ಇರುವ ಗಿಳಿ, ಕೆಂಪು ಹಣ್ಣನ್ನು ಅರ್ಧ ತಿಂದಾಗ ಕಾಣುವ ಕೆಂಬಣ್ಣದ ಓಕುಳಿಯಂತೆ ಇವಳ ತುಟಿಗಳು ಕೆಂಪಾಗಿ ಇರುತ್ತಿದ್ದವು. ತುಟಿಗಳನ್ನು ಕೆಂಪಾಗಿಸಲು ಅವಳಿಗೆ ತಾಂಬೂಲ ಬೇಕಾಗಿರಲಿಲ್ಲ. ಇಂತಹ ತುಟಿಗಳು ಈಗ ಬಣ್ಣಗೆಟ್ಟಿವೆ. ಮುಖದ ಕಳೆಯೇ ಬದಲಾಗಿದೆ- ನೋವನ್ನುಂಡ ಜೀವವ ಕಂಡು -ನೀ ಹಿಂಗ ನೋಡಬ್ಯಾಡ ನನ್ನ...

ರಾಷ್ಟ್ರಕವಿ ಕುವೇಂಪು ಅವರು ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ ರೋಮಾಂಚನಗೊಳ್ಳುವ ಮನ ..ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ಆಗು ನೀನು ಇಬ್ಬನಿ ನೆಲಸುವ ಹೂ, ದುಂಬಿ ಮೊರೆವ ಮಹಲು, ಬರಲಿ ಅಲ್ಲಿ ಗಿಳಿ, ಕೋಗಿಲೆ, ಕಾಗೆ ಒರೆಯಲೆಲ್ಲ ಅಹವಾಲು---ಗಿಳಿ, ಕೋಗಿಲೆ, ಕಾಗೆಗಳನ್ನು ಕರೆದಿದ್ದಾರೆ ಗೋಪಾಲಕೃಷ್ಣ ಅಡಿಗರು.

ಕಂಬಾರರಿಗೆ ಬೇಡರ ಹುಡುಗ ಮತ್ತು ಗಿಳಿಗೆ ಸಾಹಿತ್ಯ ಪ್ರಶಸ್ತಿ ದೊರಕಿತ್ತು.

ಯು.ಆರ್. ಅನಂತ ಮೂರ್ತಿ ಅವರ ಮಳೆ ಹೊಯ್ಯುತಿದೆ ಮತ್ತೆ ಮಳೆ ಹೊಯ್ಯುತಿದೆ ಕವನದಲ್ಲಿ ಕಾಡಿಂದ ಕರೆತಂದ ಗಂಡು ಗಿಣಿ ಹೊರಗಿರಲು-ಒಳಗೊಲ್ಲೆ ಏಕೆಂದು ಹೆಣ್ಣು ಗಿಣಿ ಒಲಿಸೆ-ತೋಳ ಬಂಧನ ಸರಿಸಿ ನಾ ಮಗ್ಗುಲಾಗಿರಲು, ಸಾಕು ಬಿಡಿ ಅವತಾರ ಎಂದು ಹಂಗಿಸಿದಾಕೆ-ಎಷ್ಟು ಚೆಂದವೇ ನಿನ್ನ ಬೆಚ್ಚಗಿನ ಜೀವ. ಎಂಥ ಸೊಗಸಾಗಿದೆ ನೋಡಿ.

ಜಾನಪದದಲ್ಲಿ ಗಿಣಿ- ತನ್ನ ತವರೂರ ಗುರುತನ್ನು ಹೇಳಿದ್ದು ಹೇಗೆ ಗೊತ್ತೇ?

ಅಂಚಿನ ಮನೆ ಕಾಣೋ, ಕಂಚಿನ ಕದ ಕಾಣೋ, ಮಿಂಚಾವೆರಡು ಗಿಣಿ ಕಾಣೋ ಬಳೆಗಾರ ಅಲ್ಲಿಹುದೇ ನನ್ನ ತವರೂರು!
ಅರಮನೆಯ ಗಿಣಿ ನಾನು! ಪಂಜರದಿ ಬೆಳೆದಿಹೆನು...ಆಗಿಹೆನು ನಾನೊಂದು ಬರಡು ಹೊಲವಾಗಿ..ಬಿತ್ತಿದರು ನನ್ನಲ್ಲಿ
ಹಾರಾಡಿ ಬರುವ ಗಿಣಿ ಚೆಂದ ಕಂದಯ್ಯ ನೀ ಚಂದ ನಮ್ಮ ಮನಿಗೆಲ್ಲಾ...
ರಂಗು ರಂಗಿನ ಗಿಣಿ ಕೂತು ಹಾಡ್ಯಾವ, ರಂಭೆ ಸುರಭಿಯ ಮದುವೆಯೆಂದು.
ಗಿಡ್ಡರು ನಡೆದರೆ ಗಿಣಿಹಿಂಡು ನಡೆದಾಂಗ ...ತಾವು ಗಿಡ್ಡರೆಂದು ಮರುಗಬೇಕಿಲ್ಲ..

ಚಿತ್ರಗೀತೆಗಳಲಿ ಗಿಣಿ...

ಬೆಳ್ಳಿಮೋಡ-ಮುದ್ದಿನ ಗಿಣಿಯೆ ಬಾರೋ, ಗಂದಧಗುಡಿ-ಅರೆರೆರೆ ಗಿಣಿ ರಾಮ, ಹೊಯ್ ಪಂಚರಂಗೀ ರಾಮಾ, ಮಾನಸ ಸರೋವರ-ನೀನೇ ಸಾಕಿದಾ ಗಿಣಿ, ನಿನ್ನಾ ಮುದ್ದಿನ ಗಿಣಿ, ಸಹೋದರರ ಸವಾಲ್-ಓ ಅರಗಿಣಿ ಸವಿ ಮಾತೊಂದ ನುಡಿವೆಯಾ, ಒಲವು ಗೆಲುವು ಚಿತ್ರದ ಗಿಣಿಯೇ ನನ್ನ ಅರಗಿಣಿಯೆ, ಸಂಜೆಯಲಿ... ಹಾಡುಗಳು ಒಂದಕ್ಕಿಂತ ಒಂದು ಭೇಷ್. ಕೆ. ಕಲ್ಯಾಣ್ ಅವರ ಗಿಳಿಯೇ ಗಿಳಿಯೇ ಎದೆಯೊಳಗಿಳಿಯೇ, ಚಳಿ, ಚಳಿ ಬಿಸಿಲಿರಲಿ, ಮತ್ತೊಂದು ಪಚ್ಚೆ ಗಿಳಿ ಹೆಣ್ಣೆ ನೀನ್ಯಾರೆ? ಗಂಡುಗಲಿ ಕುಮಾರ ರಾಮ ಚಿತ್ರದ ಸರಸಕೆ ಬಾರೋ ಗಿಣಿ ರಾಮ. ಗಿಣಿರಾಮ, ಗಿಣಿರಾಮ ಈ ಸಮಯ ಮಧುರಮಯ ಒಲವನುತಿಳಿಸುವೆಯಾ? ಹಾಡುಗಳು ಮಧುರಾ ಮಧುರಾ ಮಧುರಾ.

ಗಿಣಿಯ ಸಸ್ಯ ನೀವು ಕಂಡಿರಾ...ಕಂಡಿರಾ?

ನೀಲಿ ವರ್ಣದ ಸುಂದರವಾದ ಈ ಹೂವನ್ನು ಥೈಲ್ಯಾಂಡಿನ ಜನ ಡಾರ್ಕ್ ನಾಕ್ ಕೇವ್' ಎನ್ನುತ್ತಾರಂತೆ. ಅಂದರೆ ಗಿಳಿ ಹೂ' ಗಿಣಿ ಮೂತಿಯಂತೆ ಕಾಣುತ್ತದೆ. ಈ ಸಸ್ಯ ಉತ್ತರ ಭಾರತ, ಥೈಲ್ಯಾಂಡ್ ಮತ್ತು ಮ್ಯಾನ್ಮಾರ್‌ಗಳ ಕಾಡುಗಳಲ್ಲಿ ಕಂಡುಬರುತ್ತದೆ. ಇಂಪೇಟಿಯನ್ಸ್ ಸಿಟ್ಟಾಸಿನಾ ಎಂದು ಸಸ್ಯಶಾಸ್ತ್ರೀಯವಾಗಿ ಕರೆಸಿಕೊಳ್ಳುವ ಈ ಸಸ್ಯ ಮೊದಲು ಪತ್ತೆಯಾಗಿದ್ದು 1899ರಲ್ಲಿ. 1901ರಲ್ಲಿ ಇ.ಡಿ. ಹೂಕರ್ ಎಂಬುವವರು ಈ ಸಸ್ಯ ಕುರಿತು ಮಾಹಿತಿ ಪ್ರಕಟಿಸಿದರು. ಸಾಮಾನ್ಯವಾಗಿ 2 ಮೀಟರ್ ಎತ್ತರ ಬೆಳೆಯುವ ಈ ಸಸ್ಯ ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಹೂ ಬಿಡುತ್ತದೆ. ಇದರ ಬೀಜೋತ್ಪಾದನಾ ಪ್ರಕ್ರಿಯೆ ಸಂಕೀರ್ಣವಾದುದು.

ಇಷ್ಟೆಲ್ಲಾ ಹೇಳಿ ಗಾದೆ ಹೇಳ್ದೆ ಇದ್ರೆ ಹ್ಯೇಗೆ?

* ಪಂಜರದ ಗಿಳಿ ಆಡುವ ಮಾತಿಗೆ ಎಷ್ಟು ಬೆಲೆ?
* ಗಿಣಿ ಪಾಠ ಒಪ್ಸಿದಹಂಗೆ ಒಪ್ಪಿಸಬೇಡ. ಇದು ವಿದ್ಯಾರ್ಥಿ ದೆಸೆಯಲ್ಲಿ ಅಮ್ಮಂದಿರ ಬಾಯಲ್ಲಿ ಬರೋದು.
* ಗಿಣಿ ಸಾಕೋ ಹಾಗೆ ಸಾಕಿ ಗಿಡಗನಿಗೆ ಕೊಟ್ಟ ಹಾಗಾಯಿತು.
* ನಾನು ಇವತ್ತಿಗೂ ಕೇಳೊ ಬಯ್ಗಳು ಯಾವುದು ಗೊತ್ತೇ "ಒಳ್ಳೆ ಗಿಣಿಗೆ ಹೇಳ್ದಂಗೆ ಹೇಳ್ತೀನಿ, ಈಗ್ಲಾದ್ರು ಒಂದುಚೂರು ನನ್ ಮಾತು ಕೇಳು ಸ್ವಲ್ಪ"...ಇದು ಯಾರು ಅಂತ ಮಾತ್ರ ಕೇಳ್ಬೇಡಿ.

ಅಬ್ಬಬ್ಬಾ ಗಿಳಿ ವಾಖ್ಯಾನ ಬರೀತಾ ಹೋದ್ರೆ...ಅರೆರೆರೆ ಗಿಣಿರಾಮ ಬಂದೇ ಮುಗಿಸಬೇಕೇನೋ....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X