• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಲಾಗ್ ಜಗತ್ತೊಳಗೊಂದು ವಿಕೃತ ಮನಸ್ಸಿದೆ, ಜೋಪಾನ!

|

ಒಳ್ಳೆಯ ಬರಹಗಾರರೆಲ್ಲ ಸಂಭಾವಿತ ವ್ಯಕ್ತಿಗಳು ಆಗಿರಲೇಬೇಕಾಗಿಲ್ಲ ಎಂಬ ನೀತಿಯನ್ನು ಸಾರುತ್ತ ಈ ಅನುಭವ ವೃತ್ತಾಂತವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ತಾತ್ಪರ್ಯವೆಂದರೆ, ಬೇನಾಮಿ ಹೆಸರಿನಲ್ಲಿ ಒಂದು ಮನಸ್ಸಿನೊಂದಿಗೆ ಚೆಲ್ಲಾಟ ಆಡುತ್ತಿದ್ದ ಒಂದು ಬ್ಲಾಗ್ ಕರಿ ಕುರಿ ಇವತ್ತು ಹಳ್ಳಕ್ಕೆ ಬಿದ್ದಿದೆ. ನೀವು ಹುಷಾರಾಗಿರಿ ಎನ್ನುವುದಷ್ಟೇ ನಮ್ಮ ಸಂದೇಶ - ಸಂಪಾದಕ.

* ತೇಜಸ್ವಿನಿ ಹೆಗಡೆ, ಮಾನಸ ಬ್ಲಾಗಿನ ಒಡತಿ

ನಿನ್ನೆ ರಾತ್ರಿಯವರೆಗೂ ನಾನು ಈ ಒಂದು ಕಹಿ ಸತ್ಯದಿಂದ ವಂಚಿತಳಾಗಿದ್ದೆ. ಅದೇನೆಂದರೆ ನಮ್ಮೊಳಗೇ ಓರ್ವ ವ್ಯಕ್ತಿ ಹೆಣ್ಣಿನ ಹೆಸರನ್ನಿಟ್ಟುಕೊಂಡು ಓರ್ವ ಟೀನೇಜ್ ಹುಡುಗಿ ಹೇಗೆ ಅನುಭಾವಿಸುತ್ತಾಳೋ ಅದೇ ರೀತಿಯಂತೇ ಯೋಚಿಸುತ್ತಾ ಅದನ್ನೇ ತನ್ನ ಬ್ಲಾಗಿನಲ್ಲಿ(ಹುಡುಗಿ ಹೆಸರಿನಲ್ಲಿ) ಹಾಕುತ್ತಿದ್ದ. ಈ ಬ್ಲಾಗ್ ಎಷ್ಟೋ ಜನರಿಗೆ ಗೊತ್ತು. ಅದರೊಳಗಿನ ಬರಹಗಳೆಲ್ಲಾ ಸುಪರಿಚಿತ. ತುಂಬಾ ಚೆನ್ನಾಗಿಯೂ ಇದ್ದವು. ಹಾಗಾಗೇ ಬಹಳಷ್ಟು ಜನ ಓದಿದ್ದರು. ಕಮೆಂಟಿಸಿದ್ದರು. ಆದರೆ ಅಸಲಿಗೆ ಅದು ಹುಡುಗಿಯಲ್ಲ. ನಮ್ಮೊಳಗೇ ಸುಪರಿಚಿತವಾಗಿರುವ ಓರ್ವನದ್ದು ಎಂದು ಈಗಷ್ಟೆ ತಿಳಿಯಿತು!

ಏಷ್ಟೋ ಜನ ಅಂಕಣಕಾರರು ಹುಡುಗಿಯ ಹೆಸರಲ್ಲಿ ಬರಹಗಳನ್ನು, ಕಥೆಗಳನ್ನು, ಲೇಖನಗಳನ್ನು ಬರೆದಿದ್ದಾರೆ. ನಮಗೆಲ್ಲಾ ಗೊತ್ತು. ಅದು ತಪ್ಪೂ ಅಲ್ಲ. ಅವರವರ ಇಚ್ಛೆ. ವೈಯಕ್ತಿಕ ಅಭಿಪ್ರಾಯವಷ್ಟೇ. ಇದರಿಂದ ಯಾವುದೇ ಅಪಾಯವೂ ಇಲ್ಲ. ಆದರೆ ಅದೇ ಬೇನಾಮಿ ಹೆಸರನಡಿ ನಮಗೆ ಮೈಲ್/ಚಾಟಿಂಗ್ ಮಾಡಿ, ನಮ್ಮ ಭಾವನೆಗಳ ಜೊತೆ, ಸೂಕ್ಷ್ಮ ಸಂವೇದನೆಗಳ ಜೊತೆ ಆಟವಾಡಿ ಸಂತೋಷಪಡೆಯುವ ಮನಃಸ್ಥಿತಿ ಖಂಡಿತ ಆರೋಗ್ಯಕರವಾಗಿದ್ದಲ್ಲ. ವಿಕೃತವೇ ಸರಿ. ಇದೇ ಅನುಭವವೇ ನನ್ನೊಂದಿಗಾಗಿದ್ದು.

ಕರ್ನಾಟಕದ ಹುಡುಗಿಯ ಹೆಸರಿನಡಿ ಬ್ಲಾಗ್ ನಡೆಸುತಿದ್ದ ಆ ವ್ಯಕ್ತಿ ಅದೇ ಹೆಸರಿನೊಂದಿಗೆ ನನ್ನೊಡನೆ ಮೈಲ್ ಸಂಪರ್ಕ ಬೆಳೆಸಿದ. ಬ್ಲಾಗ್ ಬರಹಗಳಿಂದ ಸುಪರಿಚಿತ ಹುಡುಗಿ. ಉತ್ತಮ ಬರಹಗಾರ್ತಿ(?) ಎಂದು ಎಣಿಸಿ ನಾನೂ ಉತ್ತರಿಸುತ್ತಾ ಹೋದೆ. ಮೈಲ್‌ಗಳಲ್ಲೆಲ್ಲೂ "ಆಕೆ" "ಆತ" ಎನ್ನುವ ಯಾವ ಸೂಚನೆಯೂ ತಿಳಿಯಲಿಲ್ಲ. ಅಷ್ಟೊಂದು ಹುಡುಗಿಯಂತೇ ಬರವಣಿಗೆಯಿತ್ತು ಆ ಮಹಾಶಯನದ್ದು.

ನಿನ್ನೆ ಓರ್ವ ಹಿತಚಿಂತಕರ ಮೂಲಕ ಆ ಬ್ಲಾಗ್ ಓರ್ವನದೆಂದೂ, ಆತನಿಗೆ ಮದುವೆಯಾಗಿ ಮಗುವಿದೆಯೆಂದೂ, ನಮ್ಮೊಳಗೇ ತನ್ನ ನಿಜ ನಾಮಧೇಯದಲ್ಲೇ ಮತ್ತೊಂದು ಬ್ಲಾಗ್ ನಡೆಸುತ್ತಿದ್ದಾನೆಂದೂ.. ಸುಪರಿಚಿತ ಬರಹಗಾರನೆಂದೂ ತಿಳಿಯಿತು. ಸುದ್ದಿ ಕೇಳಿ ಅರೆಕ್ಷಣ ಮಾತೇ ಹೊರಡಲಿಲ್ಲ. ಆತನ ಮೈಲ್‌ಗಳಲ್ಲಿ ಆತನೇ ಹೇಳಿಕೊಂಡಿರುವಂತೆ ಇರುವ ಖಿನ್ನತೆಗೆ ನಾನು ನನ್ನ ಜೀವನದ ಕಷ್ಟಗಳನ್ನು, ಹೋರಾಟವನ್ನು, ನೋವುಗಳನ್ನು ನಾನು ಹೇಗೆ ಎದುರಿಸಿ ಬಂದೆ, ಯಾವ ರೀತಿ ಬದುಕನ್ನು ಸ್ವೀಕರಿಸಬೇಕು ಎಂದೆಲ್ಲಾ ಧೈರ್ಯತುಂಬಿದ್ದೆ.

ನನ್ನ ಭಾವನೆಗಳನ್ನು ಸೂಕ್ಷ್ಮತೆಗಳನ್ನು ಓರ್ವ ಹುಡುಗಿಯ ರೂಪದಲ್ಲಿ ಬಂದು ಜಗ್ಗಾಡಿ, ಅಪಹಾಸ್ಯಮಾಡಿ, ಇನ್ನು ಯಾವತ್ತೂ ಯಾರನ್ನೂ ಮುಖತಃ ಪರಿಚಯವಿಲ್ಲದೆಯೇ ಮಾತಾಡಿಸಲೂ ಬಾರದೆಂಬ ನಿರ್ಧಾರಕ್ಕೆ ಎಳೆದೊಯ್ದ ಆ ವ್ಯಕ್ತಿಗೆ ನನ್ನ ಧಿಕ್ಕಾರವಿದೆ. ನಿಜಕ್ಕೂ ಮಾನಸಿಕತೆಯಿಂದ ಬಳಲುತ್ತಿರುವಂತೆ ಕಾಣುವ ಆ ಮನಃಸ್ಥಿತಿಗೆ ಸಹಾನುಭೂತಿಯೂ ಇದೆ. ಅನುಕಂಪವಿದೆ. ಕೇವಲ ಒಬ್ಬರ ಮಾತು ಕೇಳಿ ನಾನು ಈ ಪೋಸ್ಟ್ ಹಾಕುತ್ತಿಲ್ಲ.. ಇಲ್ಲಾ ತೀರ್ಮಾನಕ್ಕೆ ಬಂದಿಲ್ಲ.. ಇನ್ನೂ ಕೆಲವರನ್ನು ವಿಚಾರಿಸಿಯೇ ಈ ರೀತಿ ಬರೆಯುತ್ತಿದ್ದೇನೆ.

ನೀವೂ ಇದೇ ರೀತಿಯ ಮೋಸಕ್ಕೆ ಒಳಗಾಗಿರಬಹುದು. ಒಳಗಾಗಲೂಬಹುದು ಎಚ್ಚರಿಕೆ! ಈ ರೀತಿ ಆ ವ್ಯಕ್ತಿ ನನ್ನೊಂದಿಗೆ ಮಾತ್ರವಲ್ಲ. ಬೇರೆ ಕೆಲವರೊಡನೆಯೂ ಆಡಿದ್ದು ತಿಳಿದುಬಂತು. ಆದರೆ ಅವರೆಲ್ಲಾ ಬಾಯಿ ಮುಚ್ಚಿ ಕುಳಿತರು. ಆತನ ಖ್ಯಾತಿಗೋ(?) ಇಲ್ಲಾ "ನಮಗೇಕೆ ಸುಮ್ಮನೆ ಎಂದೋ..." ಇದೇ ರೀತಿ ಮೋಸಹೋದ ಒಬ್ಬನಿಂದ ಆತನ ನಿಜ ಹೊರಬೀಳುತ್ತಿದ್ದಂತೇ ಆ ವ್ಯಕ್ತಿ ಬಹುಶಃ ಹುಡುಗಿ ಹೆಸರಿನಲ್ಲಿರುವ ಬ್ಲಾಗ್‌ನಲ್ಲಿ ಬರವಣಿಗೆಯನ್ನೂ ನಿಲ್ಲಿಸಿದ. ಅಂತೆಯೇ ನನ್ನ ಮೈಲ್‌ಗೆ ಉತ್ತರಿಸುವುದು ನಿಲ್ಲಿಸಿದ. ಆದರೆ ಆಗ ನಾನು ಯಾವುದೋ ಸಮಸ್ಯೆಯಿಂದ ಆಕೆ(?) ನನ್ನ ಮೈಲ್‌ಗೆ ಉತ್ತರಿಸುತ್ತಿಲ್ಲ, ಬ್ಲಾಗ್‌ಕೂಡಾ ಬರೆಯುತ್ತಿಲ್ಲ ಎಂದು ಸುಮ್ಮನಿದ್ದೆ.

ಆದರೆ...

ಇಂದು ಸತ್ಯ ನನಗೆ ತಿಳಿದಿದೆ. ಹೆಸರನ್ನು ಹಾಕದೇ ನಾನು ಈ ಘಟನೆಯನ್ನು ಮುಂದಿಟ್ಟಿದ್ದೇನೆ. ಆ ವ್ಯಕ್ತಿಗೆ ಇನ್ನಾದರೂ ತನ್ನ ತಪ್ಪಿನ ಅರಿವಾದರೆ ನನ್ನಲ್ಲಿ ಕ್ಷಮೆ ಕೇಳಲಿ. ದೇವರು ಆತನಿಗೆ ಮುಂದೆ ಈ ರೀತಿ ಯಾರೊಂದಿಗೂ ಅವರ ಭಾವನೆಗಳ ಜೊತೆ ಆಡದಂತಹ ಬುದ್ಧಿಕೊಡಲೆಂದು ಪ್ರಾರ್ಥಿಸುವೆ. ತಮ್ಮ ತೆವಲಿಗೋಸ್ಕರ, ಇನ್ನೊಬ್ಬರನ್ನು ಬಲಿಪಶುಮಾಡಿಕೊಂಡು ಈ ರೀತಿ ಸಂತೋಷಪಡುವವರನ್ನು ಏನೆನ್ನೋಣ ಹೇಳಿ?! ಆ ವ್ಯಕ್ತಿ ಇದನ್ನೆಲ್ಲಾ ಕೇವಲ ತನ್ನ ಕ್ಷಣಿಕ ಸಂತೋಷಕ್ಕಾಗಿ ಹುಡುಗಿಯಂತೆಯೇ ನಟಿಸುತ್ತಾ, ಮೈಲ್ ಕಳಿಸುತ್ತಾ ಇದ್ದನೆಂದಾದಲ್ಲಿ ಆತನಿಗೆ ಮೆಡಿಕಲ್ ಟ್ರೀಟ್‌ಮೆಂಟಿನ ಅಗತ್ಯವಿದೆ. he may be suffering from "Personality disorder"!

ಇಲ್ಲಿ ನಾನೇನೂ ದೊಡ್ಡ ಮೋಸಕ್ಕೆ ಬಲಿಯಾದನೆಂದು ಕೂಗಾಡುತ್ತಿದ್ದೇನೆ... ಕೇವಲ ಹುಡುಗಿ ಹೆಸರಿನಲ್ಲಿ ಮೈಲ್ ಸಂಪರ್ಕ ಮಾಡಿದ್ದಕ್ಕೆ ಇಷ್ಟು ಗಲಾಟೆನಾ ಎಂದೂ ಕೆಲವರಿಗೆ ಅನಿಸಬಹುದು. ಆದರೆ ಇಲ್ಲಿ ಬಲಿಯಾಗಿರುವುದು ನನ್ನ ಭಾವನೆಗಳು, ಮನುಷ್ಯರ ಮೇಲಿನ ನಂಬಿಕೆಗಳು. ನಂಬಿಕೆ ಬಹು ಅಮೂಲ್ಯವಾದದ್ದು. ನಮ್ಮೊಳಗಿನ ಭಾವನೆಗಳನ್ನು ಹಂಚಿಕೊಳ್ಳುವಾಗ ಇರಬೇಕಾದದ್ದು ಇದೇ. ನನ್ನ ಅಂಗವೈಕಲ್ಯವನ್ನು ಉದಾಹರಿಸುತ್ತಾ ಹೇಗೆ ನೀನು ಮೇಲೆ ಬರಬೇಕೆಂದು ನಾನು ಉಪದೇಶಿಸಿದಾಗಲೂ ಆ ವ್ಯಕ್ತಿಗೆ ನೈತಿಕತೆ ಚುಚ್ಚಲಿಲ್ಲವೇ? ಮತ್ತೂ ಅದೇ ಹೆಸರಿನಡಿ.."ಅಕ್ಕಾ... ಅಕ್ಕಾ.." ಅನ್ನುತ್ತಾ ಖಿನ್ನತೆ, ಒಂಟಿತನ ಎನ್ನುತ್ತಾ ನನ್ನ ಮೋಸಗೊಳಿಸುತ್ತಾ ಹೋದ. ಅಕ್ಕಾ ಅನ್ನುವ ಪದಕ್ಕೂ ಅದರ ಘನತೆಗೂ ಅಪಾರ ಹಾನಿಯನ್ನೂ ತಂದಿಟ್ಟ :-(

ಇಂತಹವರಿಂದ ಬ್ಲಾಗ್ ಜಗತ್ತೇ ಕೊಳಕಾಗುತ್ತಿದೆ. ಮಾನಸವೂ ಮಂಕಾಗುತ್ತಿದೆ. ಮತ್ತೆ ಈ ವ್ಯಕ್ತಿ ಇನ್ನೋರ್ವ ಹುಡುಗಿಯ ಹೆಸರಿನಡಿಯಲ್ಲೋ ಇಲ್ಲಾ ಬೇರಾವ ರೀತಿಯಲ್ಲೋ ಇನ್ಯಾರ ಭಾವನೆಗಳೊಂದಿಗೂ ಆಡದಿರಲೆಂದು, ಮೋಸಮಾಡದಿರಲೆಂದು ನಿಮ್ಮೆಲ್ಲರ ಎಚ್ಚರಿಸುತ್ತಿರುವೆ. ಸಂಪೂರ್ಣ ಮುಸುಕು ಹಾಕಿ ಕೇವಲ ಹೆಸರನ್ನು ಮಾತ್ರ ಹೇಳುತ್ತಾ ವ್ಯವಹರಿಸುವವರೊಂದಿಗೆ ಜಾಗೃತರಾಗಿರಿ. ಎಚ್ಚರಿಕೆ!

ತೇಜಸ್ವಿನಿ ಹೆಗಡೆ ಅವರ ಅಡುಗೆ ಅಂಕಣ ಶಿರಸಿ ಭವನ ಓದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more