ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಶ್ಯಬ್ದಕ್ಕೆ ವಾಲುತ್ತಿರುವ ಸುದ್ದಿಮಾತು

By Staff
|
Google Oneindia Kannada News

Suddimaatu kannada blog
[ನಿರ್ಭಯ, ನಿಷ್ಠುರ, ವಿಕಟ, ಕಟಕಿ, ಚಟಾಕಿ ಮಾತುಗಳಿಂದಾಗಿ ಏಕಕಾಲಕ್ಕೆ ಖ್ಯಾತಿ ಮತ್ತು ಅಪಖ್ಯಾತಿಯನ್ನು ಸಂಪಾದಿಸಿದ ಕನ್ನಡ ಬ್ಲಾಗಿನ ಹೆಸರು ಸುದ್ದಿಮಾತು. ಕನ್ನಡ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಗಲ್ಲಿಗಲ್ಲಿಗಳಲ್ಲಿ ಒಂದು ವರ್ಷಕಾಲ ಸುಯ್ಯನೆ ಸೈಕಲ್ ಹೊಡೆದ ಈ ಹವ್ಯಾಸಿ, ಆದರೆ ಚೂಟಿ ಬ್ಲಾಗು ಇವತ್ತು ಬೇರೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಸಾಕಪ್ಪಾ ಸಾಕು ಅಲ್ಲ, ಇನ್ನು ಸಾಕು, ಸುದ್ದಿಮಾತು ಬ್ಲಾಗನ್ನು ನಿಲ್ಲಿಸೋಣ ಎಂಬ ನಿರ್ಧಾರಕ್ಕೆ ಬರಲು ಮನಸ್ಸಾಗುತ್ತಿದೆ ಎನ್ನುತ್ತಿದ್ದಾರೆ ಬ್ಲಾಗನ್ನು ಕೆತ್ತಿ ಕಡೆದವರು.

ಬ್ಲಾಗ್ ಬಂದ್ ಮಾಡಬೇಕೇ ಅಥವಾ ಮುಂದುವರೆಸಬೇಕೆ ಅಥವಾ ಕೆಲಕಾಲ ಸೂಟಿ ತೆಗೆದುಕೊಂಡು ಊಟಿಗೆ ಹೋಗಬೇಕೇ ಎಂಬ ನಿರ್ಧಾರ ಬ್ಲಾಗ್ ಓನರ್ ಅಥವಾ ಪಾರ್ಟನರ್ ಗಳಿಗೆ ಬಿಟ್ಟ ವಿಚಾರವಾದರೂ ಓದುಗ ಮಹಾಶಯರು ಏನೆನ್ನುತ್ತಾರೆ ಎಂಬ ಕುತೂಹಲ ಸುದ್ದಿಮಾತಿಗಿರುವಂತೆ ನಮಗೂ ಇದೆ. ಬಿಜೆಪಿಯಲ್ಲಿ ಒಂದೊಂದೇ ತಲೆಗಳು ಉರುಳುತ್ತಿರುವಂತೆ ಕನ್ನಡ ಬ್ಲಾಗುಗಳೂ ಉರುಳುತ್ತಿರುವ ಸಮಾಚಾರಗಳನ್ನು ಕೇಳಿದರೆ ಬೇಜಾರಾಗುತ್ತದೆ. ಅಸಲು ವಿಷಯವೆಂದರೆ, ಸುದ್ದಿಮಾತಿನಂಥ ಬ್ಲಾಗನ್ನು ಮುಚ್ಚಿದರೆ ಕೆಲವರಿಗೆ ಖುಷಿಯಾಗಬಹುದು ಆದರೆ, ಮುಂದುವರೆಸಿರಪ್ಪಾ ಯಾಕೆ ತಲೆಕೆಡಿಸಿಕೊಳ್ಳುತ್ತೀರಿ? ಎನ್ನುವವರೂ ನಮ್ಮ ನಡುವೆಯೇ ಇರಬಹುದಲ್ಲಾ.

ಹೇಗಾದರೂ ಆಗಲಿ, ಬ್ಲಾಗ್ ಲೋಕದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುವ ಅಡ್ಡಾಗೆ ಸುದ್ದಿಮಾತಿನ ಈ ಕೆಳಗಿನ ವಿದಾಯ ಗೀತಾತ್ಮಕ ಬರಹವನ್ನೂ ನಮ್ಮ ವೇದಿಕೆಯ ಮೂಲಕ ಸಲ್ಲಿಸುವ ಇಚ್ಛೆ ನಮ್ಮದು. ಓದಿ. ನಿಮ್ಮ ಸ್ವಂತ ಅಭಿಪ್ರಾಯವನ್ನು ನಿಮ್ಮ ಹೆಸರಿನಲ್ಲಿ ಯಾ ಕಾವ್ಯನಾಮದಲ್ಲಿ ಬರೆಯಿರಿ. ಅಂದಹಾಗೆ, ಸುದ್ದಿಮಾತು ನಿಲ್ಲಿಸಬೇಕೇ ಬೇಡವೇ ಎಂಬ ಪ್ರಶ್ನೆಗೆ ದಟ್ಸ್ ಕನ್ನಡ ಮತ್ತು ನಾನು, ಎಸ್ಕೆ. ಶಾಮಸುಂದರನ ಉತ್ತರ ಹೀಗಿದೆ : ಕನ್ನಡದಲ್ಲಿ ಬ್ಲಾಗ್ ಪರಂಪರೆ ಬೆಳೆಯಬೇಕು, ಯಾವ ಬ್ಲಾಗೂ ಕಣ್ಮುಚ್ಚಬಾರದು.]

ದೂರ ಹೋಗುವ ಬಯಕೆ. ನೀವೇನಂತೀರಿ?

ಇನ್ನು ಕೆಲವೇ ದಿನಗಳಲ್ಲಿ 'ಸುದ್ದಿಮಾತು'ಗೆ ಒಂದು ವರ್ಷದ ಸಂಭ್ರಮ. ಆ ಆಚರಣೆಗೆ ಮುನ್ನವೇ ನಾವು ನಿಮ್ಮಿಂದ ವಿದಾಯ ಬಯಸುತ್ತಿದ್ದೇವೆ. ವಿದಾಯ ಎಂದಾಕ್ಷಣ ನಿಮ್ಮಲ್ಲಿ ಹಲವು ಆಲೋಚನೆಗಳು ಒಮ್ಮೆಲೆ ನುಗ್ಗಿ ಬಂದಿರಬಹುದು. ಇವರ ಮೇಲೆ ಯಾರೋ ಕೇಸು ಹಾಕಿರಬೇಕು, ಇಲ್ಲ ಯಾರೋ ಇವರೇ ಮಾಡ್ತಿರೋದು ಅಂತ ಗೊತ್ತಾಗಿ ಧಮಕಿ ಹಾಕಿರಬೇಕು - ಹೀಗೆ ನಿಮ್ಮಲ್ಲಿ ಅನೇಕ ಐಡಿಯಾಗಳು ಹೊಳೆದಿರಲೂ ಸಾಕು. ಆದರೆ ಅದಾವುದೂ ಅಲ್ಲ.

ಒಂದು ವರ್ಷದ ಹಿಂದೆ ಹೀಗೆ ಯಾವುದೋ ಪತ್ರಿಕಾ ವರದಿಗೆ ಸ್ಪಂದಿಸುವ ನೆವದಲ್ಲಿ ಬ್ಲಾಗ್ ಹುಟ್ಟಿಕೊಂಡಿತು. ನಿನ್ನೆ ಒಂದು ಪೋಸ್ಟ್ ಮಾಡಿದಿವಿ, ಇಂದೂ ಒಂದು ಮಾಡಿದರೆ ಹೇಗೆ.. ಹೀಗೆ ಸುದ್ದಿಮಾತು ಒಂದು ರೂಪ ಪಡೆದುಕೊಂಡಿತು. ಆ ನಂತರ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಗಿದೆವು. ಕೆಲವೊಮ್ಮೆ ಉತ್ತಮ ಬರಹಗಳನ್ನು ಹೆಕ್ಕಿ ಹಾಕಿದೆವು. ಆರಂಭದಲ್ಲಿ ಬಂದ ಪ್ರತಿಕ್ರಿಯೆಯಿಂದ ಹಿಗ್ಗಿದೆವು. ನಮಗೆ 'ನಾವು ಯಾರು' ಎಂದು ಹೇಳಿಕೊಳ್ಳುವುದಕ್ಕಿಂತ, ನಮ್ಮ ವಿಚಾರವನ್ನು ಹೇಗೆ ಬ್ಲಾಗ್ ಓದುಗ ಸಮೂಹ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿತ್ತು. ಕೆಲವರು 'ನೀವು ಕಾಂಗ್ರೆಸ್ಸಿನವರು' ಎಂದು ಟೀಕಿಸಿದರೆ, ಇನ್ನು ಕೆಲವರು 'ನೀವು ಎಡಪಂಥೀಯರು' ಎಂದು ಮೂದಲಿಸಿದರು.

ಪ್ರಜಾವಾಣಿ ಪತ್ರಿಕೆಯನ್ನು ಒಟ್ಟಾರೆಯಾಗಿ ಒಪ್ಪಿಕೊಳ್ಳುತ್ತಲೇ, ಅದರ ಕೆಲ ಧೋರಣೆಗಳನ್ನು ಟೀಕಿಸಿದೆವು. ಆ ಪತ್ರಿಕೆ 60ನೇ ವರ್ಷಾಚರಣೆ ಸಂದರ್ಭದಲ್ಲಿ ಬರೆದ ಸಂಪಾದಕೀಯದಲ್ಲಿ ತಪ್ಪುಗಳನ್ನು ಹುಡುಕಿ ಬರೆದ ಲೇಖನ ಉತ್ತಮ ಪ್ರತಿಕ್ರಿಯೆ ತಂದಿತ್ತು. ಹಾಗೆಯೇ ವಿಜಯ ಕರ್ನಾಟಕ ಪಕ್ಕಾ ಚೆಡ್ಡಿಯಾಗಿ ವರ್ತಿಸಿದಾಗ ಟೀಕಿಸಲೇ ಬೇಕಾಯ್ತು. ಆದರೆ ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲಿಲ್ಲ. ವಿಚಾರದ ನೆಲಗಟ್ಟಿನಲ್ಲೇ ನಮ್ಮ ಟೀಕೆ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಎಂದೇ ನಮ್ಮ ನಂಬುಗೆ.

ಈ ಮಧ್ಯೆ ನಮ್ಮ ಓದುಗರು ಸುದ್ದಿಮಾತುಗಾರರನ್ನು ಅನೇಕರಲ್ಲಿ ಹುಡುಕಿದರು. ಜಿ.ಎನ್ ಮೋಹನ್, ದಿನೇಶ್.. ಹೀಗೆ ಪತ್ರಿಕಾ ಜಗತ್ತಿನ ಅನೇಕ ಹೆಸರುಗಳು ಹರಿದಾಡಿದವು. ಕೆಲವರಂತೂ, 'ಅವರು ನಮ್ಮ ಹುಡುಗರೇ ಕಣೋ' ಎಂದು ಸುಖಾ ಸುಮ್ಮನೆ ಎಲ್ಲರ ಮುಂದೆ ಒಂಥರಾ ಸ್ಕೋಪ್ ತೆಗೊಳೋಕೆ ಹೇಳಿಕೊಂಡಿದ್ದ ಉದಾಹರಣೆಗಳೂ ಉಂಟು.

ಮೊದಲು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇವೆ. ನಾವು ಯಾರು ಎನ್ನುವುದು ಮುಖ್ಯವೇ ಅಲ್ಲ. ಕಾರಣ ಇಲ್ಲಿ ಯಾರೂ ಮುಖ್ಯರಲ್ಲ! ಅದೇ ಹೊತ್ತಿಗೆ ಇನ್ನೊಂದು ಮಾತು - ನೀವು ಸಂಶಯ ಪಡುತ್ತಿರುವ ಯಾರೂ ನಮ್ಮ ತಂಡದಲ್ಲಿಲ್ಲ. ಜಿ.ಎನ್ ಮೋಹನ್ ನಮ್ಮ ತಂಡದಲ್ಲಿ ಇದ್ದಿದ್ದರೆ, ಅವರಿಗೆ ಪ್ರಶ್ನೆ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ.

ಹೆಸರಿಲ್ಲದೆ ಬರೆದರೆ ಏನೆಲ್ಲಾ ಪ್ರತಿಕ್ರಿಯೆ ಬರಬಹುದು, ಎಂಬ ಸಣ್ಣ ಕುತೂಹಲದಿಂದ ಬ್ಲಾಗ್ ಮುಂದುವರಿಸಿದೆವು. ಇಲ್ಲಿಯವರೆಗೂ ಬಂದು ನಿಂತಿದ್ದೇವೆ. ಹೆಸರು ಹೇಳದಿದ್ದರೂ, ನಾವು ದಾರಿ ತಪ್ಪಲಿಲ್ಲ ಎಂದು ನಂಬುತ್ತೇವೆ. ಯಾರಿಗೂ ಮುಜುಗರಕ್ಕೆ ಈಡು ಮಾಡುವಂತಹ ಬರಹಗಳನ್ನು ಹಾಕಲಿಲ್ಲ. ನಿಜ. ಒಂದೆರಡು ಕಾಮೆಂಟ್ ಗಳನ್ನು ಪಬ್ಲಿಷ್ ಮಾಡುವಾಗ ಎಡವಿದೆವೇನೋ ಎನ್ನಿಸುತ್ತಿದೆ. ಅದು ಆ ಕ್ಷಣ wrong judgement. ಅಂತಹ ಕಾಮೆಂಟ್ ಗಳಿಂದ ಬೇಸರ ಆಗಿರುವವರಿಗೆ ಕ್ಷಮೆ ಕೋರುತ್ತೇವೆ.

ಇನ್ನು ವಿದಾಯದ ಮಾತುಗಳೇಕೆ?

ನಾವು ಹೆಸರು ಹೇಳದೆ ಬ್ಲಾಗ್ ನಡೆಸಿದ ಕಾರಣಕ್ಕೆ, ಹೆಸರಿಲ್ಲದೆ ಬರೆಯುವುದನ್ನು ಬೆಂಬಲಿಸುತ್ತೇವೆ ಎಂದಲ್ಲ. ಹೆಸರಿಲ್ಲದೆ ಉಳಿಯುವುದು ನಿಜವಾಗಿಯೂ ಸ್ವಾತಂತ್ರ್ಯವೇ. ಆದರೆ ಅದನ್ನೇ ಸ್ವೇಚ್ಛೆಯಾಗಿಸಿಕೊಂಡವರ ಬಗ್ಗೆ ನಮಗೆ ಬೇಸರವಿದೆ. ಆ ಸ್ವಾತಂತ್ರ್ಯ ಆರೋಗ್ಯವಂತ ಚರ್ಚೆಗೆ ಪ್ರೇರಣೆ ಆಗದೆ, ವೈಯಕ್ತಿಕ ನಿಂದನೆಯ ಹಾದಿ ಹಿಡಿಯುತ್ತಿರುವುದು ದುಃಖದ ಸಂಗತಿ. ಸುದ್ದಿಮಾತು ಆರಂಭವಾದಾಗ ಮಾಧ್ಯಮಗಳ ಬಗ್ಗೆ ಬರೆಯುತ್ತಿದ್ದ ಬ್ಲಾಗ್ ಗಳು ಅಷ್ಟಾಗಿ ಕಾಣಲಿಲ್ಲ. ಇತ್ತೀಚೆಗೆ ಅವುಗಳ ಸಂಖ್ಯೆ ಹೆಚ್ಚಿದೆ.

ಕೆಲವು ದಿನಗಳ ಹಿಂದೆ 'ಸುದ್ದಿ ಮನೆ ಕತೆ'ಯಾದವರು ಈಗ 'ಸ್ಫೋಟಕ ಸುದ್ದಿ'ಯಾಗಿ ಹಾಜರಾಗಿದ್ದಾರೆ. ಆ ಮಹಾನುಭಾವ ಮೋಹನ್ ಮತ್ತು ದಿನೇಶ್ ಒಂದೇ ದಿನ ಕಾಮೆಂಟ್ ಹಾಕಿದ್ರಂತೆ, ಆ ಕಾರಣಕ್ಕೆ ಇದು ಅವರದೇ ಬ್ಲಾಗ್ ಎಂದು ಫರ್ಮಾನು ಹೊರಡಿಸಿಬಿಟ್ಟ. ಇನ್ಯಾರೋ ಒಬ್ಬ ಪತ್ರಿಕೋದ್ಯಮದ ವಿದ್ಯಾರ್ಥಿ ಎಂದು ಹೇಳಿಕೊಂಡು ಬರೆಯುತ್ತಿದ್ದಾನೆ. ಈ ಮಧ್ಯೆ ಕಾರ್ಗಿಲ್ ವೀರ ಶಿವಪ್ರಸಾದ್, ಇಂತಹ ಬ್ಲಾಗರ್ಸ್ ಮಧ್ಯೆ ಸುದ್ದಿಮಾತುವನ್ನೂ ಸೇರಿಸಿ ಸಾರಾಸಗಟಾಗಿ ತೀರ್ಪು ಕೋಡುತ್ತಾರೆ.

ಇಂತಹ ಕಲುಷಿತ ವಾತಾವರಣದಿಂದ ದೂರ ಇರಬೇಕೆಂಬುದು ನಮ್ಮ ಬಯಕೆ. ನೀವೇನಂತೀರಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X