ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸುಗಳು ಮಾರಾಟದ ವಸ್ತುವೆ?

By Super
|
Google Oneindia Kannada News

Raj Kapoor and Vaijayanti Mala in Sangam
ಕನಸುಗಳು ಎಂದಿಗೂ ಮಾರಾಟದ ವಸ್ತುವಾಗಲು ಸಾಧ್ಯವಿಲ್ಲ. ಮಾರಾಟಗಾರನಲ್ಲಿ ಕನಸುಗಳು ಇರಬಹುದು, ಆದರೆ, ಕನಸುಗಳೆಂದು ಮಾರಾಟದ ಪರಿಕಲ್ಪನೆಯಲ್ಲಿ ಹುಟ್ಟುವುದ್ದಕ್ಕೆ ಸಾಧ್ಯವೆ ಇಲ್ಲ. ಕನಸುಗಳು ಹುಟ್ಟುವುದೆ ಬದುಕಿನ ಆಲೋಚನೆಗಳಿಂದ. ಕನಸುಗಳ ಆಶಯ ಬದುಕಿಗೊಂದು ಅಥವಾ ಭಾವನೆಗೊಂದು ನಿರ್ದಿಷ್ಟವಾದ ಗುರಿಯನ್ನು ನೀಡಿ, ಅದನ್ನು ಸಫಲವಾಗಿಸುವುದು.

* ಕೆ.ಆರ್.ರವೀಂದ್ರ

ಒಂದು ಮಧ್ಯಾಹ್ನ ಜಾಹೀರಾತುರಂಗದಲ್ಲಿ ಕ್ರಿಯಾಶೀಲನಾಗಿರುವ ಗೆಳೆಯನೊಬ್ಬ ಕರೆ ಮಾಡಿ ಕನಸುಗಳಿಗೆ ಸಂಬಂಧಿಸಿದಂತೆ ಒಂದು ಒಳ್ಳೆ ಕ್ಯಾಪ್‌ಶನ್ ಕೊಡು ಮಿತ್ರಮ (ಗೆಳೆಯ) ಎಂದ. ಸ್ವಲ್ಪ ಯೋಚನೆ ಮಾಡಿ ಯಾವುದು ನಿದ್ರೆ ಮಾಡಲು ಬಿಡದೊ, ಯಾವುದು ನಿದ್ರೆಯೊಳಗು ಕಾಡದೆ ಇರದೊ, ಅದುವೇ ಕನಸು ಎಂದು ಹೇಳಿದೆ. ನನಗೆ 'ಕನಸು' ಅನ್ನೋ ಪದದ ಹಿಂದನೇ ಒಂದು ಸಿನಿಮಾ ನಿರ್ದೇಶಕ, ಒಬ್ಬ ಕತೆಗಾರ ಏಕಕಾಲಕ್ಕೆ ಬಂದು ಕಾಡಿದರು. ನಿರ್ದೇಶಕ, ಕತೆಗಾರ ಇವರೆಲ್ಲಾ ಮೂಲತಃ ಕನಸುಗಾರರು. ಹಾಗೇ ನೋಡಿದರೆ ಪ್ರತಿಯೊಬ್ಬ ಕ್ರಿಯಾಶೀಲ ವ್ಯಕ್ತಿಯು ಕನಸುಗಾರನೇ. ಕನಸು ಕಾಣದೆ, ಯಾರು ಕೂಡ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ಕನಸು ಅದೊಂದು ತುಡಿತ, ಅದೊಂದು ಗುರಿ, ಆಶಯ...

ಸಿನಿಮಾರಂಗದಲ್ಲಿನ ಕನಸುಗಾರರ ಬಗ್ಗೆ ನಾನು ಒಂದು ಕ್ಷಣ ಯೋಚಿಸಿದಾಗ ನನಗೆ ತಕ್ಷಣ ನೆನಪಿಗೆ ಬಂದಿದ್ದು ರಾಜ್‌ಕಪೂರ್. ಹಾಗೆ ರಾಜ್‌ಕುಪೂರ್, ರಾಜೇಂದ್ರ ಕುಮಾರ್ ಮತ್ತು ವೈಜಯಂತಿಮಾಲಾ ನಟಿಸಿರುವ 'ಸಂಗಮ್' ಚಿತ್ರ ಕೂಡ ನೆನಪಿಗೆ ಬಂತು. 1964ರಲ್ಲಿ ಬಿಡುಗಡೆಯಾದ ರಾಜ್‌ಕಪೂರ್ ನಿರ್ದೇಶನದ ಆ ಚಿತ್ರದಲ್ಲಿನ ಎಲ್ಲಾ ಹಾಡುಗಳು ಇಂದಿಗೂ ಚಿತ್ರರಸಿಕರ ಮನದಲ್ಲಿ ಹಾಗೆ ನಿಂತು ಹೋಗಿವೆ. ಶಂಕರ್-ಜೈಕಿಸನ್‌ರ ಅದ್ಭುತ ಸಂಗೀತ, ಹಸರತ್ ಜೈಪುರಿಯವರ ಸಾಹಿತ್ಯ ಸಂಗಮದ ಯಶಸಿನಲ್ಲಿ ಮಹತ್ವದ ಪಾತ್ರವಹಿಸಿತ್ತು. ಇದರಲ್ಲಿ ಮುಖ್ಯವಾಗಿ ಒಂದು ಹಾಡಿನ ಬಗ್ಗೆ ಇಲ್ಲಿ ಪ್ರಸಾಪ್ತಿಸಬೇಕಾಗಿದೆ.

ಹಸೀನಾ ಲಿಖೂ, ಮೆಹರಬಾ ಲಿಖೂ, ಯಾ ದಿಲರುಬಾ ಲಿಖೂ
ಹೈರಾನ್ ಹೂ ಕಿ ಆಪಕೋ ಇಸ್ ಖತ್ ಮೇ ಕ್ಯಾ ಲಿಖೂ
ಯೇ ಮೇರಾ ಪ್ರೇಮ ಪತ್ರ ಪಢಕರ್
ಕೆ ತುಮ್ ನಾರಾಜ ನಾ ಹೋನಾ
ಕೆ ತುಮ್ ಮೇರಿ ಜಿಂದಗಿ ಹೋ
ಕೆ ತುಮ್ ಮೇರಿ ಬಂದಗಿ ಹೋ

ಏಕಂದ್ರೆ ಈ ಹಾಡು ಸಿನಿಮಾದಲ್ಲಿ ಮೂಡಿಬರುವುದರ ಹಿಂದೆ ಶೋಮ್ಯಾನ್ ರಾಜ್‌ಕಪೂರ್‌ರ ತುಡಿತವಿದೆ. ಖ್ಯಾತ ಗೀತ ರಚನೆಕಾರ ಹಸರತ್ ಜೈಪುರಿಯವರ ಮನೆಗೆ ಒಂದು ಸಲ ರಾಜ್‌ಕುಪೂರ್ ಸಿನಿಮಾ ಒಂದರ ಹಾಡುಗಳ ಚರ್ಚೆಗೆಂದು ಹೋದಾಗ, ಜೈಪುರಿ ಅವರ ಟೇಬಲ್ ಮೇಲೆ, ಮೇಲಿನ ಆ ಹಾಡು ಬರೆದಿಟ್ಟಿದ್ದ ಹಾಳೆ ರಾಜ್‌ಕಪೂರ್‌ರ ಕಣ್ಣಿಗೆಬಿತ್ತು. ತಕ್ಷಣ ಅದನು ಓದಿ ಸಂಭ್ರಮಗೊಂಡ ರಾಜ್‌ಕಪೂರ್ ಅವರು ಆ ಹಾಡನ್ನು ಮುಂದಿನ ಸಿನಿಮಾದಲ್ಲಿ ಬಳಸಿಕೊಳ್ಳಲು ಅನುಮತಿ ನೀಡುವಂತೆ ಜೈಪುರಿಯವರಿಗೆ ಕೇಳಿದರು. ಆದ್ರೆ ಅದಕ್ಕೆ ಅಸಮ್ಮತಿ ಸೂಚಿಸಿದರು ಹಸರತ್. ರಾಜ್‌ಕಪೂರ್ ಕೂಡ ಹೆಚ್ಚಿನ ಒತ್ತಡ ಹೇರಲು ಇಷ್ಟಪಡದೇ ಸುಮ್ಮನಾದರು.

ಅವರನ್ನು ಆ ಹಾಡು ಎಷ್ಟರ ಮಟ್ಟಿಗೆ ಕಾಡಿತ್ತು ಅಂದ್ರೆ ಪ್ರತಿಬಾರಿ ಅವರು ಜೈಪುರಿಯವರನ್ನು ಭೇಟಿಯಾದಾಗ ತಮ್ಮ ಮುಂದಿನ ಸಿನಿಮಾದಲ್ಲಿ ಆ ಗೀತೆಯನ್ನು ಬಳಿಸಿಕೊಳ್ಳಲು ಅವಕಾಶ ನೀಡುವಂತೆ ಕೇಳುತ್ತಲೇ ಇದ್ದರು. ಅದಕ್ಕಿಂತ ಒಳ್ಳೆ ಹಾಡು ಬರೆದುಕೊಡುತ್ತೇನೆ, ಆದ್ರೆ ಆ ಹಾಡಿನ ಸಹವಾಸಕ್ಕೆ ಮಾತ್ರ ಬರಬೇಡ ಗೆಳೆಯ ಎಂದು ಜೈಪುರಿ ಹೇಳುತ್ತಲೇ ಬಂದರು. ಅಲ್ಲದೆ ಕೋಟಿ ಕೊಟ್ಟರು ಆ ಹಾಡನ್ನು ಸಿನಿಮಾದಲ್ಲಿ ಬಳಿಸಿಕೊಳ್ಳಲು ಅವಕಾಶ ನೀಡುವುದಿಲ್ಲವೆಂದು ಸಹ ಹೇಳಿದರು. ಕೊನೆಗೆ ರಾಜ್‌ಕಪೂರ್ ಅವರ ಆ ತುಡಿತಕ್ಕೆ ಶರಣಾಗಲೇ ಬೇಕಾದ ಜೈಪುರಿ ಸಂಗಮ್ ಸಿನಿಮಾದಲ್ಲಿ ಆ ಹಾಡನ್ನು ಬಳಿಸಿಕೊಳ್ಳಲು ಸಮ್ಮತಿ ನೀಡಿದರು. ಆಗ ಆ ಹಾಡಿಗೆ ತಕ್ಕಂತೆ ಸಿನಿಮಾದ ದೃಶ್ಯವನ್ನು ಸರಿತೂಗಿಸಿ ರಾಜೇಂದ್ರಕುಮಾರ್-ವೈಜಯಂತಿಮಾಲಾ ಮೇಲೆ ಆ ಹಾಡನ್ನು ಚಿತ್ರಿಸಲಾಯಿತು. ಇದು ರಾಜ್‌ಕಪೂರ್ ಒಂದೊಂದು ಸಣ್ಣ ಸಂಗತಿಗೂ ನೀಡುತ್ತಿದ್ದ ಮಹತ್ವಕ್ಕೆ ಸಾಕ್ಷಿ. ಅವರಲ್ಲಿದ್ದ ಕನಸುಗಳಿಗೆ ಒಂದು ನಿದರ್ಶನ.

ಇನ್ನೊಂದಡೆ ಆ ಹಾಡನ್ನು ಹಸರತ್ ಜೈಪುರಿ ಅಷ್ಟೊಂದು ಪ್ರೀತಿಸಲು ನಿಜವಾದ ಕಾರಣವೇನು? ಎಂಬುವುದು ಇದನ್ನು ಓದಿದ ಯಾರಿಗಾದ್ರೂ ಕಾಡದೆ, ಇರಲಾರದು. ಹಸರತ್ ಜೈಪುರಿ ತಮ್ಮ ಕಾಲೇಜಿನ ದಿನಗಳಲ್ಲಿ ಒಂದು ಸುಂದರವಾದ ತರುಣಿಗೆ ಮನಸೋತರು. ಆದರೆ ಅವರು ತಮ್ಮ ಮನಸಿನ ಮಾತನ್ನು ಹೇಳಲಾಗದೆ, ಕೊನೆಗೊಂದು ದಿನ ಮನಸಿನ ಮಾತುಗಳನ್ನು ಲವ್‌ಲೇಟರ್ ಮಾಡಿ ಅದನ್ನು ಅವಳಿಗೆ ನೀಡಲು ಮುಂದಾದರು. ಆದರೆ, ಅದನ್ನು ನೀಡುವ ಧೈರ್ಯ ಸಾಲದೇ, ಕೊನೆಗೆ ಅದನ್ನು ಅವಳ ನೆನಪಾಗಿ ತಮ್ಮಲ್ಲೇ ಉಳಿಸಿಕೊಂಡು ಬಿಟ್ಟರು. ಹೀಗೆ ತಮ್ಮ ಜೀವನದಲ್ಲಿ ಮೊದಲಬಾರಿಗೆ ಬರೆದ ಒಂದು ಪ್ರೇಮಪತ್ರವೇ ಸಂಗಮ್‌ನ ಆ ಜನಪ್ರಿಯಗೀತೆ. ಹೀಗಾಗಿ ಅವರೆಂದು ಆ ತಮ್ಮ ನೆನಪಿನ ಪತ್ರವನ್ನು ಸಿನಿಮಾ ಗೀತೆಯಾಗಿಸಲು ಇಚ್ಛಿಸಲಿಲ್ಲ. ರಾಜ್‌ಕಪೂರ್‌ರ ತುಡಿತಕ್ಕೆ ಕೊನೆಗೆ ಮಣಿದು ಅದನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ಅವಕಾಶ ನೀಡಿದರು.

ಹೌದು, ಯಾರು ತಾನೆ ತಮ್ಮ ನಿಜವಾದ ಕನಸುಗಳನ್ನು ಮಾರಾಟಕ್ಕೆ ಇಡುತ್ತಾರೆ? ಈ ಪ್ರಶ್ನೆ ನನಗೆ ಕಾಡಿದ್ದಕ್ಕೆ ಕಾರಣವಿಲ್ಲದೆ ಇಲ್ಲ. ಇತ್ತೀಚಿಗೆ ಹಳೆಯ ಪತ್ರಿಕೆಯೊಂದನ್ನು ತಿರುವಿ ನೋಡುತ್ತಿದ್ದಾಗ ನಮ್ಮಲ್ಲಿ ಸಾಹಿತಿಗಳು ತಮ್ಮ ಕಾದಂಬರಿಗಳನ್ನು ಸಿನಿಮಾ ಮಾಡಲು ಅವಕಾಶ ನೀಡೋದಿಲ್ಲ ಎಂದು ಒಬ್ಬ ನಿರ್ದೇಶಕ ಬೇಸರ ವ್ಯಕ್ತಪಡಿಸಿದ್ದರು. ಇತ್ತೀಚಿಗೆ ಕಾದಂಬರಿ ಆಧಾರಿತ ಸಿನಿಮಾಗಳ ನಿರ್ಮಾಣ ಕೂಡ ಕಡಿಮೆಯಾಗಿದೆ. ಅಲ್ಲೊಂದು-ಇಲ್ಲೊಂದು ಪ್ರಯೋಗಗಳು ನಡೆದರು ನಿರೀಕ್ಷಿತ ಯಶಸ್ಸು ಮಾತ್ರ ಕಾಣುತ್ತಿಲ್ಲ. ಚಿಗುರಿದ ಕನಸು, ಮತದಾನ, ಕಲ್ಲರಳಿ ಹೂವಾಗಿ ಇತ್ಯಾದಿ ಸಿನಿಮಾಗಳನ್ನು ನೋಡಿದಾಗ ಇವನ್ನು ಕಾದಂಬರಿ ರೂಪದಲ್ಲಿ ಓದುಗ ಸ್ವೀಕರಿಸಿದಷ್ಟು, ಸುಲಭವಾಗಿ ಪ್ರೇಕ್ಷಕನಾಗಿ ಅವನ್ನು ಸ್ವೀಕರಿಸಲಿಲ್ಲ. ಯಾವುದೇ ಕಾದಂಬರಿಯ ಆಶಯವನ್ನು ದೃಶ್ಯರೂಪಕದಲ್ಲಿ ಅಭಿವ್ಯಕ್ತಗೊಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೂ ವಂಶವೃಕ್ಷ, ತಬರನ ಕಥೆಯಂಥ ಕೆಲವೊಂದು ಪರ್ಯಾಯ ಸಿನಿಮಾಗಳು, ಶರಪಂಜರ, ಗೆಜ್ಜೆಪೂಜೆ, ಭೂತಯ್ಯನ ಮಗ ಅಯ್ಯುದಂತಹ ಹಲವಾರು ಸಾಮಾಜಿಕ ಸಿನಿಮಾಗಳು ಪೂರ್ಣ ಪ್ರಮಾಣದಲ್ಲಿ ಕಾದಂಬರಿಗಾರನ ಆಶಯಕ್ಕೆ (ಕನಸಿಗೆ) ಚ್ಯುತಿ ಬರದಂತೆ, ಓದುಗನನ್ನು ಸೆಳೆದಂತೆ, ನೋಡಗನನ್ನು ಸಹ ಗೆಲ್ಲುವಲ್ಲಿ ಯಶಸನ್ನು ಕಂಡಿವೆ.

ಮುಂದೆ ಓದಿ : ಕಥೆ ಬರಿಯದೆಯೇ ಕನಸು ಕಟ್ಟಿಕೊಟ್ಟ ಪುಟ್ಟಣ್ಣ »

English summary
Young movie director Ravindra Kotaki says only a creative director like Puttanna Kanagal can give better movies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X