ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಮೇಲು ಅವರ ನಾಟಕಗಳ ಒಂದು ಪಕ್ಷಿ ನೋಟ

By * ಜಯಂತಿ ಅಮೃತೇಶ್, ಸರಸ್ವತೀಪುರಂ, ಮೈಸೂರು
|
Google Oneindia Kannada News

Alamelu Iyengar
ಅಪ್ಟುಡೇಟ್ ಅಂಬುಜಮ್ಮ' ಒಂದು ಸಾಮಾಜಿಕ ನಗೆ ನಾಟಕ. ಅಮೆರಿಕಾದಲ್ಲಿರುವ ಮಕ್ಕಳನ್ನು ನೊಡಲು ಹೋಗುವ ತಾಯಂದಿರು ಎದುರಿಸಬೇಕಾದ ಸಾಮಾಜಿಕ ಸಂಘರ್ಷಗಳು; ಆ ಹಿಡಿತಕ್ಕೆ ಸಿಕ್ಕು ಮೊದಮೊದಲು ಕೊಸರಾಡಿ ಕೊನೆಗೆ ಹೇಗೆ ಸರಿಹೋಗು'ತ್ತಾರೆಂಬುದನ್ನು ಹಾಸ್ಯದ ಛತ್ರಿಯ ಕೆಳಗೆ ಅರಳಿಸುವ ನಾಟಕ ಇದು. ನಳಪಾಕ' ಎಂಬ ನಾಟಕ ಅಮೆರಿಕಾದ ಪಡ್ಡೆ ಹುಡುಗರು ತಮ್ಮ ಗೆಳತಿಯರನ್ನು ಒಲಿಸಿಕೊಳ್ಳಲು ಏನೆಲ್ಲ ಮುಜುಗರ ಪಡಬೇಕಾಗುತ್ತದೆ ಎಂಬುದನ್ನು ವರ್ಣಮಯವಾಗಿ ಚಿತ್ರಿಸಿದ್ದಾರೆ. ಇನ್ನು ಹೈಟೆಕ್ ಹಯವದನಾಚಾರ್'. ಅಮೆರಿಕದ ಒಬ್ಬ ಪುರೋಹಿತ, ವಿದೇಶಕ್ಕೆ ಬಂದವರು ; ಆ ದೇಶದ ಎಲ್ಲ ಆಧುನಿಕ ಉಪಕರಣಗಳ ಸೌಲಭ್ಯವನ್ನು ಅಳವಡಿಸಿಕೊಂಡು ತಮ್ಮ ಆರ್ಥಿಕ ಅಂತಸ್ತನ್ನು ಹೇಗೆ ಹೆಚ್ಚಿಸಿಕೊಳ್ಳುತ್ತಾರೆಂಬುದು ಈ ನಾಟಕದ ವಸ್ತು. ತನ್ನ ಧರ್ಮ ಪತ್ನಿ ಮತ್ತು ತನ್ನ ಶಿಷ್ಯರನ್ನೂ ಯಾವ ರೀತಿಯಲ್ಲಿ ತಯಾರು ಮಾಡಿರುತ್ತಾರೆಂಬುದೇ ಒಂದು ಸೋಜಿಗ; ನಗೆ ಚಿಮ್ಮಲು ಸಾಕಷ್ಟು ಸಾಮಗ್ರಿ!

ಅಲಮೇಲು ಅವರ ನಾಟಕ ಪ್ರಪಂಚ ಕರ್ನಾಟಕವನ್ನು ಅಮೆರಿಕಾದಲ್ಲಿ ಕಸಿಮಾಡುವ ಒಂದು ಸಾರ್ಥಕ ಪ್ರಯತ್ನ. ಸರಳ ಸಂವಾದ, ಗರಿಗಟ್ಟುವ ಹಾಸ್ಯ, ದೃಶ್ಯವತ್ತಾಗುವ ಕಥಾನಕಗಳು, ವೈವಿಧ್ಯಮಯ ಪಾತ್ರಲೋಕ ಇವೆಲ್ಲ ಈ ನಾಟಕಗಳಲ್ಲಿ ಸೇರಿಕೊಂಡು ಪ್ರೇಕ್ಷಕರನ್ನು ಹಸನ್ಮುಖಿಗಳನ್ನಾಗಿ ಮಾಡಲು ದುಡಿಯುತ್ತವೆ. ಈಕೆಯ ರಚನಾಶಕ್ತಿ, ಹಾಸ್ಯ ಪ್ರಜ್ಞೆ ಮತ್ತು ಸೂಕ್ಷ್ಮ ಅನುಭವ ಗ್ರಹಣಸತ್ವಗಳು ಈ ನಾಟಕಗಳಲ್ಲಿ ಹದವಾಗಿ ಅನಾವರಣಗೊಂಡಿವೆ. ಅವರ "ಶ್ರೀರಾಮ ಪಟ್ಟಾಭಿಷೇಕ" ರಂಗ ವಲಯಗಳಲ್ಲಿ ಜಯಭೇರಿ ಹೊಡೆದಿದೆ. ಕನ್ನಡಿಗರಿಗೆ ಈ ನಾಟಕನೋಡುವ ಸೌಭಾಗ್ಯವಿದೆಯೆ ಎಂದದಕ್ಕೆ "ಖಂಡಿತ ಆ ದಿನವೂ ಬರಬಹುದು" ಎಂಬ ಸಕಾರಾತ್ಮಕ ಉತ್ತರ ನೀಡಿದರು. ಕರ್ನಾಟಕದ ಜನತೆ ತಮ್ಮ ಎಲ್ಲ ನಾಟಕಗಳನ್ನೂ ನೋಡಿ ಆನಂದಿಸಬೇಕೆನ್ನುವ ತವಕ ಅಲಮೇಲು ಅವರಿಗೂ ಇದೆ. ಆ ದಿನಕ್ಕಾಗಿ ಕಾಯಬೇಕಷ್ಟೆ.

ಅಲಮೇಲು ಅವರದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಚಿಕ್ಕಂದಿನಿಂದಲೂ ಕರ್ನಾಟಕ ಸಂಗೀತದಲ್ಲಿ ಒಲವು; ಉತ್ತಮ ಹಾಡುಗಾರ್ತಿ. ಕ್ರೀಡಾ ಚಟುವಟಿಕೆಗಳಲ್ಲಿ ಎಂದೂ ಹಿಂದೆ ಬಿದ್ದವರಲ್ಲ. ಥ್ರೋ ಬಾಲ್, ಬ್ಯಾಸ್ಕೆಟ್ ಬಾಲ್, ಷಟ್ಲ್, ಬ್ಯಾಡಮಿಂಟನ್ ಮುಂತಾದುವುಗಳಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡದ್ದುಂಟು. ಈಜುವುದರಲ್ಲಿ ಚಾಂಪಿಯನ್ ; ಹಲವಾರು ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತರು. ಪದಕಗಳನ್ನು ಗೆದ್ದು ಕಾಲೇಜಿಗೆ ಕೀರ್ತಿ ತಂದವರು. ಈಜುವುದರಲ್ಲಿ ಆತ್ಮವಿಶ್ವಾಸ ಹೆಚ್ಚು.

ಅಲಮೇಲು ಅವರ ತಂದೆಯವರಾದ ಪು.ತಿ.ನರವರು, ಇವರ ಚಿಕ್ಕ ವಯಸ್ಸಿನಲ್ಲಿ ಹೇಳಿದ ಒಂದು ಮಾತನ್ನು ಅವರು ಇಂದೂ ನೆನಪಿಸಿಕೊಳ್ಳುತ್ತಾರೆ. ಅದೇನೆಂದರೆ, ಪು.ತಿ.ನ.ರವರು ತಮ್ಮಲ್ಲಿ ಹಾಸ್ಯ ಪ್ರಜ್ಞೆಯ ಕೊರತೆ ಇದೆ ಎಂದು ಹೇಳಿಕೊಳ್ಳುತ್ತಿದ್ದರಂತೆ. ಆದರೆ ಅಲಮೇಲುವಿನ ಹಾಸ್ಯ ಪ್ರಜ್ಞೆಯನ್ನು ಕಂಡುಕೊಂಡ ಅವರು ಅದನ್ನು ಸಮಾಜಕ್ಕೆ ಧಾರೆ ಎರೆಯುವಂತೆ ಹೇಳಿದರಂತೆ. "ಈ ಹಾಸ್ಯ ಪ್ರಜ್ಞೆ ನಿನಗೆ ದೇವರಿತ್ತ ಒಂದು ವರ ; ಈ ವರವನ್ನು ನೀನು ನಿನ್ನಲ್ಲೇ ಉಳಿಸಿಕೊಳ್ಳುವಂತಿಲ್ಲ; ಎಲ್ಲ ಕಡೆ ಬಿತ್ತರಿಸು' ಎಂದರಂತೆ. ಇದೇ ಆಕೆಯ ಸ್ಫೂರ್ತಿಯ ಸೆಲೆ.

ಅವರ ನಾಟಕಗಳು ಅದೆಷ್ಟು ನೈಜವಾಗಿರುತ್ತಿದ್ದುವೆಂದರೆ ನಾಟದ ನಂತರ ಅನೇಕರು ಬಂದು ನಮ್ಮ ಮನೆಯ ಕಥೆ ನಿಮಗೆ ಹೇಗೆ ತಿಳಿಯಿತೆಂದು ಕೇಳುತ್ತಿದ್ದರಂತೆ. ಅದಕ್ಕವರು "ಐ ಆಮ್ ಎ ಫ್ಲೈ ಆನ್ ಮೆನಿ ವಾಲ್ಸ್' ಎನ್ನುವರಂತೆ. ಅಂದರೆ, ನೊಣ ಸರ್ವಾಂತರ್ಯಾಮಿಯಾಗಿ ಹೇಗೆ ಎಲ್ಲ ಕಡೆಗಳಲ್ಲಿ ಹೋಗಿ ಕುಳಿತುಕೊಳ್ಳುವುದೋ ಮತ್ತು ಎಲ್ಲ ವಿಷಯಗಳನ್ನು ತಿಳಿದುಕೊಳ್ಳುವುದೋ ಹಾಗೆ!

ಅಲಮೇಲು ಅವರು ಅಮೆರಿಕಾದಲ್ಲಿ ತಮ್ಮನ್ನು ಮೈತ್ರಿ' ಎನ್ನುವ ಒಂದು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಅವರು ಶೋಷಿತ ಮಹಿಳೆಯರ ಉದ್ಧಾರಕ್ಕಾಗಿ ಹೋರಾಡುತ್ತಾರೆ. ಭಾರತದ ಶಂಕರ ನೇತ್ರಾಲಯ ಪ್ರತಿಷ್ಠಾನ ಮುಂತಾದವುಗಳಿಗೆ ತಮ್ಮ ನಾಟಕ ಸಹಾಯಾರ್ಥ ಪ್ರದರ್ಶನಗಳ ಮೂಲಕ ಲಕ್ಷಾಂತರ ರೂಪಾಯಿಗಳ ಧನಸಹಾಯ ಮಾಡಿದ್ದಾರೆ; ಮಾಡುತ್ತಿದ್ದಾರೆ. ಅಮೆರಿಕಾದಲ್ಲಿಯ ವೃದ್ಧಾಶ್ರಮಗಳಿಗೆ ಹೋಗಿ ಅವರೊಟ್ಟಿಗೆ ಸ್ವಲ್ಪ ಸಮಯವನ್ನು ಕಳೆದು ಬರುತ್ತಾರೆ. ಮುಂದಿನ ಪೀಳಿಗೆಯವರಿಗಾಗಿ ಅವರ ಕೊಡುಗೆ ಏನು? ಎಂದು ಕೇಳಿದಾಗ ಅವರಿಗಾಗಿಯೇ ಹಲವು ನಾಟಕಗಳನ್ನು ರಚಿಸುತ್ತಿದ್ದೇನೆಂದು ಹೇಳಿದರು. ಅಲಮೇಲು ಅವರ ನಾಟಕವೆಂದರೆ ಮಕ್ಕಳು ಸಹಾ ಸಾಲಾಗಿ ಬಂದು ಕುಳಿತುಕೊಳ್ಳುತ್ತಾರಂತೆ. ಆದುದರಿಂದ ಆ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯಕ್ರಮದ ಜೊತೆಗೇ ನಾಟಕದಲ್ಲೂ ಆಸಕ್ತಿ ಮೂಡಿಸುವಂತೆ ಮಾಡಬೇಕಾದುದು ತಮ್ಮ ಮುಂದಿರುವ ಭವಿಷ್ಯದ ಯೋಜನೆ ಎಂದರು.

ಎಲ್ಲಕ್ಕೂ ಮಿಗಿಲಾಗಿ ಅಲಮೇಲು ಅವರ ನಾಟಕವಿದೆಯೆಂದರೆ ಕಿಕ್ಕಿರಿದು ನೆರೆಯುವ ಜನಸ್ತೋಮಕ್ಕೆ ನಗೆಪಾಯಸ ಕಟ್ಟಿಟ್ಟ ಬುತ್ತಿ. ಅವರು ಜನರನ್ನು ಆತಂಕ ಮತ್ತು ಜಂಜಾಟದ ಇಲಿಪಂದ್ಯದ ಜೀವನದಿಂದ ದೂರ ಕರೆದೊಯ್ದು ಅವರನ್ನೆಲ್ಲ ಒಂದು ಭ್ರಾಮಕ ಪ್ರಪಂಚವೊಂದರಲ್ಲಿ ಕ್ಷಣಕಾಲ ಮೈ ಮರೆಸುತ್ತಾರೆ. ಅಲಮೇಲು ಅವರು ಇಂತಹ ಇನ್ನೂ ಅನೇಕ ನಾಟಕಗಳನ್ನು ರಚಿಸಿ ಪ್ರೇಕ್ಷಕರ-ಓದುಗರ ಮನಸ್ಸನ್ನು ಮುದಗೊಳಿಸುವಂತಾಗಲಿ; ಭಾರತದಲ್ಲಿರುವ ಕನ್ನಡಿಗರೆಲ್ಲರೂ ನಕ್ಕು ನಲಿದಾಡುವಂತೆ ಮಾಡುವ ನಾಟಕಗಳನ್ನು ರಚಿಸುವ ಶಕ್ತಿ ಅವರಿಗುಂಟು. ಈ ದಿಕ್ಕಿನಲ್ಲೂ ಅವರು ಪ್ರಯತ್ನ ನಡೆಸುತ್ತಾರೆ- ಎಂದು ಆಶಿಸುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X