ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆಯಾಗುತ್ತಿರುವ ಅಜ್ಜನ ಕತೆಗಳು

By Super Admin
|
Google Oneindia Kannada News

Story telling
ಆಧುನೀಕರಣದ ಭರಾಟೆಯಲ್ಲಿ ನಾವೂ ನಮ್ಮತನವನ್ನು ಮರೆಯುತ್ತಿದೆವಿಯೇ ? ಮನಸ್ಸಗಳು ಸಂವೇದನೇ ಕಳೆದುಕೊಂಡು ಯಾಂತ್ರಿಕವಾಗುತಿದ್ದೆಯೇ? ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕ್ರತಿಯ ಬೇರುಗಳು ಒಂದೊಂದಾಗಿ ನಾಶವಾಗುತ್ತಾ ಸಾಗಿವೆ. ನಾವೂ ಎನು ಮಾಡಲಾಗದೇ, ಅಸಹಾಕತೆಯ ಸ್ಥಿತಿಯಲ್ಲಿ ಕಂಡೂ ಕಾಣದಂತೆ ನೀರ್ಲಿಪ್ತರಾಗಿ ಇರುವುದ್ದನ್ನು ಯಾಂತ್ರಿಕ ಬದುಕು ಕಲಿಸಿಕೊಟ್ಟಿದೆ. ಇದಕ್ಕೆ ಮರೆಯಾಗುತ್ತಿರುವ ಅಜ್ಜನ ಕತೆಗಳೇ ಸಾಕ್ಷಿ.

* ವಿನಾಯಕ ಪಟಗಾರ್, ಬೆಟ್ಕುಳಿ, ಕುಮಟಾ

ನಮ್ಮ ವ್ಯಕ್ತಿತ್ವ ರೂಪುಗೊಂಡಿರುವುದೇ ಅಜ್ಜನ ಕತೆಗಳಿಂದ ಎಂದರೆ ತಪ್ಪಾಗಲಿಕ್ಕಿಲ್ಲ. ಇವತ್ತು ಎಷ್ಟೇ ಉನ್ನತ ವ್ಯಾಸಂಗ ನಾವು ಮುಗಿಸಿದ್ದರೂ, ಸಮಾಜದಲ್ಲಿ ಮಾನವೀಯತೆಯಿಂದ ಬದುಕುವುದನ್ನು ಕಲಿಸಿಕೊಟ್ಟಿದ್ದು ಅಜ್ಜನ ಕತೆಗಳು. ಇವತ್ತಿಗೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿರುವುದು ಅಜ್ಜ ಹೆಳುತ್ತಿದ್ದ ವೈವಿಧ್ಯಮಯ ಕತೆಗಳೇ ಹೊರತು ಕಲಿತ ಪಾಠಗಳಲ್ಲ.

ಶಾಲಾ ದಿನಗಳಲ್ಲಿ ಬೇಸಿಗೆ ರಜೆ ಬಂತೆಂದರೆ ಖುಷಿಯೋ ಖುಷಿ. ಯಾವಾಗ ಅಜ್ಜಿಮನೆ ಹಿರೆಗುತ್ತಿಗೆ ಹೊಗುವೆನೋ ಅಜ್ಜನ ಜೊತೆ ಓಡಾಡುವೇನೋ ಎಂದು ಅನಿಸುತ್ತಿತ್ತು. ನನ್ನ ಅಜ್ಜ ಕತೆಗಳ ಕಣಜ. ದಿನಾ ಸಂಜೆ ಮನೆಯ ಮುಂದಿನ ಅಂಗಳದಲ್ಲಿ, ಚಪ್ಪರದ ನೆರಳಿನಲ್ಲಿ ಮಕ್ಕಳ ಹಿಂಡುಗಳ ಮದ್ಯೆ ಕುಳಿತು ಕತೆ ಹೇಳಲು ಪ್ರಾರಂಭಿಸಿದರೆ ನಾವೆಲ್ಲಾ ಭೂಮಿ ಮೇಲೆ ಇರುವುದ್ದನ್ನು ಮರೆತು ಕತೆಯ ಕಲ್ಪನಾ ಲೋಕದೊಳಗೆ ವಿಹರಿಸುತ್ತಿದ್ದೆವು. ಅಜ್ಜ ಕತೆ ಕಟ್ಟಿ ಹೇಳುವ ರೀತಿಯೇ ಹಾಗಿತ್ತು. ಕತೆಯೊಳಗೆ ತಾವೇ ಪ್ರವೇಶಿಸುತ್ತಿದ್ದರು ನಮ್ಮನ್ನೂ ಎಳೆದುಕೊಂಡು ಹೋಗುತ್ತಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅಜ್ಜ ಮತ್ತು ಅವನ ಗೆಳೆಯರು ಮಾಡಿದ ಉಪಾಯಗಳು, ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಜೈಲಿಗೆ ಹೊಗುವುದನ್ನು ತಪ್ಪಿಸಿಕೊಂಡಿದ್ದು... ಹೀಗೆ ಸ್ವಾತಂತ್ರ್ಯ ಹೊರಾಟದ ವಿವಿಧ ಮಜಲುಗಳನ್ನು ಹೇಳುವಾಗ ನಮ್ಮ ಕಣ್ಣ ಮುಂದೆಯೇ ಹೋರಾಟ ನಡೆದಂತಿರುತ್ತಿತ್ತು.

ಅಂದು ಅಜ್ಜ ಹೇಳುತ್ತಿದ್ದ ಕೆಲವೊಂದು ಕತೆಗಳು ಇಂದಿಗೂ ನನ್ನ ಬದುಕಿನ ವ್ಯವಹಾರಗಳಲ್ಲಿ ನೆನಪಿಗೆ ಬರುತ್ತವೆ. ಚೈನ್ ಲಿಂಕ್ ಸಿಸ್ಟಮ್ ಎಂದು ಹಲವಾರು ಮಂದಿಗೆ ಪಂಗನಾಮ ಬಿದ್ದ ಸುದ್ದಿ ಕೇಳಿದಾಗಲ್ಲೆಲ್ಲ ಅಜ್ಜ ಹೇಳುತ್ತಿದ್ದ ದಗಲಬಾಜಿ ಶಂಕರ ಎನ್ನುವ ಹಾಸ್ಯಮಿಶ್ರಿತ ಕತೆ ನೆನಪಿಗೆ ಬರುತ್ತದೆ. ಇಂತಹ ವ್ಯವಹಾರಗಳು ನನ್ನ ಮುಂದೆ ಬಂದಾಗ ಮೋಸ ಬೀಳದಂತೆ ಎಚ್ಚರಿಕೆ ವಹಿಸುವಂತೆ ಮಾಡುತ್ತವೆ. ಅಜ್ಜ ಹೇಳುತ್ತಿದ್ದ ರಾಮಾಯಣ ಮಹಾಭಾರತ ಕತೆಗಳು ನನ್ನ ಜೀವನದ ಮೇಲೆ ಗಾಢವಾದ ಪರಿಣಾಮ ಬೀರಿವೆ. ನಂತರದ ದಿನಗಳಲ್ಲಿ ಇದರ ಬಗ್ಗೆ ಎಷ್ಟೋ ಪುಸ್ತಕಗಳನ್ನು ಓದಿದೆ, ಟಿವಿಗಳಲ್ಲಿ ಸಿರಿಯಲ್ ಗಳನ್ನು ನೋಡಿದೆ. ಆದರೆ ಅವು ಅಜ್ಜ ಹೇಳುತ್ತಿದ್ದ ರಾಮಾಯಣ ಮಹಾಭಾರತ ಕತೆಗಳಷ್ಟು ಪರಿಣಾಮ ಬೀರಿಲ್ಲ, ಬೀರಲು ಸಾಧ್ಯವೂ ಇಲ್ಲ.

ಊರಲ್ಲಿದ್ದ ದೇವರುಗಳು ಮತ್ತು ಗುತ್ತುಗಳ ಮೇಲೆ ಪುರಾಣಿಕ ಕತೆಗಳನ್ನು ಅಜ್ಜ ಆಕರ್ಷಕವಾಗಿ ಹೇಳುತ್ತಿದ್ದರು. ಬಂಡಿಸಾಲ ಜಟಗನ ಪ್ರಸಿದ್ಧಿ ಸಾರುವ ಕತೆ, ಗೋವೆ ರಾಜನ ಕನಸಿನಲ್ಲಿ ಕಾಣಿಸಿಕೊಳ್ಳುವ ಮುಖಾಂತರ ಜೈಲಿನಲ್ಲಿದ್ದ ಹೀರೆಗುತ್ತಿ ಹಳ್ಳೆರನ್ನು ಬಿಡಿಸಿಕೊಂಡು ಬಂದ ಕತೆ, ಹೀರೆಗುತ್ತಿಯಲ್ಲಿರುವ ಹಂದಿ ತಿಮ್ಮಣ ಗುತ್ತಿಗೆ ಸಂಬಂಧಪಟ್ಟ ಕತೆ, ಹಂದಿಯೊಂದು ಯಾರಿಂದಲೂ ಬೇಟೆಯಾಡಲು ಸಾದ್ಯವಾಗದಿದ್ದಾಗ ಬರ್ಗಿಯ ಬೇಟೆಗಾರ ತಿಮ್ಮಣ ಬೇಟೆಯಾಡಲು ಬಂದಿದ್ದು, ಹಂದಿಯನ್ನು ಬೇಟೆಯಾಡಿ, ತಾನೂ ಸಾವಿಗೀಡಾಗಿದ್ದು, ಅವನ ಸ್ಮರಣಾರ್ಥ ಎರಡು ಗುತ್ತುಗಳನ್ನು ನಿರ್ಮಿಸಿದ್ದು... ಒಂದೆ ಎರಡೆ. ಹೀಗೆ ನಮ್ಮ ಸುತ್ತಮುತ್ತಲಿನ ಇತಿಹಾಸ, ಪೌರಾಣಿಕ ಮಹತ್ವವನ್ನು ಯಾವುದೇ ಪಠ್ಯಕ್ರಮಗಳ ಓದಿಲ್ಲದೆ, ಕತೆಗಳ ಮೂಲಕ ತಿಳಿದುಕೊಳ್ಳುತ್ತಿದ್ದೆವು. ಅಜ್ಜನ ಬಹುತೇಕ ಕತೆಗಳು ಶಾಲೆಗಳಲ್ಲಿ ಓದುವ ಪಠ್ಯಕ್ರಮಕ್ಕೆ ಪೂರಕವಾಗಿದ್ದರಿಂದ ಪಠ್ಯಕ್ರಮಗಳನ್ನು ಬಹುಬೇಗನೆ ಅರ್ಥೈಸಿಕೊಳ್ಳಲು ನನಗೆ ತುಂಬಾ ಅನೂಕುಲವಾಗುತ್ತಿತ್ತು.

ಮೊದಲೆಲ್ಲಾ ಬೇಸಿಗೆ ರಜಾದಿನಗಳು ಕಳೆದು ಹೋಗುತ್ತಿದ್ದುದು ಹೀಗೇ. ಅಜ್ಜನಕತೆಗಳು, ಬಯಲಾಟ, ಚಿನ್ನಿದಾಂಡಿನ ಆಟ, ಭಜನೆ, ಕೋಳಿ ಅವಾರಿ, ಬಂಡಿಹಬ್ಬಗಳು, ತೇರು ಹೀಗೆ ಹಲವಾರು ಪಾರಂಪರಿಕ, ಸಾಂಸ್ಕತಿಕ ಚಟುವಟಿಕೆಗಳಿಂದ ನಮ್ಮ ರಜೆಗಳನ್ನು ಎಷ್ಟೊಂದು ಅರ್ಥಪೂರ್ಣವಾಗಿ ಅನುಭವಿಸುತ್ತಿದ್ದೆವು. ವಾರದಲ್ಲಿ ಮೂರು ನಾಲ್ಕು ಬಯಲಾಟಗಳೂ ನಡೆಯುತ್ತಿದ್ದವು. ಒಂದು ದಿನ ಹೆಕ್ಕ ಮೇಳದ ಆಟವಾದರೆ, ಇನ್ನೊಂದು ದಿನ ಹಳ್ಳೆರರು ಪ್ರಸಂಗ ನಡೆಸಿಕೊಡುತ್ತಿದ್ದರು. ಸುದೀರ್ಘವಾಗಿ ರಾತ್ರಿಯಿಂದ ಬೆಳಿಗ್ಗೆಯವರೆಗೆ ನಡೆಯುವ ಆಟವನ್ನು ನೋಡುವ ಅನುಭವ ವಿಶಿಷ್ಟವಾಗಿರುತ್ತಿತ್ತು. ಪ್ರತಿ ದಿನ ಸಂಜೆ ವಂದಿಪೆ ನಿನಗೆ ಗಣನಾಥ ಎಂದು ಪ್ರಾರಂಭವಾಗುವ ಭಜನೆ ಹೇಳುವ ಪರಿಪಾಠವನ್ನು ಹೇಳಿಕೊಟ್ಟಿದ್ದು ನನ್ನ ಪ್ರೀತಿಯ ಅಜ್ಜನೆ. ಅಜ್ಜ ಮತ್ತು ಮೊಮ್ಮಕ್ಕಳ ನಡುವಿನ ಸಂಬಂಧ ಮೊದಲೆಲ್ಲಾ ಗಾಢವಾಗಿರುತ್ತಿತ್ತು. ಏನೇ ಪ್ರಶ್ನೆ ಕೇಳಿದರೂ, ಅದಕ್ಕೆ ತಕ್ಕ ಉತ್ತರ ನೀಡಿ ನಮ್ಮಲ್ಲಿನ ಸಂಶಯಗಳಿಗೆ ತೆರೆ ಎಳೆಯುತ್ತಿದ್ದರೇ ಹೊರತು ಅದರಿಂದ ನುಣಿಚಿಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ.

ಇಂದಿನ ದಿನಗಳಲ್ಲಿ ಅಜ್ಜ-ಮೊಮ್ಮಕ್ಕಳ ಗಾಢಸಂಬಂಧ ಮೊದಲಿನ ಹಾಗೇ ಕಂಡುಬರುವುದಿಲ್ಲ. ಇವತ್ತಿನ ಮಕ್ಕಳನ್ನು ಅಜ್ಜ ಅಜ್ಜಿಯರ ಜೊತೆ ಬೆರೆಯಲು ತಂದೆ ತಾಯಂದಿರು ಬಿಡುತ್ತಿಲ್ಲ. ಇವತ್ತು ಮಕ್ಕಳನ್ನು ಮಕ್ಕಳಾಗಿ ಬೆಳೆಯಲು ಬಿಡುತ್ತಿಲ್ಲ. ಯಂತ್ರದ ರೀತಿ ಬೆಳೆಸುತ್ತಿದ್ದಾರೆ. ಮೊದಲೆಲ್ಲಾ ಹಿರಿಯ-ಕಿರಿಯರು ಬೆರೆಯುವ ಅವಕಾಶ ಸಾಕಷ್ಟು ದೊರೆತು, ಹಿರಿಯರ ಪ್ರಭಾವ ಮಕ್ಕಳ ಮೇಲೆ ಆಗಿ ಬೆಳವಣಿಗೆಗೆ ಪೂರಕವಾಗಿರುತ್ತಿತ್ತು. ಆದರೆ ಇಂದು ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ದೂಡುವುದರ ಮೂಲಕ ಪಾಲಕರು ಮಕ್ಕಳನ್ನು ಮನೆಯಲ್ಲೇ ಕ್ರಿಯಾಶೀಲರನ್ನಾಗಿ ಮಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿ ಅಲ್ಲಿ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಸಾದ್ಯವೇ? ಮಕ್ಕಳ ಕಲ್ಪನಾಶಕ್ತಿ, ಕ್ರಿಯಾಶೀಲತೆ ಅಲ್ಲಿ ಚಿಗುರಲು ಸಾದ್ಯವೇ?

ಮೊದಲೆಲ್ಲಾ ಶಾಲೆಗೆ ಹೋಗಿಬಂದ ಮೇಲೆ ಬಿಡುವಿನ ವೇಳೆಯಲ್ಲಿ ಅಜ್ಜ-ಅಜ್ಜಿಯರ ಜೊತೆ ಬೆರೆಯುವ ಅವಕಾಶಗಳು ದೊರೆಯುತ್ತಿತ್ತು. ಸಹಜವಾಗಿಯೇ ಹಿರಿಯರಲ್ಲಿನ ತಾಳ್ಮೆ,ಮಾನವೀಯತೆ, ಅಹಿಂಸಾತ್ಮಕ ಗುಣಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರತ್ತಿದ್ದವು. ಆದರೆ ಇಂದು ಶಾಲೆ, ಟ್ಯುಶನ್, ಟಿವಿ ನೊಡುವುದರಲ್ಲಿಯೇ ಸಮಯ ಮುಗಿದುಹೋಗುತ್ತಿರುತ್ತದೆ. ಮಕ್ಕಳು ಹಿರಿಯರ ಜೊತೆ ಬೆರೆತರೆ ಜಾಸ್ತಿ ಮುದ್ದಾಗಿ ಹಾಳಾಗುತ್ತಾರೆ ಎನ್ನುವ ತಪ್ಪು ಕಲ್ಪನೆ ಅನೇಕ ಪಾಲಕರಲ್ಲಿ ಮನೆಮಾಡಿದೆ. ಹಿರಿಯರನ್ನು ತಾವೂ ಅವಗಣನೆ ಮಾಡುವುದಲ್ಲದೆ ಮಕ್ಕಳಿಗೆ ಅದನ್ನೇ ಧಾರೆ ಎರೆಯುತ್ತಿರುವುದು ಕಂಡುಬರುತ್ತಿದೆ. ಹಾಗಾಗಿಯೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು. ಮಕ್ಕಳು ಮತ್ತು ಹಿರಿಯರ ನಡುವೆ ಪಾಲಕರು ತಡೆಗೊಡೆಯಾಗಿರದೆ, ಅವರನ್ನು ಬೆಸೆಯುವ ಕೊಂಡಿಯಾದರೆ, ಮಕ್ಕಳು ಕ್ರಿಯಾಶೀಲರಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ. ಪಾಲಕರು ಆ ನಿಟ್ಟಿನಲ್ಲಿ ಯೋಚಿಸುವಂತಾಗಲಿ. ಮಕ್ಕಳು ಪುನ: ಅಜ್ಜನ ಕತೆಗಳನ್ನು ಕೇಳುವಂತಾಗಲಿ.

;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X