ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆಯಾಗುತ್ತಿರುವ ಕರಾವಳಿಯ ಹುರಿಯಕ್ಕಿ ಲಾಡು

|
Google Oneindia Kannada News

Huriyakki ladu, coastal karnataka special recipe
ಕರಾವಳಿ ವಿಶೇಷ ತಿಂಡಿ ತಿನಸುಗಳಲ್ಲಿ ಹುರಿಯಕ್ಕಿ ಲಾಡು ಒಂದು. ಆಧುನಿಕತೆಯ ಸೋಗಿನಲ್ಲಿ ಸಾಂಪ್ರದಾಯಕವಾಗಿ ಪ್ರಮುಖ ಆಹಾರವಾಗಿ ಉಳಿದುಕೊಂಡಿರುವ ಕುಚ್ಚಿಗೆ ಅಕ್ಕಿಯಿಂದ ಮತ್ತು ತೆಳುವಾದ ಜೋನಿ ಬೆಲ್ಲದಿಂದ ತಯಾರಿಸಲ್ಪಡುವ ಲಾಡು ಇಂದಿನ ಥಳಕು ಬಳುಕಿನ ನಾಜೂಕಿನ ಬೇಕರಿ ತಿಂಡಿಗಳ ಭರಾಟೆಗಳ ಮಧ್ಯೆ ಅಪರೂಪವಾಗುತ್ತಿದೆ.

* ವಿನಾಯಕ ಪಟಗಾರ್, ಬೆಟ್ಕುಳಿ, ಕುಮಟಾ

ಮೊದಲ್ಲೆಲ್ಲಾ ಬೇಸಿಗೆ ರಜೆ ಮುಗಿಸಿ ದೂರದ ಊರುಗಳಿಗೆ ಹೋಗುವಾಗ ಡಬ್ಬಿ ತುಂಬ ಅಜ್ಜಿ ಮಾಡಿಕೊಟ್ಟ ಹುರಿಯಕ್ಕಿ ಲಾಡುವನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಧೋ ಎಂದು ಸುರಿಯುವ ಕುಂಭದ್ರೋಣ ಮಳೆಯಲ್ಲಿ ಹುರಿಯಕ್ಕಿ ಲಾಡುವನ್ನು ತಿನ್ನುತ್ತಿದ್ದರೆ ಕರಾವಳಿ ಊರಿನ ಸವಿ ಸವಿ ನೆನಪುಗಳು ಆವರಿಸುತ್ತಿದ್ದವು. ಇವಾಗ ಧೋಧೋ ಮಳೆಯೂ ಇಲ್ಲ, ಹುರಿಯಕ್ಕಿ ಲಾಡುವಿನ ರುಚಿಯ ಪರಿಚಯವೂ ಅನೇಕರಿಗೆ ಗೊತ್ತಿಲ್ಲವೆನ್ನಿ. ಈ ಸಲದ ಮಳೆಗಾಲದಲ್ಲಿ ಹುರಿಯಕ್ಕಿ ಲಾಡುವಿನ ರುಚಿಯಿಂದ ನೀವು ವಂಚಿತವಾಗಬೇಡಿ. ಆದ್ದರಿಂದ ಅದನ್ನು ತಯಾರಿಸುವ ಬಗೆ ತಿಳಿದುಕೊಳ್ಳಿ.

ಬೇಕಾಗುವ ಪದಾಥಗಳು (ಸುಮಾರು ಹತ್ತು ಲಾಡುವಿಗೆ ಆಗುವಷ್ಟು)

ಕುಚ್ಚಿಗೆ ಅಕ್ಕಿ : 250 ಗ್ರಾಂ
ತೆಳು ಬೆಲ್ಲ : 200 ಗ್ರಾಂ
ಕೊಬ್ಬರಿ ತುರಿ : ಒಂದು ಕಪ್
ಶೇಂಗಾ ಕಾಳು : ಒಂದು ಕಪ್
ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿ ಮತ್ತು ಉಪ್ಪು

ತಯಾರಿಸುವ ವಿಧಾನ

ಮೊದಲಿಗೆ ಕೆಂಪು ಕೆಂಪಾಗಿರುವ ಕುಚ್ಚಿಗೆ ಅಕ್ಕಿಯನ್ನು ಇನ್ನಷ್ಟು ಕೆಂಪಾಗುವಂತೆ ಹದವಾದ ಬೆಂಕಿಯಲ್ಲಿ ಹುರಿಯಬೇಕು. ನಂತರ ಆರಲು ಬಿಡಬೇಕು. ಹುರಿದ ಅಕ್ಕಿಯನ್ನು ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿ ಕಡಿ ಕಡಿಯಾಗಿರುವಂತೆ ಹಿಟ್ಟು ಮಾಡಿಕೊಳ್ಳಬೇಕು. (ಬೀಸು ಕಲ್ಲಿನಲ್ಲಿ ಹಿಟ್ಟು ಮಾಡಿದರೆ ಇನ್ನೂ ಉತ್ತಮ. ಆದರೆ ಈಗಿನ ಕಾಲದಲ್ಲಿ ಬೀಸುಕಲ್ಲನ್ನು ಭೂತಗನ್ನಡಿ ಹಾಕಿ ಹುಡುಕಬೇಕು.)

ವಿಶಾಲವಾದ ಪಾತ್ರೆಯಲ್ಲಿ ತೆಳುವಾದ ಬೆಲ್ಲವನ್ನು ಹಾಕಿ ಒಂದು ಸುತ್ತಿನ ಪಾಕ ಬರುವಂತೆ ಕಾಯಿಸಬೇಕು. ನಂತರ ಪಾತ್ರೆಯನ್ನು ಕೆಳಗಿಳಿಸಿಟ್ಟು ಬೆಲ್ಲದ ಪಾಕಕ್ಕೆ ಕಡಿ ಕಡಿಯಾಗಿರುವ ಹಿಟ್ಟನ್ನು ಸಾವಕಾಶವಾಗಿ ಸುರಿಯುತ್ತ ಪಾಕವನ್ನು ಗಟ್ಟಿಯಾದ ದೊಡ್ಡದಾದ ಚಮಚದಿಂದ ತಿರುಗಿಸಬೇಕು. ನಂತರ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಶೇಂಗಾಕಾಳುಗಳನ್ನು ಒಂದೊಂದಾಗಿ ಹಾಕಿ ಕಲಿಸಬೇಕು. ನಂತರ ಹದವಾದ ಗಾತ್ರದಲ್ಲಿ ಲಾಡುವನ್ನು ಕಟ್ಟಬೇಕು. ಈಗ ಕೆಂಪು ಕಪ್ಪನೆಯ ಹುರಿಯಕ್ಕಿ ಲಾಡು ರೆಡಿ. ಸಂಜೆಯ ಚಹಾ ವೇಳೆಯಲ್ಲಿ ಇಲ್ಲವೆ ಬಾಯಾರಿದಾಗ ನೀರು ಸೇವಿಸುವ ಮೊದಲು ಇದನ್ನು ತಿಂದು ಸೇವಿಸಿದ್ದರೆ ಸಿಗುವ ರುಚಿ ಇನ್ಯಾತರಲ್ಲೂ ಸಿಗದು. ಒಮ್ಮೆ ಪ್ರಯತ್ನಿಸಿ ನೋಡಿ.

ಕೋರಿಕೆ : ಓದುಗರೆ, ಮಳೆಗಾಲ ಬಂತೆಂದರೆ ಮಲೆನಾಡು, ಕರಾವಳಿ ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ಹೊಸರುಚಿಗಳ ಭಾರೀ ಭರಾಟೆ. ಒಂದೊಂದು ತಿನಿಸುಗಳ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ. ಇನ್ನೇಕೆ ತಡ, ನಿಮ್ಮ ಪ್ರದೇಶದಲ್ಲಿ ತಯಾರಿಸುವ ಹೊಸರುಚಿಯನ್ನು ನಮಗೂ ಬರೆದು ತಿಳಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X