ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಲಿಪಿ ಅಪಾಯದ ಹಂತದಲ್ಲಿದೆಯೆ?

By * ಶ್ರೀಧರ ಯ. ವಡೆ., ಕೆನಡಾ
|
Google Oneindia Kannada News

Sridhar Vade, Canada
ಸಿರಿಗನ್ನಡಂ ಗೆಲ್ಗೆ. ಎಷ್ಟು ಸುಂದರ ಅಕ್ಷರಗಳು. ಎಷ್ಟುಂದು ಸುಂದರ ರಚನೆ ಈ ಅಕ್ಷರಗಳದ್ದು. ಇದನ್ನು Sirigannadam Gelge ಅಂತೆಯೂ ಬರೆಯಬಹುದಲ್ಲವೆ? ಭಾರತದ ಸುಮಾರು ಭಾಷೆಗಳ ತಾಯಿಯಾದ ಸಂಸ್ಕೃತವು ಕೇವಲ ಭಾಷೆಯಾಗಿದ್ದು ಸ್ವತಂತ್ರ ಲಿಪಿಯನ್ನು ಪಡೆದಿರುವದಿಲ್ಲ. ಇಲ್ಲಿಯವರೆಗೆ ಕಾಲಕ್ಕನುಗುಣವಾಗಿ ಬೇರೆ ಬೇರೆ ಲಿಪಿಯಲ್ಲಿ ಬರೆಯುತ್ತಲಿದ್ದು, ಕ್ರಿ.ಪೂ. 4ನೇಯ ಶತಮಾನದಲ್ಲಿ ಬ್ರಾಹ್ಮೀ ಲಿಪಿಯಲ್ಲಿ ಬರೆದರೆ ಹತ್ತೊಂಬತ್ತನೆಯ ಶತಮಾನದಿಂದೀಚೆಗೆ ದೇವನಾಗರಿ ಲಿಪಿಯಲ್ಲಿ ಬರೆಯುವ ರೂಢಿಗೆ ಅಂಟಿಕೊಂಡಿರುತ್ತದೆ. ನಮ್ಮ ರಾಷ್ಟ್ರಭಾಷೆಯಾದ ಹಿಂದಿಯೂ, ನೆರೆಯ ಮಹಾರಾಷ್ಟ್ರದ ಮರಾಠಿಯೂ ದೇವನಾಗರಿ ಲಿಪಿಯನ್ನೇ ಅಶ್ರಯಿಸಿರುತ್ತವೆ. ಜಾಗತಿಕ ಭಾಷೆಯಾದ ಇಂಗ್ಲಿಷ್ ಸಹಿತ ರೊಮನ್ ಲಿಪಿಯನ್ನು ಬಳಸುತ್ತಿದೆ. ಫ್ರೆಂಚ್, ಸ್ಪಾನಿಷ್, ಇಟಲಿಯನ್, ಪೋರ್ಚುಗೀಜರು ಹಾಗೂ ಇನ್ನೂ ಅನೇಕ ಯುರೋಪೀಯ ಭಾಷೆಗಳು ರೋಮನ್ ಲಿಪಿಯನ್ನೇ ಅವಲಂಬಿಸಿರುವವು. ಅಂದರೆ ಭಾಷೆ ಹಾಗೂ ಲಿಪಿ ಇವೆರಡೂ ಸಂಪೂರ್ಣವಾಗಿ ಬೇರೆ ಬೇರೆಯಾಗಿವೆ.

ಆದರೆ ಕನ್ನಡದ ಮಾತೇ ಬೇರೆ, ಸಹಸ್ರಾರು ವರುಷಗಳಿಂದ ತನ್ನದೇ ಆದ ವಿಶಿಷ್ಟ ಶೈಲಿಯ ಲಿಪಿಯನ್ನು ರೂಢಿಸಿಕೊಂಡು ಬಂದಿದೆ. ಯಾವದೇ ಭಾಷೆಯಾಗಲಿ ಮೊದಲು ಅದು ಕೇವಲ ಭಾಷೆಯಗಿರುತ್ತದೆ. ಅಂದರೆ ಕೇವಲ ಮಾತನಾಡುವುದಕ್ಕಷ್ಟೇ ಅದು ಸೀಮಿತವಾಗಿರುತ್ತದೆ. ಅದರಂತೆಯೆ ಕನ್ನಡವು ಇದಕ್ಕೆ ಹೊರತಾಗಿರಲಿಕ್ಕಿಲ್ಲ. ಇದು ಬರೆಯುವದಕ್ಕಿಂತ ಮೊದಲು ಎಷ್ಟು ಕಾಲ ಆಡುಭಾಷೆಯಾಗಿರಬಹುದು, ಇದನ್ನು ಖಚಿತವಾಗಿ ಗುರುತಿಸುವುದು ಕಠಿಣವಾಗಿದೆ. ಈಗ ಕನ್ನಡ ಭಾಷೆ ಹಾಗೂ ಲಿಪಿಯನ್ನು ಬೇರೆ ಬೇರೆ ಅಂತ ಉಹಿಸಲೂ ಅಸಾಧ್ಯವಾದ ಬೆಸುಗೆಯಲ್ಲಿ ಎರಡು ಒಂದಾಗಿವೆ.

ಈಗ ಜಗತ್ತಿನಲ್ಲಿ ಕೆಲವೇ ಭಾಷೆಗಳು ತಮ್ಮದೇ ಆದ ಲಿಪಿಯನ್ನು ಹೊಂದಿವೆ. ಅವುಗಳಲ್ಲಿ ಕನ್ನಡವೂ ತನ್ನ ಸ್ವತಂತ್ರ ಹಾಗೂ ಪರಿಪೂರ್ಣ ಲಿಪಿಯ ಭದ್ರಬುನಾದಿಯ ಮೇಲೆ ಕಂಗೊಳಿಸುತ್ತಿದೆ. ಭಾರತದಲ್ಲಿಯೊ ಅತೀ ಶ್ರೀಮಂತ ಭಾಷೆಗಳಲ್ಲಿ ಕನ್ನಡವು ಅಗ್ರ ಸ್ಥಾನದಲ್ಲಿದೆ. ಎಲ್ಲಕ್ಕಿಂತಲೂ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಸನಾತನ ಭಾಷೆಗಳ ಪಟ್ಟಕ್ಕೂ ಎರುತ್ತಿದೆ. ಕಿಟ್ಟಲ್ ನಂತಹ ಆಂಗ್ಲರು ಮರುಳಾಗಿ ನಿಘಂಟನ್ನು ತಯಾರಿಸಲು ಪ್ರೇರೆಪಿಸಿದ ಭಾಷೆ ಕನ್ನಡ.

ದುಂಡಗಿನ ಅಕ್ಷರಗಳ ನಿರ್ಮಾಣ ಕನ್ನಡದ ವೈಶಿಷ್ಟ್ಯ. ತಾಳೆಯ ಗರಿಗಳ ಮೇಲೆ ಬರೆಯುವಾಗ ನೇರವಾದ, ಮೊನಚಾದ ಕೋನಗಳುಳ್ಳ ಅಕ್ಷರಗಳಿಂದ ಗರಿಗಳು ಛೇದಿಸಲ್ಪಟ್ಟು ರಂದ್ರಗಳಾಗಬಹುದು ಅಥವಾ ಹರಿದು ಹೋಗಬಹುದೆಂದು, ಇದರಿಂದ ತಾಳೆಯ ಗರಿಗಳ ಆಯಸ್ಸೂ ಕಡಿಮೆಯಾಗಬಹುದೆಂದು ನಮ್ಮ ಕನ್ನಡ ಲಿಪಿಯ ಜನಕರು ತರ್ಕಿಸಿ ವಿಶಿಷ್ಟ ರೀತಿಯ ದುಂಡಗಿನ ಕನ್ನಡದ ಅಕ್ಷರಗಳ ರಚನೆಗೆ ಕಾರಣವಾಗಿರಬಹುದು. ಇಷ್ಟೊಂದು ದೂರದೃಷ್ಟಿಯಿಂದ ನಿರ್ಮಿಸಿದ ಲಿಪಿ ನಮ್ಮ ಕನ್ನಡ.

ದ್ರವಿಡಿಯನ್ ಕುಟುಂಬಕ್ಕೆ ಸೇರಿದ ಪ್ರೋಟೊ ತಮಿಳ-ಕನ್ನಡ ಪಂಗಡದಿಂದ ಕನ್ನಡ ಭಾಷೆಯ ಉಗಮವೆಂದು ಭಾಷಾ ತಜ್ಞರ ಅಭಿಪ್ರಾಯ. ಇದುವರೆಗೆ ತಿಳಿದ ಇತಿಹಾಸದ ಅನುಸಾರವಾಗಿ ಉತ್ತರದ ನಂದ-ಗುಪ್ತರ ಸಾಮ್ರಾಜ್ಯವು ಮುಳುಗಿದ ನಂತರ ಬನವಾಸಿಯ ಕದಂಬರು ಹಾಗೂ ತಲಕಾಡ ಗಂಗರೂ ಕನ್ನಡಕ್ಕೆ ಪ್ರೊತ್ಸಾಹ ನೀಡಿದರು. ಬ್ರಾಹ್ಮೀ ಲಿಪಿಯಿಂದ ಕನ್ನಡ ಲಿಪಿಯನ್ನು ತಯಾರಿಸಲ್ಪಟ್ಟಿದ್ದು ಇದೇ ಸಮಯದಲ್ಲಿ ಎಂದು ನಂಬಲಾಗಿದೆ. ಆಡು ಭಾಷೆಯಾದ ಕನ್ನಡ ಆಗ ಬರೆಯಲ್ಪಟ್ಟು ನಾಡ ಭಾಷೆಯಾಗಿ ಸ್ವತಂತ್ರ ಲಿಪಿಯೊಂದಿಗೆ ರಾಜಮರ್ಯಾದೆಯಿಂದ ಆಡಳಿತದಲ್ಲಿ ಮೆರೆಯಲಾರಂಬಿಸಿತು.

ಬದಾಮಿಯ ಚಾಲುಕ್ಯರ, ನಂತರ ಮಾಳಖೇಡದ ರಾಷ್ಟ್ರಕೂಟರ ರಾಜ್ಯಭಾಷೆಯನಿಸಿತ್ತು. ತದನಂತರ ಅನುಕ್ರಮವಾಗಿ ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ದೇವಗಿರಿ ಯಾದವರು ಕನ್ನಡವನ್ನು ತಮ್ಮ ರಾಜ್ಯದ ಆಡಳಿತ ಭಾಷೆಯಾಗಿ ಸ್ವೀಕರಿಸಿದರು. ನಂತರ ಬಂದ ವಿಜಯನಗರ ಸಾಮ್ರಾಜ್ಯ, ಮೈಸೂರು ಒಡೆಯರು, ಕನ್ನಡವನ್ನು ಭಾರತದ ಅತೀ ಶ್ರೀಮಂತ ಭಾಷೆಯನ್ನಾಗಿಸಿದರು. ಸಂಸ್ಕೃತವಲ್ಲದ, ದ್ರಾವಿಡ ಕುಟುಂಬದಿಂದ ಹುಟ್ಟಿದ ಪರಿಪೂರ್ಣವಾದ ಕನ್ನಡ ಭಾಷೆಗೆ ಸಂಸ್ಕ್ರತದ ಅನೇಕ ಶಬ್ದಗಳು ಸೇರ್ಪಡೆಯಾದುದರಿಂದ, ಅಸಂಖ್ಯ ಸಮಾನರ್ಥ ಶಬ್ದಗಳನ್ನು ಹೊಂದಿ ಪರಿಪೂರ್ಣತೆಯ ಕಳಸವೆನಿಸಿದ ಭಾಷೆ ನಮ್ಮ ಕನ್ನಡ ಭಾಷೆ. ಭಾಷೆಗೆ ತಕ್ಕಂತೆ ಲಿಪಿಯೂ ಸಹಿತ ಆಡುವ ಎಲ್ಲ ಉಚ್ಛಾರಗಳನ್ನು ಚಾಚೂ ತಪ್ಪದೆ ಬರೆಯುವ ಸಾಮರ್ಥ್ಯವನ್ನು ಈ ಲಿಪಿ ಹೊಂದಿದೆ.

ಇನ್ನುಳಿದ ಜಗತ್ತಿನ ಭಾಷೆಗಳೆಲ್ಲವೊ ಹಸುಗೂಸಾಗಿರುವಾಗ, ಅಂದರೆ ಸುಮಾರು ಕ್ರಿ.ಪೂ. 4ನೇಯ ಶತಮಾನದಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಪಾಣಿನಿಯು ರಚಿಸಿದ ಅಷ್ಟಾಧ್ಯಾಯಿ ಎಂಬ ಸಂಸ್ಕೃತ ವ್ಯಾಕರಣದ ನಿಯಮಾನುಸಾರವಾಗಿ ಕನ್ನಡ ಲಿಪಿಯು ಬರೆಯಲಾಯಿತು ಎಂದು ನಂಬಲಾಗಿದೆ. ಮನುಷ್ಯನ ಬಾಯಿ, ನಾಲಿಗೆಗಳಲ್ಲಿ ಬದಲಾವಣೆಯಾಗದ ಹೊರತು ಕನ್ನಡ ವರ್ಣಮಾಲೆಯಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಇಷ್ಟೊಂದು ಕ್ರಮಬಧ್ಧವಾದ ಅಕ್ಷರಗಳನ್ನು ಪಾಶ್ಚಾತ್ಯರ ವರ್ಣಮಾಲೆಯಲ್ಲಿ ಇನ್ನೂ ಕಂಡುಬರುವುದಿಲ್ಲ.

ಭಾರತವು ಜಗತ್ತಿನಲ್ಲಿ ಸಾವಿರಾರು ವರ್ಷ ಪ್ರಭಾವಶಾಲಿಯಾಗಿದ್ದು ದಕ್ಷಿಣಪೂರ್ವ ರಾಷ್ಟ್ರಗಳಾದ ಫಿಲಿಪೈನ್, ಕಂಬೋಡಿಯಾ, ಇಂಡೋನೇಷಿಯಾ, ಮಲೇಷಿಯಾ, ಸಿಂಗಾಪುರ (ಸಿಂಹಪುರ) ಮೊಂತಾದ ರಾಷ್ಟ್ರಗಳಲ್ಲಿ ಬ್ರಾಹ್ಮೀ ಲಿಪಿಯ ರೂಪಾಂತರಗಳನ್ನು ಬಳಸುವಂತೆ ಮಾಡಿತ್ತು. ಆದರೆ ಯುರೋಪಿಯನ್‌ರ ವಸಹಾತೀಕರಣದ ನಂತರ ಒಂದೊಂದಾಗಿ ರೋಮನ ಅಕ್ಷರಗಳನ್ನು ಉಪಯೋಗಿಸಲು ಆರಂಭಿಸಿವೆ. ಜಗತ್ತಿನ ಭೂಪಟದ ವರ್ತಮಾನ ಸ್ಥಿತಿಯನ್ನು ಅವಲೋಕಿಸಿದಾಗ ಯುರೋಪ್, ಉತ್ತರ ಅಮೇರಿಕ, ದಕ್ಷಿಣ ಅಮೇರಿಕ ಹಾಗೊ ಆಸ್ಟ್ರೇಲಿಯಾ ಖಂಡಗಳಲ್ಲಿ ಸಂಪೂರ್ಣವಾಗಿ ರೋಮನ ಅಕ್ಷರಗಳನ್ನು ಬಳಸಲಾಗುತ್ತಿದೆ. ಅದಲ್ಲದೆ ಆಫ್ರಿಕಾದ ಉತ್ತರ-ಪೂರ್ವದ ಕೆಲವು ರಾಷ್ಟ್ರಗಳನ್ನು ಬಿಟ್ಟರೆ ಉಳಿದೆಲ್ಲವೂ, ಹಾಗೂ ಏಷ್ಯಾ ಖಂಡದಲ್ಲಿ ದಕ್ಷಿಣ-ಪೂರ್ವದ ರಾಷ್ಟ್ರಗಳು, ಟರ್ಕಿ ಹಾಗೊ ರಷ್ಯಾ ಒಕ್ಕೂಟದಿಂದ ಉತ್ಪತ್ತಿಯಾದ ರಾಷ್ಟ್ರಗಳು ಹೌದು. ಫಿಲಿಪೈನಿನ ಈಗಿನ ಜನಸಾಮಾನ್ಯರಿಗೆ ಈ ಮೊದಲು ಅವರು ಬ್ರಾಹ್ಮೀಯ ರೂಪಾಂತರದ ಲಿಪಿಯನ್ನು ಉಪಯೋಗಿಸುತ್ತಿದ್ದರು ಎಂಬುದು ಗೊತ್ತೇ ಇಲ್ಲ.

ಯಾವುದೋ ಮೋಹಕ್ಕೆ ಸಿಲುಕಿದ ನಾವು ನಮ್ಮ ಉಡುಪನ್ನು ಕಳೆದುಕೊಂಡೆವು. ಈಗ ಭಾಗಶಃ ನಮ್ಮ ಅಂಕಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮುಂದೊಂದು ದಿನ ನಮ್ಮ ಲಿಪಿಯನ್ನು ಕಳೆದುಕೊಳ್ಳಬಹುದೆ? ಪರಿವರ್ತನೆ ನಿಸರ್ಗದ ನಿಯಮ, ಹಾಗೆಂದು ನಾವೆಲ್ಲ ನಮ್ಮತನವನ್ನು ಕಳೆದುಕೊಳ್ಳಬೇಕೆ? ವಿಶ್ವದ ಪ್ರತಿಯೊಂದು ಜೀವಿಗೂ ತನ್ನ ವಂಶವನ್ನು ವೃಧ್ಧಿಸಿ, ತನ್ನತನವನ್ನು ಕಾಪಾಡಿ, ಉಳಿಸಿ, ಬೆಳೆಸಲು ಪ್ರಯತ್ನಿಸುವದು ನಿಸರ್ಗದತ್ತ ಹಕ್ಕು ಇರುತ್ತದೆ. ನಮ್ಮಲ್ಲಿರದ ಶಬ್ದಗಳನ್ನು ಬೇರೆ ಭಾಷೆಗಳಿಂದ ಆಮದು ಮಾಡಿ ಭಾಷೆಯನ್ನು ಸಮೃಧ್ಧಗೊಳಿಸುವದು ಜಾಣತನವಾಗಿದೆ. ಅಲ್ಲದೇ ಇದು ಪ್ರತಿಯೊಂದು ಜೀವಿತ ಭಾಷೆಯ ಗುಣಧರ್ಮವೂ ಆಗಿದೆ. ಹೊಸದೊಂದು ಲಿಪಿಯನ್ನು ಕಲಿಯಲು ಅಪ್ರತಿಮವಾದ ಹಳೆಯ ಲಿಪಿಯೊಂದನ್ನು ಕೈಬಿಡುವ ಅವಶ್ಯಕತೆ ಇದೆಯೆ? ಹಳೆಯದನ್ನು ಕಾಪಾಡಿ ಹೊಸದನ್ನು ಕಲಿಯುವದು ನಮ್ಮಿಂದ ಅಸಾಧ್ಯವಾಗಿದೆಯೇ?

ಮುಂಬರುವ ಭವಿಷ್ಯದ ದಿನಗಳಲ್ಲಿ ನಮ್ಮ ಪೀಳಿಗೆಗೆ ಯಾವಾಗಲಾದರೂ ಸ್ವದೇಶಿ ಭಾವನೆ ಜಾಗೃತವಾದರೆ, ನಮ್ಮ ಕನ್ನಡ ಲಿಪಿಯನ್ನು ಕಾರ್ಬನ್ ಡೇಟಿಂಗ್, ಹಾಫ್ ಲೈಫ್ ಪಿರಿಯೇಡನಂತಹ ಘನ ಪ್ರಯೋಗಗಳಿಗೆ ಗುರಿಪಡಿಸಿದಾಗ ಸಿಕ್ಕು ಬೀಳುವುದು ನಾವೆ ಅದೂ ನಮ್ಮ ಈಗ ಬದುಕಿರುವ ಎರಡು ಮೂರು ಪೀಳಿಗೆಗಳೆ. ನಮ್ಮ ಇದೇ ಕಾಲಮಾನದಲ್ಲಿ ಕನ್ನಡ ಲಿಪಿ ಮಾಯವಾಗಿರುವದು ಎಂದು ಅವರಿಗನ್ನಿಸಿ, ಸತ್ಯವನ್ನು ಅರಿತ ಅವರು ನಮಗೆ ದೋಷಿಗಳೆಂದು ಪರಿಗಣೆಸಲಾರರೆ? ಅವರು ನಮ್ಮನ್ನು ಹೀಯಾಳಿಸಿ ಬೈಯ್ಯುಲಿಕ್ಕಿಲ್ಲವೆ? ನೀರೊಳಗಿರ್ದುಂ ಬೆಮರ್ತನೊರಗ ಪತಾಕಂ ಎಂಬಂತೆ ನಮ್ಮ ಪಾಡು ಕುರುಕ್ಷೇತ್ರದ ಅಂತ್ಯದಲ್ಲಿರುವ ವೈಶಂಪಾಯನ ಸರೋವರದಲ್ಲಡಗಿದ ಹೇಡಿ, ದೂರ್ತ ದುರ್ಯೋಧನನಂತಾಗಬಹುದಲ್ಲವೆ? ಆಗ ನಮಗೆಲ್ಲ ಆತ್ಮ ಸಾಕ್ಷಿಯೆಂಬ ನ್ಯಾಯಾಲಯದ ಕಟಕಟೆಯಲ್ಲಿ ತಪ್ಪಿತಸ್ಥರೆಂದು ತಲೆ ತಗ್ಗಿಸಿ ನಿಲ್ಲಬೇಕಾದಿತಲ್ಲವೆ?

ಇಂದು ಆಧುನೀಕರಣದಿಂದ ಯುವಪೀಳಿಗೆಯ ಜನತೆ ಕಂಗ್ಲಿಷಿನ ದಾಸರಾಗುತ್ತಿದ್ದಾರೆ. ಅನೇಕ ಆಂಗ್ಲ ಶಾಲೆಗಳಲ್ಲಿ ಕನ್ನಡಕ್ಕೇನಿದ್ದರೂ ಎರಡನೇ ಮತ್ತು ಮೂರನೇ ಸ್ಥಾನ. ಕನ್ನಡದ ಓದು ಕಡಿಮೆಯಾಗುತ್ತಿಲ್ಲದಿದ್ದರೂ ಬರಹ ಕ್ರಮೇಣ ಕಡಿಮೆಯಾಗುತ್ತಿದೆ. ಇಂದಿನ ಪೀಳಿಗೆಯ ಅಥವಾ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಡುವುದು ಸಾಧ್ಯವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X