ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕರರ ಕುಟುಕುವ ರಾಜಕೀಯ ಚುಟುಕುಗಳು

By Staff
|
Google Oneindia Kannada News

Dinakar Desai (Photo courtesy www.kamat.com)
ಚುಟುಕುಬ್ರಹ್ಮ ದಿನಕರ ದೇಸಾಯಿಯವರು ಸ್ವತಃ ರಾಜಕಾರಣಿಯಾಗಿದ್ದರು ಮತ್ತು ಅದರಲ್ಲಿನ ಆಳ-ಅಗಲವನ್ನು ಹತ್ತಿರದಿಂದ ಕಂಡವರು. ಚುರುಕಾದ ಚುಟುಕುಗಳ ಮುಖಾಂತರ ಕೊಳಕು ರಾಜಕಾರಣಿಗಳಿಗೆ ಚಾಟಿಯೇಟು ನೀಡಿದ ನಾಲ್ಕು ಸಾಲಿನ ಪದ್ಯಗಳನ್ನು ಓದುವುದೇ ಒಂದು ಸೊಗಸು. ದೇಸಾಯಿಯವರ ಜನ್ಮಶತಮಾನೋತ್ಸದ ಸಂದರ್ಭದಲ್ಲಿ ಅವರ ಚುಟುಕುಗಳನ್ನು ಓದುವದರ ಮೂಲಕ ಚುಟುಕುಬ್ರಹ್ಮರನ್ನು ನೆನಪಿಸಿಕೊಳ್ಳೋಣ.

* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾ

ಕನ್ನಡ ಸಾಹಿತ್ಯದಲ್ಲಿ ಚುಟುಕು ಬ್ರಹ್ಮ ಎಂದೇ ಪ್ರಸಿದ್ದರಾಗಿದ್ದ ದಿವಗಂತ ದಿನಕರ ದೇಸಾಯಿ(1909-1982)ವರದು ಈಗ ಜನ್ಮ ಶತಾಬ್ದಿ. ದಿನಕರ ದೇಸಾಯಿವರು ಒಬ್ಬ ಕಾರ್ಮಿಕ ಮುಖಂಡ ಹೋರಾಟಗಾರರು, ಬಡ ರೈತರ ಸಂಘಟನೆಯ ನೇತಾರರು, ಪ್ರಾಮಾಣಿಕ ರಾಜಕಾರಣಿ, ಪ್ರಸಿದ್ದ ವಕೀಲ ಆಗಿದ್ದರೂ, ಚಾಟಿ ಎಟಿನಂತಹ, ಮನಸ್ಸಿಗೆ ಕುಚಗುಳಿ ಇಡುವಂತಹ ಚುಟುಕಿನ ಮುಖಾಂತರನೇ ಹೆಚ್ಚು ಪರಿಚಯ.

ದೇಸಾಯಿಯವರು ಬರೆಯುತ್ತಿದ್ದ ನಾಲ್ಕೇ ಸಾಲುಗಳ ಸರಳ ಚುಟುಕುಗಳು ಉದ್ದುದ್ದ ಸಾಲುಗಳ ಪದ್ಯಗಳಿಗಿಂತ ಪ್ರಭಾವಶಾಲಿಯಾಗಿವೆ. ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ಅನೇಕರು ಪುಟಗಟ್ಟಲೆ ಬರೆದರೆ ದಿನಕರರು ಕೇವಲ ನಾಲ್ಕು ಸಾಲಿನ ಚುಟುಕು ಬರೆಯುವದರ ಮೂಲಕ ಚುರುಕು ಮುಟ್ಟಿಸುತ್ತಿದ್ದರು. ಅವರ ಚುಟುಕುಗಳಲ್ಲಿ ಪರಿಸರ, ಹಿಂದುಳಿದ ವರ್ಗ, ಭ್ರಷ್ಟಾಚಾರ, ರಾಜಕಾರಣ ಹೀಗೆಎಲ್ಲ ವಿಷಯಗಳು ಬಂದುಹೊಗಿವೆ.

ಹೇಳಿ ಕೇಳಿ ಈಗ ಚುನಾವಣೆ. ದಿನಾ ಬೆಳಗಾದರೆ ರಾಜಕೀಯದೇ ಸುದ್ದಿ. ರಾಜಕೀಯದಲ್ಲಿ ಕೊಳಕು ಇಂದೂ ಇದೆ ಅಂದೂ ಇತ್ತು. ಅಂದ ಹಾಗೆ ಅವರು ಅಂದು ರಾಜಕಾಣಿಗಳ ಬಗ್ಗೆ, ಸರಕಾರಿ ವ್ಯವಸ್ಥೆ ಬಗ್ಗೆ ಬರೆದ ಚುಟುಕುಗಳೂ ಇಂದಿಗೂ ಪ್ರಸ್ತುತವಾಗಿವೆ ಮತ್ತು ಎಂದಿಗೂ ಪ್ರಸ್ತುತವಾಗಿರುತ್ತವೆ. ರಾಜಕೀಯ ವ್ಯವಸ್ಥೆ ಮೇಲಿದ್ದ ಸಿಟ್ಟನ್ನು ದಿನಕರರು ಚುಟುಕು ಬರೆಯುವುದರ ಮುಖಾಂತರ ತೀರಿಸಿಕೊಂಡಿದ್ದಾರೆ. ರಾಜಕೀಯದ ಕೊಳಕು ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾರೆ.

ರಾಜಕೀಯ ಪುಡಾರಿ
ಅಲಲ! ಕೇಳೋ, ಮಗನೆ ಪೌರುಷದ ಸುದ್ದಿ
ಎಷ್ಟು ಮಂದಿಗೆ ಉಂಟು ಈ ತರದ ಬುದ್ದಿ?
ಹತ್ತು ವರುಷದ ಹಿಂದೆ ಇತ್ತು ಲಂಗೋಟಿ
ಈ ಹೊತ್ತು ನೋಡಿದರೆ ಬರಿ ಹತ್ತು ಕೋಟಿ

ಈ ಚುನಾವಣೆಯಲ್ಲಿ
ಈ ಚುನಾವಣೆಯಲ್ಲಿ ಆನೆಗಳು ಬಿದ್ದು
ವ್ರತ್ತಪತ್ರಿಕೆಯಲ್ಲಿ ವಿಪರೀತ ಸದ್ದು
ಕೆಲವು ಕಡೆ ಕತ್ತೆಗಳಿಗೂ ಬಂತು ಗೆಲವು
ಮತ್ತೆ ನರಿಗಳ ಜೊತೆಗೆ ಕರಡಿಗಳು ಹಲವು

ಈ ಚುನಾವಣೆ
ಈ ಚುನಾವಣೆಯೊಂದು ಭಾರಿ ವ್ಯಾಪಾರ
ಮಾರಲಿಕೆ ತೆಗೆದಿಟ್ಟ ಸರಕು ಸರಕಾರ
ಯಾರು ಬೇಕಾದರು ಕೊಳ್ಳಬಹುದಂತೆ
ಐದು ವರುಷಕ್ಕೋಮ್ಮೆ ನೆರೆಯುತ್ತಿದೆ ಸಂತೆ

ಚುನಾವಣೆಯಲ್ಲಿ ಕೇಳಿದ್ದು
ಯಾರಪ್ಪ ಬಂದರೂ ನನಗೇನು ಬಂತು?
ಉಪವಾಸ ಸಾಯುತ್ತಿದೆ ಈ ಜೀವ ಜಂತು
ಯಾರಜ್ಜ ಬಂದರೂ ಈ ಪ್ರಜಾರಾಜ್ಯ
ನಿಲ್ಲಿಸಲಾರದು ಅಂದೆ ಹೊಟ್ಟೆಗಳ ವ್ಯಾಜ್ಯ

ಪಕ್ಷಗಳು
ಈ ಪಕ್ಷ ಆ ಪಕ್ಷ, ಅಲ್ಲ ಒಂದೆರಡು
ಕೊನೆಗೆ ನೋಡಿದರೆ, ಸಖಿ, ಎಲ್ಲವೂ ಬರಡು
ಬಡವರಿಗೆ ತಪ್ಪಿಲ್ಲ ಉಪವಾಸ ತಾನೆ
ಇದಕ್ಕೆನ್ನುವರು ರಾಜಕಾರಣದ ಬೇನೆ

ಪಕ್ಷಾಂತರ
ಈ ಪಕ್ಷದಿಂದ ಆ ಪಕ್ಷಕ್ಕೆ ಹಾರಿ
ಸಚಿವ ಸಂಪುಟ ಕೆಡವಿ ಹೊಡೆದರು ನಗಾರಿ
ಹಾರಿದವನಿಗೆ ಕಟ್ಟಿದರು ಮಂತ್ರಿ ಪದವಿ
ರಾಜಕಾರಣವಾಯ್ತು ಸೂಳೆಯರ ಮದುವಿ

ಆಳುವ ಪಕ್ಷ
ಅದೃಷ್ಟಶಾಲಿ ಈ ಪಕ್ಷದ ಪುಢಾರಿ
ಕೆಸರು ಹತ್ತುವುದಿಲ್ಲ ಬಿದ್ದರೂ ಜಾರಿ
ಈತನಿಗೆ ಉಂಟು ಇನ್ನೊಂದು ಅನುಕೂಲ
ಸೋತುಹೋದರೆ ಆಗುವನು ರಾಜ್ಯಪಾಲ

ಮಂತ್ರಿಗಳ ಡಮರು
ಅನ್ನಾನ್ನಗತಿಕರಾದರು ಕೋಟಿ ಜನರು
ಆದರೂ ಮುಗಿದಿಲ್ಲ ಮಂತ್ರಿಗಳ ಡಮರು
ನಿತ್ಯವೂ ಕೇಳುತಿದೆ ಈ ಮಹಾವಾದ್ಯ
ಬಹಳ ಜೋರಾಗಿ ಬಿಟ್ಟಿದೆ ಈಗ್ಗೆ ಸದ್ಯ

ಇವರ ಕಿಸೆಯೊಳಗೆ
ಇವರ ಕಿಸೆಯೊಳಗಿತ್ತು ಕೇಂದ್ರ ಸರಕಾರ
ಜೇಬುಗಳ ಬಿಸಿ ಮಾಡಿ ಹಾಕಿದರು ಹಾರ
ಇದರ ಫಲವಾಗಿ ಗಳಿಸಿದರು ದಶಕೋಟಿ
ಹೀಗೆ ಹಾಕಿದರು ಜನಕೋಟಿಗಳ ಲೂಟಿ

ಸರಕಾರಿ ಪಕ್ಷ
ಎರಡು ಕೈಯಿಂದಲ್ಲೂ ನುಂಗಲಿಕೆ ಭಕ್ಷ್ಯ
ಎಲ್ಲರೂ ಸೇರಿದರೂ ಸರಕಾರಿ ಪಕ್ಷ
ಶೇಕಡಾ ತೊಂಬತ್ತರಿಗೆ ಇಲ್ಲ ಸೀಟು
ವ್ಯರ್ಥವಾಯಿತ್ತು ಇವರು ಹಚ್ಚಿದ ಗಿಲೀಟು

ಸಚಿವರ ಸ್ಟಷ್ಟೀಕರಣ
ಅಪರಾಧಿ ನಾನಲ್ಲ, ನನ್ನ ಕಿಸೆ ಚೊಕ್ಕ
ಎಂದಿಗೂ ನಾನು ತಿಂದವನಲ್ಲ ರೊಕ್ಕ
ಗೊತ್ತಾಗುವುದು ನೋಡಿದರೆ ನನ್ನ ಜೇಬು
ಇದುವರೆಗೆ ನಾನು ತಿಂದದ್ದು ಬರಿ ಸೇಬು

ನೂತನ ಪ್ರಧಾನಿಗೆ
ಹೊಸದಿಲ್ಲಿಯಲ್ಲಿ ಕುಳಿತ ನೂತನ ಪ್ರಧಾನಿ
ನಿನ್ನಿಂದ ಭಾರತಕ್ಕೆ ಬಾರದಿರಲಿ ಹಾನಿ
ಉತ್ಕರ್ಷ ಬರದಿದ್ದರೂ ಬೇಡ ಕೇಡು ಮಾಡದಿರು
ಮಾರಾಯ, ಇಷ್ಟಾದರೂ ನೀನು ಮಾಡು

ದಿನಕರರು ಸ್ವತ: ರಾಜಕಾರಣಿಯಾಗಿದ್ದರು. ಬಹಶ: ರಾಜಕಾರಣದ ವಿವಿಧ ಮಜಲೂಗಳನ್ನು ಹತ್ತಿರದಿಂದ ಕಂಡಿದ್ದರಿಂದ ಇಂತಹ ಕಟುವಾದ ಚುಟುಕುಗಳೂ ಅವರಿಂದ ಮೂಡಿಬಂದಿರಬೇಕು. ಆದರೆ ರಾಜಕಾರಣ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಅವರಿಗೆ ಬಿಡಲ್ಲಿಲ್ಲ. ಪ್ರಾಮಾಣಿಕರನ್ನು ರಾಜಕಾರಣ ಉಳಿಸಿಕೊಳ್ಳುವದಿಲ್ಲ ಎನ್ನುವದಕ್ಕೆ ದಿನಕರರೇ ಉತ್ತಮ ಉದಾಹರಣೆ.

ಸಮಾಜ ತನಗೇನು ಕೊಟ್ಟಿತು ಎನ್ನುವದಕ್ಕಿಂತ ತಾನು ಸಮಾಜಕ್ಕೆ ಎನು ಕೊಟ್ಟೆ ಎನ್ನುವದಕ್ಕೆ ದಿನಕರರು ಉತ್ತಮ ಉದಾಹರಣೆ. ಹೆಸರಿಗೆ ತಕ್ಕಂತೆ, ಲಕ್ಷಾಂತರ ಜನಕ್ಕೆ ಅಕ್ಷರ ಜ್ಞಾನ ನೀಡುವಂತಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವರ ಮೂಲಕ ಉತ್ತರಕನ್ನಡ ಜಿಲ್ಲೆಯ ಜ್ಞಾನ ದೀವಿಗೆಯನ್ನು ದಿನಕರ ದೇಸಾಯಿ ಬೆಳಗಿದರು.

ದಿನಕರರ ಚುಟುಕುಗಳಿಂದ ಸ್ಪೂರ್ತಿ ಪಡೆದು ಅನೇಕರು ಚಟುಕುಗಳನ್ನು ಬರೆಯಲೂ ಪ್ರಾರಂಭಿಸಿದರು ಮತ್ತು ಅದರಲ್ಲಿ ಯಶಸ್ವಿಯು ಆದರು. ಅವರಲ್ಲಿ ಪ್ರಮುಖರೆಂದರೆ ವಿಡಂಬಾರಿ. ಚುರುಕಾದ ಚುಟುಕನ್ನು ಬರೆಯುತ್ತ ಇಬ್ಬರೂ ಚುಟುಕಿನಲ್ಲಿ ಶ್ರೀಮಂತರಾದರು. ಆದರೆ ಆರ್ಥಿಕವಾಗಿ ಬಡವರಾದರು. ಬರವಣಿಗೆ ಎಲ್ಲರ ಹೊಟ್ಟೆ ತುಂಬಿಸುವದಿಲ್ಲ ಎನ್ನುವ ಮಾತು ನಿಜ ಅಲ್ಲವೇ?

ಕನ್ನಡ ಸಾಹಿತ್ಯಕ್ಕೆ ಚುಟುಕುಗಳನ್ನು ಪರಿಚಯಿಸಿದ ದಿನಕರರ ಜನ್ಮಶತಮಾನೋತ್ಸವದ ಸಂದರ್ಭದಲ್ಲಾರೂ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ನೆನಪಿಸಿಕೊಳ್ಳುವಂತ ಕಾರ್ಯ ಮಾಡದಿರುವುದು ವಿಷಾದನೀಯ. ಬಹಶ: ಚುಟಕಾಗಿ ನೆನಪಿಸಿಕೊಂಡು ಕೈತೊಳೆದುಕೊಂಡಿರಬೇಕು. ನಾವಾದರೂ ಚುನಾವಣೆ ನೆಪದಲ್ಲಿಯಾದರೂ ಅವರ ಚುಟುಕುಗಳನ್ನು ಓದುವದರ ಮೂಲಕ ಚುಟುಕುಬ್ರಹ್ಮರನ್ನು ನೆನಪಿಸಿಕೊಳ್ಳೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X