• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಂಧೀ ತಾತನ ಫೋಟೋ ನೋಡಿದ್ರಾ?

By Staff
|

ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಗಿದ್ದ ಕಾಲವೊಂದಿತ್ತು. ಸದ್ಯಕ್ಕೆ ಭಾರತದಲ್ಲಿ ಅಂತಹ ಪರಿಸ್ಥಿತಿ ಇಲ್ಲದಿರುವುದು ಒಂದು ಕ್ಷೇಮಸಮಾಚಾರ. ಆದರೆ, ಈಗ ಗಾಂಧೀ ಫೋಟೋ ಅಂಟಿಸುವವರೇ ಕಾಣಿಸುತ್ತಿಲ್ಲವೇ! ದೇವರ ಪಟಗಳನ್ನು ಇಡುವುದಕ್ಕೇ ಜಾಗ ಇಲ್ಲದಿರುವಾಗ ಗಾಂಧೀ, ಶಾಸ್ತ್ರೀ ಅವರಿಗೆ ಜಾಗ ಎಲ್ಲಿಂದ ತರೋಣ ಎನ್ನುತ್ತೀರೇನೋ?

* ಮಂಜುನಾಥ ಅಜ್ಜಂಪುರ

ಜನವರಿ 30 ಬಂದಿತೆಂದರೆ ಮನಸ್ಸು ಭಾರವಾಗಿಬಿಡುತ್ತದೆ. ಅಂತರಂಗದಲ್ಲಿ, ಗಾಂಧೀಜಿ ಅವರ ನುಡಿಗಳ ಧೀಂ ಧೀಂ ರಿಂಗಣ ಆರಂಭವಾಗಿಬಿಡುತ್ತದೆ. ನಿಜ, ನಮ್ಮಂತಹ ಸ್ವಾತಂತ್ರ್ಯೋತ್ತರ ಭಾರತಮಾತೆಯ ತನುಜಾತರಿಗೆ ಸ್ವಾತಂತ್ರ್ಯ ಹೋರಾಟವು ಲೈಬ್ರರಿಗಳ ಧೂಳು ಹಿಡಿದ ಪುಸ್ತಕಗಳ ನಡುವಿನ ಆಕ್ರಂದನ ಮಾತ್ರ. ನಾವು ಹೇಗಿದ್ದೆವು, ಈಗ ಹೇಗಿದ್ದೇವೆ, ನಮ್ಮ ಪರಂಪರೆ ಎಂತಹುದು, ಬ್ರಿಟಿಷರ ಬೂಟುಗಾಲುಗಳ ಅಡಿ ಹುಳುಗಳಿಗಿಂತ ಕಡೆಯಾಗಿ ಬಿದ್ದಿದ್ದೆವೇಕೆ, ಎಂದೆಲ್ಲಾ ಕೇಳಿಕೊಂಡು ಆಸಕ್ತಿ ವಹಿಸಿ ಹಿರಿಯರನ್ನು ಕೇಳಿ, ಅವರ ಸ್ಮೃತಿಚಿತ್ರಗಳನ್ನು ದಾಖಲಿಸಿಕೊಂಡರೆ ಈ ಸ್ವಾತಂತ್ರ್ಯ ಎನ್ನುವುದು ಒಂದಿಷ್ಟು ಅರ್ಥವಾದೀತು. ನಮ್ಮ ಜನರ ಹೋರಾಟದ ಆಯಾಮಗಳನ್ನು ಅರಿಯುವಲ್ಲಿ, ನಮಗೆ ಮುತುವರ್ಜಿ ಇಲ್ಲವೆಂದಾದರೆ ಸ್ವಾತಂತ್ರ್ಯ ದಿನಾಚರಣೆಯು ಬರಿಯ ಒಂದು ನಿರರ್ಥಕ ರಜೆಯೆನಿಸಿಬಿಡುತ್ತದೆ.

ಗಾಂಧೀಜಿ ಮತ್ತು ನೆಹರೂ ಇಬ್ಬರೇ ಈ ಸ್ವಾತಂತ್ರ್ಯ ತಂದುಕೊಟ್ಟರು ; ರಕ್ತಪಾತವಿಲ್ಲದೆ ಹೀಗೆ ಸ್ವಾತಂತ್ರ್ಯ ಗಳಿಸಿದ್ದು ನಮ್ಮ ದೇಶ ಮಾತ್ರ ; ಅಹಿಂಸೆಯೊಂದೇ ಗೆಲುವಿಗೆ ಕಾರಣ, ಇತ್ಯಾದಿ, ಇತ್ಯಾದಿ ವಿಚಾರಗಳ ಪರಿಸರದಲ್ಲಿ ಬೆಳೆದ ನನಗೆ ಭಾರತ ಸ್ವಾತಂತ್ರ್ಯ ಹೋರಾಟದ ವಿಭಿನ್ನ ಧಾರೆಗಳ ಕೊಡುಗೆಯ ಅರಿವಾದುದು ಅನೇಕ ವಿಚಾರವಂತರ ಪರಿಚಯವಾದ ಮೇಲೆ, ಅನೇಕ ಮಹತ್ತ್ವದ ಗ್ರಂಥಗಳನ್ನು ಓದಿದ ನಂತರವೇ. ಈ ನಡುವೆ, 1972ರಲ್ಲಿ ಭಾರತ ಸ್ವಾತಂತ್ರ್ಯದ ಬೆಳ್ಳಿ ವರ್ಷಾಚರಣೆಯ ಸಿದ್ಧತೆ ನಡೆಯಿತು. ನಮ್ಮ ದೊಡ್ಡಪ್ಪ ಓರ್ವ ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ಆಡಳಿತದಲ್ಲಿ ಸೆರೆವಾಸವನ್ನೂ ಅನುಭವಿಸಿದವರು. ಮಗ ಮೃತ್ಯುಶಯ್ಯೆಯಲ್ಲಿದ್ದಾಗ, ಕ್ಷಮಾಯಾಚನೆ ಪತ್ರ ಬರೆದುಕೊಟ್ಟು ಬಿಡುಗಡೆ ಆಗಬಹುದಿತ್ತು. ಹಾಗೆ ಮಾಡದ ನಿಜವಾದ ಸತ್ಯಾಗ್ರಹಿ ಅವರು. ಅವರಿಗೆ ಡಾ|| ಸೂರ್ಯನಾಥ ಕಾಮತರು ಪತ್ರ ಬರೆದು ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳನ್ನು ಬರೆದುಕೊಡುವಂತೆ ಕೇಳಿದ್ದರು. ದೊಡ್ಡ ಇತಿಹಾಸಕಾರರೂ, ಲೇಖಕರೂ ಆದ ಕಾಮತರು ಪತ್ರ ಬರೆದುದು ನಮಗೆಲ್ಲಾ ವಿಶೇಷವೆನಿಸಿತ್ತು.

ಮೂವತ್ತರ ದಶಕದಲ್ಲಿಯೇ "ವಿಶ್ವಕರ್ಣಾಟಕ" ಪತ್ರಿಕೆಯ ಪ್ರತಿನಿಧಿಯಾಗಿದ್ದ ಹಾಗೂ ಸ್ವತಃ ಲೇಖಕರೂ ಆಗಿದ್ದ ನಮ್ಮ ತಂದೆ, ನಮ್ಮ ದೊಡ್ಡಪ್ಪನವರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ - ಆಧಾರ ನೀಡಿದಂತಹವರು. ಅವರು ನನ್ನನ್ನು ಕರೆದು, ಇನ್ನುಳಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸಂದರ್ಶಿಸಿ, ಅವರ ಸ್ಮೃತಿಗಳನ್ನು ದಾಖಲಿಸುವಂತೆ ಹೇಳಿದರು. ಅದು ನನಗೆ ನನ್ನ ಬರವಣಿಗೆಗೆ ದೊರೆತ ಮೊದಲ ಅಸೈನ್ ಮೆಂಟ್. ನಮ್ಮ ದೊಡ್ಡಪ್ಪನವರ ಜೊತೆಗೇ ಸೆರೆವಾಸ ಅನುಭವಿಸಿದ್ದ ಇಬ್ಬರು ಹಿರಿಯರನ್ನು ಕಂಡು ಎರಡು ಲೇಖನಗಳನ್ನು ಸಿದ್ಧಪಡಿಸಿದೆ. ಅವರಲ್ಲಿ ಒಬ್ಬರಿಗೆ ಬರೀ ರುಜು ಹಾಕಲು ಬರುತ್ತಿತ್ತು. ಇನ್ನೊಬ್ಬರಂತೂ ನಿರಕ್ಷರಿ. ನಮ್ಮ ದೊಡ್ಡಪ್ಪನವರ ಸ್ಮೃತಿಗಳೊಂದಿಗೆ, ಈ ಎರಡು ಬರಹಗಳನ್ನೂ ಡಾ|| ಕಾಮತರಿಗೆ ಕಳುಹಿಸಲಾಯಿತು. ಕಾಮತರು ಪತ್ರ ಬರೆದು, "ಬರಹಗಳು ಚೆನ್ನಾಗಿವೆ. ಆದರೆ ಅವುಗಳನ್ನು ಸ್ವತಃ ಆ ಸ್ವಾತಂತ್ರ್ಯ ಹೋರಾಟಗಾರರೇ ಬರೆದಂತೆ ನಿರೂಪಣೆಯನ್ನು ಕೊಂಚ ಬದಲಿಸಿ ಮುದ್ರಿಸುತ್ತೇವೆ." ಎಂದರು.

ಮೂರೂವರೆ ದಶಕಗಳ ನಂತರ ಆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದಾಗ ಅಚ್ಚರಿ ಮೂಡುತ್ತದೆ. ಇಂತಹ ಹಳ್ಳಿಯ ಜನರಲ್ಲಿ, ಓದು ಬರಹ ಬಾರದ ಮುಗ್ಧರಲ್ಲಿ, ಸ್ವಾತಂತ್ರ್ಯದ ಬೀಜಗಳನ್ನು ಆ ಗಾಂಧೀಜಿ ಬಿತ್ತಿದ್ದಾದರೂ ಹೇಗೆ? ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಐತಿಹಾಸಿಕ ದಾಖಲೆಗಳು, ಇಂತಹ ಸಾವಿರಾರು ಲಕ್ಷಾವಧಿ ಹೋರಾಟಗಾರರನ್ನು ಪರಿಚಯಿಸುತ್ತದೆ. ನೋಡಲು ಆಕರ್ಷಕವಾಗಿರದಿದ್ದ, ತೀರ ಸಾಧಾರಣ ಕಂಠಶ್ರೀಯ ಆ ಗಾಂಧಿ, ಗುಜರಾತಿನ ಮೂಲೆಯ ಸಬರ್ಮತಿ ಆಶ್ರಮದಲ್ಲಿ ಕುಳಿತು ಕೋಟಿ ಕೋಟಿ ಭಾರತೀಯರಿಗೆ, ಪ್ರೇರಣೆ ನೀಡಿದ್ದಾದರೂ ಹೇಗೆ? ಇಂದಿನ ಆಧುನಿಕ ಸಂವಹನ ಮಾಧ್ಯಮಗಳಿರದ ಆ ಕಾಲಘಟ್ಟದಲ್ಲಿ ಖಾದಿ, ಗ್ರಾಮೋದ್ಧಾರ, ಪಂಚಾಯತ್ ರಾಜ್, ಗೋರಕ್ಷಣೆ, ಸ್ತ್ರೀ ವಿಮೋಚನೆಗಳ ವಿಶಿಷ್ಟ ಯೋಜನೆಗಳನ್ನು ಪ್ರಚುರಪಡಿಸಿದ್ದಾದರೂ ಹೇಗೆ? ನಿಜಕ್ಕೂ ವಿಸ್ಮಯ!

ದುರಂತವೆಂದರೆ ಗಾಂಧೀಜಿಯವರ ಘೋಷಿತ ಉತ್ತರಾಧಿಕಾರಿ ನೆಹರೂ ಆಗಲೀ, ನೆಹರೂ ಅವರ ಅಘೋಷಿತ ಉತ್ತರಾಧಿಕಾರಿ ಇಂದಿರಾ ಆಗಲೀ, ಅವರ ಬಾಲಬಡುಕರಾಗಲೀ, ಗಾಂಧೀ ಪ್ರಣೀತ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಆಸಕ್ತಿ ವಹಿಸಲೇ ಇಲ್ಲ. ಕಾಂಗ್ರೆಸ್ಸಿಗರು ಲೈಸೆನ್ಸ್ ಪರ್ಮಿಟ್ಟುಗಳನ್ನು ನೀಡಿ ದುಡ್ಡು ಮಾಡುವುದು ಹೇಗೆ, ಯೋಜನೆಗಳನ್ನು ಸ್ವಲಾಭಕ್ಕೆ ಬಳಸಿಕೊಳ್ಳುವುದು ಹೇಗೆ, ಎಂಬಂತಹ ಮನುಮುರುಕ ಕ್ಷಮಿಸಿ ದೇಶಮುರುಕ ವಿದ್ಯೆಗಳಲ್ಲಿ ಮುಳುಗಿದರು. ಭ್ರಷ್ಟಾಚಾರ, ಹಣದುಬ್ಬರ, ಬೆಲೆಯೇರಿಕೆಗಳು ಜನರನ್ನು ಕಂಗೆಡಿಸಿ ಹತಾಶೆಯತ್ತ ತಳ್ಳಿದವು. 1974ರ ಹೊತ್ತಿಗೆ ಅರಾಜಕತೆಯ ಸ್ಥಿತಿ ತಾಂಡವವಾಡುತ್ತಿತ್ತು. ರಾಜಕೀಯದಿಂದ ದೂರವುಳಿದಿದ್ದ ಜಯಪ್ರಕಾಶ ನಾರಾಯಣರಂತಹವರು, ದೇಶವನ್ನು ಉಳಿಸಲು ಪ್ರತಿಭಟನೆಯ ಸತ್ಯಾಗ್ರಹದ ನೇತೃತ್ವ ವಹಿಸಬೇಕಾಯಿತು.

ತಮ್ಮ ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧರಾದ ಇಂದಿರಾ ಗಾಂಧಿಯವರು 1975ರಲ್ಲಿ ತುರ್ತುಪರಿಸ್ಥಿತಿ ಹೇರಿದರು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳ ಹರಣವಾಯಿತು. ಆ ವರ್ಷದ ಗಾಂಧೀಜಯಂತಿ ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶವು, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀ ಜಯಂತಿ ಆಚರಿಸಿದವರು ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ, "ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆ ಬಾಗುವುದು ಹೇಡಿತನ", ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ ದೇವರಾಜ ಅರಸು ಅವರ ಕಾಂಗ್ರೆಸ್ ಸರಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೋಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದ ಆ ಮಹಾಮಹಿಮನ ಚಿತ್ರ ಹಿಡಿದಿದ್ದಕ್ಕೆ ಪೋಲೀಸರು ಬಡಿದರು, ಹೊಡೆದರು, ತುಳಿದರು. ಹಲವೆಡೆ ಸತ್ಯಾಗ್ರಹಿಗಳನ್ನು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೋಲೀಸರ ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ ನ್ಯಾಯಾಧೀಶರು ತಮ್ಮ ಕಣ್ಣು ಕಿವಿಗಳನ್ನು ನಂಬದಾದರು. "ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?" ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸರು ಏನು ಹೇಳಿಯಾರು! "ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು", ಎಂಬ ನೆಪ ಹೇಳಿದರು. "ಇರಬಹುದು, ಆದರೆ ಇವರು ಮಾಡಿದ ಅಪರಾಧವಾದರೂ ಏನು?" ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.

ದೊಡ್ಡ ಗಾಂಧೀವಾದಿ ಪ್ಯಾರೇಲಾಲರು "Mahatma Gandhi : The Last Phase", ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ದಿ|| ಕೆ.ವಿ.ಶಂಕರೇಗೌಡರು "ಮಹಾತ್ಮಾ ಗಾಂಧಿ : ಅಂತಿಮ ಹಂತ", ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.

"ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, "ಗಾಳಿ ಬಂದಾಗ ತೂರಿಕೋ", ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ಸಿನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯ ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ. ಡಿಸೆಂಬರ್ 1947ರಲ್ಲಿ, ಮತ್ತೆ ಗಾಂಧೀಜಿ ಹೇಳಿದರು, "ಕಾಂಗ್ರೆಸ್ಸಿನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ, ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಯಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆ ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ಒಂದು ತೊಟ್ಟು ಕಣ್ಣೀರನ್ನೂ ನಾನು ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೇ ಹೋದರೆ, ರೋಗಿ ಸಾಯುವುದು ಮೇಲು". (ಪುಟ 721)

ಈ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ, ಇತಿಹಾಸ, ಗಾಂಧೀಜಿ, ಸ್ವಾತಂತ್ರ್ಯ ಹೋರಾಟಗಾರರು ಮತ್ತೊಮ್ಮೆ ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ನೀಗಲಿ. ಅಂದಹಾಗೆ, ನಿಮ್ಮ ಮನೆಯಲ್ಲಿ ಗಾಂಧೀತಾತನ ಭಾವಚಿತ್ರ ಉಂಟಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more