ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ

By Staff
|
Google Oneindia Kannada News

a tribute to raju ananthaswamy by bloggers
[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]

*ಚೆಂಡೆಮದ್ದಳೆ

ಕಣ್ತುಂಬಿ ಬರುತ್ತದೆ….!

ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕೋ? ಗೊತ್ತಿಲ್ಲ. ಹಾಗೆ ಮಾಡದಿದ್ದಾಗ ಎಷ್ಟೋ ಬಾರಿ ಸಾಗುವ ದಾರಿ ಬೇರೆ ಹಾದಿಯನ್ನು ಹಿಡಿಯುತ್ತದೆ ಏನೋ? ಅದೂ ಗೊತ್ತಿಲ್ಲ.

ರಾಜು ಅನಂತಸ್ವಾಮಿ ಇಂಥದೇ ಗೊಂದಲದಲ್ಲಿ ಸಿಕ್ಕಿದ್ದರೋ ಏನೋ ಅದೂ ಗೊತ್ತಿಲ್ಲ. ರಾಜು ಅನಂತಸ್ವಾಮಿ, ನಮ್ಮೊಳಗೆ ಹುದುಗಿಕೊಂಡ ಹಾಡು. ಹೇಗೆ , ಹಲವು ಹಿರಿಯ ತಲೆಮಾರುಗಳನ್ನು ಮೈಸೂರು ಅನಂತಸ್ವಾಮಿ ಆವರಿಸಿಕೊಂಡಿದ್ದರೋ, ರಾಜು ಸಹ ಕಿರಿಯ ತಲೆಮಾರುಗಳನ್ನು ಆವರಿಸಿಕೊಳ್ಳಬಹುದಾದ ಹಾಡು.

ಭಾವಗೀತೆಗಳಲ್ಲಿನ ಭಾವಕ್ಕೆ ದನಿ ತುಂಬಿ ಹೋದವರು ಮೈಸೂರು ಅನಂತಸ್ವಾಮಿ. ಹಾಗೆಯೇ ಹೋಗಲಿಲ್ಲ, ಆ ದನಿಯನ್ನು ನಮ್ಮಲ್ಲಿಯೇ ಬಿಟ್ಟು ಹೋದರು. ರಾಜೂ ಸಹ ಅದನ್ನೇ ಮಾಡಿದ್ದಾರೆ. ಇಲ್ಲಿಯೇ ಕಾಡುವ ದನಿಯನ್ನು ಬಿಟ್ಟು ಬರೀ ಕಂಠವನ್ನು ಹೊತ್ತು ಹೋಗಿದ್ದಾರೆ.

ರಾಜುವನ್ನು ಹಾಡುಗಳು ಹೇಗೆ ಕಾಡಿತ್ತೋ ಅಷ್ಟೇ ಕುಡಿತವೂ ಕಾಡಿತ್ತು ಎಂಬುದು ಸುಳ್ಳಲ್ಲ. ಹಲವು ಬಾರಿ ಅದರ ದುಷ್ಪರಿಣಾಮದ ಬಗ್ಗೆ ಎಚ್ಚರಿಸಿದ್ದರೂ ರಾಜು ಏಕೆ ಎಚ್ಚೆತ್ತುಕೊಳ್ಳಲಿಲ್ಲ ಎಂಬುದು ಇನ್ನೂ ಅರ್ಥವಾಗುವುದಿಲ್ಲ. ನಿಜ, ಕಳೆದು ಹೋದ ಹಾಡು ಎಲ್ಲೋ ಒಂದು ಕಡೆ ಮತ್ತೆ ಸಿಕ್ಕಿ ಬಿಟ್ಟರೆ ಆಗುವ ಖುಷಿ ಎಷ್ಟೆಂದರೆ ಬಣ್ಣಿಸಲಾಗದಷ್ಟು. ಆದರೆ ಹಾಗೆ ಸಿಕ್ಕ ಹಾಡು ಮತ್ತೆ ಕಳೆದುಹೋದರೆ ಆಗುವ ದುಃಖ ಸಿಕ್ಕ ಸಂತೋಷಕ್ಕಿಂತ ಹತ್ತು ಪಟ್ಟು. ಅಂಥದೇ ದುಃಖ ಇವತ್ತು ಮತ್ತೆ ನಮ್ಮನ್ನು ವ್ಯಾಪಿಸಿಕೊಂಡಿದೆ.

ನನಗೆ ರಾಜು ಅನಂತಸ್ವಾಮಿ ಏಕೆ ಇಷ್ಟವಾಗಿದ್ದರು ಎಂದರೆ ಅತ್ಯಂತ ಸಣ್ಣ ಸಂಗತಿಗೆ. ಅವರ ಧ್ವನಿಯಲ್ಲಿ ಕಾಡುತ್ತಿದ್ದ ಅದೇ ಮುರಳಿಯ ಮಾದಕತೆ, ಅದರಲ್ಲೂ ಅವರಪ್ಪನ ಧ್ವನಿಯ ಮಾರ್ದವತೆ. ನಾನು ಭಾವಗೀತೆಗಳನ್ನು ಕೇಳಲು ಶುರು ಮಾಡಿದಾಗ ಮೊದಲು ಪ್ರಭಾವಿಸಿದ್ದು ಮೈಸೂರು ಅನಂತಸ್ವಾಮಿಯವರೇ. ಅವರ ಹತ್ತು ಹಲವು ಗೀತೆಗಳು ನನ್ನೊಳಗೇ ಸೇರಿಕೊಂಡಿವೆ. ಆಗಾಗ್ಗೆ ಅವುಗಳನ್ನು ಗುನುಗಿಕೊಳ್ಳುತ್ತಲೇ ಕಳೆದುಹೋಗುತ್ತೇನೆ.

ಆದರೆ ಒಂದೂ ಅನಂತಸ್ವಾಮಿಯವರ ಲೈವ್ ಕಚೇರಿ ಕೇಳಿರಲಿಲ್ಲ. ಬಹುಶಃ ನಾನು ಇಂಥದೊಂದು (ಸಂಗೀತ ಕಾರ್ಯಕ್ರಮ ಕೇಳುವ) ಹವ್ಯಾಸವನ್ನು ರೂಢಿಸಿಕೊಳ್ಳುವಾಗ ಅನಂತಸ್ವಾಮಿಯವರ ಕಾರ್ಯಕ್ರಮ ವಿರಳವಾಗಿತ್ತು. ಆದರೆ ಧ್ವನಿಸುರುಳಿಗಳಲ್ಲಿ ಸಿಗುತ್ತಿದ್ದರೇನೋ ಹೌದು. ಹೀಗೆ ಕಳೆದು ಹೋದ ಹಾಡು ಮತ್ತೆ ನನಗೆ ಸಿಕ್ಕಿದ್ದು ರಾಜು ಅನಂತಸ್ವಾಮಿ ಮೂಲಕ.

ನನಗೆ ನೆನಪಿದೆ. ರಾಜು, ಯಾವಾಗಲೂ ತಣ್ಣಗಿನ ವ್ಯಕ್ತಿ. ವಾಸ್ತವವಾಗಿ ನನಗೆ, ಅವರ ವ್ಯಕ್ತಿ ಹಿನ್ನೆಲೆ-ಸ್ವಭಾವ-ಗುಣಗಳೆಲ್ಲದರ ಬಗ್ಗೆ ಹೆಚ್ಚು ವಿವರಗಳು ನನ್ನಲ್ಲಿಲ್ಲ ; ಅಂಥದೊಂದು ಆಸಕ್ತಿಯೂ ಬೆಳೆದಿರಲಿಲ್ಲ. ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಹಲವು ಕಾರ್ಯಕ್ರಮಗಳಿಗೆ ಹೋಗಿದ್ದೆ, ಹಾಡು ಕೇಳಿ ಖುಷಿಯಾಗಿ ಬಂದಿದ್ದೆ.

ಕಳೆದು ಹೋದ ಹಾಡು ಸಿಕ್ಕ ಸಂಭ್ರಮದಿಂದ ಖುಷಿಯಾಗಿದ್ದೆ. ಅವರ ಪ್ರಯೋಗ ಶೀಲತೆ ಖುಷಿಕೊಟ್ಟಿತ್ತು. ಬದುಕಿನ ಹಾದಿಯನ್ನೇ ಚಿಕ್ಕದಾಗಿಸಿಕೊಂಡು, ಅದರೊಳಗೆ ಒಂದಿಷ್ಟು ಏನಾದರೂ ಮಾಡಿ ಹೊರಡಬೇಕೆಂದು ರಾಜು ಮೊದಲೇ ನಿರ್ಧರಿಸಿದ್ದರೋ ಏನೋ? ಅರ್ಥವಾಗದ ಸಂಗತಿ.

ಸುಗಮ ಸಂಗೀತದಲ್ಲೇ ಬೆಳೆಯಲು ನಿರ್ಧರಿಸಿ, ಸಂಗೀತ ಶಾಲೆಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ರೂಪಿಸತೊಡಗಿದರು. ಜತೆಗೆ ನಟನೆ, ಸಾಕ್ಷ್ಯ ಚಿತ್ರಗಳ ನಿರ್ದೇಶನದಲ್ಲೆಲ್ಲಾ ತೊಡಗಿಸಿಕೊಂಡರು. ಎಲ್ಲದರಲ್ಲೂ ಅವರ ಉತ್ಸಾಹ ಎದ್ದು ಕಾಣುತ್ತಿತ್ತು. ಒಂದು ಹಂತದಲ್ಲಿ ಹೇಳುವುದಾದರೆ ರಾಜು ನಿಜವಾಗಿಯೂ ಹಾಡೇ. ಅವರಲ್ಲಿ ಕಾಣುತ್ತಿದ್ದ ಉತ್ಸಾಹ-ಉಲ್ಲಾಸ ಸಹ ಒಂದು ಗೀತೆಯೊಳಗಿನದ್ದೇ.

ರಾಜು ಕುಡಿತವನ್ನು ಬಿಟ್ಟಿದ್ದರೆ ಎನ್ನುವುದಕ್ಕಿಂತ ಕುಡಿತವೇ ರಾಜು ಅವರನ್ನು ಬಿಟ್ಟಿದ್ದರೆ ನಮಗಿನ್ನೂ ಅವರು ಜೀವದನಿಯಾಗಿಯೇ ಉಳಿಯುತ್ತಿದ್ದರು. ನನಗೆ ಇನ್ನೊಂದು ಅರ್ಥವಾಗದ ಸಂಗತಿಯೆಂದರೆ ಯಾರು ಯಾರ ಮೋಹಕ್ಕೆ ಬಿದ್ದರು ಎಂಬುದು.

ಕುಡಿತ ಬಹುತೇಕ ಗಾಯಕರನ್ನು, ನಟರನ್ನು, ಸೆಲಬ್ರಿಟಿಗಳನ್ನು ಅಂಟಿಕೊಂಡೇ ಇದೆ. ಆದರೆ ಕೆಲವರನ್ನೂ ಬಿಟ್ಟೂ ಹೋಗಿದೆ. ಕೆಲವರು ಅದನ್ನು ಬಿಟ್ಟು ಬದುಕಿದ್ದಾರೆ. ರಾಜು ಕುಡಿತದ ಮೋಹಕ್ಕೆ ಬಿದ್ದರೋ? ಕುಡಿತವೇ ರಾಜುವಿನ ಮೋಹಕ್ಕೆ ಒಳಗಾಯಿತೋ ? ಗೊತ್ತಾಗುತ್ತಿಲ್ಲ. ಕೊನೆಗೂ ಗೆದ್ದವನ ಅಟ್ಟಹಾಸ ಕಂಡರೆ ಕುಡಿತವೇ ರಾಜುವಿನ ಮೋಹಕ್ಕೆ ಒಳಗಾಗಿ ಸೆಳೆದೊಯ್ದಿದೆ.

ಕಾರಣವಿಷ್ಟೇ. ಕುಡಿತವನ್ನು ಬಿಡಿಸಲು ಪಟ್ಟವರು ಎಷ್ಟೊಂದು ಮಂದಿ ? ಎಷ್ಟೊಂದು ವಿಧಾನ?. ಹಾಗೆಯೇ ರಾಜೂ ಸಹ ಗೆಳೆಯರ ಕಟ್ಟಿಗೆ ಬಿದ್ದು ಒಪ್ಪಿಕೊಂಡು ಬಿಟ್ಟದ್ದು ಎಷ್ಟು ಬಾರಿ ? ಹಾಗೆಯೇ ಮತ್ತೆ ಅದೇ ಹಿಡಿದದ್ದು ಎಷ್ಟು ಬಾರಿ ? ಎಲ್ಲವೂ ಕ್ಷಣಗಳ ನೆಲೆಯಲ್ಲಿ ಎನಿಸುತ್ತದೆ. ಅವು ಹಲವು ಕ್ಷಣಗಳಾಗಿದ್ದೇ ಕಡಿಮೆ. ಅದಕ್ಕೇ ಬಹಳ ವ್ಯಾಕುಲಗೊಳ್ಳುತ್ತದೆ ಮನಸ್ಸು, ಸಿಕ್ಕ ದನಿ ಗಾಳಿಯೊಳಗೆ ನಮಗೆ ಗೊತ್ತಿಲ್ಲದೇ ಲೀನವಾಗಿ ಹೋದದ್ದಕ್ಕೆ ಬಹಳ ಬೇಸರಗೊಳ್ಳುತ್ತದೆ.

ಅವರನ್ನು ಯಾವ ನೋವು ಕಾಡುತ್ತಿತ್ತೋ ನಮಗೂ ಗೊತ್ತಿಲ್ಲ. ಅವರೆಂದೂ ಅವರ ನೋವನ್ನು ಎಲ್ಲೂ ಹಂಚಿಕೊಂಡಿಲ್ಲ ; ನಲಿವನ್ನು ಹಂಚಿಕೊಂಡಿದ್ದಾರೆ. ಸದಾ ನಗುವವನ ಹಿಂದೆ ಕಾಡುವ ದುಃಖ ಅಗಾಧವಂತೆ. ಅಂಥ ದುಃಖವನ್ನು ಮರೆಯಲು ಅವರು ಆ ಹಾದಿ ಹಿಡಿದರೋ ನಮಗೂ ಗೊತ್ತಿಲ್ಲ. ಒಂದಷ್ಟು ಮಂದಿ ಗೆಳೆಯರು ಸರಿಹಾದಿಗೆ ತರಲು ಯತ್ನಿಸಿದರು. ಮತ್ತೊಂದಿಷ್ಟು ಮಂದಿ ತಮ್ಮ ಹಾದಿಗೇ ಕರೆದೊಯ್ದರು. ವಿಪರ್ಯಾಸವೆಂದರೆ…ಅವರು ನಡೆಯುವುದ ನಿಲ್ಲಿಸಲಿಲ್ಲ ; ರಾಜು ಮಾತ್ರ ಎಲ್ಲೂ ತೋರುತ್ತಿಲ್ಲ !

ಎಂಥ ದ್ವಂದ್ವ ನೋಡಿ. ಎದುರು ರಾಜು ಹಾಡುತ್ತಿರುವಾಗ ನಾನು ಕಣ್ಣು ಮುಚ್ಚಿ ಹಾಡನ್ನಷ್ಟೇ ಸವಿಯುತ್ತಿದ್ದೆ. ಆ ದನಿ ನನ್ನೊಳಗೆ ತುಂಬಿಕೊಳ್ಳಬೇಕಿತ್ತು. ಆ ಧ್ಯಾನಕ್ರಿಯೆಗೆ ಕಣ್ಣುಗಳು ಅಡ್ಡಿಯಾಗಬಹುದೆಂದು ಕಣ್ಣುಮುಚ್ಚುತ್ತಿದ್ದೆ. ಈಗ ಆ ದನಿ ನನ್ನೊಳಗೇನೋ ತುಂಬಿದೆ. ಈಗ ಅದನ್ನು ಹೊರತೆಗೆದು ಜೀವ ತುಂಬುವ ಕಂಠ ಬೇಕಿದೆ. ಆದರೆ ಅದು ಕರಗಿ ಹೋಗಿದೆ.

ಸದಾ ಹಾಸ್ಯದಿಂದಲೇ ಮಲ್ಲಿಗೆ ಅರಳಿಸುತ್ತಿದ್ದ ರಾಜು, ರಾಜರತ್ನಂ ಹಾಡುಗಳನ್ನೆ ಬಹಳ ಚೆನ್ನಾಗಿ ಹಾಡುತ್ತಿದ್ದರು ; ಆ ಮೂಲಕ ಕಾಡುತ್ತಿದ್ದರು. ವಿಷಾದ, ಇತ್ತ ಅತ್ತು ಹಗುರಾಗಲೂ ಬಿಡುವುದಿಲ್ಲ ; ಅತ್ತ ಮರೆತು ನಗುವ ತರಿಸಿಕೊಳ್ಳಲು ಬಿಡುವುದಿಲ್ಲ. ಗಂಟಲಲ್ಲೇ ಉಳಿದು ಬಿಡುತ್ತದೆ. ರಾಜು, ಅಂಥದೊಂದು ವಿಷಾದದ ಗೀತೆ, ಕಾಡುತ್ತಲೇ ಇರುವಂಥದ್ದು.
***

*ಖ್ಯಾತ ಗಾಯಕ ರಾಜು ಅನಂತಸ್ವಾಮಿ ನಿಧನ
*ಯಾವ ಮೋಹನ ಮುರಲಿ ಕರೆಯಿತೋ...:ತುಂತುರು ಹನಿಗಳು: ಶ್ರೀನಿಧಿ ಡಿ.ಎಸ್
*ಪ್ರೀತಿ ಅರಳುವುದು ಎಲ್ಲಿಂದ? ಹಾಡುತ್ತಲೇ ... : ನಾವು ನಮ್ಮಲ್ಲಿ
*ಅನಂತಾನಂತ ನಮನ : ನಿರಚಿತ
*ಹೊತ್ತಲ್ಲದ ಹೊತ್ತಿನಲ್ಲಿ...... ಅನಂತ ನಮನ : ರಾಧಾಕೃಷ್ಣ ಸುಪ್ರೀತಿ
*ಯಾವ ಮೋಹನ ಮುರಳಿ ಕರೆಯಿತೋ: ಭಗೀವನ, ಮಹೇಶ್ ಭಗೀರಥ
*ಕೋಗಿಲೆ ಇನ್ಮೇಲೆ ಹಾಡೋದಿಲ್ಲ ; ಸೋಮಾರಿ ಕಟ್ಟೆ,ಶಂಕರ ಪ್ರಸಾದ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X