ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಂಬಾಬ್ವೆಯ ಶೌಚಾರ್ಥಶಾಸ್ತ್ರ!

By Staff
|
Google Oneindia Kannada News

Flushing Money Down the Toilet
ಆರ್ಥಿಕ ಹಿಂಜರಿತದಿಂದಾಗಿ ಜಗತ್ತಿಗೆ ಜಗತ್ತೇ ನಲುಗಿ ಹೋಗಿದೆ. ದೊಡ್ಡಣ್ಣ ಮೂಲೆಯಲ್ಲಿ ಮುದುರಿಬಿದ್ದ ಪೇಪರಿನಂತಾಗಿದ್ದರೆ, ಭಾರತ ಸಂಕಷ್ಟದಿಂದ ಹೊರಬರಲು ರಿಸರ್ವ ಬ್ಯಾಂಕ್ ಸಹಾಯದಿಂದ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಆದರೆ, ಜಿಂಬಾಬ್ವೆಯ ಕಥೆಯೇ ಬೇರೆ. ಅಲ್ಲಿನ ಹಣದುಬ್ಬರ ಪೌಲ್ ವಾಲ್ಟ್ ಮಾಡಿದೆ. ಬೆಲೆಗಳು ಯಾವ ಪ್ರಮಾಣದಲ್ಲಿ ಏರಿವೆಯೆಂದರೆ, ಟಾಯ್ಲೆಟ್ ನಲ್ಲಿ ಡಾಲರನ್ನು ಬಳಸಬೇಡಿ ಟಾಯ್ಲೆಟ್ ಪೇಪರನ್ನೇ ಬಳಸಿ ಎಂಬಂಥ ಜಾಹೀರಾತುಗಳನ್ನು ಮುಗಾಬೆ ಸರ್ಕಾರ ನೀಡಲಾರಂಭಿಸಿದೆ!

* ನವರತ್ನ ಸುಧೀರ್, ಬೆಂಗಳೂರು

(ನ್ಯೂಯಾರ್ಕ್ ಟೈಮ್ಸ್ , ಫ್ರೀಕನಾಮಿಕ್ಸ್ ಮತ್ತಿತರ ಮೂಲಗಳಿಂದ)

ಹಲವು ತಿಂಗಳ ಹಿಂದೆ ಭಾರತದ ಹಣದುಬ್ಬರ (ಇನ್‍ಫ್ಲೇಷನ್ ರೇಟ್) ಹನ್ನೊಂದು ಪರ್ಸೆಂಟ್ ದಾಟಿದಾಗಲೇ ಸರ್ಕಾರ, ರಿಸರ್ವ್ ಬ್ಯಾಂಕ್ ಮೊದಲ್ಗೊಂಡು ಎಲ್ಲರೂ ಬಹಳ ಚಿಂತಿತರಾಗಿ ಇದನ್ನು ಹತೋಟಿಗೆ ತರಲು ಅನೇಕ ಉಪಾಯಗಳನ್ನು ರೂಪಿಸಲಾಯಿತು. ಇವೆಲ್ಲದರ ಫಲಸ್ವರೂಪ ಹಣದುಬ್ಬರ ಈಗ ಏಳು ಪರ್ಸೆಂಟ್‍ಗಿಂತ ಕಡಿಮೆಯಾಗಿದೆ.

ಆದರೆ ಇಲ್ಲಿದೆ ಮತ್ತೊಂದು ದೇಶ. ಹಿಂದೆ ಮುಂದೆ ಯೋಚಿಸದೆ ಹಿಗ್ಗಾಮುಗ್ಗಾ ಕರೆನ್ಸಿ ನೋಟ್‍ಗಳನ್ನು ಪ್ರಿಂಟ್ ಮಾಡುತ್ತ , ರಾಬರ್ಟ್ ಮುಗಾಬೆ ನೇತೃತ್ವದಲ್ಲಿನ ಜಿಂಬಾಬ್ವೆ ಹಣದುಬ್ಬರದ ವಿಷಯದಲ್ಲಿ ವಿಶ್ವದಾಖಲೆ ಸ್ಥಾಪಿಸಿದೆ. ಕಳೆದ ಅಕ್ಟೊಬರ್ ತಿಂಗಳಿನಲ್ಲಿ ಇಲ್ಲಿನ ಹಣದುಬ್ಬರ ಕೇವಲ 231 ಮಿಲಿಯನ್ ಪರ್ಸೆಂಟ್ ತಲುಪಿದೆಯಂತೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಹಣದುಬ್ಬರ 165,000 ಪರ್ಸೆಂಟ್ ಇದ್ದು, ಮಾರ್ಚ್ ವೇಳೆಗೆ 355000 ಪರ್ಸೆಂಟ್ ತಲುಪಿತ್ತು.

ಮಾರ್ಚ್ ತಿಂಗಳಿನಲ್ಲಿ ವಿಕ್ಟೊರಿಯಾ ಫಾಲ್ಸ್ ಹೋಟೆಲ್‍ನಲ್ಲಿ ಸ್ನೇಹಿತನೊಂದಿಗೆ ಊಟಕ್ಕೆ ಹೋದವರ ಬಿಲ್ ಕೆಳಗಿದೆ ನೋಡಿ.
ಎರಡು ಬಿಯರ್, ಒಂದು ಮಿನರಲ್ ವಾಟರ್, ಮತ್ತು ಒಂದು ಊಟದ ಬೆಲೆ ಕೇವಲ 1.25 ಮಿಲಿಯನ್ ಜಿಂಬಾಬ್ವೆ ಡಾಲರ್‍ಗಳು.
(courtesy : Freakonomics blog at NYT)

ಮೇ ತಿಂಗಳಿನಲ್ಲಿ ಜಿಂಬಾಬ್ವೆಯ ರಿಸರ್ವ್ ಬ್ಯಾಂಕ್ 500 ಮಿಲಿಯನ್ ಡಾಲರ್ ನೋಟನ್ನು ಬಿಡುಗಡೆ ಮಾಡಿತು. ಇದಕ್ಕೆ 'Expiry date' ಬೇರೆ ಇದೆ. ಈ ನೋಟು 31st December 2008 ವರೆಗೆ ಮಾತ್ರ . ಆಮೇಲೆ ಇದಕ್ಕೆ ಯಾವ ಬೆಲೆಯೂ ಇಲ್ಲ. ಇತ್ತೀಚಿನ ವರದಿಯ ಪ್ರಕಾರ, 100 ಬಿಲಿಯನ್ ಜಿಂಬಾಬ್ವೆ ಡಾಲರ್ ನೋಟು ಅನಾವರಣಗೊಂಡಿದೆ.

ಇನ್ನೂ ಸ್ವಾರಸ್ಯದ ಸುದ್ದಿ ಎಂದರೆ ಅಲ್ಲಿಯ 1000 ಜಿಂಬಾಬ್ವೆ ಡಾಲರ್‍ ನೋಟಿನ ಬೆಲೆ ಎಷ್ಟು ಎನ್ನುವುದಕ್ಕೆ ದೃಷ್ಟಾಂತ, ಅಲ್ಲಿನ ಟಾಯ್ಲೆಟ್‍ಗಳಲ್ಲಿ ಹಾಕಿರುವ ಕೆಳಗಿನ ನೋಟಿಸ್.

(Courtesy: Eugene Baron – Freakonomics Blogs –NYT)

ಈ “ಶೌಚಾರ್ಥ ಶಾಸ್ತ್ರ"ದ ಗುಟ್ಟು ಹೀಗಿದೆ. ಅಲ್ಲಿನ ಒಂದು ಟಾಯ್ಲೆಟ್ ಪೇಪರ್ ರೋಲಿನ ಬೆಲೆ 1.5 ಅಮೇರಿಕನ್ ಡಾಲರ್‍ಗಳು. ಒಂದು ರೋಲಿನಲ್ಲಿ ಸುಮಾರು 352 ಹಾಳೆಗಳಿರುತ್ತವೆ. ಅಂದರೆ ಒಂದು ಹಾಳೆಯ ಬೆಲೆ ಸುಮಾರು 0.004 ಅಮೇರಿಕನ್ ಡಾಲರ್ ಅಥವಾ 3600 ಜಿಂಬಾಬ್ವೆ ಡಾಲರ್‍ಗಳು. ಇದರರ್ಥ ಒಂದು ಟಾಯ್ಲೆಟ್ ಪೇಪರ್ ಹಾಳೆ ಖರೀದಿಸಲು ಮೂರು 1000 ಜಿಂಬಾಬ್ವೆ ಡಾಲರ್ ಮತ್ತು ಆರು 100 ಜಿಂಬಾಬ್ವೆ ಡಾಲರ್‍ಗಳನ್ನು ಕೊಡಬೇಕಾಗುತ್ತೆ. ಪರಿಸ್ಥಿತಿ ಹೀಗಿದ್ದಾಗ, ಅಲ್ಲಿಯ ಜನ 1000 ಡಾಲರ್ ನೋಟುಗಳನ್ನು ಅಥವಾ ಬಟ್ಟೆ, ದಿನಪತ್ರಿಕೆ, ರಟ್ಟು ಇತರ ಸಾಮಗ್ರಿಗಳನ್ನು ಟಾಯ್ಲೆಟ್‍ಗಳಲ್ಲಿ ಬಳಸುವುದರಲ್ಲಿ ಆಶ್ಚರ್ಯವೇನು? "Flushing Money down the Toilet" ಹೇಳಿಕೆ ಬಹಳ ಅರ್ಥಪೂರ್ಣ ಅನ್ನಿಸೋಲ್ವೆ?

ಹೀಗೆಲ್ಲ ಇದ್ದರೂ, ರಾಬರ್ಟ್ ಮುಗಾಬೆ ದೇಶದ ಮೇಲಿನ ತನ್ನ ಕಪಿಮುಷ್ಠಿ ಸಡಿಲಿಸಿಲ್ಲ. ಜಿಂಬಾಬ್ವೆ ರಿಸರ್ವ್ ಬ್ಯಾಂಕ್ ಪ್ರಕಾರ “ಅಫಿಷಿಯಲ್" ಎಕ್ಸ್‍ಚೇಂಜ್ ರೇಟ್ - 1 ಅಮೇರಿಕನ್ ಡಾಲರ್ = 180 ಜಿಂಬಾಬ್ವೆ ಡಾಲರ್. ಆದರೆ ಇಂದಿನ ಅಂತರಾಷ್ಟ್ರೀಯ ಬ್ಯಾಂಕ್ ದರ 2 ಮಿಲಿಯನ್ ಜಿಂಬಾಬ್ವೆ ಡಾಲರ್‍ಗಳು.

ಜೈ ಜಿಂಬಾಬ್ವೆ!

ಮತ್ತೊಂದು ಸ್ವಾರಸ್ಯಕರ ಸುದ್ದಿ

ನೀವು ನಾಯಿ ಸಾಕಿದ್ದೀರಾ? ಹಾಗಿದ್ದರೆ ಓದಿ

ಇದನ್ನೂ ಓದಿ

ಬಸವನಗುಡಿ ರಸ್ತೆಯಲ್ಲಿ ರಕ್ತಪಾತ!ಬಸವನಗುಡಿ ರಸ್ತೆಯಲ್ಲಿ ರಕ್ತಪಾತ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X