ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವೇನ ಹೇಳ್ರಿ ಧಾರವಾಡದ ಮಂದಿನ ಮಂದಿ

By * ರಘೋತ್ತಮ್ ಕೊಪ್ಪರ್, ಬೆಂಗಳೂರು
|
Google Oneindia Kannada News

Raghu Koppar, Dharwad
ಹಳ್ಳೀ ಕಡೆ ಅದ್ರಾಗೂ ನಮ್ ಧಾರವಾಡ ಕಡೆ ಆಡೋ ಮಾತನ್ನ ಕೇಳೋ ಮಜಾನ ಬ್ಯಾರೆ. ವಿಷಯ ಗಂಭೀರ ಇರ್ಲಿ ಬಿಡ್ಲಿ, ಹಿಂದಮುಂದ ಯಾರಿದ್ರೂ ದರಕಾರ ಮಾಡ್ದ ಹಿರಿಯರಿಬ್ಬರು, 'ಏ ನಮ್ ಕಾಲ್ದಾಗ ಹಿಂಗಿರ್ಲಿಲ್ಲ ಬಿಡ್ರಿ' ಅಂತ ಹೊಡ್ಯೋ ಹರಟಿ ಅದ ಅಲ್ಲ, ಅದು ಡ್ಯಾಮಿನ್ಯಾಗಿಂದ ಬಿಟ್ಟ ನೀರಿನ್ಹಂಗ. ತಮ್ಮ ಕಾಲದಾಗಿನ ಮೌಲ್ಯಗಳ ಬಗ್ಗೆ ಅಭಿಮಾನನೂ ಇರ್ತದ, ಈಗಿನ ಹುಡುಗರಿಗೆ ಪಾಠಾನೂ ಇರ್ತದ. ಇವ್ರೇನ್ ಮಾತಾಡ್ತಾರ ಅಂತ ತಗದಹಾಕಂಗಿಲ್ಲ.

ನಾವು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಿನಗಳವು. ಗದುಗಿನಿಂದ ಹುಬ್ಬಳ್ಳಿಗೆ ಪುಶ್ ಪುಲ್ ರೈಲಿನಲ್ಲಿ ಪಯಣಿಸುತ್ತಿರುವಾಗ ಹತ್ತು ಹಲವು ಸಂಗತಿಗಳು ನಡೆಯುತ್ತಿದ್ದವು. ವಿವಿಧ ವಿಷಯಗಳ ಬಗ್ಗೆ ಚರ್ಚೆ, ಕ್ರಿಕೆಟ್ ಮತ್ತು ಇನ್ನಿತರ ಪಂದ್ಯಗಳ ಬಗ್ಗೆ ಮಾತು, ರಾಜಕೀಯ ವಿದ್ಯಮಾನಗಳ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇರುತ್ತಿದ್ದವು. ಆಗ ನಮ್ಮದೊಂದು ದೊಡ್ಡ ಗುಂಪೇ ಇತ್ತು. ಪ್ರತಿ ದಿನ ಮೋಜು ಮಾಡುತ್ತ, ಅವರಿವರ ಬಗ್ಗೆ ಮಾತನಾಡುತ್ತ ಕಾಲಕಳೆಯುತ್ತಿದ್ದೆವು. ಒಂದು ದಿನ ನಮ್ಮ ಗುಂಪಿನವರು ತಡವಾಗಿ ರೈಲು ಹತ್ತಿದ್ದರಿಂದ ಇಬ್ಬರು ವೃದ್ಧರು ನಮ್ಮ ಪಕ್ಕದಲ್ಲಿ ಬಂದು ಕುಳಿತರು.

ಇಬ್ಬರು ದಿನಪತ್ರಿಕೆಯನ್ನು ಓದುತ್ತಾ ರಾಜಕೀಯದ ಬಗ್ಗೆ ಚರ್ಚೆ ಮಾಡತೊಡಗಿದರು. ಆಗ ನಾವು ನಮ್ಮದೇ ಆದ ಅರ್ಥವಿಲ್ಲದ ವಿಷಯಗಳಲ್ಲಿ ಹರಟೆ ಹೊಡೆಯತೊಡಗಿದೆವು. ಎಲ್ಲರೂ ಯುವಕರೇ ನಮ್ಮ ಗುಂಪಿನಲ್ಲಿ, ಒಂದಿಬ್ಬರು ದೊಡ್ಡವರು ಮತ್ತು ಅಣ್ಣಿಗೇರಿಯ ಗೌಡರೂ ನಮ್ಮ ಗುಂಪಿನಲೊಬ್ಬರು. ಅವರು ಮೇಸ್ತ್ರಿಯಾಗಿದ್ದಾರೆ. ಆದರೆ ಅವರ ಪೇಟಾ ಮತ್ತು ಅವರು ಅಣ್ಣಿಗೇರಿ ಸ್ಟೇಶನ್‌ನಿಂದ ಹತ್ತುತ್ತಿದ್ದರಿಂದ ಅವರಿಗೆ ಪ್ರೀತಿಯಿಂದ "ಅಣ್ಣಿಗೇರಿ ಗೌಡ್ರು" ಅಂತ ಕರೆಯುತ್ತಿದ್ದೆವು. ಹಾಗೆಯೇ ನಾವು ನಮ್ಮ ಹರಟೆಯಲ್ಲಿ ಮಗ್ನರಾಗಿದ್ದಾಗ ಈ ವೃದ್ಧರಿಬ್ಬರ ವಾದ ಬಿರುಸಾಗಿ ನಡೆದಿತ್ತು. ನಾವು ಅದೇನು ಅಂತ ಕಿವಿಗೊಟ್ಟೆವು. ಅವರಿಬ್ಬರ ಮಾತುಗಳನ್ನು ಧಾರವಾಡ ಭಾಷೆಯಲ್ಲಿ ಕೇಳಿದರೆ ಅದರ ಮಜಾವನ್ನು ಅನುಭವಿಸಬಹುದು. ಅವರಿಬ್ಬರ ಹೆಸರು ನಮಗೆ ಗೊತ್ತಾಗಲಿಲ್ಲ. ಅದಕ್ಕೆ ರಾಮು ಮತ್ತು ಶಾಮು ಅಂತ ಕರೆದಿದ್ದೇನೆ.

ಅವರಿಬ್ಬರ ಸಂಭಾಷಣೆ ಹೀಗಿತ್ತು.

ರಾಮು= ಇತ್ತಿತ್ತಲಾಗ್ ನಾಟಕಾ ನೋಡೊ ಮಂದಿ ಕಡಿಮಿ ಆಗ್ಯಾರ್ ನೋಡು. ಟಿವಿನ್ಯಾಗ್ ನೂರಾಎಂಟು ಚಾನೆಲ್ ಬಂದು ಎಲ್ಲಾರನೂ ಮನಿ ಬಿಟ್ ಹೊರಗ ಬರದಂಗ ಮಾಡ್ಯಾವು.
ಶಾಮು= ಖರೇನ ಹೇಳಿದಿ ನೋಡು. ಆದರ ನಾಟಕಾ ತನ್ನ ಮರ್‍ಯಾದಿ ಕಳಕೊಂಡಿಲ್ಲ, ಅದಕ ಸಿಗೊ ಗೌರವ ಬ್ಯಾರೆ.
ರಾಮು= ಈಗಿನ ಕಾಲದ ಹುಡುಗುರ್‍ನ ನೋಡು, ಯಾರಾದ್ರು ನಾಟಕಾ ನೋಡುಣ ನಡಿ ಅಂತಾರನು, ಉಹುಂ... ಇಲ್ಲ, ಬರಿ ಸಿನಿಮಾ ಇಲ್ಲ ಅಂದ್ರ ಹರಟಿ ಹೊಡದು ಟೈಂ ಪಾಸ್ ಮಾಡವ್ರ ಜಾಸ್ತಿ ಮಾರಾಯಾ.
ಶಾಮು= ಯಾಕ ಅಂಥಾ ಹುಡುಗುರು ಇಲ್ಲ ಅಂತ ಅನ್ಕೊಂಡಿಯೇನು? ನಿನಗ ಗೊತ್ತಿದ್ದ ಹುಡುಗುರು ಅಂಥವರ ಯಾರು ಇಲ್ಲ ಅಂತ ಕಾಣಸ್ತದ ಅದಕಾ ಹಂಗ ಅನಿಶ್ಯದ ನಿನಗ.
ರಾಮು= ಇರ್‍ಲಿ ಆದರ ಎಲ್ಲಾರೂ ಕೂಡಿ ಸಿನಿಮಾಕ್ಕ ಹೋದಂಗ ನಾಟಕಾ ನೋಡಲಿಕ್ಕೆ ಹೋಗ್ತಾರನು ಹೇಳು ?
ಶಾಮು= ಅಲ್ಲೊ ನಮ್ ಕಾಲದಾಗ ನಾಟಕಾ ಬಿಟ್ಟರ ಬ್ಯಾರೆ ಮನರಂಜನಿ ಎಲ್ಲಿ ಇದ್ದವು. ಜಾತ್ರಿ ಮಾಡಿ ನಾಟಕಾ ನೋಡಿದ್ರ ಒಂದು ವರ್ಷದ ಮಜಾ ಅನುಭವಿಸಿದಂಗ ಅಲ್ಲನು.
ರಾಮು= ಈಗ ಹೆಚ್ಚಾಗಿ ಹವ್ಯಾಸಿ ನಾಟಕ ತಂಡಗಳು ಪ್ರದರ್ಶನ ನೀಡಲಿಕತ್ತಾವು. ನಾಟಕ ನೋಡವ್ರು ಭಾಳ ಅದಾರ, ಆದರ ಕೆಲಸದ ನಡುವ ಅವರಿಗೆಲ್ಲಾ ನೋಡಲಿಕ್ಕೆ ಎಲ್ಲಾಗತದೊ. ರವಿವಾರ ಇದ್ದರ ನೋಡತಾರ, ಬ್ಯಾರೆ ದಿನ ಹೆಂಗ್ ನೋಡಲಿಕ್ಕೆ ಆಗ್ತದ ಹೇಳು.
ಶಾಮು= ಹುಂ....ಹೌದು ಆದ್ರ ಸಿನಿಮಾ ಮತ್ತ ಸಿರಿಯಲ್‌ನಾಗ ಇದ್ದಂಗ ರೊಕ್ಕಾ ಮತ್ತು ಪಬ್ಲಿಸಿಟಿ ನಾಟಕದಾಗ್ ಇಲ್ಲ ನೋಡು.
ರಾಮು= ಹಂಗ್ ಅನಬೇಡಾ ಭಾಳ ಜನ ನಾಟಕ ಆಡಿ ಚುಲೊ ಹೆಸರು ತುಗೊಂಡಾರ, ಅವರೆಲ್ಲ ರೊಕ್ಕ ಬೇಕು ಅಂತ ಮಾಡ್ಲಿಲ್ಲ, ಅದು ಕಲೆ. ಈಗ ಕಾಲ ಬದಲಾಗ್ಯದ, ಹೊಸಾದು ಬಂದಂಗ ಹಳೇದು ಮರಿತಾರ ಎಲ್ಲಾರು. ಡಾ.ರಾಜ್ ಕುಮಾರ್, ವಜ್ರಮುನಿ, ಧೀರೇಂದ್ರ ಗೋಪಾಲ್ ಇವರೆಲ್ಲಾ ರಂಗಭೂಮಿಯಿಂದ ಬಂದವರು ಅಲ್ಲನು. ಕಲೆ ಅವರಿಗೆ ಒಲಿದಿತ್ತು. ಎಂಥಾ ಪಾತ್ರಾ ಕೊಟ್ರು ಮಾಡ್ತಿದ್ರು ಇವರೆಲ್ಲಾ.
ಶಾಮು=ಹೌದು ಅದು ಒಪ್ಪತಿನಿ, ಭಾಳ ಜನ ರೊಕ್ಕಾ ಮಾಡಕೊಳಿಲ್ಲಾ, ಆದರ ಪಾತ್ರ ಮಾಡಿ ಹೆಸರು ಗಳಿಸಿದರು. ಖರೇ....ಖರೇ....ಅವರ ಅಭಿನಯನ ಮೆಚ್ಚಬೇಕಾದ್ದು ನೋಡಪಾ... ಭಾರಿ ಪಾತ್ರ ಮಾಡಿದ್ರು...

ಅಷ್ಟರಲ್ಲಿ ಅಣ್ಣಿಗೇರಿ ಎಂಬ ಸ್ಟೇಶನ್ ಬಂತು. ಅಲ್ಲಿಯಿಂದ ನಮ್ಮ ಅಣ್ಣಿಗೇರಿ ಗೌಡ್ರು ಅಂತಿವೆಲ್ಲಾ... ಅವರು ಕಿಟಕಿಯಲ್ಲಿ ನಮ್ಮನೆಲ್ಲಾ ನೋಡಿ ಜೋರಾದ ದನಿಯಲ್ಲಿ- ಇಲ್ಲೆ ಕುಂತಿರ್‍ಯಾ ಹುಡುಗುರ ಬಂದೆ...ಬಂದೆ... ಅಂತ ಇಡಿ ರೈಲಿನ ಜನಕ್ಕೆ ಕೇಳುವಂತೆ ಕೂಗಿದರು. ನಮ್ ಕಡೆಗೆ ಬಂದು ಕುಳಿತು ಎಲೆ ಅಡಿಕೆ ತೆಗೆದರು. ಅವರ ಸಂಭಾಷಣೆ ಆಗಿನ್ನೂ ಮುಂದುವರೆದಿತ್ತು.

ರಾಮು= ಅಲ್ಲೊ ಸಿನಿಮಾಕ್ಕ ಮತ್ತು ನಾಟಕಕ್ಕ ಏನು ವ್ಯತ್ಯಾಸ ಹೇಳು ಶಾಮಣ್ಣ.

ಆಗ ನಮ್ಮ ಗೌಡ್ರು ಅವರ ಜತೆ ಮಾತಿಗಿಳಿದರು, ಈ ಗೌಡ್ರಿಗೆ ಇಷ್ಟು ಯಾರಾದ್ರು ಸಿಕ್ಕರೆ ಸಾಕು, ತಲೆ ತಿಂದು ಹಾಳು ಮಾಡಿಬಿಡುತ್ತಿದ್ದರು. ಅದನ್ನು ನೋಡಿ ನಾವೆಲ್ಲ ನಗುತ್ತಿದ್ದೆವು. ಹಾಗೆ ಇವರನ್ನು ಬಿಡಲಿಲ್ಲ ಅವ್ರು, ಮುಂದೆ ಏನಾಯ್ತು ಅಂತ ಓದಿ.

ಗೌಡ್ರು= ಬೆಳಕನಾಗ್ ತೆಗದು ಕತ್ತಲ್ಯಾಗ್ ತೋರಿಸ್ತಾರ್ ಈ ಸಿನಿಮಾದವ್ರು. ನಾಟಕಾ ಅಂದ್ರ ಹಂಗಲ್ಲರಿ ಪ್ರ್ಯಾಕ್ಟಿಸ್ ಬೇಕು. ಹುಡುಗಾಟ ಅಲ್ರಿ ಅದು.

ಆಗ ನಾವೆಲ್ಲ ಆಶ್ಚರ್ಯಗೊಂಡೆವು. ಗೌಡ್ರಿಗೆ ಇವೆಲ್ಲ ವಿಷಯಗಳು ಗೊತ್ತಿವೆಯಾ ಅಂತ. ಯಾವತ್ತೂ ಅಷ್ಟು ಗಂಭೀರ ವಿಷಯಗಳ ಬಗ್ಗೆ ಮಾತನಾಡಿದ್ದಿಲ್ಲ ಅವರು.

ಮತ್ತೆ ಗೌಡ್ರು= ನೋಡ್ರಿ ಸಾಹೆಬ್ರಾ ಸಿನಿಮಾದಾಗ್ ಒಂದೊಂದು ಸೀನ್ ಪಾರ್ಟ್ ಪಾರ್ಟ್ ಮಾಡಿ ತೋರಿಸ್ತಾರ. ಆದ್ರ ನಾಟಕಾ ಹಂಗ ಅಲ್ಲ ಒಂದ ಸಾರಿ. ಚುಲೊ ಮಾಡಿದ್ರ ಚಪ್ಪಾಳಿ ಹೋಡಿತಾರ. ಇಲ್ಲ ಅಂದ್ರ ಎಲ್ಲಾರೂ ಬೈತಾರ್. ಅದು ಜನಾ ಎದುರ ಇರ್‍ತಾರ್. ಒಂದೊಂದು ಸಾರಿ ನಾಟಕಾ ಚುಲೊ ಅನಸಲಿಲ್ಲ ಅಂದ್ರ ತತ್ತಿ, ಟೊಮಾಟಿ ಎಲ್ಲಾ ಒಗಿತಾರ್. ಅದ ಆ ಸಿನಿಮಾ ನೋಡ್ರಿ ಹತ್ತಿಪ್ಪತ್ತು ಶಾಟ್ ಆದ ಮ್ಯಾಲೆ ಫೈನಲ್ ಆಗ್ತದ. ಅಲ್ಲೆ ತಪ್ಪು ಮಾಡಿದ್ರು ತಿದ್ದಿಕೊಳ್ಳಲಿಕ್ಕೆ ಅವಕಾಶ ಇರ್‍ತದ.

ನಮ್ಮ ಗುಂಪಿನಲ್ಲೊಬ್ಬ= ಗೌಡ್ರೆ ನೀವು ಯಾವಾಗ ನೋಡಿದ್ರಿ. ನಿಮಗ ಹೆಂಗ್ ಗೊತ್ತು ಇವೆಲ್ಲ?
ಅಯ್ಯೊ ಹುಬ್ಬಳ್ಳ್ಯಾಗ ಶೂಟಿಂಗ್ ಇದ್ದಾಗ ನೋಡಿನಿಪಾ ಮಾರಾಯಾ.
ಶಾಮು= ಹೌದು ಖರೇನ್ ಬಿಡ್ರಿ.

ರಾಮು ಮತ್ತು ಶಾಮು ಇಬ್ಬರೂ ಈ ಗೌಡ ಹೀಗೆ ಬಿಟ್ಟರೆ ತಲೆ ತಿಂತಾನೆ ಅಂತ ಸುಮ್ಮನಾಗಿದ್ದರು. ಗೌಡರ ಕಡೆಗೆ ಮುಖವನ್ನೆ ಮಾಡದೆ ಅವರನ್ನು ಅಲಕ್ಷಿಸಿದಂತೆ ಮಾಡಿದರು. ಆಗ ರಂಗಭೂಮಿ ಬಗ್ಗೆ ಇನ್ನಷ್ಟು ತಿಳ್ಕೊಬೇಕು. ಕಲೆಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ತಿಳಿಯುವ ಕುತೂಹಲ ಉಂಟಾಯಿತು. ಅಷ್ಟು ಹೊತ್ತಿಗೆ ಹುಬ್ಬಳ್ಳಿ ಸ್ಟೇಶನ್ ಬಂತು. ಎಲ್ಲರೂ ಅವರ ಅವರ ಕೆಲಸಗಳಿಗೆ ಸಾಗಿದರು. ಆದಿನ ತಮಾಷೆ ಮಾಡಿದರೂ ಒಂದು ಗಂಭೀರವಾದ ವಿಷಯವನ್ನು ತಿಳಿದುಕೊಂಡೆವು ಎಂಬ ಸಾರ್ಥಕ ಭಾವನೆ ಮನದಲ್ಲಿ ಮೂಡಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X