ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಸ್ತಿಗಳೇ ಸಾಹಿತ್ಯ, ಕೃತಿಗಳ ಮಾನದಂಡವಲ್ಲ

By ವರದಿ : ಶ್ರೀನಿಧಿ ಡಿಎಸ್, ಮೂಡಬಿದಿರೆ
|
Google Oneindia Kannada News

Alvas Nudisiri 2008, Moodabidire
ನುಡಿಸಿರಿಯ ಎರಡನೇ ದಿನದ ಬೆಳಗು ಆರಂಭವಾಗಿದ್ದು ಪಂಡಿತ ವೆಂಕಟೇಶ್ ಕುಮಾರ್ ಅವರ ಹಿಂದೂಸ್ತಾನಿ ಗಾಯನದೊಡನೆ. ನಂತರ ಆಳ್ವಾಸ್ ವಿದ್ಯಾರ್ಥಿನಿ ಮಹಾಲಕ್ಷ್ಮೀ ಶೆಣೈ ಅವರ ಭಾವ ಲಹರಿ. ನಂತರ ನಡೆದಿದ್ದು ವಿಚಾರ ಗೋಷ್ಠಿ. ಈ ವಿಚಾರ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ : ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಆಧುನಿಕ ಸಾಹಿತ್ಯ ಹೊಸ ಸಂವೇದನೆಗಳ ಕುರಿತು ಮಾತನಾಡಿದ ಡಾ. ಅರವಿಂದ ಮಾಲಗತ್ತಿ, ಕನ್ನಡಕ್ಕೆ 7 ಜ್ಞಾನಪೀಠ, 55 ಕೇಂದ್ರ ಅಕಾಡಮಿ ಪ್ರಶಸ್ತಿಗಳು ಬಂದಿವೆ. ಹೀಗೆ ಪ್ರಶಸ್ತಿಗಳು ಬಂದಾಗ ವಾದಗಳೂ ಆಗಿವೆ. ಹಾಗಾಗಿ ಪ್ರಶಸ್ತಿಗಳೇ ಸಾಹಿತ್ಯ, ಕೃತಿಗಳ ಮಾನದಂಡವಲ್ಲ ಎಂದರು.

ಅನ್ಯ ಭಾಷಾ ಸಾಹಿತ್ಯದಿಂದ ತಾನು ಪ್ರಭಾವಕ್ಕೊಳಗಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುವ ಬದಲು ಕನ್ನಡ ಸಾಹಿತ್ಯದಿಂದ ಪ್ರಭಾವಕ್ಕೊಳಗಾಗಿದ್ದೇನೆ ಎಂದು ಹೇಳುವ ಮೂಲಕ ನಮ್ಮ ತಲೆ ಕೆಳಗಾದ ಆಲೋಚನಾ ಕ್ರಮವನ್ನು ಸರಿಪಡಿಸಿಕೊಳ್ಳಬೇಕಾಗಿದೆ ಎಂದು ಡಾ. ಅರವಿಂದ ಮಾಲಗತ್ತಿ ನುಡಿದರು.

ಪ್ರಾಚೀನ ಕನ್ನಡ ಸಾಹಿತ್ಯ : ಪರಂಪರೆ ಪ್ರಕಾರಗಳು ಮತ್ತು ಮುಖಾಮುಖಿಯ ಬಗ್ಗೆ ಮಾತನಾಡಿದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಮಾತು, ಭಾಷೆ ಹುಟ್ಟಿದಂದಿನಿಂದಲೇ ಸಾಹಿತ್ಯ ಹುಟ್ಟಿತು. ಜಾನಪದ ಸಾಹಿತ್ಯ ಗ್ರಂಥಸ್ಥವಾಯಿತು. ಈ ಮಧ್ಯೆ ಪಂಪನ ಸಾಹಿತ್ಯ ಕಾಲದ ನಂತರ ರಾಜಾಶ್ರಯ ತಿರಸ್ಕರಿಸಿದ ವಚನ ಸಾಹಿತ್ಯ, ರಗಳೆ, ಷಟ್ಪದಿಗಳು, ಬಳಿಕ ಕೀರ್ತನೆಗಳು ಹೀಗೆ ಸಾಹಿತ್ಯ ಬೆಳೆದು ಬಂತು. ವೈದಿಕ, ಜೈನ, ಇಸ್ಲಾಂ, ಕ್ರೈಸ್ತ ಹೀಗೆ ಮತಗಳ ಸಾಹಿತ್ಯವೂ ಕನ್ನಡದಲ್ಲಿ ಹರಿದು ಬಂತು ಎಂದು ಹೇಳಿದರು.

ಇಳಿ ಹಗಲು ನಡೆದ 'ಮಾಧ್ಯಮದಲ್ಲಿ ಕನ್ನಡದ ಶಕ್ತಿ ಮತ್ತು ವ್ಯಾಪ್ತಿ' ಕುರಿತ ಗೋಷ್ಠಿಯಲ್ಲಿ ಮುದ್ರಣ ಮಾಧ್ಯಮದ ಬಗ್ಗೆ ನರೇಂದ್ರ ರೈ ದೇರ್ಲ ಮಾತನಾಡಿದರು. ಹಿಂದಿನ ಮೌಲ್ಯ ಕೇಂದ್ರಿತ ಪತ್ರಿಕೆಗಳು ಈಗ ಮಾಯವಾಗಿದ್ದು , ಕೇವಲ ಪ್ರಸಾರ ಕೇಂದ್ರಿತ ಪತ್ರಿಕೆಗಳೇ ಹೆಚ್ಚಾಗಿವೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು. ನೆರೆಯ ಕೇರಳ ಮತ್ತು ತಮಿಳುನಾಡಿನ ಜನರು ಪತ್ರಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದಾರೆ, ನಮ್ಮಲ್ಲೂ ಆ ಪ್ರವೃತ್ತಿ ಬೆಳೆಯಬೇಕು ಎಂದವರು ತಿಳಿಸಿದರು. ಕೇರಳದ ಮಲಯಾಳ ಮನೋರಮದ ಪ್ರಸಾರ ಸಂಖ್ಯೆಯೇ 13 ಲಕ್ಷ, ಇದು ನಮ್ಮ ಕನ್ನಡದ ಎಲ್ಲ ಪತ್ರಿಕೆಗಳ ಒಟ್ಟು ಪ್ರಸಾರಕ್ಕೆ ಸಮ ಎಂದವರು ಖೇದ ವ್ಯಕ್ತಪಡಿಸಿದರು.

ವಿದ್ಯುನ್ಮಾನ ಮಾಧ್ಯಮದ ಬಗ್ಗೆ ಮಾತನಾಡಿದ ದೀಪಕ್ ತಿಮ್ಮಯ್ಯ, ಇಂದು ಯಾರು ಬೇಕಿದ್ದರೂ, ಏನು ಬೇಕಾದರೂ ಮಾಡಬಹುದಾದ ಮಾಧ್ಯಮ ಅಂದರೆ ವಿದ್ಯುನ್ಮಾನ ಮಾಧ್ಯಮ ಎಂಬಂತಾಗಿದೆ ಎಂದರು. ಮಾಧ್ಯಮಕ್ಕೆ ಸಮಾಜವನ್ನು ಬದಲಿಸಬಹುದಾದ ಶಕ್ತಿ ಇದೆ, ಆದರೆ ಇಂದು ಅದು ಸಾಧ್ಯವಾಗುವಂತೆ ಮಾಡಲಾಗುತ್ತಿಲ್ಲ ಎಂಬ ವಿಷಾದ ವ್ಯಕ್ತಪಡಿಸಿದರು. ಮಾಧ್ಯಮಗಳಲ್ಲಿ ಬೆಂಗಳೂರು ಕನ್ನಡ ಅಥವಾ ಮೈಸೂರು ಕನ್ನಡವನ್ನೇ ಹೆಚ್ಚಾಗಿ ಬಳಸಲಾಗುತ್ತಿದ್ದು, ಇತರೆಡೆಯ ಕನ್ನಡಗಳನ್ನು ಕಡೆಗಣಿಸಲಾಗುತ್ತಿದ್ದು ಇದೊಂಥರಾ ಭಾಷಾ ಜಾತಿ ಪದ್ದತಿಯಾಗಿಬಿಟ್ಟಿದೆ. ಇದು ಹೋಗಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು.

ಕಥಾ ಸಮಯದಲ್ಲಿ ಪಾಲ್ಗೊಂಡ ಕುಂ.ವೀ, ತಮ್ಮ ಎಂದಿನ ಚುರುಕು ಶೈಲಿಯಲ್ಲಿ, ತಾನು ಕಥೆ ಬರೆಯಲು ಕಾರಣವಾದ ಅಂಶಗಳನ್ನು ಸಭಿಕರೆದುರು ಬಿಚ್ಚಿಟ್ಟರು. ತಮ್ಮೂರಿನ ಮುದುಕ ಮುದುಕಿಯರ ಕಥೆಗಳನ್ನು ಹೇಳಿದ ಅವರು, ತಮ್ಮ ಅಂಬಮ್ಮಜ್ಜಿಯ ಸಲ್ಲೇಖನ ವೃತದ ಕಥೆ ಹೇಳಿ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು. ಇವುಗಳ ಜೊತೆಗೆ ವಾಸುದೇವ್ ನಾಡಿಗ್, ಧರಣೀದೇವಿ ಮಾಲಗತ್ತಿ, ಜಯರಾಮ ಕಾರಂತರು ಕವಿಸಮಯ, ಕವಿ ನಮನದಲ್ಲಿ ಪಾಲುಗೊಂಡರು. ಜಿ.ಪಿ. ರಾಜರತ್ನಂ ಮತ್ತು ವಿ.ಕೃ.ಗೋಕಾಕರ ನೆನಪು ಕಾರ್ಯಕ್ರಮಗಳೂ ಜರುಗಿದವು.

ಮಾಧ್ಯಮ ಗೋಷ್ಠಿಯಲ್ಲಿ ರವಿ ಬೆಳಗೆರೆ ಭಾಗವಹಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಬಹಳ ವಿದ್ಯಾರ್ಥಿಗಳು ಕಾದು ಕುಳಿತಿದ್ದು, ಅವರು ಬರುತ್ತಿಲ್ಲವೆಂದು ತಿಳಿದಾಗ ನಿರಾಸೆಯಲ್ಲಿ ಎದ್ದು ಹೊರಟದ್ದು ಕಂಡು ಬಂತು.

ಕೊನೆ ಮಾತು : ಎಂದಿನಂತೆ ನುಡಿಸಿರಿಯ ಭೋಜನ ವ್ಯವಸ್ಥೆ ಅದ್ಭುತವಾಗಿದೆ. ಎರಡು ದಿನಗಳಲ್ಲಿ 25 ಸಾವಿರ ಜನ ಊಟದ ರುಚಿ ಸವಿದಿದ್ದಾರೆ ಎಂಬುದು ಸಂಘಟಕರ ಮಾತು.

ಆಳ್ವಾಸ್ ನುಡಿಸಿರಿ 2008, ದಿನ 1ಆಳ್ವಾಸ್ ನುಡಿಸಿರಿ 2008, ದಿನ 1

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X