• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಳ್ವಾಸ್ ನುಡಿಸಿರಿ ಸಂಭ್ರಮಕ್ಕೆ ವೇದಿಕೆ ಸಜ್ಜು

By ಲೇಖನ: ಯತಿರಾಜ್ ಶೆಟ್ಟಿ, ಮೂಡುಬಿದಿರೆ,
|

ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ನಡೆಸಲ್ಪಡುತ್ತಿರುವ ಆಳ್ವಾಸ್ ನುಡಿಸಿರಿ ಈ ಬಾರಿ ನವೆಂಬರ್ 28, 29 ಮತ್ತು 30ರಂದು ನಡೆಯಲಿದೆ. ನಾಲ್ಕು ವರ್ಷಗಳ ಯಶಸ್ಸಿನ ಗೌರವಗಳೊಂದಿಗೆ ಐದನೇ ವರುಷದ ನುಡಿಸಿರಿಯ ಸಂಭ್ರಮದಲ್ಲಿದ್ದೇವೆ. ಆಳ್ವಾಸ್ -ನುಡಿಸಿರಿ 2008 "ಕನ್ನಡ ಮನಸ್ಸು: ಶಕ್ತಿ ಮತ್ತು ವ್ಯಾಪ್ತಿ" ಪರಿಕಲ್ಪನೆಯಡಿಯಲ್ಲಿ ನಡೆಯಲಿದ್ದು, ಖ್ಯಾತ ಕವಿಗಳಾದ ನಾಡೋಜ ಡಾ.ಚನ್ನವೀರ ಕಣವಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ನಿತ್ಯೋತ್ಸವ ಕವಿ ಡಾ. ಕೆ.ಎಸ್.ನಿಸಾರ್ ಅಹಮದ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಅಧ್ಯಕ್ಷರು ಹಾಗೂ ಉದ್ಘಾಟಕರ ಚಿಕ್ಕ ಪರಿಚಯ ಇಲ್ಲಿದೆ.

ಡಾ.ಚನ್ನವೀರ ಕಣವಿ

channaveera kanaviಡಾ.ಚನ್ನವೀರ ಕಣವಿ ಹುಟ್ಟಿದ್ದು 1928ರ ಜೂನ್ 28ರಂದು ಗದಗದ ಹೊಂಬಳ ಎಂಬಲ್ಲಿ. ಕರ್ನಾಟಕ ವಿ.ವಿ.ಯಲ್ಲಿ ಎಂ.ಎ ಪದವಿ ಪಡೆದು ಅಲ್ಲಿಯ ಪ್ರಸಾರಾಂಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದರು. ವಿ.ವಿಯ ಕನ್ನಡ ಅಧ್ಯಯನ ಪೀಠದಲ್ಲಿ ಗೌರವ ಸಂದರ್ಶಕ ಪ್ರಾಧ್ಯಾಪಕರಾಗಿಯೂ ನಂತರದಲ್ಲಿ ಸೇವೆ ಸಲ್ಲಿಸಿದರು. ಕಾವ್ಯಾಕ್ಷಿ, ಹೂವು ಹೊರಳುವವು ಸೂರ್ಯನ ಕಡೆಗೆ, ಇನ್ವಯಿಟಿಂಗ್ ಲೈಫ್ ಎನ್ನುವ ಆಯ್ದ ಕವಿತೆಗಳ ಇಂಗ್ಲೀಷ್ ಅನುವಾದ, ಎರಡು ದಡ, ಆಕಾಶ ಬುಟ್ಟಿ ಕವನಸಂಗ್ರಹಗಳು ಸೇರಿದಂತೆ ಸಾಹಿತ್ಯ ಚಿಂತನ, ಶುಭನುಡಿಯ ಹಕ್ಕಿ, ವಚನಾಂತರಂಗ ಹೀಗೆ ಹತ್ತಕ್ಕೂ ಹೆಚ್ಚು ಗದ್ಯ ಕೃತಿಗಳನ್ನು ರಚಿಸಿದ ಹೆಮ್ಮೆ ಇವರದು.

ಕನ್ನಡದ ಕಾಲು ಶತಮಾನ, ಆಧುನಿಕ ಕನ್ನಡ ಕಾವ್ಯ , ಎರಡು ದಶಕದ ಕಥೆಗಳು, ನವಿಲೂರ ಮನೆಯಿಂದ ಇವರ ಸಂಪಾದಿತ ಕೃತಿಗಳು. ಬಾಬಾ ಷರೀಫ್ ಎನ್ನುವ ಕೃತಿಯನ್ನು ಭಾಷಾಂತರ ಮಾಡಿದ ಹೆಗ್ಗಳಿಕೆಯೂ ಇವರಿಗಿದೆ. ಹೀಗೆ 30ಕ್ಕೂ ಹೆಚ್ಚು ಪದ್ಯ, ಗದ್ಯ, ಸಂಪಾದಿತ ಕೃತಿಗಳ ಒಡೆಯ ಡಾ.ಚನ್ನವೀರ ಕಣವಿ. ಜೀವಧ್ವನಿ ಕವನಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ, ಬಸವ ಗುರು ಕಾರುಣ್ಯ, ನಾಡೋಜ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು.

ಗದಗಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ದಿಲ್ಲಿ ರಾಷ್ಟ್ರೀಯ ಕವಿ ಸಮ್ಮೇಳನದ ಪ್ರತಿನಿಧಿ, ಹಾಸನದಲ್ಲಿ ನಡೆದ ಅಖಿಲ ಭಾರತ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹೀಗೆ ಹಲವು ಗೌರವಗಳಿಗೂ ಡಾ.ಕಣವಿ ಭಾಜನರಾಗಿದ್ದಾರೆ.

ಡಾ.ಕೆ.ಎಸ್.ನಿಸಾರ್ ಅಹಮದ್

K S Nisar Ahmedಕವಿ, ವಿಮರ್ಶಕ, ವೈಚಾರಿಕ ಲೇಖಕ ಡಾ.ಕೆ.ಎಸ್.ನಿಸಾರ್ ಅಹಮದ್ ಹುಟ್ಟಿದ್ದು 1938ರ ಫೆಬ್ರವರಿ 5ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ. ರಾಜಧಾನಿಯ ಸೆಂಟ್ರಲ್ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿಸಾರ್ ಅಹಮದ್ 34 ವರ್ಷಗಳ ಕಾಲ ಅಧ್ಯಾಪಕರಾಗಿ ಕರ್ನಾಟಕದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮನಸು ಗಾಂಧೀಬಜಾರು, ನೆನೆದವರ ಮನದಲ್ಲಿ, ನಿತ್ಯೋತ್ಸವ, 65ರ ಐಸಿರಿ, ಅನಾಮಿಕ ಆಂಗ್ಲರು ಸೇರಿದಂತೆ ಹದಿನೈದಕ್ಕೂ ಮಿಕ್ಕಿ ಕವನಸಂಕಲನಗಳನ್ನು ಡಾ.ಕೆ.ಎಸ್.ನಿಸಾರ್ ಅಹಮದ್ ಬರೆದಿದ್ದಾರೆ. ಇದು ಬರೀ ಬೆಡಗಲ್ಲೋ ಅಣ್ಣ, ಮನದೊಂದಿಗೆ ಮಾತುಕತೆ, ಅಚ್ಚುಮೆಚ್ಚು, ಸರಸೋಕ್ತಿಗಳ ಸಂಗಾತಿ ಮೊದಲಾದ ವಿಮರ್ಶೆ ಹಾಗೂ ಇತರ ಸಾಹಿತ್ಯ ಕೃತಿಗಳು ಸೇರಿದಂತೆ ಷೇಕ್ಸ್‌ಪಿಯರ್ ಮಹಾಕವಿಯ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಒಥೆಲ್ಲೋ, ಹೆಜ್ಜೆಗುರುತು ಮೊದಲಾದ ಅನುವಾದ ಕೃತಿಗಳು ನಿಸಾರ್ ಅಹಮದ್ ಅವರ ಗೌರವದ ಗರಿಗಳು.

ಹಕ್ಕಿಗಳು, ಬರ್ಡ್ಸ್, ರಾಕ್ಸ್ ಎಂಡ್ ಮಿನರಲ್ಸ್, ಪುಟ್ಟ ಸಂತರು ಮತ್ತು ಕಲಿಗಳು ಮೊದಲಾದ ಮಕ್ಕಳ ಸಾಹಿತ್ಯ ಕೃತಿಗಳನ್ನು ಬರೆದು ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಸೈ ಎನಿಸಿಕೊಂಡವರು ಡಾ.ಕೆ.ಎಸ್.ನಿಸಾರ್ ಅಹಮದ್.

ಸಾಧನೆ ಹಾಗೂ ಪ್ರಶಸ್ತಿಗಳು : 1967 ಮತ್ತು 1985ರಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ರಾಷ್ಟ್ರಿಯ ಕವಿ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸುವಿಕೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವ, ಹೆಜ್ಜೆ ಗುರುತು ಎಂಬ ಪುಸ್ತಕಕ್ಕೆ ಸೋವಿಯತ್ ಲ್ಯಾಂಡ್ ನೆಹರು ಅಂತಾರಾಷ್ಟ್ರೀಯ ಪುರಸ್ಕಾರ, ಬೆಡಗಲ್ಲೋ ಅಣ್ಣ ಗ್ರಂಥ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅವರ ಸಾಧನೆಗಳಿಗೆ ಸಾಕ್ಷಿಗಳು. ಡಾ.ನಿಸಾರ್ ಅಹಮದ್ ಅವರ ಬಹಳಷ್ಟು ಕೃತಿಗಳು ಚೀನೀ ಸೇರಿದಂತೆ ಮಲೆಯಾಳಂ, ತೆಲುಗು, ಮರಾಠಿ ಮೊದಲಾದ ಭಾಷೆಗಳಿಗೆ ತರ್ಜುಮೆಗೊಂಡಿವೆ.

ನೀತ್ಯೋತ್ಸವ ಸೇರಿದಂತೆ ನಿಸಾರರ ಹತ್ತು ಹಲವು ಧ್ವನಿಸುರುಳಿಗಳೂ ಹೊರಬಂದಿವೆ. ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ ಸೇರಿದಂತೆ ವಿಶ್ವಮಾನವ, ಕರ್ನಾಟಕ ಜ್ಯೋತಿ, ರಾಜ್ಯೋತ್ಸವ ಪ್ರಶಸ್ತಿ, ಅನಾಮಿಕ ಆಂಗ್ಲರು ಕೃತಿಗೆ ರಾಜ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕೆಂಪೇಗೌಡ, ಡಾ,ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪುರಸ್ಕಾರ, ಆರ್ಯಭಟ, ಡಾ.ಅನಕೃ ನಿರ್ಮಾಣ್ ಸಾಹಿತ್ಯ ಪ್ರಶಸ್ತಿ, ಕನ್ನಡ ಕಂಪು ಪುರಸ್ಕಾರ, ಡಾ.ತಾತಾಚಾರಿ ಸಾಹಿತ್ಯ ಪುರಸ್ಕಾರ, ಕನ್ನಡ ಕಾವ್ಯ ಶಿರೋರತ್ನ ಬಿರುದು, ಚುಂಚ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆದರ್ಶ ಸುಗಮ ಸಂಗೀತ ರತ್ನ ಬಿರುದು, ಡಿ.ದೇವರಾಜ ಅರಸು ಪುರಸ್ಕಾರ, ಕನ್ನಡ ರತ್ನ ತಿಲಕ, ಪದ್ಮ ಮೊದಲಾದ ಬಿರುದು, ಪುರಸ್ಕಾರ, ಪ್ರಶಸ್ತಿಗಳಿಗೆ ಡಾ.ನಿಸಾರರವರು ಭಾಜನರಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more