ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಂತಜ್ಜನ ಸಿಹಿ ಕಹಿ ನೆನಪಿನ ಪ್ರಸಂಗಗಳು

By ಸಂಗ್ರಹ, ಬರಹ: ಮಲೆನಾಡಿಗ
|
Google Oneindia Kannada News

Kota shivarama Karanthಕಡಲ ತೀರದ ಭಾರ್ಗವ ಕೋಟ ಶಿವರಾಮ ಕಾರಂತರು ಕೇವಲ ಸಾಹಿತಿಯಾಗಿರದೆ, ಬದುಕಿನ ಸಫಲತೆಯನ್ನು ಕಾಣುವ ದಾರಿದೀಪದಂತಿದ್ದವರು. ಪ್ರತಿಯೊಂದು ವಿಷಯದಲ್ಲೂ ಅವರು ತೋರಿಸುತ್ತಿದ್ದ ಆಸಕ್ತಿ, ಮಕ್ಕಳಂತೆ ಮುಗ್ದ್ಥತೆಯಿಂದ ಆಲಿಸುತ್ತಿದ್ದದ್ದು, ಗ್ರಹಣಾಶಕ್ತಿ ಎಲ್ಲವೂ ಅದ್ಭುತ ಎನ್ನುತ್ತಾರೆ ಬಲ್ಲವರು.

ಎಲ್ಲಾ ಬಗೆಯ ಕ್ಷೇತ್ರಗಳಲ್ಲಿ ಕಾಲಿರಿಸಿದ ಕಾರಂತರುಬದುಕುವ ಕಲೆಯನ್ನು ಕಲಿಸಿಕೊಟ್ಟವರು. ಅವರ ಪ್ರಾಣಿ ಪ್ರೀತಿ, ಮಾನವೀಯತೆ ಹಾಗೂ ಜೀವನ ಪ್ರೀತಿ ಅವರ ಬರಹಗಳ ಹೊರತಾಗಿಯೂ ಎದ್ದು ಕಾಣುವ ಹೆಗ್ಗುರುತುಗಳಾಗಿವೆ ಎಂದರೆ ತಪ್ಪಾಗಲಾರದು. ಅವರ ಜನ್ಮದಿನ(ಅ.10, 1902)ವನ್ನು ಅವರೊಂದಿಗಿನ ನೆನಪಿನ ಪ್ರಸಂಗಗಳೊಡನೆ ಸ್ಮರಿಸೋಣ. ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದ ಕಾರಂತರ ಪ್ರಯೋಗಶೀಲ ಮನೋಭಾವ, ಕ್ರಿಯಾಶೀಲತೆ ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯ.

ಕಾರಂತ -ತೇಜಸ್ವಿ ಪ್ರಸಂಗಗಳು
'ನಾನು ಬೇರೆ ಯಾವ ಲೇಖಕರಿಂದಲೂ ಪ್ರಭಾವಿತ ನಾಗಿಲ್ಲ. .. ' ಎಂದು ಮುಲಾಜಿಲ್ಲದೆ ಹೇಳಿದವರು ಡಾ. ಶಿವರಾಮ ಕಾರಂತರು. ಸರ್ , ಯಾಕೆ ಹಾಗೆ ಹೇಳಿದಿರಿ ಎಂದು ಪ್ರಶ್ನಿಸುವ ಧೈರ್ಯವನ್ನು ಯಾರು ಮಾಡಲಿಲ್ಲ. ಎನ್ನುವುದು ಬೇರೆ ಮಾತು. ಅಂಥ ಕಾರಂತರು ಕೂಡ ಪೂರ್ಣಚಂದ್ರ ತೇಜಸ್ವಿಯವನ್ನು; ಅದರಲ್ಲೂ ಅವರ ವಿಜ್ಞಾನ ಸಂಬಂಧಿಸಿದ ಬರಹಗಳನ್ನು ವಿಪರೀತ ಇಷ್ಟಪಟ್ಟಿದ್ದರು. ಒಂದೆರಡು ಸಂದರ್ಭಗಳಲ್ಲಿ 'ವಿಜ್ಞಾನ ಬರಹಗಳ ವಿಷಯಕ್ಕೆ ಬಂದರೆ, ನೀವು ನನಗಿಂತ ಚೆನ್ನಾಗಿ ಅಪ್ತವಾಗಿ ಮತ್ತು ಸರಳವಾಗಿ ಬರೀತೀರ. ನಾನು ಓದಿ ಬರೆದೆ. ನೀವು ಅನುಭವಿಸಿ ಬರೆದಿರಿ, ಹಾಗಾಗಿ ನನಗಿಂತ ನೀವೇ ದೊಡ್ಡ ಲೇಖಕರು. . .. ' ಎಂದಿದ್ದರೂ ಕೂಡ.

ಕಾರಂತಜ್ಜನ ಈ ಮೆಚ್ಚುಗೆಯ ಮಾತಿಗಿಂತ ದೊಡ್ಡ ಪ್ರಶಸ್ತಿ ಇರುವುದು ನನಗಂತೂ ಗೊತ್ತಿಲ್ಲ ಎನ್ನುತ್ತಿದ್ದರು ತೇಜಸ್ವಿ.

ಇಂಥ ಕಾರಂತರು ಅದೊಮ್ಮೆ ಮೂಡಿಗೆರೆಗೆ ಬಂದು, ತೇಜಸ್ವಿಯವರ ಮನೆಯಲ್ಲೇ ಎರಡು ದಿನ ಉಳಿದುಕೊಂಡಿದ್ದರು. ಆ ಎರಡೂ ದಿನ, ತೇಜಸ್ವಿ, ಕಾರಂತರು ಅದೆಷ್ಟೋ ವಿಷಯಗಳನ್ನು ಕುರಿತು ಚರ್ಚೆ ನಡೆಸಿದರು. ಹೊಸದಾಗಿ ಬಂದ ಕಂಪ್ಯೂಟರ್ ಅನ್ನು ಆನ್ ಮಾಡಿ, ಕಾರಂತರಿಗೆ ತೇಜಸ್ವಿಯವರು ತೋರಿಸಿ ವಿವರಿಸುತ್ತಿದ್ದನ್ನು ಬೆರಗುಗಣ್ಣಿನಿಂದ ಆಲಿಸಿದರಂತೆ ಕಾರಂತರು. ಮೌಸ್ ಹಿಡಿಯಲು ಕಷ್ಟಪಡುತ್ತಿದ್ದ ಕಾರಂತರ ಕೈ ಮೇಲೆ ಕೈ ಇರಿಸಿ ತೇಜಸ್ವಿ ಅವರು ಅದನ್ನು ಬಳಸುವ ಬಗೆಯನ್ನು ವಿವರಿಸಿದರಂತೆ. ಇದರಿಂದ ಖುಷಿಯಾದ ಕಾರಂತರು ಇನ್ನೊಮ್ಮೆ ಬಂದಾಗ ನನಗೆ ಪೂರ್ಣವಾಗಿ ಕಂಪ್ಯೂಟರ್ ಕಲಿಸಿಕೊಡಬೇಕು ಎಂದರಂತೆ. ಆದರೆ ಅದು ಸಾಧ್ಯವಾಗಲಿಲ್ಲ ಎಂಬುದು ದುಃಖದ ಸಂಗತಿ.

ಈ ಸಂದರ್ಭದಲ್ಲಿಯೇ ಕಾರಂತರಿಗೆ ಕೊಡಲೆಂದು ಶ್ರೀಮತಿ ರಾಜೇಶ್ವರಿಯವರು ಒಂದಿಷ್ಟು ಕಾಫಿಪುಡಿ ರೆಡಿ ಮಾಡಿ ಇಟ್ಟಿದ್ದರಂತೆ. ಆದರೆ ಗಡಿಬಿಡಿಯಲ್ಲಿ ಅದನ್ನು ಕಾರಂತರಿಗೆ ಕೊಡುವುದನ್ನೇ ಮರೆತು ಬಿಟ್ಟಿದ್ದಾರೆ. ಎರಡು ದಿನ ಬಿಟ್ಟು ಅದನ್ನು ಕೊರಿಯರ್ ನಲ್ಲಿ ಕಳಿಸಿದಾಗ ಕಾರಂತರು ತಮಾಷೆಯಾಗಿ ಹೀಗೆ ಉತ್ತರ ಬರೆದಿದ್ದರು:

'ತೇಜಸ್ವಿ-ರಾಜೇಶ್ವರಿಯವರಿಗೆ ನಮಸ್ಕಾರ. ಕಾಫಿಪುಡಿ ತಲುಪಿದೆ. ಅದನ್ನು ಖಾಲಿ ಮಾಡಲು ನಾನೀಗ ಜರೂರಾಗಿ ಒಂದು ಎಮ್ಮೆ ಸಾಕಬೇಕಾಗಿದೆ.... '

*************
ನಾನು 'ಕಾದಂಬರಿ'ಗಾಗಿ ಬರೆಯುತ್ತೇನೆ!
ಶಿವರಾಮ ಕಾರಂತರು ಕಾದಂಬರಿ ಬರೆಯುತ್ತಿದ್ದ ದಿನಗಳಲ್ಲಿ ಅವರ ಆತ್ಮೀಯರಿಗೆ ಮಾತಿಗೆ ಸಿಗುತ್ತಿರಲಿಲ್ಲ. ಅದಕ್ಕೆ ಆಪ್ತರು ಕೇಳಿದಾಗಲೆಲ್ಲಾ ಕಾರಂತರು ಹೇಳುತ್ತಿದ್ದುದೇ ಹೀಗೆ:

"ವರ್ಷಕ್ಕೊಂದು ಕಾದಂಬರಿ ಬರೆಯಲು ನಾನು ಯೋಚಿಸುತ್ತೇನೆ. ಅದಕ್ಕಾಗಿ ಬಿಡುವು ಮಾಡಿಕೊಂಡು ಅದನ್ನು ಬರೆಯಲು ಕುಳಿತುಕೊಳ್ಳುವವರೆಗೂ ನನಗೆ ಅದರ ಸಮಗ್ರ ರೂಪು, ರೇಷೆ ಸಿಕ್ಕಿರುವುದಿಲ್ಲ. ಮೊದಲನೇ ಅಧ್ಯಾಯ ಆರಂಭಿಸುತ್ತಿದ್ದಂತೆ ಯಾವುದೋ ಚಿಂತನೆ ಕಾಡೂತ್ತದೆ. ನಾನು ಹತ್ತಿರದಿಂದ ಬಲ್ಲ. ಜನರಿಗೆ ಸಂಬಂಧಿಸಿದ ಯಾವುದೋ ಘಟನೆ ಮನಸ್ಸಿಗೆ ಕವಿಯುತ್ತದೆ. ಆಗ ಕ್ರಮೇಣ ಕಥಾವಸ್ತು ಬಿಚ್ಚಿಕೊಳ್ಳುತ್ತದೆ. ನಾನು ಕಾದಂಬರಿ ಬರೆಯುವಾಗ ಒಬ್ಬನೇ ಇರಬೇಕೆಂದು ಬಯಸುತ್ತೇನೆ. ನಾನು ಕುಳಿತಿರಲಿ, ನಿಂತಿರಲಿ, ನಡೆಯುತ್ತಿರಲಿ ಅಥವಾ ಮಲಗಿರಲಿ, ಕಾದಂಬರಿಯ ದೃಶ್ಯಗಳು ನನ್ನನ್ನು ಆವರಿಸುತ್ತ, ಕಾಡುತ್ತಾ ಕಾದಂಬರಿ ಮುಗಿಯುವವರೆಗೆ ನಾನು ಆ ಕೃತಿಗಾಗಿ ಮಾತ್ರ ಬದುಕಿರುತ್ತೇನೆ!" ಈ ಮಾತೇ ಮುಂದೆ 'ಕಾರಂತ ಉವಾಚ' ವಾಯಿತು.

ಶಿವರಾಮ ಕಾರಂತರು ಕಾದಂಬರಿ ಬರೆಯಲು ಕುಳಿತರೆ -ಅವರೇ ಕಾದಂಬರಿಯಾಗಿ ಬಿಡುತ್ತಿದ್ದರು. ಇಂಥವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪಕ್ಕೆ ಮಾತ್ರ ಇರುತ್ತಾರೆ.
********
ವಾರಿಗೆಯವರು ಹೋದ್ರೆ ನಾನೂ ಸತ್ತು ಹೋಗ್ಬೇಕಾ?
ತಮ್ಮ ಸಮಕಾಲೀನ ಬರಹಗಾರರ ಬಗ್ಗೆ ; ಅವರ ಕೃತಿಗಳ ಬಗ್ಗೆ ಕಾರಂತರು ವಿವರವಾಗಿ ಲೇಖನ ಬರೆದಿದ್ದನ್ನು; ವಿಮರ್ಶಾತ್ಮಕವಾಗಿ ಮಾತಾಡಿದ್ದನ್ನು ಕಂಡವರೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಇಂಥ ವಿಷಯಗಳಿಗೂ ತಮಗೂ ಸಂಬಂಧವೇ ಎಂಬಂತೆ ಉಳಿದು ಬಿಡುತ್ತಿದ್ದರು ಕಾರಂತಜ್ಜ.

ಅದೊಂದು ಸಂದರ್ಭದಲ್ಲಿ ಕಾರಂತರ ಭೇಟಿಗೆ ಹೋದ ಹಿರಿಯ ವಿಮರ್ಶಕರೊಬ್ಬರು ಹೆಸರಾಂತ ಲೇಖಕರ ಹೆಸರು ಹೇಳಿ- 'ಅಲ್ಲ ಸಾರ್, ಅವರೂ ನೀವು ಸಮಕಾಲೀನರು ಅವರು ನೋಡಿದರೆ ಮಹಾಕೃತಿ ರಚಿಸಿದ್ದಾರೆ. ನೀವು ಯಾವಾಗ ಸಾರ್ ಅಂಥ ಕೃತಿ ರಚಿಸೋದು' ಎಂದು ಕೇಳಿಬಿಟ್ಟರು.

ತಕ್ಷಣವೇ ನಖ ಶಿಖಾಂತ ಕೋಪಗೊಂಡ ಕಾರಂತಜ್ಜ- 'ಅವನ್ಯಾರೋ ಬರೆದ ಅಂದ್ರೆ ಅದು ಅವನ ಕರ್ಮ. ಅವನು ಬರೆದ ಅಂತ ನಾನ್ಯಾಕೆ ಬರೀಬೇಕು?' ಮುಂದೆ ಇನ್ನೆರಡು ವರ್ಷದಲ್ಲಿ ಆತ ಗೊಟಕ್ ಅಂದ ಅಂತಿಟ್ಕೊಳ್ಳಿ. ಆಗ ನನ್ನನ್ನೂ ಸತ್ತು ಹೋಗು ಅಂತೀರಾ? ನನಗೆ ಬರೀಬೇಕು ಅನ್ನಿಸಿದಾಗ ಬರೀತಿನಿ. ಬರೀಬಾರದು ಅನ್ನಿಸಿದಾಗ ನಿಲ್ಲಿಸ್ತೀನಿ. ಇಷ್ಟವಿದ್ರೆ ಓದಿ. ಕಷ್ಟವಾದ್ರೆ ಬಿಟ್ಟುಬಿಡಿ. ಈಗ ನಿಮ್ಮ ಪ್ರಶ್ನೆ ಮುಗಿದಿದೆ ಅನ್ನಿಸಿದ್ರೆ ಧಾರಾಳವಾಗಿ ಹೊರಡಿ' ಎಂದರು.
**********
ಕಾರಂತರ ಕೋಪ ತಿರುಗುಬಾಣವಾದಾಗ
ಕೆಲವು ವಿಷಯಗಳಲ್ಲಿ ಶಿವರಾಮ ಕಾರಂತರಿಗೆ ಮೂಗಿನ ಮೇಲೆ ಸಿಟ್ಟು ಕೆಲವೊಮ್ಮೆ ನೋಡಿದ ತಕ್ಷಣ ಏನಾದರೊಂದು ತಮಾಷೆಯ ಮಾತನ್ನಾಡುವುದು. ಕೆಲವೊಮ್ಮೆ ವ್ಯಂಗ್ಯವಾಗಿ ಕೆಣಕುವುದು ಇದೆಲ್ಲ ಕಾರಂತರ ಹುಟ್ಟು ಸ್ವಭಾವ. ಈ ಮಾತನ್ನು ಯಾಕೆ ಹೇಳಿದೆನೆಂದರೆ, ಯಕ್ಷಗಾನದಲ್ಲಿ ಬಹಳ ಆಸಕ್ತಿ ಹೊಂದಿದ್ದ ಕಾರಂತರು 'ಬಯಲಾಟ' ಗ್ರಂಥ ಬರೆಯುವುದಕ್ಕಾಗಿ 'ತಾಡವಾಲೆ' ಸಂಗ್ರಹಕ್ಕಾಗಿ ಊರೂರು ಸಂಚರಿಸಿದಾಗ ಕರ್ಕಿ ಹಾಸ್ಯಗಾರರ ಮನೆಯಲ್ಲಿ ಅವರಿಗೊಂದು ತಿರುಗುಬಾಣವಾದ ಕುತೂಹಲ ಭರಿತ ಹಾಸ್ಯ ಪ್ರಸಂಗ ಹೀಗಿತ್ತು:

ಕೃಷ್ಣ ಹಾಸ್ಯಗಾರರ ಅಣ್ಣ ವರದ ಹಾಸ್ಯಗಾರರ ಜೊತೆ ಕಾರಂತರು ಮಾತನಾಡುತ್ತಿದ್ದಾಗ ಸ್ವಲ್ಪ ದೂರದಲ್ಲೇ ಕೃಷ್ಣ ಹಾಸ್ಯಗಾರರು ಕುಳಿತಿದ್ದರು. ಯಕ್ಷಗಾನದ ಬಣ್ಣದ ವೇಷದ ಬಗೆಗೆ ಮಾತು ಬಂದಾಗ ಕಾರಂತರು, " ಬಣ್ಣದ ವೇಷವನ್ನು ನಿಮ್ಮ ಮೇಳದಲ್ಲಿ ಯಾರು ಮಾಡುತ್ತಾರೆ?" ಎಂದು ವರದ ಹಾಸ್ಯಗಾರರಲ್ಲಿ ಕೇಳಿದರು. ಆಗ ದೂರದಲ್ಲಿ ಕುಳಿತಿದ್ದ ಕೃಷ್ಣ ಹಾಸ್ಯಗಾರರತ್ತ ಕೈ ತೋರಿಸಿ ಹೇಳಿದರು. ತಕ್ಷಣ ಕಾರಂತರು ಹೇಳಿದ್ದೇನು ಗೊತ್ತೇ? "ಛೆ! ಛೇ! ಹೋಗಿಹೋಗಿ ಈ ಹಾರೆ ಮುಖದವರು ಬಣ್ಣದ ವೇಷ ಮಾಡಿದರೆ ಅಷ್ಟೆ. ... .ಹಾಂ!" ಎಂದು ಉದ್ಗಾರವೆತ್ತಿದ್ದರು. ಸುಮ್ಮನಿರಲಾಗದೆ ವರದ ಹಾಸ್ಯಗಾರರು ತಕ್ಷಣವೇ ಕೃಷ್ಣ ಹಾಸ್ಯಗಾರರನ್ನು ಒಳಗೆ ಕರೆದುಕೊಂಡು ಹೋದರು. ಯಕ್ಷಗಾನದ ಸಾಮಾಗ್ರಿಯಿದ್ದ ಕೊಠಡಿಯಲ್ಲಿ ನಿಂತು, "ನೀನು ಬಣ್ಣದ ವೇಷದಲ್ಲಿ ಸಿದ್ದನಾಗಿಯೇ ಹೊರಗೆ ಬಾ. . . ನಾನು ಮಾತನಾಡುತ್ತಿರುತ್ತೇನೆ. ." ಎಂದು ಹೊರಬಂದು ಕಾರಂತರ ಜತೆ ಮಾತಿಗೆ ಕುಳಿತರು.

ಒಂದು ಒಂದೂವರೆ ಗಂಟೆಯ ನಂತರ ಹೊರಬಂದ ಉತ್ತರಕನ್ನಡ ಪರಂಪರೆಯ ಬಣ್ಣದ ವೇಷದಲ್ಲಿ ಕೃಷ್ಣ ಹಾಸ್ಯಗಾರರು ಬಂದದನ್ನು ನೋಡಿ ಕಾರಂತರು ದಂಗು ಬಡಿದು ಹೋದರು! ವರದ ಹಾಸ್ಯಗಾರರಲ್ಲಿ, "ಯಾರವರು?" ಎಂದು ಕಾರಂತರು ಕೇಳಿದಾಗ, ನಗುತ್ತಾ ವರದ ಅವರು -"ಆಗಲೇ ಅಲ್ಲಿ ಕುಳಿತಿದ್ದನಲ್ಲ ನಮ್ಮ ಕೃಷ್ಣ ಎಂದಾಗ, ಕಾರಂತರಿಗೆ ತನ್ನ ವ್ಯಂಗ್ಯ, ಕೆಣಕು ಮಾತು ತನಗೇ ತಿರುಗುಬಾಣವಾದದು ಜೀರ್ಣಿಸಿಕೊಳ್ಳಲೇ ಆಗಲಿಲ್ಲ!
*************
ಕಾರಂತರ ಕೆಲವು ಚಿಂತನೆಗಳು
*ಆದಷ್ಟು ಕಡಿಮೆ ತಿನ್ನಿ. ನಾಲಗೆ ರುಚಿಗಾಗಿ ಸಿಕ್ಕಿದ್ದನ್ನೆಲ್ಲಾ ತಿನ್ನುವುದಲ್ಲ. ಮನಬಂದ ಕೆಲಸವನ್ನೆಲ್ಲಾ ಮಾಡುವುದಲ್ಲ. ಇದು ನನ್ನ ಆರೋಗ್ಯದ ರಹಸ್ಯ.

*ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ, ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.

*ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.

*ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.

ಆಧಾರ: ಹಾಯ್ ಬೆಂಗಳೂರು, ಪ್ರದೀಪ್ ಕೆಂಜಿಗೆ, ಮನೀಷಾ, ವಿಕಿಪೀಡಿಯಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X