ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹು-ಕೇತು ಕಾಟ ಮತ್ತು ಗ್ರಹಣ ಚಕ್ರ

By Staff
|
Google Oneindia Kannada News

Solar and Lunar eclipse
ಆಗಸ್ಟ್ 1ರಂದು ಬರುವ ಸೂರ್ಯಗ್ರಹಣ ಮತ್ತು ಆಗಸ್ಟ್ 16ರಂದು ಸಂಭವಿಸುವ ಚಂದ್ರಗ್ರಹಣಗಳೆರಡೂ ಈ ಬಾರಿ ಕೆಲವರಿಗೆ ಭಾರೀ ಅನಾಹುತ ಮಾಡುತ್ತದೆ, ಕೆಲವರಿಗೆ ಸಖತ್ ಒಳ್ಳೆಯದು ಮಾಡುತ್ತದೆ ಎನ್ನುವ ವಾದಗಳನ್ನು ಬದಿಗಿಟ್ಟು ಗ್ರಹಣವೆಂದರೇನು, ಹೇಗೆ ಸಂಭವಿಸುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಹಂಸಾನಂದಿಯವರು ಪ್ರಾಯೋಗಿಕ ಉದಾಹರಣೆ ನೀಡುವುದರ ಮೂಲಕ ಸರಳವಾಗಿ ಅರ್ಥೈಸಿದ್ದಾರೆ.

'ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ' ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ ನೋವುನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಆದರೆ ಚಕ್ರದಂತೆ ಬರೋದು ಬರೀ ಸುಖ-ದು:ಖಗಳು ಮಾತ್ರ ಅಲ್ಲ ಅನ್ನೋದು ಚಿಕ್ಕ ಮಕ್ಕಳಿಗೂ ಗೊತ್ತಿರೋ ಸಂಗತಿ. ಹಗಲು ರಾತ್ರಿಯ ಚಕ್ರಕ್ಕಿಂತ ಬೇಕೇ ಮರಳಿ ಮರಳಿ ಸುತ್ತುವ ಚಕ್ರ? ಅದೇ ರೀತಿ ಆಕಾಶದಲ್ಲಿ ಇನ್ನೊಂದು ಕಾಲಕಾಲಕ್ಕೆ ಮರಳಿ ಬರೋ ಚಕ್ರ ಇದೆ - ಆದರೆ ಇದು ಸಾಧಾರಣವಾಗಿ ಎಲ್ಲರಿಗೂ ತಿಳಿದಿರಲ್ಲ, ಅಷ್ಟೇ. ಇದೇ ಗ್ರಹಣ ಚಕ್ರ ಅಥವಾ ಸೆರಾಸ್ ಚಕ್ರ (Saros cylce).

ನಮ್ಮಲ್ಲಿ ಅನೇಕರಿಗೆ ಈ ಗ್ರಹಣಗಳು ಬಂತು ಅಂದ್ರೆ ಬಹಳ ಭಯ. ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದು ಅನ್ನೋವರು ಒಂದಷ್ಟಾದರೆ, ಮಾಡಿಟ್ಟ ಅಡಿಗೆನೆಲ್ಲ ಎಸೆಯೋರು ಒಂದಷ್ಟು ಜನ. ಇನ್ನು, ಮನೆಯಲ್ಲಿ ಯಾರಾದರು ಬಸುರಿ ಹೆಂಗಸಿದ್ದರಂತೂ ಸರಿಯೇ ಸರಿ. ಕಿಟಕಿ ಬಾಗಿಲು ಎಲ್ಲ ಹಾಕಿ, ಒಂಚೂರೂ ಬೆಳಕು ಮನೇ ಒಳಗೆ ಬರದೇ ಇರೊ ಹಾಗೆ ಕೂತ್ಕೊಳೋ ಸ್ಥಿತಿ. ಆದ್ರೆ, ಇದಕ್ಕೆಲ್ಲ ಎಷ್ಟು ಅರ್ಥ ಇದೆ? ಯೋಚಿಸಿದೀರಾ?

ಆಗಸ್ಟ್ 1, 2008ರಂದು ಕೇತುಗ್ರಸ್ತ ಸೂರ್ಯಗ್ರಹಣ ಆಗತ್ತೆ. ಮತ್ತೆ ಅದಾಗಿ ಹದ್ನೈದು ದಿವಸಗಳಲ್ಲೇ, ಅಂದ್ರೆ ಆಗಸ್ಟ್ ಹದ್ನಾರ್ನೇ ತಾರೀಕು ರಾಹುಗ್ರಸ್ತ ಚಂದ್ರ ಗ್ರಹಣ ಆಗತ್ತೆ. ಇವೆರಡೂ ಗ್ರಹಣಗಳು ಕರ್ನಾಟಕದಲ್ಲಿ ಕಾಣತ್ವೆ. ಗ್ರಹಣ ಏನೋ ಎಲ್ರಿಗೂ ಗೊತ್ತು. ನೋಡಿರ್ತೀವಿ. ಆದ್ರೆ, ಈ ರಾಹುಗ್ರಸ್ತ, ಕೇತುಗ್ರಸ್ತ ಅಂದ್ರೇನು ಅನ್ನೋ ಪ್ರಶ್ನೆ ಬರ್ಬಹುದು. ಅಲ್ವಾ?

ನಮಗೆಲ್ಲ ಸೂರ್ಯನ ಸುತ್ತ ಭೂಮಿ ಸುತ್ತೋದೂ, ಭೂಮಿ ಸುತ್ತ ಚಂದ್ರ ಸುತ್ತೋದೂ ಗೊತ್ತೇ ಇದೆ. ಆ ಮೇಲೆ ಒಂದು ತಮಾಷಿ ಅಂತಂದ್ರೆ ಕಾಕತಾಳೀಯವಾದ ಒಂದು ವಿಚಾರದಿಂದ ಗ್ರಹಣಗಳನ್ನು ನಾವು ನೋಡ್ತೀವಿ. ಅದೇನಂದ್ರೆ ನಮಗೆ ಭೂಮಿಯಿಂದ ನೋಡೋವಾಗ ಸೂರ್ಯನ ಗಾತ್ರವೂ, ಚಂದ್ರನ ಗಾತ್ರವೂ ಸರಿಸುಮಾರು ಒಂದೇ. ಚಂದ್ರನಿಗಿಂದ ಸೂರ್ಯ ಸುಮಾರು ನಾನೂರರಷ್ಟು ದೊಡ್ಡವ್ನು. ಹಾಗೇ ಸುಮಾರು ನಾನೂರರಷ್ಟು ಹೆಚ್ಚು ದೂರ್ದಲ್ಲೂ ಇದಾನೆ. ಅದಕ್ಕೆ ನಮ್ಗೆ ಅಪರೂಪಕ್ಕಾದ್ರೂ ಪೂರ್ಣ ಸೂರ್ಯಗ್ರಹಣ ಕಾಣ್ಸುತ್ತೆ. ಹತ್ತು, ಇಪ್ಪತ್ತು ಚಂದ್ರಗಳಿರೋ ಗುರು, ಶನಿ ಗ್ರಹಗಳ ಮೇಲೆ ಈ ರೀತಿ ಗ್ರಹಣಗಳು ಕಾಣೋಲ್ಲ. ಗ್ರಹಣ ಸಾಧ್ಯವಾಗೋಕೆ ಬೇಕಾದ ಇನ್ನೊಂದು ವಿಷಯ ಏನೂಂದ್ರೆ ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳೀನೂ (plane), ಚಂದ್ರ ಭೂಮಿ ಸುತ್ತ ಸುತ್ತೋ ಸಮಪಾತಳೀನೂ ಸುಮಾರಾಗಿ ಒಂದೇ. ಹಾಗಾಗಿ ಒಂದೊಂದು ಸಲ ಸೂರ್ಯ ಭೂಮಿ ನಡುವೆ ಚಂದ್ರನೂ, ಕೆಲವೊಮ್ಮೆ ಸೂರ್ಯ ಚಂದ್ರ ನಡುವೆ ಭೂಮಿಯೂ ಬರತ್ತೆ. ಆಗ ಒಂದರ ನೆರಳು ಒಂದರ ಮೇಲೆ ಬಿದ್ದು ಗ್ರಹಣ ಆಗತ್ತೆ. ಇದು ಬಿಡಿ, ಚಿಕ್ಚಿಕ್ ಮಕ್ಕಳ್ಗೂ ಗೊತ್ತಿರೋ ವಿಷ್ಯ.

ಆದ್ರೆ ಪ್ರತಿ ಅಮಾವಾಸ್ಯೆಗೆ ಸೂರ್ಯ ಗ್ರಹಣವೂ, ಪ್ರತೀ ಹುಣ್ಣಿಮೆಗೆ ಚಂದ್ರಗ್ರಹಣವೂ ಆಗಲ್ಲ. ಯಾಕಂದ್ರೆ ಮೇಲೆ ನಾನು ಹೇಳಿದ ಪಾತಳಿಗಳು ಸುಮಾರಾಗಿ ಒಂದೇ - ಆದ್ರೆ ಪೂರ್ತಿ ಒಂದೇ ಅಲ್ಲ! ಇವೆರಡರ ಮಧ್ಯ ಸುಮಾರಾಗಿ ಐದು ಡಿಗ್ರಿ ಕೋನ ಇದೆ. ಇದನ್ನ ಅರ್ಥ ಮಾಡ್ಕೊಳೋಕ್ಕೆ ಒಂದು ಸುಲಭವಾದ ಪ್ರಯೋಗ ಮಾಡೋಣವಾ?

ಒಂದು ಬಕೆಟ್‌ನಲ್ಲಿ ನೀರು ತುಂಬಿ. ನೀರು ಸಪಾಟಾಗಿ ತಾನೇ ನಿಲ್ಲತ್ತೆ? ಇದನ್ನೇ ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳಿ ಅಂದ್ಕೊಳಿ. ಈಗ ಒಂದು ದೊಡ್ಡ ಊಟದ ತಟ್ಟೆ ತೊಗೋಳಿ. ಈಗ ತಟ್ಟೆಯನ್ನ ನೀರಲ್ಲಿ ಅರ್ಧ ಮುಳುಗಿಸಿ. ಅಂದ್ರೆ, ಅರ್ಧ ತಟ್ಟೆ ನೀರಿನಿಂತ ಮೇಲೆ, ಅರ್ಧ ಒಳಗಿರ್ಲಿ.ಇನ್ನೊಂದು ಮುಖ್ಯವಾದ ವಿಷಯವನ್ನೇ ಮರೆತೆ! ಈ ತಟ್ಟೆ ನೀರಿನ ಸಮತಳಕ್ಕೆ ಸ್ವಲ್ಪ ಮಾತ್ರವೇ ಓರೆಯಾಗಿರಲಿ. ತೀರಾ ಸಮಕೋನ ಬೇಡ. ಈಗ ಕೆಳಗಿನ ಚಿತ್ರ ನೋಡಿದ್ರೆ ನಿಮಗೆ ಗೊತ್ತಾಗತ್ತೆ ಹೇಗಿರ್ಬೇಕು ಅಂತ.

ಈಗ ಗಮನಿಸಿ. ತಟ್ಟೆಯನ್ನ ಚಂದ್ರ ಭೂಮಿ ಸುತ್ತೋ ಸಮಪಾತಳಿ ಅಂತ ಅಂದ್ಕೊಳಿ. ನೀರನ್ನ ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳಿ ಅಂತ ಮೊದಲೇ ಹೇಳಿದ್ದೆ. ಈಗ ತಟ್ಟೆಯೂ, ನೀರೂ ಮುಟ್ತಾ ಇರೋ ಜಾಗ ನೋಡಿ. ಅದೊಂದು ಸರಳ ರೇಖೆ ಅಲ್ವಾ? ಆದರೆ ತಟ್ಟೆಯನ್ನ ಚಂದ್ರನ ಪಥದ ಪಾತಳಿ ಅಂದ್ಕೊಂಡ್ರೆ ಏನು ಅರ್ಥ? ಚಂದ್ರ ತಟ್ಟೆಯ ಅಂಚಿನಲ್ಲಿ ಸುತ್‌ತಿರ್ತಾನೆ ಅಂತಲ್ವ? ಹಾಗಾದ್ರೆ, ತಟ್ಟೆ ಅಗಲಕ್ಕೂ ಆಕಾಶದಲ್ಲಿರೋದು ಖಾಲಿ ಆಕಾಶ ಅಷ್ಟೇ (ಅಂದ್ರೆ free space). ಅಂದ್ರೆ ಚಂದ್ರ ಭೂಮಿ ಸುತ್ತೋ ದಾರಿಯೇ ತಟ್ಟೆಯ ಅಂಚು. ಅದು ನೀರನ್ನ ಎಷ್ಟು ಕಡೆ ಮುಟ್ತಾ ಇದೆ? ನೋಡಿ? ಎರಡುಕಡೆ ಅಲ್ವಾ?

ಈಗ ನಾವು ಎಲ್ಲಿಂದ ಸೂರ್ಯ ಚಂದ್ರನ್ನ ನೋಡ್ತೀವಿ ಅನ್ನೋದನ್ನ ಗಮನಿಸೋಣ. ಭೂಮಿ ಸೂರ್ಯನ್ನ ಸುತ್ತೋ ಪಾತಳಿ ನೀರು ಅಂತ ಮೊದ್ಲೇ ಹೇಳಿದೀನಿ. ಅಂದ್ರೆ, ನಾವು ನೀರಿನ ಅಂಚಲ್ಲಿ ಎಲ್ಲಿ ನಿಂತಿದ್ರೂ ಬಕೆಟ್‌ನ ಅಂಚಲ್ಲೇ ಯಾವ್ದಾದ್ರೂ ಇನ್ನೊಂದು ಕಡೆಯಲ್ಲಿ ಸೂರ್ಯನ್ನ ನೋಡ್ತಾ ಇರ್ತೀವಿ. ಹಾಗಿದ್ಮೇಲೆ ನೀರಿನ ಅಂಚಲ್ಲೆ ನಾವು (ಅಂದ್ರೆ ಭೂಮಿ) ಸುತ್ತುತ್ತಾ ಇದ್ದ್ ಹಾಗೆ, ನಮಗೆ ಬಕೆಟ್ಟಿನ ಸೂರ್ಯ ಕಾಣ್ತಿರ್ತಾನೆ. ಅದೇ ಸಮಯದಲ್ಲಿ ಚಂದ್ರ ಈ ತಟ್ಟೆಯ ಅಂಚಲ್ಲೇ ತಿರುಗ್ತಿರ್ತಾನೆ. ಸರೀನಾ? (ನಿಜವಾಗಿ ಹೇಳ್ಬೇಕಾದ್ರೆ, ಚಂದ್ರ, ಭೂಮಿ ಸುತ್ತ ಸುತ್ಬೇಕು- ಆದ್ರೆ ತಟ್ಟೆಯನ್ನ ಬಕೆಟ್ಟಿನ ಹೊರಗೆ ಅರ್ಧ ಒಳಗೆ ಅರ್ಧ ಇಡಕ್ಕಾಗಲ್ವಲ್ಲ! ಅದಕ್ಕೆ ಸ್ವಲ್ಪ ಊಹೆ ಉಪಯೋಗಿಸ್ಕೊಳೋಣ - ಬೇಕಾದ್ರೆ ಮನಸ್ನಲ್ಲಿ, ಈ ತಟ್ಟೆಯನ್ನ ನೀವು ಬಕೆಟ್ ಅಂಚಲ್ಲಿ ಸುತ್ತ್ ತಾ ಇರೋ ಹಾಗೆ ನಿಮ್ಮ ತಲೇ ಸುತ್ತಲೇ ಸುತ್ತುತ್ತಾ ಇದೆ ಅಂದ್ಕೊಳಿ. ಆದ್ರೆ, ನೀರಿಗೆ ಅದು ಮಾಡ್ತಿರೋ ಕೋನ ಮಾತ್ರ ಬದ್ಲಾಯ್ಸೋದು ಬೇಡ).

ಈಗ ಭೂಮಿ, ಚಂದ್ರ ಎರಡೂ ಬೇರೆ ಬೇರೆ ವೇಗದಲ್ಲಿ ಸುತ್ತುತ್ತಿವೆ. ಒಂದುವೇಳೆ ಚಂದ್ರ ಸುತ್ತುತ್ತಿರುವಾಗ ತಟ್ಟೆಯ ಅಂಚು ನೀರನ್ನ ಮುಟ್ಟೋ ಜಾಗದಲ್ಲಿರೋವಾಗ ನೀರಿನ ಅಂಚಿಂದ ನೋಡೋವ್ರಿಗೆ ಏನಾಗತ್ತೆ? ಚಂದ್ರ ಸೂರ್ಯನ್ನ ಮರೆ ಮಾಡ್ತಾನೆ ! ಇದೇ ಸೂರ್ಯ ಗ್ರಹಣ. ಇದು ಆಗ್ಬೇಕಾದ್ರೆ ಭೂಮಿ ಇಂದ ನೋಡುವಾಗ ಒಂದೇ ದಿಕ್ಕಲ್ಲಿ ಸೂರ್ಯ ಚಂದ್ರ ಎರಡೂ ಇರ್ಬೇಕು. ಹಾಗಾಗಿ ಅದು ಅಮಾವಾಸ್ಯೆ ದಿನ ಮಾತ್ರ ಸಾಧ್ಯ. ಈಗ ಈ ಎರಡು ಕಡೆಯಲ್ಲಿ ಮಾತ್ರ ಚಂದ್ರನ ಹಾದಿ (ತಟ್ಟೆ) ನೀರನ್ನ ಮುಟ್ತಾ ಇದೆ ಅಲ್ವಾ? ಈ ಎರಡು ಬಿಂದುಗಳಿಗೇ ರಾಹು-ಕೇತು ಅಂತ ಹೆಸರು. ಇಂಗ್ಲಿಷ್‌ನಲ್ಲಿ ಇವನ್ನೇ ascending node (ಮೇಲೆ ಚಿತ್ರದಲ್ಲಿ ಚಂದ್ರ ತಟ್ಟೆ ಅಂಚಲ್ಲಿ ಹೋಗ್ತಾ ಇರೋವಾಗ, ನೀರಿನ ಅಡಿಯಿಂದ ಮೇಲಕ್ಕೆ ಹೋಗೋ ಬಿಂದು ಅಂದ್ಕೊಳಿ) ಮತ್ತೆ descending node (ನೀರಿನ ಮೇಲಿಂದ ಕೆಳಕ್ಕೆ ಹೋಗೋ ಬಿಂದು) ಅಂತಾರೆ. ಈಗ ರಾಹುಗ್ರಸ್ತ ಗ್ರಹಣ ಅಂದ್ರೇನು? ಗ್ರಹಣವಾಗ್ತಿರೋ ಆಕಾಶಕಾಯ ರಾಹು ಬಿಂದು ಹತ್ತಿರ ಇದೆ ಅಂತ. ಕೇತು ಗ್ರಸ್ತ ಅಂದ್ರೆ, ಕೇತು ಹತ್ತಿರ ಇದೆ ಅಂತ. ಅಷ್ಟೇ. ಅದಕ್ಕಿಂತ ಆಳವಾದ ವಿಚಾರ ಏನೂ ಅಲ್ಲ. ಈ ರಾಹು-ಕೇತುಗಳನ್ನೇ ಕಥೆಗಳಲ್ಲಿ ರಾಕ್ಷಸ್ರು ಸೂರ್ಯನ್ನ ಚಂದ್ರನ್ನ ತಿಂದ್ಕೋತಾರೆ- ಮತ್ತೆ ಅವರಿಗೆ ಬಂದಿರೋ ಶಾಪದಿಂದ ಮತ್ತೆ ಬಿಟ್ಟುಬಿಡ್ತಾರೆ. ಇದರಿಂದಲೇ ಗ್ರಹಣ ಆಗತ್ತೆ ಅಂತ ಬಣ್ಣ ಕಟ್ಟಿ ಹೇಳ್ತಾರಷ್ಟೆ.ಭಯ ಬೇಡ. ಈ ಕಥೆಗಳೆಲ್ಲ ರಂಜನೆಗೆ ಅಷ್ಟೇ!

ಹಂಗಂದ್ರೆ, ನಮ್ಮವರಿಗೆ ಗ್ರಹಣಗಳು ಹೇಗೆ ಆಗ್ತಿದ್ವು ಅನ್ನೋದು ಗೊತ್ತಿರ್ಲಿಲ್ವಾ ಅಂತ ಯೋಚಿಸ್ತಿದ್ರೆ ನೀವು ತಪ್ಪು ಮಾಡ್ತಿದೀರ! ಮೊದಮೊದಲಿಗೆ ಗ್ರಹಣ ಹೇಗಾಗತ್ತೆ ಅಂತ ಚೆನ್ನಾಗಿ ವಿವರಿಸಿದ್ದೇ ನಮ್ಮ ಆರ್ಯಭಟ. ಆದ್ರೆ ಅದಕ್ಕೂ ಶತಮಾನಗಳ ಮೊದ್ಲೇ, ಈ ರಾಹು ಕೇತು ಬಿಂದುಗಳ ಜಾತಕ ಎಲ್ಲ ನಮ್ಮೋರು ಕಂಡ್‍ಹಿಡ್ದಿದ್ರು! ಒಂದು ಸಲ ಎಲ್ಲಾದ್ರೂ ದೇವಸ್ಥಾನದಲ್ಲಿ ನವಗ್ರಹ ಸ್ತೋತ್ರ ಮಾಡ್ತಿದ್ರೆ, ಅದನ್ನ ಕೂತ್ಕೊಂಡು ಕೇಳಿ. ಸೂರ್ಯ ಚಂದ್ರ ಬುಧ ಗುರು ಎಲ್ಲ ಗ್ರಹಗಳಿಗೂ ಒಂದು ರೂಪಕೊಟ್ಟು ಅವನ್ನು ಒಂದೊಂದು ಜಾಗದಲ್ಲಿ ಕೂರಿಸಿ "... ಮೇರುಂ ಪ್ರದಕ್ಷಿಣೇ ಕುರ್ವಾಣಂ... ಗ್ರಹಂ ಭಗವಂತಂ ... ಆಕಾರ ಮಂಡಲೇ..." ಅಂತೆಲ್ಲಾ ಸ್ತೋತ್ರ ಹೇಳಿ ಪೂಜೆಮಾಡುವಾಗ, ನಂತರ ರಾಹು ಕೇತುಗಳಿಗೆ ಬಂದಾಗ ".... ಮೇರುಂ ಅಪ್ರದಕ್ಷಿಣೇ ಕುರ್ವಾಣಂ ರಾಹುಂ/ಕೇತುಂ ಭಗವಂತಂ .... ಆಕಾರ ಮಂಡಲೇ...." ಇತ್ಯಾದಿ ಹೇಳಿ ಸ್ತುತಿಸುತ್ತಾರೆ. ವ್ಯತ್ಯಾಸ ಗಮನಿಸಿದ್ರಾ? ಬೇರೆ ಗ್ರಹಗಳಿಗೆಲ್ಲಾ ಪ್ರದಕ್ಷಿಣೇ ಕುರ್ವಾಣಂ ಅನ್ನೋರು, ರಾಹು-ಕೇತುವಿಗೆ ಮಾತ್ರ, ಅಪ್ರದಕ್ಷಿಣೇ ಕುರ್ವಾಣಂ ಅಂತಾರಲ್ಲಾ?

ನಮ್ಮ ಬಕೇಟ್ ತಟ್ಟೆ ಪ್ರಯೋಗದಲ್ಲಿ, ಭೂಮಿ ಸೂರ್ಯನ್ನ ಸುತ್ತೋ ಪಾತಳಿಚಂದ್ರಭೂಮಿಯನ್ನು ಸುತ್ತೋ ಪಾತಳಿ (plane) ಎರಡೂ ಬೇರೆ ಬೇರೆಯಾಗಿದ್ದು ಅವೆರಡೂ ಮುಟ್ಟೋ ಎರಡು ಬಿಂದುಗಳನ್ನ ರಾಹು-ಕೇತು ಅಂತ ಕರೀತಾರೆ ಅಂತ ಗೊತ್ತಾಗಿತ್ತಲ್ವಾ ನಮಗೆ? ಈಗ ಈ ರಾಹು ಕೇತು ಎರಡೂ ತಟ್ಟೆಯ ಎರಡು ವಿರುದ್ಧ ದಿಕ್ಕಿನಲ್ಲಿರುತ್ತೆ ಅನ್ನೋದನ್ನ ಗಮನಿಸಿ. ಅಂದ್ರೆ ಅವರ್ರಡೂ ಆಕಾಶದಲ್ಲಿ 180 ಡಿಗ್ರಿ ಅಂತರದಲ್ಲಿ ಇರುತ್ತವೆ. ಸರಿ ತಾನೇ?

ಪ್ರಯೋಗ ಮುಂದುವರಿಸೋಣ ಬನ್ನಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X