ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲಿಷ್‌ನಲ್ಲಿ ಇಪ್ಪತ್ತಮೂರುವರೆ ಅಕ್ಷರ!

By Staff
|
Google Oneindia Kannada News

Satyanarayana B.R., Bangaloreಮೇ 30ರಿಂದ ರಾಜ್ಯಾದ್ಯಂತ ಶಾಲಾಮಕ್ಕಳು ಸಮವಸ್ತ್ರ ಧರಿಸಿ ಪಾಟೀಚೀಲ ಹೆಗಲಿಗೇರಿಸಿಕೊಂಡು ಅಕ್ಷರ ಕಲಿಕೆಗೆ ಅಣಿಯಾಗಲಿದ್ದಾರೆ. ಸುರಾನ ಕಾಲೇಜಿನಲ್ಲಿ ಗ್ರಂಥಪಾಲರಾಗಿರುವ ಸತ್ಯನಾರಾಯಣ ಅವರು ತಮ್ಮ ಶಾಲಾದಿನಗಳ ಎರಡು ಸ್ವಾರಸ್ಯಕರ ಘಟನೆಗಳನ್ನು ಪ್ರಕಟವಾಗಲಿರುವ ತಮ್ಮ,'ಹೈಸ್ಕೂಲ್ ದಿನಗಳು' ಪುಸ್ತಕದಲ್ಲಿ ಮೆಲುಕು ಹಾಕಿದ್ದಾರೆ, ದಟ್ಸ್‌ಕನ್ನಡ ಓದುಗರಿಗಾಗಿ. ಮೆಲುಕಿನ ಜೊತೆಗೆ ಇಂಗ್ಲಿಷ್ ಜ್ಞಾನಾರ್ಜನೆಯ ಅಗತ್ಯದ ಕುರಿತು ಗಂಭೀರ ಚಿಂತನೆಯನ್ನೂ ಹರಿಬಿಟ್ಟಿದ್ದಾರೆ.

ಲೇಖಕ :ಸತ್ಯನಾರಾಯಣ ಬಿ.ಆರ್., ಬೆಂಗಳೂರು

ಚಂದ್ರಯ್ಯ ಎಂಬ ವಿದ್ಯಾರ್ಥಿ ಐದನೇ ತರಗತಿಯಿಂದಲೂ ಹಾಸ್ಟೆಲ್ಲಿನಲ್ಲಿದ್ದವನು. ಪರಿಶಿಷ್ಟ ಜಾತಿ ಮಾತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಐದನೇ ತರಗತಿಯಿಂದಲೂ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿತ್ತು. ನನ್ನದೇ ತರಗತಿಯವನು. ಆದರೆ ಇಂಗ್ಲಿಷ್ ಇರಲಿ ಕನ್ನಡವನ್ನೂ ಓದಲು ಬರೆಯಲು ಬರುತ್ತಿರಲಿಲ್ಲ. ಬಹುಶಃ ಅಷ್ಟು ದಡ್ಡ ವಿದ್ಯಾರ್ಥಿಯನ್ನು ನಾನೆಂದೂ ಕಂಡಿಲ್ಲ. ಆದರೂ ಪ್ರತಿ ವರ್ಷ ಪಾಸಾಗಿ ಹತ್ತನೇ ತರಗತಿಯವರಗೆ ಬಂದಿದ್ದ. ನಾವು ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಜಟಗೊಂಡ ಅವರು ಪಾಠ ಮಾಡುವಾಗ ಅವರು ಒಬ್ಬರ ಕೈಯಲ್ಲಿ ಪಾಠ ಓದಿಸುತ್ತಾ ಬೇರೆಯವರು ಕೇಳಿಸಿಕೊಳ್ಳುವಂತೆ ಹೇಳಿ, ಕೊನೆಯಲ್ಲಿ ತಾವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಹುಡುಗರು ಉತ್ತರ ಹೇಳದಿದ್ದಾಗ ಅವರೇ ಉತ್ತರವನ್ನು ಹೇಳಿ, ಪರೀಕ್ಷೆಯಲ್ಲಿ ಹೇಗೆ ಬರೆಯಬೇಕೆಂದು ಹೇಳುತ್ತಿದ್ದರು.

ಅದೊಂದು ದಿನ ಚಂದ್ರಯ್ಯನನ್ನು ಓದಲು ಹೇಳಿದರು. ಇಂಗ್ಲಿಷ್ ಪಾಠ. ಪುಸ್ತಕ ಹಿಡಿದುಕೊಂಡು ಎದ್ದು ನಿಂತ ಚಂದ್ರಯ್ಯ ಒಂದೆರಡು ನಿಮಿಷವಾದರೂ ಬಾಯಿ ಬಿಡಲಿಲ್ಲ. ನಮಗೆಲ್ಲಾ ಚಂದ್ರಯ್ಯನ ಬಂಡವಾಳ ಗೊತ್ತಿದ್ದರಿಂದ, ಏನಾಗುತ್ತದೆಯೋ ನೋಡೋಣ ಎಂದು ಕಾದು ಕುಳಿತಿದ್ದೆವು. ಓದೋ... ವಾರ್ಡನ್ ಮತ್ತೊಮ್ಮೆ ಹೇಳಿದರು. ಮತ್ತೂ ಒಂದು ನಿಮಿಷ ಕಳೆಯಿತು. ಅವರಿಗೆ ರೇಗಿ, ಏನಲೇ ಮಂಗ್ಯಾ ನನಮಗನ. ಓದು ಎಂದರೆ ಕಣ್ ಬಿಡ್ತಾ ನಿಂತೀಯಲ್ಲೊ. ಕಣ್ಣು ಕಾಣಂಗಿಲ್ಲೇನು. ಹೇಳು ಎಂದು ಪುಸ್ತಕ ತಿರುಗಿಸಿ ಬೆರಳಿನಲ್ಲಿ ನಿರ್ದೇಶಿಸುತ್ತಾ ಟಿ.ಎಚ್.ಇ. ಅಂದರೆ ದಿ, ಹೀಗೆ ಹೇಳಲೆ ಮಗನ ಎಂದು ಕೂಗಿದರು. ಅವನು ಪ್ರಾಮಾಣಿಕವಾಗಿ ಅಷ್ಟನ್ನು ಮಾತ್ರ ಹೇಳಿ ಮತ್ತೆ ಬಾಯಿಗೆ ಬೀಗ ಬಡಿದುಕೊಂಡ!

ಸಿಟ್ಟಿಗೆದ್ದ ವಾರ್ಡನ್ ಏನಲೇ ಮಗನ ಮೆಟ್ರಿಕ್ ಕಲಿಯಾಕ ಹತ್ತೀಯಾ. ಇಂಗ್ಲಿಷ್ ಅಕ್ಷರ ಬರಾಂಗಿಲ್ಲ ಅಂದ್ರ ಹೆಂಗ! ಹೋಗಲಿ ಇಂಗ್ಲಿಷ್‌ನಾಗ ಎಷ್ಟು ಅಕ್ಷರದಾವಪ್ಪ. ಅದಾರ ಹೇಳು ನೋಡಾನ ಎಂದರು.

ಆತ ಯಾವ ಅಳುಕೂ ಇಲ್ಲದೆ ಇಪ್ಪತ್ತನಾಲ್ಕು ಸಾರ್ ಎಂದು ಬಿಟ್ಟ. ನಾವೆಲ್ಲಾ ಗೊಳ್ ಎಂದು ನಕ್ಕೆವು. ಆದರೆ ಜಟಗೊಂಡ ಅವರಿಗೆ ನಿಜವಾಗಿ ಸಿಟ್ಟು ಬಂದಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಹುಡುಗ ಇಷ್ಟರ ಮಟ್ಟಿಗೆ ದಡ್ಡ ಇದ್ದರೆ ಹೇಗೆ ಎಂಬ ಚಿಂತೆ ಅವರದಾಗಿತ್ತು ಎನ್ನಿಸುತ್ತದೆ. ಅಲ್ಲದೆ ಅಲ್ಲಿಯವರೆಗೆ ಒಂದು ವರ್ಷವೂ ಫೇಲ್ ಆಗದೆ ಬಂದಿದ್ದ ಆತನನ್ನು ಕಂಡು ಅವರಿಗೆ ಮೈಯೆಲ್ಲಾ ಉರಿದಿರಬೇಕು.

ಹೋಗಲಿ ಮಗನಾ. ಕನ್ನಡನಾದರೂ ಓದುತ್ತೀಯಾ? ಅಂದರು. ಆತ ಹೌದೆಂದು ತಲೆಯಾಡಿಸಿದ. ಕನ್ನಡ ಪುಸ್ತಕ ಬಿಡಿಸಿ ಕೊಟ್ಟು ಓದು ಎಂದಾಗ ಮತ್ತೆ ಬಾಯಿಗೆ ಬೀಗ ಬಡಿದುಕೊಂಡವನಂತೆ, ಗೊಮ್ಮಟನಂತೆ ನಿಂತುಬಿಟ್ಟ. ಇದನ್ನು ಕಂಡು ಅವರ ಸಹನೆ ಒಡೆಯಿತು. ಹೊಡೆಯುವಂತೆ ಕೈ ಎತ್ತುತ್ತಾ, ಅಲ್ಲವೋ ಸೂಳಿಮಗನ, ಕನ್ನಡ ಕೂಡ ಓದಾಕೆ ಬರಾಂಗಿಲ್ಲ. ಇಂಗ್ಲಿಷ್‌ನಾಗೆ ಎಷ್ಟು ಅಕ್ಷರ ಅದಾವ ಅಂತ ಗೊತ್ತಿಲ್ಲ.... ಅಂತ ಅವರು ಹೇಳುತ್ತಿರುವಾಗಲೇ ಚಂದ್ರಯ್ಯ ಗೊತ್ತು ಸಾರ್, ಗೊತ್ತು ಸಾರ್. ಇಪ್ಪತ್ತಮೂರೂವರೆ ಅಕ್ಷರ ಅವೆ ಸಾರ್! ಎಂದು ಕೂಗಿಕೊಂಡ.

ಎತ್ತಿದ ಕೈಯನ್ನು ಹಾಗೆಯೇ ಇಳಿಸಿದ ಜಟಗೊಂಡ ಅವರು ಸುಸ್ತಾಗಿ ಅಲ್ಲಿದ್ದ ಟ್ರಂಕ್ ಮೇಲೆ ಕುಳಿತು ಬಿಟ್ಟರು. ಸ್ವಲ್ಪ ಹೊತ್ತಿನ ನಂತರ ಮಗನ ನಾನೀಗಲೇ ಹಾಸ್ಟೆಲ್ ಬಿಟ್ಟು ನಿನ್ನ ಓಡಿಸಿಬಿಡಬಹುದು. ಆದರೆ ಹುಡ್ಗ ಹತ್ತನೇ ತರಗತಿಯವರೆಗೆ ಪಾಸು ಮಾಡಿದ್ದಾನಲ್ಲ ಅಂತ ಯಾರದ್ರು ಕೇಳಿದರೆ ನಾನೇನೂ ಉತ್ತರ ಕೊಡಂಗಿಲ್ಲ. ಆದ್ದರಿಂದ ಇನ್ನೊಂದಾರು ತಿಂಗಳು ಹಾಸ್ಟೆಲ್ಲಿನ ಫ್ರೀ ಊಟ ತಿಂದು, ಪರೀಕ್ಷೆ ಕುಂತ ನಾಟ್ಕ ಮಾಡಿ ಮನಿಗೆ ಹೊರಡು ಮಗನ ಎಂದು ದುಃಖದ ಧ್ವನಿಯಲ್ಲಿ ಹೇಳಿ ಎದ್ದು ಹೊರಟರು. ಅಂದು ಪಾಠ ಮುಂದುವರೆಯಲಿಲ್ಲ.

ಟಿ.ಎಚ್.ಇ. - ದಿ; ಟಿ.ಐ.ಜಿ.ಇ.ಆರ್. - ಟೈಗರ್ ರಮೇಶ!

ರಮೇಶ ಎಂಬ ಇನ್ನೊಬ್ಬ ವಿದ್ಯಾರ್ಥಿಯಿದ್ದ. ಆತನನ್ನು ಕೆರೆಗಳ್ಳಿ ಎಂದು ಅವನ ಊರಿನ ಹೆಸರಿನಿಂದಲೇ ಕರೆಯುತ್ತಿದ್ದೆವು. ಆತ ಹಿಂದೆ ಹೆಡ್ಮಾಸ್ಟರಾಗಿದ್ದ ವೆಂಕಟಪ್ಪನವರ ದೂರದ ಸಂಬಂಧಿಯಂತೆ! ರನ್ನಿಂಗ್ ರೇಸ್‌ನಲ್ಲಿ ಪ್ರವೀಣನಾಗಿದ್ದ ಆತನಿಗೆ ಎ.ಬಿ.ಸಿ.ಡಿ. ನೋಡಿಕೊಂಡು ಓದಲು ಬರೆಯಲು ಮಾತ್ರ ಬರುತ್ತಿತ್ತು. ಪುಸ್ತಕ ಮುಚ್ಚಿ ಬರೆಯಲಾಗಲೀ, ಪದಗಳ ಸ್ಪೆಲ್ಲಿಂಗ್ ಹೇಳಲಾಗಲೀ ಆತನಿಗೆ ಕೊನೆಯವರೆಗೂ ಬರಲೇಯಿಲ್ಲ. ಹನ್ನೆರಡು ಅಟೆಂಪ್ಟ್ ಆದರೂ ಪಾಸಾಗದಿದ್ದರೆ, ಅವರೇ ಎಲ್ಲರನ್ನು ಗಾಂಧಿ ಪಾಸ್ ಮಾಡುತ್ತಾರೆ ಎಂದು ಆತ ಬಲವಾಗಿ ನಂಬಿದ್ದ!

ಒಂದು ದಿನ ಗಣಿತ ಮೇಷ್ಟ್ರಾದ ಜಿ.ಎಸ್.ಎಸ್. ಇಂಗ್ಲಿಷ್ ಕ್ಲಾಸ್ ತೆಗೆದುಕೊಂಡು ಇಂಗ್ಲಿಷ್ ಬಗ್ಗೆ ಪಾಠ ಮಾಡುತ್ತಿದ್ದರು. ಆ ದಿನ ಹಿಂದಿನ ಬೆಂಚಿನಲ್ಲಿ ಕುಳಿತು ಗಲಾಟೆ ಮಾಡುತ್ತಿದ್ದ ಈ ರಮೇಶ ಅವರ ಕಣ್ಣಿಗೆ ಬಿದ್ದ. ಅಪರೂಪಕ್ಕೆ ಇಂಗ್ಲಿಷ್ ಕ್ಲಾಸ್ ತೆಗೆದುಕೊಂಡು ತಮ್ಮ ಇಂಗ್ಲಿಷ್ ಪಾಂಡಿತ್ಯವನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಿದ್ದ ಬಿಸಿರಕ್ತದ ಯುವ ಮೇಷ್ಟ್ರು ಜಿ.ಎಸ್.ಎಸ್. ಅವರಿಗೆ ಹೇಗಾಗಿರಬೇಡ! ಗಣಿತದ ಕ್ಲಾಸ್‌ನಲ್ಲಿ ರಮೇಶ ದಡ್ಡನೆಂದು ಅವರಿಗೆ ತಿಳಿದಿದ್ದರಿಂದ ಅವನನ್ನು ಎದ್ದು ನಿಲ್ಲಿಸಿ ಪಾಠ ಓದುವಂತೆ ಹೇಳಿದರು. ಪುಸ್ತಕ ಹಿಡಿದು ನಿಂತ ರಮೇಶ ಟಿ.ಎಚ್.ಇ. - ದಿ, ಟಿ.ಐ.ಜಿ.ಇ.ಆರ್. - ಟೈಗರ್ ಎಂದು ಅಕ್ಷರಗಳನ್ನು ಹೇಳುತ್ತಾ ನಂತರ ಕೂಡಿಸಿ ಪದವನ್ನು ಹೇಳುತ್ತಾ ಓದತೊಡಗಿದ. ಅವನನ್ನು ಕೀಟಲೆ ಮಾಡಬೇಕೆಂದೋ ಏನೋ ಜಿ.ಎಸ್.ಎಸ್. ಹಿ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು ಎಂದರು, ಆತ ಹೇಳಲಿಲ್ಲ. ಅವರು ಅದನ್ನು ಬೋರ್ಡ್ ಮೇಲೆ ಬರೆದು ಇದು ಏನು? ಎಂದರು. ಆತ ನಿಧಾನವಾಗಿ ಎಚ್.ಇ. - ಹಿ ಎಂದು ಹೇಳಿದ. ಅದನ್ನು ಡಸ್ಟರ್‌ನಿಂದ ಒರೆಸಿದ ಜಿಎಸ್.ಎಸ್. ಮತ್ತೆ ಹಿ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು ಎಂದರು. ಪುಣ್ಯಾತ್ಮ ರಮೇಶ ಬಾಯಿ ಬಿಡಲೇ ಇಲ್ಲ. ಮೇಷ್ಟ್ರೇ ಮೊದಲು ನಗಲು ಪ್ರಾರಂಭಿಸಿದ್ದರಿಂದ ತರಗತಿಯ ಎಲ್ಲರೂ ಗೊಳ್ ಎಂದು ನಗಲಾರಂಭಿಸಿದರು. ಅವರು ಮತ್ತೆ ಷಿ ಎಂಬ ಪದವನ್ನೂ ಅದೇ ರೀತಿ ಬರೆದು ಅಳಿಸಿ ಆತನನ್ನು ಗೋಳು ಹುಯ್ದುಕೊಂಡರು. ಇಡೀ ತರಗತಿಯೇ ನಕ್ಕು ನಕ್ಕು ಸುಸ್ತಾಯಿತು.

ಈ ಎರಡು ಘಟನೆಗಳನ್ನು ಇಲ್ಲಿ ನಾನು ಪ್ರಸ್ತಾಪಿಸಲು ಕಾರಣ ಇಷ್ಟೆ. ಇಂಗ್ಲಿಷ್ ಎಂಬುದು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಭೂತವಾಗಿಯೇ ಕಾಡುತ್ತಿದೆ. ಅದು ನಮ್ಮದಾಗಲು ಸಾಧ್ಯವೇ ಆಗಿಲ್ಲ. ವ್ಯವಸ್ಥೆಯೂ ಅದಕ್ಕೆ ಪೂರಕವಾಗಿಲ್ಲ. ಇಂದೂ ತಕ್ಕಮಟ್ಟಿಗಾದರೂ ಒಳ್ಳೆಯ ಇಂಗ್ಲಿಷ್‌ನ್ನು ಕಲಿಸುವ ಮೇಷ್ಟ್ರುಗಳೂ ಹೆಚ್ಚಿಲ್ಲ. ಬಿ.ಎಸ್ಸಿ. ಪದವಿಯ ನಂತರ ಎರಡು ಸ್ನಾತಕೋತ್ತರ ಪದವಿ, ಒಂದು ಪಿಹೆಚ್.ಡಿ ಮಾಡಿರುವ ನನಗೂ ಇಂಗ್ಲಿಷ್ ಇನ್ನೂ ಕಬ್ಬಿಣದ ಕಡಲೆಯೇ ಆಗಿದೆ! ಆ ವಿಷಯವಾಗಿ ಆಗಾಗ ಕೀಳರಿಮೆಯೂ ಕಾಡುತ್ತದೆ!

ಅಂದಿನಂತೆ ಇಂದಿಗೂ ಇಂಗ್ಲಿಷ್ ಬೇಕೆ ಬೇಡವೇ ಎಂಬುದರ ಬಗ್ಗೆಯೇ ವೃಥಾ ವಾದವಿವಾದಗಳು ನಡೆಯುತ್ತಿರುವುದು ಮಾತ್ರ ದುರದೃಷ್ಟಕರ. ಇಂಗ್ಲಿಷ್ ಬೇಡವೇ ಬೇಡ ಎನ್ನುವವರು ಮೊದಲು ಯೋಚಿಸಬೇಕಾದ್ದು ಇಂಗ್ಲಿಷ್ ಇಂದಿನ ಮತ್ತು ಮುಂದಿನ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾದ ಭಾಷೆಯಾಗಿದೆಯೆ ಇಲ್ಲವೆ ಎಂಬ ಸಂಗತಿ. ಆಗಿಲ್ಲ ಎಂದು ಮೊಂಡುವಾದ ಹೂಡುವವರಿಗೆ ನಾವೇನು ಮಾಡಲಾಗುವುದಿಲ್ಲ. ಜಾಗತೀಕರಣದ ಒಳ್ಳೆಯ ಫಲವನ್ನು ನಾವು ಅನುಭವಿಸಲು ಸಿದ್ಧರಾಗಿರುವಂತೆ ಅದರಿಂದ ಬರುವ ಕೆಟ್ಟದ್ದನ್ನು ಅನುಭವಿಸಲೂ ನಾವು ಸಿದ್ಧರಿರಬೇಕಾಗುತ್ತದೆ. ಬರುವ ಒಳ್ಳೆಯ ಫಸಲನ್ನು ತಿನ್ನಲು ಕೇವಲ ಒಂದು ವರ್ಗಕ್ಕೆ ಸಾಧ್ಯವಾದರೆ, ಅದರ ಕೆಟ್ಟ ಫಸಲು ಇನ್ನೊಂದು ವರ್ಗಕ್ಕೆ ಮೀಸಲಾಗಬೇಕಾಗುತ್ತದೆ. ಇದಾಗಬಾರದು. ಆದ್ದರಿಂದಲೇ ಒಂದು ಭಾಷೆಯಾಗಿ ಇಂಗ್ಲಿಷ್ ಅಗತ್ಯವಾಗಿ ಬೇಕು ಎಂದರೆ ತಪ್ಪು ಎನ್ನಲಾಗುವುದಿಲ್ಲ ಅಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X