ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪಿರಲಿ : ದೇಶಭಕ್ತ, ಸ್ವಾಭಿಮಾನಿ ಸಾವರ್ಕರ್

By Staff
|
Google Oneindia Kannada News

Veer Savarkar
ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್.

*ರಾಮಚಂದ್ರ ಹೆಗಡೆ. ಸಿ .ಎಸ್
(
ಲೇಖನ ಆಧಾರ: ಚಕ್ರವರ್ತಿ ಸೂಲಿಬೆಲೆ ಅವರ 'ಅಪ್ರತಿಮ ಸ್ವಾತಂತ್ರವೀರ ಸಾವರ್ಕರ್' ಕೃತಿ)

ಈ ಸಾವರ್ಕರ್ ಅಂದರೆ ಯಾರು?' ಹಾಗೊಂದು ಪ್ರಶ್ನೆ ನನಗೆ ಎದುರಾಗಿದ್ದು ನನ್ನ ಕಂಪನಿಯಲ್ಲಿ. ಕಳೆದ ಮೇ 10 ರಂದು 'ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ'ಯ ಸ್ಮರಣೆಯಲ್ಲಿ ಪುಟ್ಟದೊಂದು ಈ-ಮೇಲ್ ಕಳಿಸಿದ್ದಕ್ಕೆ ನನ್ನ ಸಹೋದ್ಯೋಗಿಗಳಿಂದ ನನಗೆ ಎದುರಾದ ಪ್ರಶ್ನೆಯಿದು.

ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ 'ಸ್ವಾತಂತ್ರ್ಯ ಹೋರಾಟ' ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದೇಶದ ಬಗ್ಗೆ ನಾವಿಷ್ಟು ನಿರಭಿಮಾನಿಗಳೂ, ನಿರ್ವೀಯರೂ, ವಿದೇಶಿ ಚಿಂತನೆಗಳ ಆರಾಧಕರೂ ಆಗಿರುತ್ತಿರಲಿಲ್ಲವೇನೋ.


24/12/1910 ರಿಂದ 23/12/1960, ವಿದೇಶಕ್ಕೆ ತೆರಳಿ ಕ್ರಾಂತಿ ಕಾರ್ಯ ಸಂಘಟಿಸಿದ, ದೇಶಭಕ್ತಿ ಪ್ರದರ್ಶಿಸಿದ ಮಹಾಪರಾಧಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ 50 ವರ್ಷಗಳ ಕರಿನೀರಿನ ಶಿಕ್ಷೆ. ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ 'ಹೆದರಬೇಡಿ ಬ್ಯಾರಿಸ್ಟರ್ ಸಾಹೇಬರೇ, 1960 ರಲ್ಲಿ ನಮ್ಮ ಪರಮ ಕೃಪಾಳು ಸರ್ಕಾರ ಖಂಡಿತಾ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಎಂದಾಗ ಸಾವರ್ಕರ್ ಜೋರಾಗಿ ನಕ್ಕು '50 ವರ್ಷಗಳ ಕಾಲ ನಿಮ್ಮ ಸರ್ಕಾರ ಇದ್ದರೆ ತಾನೇ ?' ಎಂದು ಮರುಪ್ರಶ್ನಿಸಿ ಗತ್ತಿನಿಂದಲೇ ನಡೆದಿದ್ದರು.

ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ಸಾವರ್ಕರ್. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ ಸಾವರ್ಕರ್. ದಾಸ್ಯರಕ್ಕಸನ ಎದೆ ಮೆಟ್ಟಲು ಮುಂದಾಗಿದ್ದಕ್ಕೆ ತಾನು ಗಳಿಸಿದ್ದ ಬಿ.ಎ. ಪದವಿಯನ್ನೇ ಕಳೆದುಕೊಂಡ ಮೊಟ್ಟಮೊದಲ ಭಾರತೀಯ ಪದವೀಧರ, ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಬ್ರಿಟಿಷರಿಂದ 'ಬ್ಯಾರಿಸ್ಟರ್ ಪದವಿ'ಯನ್ನೇ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್, ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಮೊಟ್ಟಮೊದಲ ಲೇಖಕ ಸಾವರ್ಕರ್. 'ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ' ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು, ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತರರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊದಲ ರಾಜಕೀಯ ಖೈದಿ ಸಾವರ್ಕರ್.

ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಅಹಿಂಸೆಯ ಹೆಸರಲ್ಲಿ ಬ್ರಿಟಿಷರ ಕಾಲಿಗೆ ಬಿದ್ದು ಬಿದ್ದು ಆತ್ಮಾಭಿಮಾನವನ್ನೇ ಕಳೆದುಕೊಂಡಿದ್ದವರ ಮಧ್ಯೆ ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್. ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯಬಂದಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್.

ಬಾಲ್ಯದಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡ ಸಾವರ್ಕರ್ ಓರಗೆಯ ಮಕ್ಕಳೆಲ್ಲ ಆಟದಲ್ಲಿ ಮೈಮರೆತು ಕಾಲ ನೂಕುತ್ತಿದ್ದಾಗ ತಾವು ಮಾತ್ರಫಡ್ಕೆ, ಚಾಫೇಕರ್, ಶಿವಾಜಿಯಂತಹ ಧೀರರ ಕಥೆಗಳನ್ನು ಕೇಳಿ ರೋಮಾಂಚಿತಗೊಂಡು ತಾಯಿಯ ದಾಸ್ಯ ಮುಕ್ತಿಗಾಗಿ ಯೋಚನೆಗೆ ತೊಡಗಿದ್ದರು. ಹನ್ನೆರಡು- ಹದಿಮೂರನೆಯ ವಯಸ್ಸಿನಲ್ಲೇ ದೇಶ-ದಾಸ್ಯ-ಬಲಿದಾನದ ಹೆಸರನ್ನೇ ಕೇಳಿರದಿದ್ದಜನರನ್ನು ಒಟ್ಟುಗೂಡಿಸಿ 'ಮಿತ್ರ ಮೇಳ' ಕಟ್ಟಿದ ಸಾವರ್ಕರ್ ಮುಂದೆ ಅದನ್ನೇ 'ಅಭಿನವ ಭಾರತ' ಎಂಬ ಕ್ರಾಂತಿಕಾರಿಗಳ ಪಾಠಶಾಲೆಯನ್ನಾಗಿಸಿದರು. ಮುಂದೆ ಬ್ರಿಟಿಷರ ನೆಲದಲ್ಲಿಯೇ ಅವರನ್ನು ಬಗ್ಗು ಬಡಿಯಬೇಕೆಂಬ ಸಂಕಲ್ಪದಿಂದ ಇಂಗ್ಲೆಂಡಿಗೆ ತೆರಳಿ ಅಲ್ಲಿ ಇಂಗ್ಲೀ?ರಿಗೆ ಮಾನಸಿಕವಾಗಿ ತಮ್ಮನ್ನು ಮಾರಿಕೊಳ್ಳುತ್ತಿದ್ದಭಾರತೀಯನ್ನು ಬಡಿದೆಬ್ಬಿಸಿ ಕ್ರಾಂತಿಕಾರ್ಯಕ್ಕೆ ಮುನ್ನುಡಿ ಬರೆದರು. ಅವರ ಕಾರ್ಯದಿಂದ ಪ್ರೇರೇಪಣೆಗೊಂಡ 'ಮದನಲಾಲ್ ಧೀಂಗ್ರ' ದಾಸ್ಯ ರಕ್ಕಸನಎದೆ ಮೆಟ್ಟಿ ವಿದೇಶಿ ನೆಲದ ಮೊದಲ ಬಲಿದಾನಿಯಾಗಿ ಇತಿಹಾಸ ಸೃಷ್ಟಿಸಿದ.

Savarkar Sadan, ShivarajiPark, Dadar, Mumbai
ಸಾವರ್ಕರ್ ಸದನ್, ದಾದರ್, ಮುಂಬಯಿ

1857 ರ ಸಂಗ್ರಾಮವನ್ನು 'ಸಿಪಾಯಿದಂಗೆ' ಎಂದೇ ಕರೆದಿದ್ದ ಬ್ರಿಟಿಷರಿಗೆ ಸವಾಲಾಗಿ ನಿಂತು ಅದು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ನಿರೂಪಿಸುವ ಪುಸ್ತಕ ಬರೆದ ಸಾವರ್ಕರ್ ಆ ಮೂಲಕ ಭಗತ್ ಸಿಂಗ್, ಆಜಾದ್, ನೇತಾಜಿಯಂತಹ ಈ ದೇಶದ ಮಹಾನ್ ನಾಯಕರುಗಳಿಗೆ ಪ್ರೇರಣೆ ನೀಡಿದರು.

ದೇಶಭಕ್ತಿಯ ಅಪರಾಧಕ್ಕಾಗಿ ಬಂಧನಕ್ಕೊಳಗಾಗಿ ಮಾರ್ಗ ಮಧ್ಯೆ ಹಡಗಿನಿಂದ ಜಿಗಿದು ತಪ್ಪಿಸಿಕೊಂಡು ಸಮುದ್ರವನ್ನೇ ಈಜಿದ ಸಾಹಸಿ ಸಾವರ್ಕರ್. ದುರದೃಷ್ಟವಶಾತ್ ಸೆರೆಸಿಕ್ಕು 50 ವರ್ಷಗಳ ಕರಿನೀರಿನ ಶಿಕ್ಷೆಗೆ ಒಳಗಾದರು. ಅಂಡಮಾನಿನ ಆ ಕ್ರೂರ ಜೈಲಿನಲ್ಲಿ ಕೈಕಾಲುಗಳಿಗೆ ಕಬ್ಬಿಣದ ಸರಪಳಿ ಕಟ್ಟಿಸಿಕೊಂಡು, ಕೊಬ್ಬರಿಯ ಗಾಣವನ್ನು ಎತ್ತಿನಂತೆ ದಿನಕ್ಕೆ ಹತ್ತು ತಾಸು ಎಳೆಯುತ್ತಾ ಸರಿಯಾದ ಆಹಾರವಿಲ್ಲದೆ ಕ್ಷಯರೋಗ ಬಡಿದವರಂತೆ ಬಿಡುಗಡೆಯ ದಾರಿಯಿಲ್ಲದೆ, ಮಾತನಾಡಲು ಮನುಷ್ಯ ಸಹವಾಸವಿಲ್ಲದೆ, ನೊಣ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಘೋರ ಶಿಕ್ಷೆ ಅನುಭವಿಸಿದರು. ಬಿಡುಗಡೆಯ ನಂತರವೂ ಧರ್ಮ-ಸಂಸ್ಕೃತಿಯ ರಕ್ಷಣೆಗೆ ಶ್ರಮಿಸುತ್ತಾ, ಮೂಢನಂಬಿಕೆ, ಅಸ್ಪೃಶ್ಯತೆಗಳ ವಿರುದ್ಧ ಸಮರ ಸಾರಿದರು. ನೇತಾಜಿ ಸುಭಾಷ್ ಚಂದ್ರ ಬೋಸ್‌ರಿಗೆ ಪ್ರೇರಣೆ ನೀಡಿ ವಿದೇಶಕ್ಕೆ ತೆರಳಿ ಸಂಗ್ರಾಮದ ಮೂಲಕ ದಾಸ್ಯ ವಿಮೋಚನೆಯ ಮಾರ್ಗದರ್ಶನ ನೀಡಿದವರು ಸಾವರ್ಕರ್.

ಆದರೆ ಆ ಮಹಾನ್ ನಾಯಕನನ್ನು ಈ ದೇಶ, ಇಲ್ಲಿನ ಸರಕಾರ ನಡೆಸಿಕೊಂಡ ರೀತಿ ಮಾತ್ರ ಅತ್ಯಂತ ಹೇಯ. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. ಮುಂದೆ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಘೋಷಿಸಿತು. 1950 ರಲ್ಲಿ ಲಿಯಾಖತ್ ಅಲಿ ಭಾರತ ಭೇಟಿಗೆ ಬಂದಾಗ ಹಿಂದುತ್ವ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣಕ್ಕೆ ದೈಹಿಕವಾಗಿ ಜರ್ಜರಿತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರ್ಕರ್‌ರನ್ನು ಬಂಧಿಸಿ ಸರ್ಕಾರ ಬೆಳಗಾವಿ ಜೈಲಿಗೆ ಕಳಿಸಿತು. ಬ್ರಿಟಿಷರು ವಶಪಡಿಸಿಕೊಂಡಿದ್ದ ಸಾವರ್ಕರ್ ಮನೆಯನ್ನು ಸ್ವಾತಂತ್ರ್ಯಾ ನಂತರವೂ ಹಿಂದಿರುಗಿಸುವ ಸೌಜನ್ಯವನ್ನು ನೆಹರೂ ಸರ್ಕಾರ ತೋರಲಿಲ್ಲ. ಸಾವರ್ಕರ್ ಬಿಡುಗಡೆಗೆ ಆಗ್ರಹಿಸಿ ಸಹಿ ಸಂಗ್ರಹ ಮಾಡಿ ತಂದಾಗ ನೆಹರು ಅದನ್ನು ಹರಿದೆಸೆದಿದ್ದರು. ಸಾವರ್ಕರ್ ಗೌರವಾರ್ಥ ಅವರ ಅಭಿಮಾನಿಗಳು 'ಮೃತ್ಯುಂಜಯ ದಿವಸ' ಆಚರಿಸಿದಾಗ ಅದರ ವರದಿಯನ್ನು ಆಕಾಶವಾಣಿ ಬಿತ್ತರಿಸದಂತೆ ನೆಹರೂ ನೋಡಿಕೊಂಡರು. ಕೊನೆಗೆ ಸಾವರ್ಕರ್ ನಿಧನರಾದಾಗಲೂ ಅವರ ಪಾರ್ಥಿವವನ್ನು ಹೊತ್ತೊಯ್ಯಲು ಗನ್-ಕ್ಯಾರೇಜ್ ಸಿಗದಂತೆ ಮಾಡಲಾಯಿತು. ಸಂಸತ್ತಿನಲ್ಲಿ ಕನಿಷ್ಠ ಶ್ರದ್ಧಾಂಜಲಿಯನ್ನೂ ಅರ್ಪಿಸಲಿಲ್ಲ.

ಅವರು ಸಂಸತ್ತಿನ ಸದಸ್ಯರಲ್ಲ ಎಂಬ ಪೊಳ್ಳು ನೆಪ ನೀಡಿದ್ದರು ನೆಹರು. ಆದರೆ ರಷ್ಯಾದ ಸ್ಟಾಲಿನ್ ಸತ್ತಾಗ ಸಂಸತ್ತು ಕಂಬನಿ ಮಿಡಿದಿತ್ತು. 3 ವರ್ಷಗಳ ಹಿಂದೆ ಅಂಡಮಾನಿನ ಜೈಲಿನಲ್ಲಿ ಸಾವರ್ಕರ್ ಸ್ಮರಣೆಗಾಗಿ ಹಾಕಿದ್ದ ಫಲಕವನ್ನು ಕಿತ್ತೆಸೆಯುವ ನೀಚ ಕಾರ್ಯಕ್ಕೂ ನೆಹರು ವಂಶದ ಸರ್ಕಾರ ಮುಂದಾಯಿತು.ಇಂತಹ ನಿರಭಿಮಾನಿಗಳ ದೇಶದಲ್ಲಿ ಹುಟ್ಟಿದ್ದೇ ಸಾವರ್ಕರ್ ಮಾಡಿದ ತಪ್ಪೇನೋ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X