• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!

By Staff
|

ನಗೆಗನ್ನಡಂ ಗೆಲ್ಗೆ! ಐದುನೂರು ಚಿಲ್ಲರೆ ಪುಟಗಳ ಬೃಹತ್ ಗ್ರಂಥ. ಆಧುನಿಕ ಕನ್ನಡದಲ್ಲಿನ ವಿನೋದ ಸಾಹಿತ್ಯವನ್ನು ಕುರಿತು ಇಷ್ಟೊಂದು ಸಮಗ್ರತೆಯನ್ನು ಎಟುಕಿಸಿಕೊಂಡ ಇನ್ನೊಂದು ಪುಸ್ತಕ ಕನ್ನಡದಲ್ಲಿ ಈವರೆಗೆ ಬಂದೇ ಇಲ್ಲ.

  • ಪ್ರೊ. ಎನ್. ಶ್ರೀನಿವಾಸ ಉಡುಪ

ನಗೆಗನ್ನಡಂ ಗೆಲ್ಗೆ!(ಅಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯ)

ಸಂಪಾದಕರು : ಎಚ್.ಕೆ. ನಂಜುಂಡಸ್ವಾಮಿ ಮತ್ತು ಎಚ್.ವೈ. ರಾಜಗೋಪಾಲ್

ಪ್ರಕಾಶಕರು : ಕನ್ನಡ ಸಾಹಿತ್ಯ ರಂಗ, ನ್ಯೂ ಜೆರ್ಸಿ, ಯು.ಎಸ್.ಎ. ಮತ್ತು ಅಭಿನವ, ಬೆಂಗಳೂರು, 2007

ಪುಟಗಳು : 546 (ಸಂಪರ್ಕ : hyr1195@aol.com)

ಅಮೆರಿಕೆಯಲ್ಲಿ ನೆಲಸಿರುವ ಕನ್ನಡಿಗರು ಕನ್ನಡಕ್ಕೆ ಸಲ್ಲಿಸುತ್ತಿರುವ ಕೈಂಕರ್ಯ ನಿಜಕ್ಕೂ ಅಭಿನಂದನಾರ್ಹ ಮಾತ್ರವಲ್ಲ, ಅನುಕರಣೀಯ ಎಂಬುದಕ್ಕೆ ಅವರು ಇತ್ತೀಚೆಗೆ ಹೊರತಂದಿರುವ ನಗೆಗನ್ನಡಂ ಗೆಲ್ಗೆ! ಎಂಬ ಸಂಪುಟವೇ ಸಾಕ್ಷಿ. ಆಧುನಿಕ ಕನ್ನಡ ಸಾಹಿತ್ಯದಲ್ಲಿನ ಹಾಸ್ಯವನ್ನು ಕುರಿತಾದ ಈ ಪುಸ್ತಕ ಅಮೆರಿಕಾದಲ್ಲಿರುವ ಅನಿವಾಸಿ ಕನ್ನಡಿಗರ ಭಾಷಾಭಿಮಾನ, ಸಾಹಿತ್ಯಪ್ರೇಮ ಹಾಗೂ ರುಚಿಶುದ್ಧಿಗಳನ್ನು ಸ್ಫಟಿಕಸ್ಪಷ್ಟವಾಗಿ ಹೇಳುತ್ತಿದೆ.

ಮುನ್ನುಡಿಯ ಮಾತುಗಳಲ್ಲಿ ಶ್ರೀನಿವಾಸ ರಾಜು ಅವರು ಸರಿಯಾಗಿಯೇ ಗುರುತಿಸಿರುವಂತೆ ಕರ್ನಾಟಕದಲ್ಲಿ ವಾಸವಾಗಿರುವ ಕನ್ನಡಿಗರಿಗೇ ಇಲ್ಲದ ಆಸಕ್ತಿ, ಅಭಿಮಾನಗಳನ್ನು ಕರ್ನಾಟಕದಿಂದ ಸಾವಿರಾರು ಮೈಲಿ ದೂರ ನೆಲಸಿ, ಬದುಕಿಗಾಗಿ ವಿಭಿನ್ನ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕನ್ನಡಿಗರು ಉಳಿಸಿಕೊಂಡು, ಬೆಳಸಿಕೊಂಡು, ಬರುತ್ತಿರುವುದನ್ನು ಗಮನಿಸಿದಾಗ ಹೃದಯ ತುಂಬಿ ಬರುತ್ತದೆ. ಈ ಕೆಲಸದ ಹಿನ್ನೆಲೆಯಲ್ಲಿರುವುದು ಕರುಳು ಬಳ್ಳಿಯ ಜೊತೆಗಿನ ಭಾವನಾತ್ಮಕ ಸಂಬಂಧ! ಮುಂದಿನ ಪೀಳಿಗೆಯ ಅಮೆರಿಕನ್ನಡಿಗರೂ ಕನ್ನಡವನ್ನು ಕುರಿತು ಪ್ರೀತಿಯನ್ನು ಉಳಿಸಿಕೊಂಡು ಬರಲೂ ಇಂಥ ಕೆಲಸ ಪ್ರೇರಕಶಕ್ತಿಯಾದೀತು.

ನಗೆಗನ್ನಡಂ ಗೆಲ್ಗೆ! ಐದುನೂರು ಚಿಲ್ಲರೆ ಪುಟಗಳ ಬೃಹತ್ ಗ್ರಂಥ. ಆಧುನಿಕ ಕನ್ನಡದಲ್ಲಿನ ವಿನೋದ ಸಾಹಿತ್ಯವನ್ನು ಕುರಿತು ಇಷ್ಟೊಂದು ಸಮಗ್ರತೆಯನ್ನು ಎಟುಕಿಸಿಕೊಂಡ ಇನ್ನೊಂದು ಪುಸ್ತಕ ಕನ್ನಡದಲ್ಲಿ ಈವರೆಗೆ ಬಂದೇ ಇಲ್ಲ. ನಗೆನಾಡ ಸಿರಿವಂತರು ಹಾಗೂ ಹೊರನಾಡ ನಗೆಹೊನಲು ಎಂಬ ಎರಡು ಭಾಗಗಳಲ್ಲಿ ಇಲ್ಲಿನ ಲೇಖನಗಳು ಸಂಕಲಿತವಾಗಿವೆ. ಮೊದಲ ಭಾಗ ಅಧುನಿಕ ಕನ್ನಡದ ನಗೆಬರಹಗಾರರಾದ ಕೈಲಾಸಂ, ರಾಶಿ, ಕಸ್ತೂರಿ, ರಾಜರತ್ನಂ - ಹೀಗೆ ಸುಮಾರು ಇಪ್ಪತ್ಮೂರು ಮಂದಿ ಲೇಖಕರನ್ನೂ ಅವರ ಕೃತಿಗಳನ್ನೂ ಸಾಕಷ್ಟು ವಿವರವಾಗಿ ಪರಿಚಯಿಸುತ್ತದೆ.

ದೂರದ ಅಮೆರಿಕೆಯಲ್ಲಿದ್ದುಕೊಂಡು ಕರ್ನಾಟಕದ ಲೇಖಕರನ್ನೂ ಅವರ ಕೃತಿಗಳನ್ನೂ ಸಮಗ್ರವಾಗಿ ಪರಿಚಯಿಸುವುದು ಸುಲಭದ ಮಾತೇನಲ್ಲ. ಆದಾಗ್ಯೂ, ಎಲ್ಲ ಮಿತಿಗಳ ನಡುವೆ ಇಲ್ಲಿನ ಲೇಖನಗಳು ತಕ್ಕಷ್ಟು ಸಮಗ್ರವಾಗಿರುವಂತೆ ನೋಡಿಕೊಂಡಿರುವುದು ಎದ್ದುಕಾಣುವಂತಿದೆ. ತಮ್ಮ ಅನ್ನಿಸಿಕೆ ಅಭಿಪ್ರಾಯಗಳಿಗೆ ಸೂಕ್ತ ಆಧಾರಗಳನ್ನು ಒದಗಿಸಿ, ಲೇಖನಗಳಿಗೆ ಅಧಿಕೃತತೆ ಪ್ರಾಪ್ತವಾಗುವಂತೆಯೂ ಪ್ರಯತ್ನಿಸಲಾಗಿದೆ. ಇಷ್ಟಾದರೂ ಇಲ್ಲಿನ ಬರಹಗಳು ಕೇವಲ ಒಣ ಮಾಹಿತಿಗಳ ಸಂಗ್ರಹವಾಗಿರದೆ, ಸ್ವಾರಸ್ಯಪೂರ್ಣವಾಗಿದ್ದು ಅತ್ಯಂತ ವಾಚನೀಯವಾಗಿವೆ.

ಮೊದಲ ಭಾಗದಲ್ಲಿರುವ ಲೇಖನಗಳಿಂದಾಗಿ ಈ ಗ್ರಂಥಕ್ಕೆ ಒಂದು ಆಕರ ಗ್ರಂಥದ ಮೌಲ್ಯ ಪ್ರಾಪ್ತವಾಗಿದೆ ಎನ್ನಿಸಿದರೆ ಅತ್ಯುಕ್ತಿಯಲ್ಲ. ಮೊದಲ ಭಾಗದ ಮೊದಲ ಲೇಖನವಾದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬುದು ಕನ್ನಡದಲ್ಲಿನ ಇಂದಿನ ಹಾಸ್ಯ ಸಾಹಿತ್ಯದ ವಿಸ್ತಾರವಾದ ಸಮೀಕ್ಷೆಯಾಗಿದ್ದು ಮುಂದಿನ ಲೇಖನಗಳಿಗೆ ಉಚಿತವಾದ ಭೂಮಿಕೆಯನ್ನು ಒದಗಿಸುತ್ತದೆ. ಈ ಭಾಗದ ಉತ್ತರಾರ್ಧದಲ್ಲಿ ಬರುವ ಅಮೆರಿಕದ ಕನ್ನಡ ಬರಹಗಾರರು ಮತ್ತು ಹಾಸ್ಯ ಎಂಬ ಬರೆಹ ಕನ್ನಡ ನೆಲದಲ್ಲಿ ವಾಸವಾಗಿರುವ ನಮ್ಮಂಥವರಿಗೆ ಒಂದು ಹೊಸ ಲೋಕವನ್ನೇ ತೆರೆದಿಡುವಂತಿದೆ. ಅಮೆರಿಕೆಯಲ್ಲಿ ಕನ್ನಡ ಬರೆವಣಿಗೆ ಸಾಗಿ ಬಂದಿರುವ ದಾರಿಯನ್ನು ಸೂಚಿಸುತ್ತಾ, ಅಲ್ಲಿನ ಕನ್ನಡ ಸಾಹಿತಿಗಳನ್ನು ಈ ಲೇಖನ ನಮಗೆ ಪರಿಚಯಿಸುತ್ತದೆ. (ಈ ಲೇಖನ ಮೊದಲ ಭಾಗದ ಕೊನೆಯಲ್ಲಿದ್ದಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತು.)

ಪುರಂದರದಾಸರ ಸಾಹಿತ್ಯದಲ್ಲಿ ವಿಡಂಬನೆ, ಪಶ್ಚಿಮ ಕರಾವಳಿಯ ಹಾಗೂ ಮಲೆನಾಡ ಸೆರಗಿನ ಜನಪದ ಸಾಹಿತ್ಯದಲ್ಲಿ ಮಿಂಚುವ ಹಾಸ್ಯ ಈ ವಿಚಾರಗಳನ್ನು ಕುರಿತಾದ ಲೇಖನಗಳು ಸೊಗಸಾಗಿವೆ. ಎರಡನೆಯ ಭಾಗದಲ್ಲಿ ಸೇರಿಕೊಂಡಿರುವ ನಗೆಗಾರ ನಯಸೇ ಮತ್ತ್ರು ಕನ್ನಡದಲ್ಲಿ ಲಿಮರಿಕ್ಕುಗಳು ಲೇಖನಗಳು ಅಧ್ಯಯನ ಪೂರ್ಣ ಲೇಖನಗಳು. (ಈ ಬರೆಹಗಳೂ ಮೊದಲ ಭಾಗಕ್ಕೇ ಸೇರಬೇಕಾದಂಥವು.)

ಹೊರನಾಡ ನಗೆಹೊನಲುವಿನಲ್ಲಿ ಸಂಕಲಿತವಾಗಿರುವ ಬರೆಹಗಳು ಅತಿರೇಕವಿಲ್ಲದ, ಒರಟಲ್ಲದ, ಸದಭಿರುಚಿಯ ಹಾಸ್ಯ ಬರೆಹಗಳು. ಇಲ್ಲಿನ ಹಾಸ್ಯ ಸ್ಮಿತ, ಹಸಿತ, ವಿಹಸಿತ, ಉಪಹಸಿತ - ಸೂತ್ರಗಳಿಗೆ ಸೇರುವಂಥವು. ಹಾಸ್ಯ ಅಪಹಸಿತ, ಅತಿಹಸಿತವಾಗಬಾರದೆಂಬ ಎಚ್ಚರ ಎಲ್ಲ ಲೇಖಕರಲ್ಲೂ ಇದೆ. ಯಾರನ್ನೂ ಲೇವಡಿಮಾಡದ, ಚುಚ್ಚಿ ನೋಯಿಸದ ತಿಳಿಹಾಸ್ಯ ತುಂಬಿರುವ ಈ ಬರೆಹಗಳನ್ನು ಓದಿದಾಗ ಸಹಜವಾಗಿ ಮನಸ್ಸು ಮುದಗೊಳ್ಳುತ್ತದೆ. ಜನಾರ್ಧನ ಸ್ವಾಮಿಗಳ ವ್ಯಂಗ್ಯಚಿತ್ರಗಳು ನಾಡಿಗ್ ಅವರನ್ನು ನೆನಪಿಸುವಂತಿವೆ. ಅಲಮೇಲು ಅಯ್ಯಂಗಾರ್ ಅವರ ನಗೆನಾಟಕ ಅಮೆರಿಕೆಯ ಕೌಟುಂಬಿಕ ಬದುಕಿನ ತವಕ ತಲ್ಲಣಗಳನ್ನು ಹಾಸ್ಯಲೇಪನದೊಂದಿಗೆ ನಮ್ಮೆದುರು ತೆರೆದಿಡುತ್ತದೆ. ರಂಗದಮೇಲೂ ಯಶಸ್ವಿಯಾಗಬಹುದಾದ ನಾಟಕವಿದು.

ಒಂದೆರಡು ಚಿಕ್ಕಪುಟ್ಟ ಅರಕೆಗಳನ್ನು ಓದುಗರು ಗಮನಿಸಬಹುದೇನೋ. ಜಿ.ಪಿ. ರಾಜರತ್ನಂ ಅವರ ಕುರಿತಾದ ಲೇಖನದಲ್ಲಿ ಅವರು ಹಳೆಗನ್ನಡ/ನಡುಗನ್ನಡ ಹಾಸ್ಯಸಾಹಿತ್ಯವನ್ನು ತಮಗೆ ಸಹಜವಾದ ಹಾಸ್ಯಕಥನ ಶೈಲಿಯಲ್ಲಿ ಪರಿಚಯಿಸಿರುವ ನಕ್ಕಳಾ ತಾಯಿ ಎಂಬ ಗ್ರಂಥದ ಪ್ರಸ್ತಾಪ ಮಾಡಬಹುದಿತ್ತು. ಹಾಗೆಯೇ, ಡಾ. ಶಿವರಾಮ ಕಾರಂತರ ಗ್ನಾನ, ದೇವದೂತರು, ಹಳ್ಳಿಯ ಹತ್ತು ಸಮಸ್ತರು-ಇತ್ಯಾದಿಗಳಲ್ಲಿನ ಹಾಸ್ಯವನ್ನು ಕುರಿತು ಒಂದು ಲೇಖನ ಸೇರಿಸಬಹುದಿತ್ತು. ಇಂಥವುಗಳನ್ನು ಬೊಟ್ಟಿಟ್ಟು ಹೇಳುವುದು ಸುಲಭ. ಇಂಥದೊಂದು ಗ್ರಂಥವನ್ನು ಹೊರತರಬೇಕಾದರೆ ಶ್ರಮ, ಶ್ರದ್ಧೆ, ಸಮರ್ಪಣಾಭಾವ ಎಲ್ಲವೂ ಅಗಾಧ ಪ್ರಮಾಣದಲ್ಲಿರಬೇಕು. ಸಂಪಾದಕದ್ವಯದಲ್ಲಿ ಅವೆಲ್ಲವೂ ಇರುವುದರಿಂದಲೇ ನಗೆಗನ್ನಡಂ ಗೆಲ್ಗೆ! ಕನ್ನಡಕ್ಕೆ ಒಂದು ಮೌಲಿಕ ಕೊಡುಗೆಯಾಗಿ ರೂಪುಗೊಳ್ಳಲು ಸಾಧ್ಯವಾಗಿದೆ.

[ವಿಮರ್ಶಕರ ವಿಳಾಸ : ನಿವೃತ್ತ ಇಂಗ್ಲಿಷ್ ಪ್ರ್ರಾಧ್ಯಾಪಕ, ಕಮಲ ನೆಹರು ಕಾಲೇಜು, ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ ]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X