• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಲ್ಲಬೇಡಿರಯ್ಯ ಕುಂಬಳ ಕಾಯಿಯನ್ನು !

By Staff
|

ದಸರೆಯ ನೆಪದಲ್ಲಿ ಲಕ್ಷಾಂತರ ಕುಂಬಳಗಳು ಕೆಂಪು ಬಳಿದುಕೊಂಡು ಅಪ್ಪಚ್ಚಿಯಾದ ಚಿತ್ರಗಳು ಇನ್ನೂ ಕಣ್ಣಮುಂದೆ ಸರಿದಾಡುತ್ತಿವೆ. ಒಮ್ಮೆ , ಯೋಚಿಸಿ- ಒಪ್ಪೊತ್ತು ಊಟಕ್ಕೂ ಹೋರಾಟ ನಡೆಸುವ ಕೋಟ್ಯಂತರ ಜನರಿರುವ ಈ ನೆಲದಲ್ಲಿ ಕುಂಬಳದ ರೂಪದಲ್ಲಿ ಎಷ್ಟೊಂದು ಆಹಾರ ಪೋಲಾಗುತ್ತಿದೆ..... ಮತ್ತೊಂದು ಕುಂಬಳ ನೆಲಕ್ಕಪ್ಪಳಿಸುವ ಮುನ್ನ, ದಯವಿಟ್ಟು ಈ ಲೇಖನ ಓದಿ.

  • ಡಾ. ಹಳೇಬೀಡು ಸ್ವಾಮಿ , ಬೆಂಗಳೂರು- 79

ದಸರ ಎಂಬುದು ಒಂದು ಮಹಾ ಹಬ್ಬ, ಹಾಗೂ ಮಹಾ ಪೂಜೆ. ದುಷ್ಟ ಶಿಕ್ಷಕಿ- ಶಿಷ್ಟ ರಕ್ಷಕಿ ಚಾಮುಂಡೇಶ್ವರಿಯ ಪೂಜೆ. ಮಹಿಷಾಸುರ, ರಕ್ತಬೀಜಾಸುರ ಮುಂತಾದ ಮಹಾರಾಕ್ಷಸರ ಮೇಲೆ ವಿಜಯ ಸಾಧಿಸಿದ ನೆನಪಿನ ದಿನ ವಿಜಯ ದಶಮಿ. ರಾಕ್ಷಸರೆಂದರೆ ಸತ್ಪ್ರಜಾ ಪೀಡಕರು. ದೇವತೆಗಳನ್ನೂ ಬಿಡುತ್ತಿರಲಿಲ್ಲ-ಕಾಡುತ್ತಿದ್ದರು.

ಈ ಸಂದರ್ಭದಲ್ಲಿ ಆ ಶಕ್ತಿ ಪೂಜೆ ಬಿಟ್ಟು ಇನ್ನೆಲ್ಲ ದೇವರ ಪೂಜೆ ಹಾಗೂ ತಮ್ಮ ತಮ್ಮ ಆಯುಧಗಳ ಪೂಜೆಯನ್ನು, ರಾಜ-ಮಹಾರಾಜರ ಈ ಹಬ್ಬವನ್ನು ಎಲ್ಲರೂ ಮನೆ ಮನೆಗಳಲ್ಲಿ ಆಚರಿಸುತ್ತಿದ್ದಾರೆ. ದೇವಿಯ ಪೂಜೆಯ ನಂತರ ಆಯುಧಗಳಿಗೆ, ಸಂಬಂಧಪಟ್ಟ ದೇವತೆಗಳಿಗೆ ಪೂಜೆ ಹಾಗೂ ತಮಗೆ ಪ್ರೀತಿಯಾದದ್ದರ ಅರ್ಪಣೆ/ಸಮರ್ಪಣೆಗಳು ನಡೆಯುತ್ತವೆ. ಆನೇಕ ಕಡೆ ಅನಂತರ ಅನ್ನದಾನ, ವಸ್ತ್ರದಾನ ಇತ್ಯಾದಿ ಅನೇಕ ತರಹದ ದಾನಗಳು ನಡೆಯುತ್ತವೆ. ಸಂತೋಷ. ಆದರೆ ದಾನದ ನೆಪದಲ್ಲಿ ಅನೇಕ ಕಡೆ ಪ್ರಾಣಿಬಲಿದಾನ ನಡೆಯುತ್ತಿತ್ತು,ಇಂದೂ ನಡೆಯುತ್ತಿದೆ. ದಾನದ ಹೆಸರಿನಲ್ಲಿ ಪ್ರಾಣಿ ಹಿಂಸೆ ಆಗಬಾರದು.

'Don't kill Ash Gourd'ಬಹಳ ಕಾಲದಿಂದಲೂ ಯಜ್ಞ/ಯಾಗಗಳ ಕೊನೆಯಲ್ಲಿ ನಡೆಯುವ ಪ್ರಾಣಿಗಳ ಬಲಿಯಂತೆ ಈ ಪೂಜೆಯಲ್ಲೂ ಪ್ರಾಣಿಬಲಿ ಆಚರಣೆಗೆ ಬಂದಿದ್ದು ಒಂದು ಪ್ರಮಾದ. ಬ್ರಿಟಿಶರ ಕಾಲದಲ್ಲಿ ಇದರ ವಿರುದ್ಧ ಕಾನೂನು ಬಂದದ್ದರಿಂದ, ಅಹಿಂಸಾವಾದಿಗಳು ಹೋರಾಡಿದ್ದರಿಂದ ಈ ಬಲಿ ಬಹಳ ಕಡಮೆ ಆಯಿತು. ಹಳ್ಳಿ ಹಳ್ಳಿಗಳಲ್ಲೂ ಊರಮುಂದೆ, ಸಾವಿರಾರು ಜನರ ಮುಂದೆ ನಡೆಯುತ್ತಿದ್ದ ಈ ಪ್ರಾಣಿವಧೆ ಬಹುತೇಕ ನಿಂತೇ ಹೋಯಿತು.

ಬಹಳ ಕಾಲದಿಂದಲೂ ವಿಜಯದಶಮಿಯಂದು ದುಷ್ಟರ ಮೇಲೆ ಶಿಷ್ಟರು ವಿಜಯ ಸಾಧಿಸಿದ ಕುರುಹಾಗಿ ವಿಜಯೋತ್ಸವ ಆಚರಿಸುತ್ತಾ ಬಂದಿದ್ದೇವೆ. ಸಂತೋಷ. ಆದರೆ ಪ್ರಜಾಪೀಡಕರಾದ ರಾಕ್ಷಸರು ಈ ಭೂಮಿಯ ಮೇಲಿಂದ ತೊಲಗಿದರೆ ? ಇಲ್ಲ. ದಿನೇ ದಿನೇ ಹೆಚ್ಚುತ್ತಿದ್ದಾರೆ. ಕೃಷ್ಣ ಪರಮಾತ್ಮ ಹೇಳಿದಂತೆ '....ಸಂಭವಾಮಿ ಯುಗೇ ಯುಗೇ" ಆಗಬೇಕಾಗಿದೆ. ಇನ್ನೆಷ್ಟು ದಿನ ಕಾಯಬೇಕೋ ಅವನಿಗಾಗಿ.

ಪ್ರಾಣಿ ವಧೆಯನ್ನು ಒಪ್ಪದ ಅಹಿಂಸಾವಾದಿಗಳು, ಇದನ್ನು ವಿರೋಧಿಸುತ್ತಾ ಬಂದರು. ಅವರ ಒತ್ತಡದಿಂದ ಪರಿಸ್ಥಿತಿ ಬದಲಾಯ್ತು. ಆಗ ಪ್ರಾಣಿಬಲಿಯ ಸಂಕೇತವಾಗಿ, ಬೇರೆ ಏನನ್ನಾದರೂ ಬಲಿ ಕೊಡಲಿಕ್ಕೆ ಸಿಕ್ಕಿದ ಬದಲಿ ವಸ್ತು ಕುಂಬಳ ಕಾಯಿ. ಕುಂಬಳ ಕಾಯಿಯ ಒಳಗೆ ಕುಂಕುಮ ಹಾಕಿ(ತಿನ್ನುವ ತರಕಾರಿಯನ್ನ ಕೆಡಿಸಿ) ಹೊರಗೆ ತಂದು ಚಚ್ಚಿ ಬಿಸಾಕಿದಾಗ ರಕ್ತದ ಬಣ್ಣದ ಮುದ್ದೆ ಮುದ್ದೆಯಾಗಿ ಬಿದ್ದಿರುವ ಕುಂಬಳ ಕಾಯಿಯ ಚೂರುಗಳು ಕಡಿದು ಬಿಸಾಡಿದ ಪ್ರಾಣಿಗಳ ಮಾಂಸದ ಮುದ್ದೆಗಳನ್ನೇ ಹೋಲುತ್ತವೆ. ಪ್ರಾಣಿಗಳನ್ನು ಬಲಿಕೊಟ್ಟು ಅಭ್ಯಾಸವಾದ ಜನಕ್ಕೆ ಇದೊಂದು ಸಮಾಧಾನ.

'Don't kill Ash Gourd'ಪೂಜೆಯ ನಂತರ ದಾನ/ತ್ಯಾಗ ನಡೆಯಬೇಕಾದದ್ದು ಸತ್ಸಂಪ್ರದಾಯ. ಇದು ಅನ್ನದಾನವಾಗಬೇಕು. ವಸ್ತ್ರದಾನವಾಗಬೇಕು. ದಾನ ಯಾರಿಗೆ ? ಬಡವರಿಗೆ, ಅಂದರೆ ದೇವರ ಮಕ್ಕಳಿಗೆ ಸಿಗಬೇಕು. ರಾಜ ಮಹಾರಾಜರಿಗೆ ಮತ್ತು ಶ್ರೀಮಂತರಿಗೆ ಬಡವರು, ಕಣ್ಣಿಗೆ ಬೀಳುತ್ತಿರಲಿಲ್ಲ. ದಾನವನ್ನು ಪಡೆದು, ಉಂಡು ತಿಂದು ಮಲಗಿ ಮಾರನೇ ದಿನ ಕೆಲಸಕ್ಕೆ ಬರದಿದ್ದರೆ ಏನು ಗತಿ ಎಂಬ ಕಾರಣಕ್ಕಾಗಿ ದಾನದ ಪಟ್ಟಿಯಲ್ಲಿ ಅವರನ್ನು ಬಿಟ್ಟಿರಬಹುದು. (ಅದೇ ಕಾರಣಕ್ಕಾಗಿ ಇಂದೂ ಹಾಗೆ ಮಾಡುವುದನ್ನು ನೋಡಬಹುದು, ಶನಿವಾರ ಬಟವಾಡೆ ಮಾಡಿದರೆ ಅಂದರೆ ವಾರದ ಸಂಬಳದ ಬಾಕಿಯನ್ನೆಲ್ಲಾ ಕೊಟ್ಟರೆ, ಸೋಮವಾರ ಕೆಲಸಕ್ಕೆ ಬರುವುದಿಲ್ಲ).

ಈ ಪ್ರಾಣಿಬಲಿಯನ್ನು, ಅಹಿಂಸೆ-ಪ್ರಧಾನವಾದ ಬೌದ್ಧ, ಜೈನ ಹಾಗೂ ವೀರಶೈವ/ಬಸವ ಧರ್ಮಗಳು ಖಂಡಿಸಿದವು. ಬ್ರಿಟೀಶರ ಕಾಲದಲ್ಲಿ ಈ ಪ್ರಾಣಿವಧೆ ವಿರುದ್ಧ ಸಜ್ಜನರು ಹೋರಾಡಿ ಪ್ರಾಣಿಬಲಿಯ ವಿರುದ್ಧ ಕಾನೂನನ್ನೇ ತಂದರು. ಆ ಕಾನೂನುಗಳು ಈಗಲೂ ಇವೆ. ಕಡತದಲ್ಲಿ, ಕಾಗದದ ಮೇಲೆ. ಈಗೀಗ ನಮ್ಮ ಮಂತ್ರಿ ಮಹೋದಯರು , ಕಾನೂನು ಪಾಲಕರ ಮುಂದೇ, ( ಮನೇಕಾ ಗಾಂಧಿ ಮಂತ್ರಿಯಾಗಿದ್ದಾಗಲೆ/ ಬದುಕಿರುವಾಗಲೇ), ಪೂಜಾ ಸ್ವಾತಂತ್ರ್ಯವೆಂದು ತಮ್ಮ ತಮ್ಮ ಮನೆ-ದೇವರಿಗೆ ಶಕ್ತಿಯಿದ್ದಷ್ಟು ಪ್ರಾಣಿಗಳನ್ನು ಬಲಿಕೊಟ್ಟು, ಅಲ್ಲೇ ಉಂಡೂ ತಿಂದೂ ಬರುತ್ತಿದ್ದಾರೆ. ಇದೊಂದು ನಾವು ಇಂದು ಹಿಂದಕ್ಕಿಡುತ್ತಿರುವ ಹೆಜ್ಜೆ. ಕಾನೂನು ಪಾಲಕರು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಬಡ ಪ್ರಾಣಿಗಳಿಗಾಗಿ ಹೋರಾಡುವವರಾರೂ ಇಲ್ಲ. ಕತ್ತರಿಸಿ ಬಿಸಾಕಿದ ಪ್ರಾಣಿಗಳ ಚೂರುಗಳು ಪರಿಸರವನ್ನು ಕೆಡಿಸುವುದಿಲ್ಲವೆ? ಆ ಬಡ ಪ್ರಾಣಿಗಳನ್ನು ಸೃಷ್ಟಿಸಿದ ಸರ್ವ ಪ್ರಾಣಿಗಳ ತಂದೆಯಾದ ಆ ದೇವರಿಗೆ ನೋವಾಗುವುದಿಲ್ಲವೆ? ದೇವರಿಗೂ ಪ್ರೀತಿಯಾಗದ ಈ ವ್ಯರ್ಥ ಪೂಜೆಯೇಕೆ?

ಈ ಪಾಪದ ಕೆಲಸ ಮಾಡಬಾರದೆಂದು ತಿಳಿದೂ, ಯಶೋಧರ ಚರಿತೆಯಲ್ಲಿ, ರಾಜ ಯಶೋಧರನ ತಾಯಿ, ಮಗನ ಕೆಟ್ಟ ಕನಸಿನ ಪರಿಹಾರಕ್ಕಾಗಿ ಹಿಟ್ಟಿನಲ್ಲಿ ಒಂದು ಕೋಳಿಯನ್ನು ಮಾಡಿ ಅದನ್ನು ಬಲಿ ಕೊಡುತ್ತಾಳೆ. ಆದರ ಫಲವಾಗಿ ಏಳೇಳು ಜನ್ಮಗಳಲ್ಲಿ ಅವರೆಲ್ಲಾ ಪಡಬಾರದ ಕಷ್ಟ ಅನುಭವಿಸುತ್ತಾರೆ. ಅಂದರೆ ಮನಸ್ಸಿನಲ್ಲಿಯ ಬಲಿಯೂ ಒಳ್ಳೆಯದಲ್ಲ.

ಅದಿರಲಿ, ಇಂದಿನ ಈ ಕುಂಬಳ ಕಾಯಿಯ ಬಲಿಯೇಕೆ. ರಾಶಿ ರಾಶಿಯಾಗಿ ರಸ್ತೆಯ ಬದಿಯಲ್ಲಿ 'ಬಲಿಗಾಗಿ" ಕಾಯುತ್ತ ಬಿದ್ದಿರುವ ಕುಂಬಳ ಕಾಯಿಯನ್ನ ನೋಡಿದರೆ ನನಗೆ ವ್ಯಸನವಾಗುತ್ತೆ. ಕುಂಬಳ ಕಾಯಿಯನ್ನು, ಒಳಗೆ ಕುಂಕುಮ ಹಾಕಿ ಕೆಡಿಸಿ, ಚಚ್ಚಿ ಬಿಸಾಡಬೇಕೇಕೆ ? ಚಚ್ಚಿ ಬಿಸಾಡುವ ಬದಲು ಅದನ್ನೇ ಬಡವರಿಗೆ ದಾನ ಮಾಡಿದರೆ ದೇವರೊಪ್ಪುವುದಿಲ್ಲವೆ? ಕುಂಬಳ ಕಾಯಿ ಕೊಂಡು ತಿನ್ನಲಾಗದ ಬಡವರಿದ್ದಾರೆ. ಕುಂಬಳ ಕಾಯಿ ಅಮೃತವಂತೆ. ಆಯುರ್ವೇದದಲ್ಲಿ ಅದಕ್ಕೆ ಬಹಳ ಪ್ರಾಧಾನ್ಯವಿದೆ. ಅದರಿಂದ ಅನೇಕ ತರಹದ ಲೇಹ(ಟಾನಿಕ್‌/ಔಷಧಿ)ಗಳನ್ನು ತಯಾರಿಸುತ್ತಾರೆ.

ನಮ್ಮೂರಲ್ಲಿ, ನಮ್ಮ ಮನೆಯಲ್ಲಿ ಕುಂಬಳ ಕಾಯಿ ಬಳ್ಳಿಗಳು ತಾವಾಗೆ ಅನೇಕ ಬಾರಿ ಹುಟ್ಟಿ ಪ್ರತಿವರ್ಷವೂ ಬಹಳ ಕಾಯಿಗಳನ್ನು ಬಿಡುತ್ತಿದ್ದವು. ನಮ್ಮ ತಂದೆಯವರಿಗೆ ಇದು ಪ್ರಿಯವಾದ ತರಕಾರಿ. ಆರೋಗ್ಯಕ್ಕೆ ಒಳ್ಳೆಯದೆಂದು ಎಲ್ಲರಿಗೂ ಹೇಳುತ್ತಿದ್ದರು. ಅನೇಕರಿಗೆ ಬಲವಂತವಾಗಿ ಕೊಟ್ಟು ತಿನ್ನಲು ಹೇಳುತ್ತಿದ್ದರು.

ಬೆಂಗಳೂರಲ್ಲಿ ನಾವು ಮನೆ ಕಟ್ಟಿದ ಹೊಸದರಲ್ಲಿ ಒಂದು ಕುಂಬಳದ ಬಳ್ಳಿ ತಾನಾಗಿ ಹುಟ್ಟಿ ಬಹಳ ಕಾಯಿ ಬಿಟ್ಟು ನನ್ನ ಈ ಹಳೆಯ ಕತೆಯನ್ನೆಲ್ಲಾ ಜ್ಞಾಪಕಕ್ಕೆ ತಂದಿತ್ತು. ನನಗೆ ಪ್ರಿಯವಾದ ಈ ಕುಂಬಳ ಕಾಯಿಯನ್ನು ಯಾರಾದರೂ ಚಚ್ಚಿ ಬಿಸಾಕಿದರೆ ನನ್ನ ಮನಸ್ಸಿಗೆ ನೋವಾಗುತ್ತದೆ. ಹೇಳಲಾರೆ, ಬಿಡಲಾರೆ. ಅದಕ್ಕೆ ಇಲ್ಲಿ ಬರೆಯುತ್ತಿದ್ದೇನೆ. ನಿಮಗೆ ಇದನ್ನೋದಿ ನೋವಾಗಿದ್ದರೆ ಕ್ಷಮಿಸಿ, ಮುಂದೆ ಓದಬೇಡಿ.

ಈಗ ನನ್ನದೊಂದು ಪ್ರಾರ್ಥನೆ. ಬೇಕಾದಷ್ಟು ಪೂಜೆ ಮಾಡಿ, ಪುರೋಹಿತರಿಗೆ ಬೇಕಾದಷ್ಟು ದಕ್ಷಿಣೆ ಕೊಡಿ. ಕುಂಬಳ ಕಾಯಿಯನ್ನು ಮಾತ್ರ ದೇವರಿಗೆ ತೋರಿಸಿ/ಅರ್ಪಿಸಿ, ಬಡವರಿಗೆ ದಾನ ಮಾಡಿ. ಬೇಕಿದ್ದರೆ ಪುರೋಹಿತರನ್ನು ಒಪ್ಪಿಸಿ ಬಡವರಿಗೆ ದಾನ ಮಾಡಿ.(ಪ್ರಸಾದವನ್ನು ಬೇರೆಯವರಿಗೆ, ಅದರಲ್ಲೂ ಕೆಳಗಿನವರಿಗೆ ಕೊಡುವಂತಿಲ್ಲ ಹಿಂದೂಗಳಲ್ಲಿ. ಹಾಗೆ ಕೊಟ್ಟರೆ ದೇವರಿಗೆ ಅವಮಾನ ಮಾಡಿದಂತೆ ಎಂಬ ನಂಬಿಕೆ ಇದೆ. ಆದರೆ ಅದಕ್ಕೆ ನಿಜವಾದ ಕಾರಣ ಬೇರೆ, ಅಷ್ಟು ವಸ್ತು ಪರರ ಪಾಲಾಗಿ ನಷ್ಟವಾದೀತೆಂಬ ದುರಾಸೆಯೇ ಇರಬೇಕೆಂದು ನನ್ನ ನಂಬಿಕೆ). ನಾನು ಹೇಳಿದ ಹಾಗೆ ಮಾಡಿದರೆ ಬಡವರೂ ನಿಮಗೆ ಶುಭ ಹಾರೈಸುತ್ತಾರೆ. ಪ್ರೀತಿಯಿಂದ ತನ್ನ ಮಕ್ಕಳಿಗೆಂದು ದೇವರು ಇತ್ತ ಫಲ ಹಾಳಾಗದೆ ನಮ್ಮ-ನಿಮ್ಮಂತೆಯೇ ದೇವರ ಮಕ್ಕಳಾದ ಬಡವರಿಗೆ ಸೇರಿದ್ದು ನೋಡಿ ದೇವರೂ ನಿಮ್ಮನ್ನು ಹರಸುತ್ತಾನೆ.

ನಂಬಿ ನನ್ನ ಮಾತನ್ನು. ಒಂದು ಸಾರಿ ಮಾಡಿ ನೋಡಿ. ಭಗವದ್ಗೀತೆಯಲ್ಲಿ ಕೃಷ್ಣನೇ ಹೇಳಿದ್ದಾನೆ. 'ಪತ್ರಂ ಪುಷ್ಪಂ ಫಲಂ ತೋಯಂ...." ಎಂದು. ಪ್ರಾಣಿ ಬಲಿಯೂ ಬೇಕಿಲ್ಲ , ಕುಂಬಳ ಕಾಯಿಯ ಬಲಿಯೂ ಬೇಕಿಲ್ಲ. 'ಇದೇ ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ" ಎಂದು ಸಂಗನ ಬಸವಣ್ಣ ಹೇಳಿದ್ದಾನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more