ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ಥಾನ ದ್ವಾದಶಿಯಂದು ತುಳಸಿ ಹಬ್ಬ

By Super
|
Google Oneindia Kannada News

Tulasi pooje
ದೀಪಾವಳಿ ಹಬ್ಬದ ನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಳಸಿ ಮದುವೆಯನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ.

* ತಳಕು ಶ್ರೀನಿವಾಸ್‌, ಮುಂಬಯಿ

ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿ ವ್ರತವೆಂದೂ ಕರೆಯುವರು.

ಕಾರ್ತೀಕ ಶುದ್ಧ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು. ಹಾಗೆ ಎಬ್ಬಿಸುವಾಗ ಈ ಕೆಳಕಂಡ ವೇದೋಕ್ತ ಮಂತ್ರವನ್ನು ಹೇಳಬೇಕು.

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್‌।
ಸಮೂಢಮಸ್ಯ ಪಾಗ್‌ಂಸುರೇ।।

ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸನ್ಯಾಸಿಗಳು ದೇಶ ಸಂಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತವನ್ನು ಹಾಡುವರು. ಅದು ಸಂಕ್ಷಿಪ್ತವಾಗಿ ಹೀಗಿದೆ.

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ।
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂಕುರು।।

ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯ ರಾತ್ರಿ ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ಪೂಜಿಸಿ, ಅಂದು ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಅರ್ಚಿಸಬೇಕು. ಕೆಲವು ಮನೆಗಳಲ್ಲಿ ತುಲಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ.

ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಲಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಲಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಲಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಲಸಿ ವಿವಾಹವನ್ನು ಮಾಡುವರು.

ತುಲಸಿ ಮಹಾತ್ಮೆ :

* ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಿದಂತೆ ನಾರಾಯಣನಿಗೆ ತುಲಸಿ ಮಾಲೆ ಅತ್ಯಂತ ಪ್ರೀತಿಪಾತ್ರವಾದುದು.
* ತುಲಸಿ ಒಬ್ಬ ಗೋಪಿಕೆಯಾಗಿಯೂ ಶ್ರೀಕೃಷ್ಣನ ಪ್ರೇಮಿಯಾಗಿದ್ದಳಂತೆ. ಆತನ ತುಲಾಭಾರದಲ್ಲಿ ಒಂದೆಸಳು ತುಲಸಿಯನ್ನು ಇಡಲು ಆ ಕಡೆಗೇ ತಕ್ಕಡಿ ವಾಲಿತ್ತೆಂದು ಕಥೆಯಿದೆ.
* ಭಕ್ತೆ ಮೀರಾಳನ್ನೂ ತುಲಸಿಯೆಂದು ಹೇಳಲಾಗುತ್ತದೆ.
* ತುಲಸಿಯಲ್ಲಿ ಎರಡು ವಿಧಗಳಿವೆ. ಒಂದು ಕೃಷ್ಣ (ಕಪ್ಪು ಬಣ್ಣ) ತುಲಸಿಯಾದರೆ ಮತ್ತೊಂದು ಶ್ರೀ ತುಲಸಿ (ಹಸುರು ಬಣ್ಣ).
* ತುಲಸಿಯನ್ನು ಜೇನುತುಪ್ಪ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
* ಹಿಂದೂ ಸಂಪ್ರದಾಯದ ಮನೆಗಳ ಮುಂಭಾಗದಲ್ಲಿ ತುಲಸಿಗಿಡ ಇರುವುದು ಸಾಮಾನ್ಯದ ದೃಶ್ಯ. ಅದಕ್ಕೆಂದೇ ಒಂದು ಪ್ರತ್ಯೇಕ ಮಂಟಪದಂತಹ ಕಟ್ಟೆಯನ್ನು ಕಟ್ಟಿರುತ್ತಾರೆ. ಹಲವು ತುಲಸೀ ಗಿಡಗಳಿರುವ ಉದ್ಯಾನವನಕ್ಕೆ ತುಲಸೀವನವೆಂದೂ ಹೆಸರಿಸುವರು.
* ತುಲಸಿ ಇರುವ ಸ್ಥಳದಲ್ಲಿ ದೇವರಿರುವನೆಂದೂ ಪ್ರತೀತಿ.
* ಶೃಂಗೇರಿಯಲ್ಲಿ ತುಲಸೀವನ ಒಂದು ಪ್ರೇಕ್ಷಣೀಯ ಸ್ಥಳವೂ ಆಗಿದೆ. ಅಷ್ಟೇಕೆ, ಈ ಜಾಲತಾಣದಲ್ಲಿ ತುಲಸಿವನ ಎಂಬ ಅಂಕಣವೇ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X