ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲದೂರು ಹಳ್ಳಿಯ ಸೊಗಡಿನ ರಾಮೋತ್ಸವ

By ಶ್ರೀಕಾಂತ್‌ ಪ್ರಭಾಕರ್‌, ಬೆಂಗಳೂರು
|
Google Oneindia Kannada News

Ramotsava grandeur at Yeldur
ಸ್ನೇಹಿತರೇ, ಬನ್ನಿ. ಈ ರಾಮನವಮಿಯ 10 ದಿನಗಳ ಕಾಲ ನಮ್ಮ ಊರಿಗೆ(ಯಲದೂರು) ಹೋಗೋಣ, ಅಲ್ಲಿನ ಜಾತ್ರೆಯಲ್ಲಿ ಭಾಗವಹಿಸೋಣ, ಹಳ್ಳಿಯ ಸೊಗಡಿನ ರಾಮನವಮಿಯನ್ನು ಆಚರಿಸೋಣ, ಕುಣಿದು ಕುಪ್ಪಳಿಸೋಣ, ಬಯಲು ಸೀಮೆಯ ಹಬ್ಬದಲ್ಲಿ ದೈವತ್ವದ ಪರಮಾನಂದವನ್ನು ಪಡೆಯೋಣ.

ಚೈತ್ರ ಮಾಸ ಬಂತೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ. ಶಾಲೆಗೆ ರಜೆ ಬರುವುದರೊಂದಿಗೆ ಬರುತ್ತದೆ . ಮಲ್ಲಿಗೆ ಹೂವಿನ ಕಂಪಿನೊಂದಿಗೆ, ಕೋಗಿಲೆಯ ಗಾನದ ಇಂಪಿನೊಂದಿಗೆ ಹೊರಡುತ್ತದೆ ನಮ್ಮೂರ ಕೋದಂಡರಾಮರ ತೇರು.

ನಮ್ಮೂರಿಗೆ ಒಂದು ಭವ್ಯ ಇತಿಹಾಸ ಉಂಟು ಎಂತಲೇ ನನ್ನ ನಂಬಿಕೆ. ಇದಕ್ಕೆ ಇಂದು ಯಾವುದೇ ಪುರಾವೆಗಳಿಲ್ಲ. ಆದರೂ ಹಿಂದೆ ವೈಭವೋಪೇತವಾಗಿ ಬದುಕಿದ ಊರು ಇದು ಎಂತಲೇ ಅನ್ನಿಸುತ್ತದೆ. ಇಂದು ಇದು ಒಂದು ಪಾಳು ಬಿದ್ದ ಹಳ್ಳಿ. ಕೋಲಾರ ಜಿಲ್ಲೆಯ ಬರಡು ನೆಲದ ಮೇಲೆ ಉಸಿರಾಡುತ್ತಿರುವ ಒಂದು ಸಣ್ಣ ಪ್ರದೇಶ.

ನಮ್ಮೂರ ಮೇಲೆ ಕೋದಂಡರಾಮರು ಕೋಪಿಸಿಕೊಂಡು ಒಮ್ಮೆ, ಬಹಳ ಹಿಂದೆ, ಮಳೆ ಆಗಲೇ ಇಲ್ಲ, ಬೆಳೆ ಬರಲಿಲ್ಲ, ಕುಡಿಯುವ ನೀರಿಗೂ ಹಾಹಾಕಾರ. ಎರಡು ವರ್ಷಗಳಾದರೂ ಮಳೆ ಇಲ್ಲ, ಬೆಳೆ ಇಲ್ಲ, ಜಾನುವಾರುಗಳಿಗೆ ಮೇವು ಇಲ್ಲ, ಕೆರೆ, ಕುಂಟೆ ಎಲ್ಲಾ ಬತ್ತಿ ಹೋಗಿ, ಹೊಲ ಗದ್ದೆಗಳು ಒಣಗಿ, ಬರಡಾಗಿ ಬೆಂಡಾದ ಕಾಲ. ಹೀಗಿದ್ದಾಗ, ಊರಿನ ಹಿರಿಯರೆಲ್ಲರೂ ಸೇರಿ, ಎಲ್ಲರ ಮನೆಗಳಿಂದ ಒಂದು ಹಿಡಿ ಭತ್ತ ತರಿಸಿ, ದೇವಾಲಯದಲ್ಲಿ ಒಟ್ಟು ಸೇರಿಸಿ, ರಾಮ ಜ್ಯೋತಿಯನ್ನು ಹತ್ತಿಸಿ, ದಿನಾಲೂ ಒಂದೊಂದು ಸೇರು ಭತ್ತವನ್ನು ತೆಗೆದು ಪ್ರಸಾದವನ್ನು ಮಾಡಿ ಎಲ್ಲರಿಗೂ ಹಂಚುವುದು ಎಂದು ತೀರ್ಮಾನಿಸಿದರು. ಮತ್ತು ರಾಮನಲ್ಲಿ ಬೇಡಿಕೆ ಮುಂದಿಟ್ಟರು.

'ಈ ಭತ್ತದ ಕಣಜ ಕರಗುವ ಒಳಗೆ ನೀನು ನಮ್ಮ ಊರ ಮೇಲೆ ಮಳೆ ನೀರನ್ನು ಹರಿಸಿ ಎಲ್ಲರಿಗೂ ತಂಪನ್ನೆರೆಯಬೇಕು. ಅಲ್ಲಿಯವರೆಗೂ ಈ ಜ್ಯೋತಿ ಉರಿಯುತ್ತಲೇ ಇರುವುದು ಮತ್ತು ನಾವು ಭಜನೆ ಮಾಡುತ್ತಲೇ ಇರುವೆವು’’ ಎಂದು ಹೇಳಿ ರಾಮ ಕೋಟಿ ಭಜನೆಯನ್ನು ಶುರು ಮಾಡಿದರು. ಒಂದೇ ವಾರದಲ್ಲಿ ಮಳೆ ಬಂದು ಭೂಮಿ ತಂಪಾಯಿತು, ರಾಮ ನವಮಿ ಉತ್ಸವಕ್ಕೆ ಮೆರುಗು ಬಂತು ಎಂದು ಹೇಳುತ್ತಾರೆ.

Sri Ramಇದು ಎಲ್ಲಾ ಕಾಲದಲ್ಲೂ ಜನರ ನಂಬಿಕೆಗೆ ತಕ್ಕಂತೆ ಆಚರಣೆಯಲ್ಲಿ ಉಳಿದುಕೊಂಡಿತು. ನಮ್ಮೂರಲ್ಲಿ ಇಂದಿಗೂ ಜನರಿಗೆ ತೊಂದರೆ ಆದರೆ ರಾಮ ಕೋಟಿ ಜಪವನ್ನು ಅಖಂಡವಾಗಿ ನಡೆಸುತ್ತಾರೆ. ಭತ್ತದ ಕಣಜವನ್ನು ಕಟ್ಟುತ್ತಾರೆ. ಅದೇ ಒಂದು ಐತಿಹ್ಯ.

ಇನ್ನು ನಮ್ಮ ರಾಮ ದೇವರ ದೇವಾಲಯದ ಬಗ್ಗೆ ಹೇಳಬೇಕಾದರೆ, ಅಂತಹ ದೊಡ್ಡ ಪ್ರಾಂಗಣ ಇರುವ ದೇವಾಲಯ ಪ್ರಾಯಶಃ ನಮ್ಮ ಜಿಲ್ಲೆಯಲ್ಲೇ ಇಲ್ಲ. ಆದರೂ ಇದು ಯಾರ ಕಣ್ಣಿಗೂ ಬೀಳದೇ ಇರುವುದು ಒಂದು ದುರದೃಷ್ಟವೇ ಸರಿ. ಇರಲಿ, ಬೇರೆಯವರಿಗೆ, ಸರ್ಕಾರಕ್ಕೆ ಬೇಡವಾದರೆ ನಮ್ಮೂರಿಗೆ ಬೇಡವೇ. ನಮ್ಮೂರನ್ನು ತಲೆ ತಲಾಂತರದಿಂದ ಕಾಪಾಡುತ್ತಿರುವವನೇ ಅವನು. ನಾವು ಅದನ್ನು ರಕ್ಷಿಸಿದ್ದೇವೆ. ನಮ್ಮ ಹಳ್ಳಿಯ ಜನರಿಗೆ ಈ ದೇವರ ಮೇಲೆ ಅಚಲ ಶ್ರದ್ಧೆ. ವಿದ್ಯೆ, ಧನ, ಆಯಸ್ಸು, ಆರೋಗ್ಯ, ಸುಖ, ಸಂಪತ್ತು ಎಲ್ಲಾ ಅವನು ಕೊಡುತ್ತಾನೆ ಎಂದು ನಂಬಿಕೆ, ಪ್ರೀತಿ.

ದೇವರ ದಿವ್ಯ ಮಂಗಳ ವಿಗ್ರಹವಂತೂ ಭಕ್ತರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿನ ವಿಶೇಷ ಎಂದರೆ, ಸೀತಾ ಮಾತೆಯ ವಿಗ್ರಹ ರಾಮನ ವಿಗ್ರಹದ ಎಡಗಡೆ ಸ್ಥಾಪಿತವಾಗಿದೆ. ಅಯೋಧ್ಯೆಯ ಒಂದು ದೇವಾಲಯದಲ್ಲಿ ಬಿಟ್ಟರೆ, ಇನ್ನೆಲ್ಲೂ ಈ ಅಪೂರ್ವ ದೃಶ್ಯ ಸಿಗುವುದಿಲ್ಲವೆಂದು ಹೇಳುತ್ತಾರೆ. ಬನ್ನಿ, ಒಮ್ಮೆ ನೋಡಿ ಆನಂದಿಸಿ, ಈ ನಮ್ಮ ಕೋದಂಡ ರಾಮನ ವೈಭವವನ್ನು.

ಊರು-ಕೇರಿ : ದೇವಾಲಯ ಇರುವ ಪ್ರದೇಶವನ್ನು ಕೋಟೆ ಎಂತಲೇ ಈಗಲೂ ಕರೆಯುವುದು. ಪ್ರಾಯಶಃ ಕೋಟೆ ಮಾದರಿಯಲ್ಲಿ ದೇವಾಲಯವನ್ನು ಕಟ್ಟಿರುವುದರಿಂದ ಈ ಭಾಗವನ್ನು ಆ ಹೆಸರಿಂದ ಕರೆಯುತ್ತಿರಬೇಕು. ಕೋಟೆ ಸುತ್ತಲೂ ಮನೆಗಳು. ಪಟೇಲರ ಮನೆ, ಶಾನುಭೋಗರ ಮನೆ, ಶಾಸ್ತ್ರಿಗಳ ಮನೆ... ಈ ಕೋಟೆಯ ಎದಿರು ಇದೆ 'ಗಜಾಗುಂಡ’. ಬಹುಶಃ ಇದು ಹಿಂದೆ 'ಗಜ ಕುಂಡ’ ಆಗಿದ್ದಿರಬೇಕು, ರಾಮ ದೇವರ ಕಲ್ಯಾಣಿಯು ಆಗಿದ್ದಿರಬಹುದು. ಆದರೆ ಈಗ ಇದು ಒಂದು ಪಾಳು ಬಿದ್ದ ದೊಡ್ಡ ಹೊಂಡ ಅಷ್ಟೆ. ಕಾಲಾಂತರದಲ್ಲಿ ಇದನ್ನು ಅಗಸರು ಬಟ್ಟೆ ಒಗೆಯಲು ಉಪಯೋಗಿಸುತ್ತಿದ್ದರೆಂದು ಹೇಳುತ್ತಾರೆ.

ಆದರೀಗ ಯಾರಿಗೂ ಪ್ರಯೋಜನಕ್ಕೆ ಬಾರದ ಒಂದು ದೊಡ್ಡ ಕಸದ ತೊಟ್ಟಿ ಅಷ್ಟೆ. ಅದರಲ್ಲಿನ ನೀರು ಪಾಚಿ ಕಟ್ಟಿ ದುರ್ನಾತ ಹೊಡೆಯುತ್ತಿದೆ. ಆದರೂ ಯಾರೂ ಅದರ ಬಗ್ಗೆ ಗಮನ ಕೊಡೊಲ್ಲ.

ಇರಲಿ. ಆ ಕೋಟೆಯ ಎಡಗಡೆ ಕೊಂಚ ದೂರ ಹೋದರೆ ಇದೆ ಹರಿಜನ ಕೇರಿ. ಎಲ್ಲೆಡೆಯಂತೆ ಇಲ್ಲೂ ಸಹ ಅಸ್ಪ್ರಶ್ಯತೆ ಇದ್ದಿರ ಬಹುದು. ಆದರೆ ಈಗ ಇಲ್ಲಿ ಆ ರೀತಿ ಇಲ್ಲ. ಹರಿಜನರೂ ಸಹ ದೇವಾಲಯಕ್ಕೆ ಬರುತ್ತಾರೆ, ಎಲ್ಲರೊಂದಿಗೆ ಬೆರೆಯುತ್ತಾರೆ, ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ.

ದೇವಾಲಯದ(ಕೋಟೆಯ) ಬಲಗಡೆ ಎದುರಿನಲ್ಲಿ ಇದೆ 'ಶಂಕರ ನಾರಾಯಣ’ ದೇವಾಲಯ. ಊರಲ್ಲಿ ಏನೇ ಕಾರ್ಯಕ್ರಮ ನಡೆದರೂ ಮೊದಲು ಇಲ್ಲಿ ಪೂಜೆ, ನಂತರ ಕೋದಂಡ ರಾಮನ ಪೂಜೆ, ಆಮೇಲೆ ಮಿಕ್ಕಿದ್ದು. ಇದು ಇಲ್ಲಿ ಒಂದು ಶಿಷ್ಟಾಚಾರವಾಗಿ ನಡೆದು ಬಂದಿದೆ.

ಅಲ್ಲಿಂದ ಕೊಂಚ ಕೆಳಗಿಳಿದು ನೆಲೆಸಿದ್ದಾಳೆ ನಡುಬೀದಿ ಗಂಗಮ್ಮ. ಇವಳು ನಮ್ಮೂರ ಗ್ರಾಮ ದೇವತೆ, ನಮ್ಮೂರನ್ನು ಕಾಪಾಡುತ್ತ ಊರ ಮಧ್ಯಭಾಗದಲ್ಲಿ ನೆಲೆಸಿರುತ್ತಾಳೆ. ಆ ಗಂಗಮ್ಮನ ಗುಡಿ ಎಡಗಡೆ ಇರುವುದೆ ವಾಸವಿ ರಸ್ತೆ. ಅಲ್ಲಿ ವಾಸವಿ ದೇವಸ್ಥಾನ ಇದೆ ಮತ್ತು ಊರಿನ ಆರ್ಯ ವೈಶ್ಯ ಬಾಂಧವರು ಇಲ್ಲಿ ವಾಸಿಸುತ್ತಾರೆ. ಅವರ ಅಂಗಡಿಗಳು ಅಂಗಡಿ ಬೀದಿಯಲ್ಲಿ ಇವೆ, ಅದು ಇನ್ನೊಂದು ಸ್ವಲ್ಪ ಮುಂದೆ ಇದೆ. ಗಂಗವ್ವನ ಗುಡಿ ಬಲಭಾಗದಲ್ಲಿ ಇದೆ ನಾಯಕರ ಬೀದಿ. ಇಲ್ಲಿ ವಾಲ್ಮೀಕ ಜನಾಂಗದ ಜನರು ನೆಲೆಸಿದ್ದಾರೆ. ಅವರ ಮುಖ್ಯ ಕಸುಬು ಬೇರೆಯವರ ಹೊಲದಲ್ಲಿ ಕಷ್ಟ ಪಟ್ಟು ದುಡಿಯುವುದು.

ವಾಸವಿ ರಸ್ತೆಯ ಎಡಗಡೆ ಇದೆ ಕುಂಬಾರರ ಬೀದಿ. ಅಲ್ಲಿ ಈಗ ಕುಂಬಾರರ ಕೆಲಸ ಮಾಡುವುದನ್ನು ನಾನು ನೋಡೇ ಇಲ್ಲ. ಆದರೂ ಆ ಬೀದಿಗೆ ಕುಂಬಾರರ ಬೀದಿ ಎನ್ನುತ್ತಾರೆ. ಅಲ್ಲಿಂದ ಮುಂದೆ ಇರುವುದೇ ಬಳೆಗಾರರ ಬೀದಿ ಮತ್ತು ನೇಯ್ಗೆಕಾರರ ಬೀದಿ. ಇವರಲ್ಲಿ ಕೆಲವರು ತಮ್ಮ ಕುಲಕಸುಬನ್ನು ಇಂದಿಗೂ ಮಾಡುತ್ತಾರೆ.

ಅಲ್ಲಿಂದ ಮುಂದೆ ಇದೆ ಸಂತೆ ಬೀದಿ. ಅಲ್ಲಿ ವಾರಕ್ಕೊಮ್ಮೆ ಸಂತೆ ಸೇರುತ್ತದೆ. ಸುತ್ತ-ಮುತ್ತಲಿನ ರೈತರು ಮತ್ತು ಶೆಟ್ಟರು ಅಲ್ಲಿ ಬಂದು ತರಕಾರಿ ಮತ್ತು ಇತರೆ ಸಾಮಗ್ರಿಗಳನ್ನು ಮಾರುವುದು ರೂಢಿ. ಇಂದಿಗೂ ಅದು ನಡೆಯುತ್ತಿರುವುದು ಒಂದು ಪವಾಡವೇ ಸರಿ.

ರಾಮನ ಅವತಾರ : ಅಯ್ಯೋ! ರಾಮೋತ್ಸವದ ಬಗ್ಗೆ ಹೇಳು ಅಂದ್ರೆ ಊರಿನ ಬಗ್ಗೆ ಹೇಳುತ್ತಿದ್ದಾನಲ್ಲಾ ಅಂತ ಮೂಗು ಮುರಿಯ ಬೇಡಿ. ನಮ್ಮೂರೇ ಹಾಗೆ. ಏನು ಹೇಳಬೇಕಾದರೂ ಅದರ ಚೆಂದದ ಬಗ್ಗೆ ಹೇಳೇ ತೀರಬೇಕು ಎಂದು ಅನ್ನಿಸುತ್ತೆ. ಆ ಹಳ್ಳಿಯ ಗಾಳಿ, ನೀರು, ಹೊಲ, ಗದ್ದೆ, ತೋಟ, ಮನೆ, ಪ್ರಾಣಿ, ಪಕ್ಷಿ, ಮರ, ಗಿಡ, ಗುಡ್ಡ, ಸಂಜೆಯ ಗೋಧೂಳಿ, ಬೆಳಗಿನ ರವಿಯ ಶುಭ್ರ ಎಳೆಯ ಕಿರಣಗಳು ಇದೆಲ್ಲಾ ನಗರದಲ್ಲಿ ಎಲ್ಲಿ ಸಿಗಬೇಕು? ಅದಕ್ಕಾಗಿಯೆ ನನಗೆ ನಮ್ಮ ಹಳ್ಳಿ ನೆನಪಾದರೆ ಒಂದು ತರಾ ಉನ್ಮಾದಿ ಆಗಿಬಿಡುತ್ತೇನೆ.

ಮೇಲೆ ಹೇಳಿದ ಊರಿನ ವಿಶ್ಲೇಷಣೆಯಲ್ಲಿ ಒಂದು ವಿಷಯ ಬಿಟ್ಟು ಹೋಗಿದೆ. ಅದೇ ದಶರಥ ಕುಂಟೆ. ಈ ಕುಂಟೆ ಈಗ ಗಣೇಶನನ್ನು ಮುಳುಗಿಸಲು ಮಾತ್ರ ಉಪಯೋಗಿಸುತ್ತಿದ್ದಾರೆ. ಊರಿನ ಹಿರಿ ಜೀವಗಳು ಹೇಳುವಂತೆ ಇದರ ನೀರನ್ನು ಎಲ್ಲಾರೂ ಕುಡಿಯಲು ಉಪಯೋಗಿಸುತ್ತಿದ್ದರಂತೆ!!!

ನಾನು ಚಿಕ್ಕವನಾಗಿದ್ದಾಗ ಸಹಾ ಕುಂಟೆಯ ಕಾವಲಿಗೆ ಒಂದು ಕುಟುಂಬವನ್ನು ನೇಮಿಸಿ ಇಡಲಾಗಿತ್ತು. ಇನ್ನೂ ಒಂದು ವಿಷಯ ಎಂದರೆ ಇದರ ನೀರನ್ನು ವರ್ಣ ಬೇಧವಿಲ್ಲದೆ ಎಲ್ಲರೂ ಉಪಯೋಗಿಸುತ್ತಿದ್ದರಂತೆ!

ಇನ್ನು ... ಊರಿನ ಸುತ್ತಲೂ ಗ್ರಾಮ ದೇವತೆಗಳ ಗುಡಿಗಳು, ಎಲ್ಲರ ಹೊಲಗಳು, ಒಂದೊಂದು ದೇವಾಲಯದ ಪಕ್ಕದಲ್ಲೂ ದೊಡ್ಡ ದೊಡ್ಡ ಕಲ್ಯಾಣಿಗಳು, ದಾರಿಯಲ್ಲಿ ಅರವಟಿಗೆಗಳು,...ಇನ್ನೂ ಎಷ್ಟೋ ಸಂಪತ್ತು, ಇಂದು ಎಲ್ಲಾ ಜೀರ್ಣವಾದ ಸ್ಥಿತಿಯಲ್ಲಿ ಇರುವುದು ನಮ್ಮ ದುರದೃಷ್ಟ ಅಷ್ಟೆ.

ಈಗ ಹೇಳಿ. ನಮ್ಮ ಊರಿಗೆ ಭವ್ಯ ಇತಿಹಾಸ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೆ? ಇತಿಹಾಸದ ಪುಸ್ತಕದಲ್ಲಿ ನಮ್ಮ ಊರಿಗೆ ಸ್ಥಾನ ಸಿಗಬೇಕು ಎಂದು ನಿಮಗೆ ಅನ್ನಿಸುವುದಿಲ್ಲವೆ?

ಇರಲಿ. ಈಗ ಹೋಗೋಣ ರಾಮೋತ್ಸವಕ್ಕೆ. ಚೈತ್ರಮಾಸ ಬಂತೆಂದರೆ ಒಂದು ಸಂಭ್ರಮ ಎಂದು ಮೊದಲೇ ಹೇಳಿದ್ದೇನೆ. ಉಗಾದಿಯ ಹೋಳಿಗೆಯ ರುಚಿ ಆರುವುದಕ್ಕೆ ಮುಂಚೆಯೇ ಊರಿನ ಸೌಂದರ್ಯ ವರ್ಧನೆ ಶುರು. ಎಲ್ಲರ ಮನೆಯ ಸುಣ್ಣ, ಬಣ್ಣದ ಕಾರ್ಯಕ್ರಮ...ಎಲ್ಲರ ಮನೆಯ ಹೆಣ್ಣು ಮಕ್ಕಳ ಆಗಮನ...ಹೀಗೆ..ನೆಂಟರು, ಇಷ್ಟರು, ಬಂಧು, ಬಳಗ, ಹಿಂದೆ ಊರಲ್ಲಿ ಇದ್ದವರು, ಇರದವರು ಎಲ್ಲರೂ ಬಂದು ನೆರೆಯುತ್ತಾರೆ.

ದಿನವೂ ಸಡಗರ : ಊರ ದೇವತೆ ಗಂಗಮ್ಮನಿಗೆ ಮೊದಲ ಆದ್ಯತೆ. ಹೊಸ ವರುಷದ ಮೊದಲ ಸೋಮವಾರ ಗಂಗ ಜಾತ್ರೆ ಎಂದು ಆಚರಿಸಲಾಗುತ್ತದೆ. ಗಂಗಮ್ಮನ ಪೂಜೆ ಅಂದು. ಊರಿನ ಎಲ್ಲಾ ಸುಮಂಗಲಿಯರೂ ಮಾಡಬೇಕಾದ ಪೂಜೆ ಅದು. ಅಂದು ತಂಬಿಟ್ಟಿನ ದೀಪಗಳನ್ನು ಮಾಡಿ ಆರತಿ ಬೆಳಗುತ್ತಾರೆ, ಗಂಗಮ್ಮನಿಗೆ. ಮೊದಲು ಬ್ರಾಹ್ಮಣ, ನಂತರ ವೈಶ್ಯರು, ಆ ನಂತರ ಪಟೇಲರು ಮತ್ತು ಇತರ ಕುಟುಂಬದವರು. ಯಾವುದೇ ರೀತಿಯ ಜಗಳ,ಮೇಲು ಕೀಳು ಎಂಬ ಭಾವನೆಗಳಿಲ್ಲದೇ ಪಾಲ್ಗೊಳ್ಳುವ ಹಬ್ಬ ಅದು. ಹಿಂದಿನ ಕಾಲದಲ್ಲಿ ಬಲಿ ಕೊಡುವ ಸಂಪ್ರದಾಯ ಇತ್ತೆಂದು ಹೇಳುತ್ತಾರೆ.

ಮುಂದೆ ಬರುವುದೇ ರಾಮನವಮಿ. ಅಂದು ಕೋದಂಡರಾಮ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ಮತ್ತು ಧ್ವಜಾರೋಹಣ ನಡೆಯುತ್ತದೆ. ಅಂದರೆ, ಗಣಪತಿ ಪ್ರಾರ್ಥನೆ ಹಾಗೂ ಉತ್ಸವಕ್ಕೆ ಸಂಭ್ರಮದ ಚಾಲನೆ. ಅಂದು ಊರ ಬಾಗಿಲಲ್ಲಿರುವ ಆಂಜನೇಯ ಸ್ವಾಮಿ ಗುಡಿಯಲ್ಲಿ ಉತ್ಸವ ಇರುತ್ತದೆ. ಭಜನೆ ಮತ್ತು ಸಂಕೀರ್ತನೆಗಳ ನಡುವೆ ಹನುಮನ ಪೂಜೆ ನೆರವೇರುತ್ತದೆ. ಮತ್ತು ಅಂದಿನ ವಿಶೇಷ 'ಉಟ್ಲ ತೇರು’. ಅಂದರೆ, ಧ್ವಜಸ್ಥಂಭದ ಮೇಲೆ ಒಂದು ತಿರುಗುವ ಮಂಟಪವನ್ನು ಕಟ್ಟಿ, ಅದರೊಳಗೆ ಒಬ್ಬ ರಾಮಭಕ್ತ ಒಂದು ಹಗ್ಗದ ಕೊನೆಗೆ ಒಂದು ತೆಂಗಿನಕಾಯಿಯನ್ನು ಕಟ್ಟಿಕೊಂಡು ತಿರುಗಿಸುತ್ತಾ ಇರುತ್ತಾನೆ. ಮತ್ತು ಈ ತೇರಿನ ಸುತ್ತಲೂ ನಿಂತ ಆಜಾನುಬಾಹಿ ಯುವಕರು ಉದ್ದದ ಕೋಲುಗಳಿಂದ ಆ ತೆಂಗಿನಕಾಯಿಯನ್ನು ಒಡೆಯಬೇಕು.

ಇದು ಒಂದು ಆಟದಂತೆ ಕಂಡರೂ, ನಮಗೆ ಇನ್ನೆಲ್ಲೂ ಸಿಗದ ಒಂದು ಅದ್ಭುತ ಸಂಪ್ರದಾಯ. ಇಂದಿಗೂ ನಾವು ಅ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ ಎಂದರೆ ನಮ್ಮ ಹಿರಿಯರು ಭದ್ರ ಬುನಾದಿಯಾಗಿ ಹಾಕಿದ ಸಂಸ್ಕಾರಕ್ಕೆ ಜೈ ಎನ್ನೋಣವೇ? ಅಂದಿನ ದಿನ ಪಾನಕ, ಕೋಸಂಬರಿ ನಮ್ಮ ಊರ ತುಂಬಾ ಎಲ್ಲೆಡೆಯಲ್ಲೂ ಹಂಚಲಾಗುತ್ತದೆ. ಹೀಗೆ ಸಂಭ್ರಮದ ರಾಮನವಮಿ ಉತ್ಸವ ಆರಂಭಗೊಳ್ಳುತ್ತದೆ.

ಮುಂಚೆ ನಾನು ಹೇಳಿದಂತೆ ನಮ್ಮೂರಲ್ಲಿ ಎಲ್ಲಾ ಸಮುದಾಯದ ಜನರೂ ಇರುವರು. ಬಹುಶಃ ಇದೇ ಕಾರಣದಿಂದಲೇ ಹಿಂದೆ ಹಿರಿಯರು ಒನ್ನೊಂದು ದಿನ ಒನ್ನೊಂದು ಸಮುದಾಯದವರ ಪೂಜೆ ಎಂದು ನಿರ್ಧಾರ ಮಾಡಿದ್ದರು ಎಂದು ತೋರುತ್ತದೆ. ಈಗಲೂ ಇದೇ ಸಂಪ್ರದಾಯ ನಡೆದು ಬಂದಿದೆ. ಅಂತೆಯೆ ಒಂದೇ ಸಮುದಾಯದ ಒಳಗೆ, ಒಗ್ಗಟ್ಟು ಶಾಶ್ವತವಾಗಿರಲಿ ಎಂದೂ ಈ ನಿರ್ಧಾರ ಇರಬಹುದು. ಹೀಗಾಗಿ ಪ್ರತಿ ರಾತ್ರಿ ನಡೆಯುವ ಉತ್ಸವಗಳು ಒಂದೊಂದು ದಿನ ಒಂದೊಂದು ಸಮುದಾಯದ ಹೆಸರಿನಲ್ಲಿ. ನಾಯಕರು ಹನುಮಂತ ವಾಹನೋತ್ಸವ ನಡೆಸಿದರೆ, ವೈಶ್ಯರು ಗಜ ವಾಹನ, ಮತ್ತೊಬ್ಬರು ಶೇಷ ವಾಹನ, ಮಗದೊಬ್ಬರು ಪಾರ್ವಾಟೋತ್ಸವ ಹೀಗೆ ಎಲ್ಲರೂ ಜಗಳ ಕದನ ಇಲ್ಲದೆ ಶಾಂತಿಯಿಂದ ವ್ಯವಸ್ಥಿತವಾಗಿ ನಡೆಸುವ ಈ ಉತ್ಸವಗಳು ನಮ್ಮೂರಿನ ಹೆಮ್ಮೆ ಎಂದರೆ ತಪ್ಪಾಗಲಾರದು.

ಈ ಹಬ್ಬದ ಕಾವು ತೀವ್ರವಾಗುವುದು ಕಲ್ಯಾಣೋತ್ಸವದ ದಿನ. ಅಂದು ಸೀತೆ ತನ್ನ ತಂದೆಯ ಮನೆಯವರೊಂದಿಗೆ ಪುರ ಪ್ರವೇಷ ಮಾಡುತ್ತಾಳೆ. ಊರಿನ ಮಧ್ಯ ಭಾಗದಲ್ಲಿ ಬೀಗರು ತಂಗುವುದಕ್ಕೆ ಒಂದು ಕೊಠಡಿಯನ್ನು ಕಾದಿರಿಸಲಾಗಿದೆ. ಆ ಕೊಠಡಿಯಿಂದ, ದೇವಸ್ಥಾನಕ್ಕೆ ಸೀತೆಯನ್ನು ಅವಳ ತಂದೆ ಮಂಗಳ ವಾದ್ಯಗಳ ಸಮೇತವಾಗಿ ಕರೆದೊಯ್ಯುತ್ತಾನೆ. ಆ ಸಮಯಕ್ಕೆ ಸರಿಯಾಗಿ ಮದುಮಗ ಶ್ರೀರಾಮ ತಯಾರಾಗಿ ನಿಂತಿರುತ್ತಾನೆ. ನಂತರ ಅವರ ಮದುವೆ ಕಾರ್ಯ ವಿಜೃಂಭಣೆಯಿಂದ ನೆರವೇರುತ್ತದೆ. ಇದು ಆಗುವ ಹೊತ್ತಿಗೆ ಮಧ್ಯ ರಾತ್ರಿ 2 ಮೀರಿರುತ್ತದೆ. ಆದರೂ ಆ ಸೀತಾರಾಮ ಮಂಟಪದಲ್ಲಿ ಮದುವೆ ಮನೆ ಕಳೆ ನೋಡಿಯೇ ತೀರಬೇಕು.

ಮದುವೆಯ ನಂತರ ಸೀತಾರಾಮರು ಲಕ್ಷ್ಮಣನೊಡಗೂಡಿ ಗರುಡವಾಹನಪಲ್ಲಕ್ಕಿಯ ಮೇಲೆ ಮೆರವಣಿಗೆ ಹೊರಡುತ್ತಾರೆ. ಇದು ಒಂದು ವಿಶೇಷವಾದ ಉತ್ಸವವೇ ಸರಿ. ಇಂದಿನ ದಿನಗಳಲ್ಲಿ ಬೇರೆಲ್ಲಾ ಉತ್ಸವಗಳು ಟ್ರಾಕ್ಟರ್‌, ಎತ್ತಿನ ಬಂಡಿಗಳ ಮೇಲೆ ಸರಿ ರಾತ್ರಿ ಆದರೆ, ಈ ಗರುಡ ವಾಹನೋತ್ಸವ ಪಲ್ಲಕ್ಕಿಯಂತೆ ಭಕ್ತರು ಹೆಗಲಮೇಲೆ ಹೊತ್ತು ಮೆರೆಯುತ್ತಾರೆ. ಗರುಡವಾಹನೋತ್ಸವ ಹುಣ್ಣಿಮೆಯಂದು ಸೂರ್ಯೋದಯದ ಸಮಯದಲ್ಲಿ ನಡೆಯುವುದರಿಂದ ಇದರ ಮೆರುಗು ಇನ್ನೂ ಹೆಚ್ಚಿನದಾಗಿರುತ್ತದೆ.

ನಂತರ ಇದೇ ದಿನ ಮಧ್ಯಾಹ್ನದ ಸಮಯದಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತದೆ. ಸೀತಾರಾಮಲಕ್ಷ್ಮಣರ ಈ ರಥ ಸವಾರಿಯನ್ನು ನೋಡಲು ಲಕ್ಷಾಂತರ ಮಂದಿ ಬಂದು ನೆರೆದಿರುತ್ತಾರೆ. ಅಂದು ನಡೆಯುವ ಈ ರಥೋತ್ಸವ ವಿಶಿಷ್ಟ ಮತ್ತು ಅದ್ಭುತ. ಎತ್ತರದ ರಥವನ್ನೇರಿ, ಸರ್ವಾಲಂಕಾರ ಭೂಷಿತರಾಗಿ ನಮ್ಮ ಊರ ಕಣ್ಮಣಿಗಳು ಬರುತ್ತಿದ್ದರೆ ಆ ಕ್ಷಣ ಎಷ್ಟು ಮನೋಹರ ಮತ್ತು ಅದ್ವಿತೀಯ ಎಂಬ ಭಾವನೆ ಭಕ್ತ ಸಮುದಾಯವನ್ನು ಪುಳಕಗೊಳಿಸುತ್ತದೆ.

ಈ ವಿಶೇಷವಾದ ಹಬ್ಬ ನಮ್ಮ ಊರಿನ ಸಾಂಸ್ಕೃತಿಕ, ಪಾರಂಪರಿಕ ಹಾಗೂ ಆಧ್ಯಾತ್ಮಿಕ ಶಕ್ತಿ ಪ್ರದರ್ಶನ ಎಂದರೆ ತಪ್ಪಾಗುವುದಿಲ್ಲ. ಈ ದಿನ ಊರ ಎಲ್ಲಾ ಮನೆಗಳಲ್ಲೂ ಸಿಹಿ ಅಡುಗೆ ಮಾಡಿ, ಅತಿಥಿಗಳಿಗೆ ಬಡಿಸಲಾಗುತ್ತದೆ. ಮಜ್ಜಿಗೆ, ಪಾನಕ, ಇತ್ಯಾದಿಗಳನ್ನು ಹಂಚಲಾಗುತ್ತದೆ, ಊರ ತುಂಬೆಲ್ಲಾ ಜಾತ್ರೆಯು ಸೇರಿರುತ್ತದೆ. ಜಾನುವಾರುಗಳ ಮೆರವಣಿಗೆ ಮತ್ತು ಸ್ಪರ್ಧೆ ನಡೆಯುತ್ತದೆ. ಅನ್ನ ಸಮಾರಾಧನೆ ನಡೆಸಲಾಗುತ್ತದೆ.

ನಂತರದ ದಿನಗಳಲ್ಲಿ ಶಯನೋತ್ಸವ, ಮತ್ತು ಮೊಲದ ಬೇಟೆಯಾಡುವ ವಿನೋದವಾದ ಪಾರ್ವಾಟೋತ್ಸವ ಇವುಗಳು ವಿಶೇಷ. ಶಯನೋತ್ಸವದ ದಿನ ಅಲಂಕಾರವನ್ನು ನೋಡಲು ಎರಡು ಕಣ್ಣು ಸಾಲದಾಗುತ್ತದೆ. ರಾಮನಿಗೆ ಜೋಗುಳ ಹಾಡಿ ಮಲಗಿಸಲು ಸಂಗೀತ ಕಾರ್ಯಕ್ರಮವನ್ನು ಈ ದಿನ ಹಮ್ಮಿಕೊಳ್ಳಲಾಗುತ್ತದೆ.

ಕೊನೆಯ ದಿನದ ಪುಷ್ಪ ಪಲ್ಲಕ್ಕಿ ಉತ್ಸವ ಮತ್ತೊಮ್ಮೆ ರಥೊತ್ಸವವನ್ನು ನೆನಪಿಸುವಲ್ಲಿ ಸಫಲವಾಗುತ್ತದೆ. ಈ ದಿನ ವಿದ್ಯುತ್‌ ದೀಪಗಳಿಂದ ಅಲಂಕೃತವಾದ ಪುಷ್ಪ ವಾಹನದಲ್ಲಿ ಸೀತಾರಾಮರು ಬರುತ್ತಿದ್ದರೆ ಆ ಕ್ಷಣ ಎಂದೆಂದಿಗು ಶಾಶ್ವತವಾಗಿರಲೆಂದು ಅನ್ನಿಸುತ್ತದೆ.

ಪಾರ್ವಾಟೋತ್ಸವದಂದು ನಾಟಕ, ಶಯನೋತ್ಸವದಂದು ಶಾಸ್ತ್ರೀಯ ಸಂಗೀತ, ಮತ್ತೊಂದು ದಿನ ನಾದಸ್ವರ, ಇನ್ನಿತರ ದಿನಗಳಲ್ಲಿ ಸಹಾ ಒಂದಾದರೊಂದು ಮನೋರಂಜನೆ ಮತ್ತು ಭಕ್ತಿ ಪ್ರಧಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕೀಲುಕುದುರೆ, ಬಾಣ ಬಿರುಸುಗಳು ಮುಂತಾದ ಪಾರಂಪರಿಕ ಸೇವೆಗಳನ್ನು ಸಹಾ ನೆರವೇರಿಸಲಾಗುತ್ತದೆ.

ಆದುದರಿಂದ, ಸ್ನೇಹಿತರೇ, ಬನ್ನಿ, ಈ ರಾಮನವಮಿಯ 10 ದಿನಗಳ ಕಾಲ ನಮ್ಮ ಊರಿಗೆ ಹೋಗೋಣ, ಅಲ್ಲಿನ ಜಾತ್ರೆಯಲ್ಲಿ ಭಾಗವಹಿಸೋಣ, ಹಳ್ಳಿಯ ಸೊಗಡಿನ ರಾಮನವಮಿಯನ್ನು ಆಚರಿಸೋಣ, ಕುಣಿದು ಕುಪ್ಪಳಿಸೋಣ, ಬಯಲು ಸೀಮೆಯ ಹಬ್ಬದಲ್ಲಿ ದೈವತ್ವದ ಪರಮಾನಂದವನ್ನು ಪಡೆಯೋಣ.

ಇಂತಹ ಚೆಂದದ ಊರು ಯಲದೂರು, ಕೋಲಾರ ಜಿಲ್ಲೆಯ ಒಂದು ಚಿಕ್ಕ ಊರು, ನಮ್ಮ ನಾಡಿನ ಹೆಮ್ಮೆಯ ರೈತಾಪಿ ಜನಗಳ, ಕಷ್ಟ ಜೀವಿಗಳ ತವರೂರು. ನೋಟದಲ್ಲೇ ನಗೆಯ ಬೀರುವ ಅಂದದೂರು, ಭಕ್ತಿಯಲ್ಲಿ ಮೋಡಿ ಮಾಡುವ ಚೆಂದದೂರು. ಶ್ರೀ ಸೀತಾರಾಮರು ನೆಲೆಸಿರುವ ನಮ್ಮೂರು, ಮಾರುತಿ ಕಾಯುವ 'ಮಾವಿ’ನೂರು, ಚೈತ್ರದ ಸೊಬಗಿನ, ಮೆತ್ತೆಯ ತೋರುವ, ಸೃಷ್ಟಿಯ ಅದ್ಭುತ ಈ ಊರು. ಈ ನಮ್ಮ ಯಲದೂರು.

ಈಗ ಹೇಳಿ, ಒಂದು ಭವ್ಯ ಇತಿಹಾಸ ಇಲ್ಲದೆ ಈ ರೀತಿಯ ಸಂಪ್ರದಾಯ, ಆಚರಣೆ ನಮಗೆ ದೊರೆಯುವುದು ಸಾಧ್ಯವೆ? ಅದನ್ನು ನಾವು ಉಳಿಸಿಕೊಂಡು ಹೋಗಬೇಕು ತಾನೇ?

English summary
Srikanth Prabhakar, Bangalore, describes about Sri Raamotsava celebrations at Yeldur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X