ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್‌ ಸವಾರರ ತಲೆಗೆ ‘ಹೆಲ್ಮೆಟ್‌’ ಹಾಕಿದ ಸರ್ಕಾರ!

By * ಪ್ರಸಾದ ನಾಯಿಕ
|
Google Oneindia Kannada News

Couple riding bike
ಮೊದಲಿಂದಲೂ ಸುಬ್ಬು ಹೆಲ್ಮೆಟ್‌ವಿರೋಧಿ! ಹೆಲ್ಮೆಟ್‌ ಬೇಡ ಎನ್ನುವ ಅವನ ಧರ್ಮ ಸಂಕಟದ ಹಿಂದಿನ ಲೆಕ್ಕಾಚಾರ ಕೇಳಿದರೆ ನೀವು ಏನನ್ನುವಿರೋ? ಒಳಗೊಳಗೆ ಖುಷಿಪಡುವಿರೇನೋ? ತಾಳಿ, ನೀವೂ ಸುಬ್ಬೂ ಥರನೇ ವಿಚಾರಮಾಡದಿದ್ದರೆ ಕೇಳಿ!

ಬೆಳಿಗ್ಗೆ ಬೆಳಿಗ್ಗೆ ಇನ್ನೂ ಎದ್ದಿರಲಿಲ್ಲ ಧಬಧಬ ಬಾಗಿಲು ಬಡಿದ ಶಬ್ದವಾಯಿತು. ಕಣ್ಣುಜ್ಜಿಕೊಳ್ಳತ್ತಾ ಬಾಗಿಲು ತೆರೆದರೆ ಎದುರಿಗೆ ಸಾಕ್ಷಾತ್‌ ಸುಬ್ಬು. ಫಸ್ಟು ಅತ್ತ ತಿರುಗಿ ದೇವರ ಫೋಟೋ ನೋಡಿ ನಮಸ್ಕಾರ ಮಾಡಿ ಸುಬ್ಬುನ ಹತ್ತಿರ ತಿರುಗಿದೆ.

'ಏನು ಸುಬ್ರಾಯ್‌ ಗುಡ್‌ಮಾರ್ನಿಂಗ್‌. ನಿನ್‌ ಮುಖಾ ನೋಡಿದ್ರೆ ನಿನಗೆ ಬ್ಯಾಡ್‌ ಮಾರ್ನಿಂಗ್‌ ಥರ ಕಾಣುತ್ತೆ. ಕಿವಿ ಕೆಂಪಾಗಿವೆ, ಕಣ್ಣಲ್ಲಿ ದಿಗಿಲು, ಏನ್ಸಮಾಚಾರ" ಎಂದೆ.

ಮೊದಲೇ ಅವನತ್ತ ನೋಡದೆ ದೇವರತ್ತ ಸೆಲ್ಯೂಟ್‌ ಹೊಡೆದಿದ್ದು, ಈಗ ಕಿಚಾಯಿಸಿದ್ದು ಅವನನ್ನು ಮತ್ತಷ್ಟು ರೇಗಿಸಿತು. ಆದರೂ ಅವನನ್ನು ರೇಗಿಸಿ ಮಜಾ ತೋಗೋಳ್ಳೋದಂದ್ರೆ ಒಂಥರಾ ಆನಂದ.

'ನಿನ್‌ ಗುಡ್‌ಮಾರ್ನಿಂಗ್‌ ಮನೆ ಹಾಳಾಗ. ಪೇಪರು ನೋಡಿದ್ಯಾ" ಕೇಳಿದ ಸುಬ್ರಾಯ್‌ ಭಟ್‌.

'ನಿನ್‌ ಫೋಟೋ ಹಾಕಿದ್ದಾರೇನೋ, ಕಂಗ್ರಾಚ್ಯುಲೇಶನ್ಸ್‌, ಫ್ರಂಟ್‌ ಪೇಜ್‌ನಲ್ಲಾ" ಅಂತ ಮತ್ತೆ ರೇಗಿಸಿದೆ.

ಪಿಟ್‌ ಅಂತ ಮಾತಾಡದೆನೆ ಪೇಪರು ಮುಖದ ಮೇಲೆ ಹಿಡಿದ. ಏನೂ ಗೊತ್ತಾಗದವರ ಹಾಗೆ ನಾಟಕ ಆಡಿದೆ. ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್‌ ಕಡ್ಡಾಯ ಮಾಡಿದ ಸುದ್ದಿ ತೋರಿಸಿ ಅತ್ತಿಂದಿತ್ತ ಓಡಾಡತೊಡಗಿದ. ಇದರಲ್ಲೇನು ವಿಶೇಷ ಅಂತ ಅವನತ್ತ ನೋಡಿದೆ.

'ಅಲ್ಲ ಕಣೋ, ಹಿಂದೆ ಕೂತವರಿಗೂ ಹೆಲ್ಮೆಟ್‌ ಕಡ್ಡಾಯ ಅಂತ ಮಾಡಿದ್ದಾರೆ. ಸುಬ್ಬಿ ಒಂದೇ ಸವನೆ ಹಟ ಹಿಡಿದಿದ್ದಾಳೆ. ಅವಳಿಗೂ ಕೂಡಲೆ ಶಿರಸ್ತ್ರಾಣ ಕೊಡಿಸಬೇಕಂತೆ".

'ಕೊಡಿಸಿಬಿಡು" ಅಂತ ನಿರಾಳವಾಗಿ ಹೇಳಿ ಅವನತ್ತ ನೋಡಿದೆ.

'ಕೊಡಿಸಿಬಿಡು.. ಲೋ ಲೋ ಚೆನ್ನಾಗಿರುತ್ತೇನೋ. ಇತ್ತಿತ್ಲಾಗಿ ಅವಳನ್ನು ಹಿಂದೆ ಕೂಡಿಸಿಕೊಂಡು ಹೋಗೋದಕ್ಕೇ ಮುಜುಗರ ಆಗ್ತಾ ಇದೆ. ನೋಡಿದೋರೆಲ್ಲ ಮುಸಿಮುಸಿ ನಗ್ತಿರ್ತಾರೆ. ಅವಳನ್ನು ಕೂಡಿಸಿಕೊಂಡಾಗಲೆಲ್ಲ ಎಲ್ಲಿ ಫ್ರಂಟ್‌ ವೀಲ್‌ ಮೇಲೆದ್ದುಬಿಡುತ್ತೋ ಅಂತ ದಿಗಿಲಾಗ್ತಾ ಇರತ್ತೆ. ಇನ್ನು ಹೆಲ್ಮೆಟ್‌ ಹಾಕ್ಕೊಂಡು ಆ ಗೂಬೆ ಕೂತ್ರೆ.. ನಾನು ಸೂಸೈಡ್‌ ಮಾಡ್ಕೊಬೇತು ಅಷ್ಟೆ".

ಸಹಧರ್ಮಿಣಿ ಸಂಕಟ! ಗಹಗಹಿಸಿ ನಗಲು ಶುರು ಮಾಡಿದೆ. ಏನು ಮಾಡಿದ್ರೂ ಕಂಟ್ರೋಲ್‌ ಮಾಡಲು ಆಗುತ್ತಿಲ್ಲ. ಕೊನೆಗೆ ಅವನೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೆ ನಗಲು ಶುರು ಮಾಡಿದ.

ಪರಿಹಾರ, ಪರಿಹಾರ ಅಂತ ಎರಡೂ ಕೈ ಅಗಲಿಸಿ ಕೇಳಿದ. ಸರಿ, ಸರಿ ಅಂತ ಸುಮ್ಮನಾದೆ. ಒಂದು ಸಲ ಅವರಿಬ್ಬರೂ ಹೆಲ್ಮೆಟ್‌ ಹಾಕ್ಕೊಂಡು ಗಾಡಿ ಮೇಲೆ ಹೋಗುವ ಚಿತ್ರವನ್ನು ಕಲ್ಪನೆ ಮಾಡಿಕೊಂಡು ಮತ್ತೆ ಕಿಸಕ್ಕಂತ ನಕ್ಕೆ. ಈ ಯಪ್ಪನ ತಲೆ ಮೇಲೆ ಹೆಲ್ಮೆಟ್‌ ಯಾವಾಗಲೂ ಬಿಗಿಯಾಗಿ ಕೂಡೋದೇ ಇಲ್ಲ. ಯಾವಾಗಲೂ ವಾಲಿಕೊಂಡೇ ಇರುತ್ತದೆ. ಇನ್ನು ಈ ಯಮ್ಮನ ತಲೆಗೆ ಸ್ಪೆಷಲ್ಲಾಗಿ ಆರ್ಡರ್‌ ಕೊಟ್ಟು ಹೆಲ್ಮೆಟ್‌ ಮಾಡಿಸಬೇಕು.

ಮದುವೆ ಆದಾಗ ಸರಿಯಾದ ಜೋಡೀನೆ. ಆದ್ರೆ ಇತ್ತಿತ್ತಲಾಗಿ ಸುಬ್ಬಿ ಸ್ವಲ್ಪಾನೇ ಉದಿಕೊಂಡುಬಿಟ್ಟಿದ್ದಾಳೆ. ಸುಬ್ಬ ಸ್ವಲ್ಪಾನೆ ತೆಳ್ಳಗಾಗಿಬಿಟ್ಟಿದ್ದಾನೆ.

'ಹೈಕೋರ್ಟ್‌ ಆರ್ಡರು, ರಾಜಕಾರಣಿ-ಹೆಲ್ಮೆಟ್‌ ತಯಾರಕರ ಡೀಲು, ಆ್ಯಕ್ಸಿಡೆಂಟ್‌ಗಳ ಸ್ಟ್ಯಾಟಿಸ್ಟಿಕ್ಸು ಏನೇ ಇರಲಿ ಹೆಲ್ಮೆಟ್‌ ಕಡ್ಡಾಯ ಮಾಡಿದ್ದು ಒಳ್ಳೇದೆ. ನಮ್‌ ಜನ ರೂಲ್ಸು ಅನ್ನೋದು ಇಲ್ಲದಿದ್ದರೆ ಯಾವುದೂ ಫಾಲೋ ಮಾಡೋದಿಲ್ಲ, ತಿಳ್ಕೊ" ಅಂದೆ.

'ಅಲ್ಲಾ ಈ ಆರ್ಡರ್‌ ಮಾಡಿದೋರು, ರಾಜಕಾರಣಿಗಳು, ಅಂಕಿ-ಅಂಶ ನೀಡೋರು ಎಂದಾದರೂ ಹೆಲ್ಮೆಟ್‌ ಹಾಕ್ಕೊಂಡು ಗಾಡಿ ಓಡಿಸಿದ್ದಾರಾ? ಅವರಿಗೇನು ಗೊತ್ತು ನಮ್ಮಂಥೋರ ಕಷ್ಟ. ಗಾಡಿ ಓಡ್ಸೋರು ಓಕೆ. ಹಿಂದೆ ಕೂತೋರ್ಗೆ ಯಾಕೆ? ಪರಿಹಾರ ಇರೋದು ಹೀಗೆ ಬೇಕಾಬಿಟ್ಟಿ ರೂಲ್ಸು ಮಾಡೋದರಲ್ಲಲ್ಲ. ಆ್ಯಕ್ಸಿಡೆಂಟ್‌ ಯಾಕೆ ಆಗ್ತಾವೆ ಹೇಳು. ಟ್ರಾಫಿಕ್‌ ನಿಯಮ ಸರಿಯಾಗಿ ಪಾಲಿಸೋದಿಲ್ಲ. ಮೊದಲು ಅಂಥೋರ್ನ ಹಿಡಿದು ದಂಡಿಸಬೇಕು. ಟ್ರಾಫಿಕ್‌ನ್ನ ಮೊದಲು ಸರಿಯಾಗಿ ಕಂಟ್ರೋಲ್‌ ಮಾಡಬೇಕು" ಸುಬ್ಬು ವಿವರಿಸಿದ.

'ಗಾಡಿ ಓಡಿಸೋರಿಗೆ ಟ್ರಾಫಿಕ್‌ ಸೆನ್ಸ್‌ ಇದ್ರೆ ಕಂಟ್ರೋಲು ಮಾಡೋದು ಅಷ್ಟೊಂದು ಕಷ್ಟವೇನಲ್ಲ. ಲೇನ್‌ ಶಿಸ್ತು, ಒನ್‌ವೇ ನಿಯಮ ಸರಿಯಾಗಿ ಪಾಲಿಸಿದರೆ ಅರ್ಧಕ್ಕರ್ಧ ಸಮಸ್ಯೆಗೆ ಪರಿಹಾರ ದೊರೆತಂತೆ. ಯುವಕರನ್ನ ನೋಡಿದ್ಯಾ. ಹೆಲ್ಮೆಟ್‌ ಇದ್ರೂ ತಲೆಮೇಲಿರಲ್ಲ. ಕನ್ನಡಿಮೇಲೋ, ಹ್ಯಾಂಡಲ್‌ಗೋ ಸಿಕ್ಕಿಸಿರ್ತಾರೆ. ಇಲ್ಲದಿದ್ದರೆ ಪಿಲಿಯನ್‌ ರೈಡರ್‌ ಹಿಂದೆ ಲಾಕ್‌ ಜೊತೆ ವಿರಾಜಮಾನವಾಗಿರತ್ತೆ. ಹೆಲ್ಮೆಟ್‌ ಹಾಕ್ಕೊಂಡಾಗಾದ್ರೂ ಅವರ ಬುದ್ಧಿ ಅವರ ತಲೇಲಿ ಭದ್ರವಾಗಿರತ್ತೆ." ಬಾಣ ಬಿಟ್ಟೆ.

ಬಾಣ ಸರಿಯಾಗಿ ನಾಟಿತ್ತು.

'ಕರೆಕ್ಟಾಗಿ ಹೇಳಿದೆ ಕಣೋ. ಹೆಲ್ಮೆಟ್‌ ಹಾಕಿದ್ರೆ ನನ್ನ ಹೆಂಡತಿ ಬುದ್ಧೀನೂ ಅವಳ ತಲೆಲೇ ಇರತ್ತೆ. ಬಣ್ಣದ ಗ್ಲಾಸಿರೋ ಹೆಲ್ಮೆಟ್‌ ಹಾಕಿದ್ರೆ ಇನ್ನೂ ಒಳ್ಳೇದು. ಅವಳಿಗೆ ಹೊರಗಡೇದು ಏನೂ ಕಾಣಲ್ಲ, ಅವಳ ಮುಸುಡಿನೂ ಹೊರಗಿನವರಿಗೆ ಕಾಣಲ್ಲ. ನಾನು ನನ್ನ ಕಲೀಗ್‌ಗೆ ಡ್ರಾಪ್‌ ಕೊಟ್ರೂ ಅವಳಿಗೆ ಗೊತ್ತಾಗಲ್ಲ" ಅಂದ ಕಣ್ಣು ಮಿಟುಕಿಸಿ.

'ನಿನ್ನ ಕಲೀಗ್‌ಗಳಿಗೂ ಒಂದು ಹೆಲ್ಮೆಟ್‌ ಕೊಂಡ್ಕೊಂಡುಬಿಡು" ಅಂದೆ ನಗುತ್ತಾ.

ಹೆಲ್ಮೆಟ್‌ನಿಂದ ಇನ್ನೂ ಏನಾದರೂ ಅನುಕೂಲಗಳಿವೆಯೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X