• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎರಡು ಡಜನ್‌ ಕೆಸರಿಲ್ಲದ ಕಮಲಗಳು ಅರಳಿದ ವೇಳೆ...

By * ಪ್ರಸಾದ ನಾಯಿಕ
|

ಬೆಂಗಳೂರಂಥ ಬೆಂಗಳೂರಲ್ಲಿ 30x40 ಸೈಟು ಸಿಗೋದು, ಅಲ್ಲೊಂದು ಮನೆ ಕಟ್ಟೋದು ಮಿಡ್ಲ್‌ ಕ್ಲಾಸ್‌ ಫ್ಯಾಮಿಲಿಗೆ ಗಗನ ಕುಸುಮ. ಅದರಲ್ಲೂ ಬಿಡಿಎ ಕಾರ್ನರ್‌ ಸೈಟಿದ್ದರಂತೂ ಮುಗಿದೇ ಹೋಯಿತು. ಸೈಟು ಕೊಳ್ಳೋಕೆ ಹೋದೋರು ಮಾಲಿಕನಾಡೋ ಧಿಮಾಕಿಗೆ ಎರಡು ಒದ್ದು ಬರಬೇಕು. ಅಂಥಾ ಪರಿಸ್ಥಿತಿ ಬೆಂಗಳೂರಲ್ಲಿ.

ಅಂತೂ ಸೈಟು ಗಿಟ್ಟಿಸಿ, ಒಂದರ ಮೇಲೊಂದು ಮಹಡಿ ಏರಿಸಿ, ಮೇಲಿನ ಮನೇಲಿ ತಾವಿದ್ದು, ಕೆಳಗಿನೆರಡು ಮನೆಗಳನ್ನು ಬಾಡಿಗೆಗೋ, ಲೀಸಿಗೋ ನೀಡಿ ಕೈತುಂಬಾ ಹಣ ಎಣಿಸಿಕೊಳ್ಳೋರೆ ಇಲ್ಲೆಲ್ಲಾ. ಮತ್ತೆ ಸೈಟಿಗೆ ಹಾಕಿದ ದುಡ್ಡು ವಾಪಸು ಬರೋದು ಬೇಡ್ವಾ? ಮನೆ ಸುತ್ತ ಮೂರಡಿ ಜಾಗ ಕೂಡ ಬಿಟ್ಟಿರೊದಿಲ್ಲ. ಅಂಥದ್ದರಲ್ಲಿ 1200ಚದರಡಿ ಜಾಗದಲ್ಲಿ ಮನೆ ಕಟ್ಟಿ, ಮುಂದಿನ ಜಾಗದಲ್ಲಿ ಹೂತೋಟ ಮಾಡಿಕೊಂಡರಂತೂ ಎದ್ದು ಬಿದ್ದು ನಗೋ ಜನಾನೆ ಜಾಸ್ತಿ. ಅದೇನಿದ್ರೂ 2400ಚದರಡಿ ಜಾಗದಲ್ಲಿ ಬಂಗ್ಲೆ ಕಟ್ಟಿ ಮನೆ ಮುಂದೆ ನಾಲ್ಕು ಕಾರಿಟ್ಟಿರೋರಿಗೆ ಸರಿ.

ನಮ್ಮಂಥವರದೇನಿದ್ದರೂ ಕೈಯಲ್ಲಿರೋ ದುಡ್ಡನ್ನೆಲ್ಲಾ ಹಾಕಿ ಒಂದು ಮನೆ ಕಟ್ಟಿಸಿ, ಬಾಲ್ಕನಿಯಲ್ಲಿ ಕಾಲು ಚಾಚೋಕೂ ಬರದಷ್ಟು ಜಗದಲ್ಲಿ ನಾಲ್ಕು ಹೂವಿನ ಕುಂಡೆಗಳನ್ನಿಟ್ಟರೆ ಅದೇ ಹೂತೋಟ, ಅಲ್ಲೇ ವನವಿಹಾರ.

ಹನ್ನೆರಡು ಗಂಟೆ ಜಾಗದಲ್ಲಿ ರಾವ್‌ ಅವರ ಮನೆ, ಮೂರು ಗಂಟೆ ಜಾಗದಲ್ಲಿ ಬೆಂಗಾಲಿ ಬಾಬು, 6 ಗಂಟೆ ಜಾಗದಲ್ಲಿ ಯಾರೋ ಕ್ರಿಶ್ಚಿಯನ್ನರು, 7 ಗಂಟೆ ಜಾಗದಲ್ಲಿ ಮಹಾರಾಷ್ಟ್ರ ಮರಾಠಿಗಳು, 9 ಗಂಟೆ ಜಾಗದಲ್ಲಿ ಮಲಯಾಳಿ ಸ್ಕೂಲ್‌ ಟೀಚರೊಬ್ಬಳು ಮೂರಂತಸ್ತಿನ ಬಂಗಲೆ ಕಟ್ಟಿಸ್ತಾ ಇದ್ದಾಳೆ, ಅವಳು ಸೈಟಿಗೆ ಹಾಕಿದ್ದೇ 15.7 ಲ್ಯಾಖ್ಸ್‌! ಅವಳು ಕಟ್ಟಿಸ್ತಿರೋ ಬಂಗಲೆಯ ಎರಡು ಮತ್ತು ಮೂರನೇ ಮಹಡಿ ಟ್ಯೂಷನ್‌ಗಳಿಗಾಗಿ ಮಾತ್ರ ಮೀಸಲಂತೆ!! ಏನಾದ್ರೂ ಮಾಡಿಕೊಳ್ಳಲಿ, ಅವರ ವಿಚಾರ ನಮಗ್ಯಾಕೆ? 11 ಗಂಟೆ ಜಾಗದಲ್ಲಿ ಮತ್ತೊಬ್ಬ ಮಲೆಯಾಳಿ. ಬಂದು 6 ವರ್ಷಗಳಾದರೂ ಕನ್ನಡ ತರಿಯಾದ. 9 ಗಂಟೆ ಪಕ್ಕದ ಮಲೆಯಾಳಿಗಳ ಪಕ್ಕದಲ್ಲಿರೋರೆ ಅಯ್ಯಂಗಾರ್‌ ಆಂಟಿ. ಪಾಪ ಒಳ್ಳೆ ಜನ, ಅಲ್ಪಸ್ವಲ್ಪ ಕನ್ನಡ ಮಾತಾಡುತ್ತಾರೆ. ಈ ಆಂಟಿನೇ ನಮಗೆ ತಂದು ಕೊಟ್ಟಿದ್ದು ಬ್ರಹ್ಮ ಕಮಲದ ಎರಡು ಗಿಡಗಳನ್ನ.

ಶೋಗಿಡಗಳಂತೆ ಕಾಣುವ ಎರಡೂ ಗಿಡಗಳನ್ನು ಎರಡು ಕುಂಡೆ(ಉತ್ತರ ಕರ್ನಾಟಕದ ಕಡೆ ಹೂಕುಂಡಗಳಿಗೆ ಕುಂಡೆ ಅಂತ ಕರೀತಾರೆ)ಗಳಲ್ಲಿ ನಟ್ಟು ದಿನಾ ಎರಡು ಹೊತ್ತು ನೀರು ಹಣಿಸಿದ್ದಾಯಿತು. ಚಳಿಗಾಲ ಹೋಗಿ, ಬೇಸಿಗೆಕಾಲ ದಾಟಿ, ಮಳೆಗಾಲ ಕಾಲಿಟ್ಟರೂ ಹೂಗಳ ಪತ್ತೆಯಿಲ್ಲ. ಉದ್ದೋಉದ್ದಕ್ಕೆ ಬೆಳೀತಾಹೋದಿದ್ದೇ ನಾವು ನೀರುಣಿದ್ದರ ಫಲ. ನೆಲಕ್ಕೆ ಬೀಳಲಾರದ ಹಾಗೆ ಅದಕ್ಕೊಂದು ಕಾತಿ ಹಗ್ಗ ಕಟ್ಟಿ ಎತ್ತಿಕಟ್ಟಿದ್ದಾಯಿತು. ಮಧ್ಯೆಯಾವಾಗಲೋ ಒಮ್ಮೆ ಒಂದು ಮೊಗ್ಗು ಬಿಟ್ಟುಆಸೆ ಹುಟ್ಟಿಸಿತಾದರೂ, ಮಾರನೆ ದಿನ ಕೋತಿಗಳು ಬಂದು ಮೊಗ್ಗಿನಲ್ಲೇ ಚಿವುಟಿಹಾಕಿದವು.

ಮೊಗ್ಗೇನಾದ್ರೂ ಬಿಟ್ತಾ ಅಂತ ರಾವ್‌ ಕೇಳಿದರು. ಕೋತಿ ನಡೆಸಿದ ಹಾವಳಿಯನ್ನ ಅವರ ಮುಂದೆ ವಿವರಿಸಿದೆ. ಅಲ್ಲಾ, ನೋಡಿ... ನಿಮ್ಮನೆ ಮುಂದೆ ಬೆಳಿಸಿದ್ದೀರಲ್ಲಾ ಆ ಗಸೆಗಸೆ ಮರ ಅದನ್ನ ಮೊದಲು ಕತ್ತರಿಸಿ ಹಾಕಿ. ಅದರಿಂದಾನೇ ಮಂಗಗಳ ಹಾವಳಿ ಜಾಸ್ತಿಯಾಗಿದೆ ಅಂತ ಉಪದೇಶ ನೀಡಿದರು. ಮೇಲಿಂದ ಕೆಳಗಿನ ತನಕ ಅವರನ್ನೊಮ್ಮೆ ನೋಡಿ ಮರಳಿ ಬಂದೆ.

'ಮನೆ ಅತ್ರ ಓಗ್ಲಿ, ದೂರದಾಗೆಲ್ಲಾದ್ರೂ ಒಂದು ಮರ ಕತ್ತರಿಸಿ ಆಕಿದ್ರೆ ನನ್‌ ಕರುಳನ್ನೇ ಕತ್ತರಿಸಿ ಆಕಿದಂಗಾಗ್ತೆೈತೆ ಕಣ್ಲಾ.. ಆ ವಯ್ಯ ಮನೆ ಮುಂದಿರೋ ಮರಾನೇ ಕತ್ತರಿಸಿ ಆಕು ಅಂತಾ ಅವ್ನೆ..." ಅಂತ ಧೀರೇದ್ರ ಗೋಪಾಲ್‌ ಹೊಡೆಯೋ ಡೈಲಾಗ್‌ ಥರ ಡೈಲಾಗ್‌ ಮನದಲ್ಲಿ ಬಂದು ಹೋಯ್ತು. ಇಂಥವರಿಗೆ ಉತ್ತರ ಕೊಡೋದ್ರಲ್ಲಿ ಏನೂ ಅರ್ಥ ಇಲ್ಲ ಅಂತ ಸುಮ್ಮನಾದೆ.

ನಾನಿಲ್ದಿದ್ರೆ ನಮ್ತಂದೆ, ಅವರಿಲ್ಲದಿದ್ರೆ ನಾನು ಗಿಡಗಳಿಗೆ ನೀರು ಹಾಕುತ್ತಿದ್ದುದಂತೂ ತಪ್ಪಲಿಲ್ಲ. ಅಪ್ಪಿತಪ್ಪಿ ಎರಡು ದಿನ ನೀರುಣಿಸದಿದ್ರೆ ಸೇವಂತಿಗೆ ಥರ ಮುರುಟಿ ಹೋಗುವ ಗಿಡವೂ ಈ ಗಿಡವಲ್ಲ. ಹಾಕಿದ ನೀರನ್ನೆಲ್ಲ ಹೀರಿ ಮೈತುಂಬಿದ ಬಸುರಿಯಂತೆ ಬೆಳೀತಾ ಹೋದವು ಈ ಗಿಡಗಳೆರಡು.

ಬೇಸಿಗೆ ಮುಗಿದು ಮಳೆಗಾಲ ಶುರು ಆಗುತ್ತಿದ್ದಂತೆ ಮೊಗ್ಗು ಬಿಡುವ ಸೂಚನೆಗಳು ಕಂಡುಬರತೊಡಗಿದವು. ಉತ್ತರ ಕರ್ನಾಟಕದಲ್ಲೆಲ್ಲಾ ರಪರಪ ಮಳೆ ಸುರೀತಾ ಇದ್ರೆ, ನಮ್ಮ ಮಹಡಿ ಮೇಲಿನ ಬಾಲ್ಕನಿಯಲ್ಲಿ ಪಕ್ಕದ ಮನೆ ಅಯ್ಯಂಗಾರ್‌ ಆಂಟಿ ಕೊಟ್ಟಿದ್ದ ಗಿಡಗಳಲ್ಲಿ ಮೊಗ್ಗುಗಳ ಸುರಿಮಳೆ! ನಾನು 2-3-4 ಬಿಡಬಹುದೆಂದು ಎಣಿಸಿದ್ದರೆ, ನನ್ನ ಕಲ್ಪನೆಗಳನ್ನೆಲ್ಲ ಮೀರಿ ಬಿಟ್ಟಿದ್ದು 24-25 ಮೊಗ್ಗುಗಳು, ಒಂದೇ ಬಾರಿಗೆ. ಮನೆಯವರೆಲ್ಲ ಬೆಕ್ಕಸ ಬೆರಗಾಗಿ ಹೋದೆವು. ಬಿಟ್ಟಿದ್ದು ಅಂತಿಂಥ ಮೊಗ್ಗುಗಳಲ್ಲ, ಅವು ಬ್ರಹ್ಮಕಮಲಗಳು.

ಒಂದೆಡೆ ಹರ್ಷ ಮಿತಿಮೀರಿದ್ದರೆ, ಮತ್ತೊಂದೆಡೆ ಈ ಮೊಗ್ಗುಗಳನ್ನೆಲ್ಲಾ ಮಂಗಗಳಿಂದ ಕಾಯುವುದು ಹೇಗಪ್ಪಾ ಅಂತ ಚಿಂತೆ ಶುರುವಾಯಿತು. ಕಳೆದ ಬಾರಿ ಬಿಟ್ಟ ಒಂದೇ ಒಂದು ಮೊಗ್ಗನ್ನು ಬಿಡದ ಮಂಗಗಳು ಈ 25 ಮೊಗ್ಗುಗಳನ್ನು ಕಂಡು ರಂಪಾಟ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂಬುದು ಖಾತ್ರಿಯಾಗಿ ದಿಗಿಲಾಯಿತು.

ಪ್ರತಿದಿನ ಎಣಿಸಿದಂತೆ ಸರಿಯಾಗಿ 9-9.30ರೊಳಗೆ ಮಂಗಗಳು ಬರುತ್ತಿದ್ದವು. ಸರಿ, ಒಂದು ಗಳ ಬಂದು ಮೇಲಿನ ಕೋಣೆಯ ಮೂಲೆ ಸೇರಿತು, ಕೋತಿಗಳು ಬಂದರೆ ಓಡಿಸಲೆಂದು. 10.30ರತನಕ ನಾನೇನೋ ಇರುತ್ತಿದ್ದೆ. ಆದರೆ, ನಂತರ ಕೋತಿಗಳು ಬಂದು ಹಾವಳಿ ಎಬ್ಬಿಸಿದರೆ? ಮನೇಲಿ ಇರೋ ಹೆಂಗಳೆಯರಿಗೆಲ್ಲ ಕಟ್ಟುನಿಟ್ಟಿನ ಆಜ್ಞೆಯಾಯಿತು. ಬಿಟ್ಟಿರೋ ಬ್ರಹ್ಮಕಮಲಗಳನ್ನು ನೋಡೋಕೆ ಎಲ್ಲರಿಗೂ ಆಸೆ, ಆದರೆ ಅವನ್ನು ಕೋತಿಗಳಿಂದ ಕಾಪಾಡೋಕೆ ಎಲ್ಲರಿಗೂ ಬೇಜಾರು. ಮತ್ತೆ, ಎಲ್ಲ 25 ಕೆಸರಿಲ್ಲದ ಕಮಲಗಳು ಏಕಕಾಲಕ್ಕೆ ಅರಳಿದ್ದನ್ನ ನೋಡಬೇಕಂದ್ರೆ ಸ್ವಲ್ಪ ಕಷ್ಟಪಡಲೇಬೇಕು.

ತಮಾಶೆ ಏನು ಗೊತ್ತಾ? ತದನಂತರ ಕೋತಿಗಳು ಮನೆಕಡೆ ಬರಲೇ ಇಲ್ಲ. ಕೋತಿ ಓಡಿಸಲೋಸುಗ ನಾನು ಮಾಡಿಕೊಂಡಿದ್ದ ತಯಾರಿ, ಕಷ್ಟಪಟ್ಟು ಉಳಿದವರನ್ನು ಒಪ್ಪಿಸಿದ್ದು ವ್ಯರ್ಥವಾಗಿ ಹೋಯಿತು.

ನಾಳೆ ಅರಳತ್ತೆ ನೋಡು ಅನ್ನೋದು ಹೆಂಡ್ತಿ ಹತ್ರ ಬೈಸಿಕೊಳ್ಳೋದು, ನಾಳೆ ಅರಳತ್ತೆ ನೋಡು ಅನ್ನೋದು ಹೆಂಡ್ತಿ ಹತ್ರ ಬೈಸಿಕೊಳ್ಳೋದು ಹೀಗೆ ನಡೆದೇ ಇತ್ತು. ಹೆಚ್ಚೂಕಡಿಮೆ ಒಂದು ವಾರದ ನಂತರ ಒಂಬತ್ತು ತುಂಬಿದ ಬಸುರಿಯರು ಸೊಂಟದ ಕೈಮೇಲೆ ಕೈಯಿಟ್ಟು ನಿಂತಂತೆ ನಿಂತಿದ್ದವಲ್ಲ ಬ್ರಹ್ಮಕಮಲದ ಮೊಗ್ಗುಗಳು, ನನಗಂತೂ ಖಚಿತವಾಗಿ ಹೋಯಿತು, ಇವತ್ತು ರಾತ್ರಿ ಅರಳೇ ಅರಳುತ್ತವೆಂದು. ಎಂದಿನಂತೆ ಹುಷಾರಾಗಿರು ಅಂತ ಹೆಂಡತಿಗೆ ಹೇಳಿ ಆಫೀಸಿಗೆ ಹೋದೆ.

ಸಾಯಂಕಾಲ ವಾಪಸು ಬಂದು ಮನೆಯಾಳಗೆ ಕಾಲಿಡುತ್ತಿದ್ದಂತೆ ಹೆಂಡತಿಗೆ ಕೇಳಿದೆ, ಕಮಲಗಳು ಅರಳಿವೆಯಾ ಎಂದು. ಅವಳು ಎಂದಿನಂತೆ ಮರೆತೇ ಬಿಟ್ಟಿದ್ದೆ ಅಂತ ಹೇಳಿದಳು. ಮಹಡಿ ಮೇಲೆ ದೌಡಾಯಿಸಿದೆ ನೋಡಿ, ಹುಷಾರು ಅಂತ ಹೆಂಡತಿ ಕೂಗಿದಳು. ಕೋತಿಗಳು ನನ್ನ ಅನುಪಸ್ಥಿತಿಯಲ್ಲಿ ಹಾವಳಿ ಎಬ್ಬಿಸದೇ ಇರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತ ಬಾಗಿಲು ತೆಗೆದೆ ನೋಡಿ, ಗಳಗಳ ಅಳೋದೊಂದು ಬಾಕಿ. ಘಮ್ಮಂತ ವಾಸನೆ ಮೂಗಿಗೆ ರಾಚಿತು.

25ರಲ್ಲಿ 20 ಮಾರ್ಕು! ಹೆಚ್ಚೂ ಕಡಿಮೆ 20 ಬ್ರಹ್ಮಕಮಲಗಳು ಅರಳಿ ನಿಂತು ಬಿಟ್ಟಿವೆ. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಏ ಎಲ್ಲಾರೂ ಓಡಿ ಬನ್ನಿ ಎಂದು ಒಂದೇ ಉಸಿರಿನಲ್ಲಿ ಕೆಳಗಿರೋರನ್ನೆಲ್ಲಾ ಕರೆದೆ. ಎಲ್ಲರಿಗಿಂತ ನನ್ನ ಮಗಳನ್ನು ಹಿಡಿ ಅಂತ ಕೂಗಿದೆ. ಒಂದೂವರೆ ವರ್ಷದ ಪುಟಾಣಿ ಕೋತಿಗಿಂತ ದೊಡ್ಡ ಕೋತಿ. ಹೂವಿಗೆ ಎಲ್ಲಿ ಕೈಹಾಕಿ ಬಾಲ್ಕನಿ ವನದಲ್ಲಿ ಬಿಟ್ಟ ಹೂಗಳನ್ನೆಲ್ಲಾ ಎಲ್ಲಿ ಹಾಳು ಮಾಡಿಬಿಡುತ್ತಾಳೋ ಅಂತ ದಿಗಿಲು.

ಈ ಬ್ರಹ್ಮಕಮಲಕ್ಕೆ ಎಷ್ಟು ವೈಯ್ಯಾರ ಅಂದ್ರೆ, ಅರಳಿದ ಕೆಲವೇ ಗಂಟೆಗಳಲ್ಲಿ ನಮ್ಮ ಸಂತೋಷವನ್ನೆಲ್ಲಾ ಕಿತ್ತುಕೊಂಡು ಬಾಡಿಹೋಗುತ್ತವೆ. ರಾತ್ರಿ 9ರ ನಂತರ ನೋಡಿದ ಹೂಗಳು ಬೆಳಿಗ್ಗೆ ಹೊತ್ತಿಗೆ ಮುರುಟಿ ಹೋಗಿರುತ್ತವೆ. ರಾತ್ರಿಗಳಲ್ಲಿ ಅರಳುವುದರಿಂದ ರಾತ್ರಿ ರಾಣಿ ಅಂತಲೂ ಇವನ್ನು ಕರೆಯುತ್ತಾರೆ.

ಇವು ಶಾಶ್ವತವಾಗಿ ಮನದಲ್ಲಿ ಅರಳಿರಬೇಕೆಂದರೆ ಫೋಟೋ ತೆಗೆಯುವುದೊಂದೇ ಮಾರ್ಗ. ದರಿದ್ರದ್ದೂ ಫೋಟೋ ತೆಗೆಯೋಣವೆಂದರೆ ಕ್ಯಾಮೆರಾ ಕೆಟ್ಟು ಕೂತಿಗೆ. ಒಂದು ಕ್ಲಿಕ್‌ ಮಾಡಿದರೆ ಮೂರು ನಂಬರ್‌ ಜಿಗಿಯುತ್ತಿತ್ತು. ಮತ್ತೆನೋ ಕರಕರ ಶಬ್ದ. ಏನೂ ತೋಚಲಿಲ್ಲ. ಕೆಳಗಡೆ ರಸ್ತೆಯಲ್ಲಿ ರಾವ್‌ ಅವರೂ ಅವರ ಮಗಳೂ ಮಾತನಾಡುತ್ತ ನಿಂತಿದ್ದರು. ಸರಿ, ನಾಚಿಕೆ ಬಿಟ್ಟು ಕೇಳೇ ಬಿಡು ಅಂತ ಹೆಂಡತಿಯನ್ನು ಕಳಿಸಿದೆ.

ನಮ್ಮನೇಲಿ 20ಕ್ಕೂ ಹೆಚ್ಚು ಬ್ರಹ್ಮಕಮಲ ಅರಳಿವೆ ಅಂತ ಮುಖ ಕಮಲಕ್ಕಿಂತ ಹೆಚ್ಚಿಗೆ ಅರಳಿಸಿ ಹೆಂಡತಿ ಪೀಠಿಕೆ ಹಾಕಿದಳು. ರಾವ್‌ ಅವರ ಮಗಳು ಹೌದಾ ಅಂತ ಯಾವುದೇ ಆಶ್ಚರ್ಯ ತೋರಿಸದೆ ಹೆಂಡತಿಗೆ ನಿರಾಸೆಯುಂಟು ಮಾಡಿದಳು. ಏನಿಲ್ಲ, ಆ ಕಮಲಗಳ ಫೋಟೋ ತೆಗೆಯೋದಿಕ್ಕೆ ನಮ್ಮ ಕ್ಯಾಮೆರಾ ಕೆಟ್ಟಿದೆ ನಿಮ್ಮ ಕ್ಯಾಮೆರಾ ಸ್ವಲ್ಪ ಕೊಡ್ತೀರಾ ಅಂತ ಹಿಂಜರಿಯುತ್ತಲೇ ಕೇಳಿದಳು. ಅಯ್ಯೋ ನಮ್ದೂ ಕೆಟ್ಟಿದೆ ಅಂತ ಉತ್ತರ ಬಂತು.

ಬ್ರಹ್ಮಕಮಲಗಳು ಬಾಡಿದಂತೆ ಮುಖ ಮಾಡಿಕೊಂಡು ಬಂದಳು. ನಾನು ಬೇಡ ಅಂತ ಹೇಳ್ದೆ. ನೋಡಿ ಏನಾಯ್ತು ಅಂತ ಮುಖ ಸಿಂಡರಿಸಿ ಹೇಳಿದಳು. ಏನಪ್ಪಾ ಮಾಡೋದು ಅಂತ ಕ್ಯಾಮೆರಾವನ್ನು ಶಪಿಸುತ್ತ ಬಂದು, ಮನೆ ಹತ್ತಿರ ಇರೋ ಸ್ಟುಡಿಯೋಗೆ ಹೋದೆ. ಕತ್ತಲು ಚೀಲದಲ್ಲಿ ಕೈಹಾಕಿ ಏನೇನೋ ಮಾಡಿ ರೀಲಿನ ಹಲ್ಲುಗಳು ಮುರಿದಿವೆ. ರೀಲನ್ನು ಸರಿಯಾಗಿ ಲೋಡ್‌ ಮಾಡಿಲ್ಲ, ಕ್ಯಾಮೆರಾ ಕೆಟ್ಟಿಲ್ಲ ಅಂತ ಅಂಗಡಿ ಮಾಲಿಕ ಹೇಳಿದ. ಹೋದ ಜೀವ ಬಂದಂತಾಯಿತು. ಸರಿ, ಬೇರೆ ರೀಲನ್ನು ಹಾಕಿಸಿ ಮನೆಗೆ ತೆಗೆದುಕೊಂಡು ಬಂದು ಬ್ರಹ್ಮಕಮಲಗಳ ಫೋಟೋ ಸೆಷನ್ನು ಶುರು ಮಾಡಿದೆ. ಮನದಲ್ಲಿ ಅರಳಿದ ಬ್ರಹ್ಮಕಮಲದ ಬಿಂಬವನ್ನು ಅಷ್ಟು ಸುಲಭವಾಗಿ ಹೊರಗೆ ಅರಳಿಸೋದಕ್ಕೆ ಸಾಧ್ಯವೇ? ನೀವೇನಂತೀರಾ?

ನಿಮ್ಮ ಮನೆಯಲ್ಲೂ ಇಂತಹ ಸಮಾಚಾರಗಳಿದ್ದರೆ ನಮಗೆ ಕಳುಹಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more