• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರೆಯಂಚಿನಲ್ಲಿ ಹಳ್ಳಿ ಸೊಗಡು

By ಎ.ಎಂ. ರಮೇಶ್, ಬೆಂಗಳೂರು
|

ಹಳ್ಳಿ ಎಂದರೆ, ಸಾಮಾನ್ಯವಾಗಿ ಎಲ್ಲರಿಗೂ ಅನ್ನಿಸುವ ಸಂಗತಿಯೆಂದರೆ ; 'ಕೃಷಿಯನ್ನೇ ಪ್ರಧಾನವಾಗಿಟ್ಟುಕೊಂಡು ಜೀವನ ನಿರ್ವಹಿಸುವ ಒಂದಷ್ಟು ರೈತ ಕುಟುಂಬಗಳ ಸಮೂಹ’. ಹಳ್ಳಿಗರಿಗೆ ದುಡಿಮೆಯೇ ದೇವರು. ಕಷ್ಟಪಟ್ಟು ಬಿಸಿಲು-ಮಳೆಯೆನ್ನದೆ ಬಿತ್ತಿ-ಬೆಳೆಯುವ ರೈತರು ಇಡೀ ನಾಡಿಗೇ ಅನ್ನ ಹಾಕುವ ಅನ್ನದಾತರು. ಈ ವೃತ್ತಿಗೆ ಓದು ಬೇಕಿಲ್ಲ, ಬರಹ ಬೇಕಿಲ್ಲ. ಆದರೆ, ದೇಹದ ಬಲ ಇದ್ದರೆ ಸಾಕು.

ನಮ್ಮ ಹಿಂದಿನ ಹಳ್ಳಿಗಳ ಜೀವನ ಸ್ಥಿತಿ ಇಂದಿನ ಹಳ್ಳಿಗಳಿಗಿಂತ ನೂರುಪಟ್ಟು ಉತ್ತಮವಾಗಿತ್ತು. ನಮ್ಮ ತಾತನ ತಲೆಮಾರಿನ ಹಳ್ಳಿಯ ಬದುಕನ್ನು ಒಂದು ಕ್ಷಣ ಅವಲೋಕಿಸಿದರೆ ನಮಗೆ ನಿಜವಾಗಿಯೂ ಇಂದಿನ ಹಳ್ಳಿಗಳ ಬಗ್ಗೆ ಬೇಸರ ತರಿಸುತ್ತದೆ ಎಂದರೆ ತಪ್ಪಾಗಲಾರದು.

ಹಿಂದೆ ಹಳ್ಳಿಗಳಲ್ಲಿ ಆಧುನಿಕತೆಯ ಛಾಪು ಇನ್ನೂ ಮೂಡಿರಲಿಲ್ಲ. ಆಗ, ಅಲ್ಲಿನ ಜನರು ತಮ್ಮ ಜೀವಿತಾವಧಿಯನ್ನೆಲ್ಲಾ ತಮ್ಮ ಕಸುಬು, ಉಪಕಸುಬುಗಳಲ್ಲೇ ತೇದುಬಿಡುತ್ತಿದ್ದರು. ಮಳೆಬಿದ್ದರೆ ಸಾಕು, ಮನೆ-ಮಂದಿಯೆಲ್ಲಾ ಹೊಲದ ಬಯಲಿನಲ್ಲಿ ಜಮಾಯಿಸಿ ಉತ್ತು-ಬಿತ್ತುವುದರಲ್ಲೇ ಕಾಲಕಳೆಯುತ್ತಿದ್ದರು. ಬೀಜ ಬಿತ್ತುವುದರಿಂದಿಡಿದು ಫಸಲಿನ ಕೊಯ್ಲಿನವರೆಗೂ ತಮ್ಮ ದೇಹ ಶ್ರಮವನ್ನು ಭೂತಾಯಿಯ ಸೇವೆಯಲ್ಲಿ ಮುಡಿಪಾಗಿರಿಸುತ್ತಿದ್ದರು.

ಆಗ ಇಂದಿನಂತೆ ಆಧುನಿಕ ಕೃಷಿಯಂತ್ರಗಳ ಆವಿಷ್ಕಾರವಿರಲಿಲ್ಲ. ಅಂದರೆ, ಎಲ್ಲಾ ಕೆಲಸವನ್ನೂ ದೇಹ ಬಲದಿಂದಲೇ ಮಾಡಬೇಕಾದ ಪರಿಸ್ಥಿತಿ ಅಂದಿನ ಸ್ಥಿತಿಯಾಗಿತ್ತು. ಇಂತಹ ಸಮಯದಲ್ಲಿ ಹಳ್ಳಿಗರಲ್ಲಿ ಅನ್ಯೋನ್ಯತೆ ಇದ್ದಿತ್ತು. ಎಲ್ಲರೂ ಎಲ್ಲರ ಕೆಲಸದಲ್ಲೂ ಸಹಾಯ ಮಾಡುತ್ತಿದ್ದರು. ಆದ್ದರಿಂದ, ಹಳ್ಳಿಗರಲ್ಲಿ ಅಂದು ಒಗ್ಗಟ್ಟಿತ್ತು. ಸುಗ್ಗಿಯ ನಂತರ ಎಲ್ಲರೂ ಸೇರಿ ಹಬ್ಬ ಆಚರಿಸುವುದು ಅಂದಿನ ಪದ್ಥತಿಯಾಗಿತ್ತು. ವರ್ಷವೆಲ್ಲಾ ದುಡಿದು, ದಣಿದ ದೇಹಕೆ ಈ ಸುಗ್ಗಿಯ ಹಬ್ಬ ಖುಷಿ ತರುತ್ತಿತ್ತು. ಇದು ಬರೀ ಆಚರಣೆಗಷ್ಟೇ ಸೀಮಿತವಾಗಿರದೆ, ತಾವು ನಂಬಿದ ಭೂದೇವಿಗೆ, ತಾವು ಬೆಳೆದ ದವಸ-ಧಾನ್ಯಕ್ಕೆ, ತಾವು ಆರಾಧಿಸುವ ಗ್ರಾಮದೇವರುಗಳಿಗೆ ಪೂಜೆ ಸಲ್ಲಿಸುವುದಾಗಿತ್ತು. ಅಲ್ಲದೆ, ಇಂತಹ ಹಬ್ಬ-ಜಾತ್ರೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು ನಡೆಯುವುತ್ತಿದ್ದವು. ನಮ್ಮ ದೇಶದ ಕಲೆ-ಸಂಸ್ಕೃತಿಯನ್ನು ಬೆಳೆಸುವುದರಲ್ಲೂ ಅಂದಿನ ಹಳ್ಳಿಗರು ಮೇಲುಗೈಯಾಗಿದ್ದರು.

ಆಶ್ಚರ್ಯವೆಂದರೆ, ಇಂದಿಗೂ ಸಹ ಕೆಲವೊಂದು ಹಳ್ಳಿಗಳಲ್ಲಿ ವಯಸ್ಸಾದ ತಾತ-ಅಜ್ಜಿಯರನ್ನು ನೋಡಿದರೆ ಅವರು ಯಾವುದಾದರೊಂದು ಕಲೆಯಲ್ಲಿ ಪ್ರವೀಣರಿರುತ್ತಾರೆ. ಉದಾಹರಣೆಗೆ : ಜಾನಪದ ಕಲೆ, ಮದುವೆಯ ಸೋಬಾನ ಪದಗಳನ್ನು ಹೇಳುವುದು, ಕಂಸಾಳೆ ಪದ, ಒಗಟು ಹೇಳುವುದು, ಕಥೆ-ಹರಿಕಥೆ, ಗಾದೆಗಳು, ನಾಟೀ ಔಷಧಿ ತಯಾರಿಕೆ, ಭಾರ ಎತ್ತುವುದು, ಕುಸ್ತಿಯಾಟ, ನಾಟಕದ ಪಾತ್ರಗಳ ನಿಭಾಯಿಸುವಿಕೆ ಹೀಗೇ... ಹತ್ತು-ಹಲವು ಕಲೆಗಳಲ್ಲಿ ಒಬ್ಬೊಬ್ಬರೂ ಯಾವುದರಲ್ಲಾದರೂ ಪ್ರವೀಣರಿರುತ್ತಿದ್ದರು. ಇಂದಿಗೂ ಸಹ ಅಂತಹ ಕೆಲವು ಹಿರಿಯ ಜೀವಗಳು ಇನ್ನೂ ಗಟ್ಟಿಮುಟ್ಟಾಗಿ ಬದುಕುಳಿದಿದ್ದಾರೆಂದರೆ, ನಮಗೆ ನಿಜವಾಗಲೂ ಆಶ್ಚರ್ಯವುಂಟುಮಾಡುವ ಸಂಗತಿ.

ಒಂದೊಮ್ಮೆ ನಮ್ಮ ತಾತನ ತಲೆಮಾರಿನ ಒಂದು ಹಿರಿಯ ಜೀವವನ್ನು ಮಾತನಾಡಿಸಿದಾಗ ಅವರು ಅಂದಿನ ಹಳ್ಳಿಗಳ ಜೀವನ ಸ್ಥಿತಿಯನ್ನು ಹೇಳಿದಾಗ, ಅವರ ಮಾತಿನ ಧಾಟಿ ನಮ್ಮ ಇಂದಿನ ಹಳ್ಳಿಗಳನ್ನು ಅಲ್ಲಗಳೆಯುವಂತಿತ್ತು : 'ಇಂದಿನಂತೆ ಆಗ ಸಾರಿಗೆ-ಸಂಪರ್ಕ ವ್ಯವಸ್ಥೆಯಿರಲಿಲ್ಲ, ಸರಿಯಾದ ರಸ್ತೆಮಾರ್ಗಗಳಿರಲಿಲ್ಲ, ಎಲ್ಲಿಗಾದರೂ ಪ್ರಯಾಣ ಬೆಳೆಸಬೇಕಾದರೆ ಎತ್ತಿನಗಾಡಿಗಳಲ್ಲೇ ಹೋಗಬೇಕಿತ್ತು. ಆಸ್ಪತ್ರೆಗಳಿರಲಿಲ್ಲ, ಇಂದಿನಂತೆ ದೂರವಾಣಿ-ದೂರದರ್ಶನಗಳಿರಲಿಲ್ಲ, ಯಾವೊಂದೂ ವ್ಯವಸ್ಥೆಯಿಲ್ಲದಿದ್ದರೂ ಹಳ್ಳಿಗರಲ್ಲಿ ಒಳ್ಳೆಯತನವಿತ್ತು, ಒಗ್ಗಟ್ಟಿತ್ತು, ಒಬ್ಬರಿಗೊಬ್ಬರು ಸ್ಪಂದಿಸುತ್ತಿದ್ದರು. ಆಗ ಎಲ್ಲಾ ದರಗಳೂ ಕಡಿಮೆಯಿದ್ದವು; ಬೆಣ್ಣೆ-ತುಪ್ಪ, ಮೊಸರು ಇಂತಹ ದೇಹದ ಬಲ ಹೆಚ್ಚಿಸುವ ಆಹಾರ ಪದಾರ್ಥಗಳನ್ನೇ ಚಿಕ್ಕಂದಿನಿಂದಲೂ ಹೇರಳವಾಗಿ ತಿಂದುಂಡು ಗಟ್ಟಿಮುಟ್ಟಾಗಿ ಜೀವಿಸುತ್ತಿದ್ದರು, ಕಷ್ಟಪಟ್ಟು ದುಡಿಯುತ್ತಿದ್ದರು, ಹಾಗೆಯೇ ಸಂತೋಷದಿಂದ ಜೀವಿಸುತ್ತಿದ್ದರು, ಇಂದಿನಂತೆ ದ್ವೇಷ-ಅಸೂಯೆ ಜಾಸ್ತಿಯಿರಲಿಲ್ಲ, ಒಬ್ಬರಿಗೊಬ್ಬರು ಮಾದರಿಯಾಗಿ ಜೀವಿಸುತ್ತಿದ್ದರು.’

-ಹೀಗೇ... ಹತ್ತು-ಹಲವು ವಿಚಾರಗಳನ್ನು ಅವರು ಹೇಳುತ್ತಾ ಹೋಗುತ್ತಿದ್ದಂತೆಯೇ ಆ ಮುದಿಜೀವದ ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಅದರರ್ಥ ಇಂದು ಕಾಲ ಕೆಟ್ಟಿದೆ, ಜನರಲ್ಲಿ ಒಳ್ಳೆಯತನವಿಲ್ಲ ನಮ್ಮ ಇಂದಿನ ಹಳ್ಳಿಗರು ಸೋಮಾರಿಗಳಾಗಿದ್ದಾರೆ, ಎಲ್ಲಾ ವ್ಯವಸ್ಥೆಯಿದ್ದೂ ನೆಮ್ಮದಿಯಿಲ್ಲ ಎಂದರ್ಥ.

ಹೌದು, ನಮ್ಮ ಇಂದಿನ ಹಳ್ಳಿಗಳು ಹಿಂದಿನ ಹಳ್ಳಿಗಳಂತಿಲ್ಲ. ಪಟ್ಟಣದ ಯಾಂತ್ರಿಕ, ನಾಜೂಕಿನ ಜೀವನ ಶೈಲಿ ಹಳ್ಳಿಗಳನ್ನೂ ಆವರಿಸಿ, ಆಧುನಿಕ ಜೀವನ ಶೈಲಿಯತ್ತ ಬದಲಾಯಿಸಿಬಿಟ್ಟಿದೆ. ಈಗಿನ ಹಳ್ಳಿಗರು ಹೆಚ್ಚಾಗಿ ಪಟ್ಟಣದ ಜೀವನ ಸ್ಥಿತಿಯನ್ನು ಅನುಸರಿಸುತ್ತಿದ್ದಾರೆ. ಜನರಲ್ಲಿ ಒಗ್ಗಟ್ಟಿಲ್ಲ, ತಮ್ಮ ಪಾಡಿಗೆ ತಾವು ಎಂಬಂತೆ ಇರಲಿಚ್ಚಿಸುತ್ತಾರೆ. ದ್ವೇಷ-ಕಲಹವಂತೂ ತುಂಬಿತುಳುಕಾಡುತ್ತಿದೆ. ಅದರಲ್ಲೂ ನಮ್ಮ ರಾಜಕೀಯತೆ ಹಳ್ಳಿಗಳನ್ನೂ ಆವರಿಸಿ, ಅಣ್ಣ-ತಮ್ಮ, ತಂದೆ-ಮಗ, ಬಂಧು-ಬಳಗ ಎಂಬ ರಕ್ತಸಂಬಂಧವನ್ನೇ ಕಿತ್ತು ಗುಂಪು-ಗುಂಪುಗಳನ್ನು ಸೃಷ್ಟಿಸಿ, ಕಲಹವನ್ನು ಹುಟ್ಟುಹಾಕುತ್ತಿದೆ. ಚುನಾವಣೆಯ ಸಮಯ ಬಂತೆಂದರೆ ಹಳ್ಳಿಗರು ತಮ್ಮ ಕೆಲಸವನ್ನೂ ಬಿಟ್ಟು ಯಾರನ್ನೋ ಗೆಲ್ಲಿಸಲು ಅಥವಾ ಮತ್ತ್ಯಾರನ್ನೋ ಸೋಲಿಸಲು ಒಡಲಲ್ಲಿ ಹಗೆತನ ತುಂಬಿಕೊಂಡು ಓಡಾಡುತ್ತಾರೆ.

ಮತ್ತೊಂದು ಕಡೆ ಗಮನಿಸಿದರೆ, ದೂರದರ್ಶನದಂತಹ ಮನರಂಜನಾ ಉಪಕರಣಗಳು ಇಂದು ಹಳ್ಳಿಯ ಮನೆ-ಮನೆಗಳಲೆಲ್ಲಾ ತುಂಬಿಹೋಗಿವೆ. ಅಲ್ಲದೆ, ಖಾಸಗಿ ಚಾನೆಲ್‌ಗಳ ಹಾವಳಿ ಹಳ್ಳಿಗಳನ್ನೂ ಆವರಿಸಿ, ಹಳ್ಳಿಗರನ್ನು ಸೋಮಾರಿಗಳನ್ನಾಗಿಸಿಬಿಟ್ಟಿವೆ ಎಂಬುದು ಇನ್ನೊಂದು ಗಮನಾರ್ಹ ಸಂಗತಿ. ಅತಿಶಯವೆಂದರೆ, ಇಂದು ಹಳ್ಳಿಗರು ಹೆಚ್ಚು ಹೊತ್ತು ದೂರದರ್ಶನದ ಮುಂದೆ ಕುಳಿತು ತಮ್ಮ ಅತ್ಯಮೂಲ್ಯ ಸಮಯವನ್ನು (ನಾಡಿಗೇ ಅನ್ನಹಾಕುವ ಕೃಷಿ ಕಾಯಕದ ಸಮಯ) ಹಾಳುಗೆಡವುತ್ತಿದ್ದಾರೆ. ನೈಜವಾಗಿ ನೋಡಿದರೆ, ಇದರಿಂದ ಹಳ್ಳಿಗರು ಸೋಮಾರಿಗಳೂ ಸಹ ಆಗಿದ್ದಾರಲ್ಲದೆ ಅಲ್ಲಿನ ಯುವ ಪೀಳಿಗೆ ಈ ವ್ಯವಸ್ಥೆಯಿಂದ ಸಾಕಷ್ಟು ದುಚ್ಚಟಕ್ಕೊಳಗಾಗುತ್ತಿದ್ದಾರೆ. ಸಿನಿಮಾ-ಧಾರಾವಾಹಿಗಳಲ್ಲಿ ಇರುವಂತೆ ತಾವೂ ಇರಬೇಕೆಂಬ ಬಯಕೆಯಿಂದ ತಾವು ಕಷ್ಟಪಟ್ಟು ದುಡಿಯುವ ಹಣವನ್ನು ಪಟ್ಟಣಗಳಿಗೆ ಹೋಗಿ ಅಲ್ಲಿ ಐಷಾರಾಮಿತನ ಮಾಡಿ ಬರುವುದರ ಮೂಲಕ ಪೋಲುಮಾಡುತ್ತಿದ್ದಾರೆ.

ನಮ್ಮ ದೇಶ ಪುರಾತನ ಕಾಲದಿಂದಲೂ ಕಲೆ, ಸಂಸ್ಕೃತಿಯ ತವರೂರು. ಇದು ಹುಟ್ಟಿರುವುದು ಹಳ್ಳಿಗಳಿಂದಲೇ ಎಂದರೂ ತಪ್ಪಾಗಲಾರದು. ಇಂತಹ ಚಟುವಟಿಕೆಗಳು ಹೆಚ್ಚಾಗಿ ಪ್ರದರ್ಶನಗೊಳ್ಳುವುದು ಹಬ್ಬ-ಜಾತ್ರೆಗಳಲ್ಲಿ. ತಲೆ-ತಲಾಂತರದಿಂದಲೂ ಆಚರಿಸಿಕೊಂಡು ಬಂದ ಹಬ್ಬ-ಜಾತ್ರೆಗಳು ಇಂದು ಹಳ್ಳಿಗಳಲ್ಲಿನ ಕೋಮುಗಲಭೆಗಳಿಂದ ನಿಂತುಹೋಗಿ ನಮ್ಮ ಸಂಸ್ಕೃತಿಯನ್ನು ನಾವೇ ತಿರಸ್ಕಾರ ಮಾಡುತ್ತಿರುವ ಒಂದು ದುರಾಚಾರದ ನಡವಳಿಕೆ ಇಂದಿನ ಹಳ್ಳಿಗರಲ್ಲಿ ಕಂಡು ಬರುತ್ತಿದೆ. ಹೀಗಾದರೆ ನಮ್ಮ ಕಲೆ-ಸಂಸ್ಕೃತಿ ಮುಂದಿನ ಪೀಳಿಗೆಗೆ ಉಳಿಯುವುದುಂಟೇ?

ಮನಸ್ಸಿಗೆ ನೋವುಂಟುಮಾಡುವ ಮತ್ತೊಂದು ಸಂಗತಿಯೆಂದರೆ, ನಮ್ಮ ಇಂದಿನ ಹಳ್ಳಿಯ ಯುವಕರು ಬೇರೆ ಬೇರೆ ಕೆಲಸ ಹರಸಿ ಪಟ್ಟಣಗಳಿಗೆ ವಲಸೆಹೋಗುತ್ತಿದ್ದಾರೆ. ಅಲ್ಲದೆ, ಇಂದಿನ ಪೀಳಿಗೆಯ ಹಳ್ಳಿಗರಿಗೆ ಕೃಷಿಯ ಯಾವೊಂದೂ ಗುಟ್ಟು ಸರಿಯಾಗಿ ತಿಳಿದಿಲ್ಲ. ಹಿಂದಿನವರು ಇಂತಹುದರಲ್ಲಿ ಎಷ್ಟು ಪರಿಣತರಾಗಿದ್ದರೆಂದರೆ; ಯಾವೊಂದೂ ರಾಸಾಯನಿಕ ಗೊಬ್ಬರವಿಲ್ಲದೆ, ಕೀಟನಾಶಕವಿಲ್ಲದೆ, ಸರಿಯಾದ ನೀರಾವರಿ ವ್ಯವಸ್ಥೆಯಿಲ್ಲದೆ, ಮಳೆಯನ್ನೇ ಅವಲಂಭಿಸಿ ಒಳ್ಳೆಯ ಇಳುವರಿ ಪಡೆಯುತ್ತಿದ್ದರು. ಇದರ ಜೊತೆಗೆ ವಾತಾವರಣದ ಬದಲಾವಣೆಯನ್ನು ಕಣ್ಣಲ್ಲೇ ನೋಡಿ ಹೀಗೇ ಆಗುತ್ತದೆ ಎಂದು ಹೇಳಿಬಿಡುತ್ತಿದ್ದರು. ಉದಾಹರಣೆಗೆ : ಕತ್ತೆತ್ತಿ ಆಕಾಶ ನೋಡಿ ಇಷ್ಟೇ ವೇಳೆಯಾಗಿದೆ ಎಂದು ಹೇಳುತ್ತಿದ್ದರು. ಹಾಗೇ ಮೋಡ ನೋಡಿ ಇಷ್ಟೇ ಮಳೆಯಾಗುತ್ತದೆ, ಇಂತಹ ಸ್ಥಳದಲ್ಲೇ ಮಳೆಯಾಗುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಅಲ್ಲದೆ, ಯಾವ ಯಾವ ಕಾಲಕ್ಕೆ ಯಾವ ಹೆಸರಿನ ಮಳೆ ಶುರುವಾಗುತ್ತದೆ ಎಂಬುದನ್ನು ಬಾಯಿಪಾಠ ಮಾಡಿಕೊಂಡಿದ್ದರು. ಇದರ ಜೊತೆಗೆ ಅವರು ಒಗಟು, ಗಾದೆಗಳು, ಶಾಯಿರಿಗಳು ಇವುಗಳನ್ನೆಲ್ಲಾ ಪಟಪಟನೆ ಹೇಳುತ್ತಿದ್ದರು. ಹೀಗೆ, ಅವರ ಪರಿಣಿತಿಯ ಬಗ್ಗೆ ವಿವರಿಸುತ್ತಾ ಹೋದರೆ ಕೊನೆಯೇ ಇಲ್ಲ ಎಂದರೆ ಅತಿಶಯವಾಗಲಾರದು.

ಇದನ್ನೆಲ್ಲಾ ಗಮನಿಸಿದರೆ, ನಮ್ಮ ಇಂದಿನ ಹಳ್ಳಿಯ ಯುವಪೀಳಿಗೆ ಇದಾವುದನ್ನೂ ತಿಳಿದುಕೊಳ್ಳದೆ ತಮ್ಮ ಪುರಾತನ ಬಳವಳಿಯನ್ನು ಹೇಳಹೆಸರಿಲ್ಲದಂತೆ ಮಾಡ ಹೊರಟಿದೆ. ಇದರಿಂದಲೇ ನಮ್ಮ ಇಂದಿನ ಹಳ್ಳಿಗಳು ತಮ್ಮ ಸೊಗಡನ್ನೇ ಕಳೆದುಕೊಳ್ಳುತ್ತಿವೆ. ಹೆಸರಿಗಷ್ಟೇ ಹಳ್ಳಿ ಎನ್ನಿಸಿಕೊಂಡು ಜೀವನ ಶೈಲಿಯೆಲ್ಲಾ ಬದಲಾಯಿಸಿಕೊಂಡಿದೆ. ಇದು ನಮ್ಮ ಹಳ್ಳಿಗಳಿಗೆ, ಹಳ್ಳಿಗರಿಗೆ ಶೋಭೆತರುವಂಥದ್ದಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gandhijis basic concept is rural development in India. A.M.Mahesh, Bangalore, analyses about Indian Village Situation on Before and After Independence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more