ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪುರ ವಿವಾದ: ಸಿದ್ಧು, ವಿಶ್ವನಾಥ್‌ಗೊಂದು ಪತ್ರ...

By Super
|
Google Oneindia Kannada News

ಮಾನ್ಯ ಉಪಮುಖ್ಯ ಮಂತ್ರಿ ಸಿದ್ಧರಾಮಯ್ಯನವರಿಗೆ, ಮತ್ತು ಮಾಜಿ ಮಂತ್ರಿವಿಶ್ವನಾಥ ಅವರಿಗೆ,

ಸ್ವಾಮೀ,
ಕನಕ ಗೊಪುರದ ಬಗ್ಗೆ ನಿಮ್ಮಿಬ್ಬರ ಕೂಗಾಟ ಓದಿ ನನಗೆ ಮಂಕುತಿಮ್ಮನ ಕಗ್ಗದ ನಾಲ್ಕು ಸಾಲು ಜ್ಞಾಪಕಕ್ಕೆ ಬರುತ್ತಿದೆ.

ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ।
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ।।
ಉದ್ಧರಿಸುವೆನು ಜಗವನೆನ್ನುತಿಹೆ ಸಖನೆ, ನಿ- ।
ನ್ನುದ್ಧಾರವೆಷ್ಟಾಯ್ತೋ?- ಮಂಕುತಿಮ್ಮ. (658)

ನಮ್ಮ ಘನ ಸರ್ಕಾರದ ಮುಜರಾಯ್‌ ಇಲಾಖೆಗೆ ಸೇರಿದ ದೇವಸ್ಥಾನಗಳ ಗತಿ ಎನಾಗಿದೆ ಎಂಬುದು ನಿಮಗೆ ತಿಳಿದಿದೆಯೇ? ಇನ್ನಷ್ಟು ದೇವಸ್ಥಾನಗಳನ್ನು ಹಾಳು ಮಾಡುವುದು ನಿಮ್ಮ ಇಚ್ಛೆಯೇ? ನನ್ನ ಕಹಿ ಅನುಭವವನ್ನು ಹೇಳುತ್ತೇನೆ ಕೇಳಿ. ನನ್ನಂತೆ ನೊಂದವರು ತಮ್ಮ ನೋವನ್ನು ನಿಮಗೆ ತಿಳಿಸಲು ಬರೆಯಲೆಂಬ ಒಂದೇ ಆಸೆಯಿಂದ ನನ್ನ ಮಿತ್ರರ ಅಭಿಪ್ರಾಯ ಪಡೆದು ಈ ಪತ್ರ ಬರೆಯುತ್ತಿದ್ದೇನೆ.

ನಮ್ಮೂರು ಹಳೇಬೀಡು. ಅಲ್ಲಿ ಮುಜರಾಯಿಗೆ ಸೇರಿದ, ಹೊಯ್ಸಳರ ಕಾಲದ ರುದ್ರ(ವೀರಭದ್ರ)ದೇವರ ದೇವಸ್ಥಾನವಿದೆ. ಆದು ನಮ್ಮ ಮನೆ-ದೇವರ ದೇವಸ್ಥಾನ. ಬಹಳ ವರ್ಷಗಳಿಂದ ಹೇಳುವರು-ಕೇಳುವರಿಲ್ಲದೆ ಜಗತ್ಪ್ರಸಿದ್ಧ ಹೊಯ್ಸಳೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದರೂ, ಅದು ಬಿದ್ದು ಹೋಗುವ ಸ್ಥಿತಿಯಲ್ಲಿತ್ತು. ಬಹುಭಾಗ ಬಿದ್ದುಹೋದ ಕಾಂಪೌಂಡಿನ ಒಳಗೆಲ್ಲಾ ಗಿಡ-ಗೆಂಡೆ ಬೆಳೆದಿತ್ತು. ಊರಿನವರಿಗೆ ರಿಪೇರಿ ಮಾಡಿಸಲಾಗದೆ, ವಹಿಸಿಕೊಂಡಮೇಲೆ ಸರ್ಕಾರವೇ ಮಾಡಿಸುತ್ತದೆಂದು ನಂಬಿದ್ದರಿಂದ ಬಹಳ ಹೀನಾಯ ಸ್ಥಿತಿಯಲ್ಲಿತ್ತು.

ದೇವರಾಜ ಅರಸರ ಕಾಲದಲ್ಲಿ ಸರ್ಕಾರ ಆ ದೇವಸ್ಥಾನಕ್ಕೆ ಸೇರಿದ ಜಮೀನನ್ನು ಕಿತ್ತುಕೊಂಡಿತು 'ಉಳುವವನಿಗೇ ಜಮೀನು' ಎಂದು. ದೇವಸ್ಥಾನದ ವರಮಾನ ಹೋಯ್ತು. ಸರ್ಕಾರ ಪೂಜಾರಿಗೆ ಸಂಬಳ ಕೊಡುವುದಾಗಿ ಹೇಳಿತು. ಅವನಿಗೆ ಸಂಬಳ ಎಷ್ಟು ಎಂದು ತಾಲೂಕು ಅಫೀಸಿನಲ್ಲಿ ವಿಚಾರಿಸಿದೆ. ವರ್ಷಕ್ಕೆ 300 ರೂ ಎಂದು ತಿಳಿಯಿತು. ಹಾಗಿರುವಾಗ ಪೂಜಾರಿ ಏನು ಮಾಡಿಯಾನು? ಸಮಯಕ್ಕೆ ಸರಿಯಾಗಿ ನಿತ್ಯವೂ ಪೂಜೆಯೂ ನಡೆಯುತ್ತಿಲ್ಲವೆಂದು ತಿಳಿಯಿತು. ಆ ದೇವಸ್ಥಾನದ ದುರವಸ್ಥೆ ಬಗ್ಗೆ ಪೂಜಾರಿಯನ್ನು ಮಾತನಾಡಿಸಿ ಪ್ರಯೋಜನವಿಲ್ಲ ಎನ್ನಿಸಿತು. ಊರಿನ ಹಿರಿಯರು ಮತ್ತು ಕಿರಿಯರಾರೂ ಈಬಗ್ಗೆ ತಲೆಕೆಡಿಸಿಕೊಡಿಲ್ಲ ಎಂದು ತಿಳಿಯಿತು. ಯಾರಿಗೂ ಬೇಕಿಲ್ಲದ ಮತ್ತು ಹೇಳುವರು-ಕೇಳುವರಿಲ್ಲದ ದೇವಸ್ಥಾನದಲ್ಲಿ ಸರ್ಕಾರದ ನಿರ್ಲಕ್ಷದಿಂದ ಹಾಳು-ಹಾಳು ಸುರಿಯುತ್ತಿತ್ತು.

ನಾನು ಬೆಂಗಳೂರಿನ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಸರ್ಜರಿ ಪ್ರೊಫೆಸರ್‌ ಆಗಿದ್ದಾಗ ಹತ್ತಿರದಲ್ಲೇ ಇದ್ದ ಮುಜರಾಯಿ ಅಫೀಸಿಗೆ ಹೋಗಿ ಮೇಲಿನ ಅಧಿಕಾರಿಗಳನ್ನ ಅನೇಕ ಸಾರಿ ಕಂಡೆ. ಅವರಿಂದ ಬಂದ ಪ್ರಶ್ನೆ ಏನು ಗೊತ್ತಾ ? 'ನೀವು ಹರಿಜನರಾ ?'

'ಅಲ್ಲ' ಅಂದೆ.

'ಹಾಗಿದ್ದರೆ ಇಲ್ಲಿಗೇಕೆ ಬಂದಿರಿ? ನಾವು ಕೊಡುವ ಹತ್ತು-ಹದಿನೈದು ಸಾವಿರವನ್ನು ನೀವು ಹೇಗೋ ಕಲೆಕ್ಟ್‌ ಮಾಡಬಹುದು. ನಮ್ಮಿಂದ ಆ ಹಣ ಪಡೆಯಲು ನೀವು ಬೇಲೂರು, ಹಾಸನ ಎಲ್ಲಾ ಕಡೆ ಅನೇಕ ಬಾರಿ ಸುತ್ತಾಡಿ ರಿಕಾರ್ಡ್‌ ಇಲ್ಲಿಗೆ ಬರುವಂತೆ ಮಾಡಬೇಕು. ಅದು ನಿಮ್ಮ ಕೈಲಾಗೊಲ್ಲ ಹೋಗಿ' ಅಂದರು. (ಮಾಜಿ ಮುಖ್ಯ ಮಂತ್ರಿಗಳಾದ ಬಂಗಾರಪ್ಪ-ವೀರಪ್ಪಮೊಯ್ಲಿಯವರ ಕಾಲದಲ್ಲಿ ಆರಾಧನಾ ಯೋಜನೆಯಡಿ ಹರಿಜನರಿಗೆ ಮಾತ್ರ ದೇವಸ್ಥಾನ ಕಟ್ಟಿಕೊಳ್ಳಲು ಹಣ ಕೊಡುತ್ತಿದ್ದರೆಂದು ನಂತರ ತಿಳಿಯಿತು).

ಹಳೇಬೀಡಿನ ಆ ದೇವಸ್ಥಾನಕ್ಕೆ ಸಂಬಂದಪಟ್ಟ ನಮ್ಮವರೂ ತಮ್ಮ ಮನೆ-ಕೆಲಸ ಬಿಟ್ಟು ದೇವಸ್ಥಾನದ ಈ ಕೆಲಸಕ್ಕಾಗಿ ಬೇಲೂರು-ಹಾಸನ ಸುತ್ತಾಡೋಕಾಗಲ್ಲ ಅಂದರು. ಪಾಪ ಅವರಲ್ಲನೇಕರಿಗೆ ಬಹಳ ವರ್ಷ ಬರಗಾಲ ಬಿಡದೆ ಕಾಡಿದ್ದರಿಂದ ಜೀವನವನ್ನ ಮಾಡುವುದೇ ಕಷ್ಟವಾಗಿತ್ತು. 'ನಮ್ಮದು 20-30 ವರ್ಷದಿಂದ ಕಾಯ್ದಿರಿಸಿದ ಕ್ಷೇತ್ರ. ನಮ್ಮ ಮಾತನ್ನ ನಮ್ಮ ಎಮ್‌.ಎಲ್‌.ಎ.ಗಳೂ ಕೇಳುತ್ತಿಲ್ಲ' ಅಂದರು. ನಾನೂ ನಮ್ಮೂರ ಎಮ್‌.ಎಲ್‌.ಎ. ಅವರನ್ನು ಎರಡು ಬಾರಿ ಕಂಡೆ ಶಾಸಕರ ಭವನದಲ್ಲಿ. ಪ್ರಯೋಜನವೇನೂ ಆಗಲಿಲ್ಲ.

ನಂತರ ಧರ್ಮಸ್ಥಳದ ಹೆಗ್ಗಡೆಯವರು ಬಹಳ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಿದ್ದಾರೆಂದು ತಿಳಿದು ಅದಕ್ಕೆ ಸಂಬಂಧಪಟ್ಟವರ ಹತ್ತಿರ ಹೋದೆ. ರಿಪೇರಿಗೆ ಬೇಕಾಗುವ ಹಣದಲ್ಲಿ ಅರ್ಧ ಹಣವನ್ನು ಮುಂಚೆಯೇ ಕಟ್ಟಿದರೆ ಜೀರ್ಣೋದ್ಧಾರದ ಕೆಲಸ ಮಾಡುತ್ತೇವೆ ಅಂದರು. ಅದು ಆ ಊರಿನ ಜನಕ್ಕೆ ಸಾಧ್ಯವಾಗದ ಮಾತು.

ಅಷ್ಟರಲ್ಲಿ ಆ ಊರಿನ ಯುವಕರಿಗೆ ಏನಾಯಿತೋ! ಸ್ವಲ್ಪ-ಸ್ವಲ್ಪ ಹಣ ಸೇರಿಸುತ್ತಾ ಸ್ವಲ್ಪ-ಸ್ವಲ್ಪವಾಗಿ ಕೆಲಸ ಶುರುಮಾಡಿದರು. ಆಗ ನಮ್ಮಣ್ಣ ಸ್ಥಾಪಿಸಿದ್ದ ಟ್ರಸ್ಟ್‌ ನಿಂದ 20,000 ರೂ ಗಳನ್ನು ಕೊಟ್ಟೆವು. ನಾಲ್ಕು ವರ್ಷಗಳಲ್ಲಿ ಬಹಳ ಕೆಲಸ ಮಾಡಿದ್ದಾರೆ ನಮ್ಮೂರ ಯುವಕರು. ಇನ್ನೂ ಬೇಕಾದಷ್ಟು ಮಾಡುವುದಿದೆ. ಏನೂ ಸಹಾಯ ಮಾಡದ ರಾಜಕೀಯ ವ್ಯಕ್ತಿಗಳನ್ನೇ ಕರೆದು ಮೊನ್ನೆ-ಮೊನ್ನೆ ಒಂದು ದೇವರ ಪೂಜಾ ಸಮಾರಂಭ ಇಟ್ಟುಕೊಂಡಿದ್ದರು.

ಈಗ ಹೇಳಿ, ವಹಿಸಿಕೊಂಡ ಮೇಲೆ ಏಕೆ ಸರ್ಕಾರ ಆಕಡೆ ನೋಡುತ್ತಿಲ್ಲ? ಇಂತಹ ಸರ್ಕಾರಗಳಿಂದ ದೇವಸ್ಥಾನಗಳ ಕೆಲಸ-ಕಾರ್ಯ /ಜೀರ್ಣೋದ್ಧಾರ ಸಾಧ್ಯವೇ? ದೇವಸ್ಥಾನಗಳ ಹಣ ಸರ್ಕಾರದ ಖಜಾನೆ ಸೇರಿ ಕೊಳೆಯುತ್ತಿದೆ, ದೇವಸ್ಥಾನಗಳು ಪೂಜೆ-ಪುನಸ್ಕಾರ, ಸುಣ್ಣ-ಬಣ್ಣ ಮತ್ತು ವಾರ್ಷಿಕ ರಿಪೇರಿ ಇಲ್ಲದೆ ಹಾಳಾಗುತ್ತಿವೆ.

ಮುಜರಾಯಿ ಇಲಾಖೆಯಲ್ಲಿ ಬಹಳ ಹಣ ಇದೆಯಂತೆ. ದೇವರೇ ಬಂದು 'ತನ್ನ ಮನೆಯ' (ದೇವಾಲಯ ಅಲ್ಲವೆ?) ಕೆಲಸ ಮಾಡಿಸಿಕೊಳ್ಳಬೇಕಂತೆ. ಒಮ್ಮೆ ಸ್ವಾಮಿ ಚಿನ್ಮಯಾನಂದ ಅವರು ನ್ಯಾಶನಲ್‌ ಕಾಲೇಜು ಮೈದಾನದಲ್ಲಿ ಹೇಳಿದರು. 'ದೇವಸ್ಥಾನಗಳನ್ನು ಸರ್ಕಾರ ವಹಿಸಿಕೊಂಡಿದ್ದು ತಪ್ಪು. ಬಹುತೇಕ ದೇವಸ್ಥಾನಗಳು ಹಾಳಾಗಿವೆ. ಏನಾದರೂ ಮಾಡಬೇಕು, ಹೋರಾಡಬೇಕು' ಎಂದು. ಅವರು ಹೇಳಿದ್ದನ್ನು ನಾನೂ ಕೇಳಿಸಿಕೊಂಡು ಅಲ್ಲಿ ನೆರೆದಿದ್ದವರಂತೆ ನಾನೂ ಚಪ್ಪಾಳೆ ಹೊಡೆದೆ. ಅವರ ಕೊರಗು ಸಂಬಂಧಪಟ್ಟವರ ಕಿವಿಯಮೇಲೆ ಬೀಳಲೇ ಇಲ್ಲ. 'ರಾಜಾ ಪ್ರತ್ಯಕ್ಶ ದೇವತಾ' ಅಲ್ಲವೆ? ಈ ದೇವರುಗಳ ಮುಂದೆ ಆ ದೇವರುಗಳದ್ದೇನೂ ನಡೆಯುವುದಿಲ್ಲ ಅಲ್ಲವೆ?

ಈಗ ಉಡುಪಿ ದೇವಸ್ಥಾನವನ್ನು ಸರ್ಕಾರ ವಹಿಸಿಕೊಂಡರೆ ಏನಾಗಬಹುದು ನೀವೇ ಯೋಚಿಸಿ. ನಮ್ಮೂರ ದೇವಸ್ಥಾನದಷ್ಟು ಹಾಳಾಗುವುದಿಲ್ಲ. ಏಕೆಂದರೆ ಅಲ್ಲಿಯ ಜನ ಹೋರಾಟಗಾರರು. ಆ ದೇವಸ್ಥಾನಕ್ಕೆ ಹೆಚ್ಚು ವರಮಾನವಿದೆ. ಅದಕ್ಕೇ ಎಲ್ಲರಿಗೂ ಅದರಮೇಲೆ ಕಣ್ಣು.

ಯಾವುದಾದರೊಂದು ಸಂಘ-ಸಂಸ್ಥೆ, ಸರ್ಕಾರ ವಹಿಸಿಕೊಂಡ ನಂತರ ಉದ್ಧಾರವಾಗಿದೆಯೇ? ಇಲ್ಲಿ ರಾಜಕೀಯ ಮತ್ತು ಸರ್ಕಾರೀಕರಣದಿಂದ ಇರುವುದೂ ಹಾಳಾಗುತ್ತದೆ. ಹಾಳಾಗಲಿಕ್ಕೆ ಬಿಡಬಾರದು.

ಸ್ವಾಮಿ ಸಿದ್ದರಾಮಯ್ಯನವರೆ, ಈಗ ಪ್ರಂಚದಲ್ಲೆಲ್ಲಾ ಎಲ್ಲವನ್ನೂ 'ಪ್ರೈವಟೈಸ್‌ ಮಾಡಿ' ಎನ್ನುತ್ತಿರುವ ಕಾಲದಲ್ಲಿ ನೀವು ಉಡುಪಿ ದೇಗುಲವನ್ನು ಮುಜರಾಯಿ ಇಲಾಖೆ ವಹಿಸಿಕೊಳ್ಳುತ್ತದೆಂದು ('ನ್ಯಾಶನಲೈಸ್‌' ಮಾಡುತ್ತೇವೆಂದು) ಹೇಳುತ್ತಿರುವುದು ತಪ್ಪಲ್ಲವೆ? ಇದ್ದುದನ್ನೂ ಹಾಳುಮಾಡಲಿಕ್ಕೆ ಹೊರಟಿದ್ದೀರಿ. ಇದು ಸರಿಯೆ?

'ಬೆಸ್ಟ್‌ ಗೌರ್ನಮೆಂಟ್‌ ಈಸ್‌ ದ ಒನ್‌ ದಟ್‌ ಗವರ್ನ್ಸ್‌ ಲೀಸ್ಟ್‌' (ಅಂದರೆ ಜನರ ವ್ಯವಹಾರದಲ್ಲಿ ಕಡಮೆ ಕೈಹಾಕುವ, ಹೆಚ್ಚು ಮೂಗು ತೂರಿಸದ ಸರ್ಕಾರವೇ ಉತ್ತಮ ಸರ್ಕಾರ) ಎಂದು ಹೇಳುತ್ತಾರೆ. ರಾಜಕೀಯ ಮಾಡುವ ಹಣದಾಸೆಯ ರಾಜಕಾರಣಿಗಳಿಗೆ ಇದು ತಿಳಿಯುವುದೆಂದು?

ಇಂದಿನ ಸ್ಥಿತಿಯಲ್ಲಿ ನಮ್ಮನ್ನೆಲ್ಲ ಆ ದೇವರೇ ಕಾಪಾಡಬೇಕು. ಅದು ಅವನ ಕೈಯಲ್ಲೂ ಇಂದಿನ ಸ್ಥಿತಿಯಲ್ಲಿ ಆಗುವುದಿಲ್ಲ ಎಂದು ನನ್ನ ಭಾವನೆ. 'ಅಳಿಸುವುದು -ಉಳಿಸುವುದು' ನಿಮ್ಮಿಂದ ಸಾಧ್ಯ ಸ್ವಾಮಿ, ಒಳ್ಳೆಯ ಕೆಲಸ ಮಾಡಿ ಎಂದು ಪ್ರಾರ್ಥಿಸುವೆ.

English summary
Best govt is the one that governs least. Udupi Kanaka Gopura dispute: An open letter to Deputy Chief Minister Siddaramaiah and Former minister H Vishwanath by Halebid Swamy, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X