ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಿನಾದ್ಯಂತ ಸಡಗರದ ವಿಜಯದಶಮಿ...

By Staff
|
Google Oneindia Kannada News

* ದಟ್ಸ್‌ ಕನ್ನಡ ಪ್ರತಿನಿಧಿ

ನಾಡಹಬ್ಬ ದಸರಾ ಆಚರಣೆಗೆ ರಂಗೇರಿದೆ... ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳು ತುಂಬಿ ತುಳುಕುತ್ತಿವೆ. ಕೊಳ್ಳುವವರ ದಟ್ಟಣೆ ಅಪಾರ. ಈ ಮಧ್ಯೆ ಬಿಡದ ತುಂತುರು ಮಳೆ... ಆಗಾಗ ಧೋ... ಎಂದು ಸುರಿವ ಭರ್ಜರಿ ಮಳೆ. ಮಳೆಯು ಹಬ್ಬದ ಸಡಗರಕ್ಕೆ ಅಂದದ ಸಿಂಚನ ಮಾಡುತ್ತಿದೆಯೇನೋ ಎಂಬ ಭಾಸ ಎಲ್ಲೆಡೆ.

ಪ್ರಾಚೀನ ಕಾಲದಲ್ಲಿ ಹಿಂದೂ ಧಾರ್ಮಿಕ ಹಬ್ಬವಾಗಿ ಆರಂಭವಾದ ದಸರಾ, ಕಾಲಕ್ರಮೇಣ ನಾಡಹಬ್ಬವಾಗಿ-ಸರ್ವಜನಾಂಗದ ಉತ್ಸವವಾಗಿ ಮಾರ್ಪಟ್ಟದ್ದು ಐತಿಹಾಸಿಕ ದಾಖಲೆ.

ದಸರಾ ದೇಶಾದ್ಯಂತ ಆಚರಿಸಲ್ಪಡುವ ಹಬ್ಬವಾದರೂ, ವಿಶೇಷವಾಗಿ ಕರ್ನಾಟಕದಲ್ಲಿ, ಅದರಲ್ಲೂ ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬ ಜಗದ್ವಿಖ್ಯಾತ. ಪಶ್ಚಿಮ ಬಂಗಾಳದಲ್ಲಿ, ವಿಶೇಷವಾಗಿ ಕೋಲ್ಕತಾದಲ್ಲಿ ಈ ಹಬ್ಬವನ್ನು ದುರ್ಗಾ ಪೂಜೆ ಎಂದು ಆಚರಿಸಲಾಗುತ್ತದೆ.

ಇದು ಮೂಲತಃ ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯು ವಿಜಯ ಸಾರುವ ಸಾಂಕೇತಿಕ ಆಚರಣೆ. ದುರ್ಗಾ ಮಾತೆ(ಬನ್ನಿ ಮಹಾಂಕಾಳಿ)ಯು ರಾಕ್ಷಸ ಮಹಿಷಾಸುರನನ್ನು ವಧಿಸಿದ ದಿನ ಎಂಬುದು ಪೌರಾಣಿಕ ವಿವರಣೆ. ರಾಮ ರಾವಣನನ್ನು ಸಂಹರಿಸಿದ ದಿನವೆಂದೂ ಈ ಹಬ್ಬ ಜನಜನಿತ.

ಮಹಾಲಯ ಅಮಾವಾಸ್ಯೆಯ ಮರುದಿನದಿಂದ ಘಟಸ್ಥಾಪನೆ ಆರಂಭವಾಗುತ್ತದೆ. ಅಂದು ರಾತ್ರಿಯಿಂದ ಹಚ್ಚವ ದೀಪ ಒಂಭತ್ತು ರಾತ್ರಿಗಳವರೆಗೆ ನಂದ(ಆರದಂತೆ)ದಂತೆ ಕಾಯುವುದು ನಿಯಮ. ನವರಾತ್ರಿಯ ಕಡೆಯ ದಿನದಂದು ಆಯುಧ ಪೂಜೆ, ಆಯುಧ ಪೂಜೆಯ ಮರುದಿನವೇ ಮಹಾನವಮಿ ಅಥವಾ ವಿಜಯ ದಶಮಿ. ಈ ಇಡೀ ಆಚರಣೆಯನ್ನೇ ದಸರಾ ಎಂದು ಕರೆಯಲಾಗುತ್ತದೆ.

ಮೈಸೂರು ದಸರಾ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡದ್ದು. ಮಾತ್ರವಲ್ಲ ತಿಂಗಳು ಪೂರ್ತಿ ನಡೆಯುವ ದೀರ್ಘವಾದ-ವೈಭವೋಪೇತವಾದ ಉತ್ಸವ ಎಂಬುದು ಗಮನಾರ್ಹ. ಮೈಸೂರು ಅರಸು ಮನೆತನದವರಿಂದ ಈ ಹಬ್ಬದ ಆಚರಣೆಗೆ ಉತ್ಕರ್ಷ ದೊರೆತಿದೆ. ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು-ಕ್ರೀಡೆಗಳು ನಡೆಯುವುದು ಒಂದೆಡೆಯಾದರೆ, ದಸರಾ ವಸ್ತು ಪ್ರದರ್ಶನ ಮತ್ತು ಮಾರಾಟ ಮತ್ತೊಂದೆಡೆ. ದಸರಾ ಗೊಂಬೆ(ಬೊಂಬೆ)ಗಳ ಉತ್ಸವ, ಜಂಬೂಸವಾರಿ, ದಸರಾ ದರ್ಬಾರು... ಇನ್ನೂ ಹತ್ತು ಹಲವು ಕಾರ್ಯಕ್ರಮಗಳು ನೆರೆದವರನ್ನು ರಂಜಿಸದೇ ಬಿಡವು. ಈ ಕಾರಣದಿಂದಲೇ ಮೈಸೂರು ದಸರಾ ಜಗತ್ತಿನೆಲ್ಲೆಡೆಯಿಂದ ಜನರನ್ನು ಸೆಳೆಯುತ್ತದೆ. ದೂರದರ್ಶನದಲ್ಲಿ ಪ್ರತಿ ವರ್ಷವೂ ಮೈಸೂರು ದಸರಾವನ್ನು ನೇರಪ್ರಸಾರ ಮಾಡಲಾಗುತ್ತದೆ. ದೂರದಲ್ಲಿರುವವರು ಈ ದೃಶ್ಯವೈಭವವನ್ನು ಸವಿಯಬಹುದು.

ರಾಜ್ಯದ ಉತ್ತರ ಭಾಗದಲ್ಲಿ ಈ ಹಬ್ಬದ ಆಚರಣೆ ವಿಶಿಷ್ಟವಾಗಿ ನಡೆಯುತ್ತದೆ. ಮಹಾಲಯ ಅಮಾವಾಸ್ಯೆಯ ಮರುದಿನದಿಂದ ಆರಂಭವಾಗುವ ನವರಾತ್ರಿ ಮಹೋತ್ಸವದಿಂದ ದಸರೆ ಅಧಿಕೃತವಾಗಿ ಪ್ರಾರಂಭವಾಗುತ್ತದೆ. ನವರಾತ್ರಿ ಕಡೆಯ ದಿನದಂದು ಅದ್ಧೂರಿಯಾಗಿ ದುರ್ಗಾ ಪೂಜೆ ನೆರವೇರುತ್ತದೆ. ಅದನ್ನು ಖಂಡೆ ಪೂಜೆ ಎಂದು ಕರೆಯಲಾಗುತ್ತದೆ. ದುರ್ಗಾದೇವಿಗೆ ಕುಂಬಳಕಾಯಿ ಒಡೆದು ಪೂಜಿಸುವುದು ವಾಡಿಕೆ. ಈ ಮಧ್ಯೆ ಆಯುಧ ಪೂಜೆ, ಪಾಡ್ಯಗಳು ನಡೆಯುತ್ತವೆ. ಎಲ್ಲ ಜನರೂ ಮನೆಯಲ್ಲಿರುವ ಆಯುಧಗಳನ್ನು ಪೂಜಿಸುವುದು ಒಂದು ವೈಶಿಷ್ಟ್ಯವಾದರೆ, ರೈತರು ಕೃಷಿ ಉಪಕರಣಗಳನ್ನು ಪೂಜಿಸಿ-ರಾಸುಗಳಿಗೂ ಸ್ನಾನಮಾಡಿಸಿ ನೈವೇದ್ಯಗೈಯುವುದು ಇನ್ನೂ ವಿಶೇಷವಾದುದು.

ನವರಾತ್ರಿಯ ಮಾರನೇ ದಿನ ಬನ್ನಿ ಮುಡಿಯುವುದು ಅಪೂರ್ವ ಸಂಪ್ರದಾಯ. ಹಲವು ದಿನಗಳಿಂದ-ವರ್ಷಗಳಿಂದ, ಮನಸ್ತಾಪದಿಂದ-ವಿರಸದಿಂದ ಮಾತು ಬಿಟ್ಟು ದೂರವಾದವರು, ಆ ದಿನ ಎಲ್ಲ ಮರೆತು ಬನ್ನಿ(ಬನ್ನಿ ಬಂಗಾರ) ವಿನಿಮಯ ಮಾಡಿಕೊಳ್ಳುತ್ತಾರೆ. ಹೀಗೆ, ದಸರೆಯು ಜನರನ್ನು ಮತ್ತೆ ಸಮರಸದಿಂದ ಕೂಡಿ ಬಾಳಿಸುವ ಸೇತುವೆಯಾಗಿ ಕೆಲಸ ಮಾಡುತ್ತದೆ. ಬನ್ನಿ ಮುಡಿಯುವಲ್ಲಿ ಹಿರಿಯ-ಕಿರಿಯ ಎಂಬ ಭೇದವಿಲ್ಲ. ಅಂತೆಯೇ ಯಾವುದೇ ಜಾತಿ ಮತದ ಸೋಂಕೂ ಇಲ್ಲ. ಹಬ್ಬಗಳು ಮಾನವತೆಯ ಆಚರಣೆ ಎನಿಸಿಕೊಳ್ಳುವುದು ಈ ಕಾರಣಕ್ಕಾಗಿಯೇ.

ಎಲ್ಲ ಹಬ್ಬಗಳಂತೆ ಈ ಹಬ್ಬದಲ್ಲೂ ವಿಧವಿಧ ಭಕ್ಷ್ಯ ಭೋಜ್ಯಗಳಂತೂ ಇದ್ದೇ ಇರುತ್ತವೆ. ಜಗತ್ತಿನ ಮೂಲೆಮೂಲೆಗಳಲ್ಲಿ ವಾಸಿಸುತ್ತಿರುವ ಕುಟುಂಬದ ಸದಸ್ಯರು, ವರ್ಷಕ್ಕೊಮ್ಮೆ ಎಲ್ಲರೂ ಒಂದೆಡೆ ಸೇರಿ, ಭೋಜನ ಸವಿದು-ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆ ಮೂಲಕ ಕುಟುಂಬದ ಸಂಬಂಧ, ಸಮಾಜದ ಸಂಬಂಧ ಬಲಿಷ್ಠವಾಗಿ ಉಳಿಯಲು-ಮುಂದುವರಿಯಲು ದಾರಿಯಾಗುತ್ತದೆ ದಸರಾ.

ಎಲ್ಲ ಹಬ್ಬ ಹರಿದಿನಗಳ ಮೂಲೋದ್ದೇಶವೇ ಮನುಕುಲದ ಸಾಮರಸ್ಯ ರಕ್ಷಣೆ ಮತ್ತು ಆಚರಣೆ. ಆ ನಿಟ್ಟಿನಲ್ಲಿ ದಸರಾ ಯಶಸ್ವೀ ಆಚರಣೆಯಾಗಿದ್ದರಿಂದಲೇ, ಇನ್ನೂ ಪ್ರಸ್ತುತವಾಗಿದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X