ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸಾರ್‌ ಅಹಮದ್‌ಗೊಂದು ಪತ್ರ

By Super
|
Google Oneindia Kannada News

'ಶರಾವತಿ ನದಿ ಜೋಗದಲ್ಲಿ ಧುಮುಕಿ ಕರೆಂಟು ಉತ್ಪಾದಿಸುವ ಯಂತ್ರಗಳನ್ನು ಹಾದು, ಆ ಕರೆಂಟು ತಂತಿಗಳಲ್ಲಿ ಸಾಗಿ ಮೊಳಕಾಲ್ಮೂರಿನ ಬೀದಿಗಳನ್ನು ಬೆಳಗಿತು’ ಇದಿಷ್ಟೂ ವಿವರಣೆಯನ್ನು ಜೋಗದ ಸಿರಿ ಬೆಳಕಿನಲ್ಲಿ... ಎಂದು ಹೇಳಿಬಿಟ್ಟವನು ನಿಸಾರ್‌ ಅಹಮದ್‌.

'ಜೋಗದ ಸಿರಿ ಬೆಳಕಿನಲ್ಲಿ ’.. ಎಂದು ಎರಡೇ ಪದಗಳಲ್ಲಿ ಒಂದು ಕತೆಯಿದೆ. ಇತಿಹಾಸವಿದೆ. ಪ್ರಾಸೆಸ್ಸಿದೆ. ಹಾಗೆಯೇ 'ತುಂಗೆಯ ತೆನೆ ಬಳುಕಿನಲ್ಲಿ...’ ಅಮ್ಮನ ಪದದಲ್ಲಿರುವ ಅಚ್ಚರಿ ಗಮನಿಸಿ: ತುಂಗೆ ಹರಿಯುತ್ತಾಳೆ. ಅವಳ ನೀರಿನಿಂದ ಎಲ್ಲೋ ಭತ್ತ ಬೆಳೆಯುತ್ತದೆ. ಆ ಭತ್ತ ತೆನೆ ಬಿಡುತ್ತದೆ. ಇದೆಲ್ಲವೂ ಸೇರಿ 'ತುಂಗೆಯ ತೆನೆ ಬಳುಕಿನಲ್ಲಿ ’ಎಂಬ ಉದ್ಗಾರದಲ್ಲಿ ಬಂದು ಹೋಗುತ್ತದೆ.' ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ’ ಅನ್ನುವ ಸಾಲಿನಲ್ಲೂ ಒಂದು ಬೆರಗಿದೆ. ಲೋಹದ ಅದಿರು ಅಡುಗಿರುವುದು ಆಳದಲ್ಲಿ , ಭೂಗರ್ಭದಲ್ಲಿ , ಆದರೆ 'ಲೋಹದಿಂದ ಉತ್ತುಂಗದ ನಿಲುಕಿನಲ್ಲಿ’ ಅಂತಾರೆ ನಿಸಾರ್‌. ಅವರು ಯಾಕೆ ಶ್ರೇಷ್ಠ ಕವಿ ಎಂಬ ಪ್ರಶ್ನೆಗೆ ಈ ಉತ್ತರ ಸಾಕು...

ತೀರಾ ಪರಿಚಿತರು ಕಷ್ಟಕ್ಕೆ ಸಿಕ್ಕಿಬಿಟ್ರೆ ತುಂಬಾ ಸಂಕಟ ಪಡುವವರು ನಿಸಾರ್‌ ಅಹಮದ್‌. ಕಷ್ಟದಲ್ಲಿರುವವರ ನೆರವಿಗೆ ಧಾವಿಸುವವರೂ ಅವರೇ. ಕನ್ನಡದ ಕೋಗಿಲೆ ಅಂತ ಹೆಸರಾಗಿದ್ದರಲ್ಲ. ಕಾಳಿಂಗರಾವ್‌, ಅವರ ಕುರಿತು ನಿಸಾರ್‌ಗೆ ದೊಡ್ಡ ಪ್ರೀತಿಯಿತ್ತು. ದುಡಿಮೆ ಚೆನ್ನಾಗಿದ್ದ ದಿನಗಳಲ್ಲಿ ಥೇಟ್‌ ರಾಜಕುಮಾರನಂತೆ ಬದುಕಿದ ರಾವ್‌ ಕಡೆಯ ದಿನಗಳಲ್ಲಿ ಹಣವಿಲ್ಲದೆ ನಿತ್ರಾಣರಾಗಿದ್ದರು. ಆ ದಿನಗಳಲ್ಲಿ ತಿಂಗಳಿಗೆ ಇಷ್ಟು ಎಂಬಂತೆ ಎರಡು ವರ್ಷಗಳ ಕಾಲ ಕಾಳಿಂಗರಾಯರಿಗೆ ನೆರವಾದವರು ನಿಸಾರ್‌ ಅಹಮದ್‌.

ಡಾ.ರಾಜ್‌ಕುಮಾರ್‌ ಇದಾರಲ್ಲ. ಅವರಿಗೆ ತುಂಬ ಆತ್ಮೀಯರು ನಿಸಾರ್‌ ಅಹಮದ್‌. ರಾಜ್‌ ಕಂಪನಿಯ ಎಷ್ಟೋ ಸಿನಿಮಾಗಳ ಶತದಿನೋತ್ಸವ ಸಂಭ್ರಮಕ್ಕೆ ನಿಸಾರ್‌ ಅವರದೇ ಅಧ್ಯಕ್ಷತೆ! ಅರೆ, ಎಲ್ಲಿಯ ರಾಜ್‌, ಎಲ್ಲಿಯ ನಿಸಾರ್‌ ಅನ್ನುವಂತಿಲ್ಲ . ನಿಸಾರರನ್ನು ಕಂಡರೆ ಸಾಕು- ರಾಜ್‌ ಕೈ ಮುಗೀತಾರೆ. ರಾಜ್‌ ಹೆಸರು ಕೇಳಿದರೆ ಸಾಕು - ನಿಸಾರ್‌ ಭಾವಪರವಶರಾಗಿ - 'ಅಣ್ಣಾವ್ರು ಚೆನ್ನಾಗಿರ್ಲಿ ಕಣಪ್ಪಾ ಅನ್ನುತ್ತಾರೆ...’

'ಗೊತ್ತಿಲ್ವ ನಿಮ್ಗೆ ? ಶನಿವಾರ(ಮಾರ್ಚ್‌12) ನಿಸಾರ್‌ ಅಹಮದ್‌ರ ಹುಟ್ಟು ಹಬ್ಬ. ರವೀಂದ್ರ ಕಲಾಕ್ಷೇತ್ರದಲ್ಲಿ ಅವತ್ತು ಬೆಳಗಿನಿಂದ ಸಂಜೆಯವರೆಗೆ ಎಲ್ಲರದ್ದೂ ಒಂದೇ ಹಾಡು- ನಿತ್ಯೋತ್ಸವ, ತಾಯಿ ನಿತ್ಯೋತ್ಸವ...’ಈ ಮಾತು ಕೇಳಿದ ತಕ್ಷಣ ಸೃಷ್ಟಿಯಾದ ಅಕ್ಷರಗಳ ರಂಗದಲ್ಲಿ ಇದು: ಮಮತೆಯನ್ನೇ ಮಡಿಲ ತುಂಬಾ ತುಂಬಿಕೊಂಡ ನಿಸಾರ್‌ ಅಹಮದ್‌ ಅವರಿಗೆ..

*

ಪ್ರೀತಿಯ ಸರ್‌, ನೀವೀಗ ಹುಟ್ಟುಹಬ್ಬದ ಖುಷಿಯಲ್ಲಿದ್ದೀರಿ. ನಾವು-ಏಕಕಾಲಕ್ಕೆ ಪ್ರೇಮ ಮತ್ತು ವಿರಹದ ಬದುಕಿನ ಕತೆ ಕೇಳುವ ನಿಮ್ಮ ಪದ್ಯಗಳ ಮೋಹದಲ್ಲಿ ಮುಳುಗಿ ಮೈಮರೆತಿದೀವಿ. ಈ ಮಧ್ಯೆ ನಿಮ್ಮ ಬರ್ತ್‌ಡೇ ಮರೆತು ನಿಮ್ಮ ವಾರಿಗೆಯ ಮಂದಿ ಹೇಳುತ್ತಿದ್ದಾರೆ: ಅನುಮಾನವೇ ಬೇಡ, ನಿಸಾರ್‌ ಅಹಮದ್‌ ಒಳ್ಳೆಯ ಕವಿ. ತುಂಬ ಒಳ್ಳೆಯ ಮನುಷ್ಯ. ಅವರು ಎಂದೂ, ಯಾರ ಮೇಲೂ ತಮಾಷೆಗೆ ಕೂಡ ರೇಗಿದವರಲ್ಲ. ಎಂಥ ಕಷ್ಟದ ಸಂದರ್ಭದಲ್ಲೂ ಯಾರನ್ನೂ ಹಳಿದವರಲ್ಲ . ಕವಿಯಾಗಿ ಅವರು ಯಾಕೆ ಶ್ರೇಷ್ಠರು ಅಂದರೆ- ಅವರ ಭಾಷಾ ಶೈಲಿಯಲ್ಲಿ ವೈಶಿಷ್ಟ್ಯವಿದೆ, ವಿನೂತನತೆಯಿದೆ: ವೈಚಿತ್ರ್ಯವೂ ಇದೆ. ಕನ್ನಡ ಪದಗಳಿಗೆ ನಿಸಾರ್‌ ಹೊಸತನ ತುಂಬಿದ್ದಾರೆ. ಕನ್ನಡದ ಮಾತುಗಳನ್ನು ಬಿಲ್ಲಿನಂತೆ ಬಗ್ಗಿಸುವ, ಮೇಣದಂತೆ ರೂಪಿಸುವ, ಅಂಬಿನಂತೆ ನಾಟಿಸುವ, ಮೊಗ್ಗಿನಂತೆ ಅರಳಿಸುವ, ಮದ್ದಿನಂತೆ ಸಿಡಿಸುವ, ಬೆಲೂನಿನಂತೆ ಹಿಗ್ಗಿಸುವ ಸಾಮರ್ಥ್ಯ ಅವರಿಗಿದೆ. ರೇಸಿನ ಕುದುರೆಯಂತೆ ಅವರು ಭಾಷೆಯನ್ನು ಆಡಿಸಬಲ್ಲರು. ಹೊಸ ಪದಗಳನ್ನು ಟಂಕಿಸುವಲ್ಲಿ, ಅವುಗಳಿಗೆ ನೂತನ ಚೈತನ್ಯ ತುಂಬುವಲ್ಲಿ ನಿಸಾರ್‌ ಯಶಸ್ವಿಯಾಗಿದ್ದಾರೆ. ಅವರ ದೇಶಪ್ರೇಮ ಮತ್ತು ಭಾಷಾ ಪ್ರೇಮಗಳು ಅಸೀಮ, ಅನನ್ಯ...’

ಸರ್‌, ಪ್ರೀತಿಯಲ್ಲೇ ಅದ್ದಿ ತೆಗೆದ ಇಂಥ ಮಾತು ಕೇಳಿದಾಗ ಬೆರಗಾಗುತ್ತದೆ. ಆ ಬೆರಗಿನಲ್ಲೇ 'ನವೋಲ್ಲಾಸ’ದ ಪುಟ ತೆರೆದರೆ- 'ಎಷ್ಟು ಬೇಗ ನಲುಗಿಹೋಯ್ತು ಹರಯ ಲತೆಯ ಜಾಜಿ ಪ್ರೀತಿ/ಚೈತ್ರದಿರುಳ ಬಾನಿನಂತೆ ಸುಪ್ರಕಾಶಮಾನ ಪ್ರೀತಿ/ನಿನ್ನ ಹಾಲುಗೆನ್ನೆ ತುಂಬ ಕೆನ್ನೆಗಟ್ಟಿದ ಮುನಿಸು ಪ್ರೀತಿ/ನಿನ್ನ ಕಣ್ಣಿನಾಳದಂಚ ಮೀನ ಮಿಂಚ ಹೊರಳು ಪ್ರೀತಿ..’

ಎಂಬ ಅಕ್ಷರದ ಹಾರ ಕೊರಳು ತಬ್ಬುತ್ತ ದೆ. ಇದನ್ನೆಲ್ಲ 'ಕವಿ ಕಲ್ಪನೆ’ಎಂದು ಊಹಿಸಿ ' ನಿತ್ಯೋತ್ಸವ’ ದ 'ಯುಗಾದಿ’ಪದ್ಯಕ್ಕೆ ಹೊರಳಿದರೆ ಸಿಹಿ ಕಹಿಗಳ ಜತೆಗೆ ಬೆಸೆದು/ಸಮರಸದಲಿ ಬಾಳ ಹೊಸೆದು/ಹಳತರಲ್ಲಿ ಹೊಸತು ಕೋದು/ನಿಂತಿದೆ ಮನೆ ಹೊಸ್ತಿಲಲ್ಲಿ ಸಿರಿ ಯುಗಾದಿ ಹಬ್ಬಕೆ’ ಎಂಬ ಅಕ್ಷರದ ರಂಗವಲ್ಲಿ ಕಣ್ತುಂಬುತ್ತದೆ.

ಅರೆ, ಹಬ್ಬ ಮಾಡಿದವರಿಗಿಂತ ಹೆಚ್ಚಿನ ಸಡಗರದಲ್ಲಿ ನಿಸಾರ್‌ಪದ್ಯ ಬರೆದಿದ್ದಾರಲ್ಲ- ಅಂದುಕೊಂಡು ಮುಂದೆ ಓದಿದರೆ 'ಘಮ್ಮೆನ್ನುವ ಗಂಧಾಕ್ಷತೆ ಮಂದಾನಿಲ ಹಿಡಿದಿದೆ’ ಎಂಬ ಅದ್ಭುತದ್ಭುತ, ರಮ್ಯಮನೋಹರ ಸಾಲು ಕೈ ಜಗ್ಗುತ್ತದೆ. ಹೇಳಿ ಸಾರ್‌, ಗಂಧಾಕ್ಷತೆ ಘಮ್ಮೆನ್ನುತ್ತದೆ; ಅನ್ನೋದು ನಿಮಗೆ ಹ್ಯಾಗೆ ಗೊತ್ತಾಯ್ತು ?'ರವಿ ಕಾಣದ್ದನ್ನು ಕವಿ ಕಂಡ’ ಅಂತರಲ್ಲ -ಹಾಗೆ, ಇದ್ದಕ್ಕಿದ್ದ ಹಾಗೆಯೇ ಈ ಸಾಲು ಹೊಳೆದು ಬಿಡ್ತಾ ಅಥವಾ ನೀವು ಪದ್ಯ ಬರೆದ ಬೆರಗಲ್ಲಿದ್ದಾಗಲೇ ಗಂಧಾಕ್ಷತೆಯ ಘಮ ಸುಯ್ಯನೆ ತೇಲಿ ಬಂತಾ..?

ಸರ್‌, ನೀವು ಹುಟ್ಟುಹಬ್ಬದ ಖುಷಿಯಲ್ಲಿರುವಾಗಲೇ ಕೆಲ ಪ್ರಶ್ನೆ ಕೇಳಬೇಕು ಅನ್ನಿಸಿದೆ. ಹೇಳಿ: ಒಂದು ಪ್ರೇಮಗೀತೆ ಬರೀಬೇಕು ಅಂದ್ರೆ- ಪ್ರೇಮದ ಅನುಭವವೂ ; ವಿರಹಗೀತೆ ಸೃಷ್ಟಿಯಾಗದಂಥ ಯಾತನೆಯೂ ಕೈ ಜಗ್ಗಬೇಕು ಅಂತಾರೆ. ಈ ಯಾವ ಅನುಭವ ಇಲ್ಲದೆಯೂ ನೀವು ಒಂಟಿಯಾಗಿ ಕೂತು-'ನಿನ್ನ ಅರೆಗಳಿಗೆಯೂ ನಾನು ಬಿಟ್ಟಿರಲಾರೆ/ನಿನ್ನ ಪ್ರೇಮಕೆ ಬೆಲೆಯ ಕಟ್ಟಲಾರೆ’, 'ನಿನ್ನ ಸಂಗ ಬಯಸಿಬಂದೆ, ದೂಡಬೇಡ ಹೊರಗಡೆ ; ಅಂತರಂಗ ನುಡಿಯಿತಂದೆ ; ಸಿಗುವುದೊಲವ ಬಿಡುಗಡೆ’ ಎಂದು ಬರೆದಿರಲ್ಲ -ಅಂಥದೊಂದು ಸಂದರ್ಭ; ಪ್ರೇಮ- ವಿರಹದ ಆ ತೀವ್ರತೆ ನಿಮಗೆ ದಕ್ಕಿದ್ದಾದ್ರೂ ಹೇಗೆ ?'ಡಿಸಪಾಯಿಂಟ್‌ ಮೆಂಟ್‌’ನ ಅನುಭವ ಇಲ್ದೇ ನಿಜಕ್ಕೂ ವಿರಹಗೀತೆ ಬರೀಬಹುದಾ? ನಿಜ ಹೇಳಿ ಸಾರ್‌. 'ಬೆಣ್ಣೆಗಳ್ಳ ಕೃಷ್ಣ’ ಅನ್ನೋ ಹಾಡಿನಲ್ಲಿ ಬಾಲಕೃಷ್ಣನ ಕತೆಯನ್ನೇ ಇಂಚಿಂಚಾಗಿ ಹೇಳಿದಿರಲ್ಲ- ಆ ಪದ್ಯ ಬರೆದ ಕ್ಷಣ ಕ್ಷಣವೂ ಕೃಷ್ಣ ನಿಮ್ಮನ್ನ ಕಾಡಲಿಲ್ವ ಸಾರ್‌? ಪದ್ಯವನ್ನು ಹೇಗೋ ಹಾಗೇ -ಗದ್ಯವನ್ನೂ, ಅದರಲ್ಲೂ ಫೈನ್‌ ಫೈನ್‌ ಎಂಬಂಥ ವಿಮರ್ಶೆ ಬರೀತಿದ್ದವರು ನೀವು. ಅಂಥ ನೀವು- ವಿಮರ್ಶೆ ಬರೆದರೆ ಹಲವರ ವಿರೋಧಕ್ಕೆ ಈಡಾಗಬೇಕಾಗುತ್ತೆ ಅಂತ 'ವಿಮರ್ಶೆ’ಬರೆಯೋದೇ ನಿಲ್ಲಿಸಿಬಿಟ್ರಂತೆ, ನಿಜವಾ ಸಾರ್‌?

ನೀವೀಗ ಎಪ್ಪತ್ತರ ಖುಷಿಯಲ್ಲಿದೀರ. ಅದು ಗೊತ್ತಿದ್ರೂ- ಇಪ್ಪತ್ತೆೈದು ವರ್ಷದ ಹಿಂದೆ ನಿಸಾರ್‌ ಹೇಗಿದ್ರು ಅಂತ ಕಲ್ಪಿಸಿಕೊಂಡು; ಆ ಕಲ್ಪನೆಯ ಜತೆಗೇ ನಿಮ್ಮ ಪ್ರೇಮ ಕವಿತೆ ಇಟ್ಟು , ನೀವು ಹಾಡಿದಂತೆ, ಗೆಳತಿಯ ಜತೆ(!?)ಕುಣಿದಾಡಿ ನಲಿದಂತೆ ಕಲ್ಪಿಸಿಕೊಂಡು ನಾವು ಖುಷಿಮಪಡ್ತಿದೀವಿ. ನೀವು ಏರಲಾಗದ ಎತ್ತರವಿಲ್ಲ ಎಂಬ ದೊಡ್ಡ ನಂಬಿಕೆ ನಮ್ಮದು. ಎಪ್ಪತ್ತು ನೂರಾಗಲಿ, ನೀವು ಆ ಅತ್ಯುನ್ನತಿಯಲ್ಲಿ ನಿಂತಾಗ ನೋಡಿ ಹಿಗ್ಗುವ ಭಾಗ್ಯ ನಮ್ಮದಾಗಲಿ.

-ಹುಟ್ಟುಹಬ್ಬದ ಸಾವಿರ ಶುಭಾಶಯಗಳು

-ಎ.ಆರ್‌. ಮಣಿಕಾಂತ್‌

(ಸ್ನೇಹಸೇತು : ವಿಜಯ ಕರ್ನಾಟಕ)

English summary
Nityotsava kavi K.S. Nisar Ahmed turns 70. Literary congratulations to Nisar by A.R. Manikanth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X