ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕ್ಕೆ ಜಾಗತೀಕರಣದ ಸವಾಲುಗಳು : ಒಂದು ದೃಷ್ಟಿಕೋನ

By Super
|
Google Oneindia Kannada News

Globalization and Karnataka! : A vision Document
ಜಾಗತೀಕರಣ ಎಂಬುದು, ಒಂದು ಅನಿವಾರ್ಯ ಪ್ರಕ್ರಿಯೆಯಾಗಿರುವಾಗ, ಈ ವ್ಯವಸ್ಥೆಯನ್ನು -ನಾವು ಕನ್ನಡಿಗರು ಯಾವ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕೆಂಬುದರ ಬಗ್ಗೆ ಚಿಂತಿಸುವುದು ಸೂಕ್ತ ಎನ್ನುವುದು ನಮ್ಮ ಅನಿಸಿಕೆ.

ಜಾಗತೀಕರಣವೂ ಕೂಡಾ, ಬೇರೆಲ್ಲವುಗಳಂತೆಯೇ ಕೆಲವು ಅನುಕೂಲತೆ ಹಾಗೂ ಕೆಲವು ಅನಾನುಕೂಲತೆಗಳನ್ನು ಅಡಗಿಸಿಕೊಂಡಿದೆ.

ಅನುಕೂಲತೆಗಳು :

1. ಬಂಡವಾಳದ ಹರಿವು.
2. ಉದ್ಯೋಗಾವಕಾಶ.
3. ಉನ್ನತ ಗುಣಮಟ್ಟ ಮತ್ತು ತಾಂತ್ರಿಕತೆ.
4. ವಿಸ್ತೃತ ಮಾರುಕಟ್ಟೆ

ಅನಾನುಕೂಲತೆಗಳು :

1. ಭಾಷೆ ಮತ್ತು ಸಂಸ್ಕೃತಿಯ ಮೇಲಿನ ದಾಳಿ.
2. ಅನ್ಯಭಾಷಾ ಜನಗಳ ವಲಸೆ.
3. ಕೊಳ್ಳುಬಾಕ ಸಂಸ್ಕೃತಿಯ ಉದ್ದೀಪನೆ.
4. ಅಧಿಕಾರ ಸ್ಥಿತ್ಯಂತರ.
5. ಆರ್ಥಿಕ ಅಸಮಾನತೆಯ ಏರಿಕೆ.
6. ಸಣ್ಣ ಉದ್ದಿಮೆಗಳ ವಿನಾಶ.

ಜಾಗತೀಕರಣದ ಅನುಕೂಲಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುವುದು ಮತ್ತು ಅನಾನುಕೂಲಗಳನ್ನು ಯಾವ ತೆರದಲ್ಲಿ ನಿಯಂತ್ರಿಸುವುದು ಮತ್ತು ಹೇಗೆ ಅನಾನುಕೂಲಗಳನ್ನು ಅನುಕೂಲಗಳನ್ನಾಗಿ ಪರಿವರ್ತಿಸಿಕೊಳ್ಳುವುದು ಎನ್ನುವುದೇ ನಮ್ಮ ಉದ್ದೇಶವಾಗಿದೆ.

ಜಾಗತೀಕರಣದ ಅನುಕೂಲತೆಗಳನ್ನು ಸದುಪಯೋಗಿಸಿಕೊಳ್ಳುವ ಬಗೆ :

ಹೊಸ ಉದ್ದಿಮೆಗಳ ಸೃಷ್ಟಿಗೆ ಜಾಗತೀಕರಣದಿಂದ ಒದಗಿರುವ ಅವಕಾಶಗಳನ್ನು ಸಾಧ್ಯವಾದಷ್ಟೂ ಕನ್ನಡಿಗರೇ ಬಳಸಿಕೊಳ್ಳುವುದು.

-ಈ ನಿಟ್ಟಿನಲ್ಲಿ ಯಾವುದೇ ಹೊಸ ಉದ್ದಿಮೆ ಪ್ರಾರಂಭವಾಗುವ ಮುನ್ನ ಅದಕ್ಕೆ ಪೂರಕವಾಗುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅವಶ್ಯಕತೆಗಳನ್ನು ಸರ್ಕಾರ ಮೊದಲೇ ಚರ್ಚಿಸಿ, ಗುರುತಿಸಿ, ಪ್ರಕಟಿಸಿ, ಕನ್ನಡಿಗರಿಗೆ ಅಂತಹ ಉದ್ದಿಮೆಗಳನ್ನು ಪ್ರಾರಂಭಿಸಲು ಮಾಹಿತಿ, ಉತ್ತೇಜನ ನೀಡುವುದು. ಈ ಸಂಬಂಧವಾಗಿಯೆ ಒಂದು ಮಾಹಿತಿ ಕೇಂದ್ರ ಶುರುಮಾಡಲು ಸರ್ಕಾರದ ಮೇಲೆ ಒತ್ತಡ ತರುವುದು.

-ಇದರ ಮೂಲಕ ದೊಡ್ಡ ಉದ್ದಿಮೆಗಳಿಗೆ ಪೂರಕವಾಗುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಕನ್ನಡಿಗರ ಕೈಯಲ್ಲೇ ಇರುವಂತೆ ನೋಡಿಕೊಳ್ಳುವುದು.

ದೊಡ್ಡ ಉದ್ದಿಮೆಗಳಿಗೆ ಪೂರಕವಾದ, ಸೇವಾ ಉದ್ದಿಮೆಗಳಾದ ಕ್ಯಾಂಟೀನ್‌, ಸಾರಿಗೆ, ಸೆಕ್ಯುರಿಟಿ ಇತ್ಯಾದಿಗಳು ಕನ್ನಡಿಗರ ಕೈಯಲ್ಲೇ ಇರುವಂತೆ ವ್ಯವಸ್ಥೆ ರೂಪಿಸುವುದು.

-ಕರ್ನಾಟಕದಲ್ಲಿ ಪ್ರಾರಂಭವಾಗುವ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಮೊದಲ ಆದ್ಯತೆ ಇರಬೇಕು. ಹೊಸಬರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಸ್ಥಳೀಯ ಪ್ರತಿಭೆಗಳಿಗೆ ಮೊದಲ ಆದ್ಯತೆ ಇರಬೇಕು. ತೀರ ಅನಿವಾರ್ಯ ಪರಿಸ್ಥಿತಿಗಳಲ್ಲಿ ಅನ್ಯ ಭಾಷಿಕರಿಗೆ ಅವಕಾಶ ನೀಡಿದರೂ ಕುಶಲತೆ, ಚಾಣಕ್ಷತೆಯ ಅಗತ್ಯವಿಲ್ಲದ ಸ್ಥಾನಗಳಲ್ಲಿ ಕಡ್ಡಾಯವಾಗಿ ಕನ್ನಡಿಗರೇ ಇರುವಂತೆ ನೋಡಿಕೊಳ್ಳಬೇಕು.

-ಈ ದಿಸೆಯಲ್ಲಿ ರಾಜ್ಯದ ಎಲ್ಲ ಉದ್ದಿಮೆದಾರರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಮತ್ತು ಹೊಸ ಉದ್ದಿಮೆದಾರರಿಗೆ ಇದು ಕಡ್ಡಾಯವಾಗಬೇಕು.

ಜಾಗತೀಕರಣದಿಂದ ಹರಿದು ಬರುವ ಸಂಪತ್ತು, ಇಡೀ ಸಮಾಜದಲ್ಲಿ ಹಂಚುವಂತಾಗಿ ಅತಿಹೆಚ್ಚು ಜನರಿಗೆ ಅನುಕೂಲವಾಗಲು, ಪ್ರವಾಸೋದ್ಯಮ, ಹೋಟೆಲ್‌ ಉದ್ಯಮ, ವಾಣಿಜ್ಯ ಕೇಂದ್ರಗಳು, ಮನೋರಂಜನಾ ಉದ್ಯಮಗಳು ವಿಸ್ತಾರಗೊಳ್ಳಬೇಕು.

-ಪ್ರಸ್ತುತವಿರುವ ಪ್ರವಾಸಿ ತಾಣಗಳನ್ನು ಸುಸಜ್ಜಿತಗೊಳಿಸುವುದು, ಮೂಲಭೂತ ಸೌಕರ್ಯಗಳ ಸೃಷ್ಟಿ, ಪ್ರಚಾರ , ಸುವ್ಯವಸ್ಥೆಗೊಳಿಸುವಂತಹ ಕ್ರಮಗಳಿಂದ ಹೆಚ್ಚು ಜನಕ್ಕೆ ಉದ್ಯೋಗ ದೊರೆಯುವಂತೆ ಮಾಡುವುದು.

ಜಾಗತೀಕರಣದಿಂದ ದೊರಕುವ ಉನ್ನತ ತಂತ್ರಜ್ಞಾನ ನಾಡಿನ ಇತರೆ ಉದ್ದಿಮೆಗಳಿಗೂ ದೊರೆತು ನಮ್ಮ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವ ಬಗ್ಗೆ ಶ್ರಮಿಸುವುದು.

-ಈ ನಿಟ್ಟಿನಲ್ಲಿ, ಈಗಾಗಲೇ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗದಲ್ಲಿರುವ, ಕನ್ನಡ ಭಾಷಿಗರಾದ ಪರಿಣಿತರ ತಂಡಗಳನ್ನು ವಿಷಯದ ಆಧಾರದ ಮೇಲೆ ರಚಿಸಿ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳವರಿಗೆ, ಹೊಸದಾಗಿ ಉದ್ದಿಮೆ ಪ್ರಾರಂಭಿಸಲು ಹೊರಟ ಉತ್ಸಾಹಿಗಳಿಗೆ ತರಬೇತಿ ನೀಡುವುದು. ಉದಾ : ಕೈಗಾರಿಕಾ ಕ್ಷೇತ್ರದಲ್ಲಿ ಜಪಾನಿ ಉತ್ಪಾದನಾ ತಂತ್ರಜ್ಞಾನದ , ಕೃಷಿ ಕ್ಷೇತ್ರದಲ್ಲಿನ, ವೈದ್ಯಕೀಯ ಕ್ಷೇತ್ರದಲ್ಲಿನ ಪರಿಣಿತರ ತಂಡಗಳನ್ನು ರಚಿಸುವುದು.

ಕನ್ನಡದ ತಂತ್ರಾಂಶವನ್ನು ವ್ಯಾಪಾರದಲ್ಲಿ ಅಂದರೆ ಅಂಗಡಿಗಳ ನಿತ್ಯದ ವ್ಯವಹಾರದಲ್ಲಿ ಅಳವಡಿಸುವುದು.

-ಬ್ಯಾಂಕುಗಳು, ವ್ಯವಸಾಯೋತ್ಪನ್ನಗಳ ಮಾರಾಟ ಕೇಂದ್ರಗಳು, ಅಂಚೆ ಕಛೇರಿ, ಜೀವ ವಿಮಾ ನಿಗಮ. . . ಇತ್ಯಾದಿಗಳಲ್ಲಿಯೂ ಕನ್ನಡ ತಂತ್ರಾಂಶಗಳನ್ನು ಬಳಕೆಗೆ ತರುವುದು.

ನಮ್ಮ ನಾಡಿನಲ್ಲಿ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಂಡುಕೊಳ್ಳುವಲ್ಲಿ ಕ್ರಾಂತಿಕಾರಕ ಯೋಜನೆಗಳನ್ನು ರೂಪಿಸುವುದು.

-ಗಣಕ ಯಂತ್ರ, ಉಪಗ್ರಹಗಳಿಂದ ಮಾಹಿತಿ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಸತ್ಫಲ, ನಾಡಿನ ಕೃಷಿಕರು, ಗ್ರಾಮೀಣ ಜನರೂ ಪಡೆಯುವಂತಾಗಬೇಕು. ಆಗ ಆಧುನಿಕ ತಂತ್ರಜ್ಞಾನವನ್ನು ಕೃಷಿ, ಹೈನುಗಾರಿಕೆ, ತ್ಯಾಜ್ಯವಸ್ತು ನಿರ್ವಹಣೆ, ಕೋಳಿ ಸಾಕಣೆ, ರೇಶ್ಮೆ ಉದ್ದಿಮೆಗಳಲ್ಲಿಯೂ ಬಳಸಲು ಸಾಧ್ಯವಾಗುತ್ತದೆ. ಈ ಬಗ್ಗೆ ತರಬೇತಿ ನೀಡುವುದೂ ಅಗತ್ಯವಾಗಿದೆ.

-ವಿದೇಶಿ ಮಾರುಕಟ್ಟೆಯನ್ನು ಅಭ್ಯಸಿಸಿ, ಅಲ್ಲಿ ಬೇಡಿಕೆ ಇರುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ, ರಫ್ತಿಗೂ ಸಹಾಯ ಮಾಡುವ ಸಂಸ್ಥೆಯೊಂದನ್ನು ಕನ್ನಡಿಗರು ಹೊಂದಬೇಕಾದ ಅಗತ್ಯವಿದ್ದು, ಈ ದಿಸೆಯಲ್ಲಿ ಕ್ರಿಯಾಶೀಲರಾಗುವುದು ತುಂಬಾ ಅಗತ್ಯವಾಗಿದೆ .

-ಈ ಎಲ್ಲಾ ವಿಷಯಗಳ ಬಗ್ಗೆ ಕಮ್ಮಟವನ್ನು ಏರ್ಪಡಿಸಿ, ಕಾರ್ಯಯೋಜನೆಗಳನ್ನು ತಯಾರಿಸಬೇಕಿದೆ.

ಸಮಯ ಬಂದಿದೆ :

ಜಾಗತೀಕರಣದ ದುಷ್ಪರಿಣಾಮಗಳನ್ನೂ, ಅವುಗಳನ್ನು ಎದುರಿಸಬೇಕಾದ ವಿಧಾನಗಳನ್ನೂ ಕನ್ನಡಿಗರೆಲ್ಲಾ ಯೋಚಿಸಬೇಕಾದ ಸಮಯ ಬಂದಿದೆ. ಬಂಡವಾಳದ ಹರಿವಿನ ಜೊತೆಗೇ ಅನ್ಯ ಭಾಷಿಗರ ವಲಸೆಯ ಸಮಸ್ಯೆಯೂ ನಮ್ಮನ್ನು ಕಾಡುತ್ತಿದೆ. ಇಲ್ಲಿ ನಮ್ಮ ಸಮಸ್ಯೆ, ಪರಭಾಷಿಗರು ಇಲ್ಲಿಗೆ ಬರುವುದು ಎಂಬುದಕ್ಕಿಂತಾ ಅವರಿಂದ ನಮ್ಮ ಭಾಷೆ, ಸಂಸ್ಕೃತಿಯ ಮೇಲಾಗುತ್ತಿರುವ ದುಷ್ಪರಿಣಾಮಗಳೇ ಆಗಿದೆ. ಹೀಗಾಗಿ ವಲಸೆ ನಿಯಂತ್ರಣ ಎಂಬುದು ನಮ್ಮ ಹೋರಾಟದ ಅವಿಭಾಜ್ಯ ಅಂಗವಾಗಿದೆ.

ಯಾವುದೇ ಉದ್ದಿಮೆದಾರನ ಮೂಲ ಉದ್ದೇಶ ಲಾಭ ಸಂಪಾದನೆಯೇ ಆಗಿದ್ದು, ಆಯ ಉದ್ದಿಮೆ ನಿರ್ವಹಿಸಲು ಪರಿಣಿತರು, ಕುಶಲಕರ್ಮಿಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡುತ್ತಾನೆ. ಅವನಿಗೆ ಇರುವುದು ಲಾಭದ ಮೋಹವೊಂದೇ. ನಮ್ಮ ಭಾಷೆ, ನಾಡು ಇವುಗಳ ಬಗ್ಗೆ ಅವರಿಗೆ ಒಲವು ಇರಲೇಬೇಕಿಲ್ಲ. ಅಲ್ಲದೇ ಸಾಂವಿಧಾನಿಕವಾಗಿ ಕೂಡಾ ಅಂತರ್‌ರಾಜ್ಯ ವಲಸೆಯನ್ನು ನಿಯಂತ್ರಿಸುವುದು ಅಸಾಧ್ಯ. ಹೀಗಾಗಿ ನಮ್ಮಲ್ಲೇ ಇರುವ ಪರಿಣಿತರಿಗೆ ಮತ್ತು ಕುಶಲಕರ್ಮಿಗಳಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಅಂತಹ ತಜ್ಞರು ನಮ್ಮಲ್ಲಿ ಇಲ್ಲವಾದಾಗ ಮಾತ್ರ ಹೊರಗಿನವರಿಗೆ ಅವಕಾಶ ನೀಡಬಹುದೆಂಬ ನಿಯಮ ರೂಪಿಸಲು ಹೋರಾಟ ಮಾಡಬೇಕಿದೆ. ಇಂತಹ ವಿಶೇಷ ಪರಿಣಿತಿಯ ಅಗತ್ಯವಿಲ್ಲದ ಹುದ್ದೆಗಳಿಗೆ ಕನ್ನಡಿಗರನ್ನೇ/ ಸ್ಥಳೀಯರನ್ನೇ ನೇಮಕ ಮಾಡಬೇಕೆಂಬ ಹಕ್ಕೊತ್ತಾಯ ಮಾಡಬೇಕಿದೆ. ಈ ನಿಲುವನ್ನು ಸರ್ಕಾರಕ್ಕೆ, ಉದ್ದಿಮೆದಾರರಿಗೆ ತಲುಪಿಸಬೇಕಾಗಿದೆ.

ಜಾಗತೀಕರಣದಿಂದಾಗುವ ಕೊಳ್ಳುಬಾಕ ಸಂಸ್ಕೃತಿಯ ಬಗ್ಗೆ ಕೂಡಾ ಜನ ಜಾಗರಣೆ ಮಾಡಬೇಕಾದ ಅಗತ್ಯವಿದೆ.

ಜಾಗತೀಕರಣದ ಮತ್ತೊಂದು ಮುಖ್ಯ ತೊಂದರೆ ಎಂದರೆ ಹೆಚ್ಚುತ್ತಿರುವ ಆಂಗ್ಲ ಭಾಷಾ ವ್ಯಾಮೋಹ. ಈ ಪ್ರಪಂಚದಲ್ಲಿ ಇಂಗ್ಲಿಷ್‌ ಇಲ್ಲದೇ ಬದುಕುವುದು ಅಸಾಧ್ಯವೆಂಬ ಮೂಢನಂಬಿಕೆ, ನಮ್ಮ ಮಕ್ಕಳನ್ನು ಮಾತೃಭಾಷೆಯಿಂದ ದೂರ ಸರಿಯುವಂತೆ ಮಾಡುತ್ತಿದೆ. ಈ ಸಮಸ್ಯೆ ಕೇವಲ ಕನ್ನಡಿಗರದ್ದಷ್ಟೇ ಅಲ್ಲ. ಇದು ಜಾಗತೀಕರಣಕ್ಕೆ ಆಹ್ವಾನವಿತ್ತ ಎಲ್ಲಾ ದೇಶಗಳ ಸಮಸ್ಯೆಯಾಗಿದ್ದು, ಸಮಗ್ರ ಹೋರಾಟದ ಅಗತ್ಯವಿದೆ.

ಜಾಗತೀಕರಣದ ಮತ್ತೊಂದು ಸಮಸ್ಯೆಯಾಗಿ ಬಂಡವಾಳಶಾಹಿ ಸಂಸ್ಕೃತಿಯ ಅಟ್ಟಹಾಸ ಕೇಳುತ್ತಿದೆ. ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂಬುದು ಕೂಡಾ ಇಂತಹ ಬಂಡವಾಳಶಾಹಿಗಳ ಸ್ವಾರ್ಥದ ಕೂಗು. ಇಂಥಹ ಜನಗಳ ಕೈಗೆ ಅಧಿಕಾರ ಹಸ್ತಾಂತರಗೊಳ್ಳುವ ಅಪಾಯವಿದೆ. ರಾಜಕೀಯ ಶಕ್ತಿಗಳು ಇಂತಹ ಆರ್ಥಿಕ ದಿಗ್ಗಜಗಳ ಕೈಗೊಂಬೆ ಆಗಿರುವುದನ್ನು ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ.

ಜಾಗತೀಕರಣದಿಂದಾಗಿ ಸೃಷ್ಟಿಯಾದ ಉದ್ಯೋಗಗಳ ಫಲಾನುಭವಿಗಳು ಸಂಖ್ಯೆಯಲ್ಲಿ ಕಡಿಮೆಯಿದ್ದಾರೆ ಮತ್ತು ಈ ವರ್ಗದ ಜನರಿಂದ ಸಮಾಜದಲ್ಲಿ ಉಂಟಾಗಿರುವ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಬೇಕಾದ ಅಗತ್ಯವಿದ್ದು ಸಂಪತ್ತಿನ ಸಮಾನ ವಿತರಣೆಯಾಗಲು ಪ್ರವಾಸೋದ್ಯಮದಂತಹ ಉದ್ದಿಮೆಗಳ ಉನ್ನತಿ, ರೈತರ ಬೆಳೆಗೆ ಉತ್ತಮ ದರ, ದಲ್ಲಾಳಿ, ಮಧ್ಯವರ್ತಿಗಳ ನಿಯಂತ್ರಣದಂತಹ ಕ್ರಮಗಳ ಅಗತ್ಯವಿದೆ.

ದೊಡ್ಡ ಉದ್ದಿಮೆಗಳ ಪ್ರವೇಶದೊಡನೆ, ಆ ಕ್ಷೇತ್ರಗಳ ಸಣ್ಣ ಉದ್ದಿಮೆದಾರರ ಸರ್ವನಾಶವಾಗದಂತೆ ತಡೆಯಬೇಕಾಗಿದೆ. ಸಂರಕ್ಷಿತ ವಲಯಗಳೆಂದು ( ಉದಾ: ಗುಡಿ ಕೈಗಾರಿಕಾ ಉತ್ಪನ್ನಗಳು ) ಗುರುತಿಸಿ, ಅಂತಹ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯನ್ನು ನಿಯಂತ್ರಿಸುವಂತೆ ನಿಯಮ ರೂಪಿಸಲು ಆಡಳಿತ ಯಂತ್ರದ ಮೇಲೆ ಒತ್ತಡ ಹಾಕಬೇಕಾಗಿದೆ.

ಕನ್ನಡಿಗರಿಂದ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಕಟ್ಟುವ ಕೆಲಸ ಆಗಬೇಕಿದೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ನಾಡಿನ ವಿಶೇಷ ಉತ್ಪನ್ನಗಳಿಗೆ ಬೇಡಿಕೆ ತಂದು ಕೊಡಬೇಕಾಗಿದೆ.

ಕೈಗಾರಿಕಾ ರಂಗ :

1. ಮೊದಲಿಗೆ ಭಾರಿ ಉದ್ದಿಮೆ, ಮಧ್ಯಮ ಉದ್ದಿಮೆ, ಸಣ್ಣ ಉದ್ದಿಮೆಗಳನ್ನು ಸ್ಪಷ್ಟವಾಗಿ ಗುರುತಿಸಬೇಕು.

2. ಕ್ಷೇತ್ರವಾರು ವಿಂಗಡನೆಯೂ ಆಗಬೇಕು( ಉದಾ : ವಿಜ್ಞಾನ, ಕೃಷಿ, ಐಟಿ, ಬಿಟಿ . . . .ಇತ್ಯಾದಿ ). ನಂತರ ಆ ಉದ್ದಿಮೆಗಳಲ್ಲಿರುವ ಕನ್ನಡಿಗರ ಗಣತಿ ಕಾರ್ಯ ನಡೆಸಬೇಕು

3. ಕನ್ನಡಿಗರು ಪರಿಣಿತಿ ಹೊಂದಿರುವ, ಮಾರುಕಟ್ಟೆ ವಿಸ್ತೀರ್ಣದಿಂದ ಉದ್ಯೋಗಾವಕಾಶ ಹೆಚ್ಚಲಿರುವ ಕ್ಷೇತ್ರಗಳನ್ನು ಗುರುತಿಸುವಿಕೆ. ಅಂತಹ ಕ್ಷೇತ್ರಗಳ ಪರಿಣಿತರ ಗುಂಪು ನಿರ್ಮಾಣ ಮಾಡಬೇಕು.

4. ಮಾರುಕಟ್ಟೆಯನ್ನು ಅಭ್ಯಸಿಸಿ, ಶಕ್ಯತೆಯಿರುವ ಕ್ಷೇತ್ರಗಳನ್ನು ಗುರುತಿಸಿ, ಅರ್ಹ ಕನ್ನಡಿಗರಿಗೆ ಅದರಲ್ಲಿ ತರಬೇತಿ ನೀಡುವಿಕೆ.

5. ಗ್ರಾಹಕ ಬಳಕೆಯ ವಸ್ತುಗಳನ್ನು, ಅವುಗಳ ತಯಾರಕರನ್ನು ವಿಂಗಡಿಸುವುದು.

ಅ) ಕನ್ನಡಿಗ ಮಾಲಿಕ, ಕನ್ನಡಿಗ ನೌಕರರು
ಆ) ಕನ್ನಡಿಗ ಮಾಲಿಕ, ಕನ್ನಡಿಗರಲ್ಲದ ನೌಕರರು
ಇ) ಕನ್ನಡಿಗನಲ್ಲದ ಮಾಲೀಕ, ಕನ್ನಡಿಗ ನೌಕರರು . . . . . ಇತ್ಯಾದಿ

6. ಪ್ರತಿ ಗ್ರಾಹಕ ಬಳಕೆಯ ವಸ್ತುಗಳಿಗೆ ಮಾನ್ಯತೆ ಚಿನ್ಹೆ ನೀಡುವುದು. ಅಂತಹ ಗುರುತುಳ್ಳ ವಸ್ತುಗಳನ್ನೇ ಖರೀದಿಸುವಂತೆ ಪ್ರಚಾರ ನೀಡುವುದು. ಈ ನಿಟ್ಟಿನಲ್ಲಿ ದೂರದರ್ಶನ, ಆಕಾಶವಾಣಿಯಂತಹ ಮಾಧ್ಯಮಗಳನ್ನು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ಬಳಸುವುದು.

7. ಈ ರೀತಿ ಮಾನ್ಯತೆ ನೀಡುವ ಕ್ರಮವನ್ನು ಎಲ್ಲ ಕನ್ನಡ ಪರ ಸಂಘಟನೆಗಳ ಜತೆ ಚರ್ಚಿಸಿ ಅಧಿಕೃತಗೊಳಿಸುವುದು.

ಮಾರುಕಟ್ಟೆ ವಿಸ್ತೀರ್ಣ :

1. ಕನ್ನಡ ನಾಡಿನ ವಿಶೇಷ ವಸ್ತುಗಳಿಗೆ(ಮಲೆನಾಡ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆಗಳು ಹಾಗೂ ಕರಕುಶಲ ವಸ್ತುಗಳು ಇತ್ಯಾದಿ) ಮಾರುಕಟ್ಟೆ ನಿರ್ಮಾಣ ಮಾಡಿಕೊಡಲು ಪ್ರಯತ್ನಿಸುವುದು.

2. ಉಡುಗೊರೆ ನೀಡುವ ಸಂದರ್ಭಗಳಲ್ಲಿ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಗುಡಿ ಕೈಗಾರಿಕೆಯ, ಕರಕುಶಲ ವಸ್ತುಗಳನ್ನೇ ನೀಡುವುದು.

3. ಇಂತಹ ವಸ್ತುಗಳಿಗೆ ಕಾವೇರಿ ಎಂಪೋರಿಯಂ, ಮಯೂರ ಹೋಟೆಲ್‌ಗಳು, ಪ್ರವಾಸಿ ತಾಣಗಳಲ್ಲಿ ಮಳಿಗೆಗಳನ್ನು ಒದಗಿಸಿ ಕೊಡುವುದಲ್ಲದೆ, ಅಂತರ್ಜಾಲದಲ್ಲಿ ಮಾಹಿತಿ/ಮಾರಾಟ ತಾಣ ನಿರ್ಮಿಸಿಕೊಡುವುದು.

ಇದರೊಂದಿಗೆ, ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ, ನಮ್ಮ ಅಭಿರುಚಿಯನ್ನು ರೂಪಿಸುವ, ನಮ್ಮ ಕಲಾ ಅಭಿವ್ಯಕ್ತಿಯ ಮಾಧ್ಯಮಗಳನ್ನು ಮರೆಯುವಂತಿಲ್ಲ. ಜಾಗತೀಕರಣದ ದುಷ್ಪರಿಣಾಮಗಳಿಂದ ಇವುಗಳನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರದು.

ಮನರಂಜನಾ ಕ್ಷೇತ್ರ :

1. ಎಲ್ಲಾ ಚಿತ್ರಮಂದಿರಗಳಲ್ಲೂ ಕನಿಷ್ಟ ಇಂತಿಷ್ಟು ವಾರಗಳ ಕಾಲ, ಕನ್ನಡ ಚಿತ್ರಗಳ ಪ್ರದರ್ಶನ ಕಡ್ಡಾಯವೆಂಬ ನಿಯಮ ರೂಪಿಸಲು ಆಡಳಿತ ಯಂತ್ರದ ಮೇಲೆ ಒತ್ತಡ ಹಾಕುವುದು.

2. ಕನ್ನಡ ಚಿತ್ರರಂಗದ ಡಬ್ಬಿಂಗ್‌ ನೀತಿಯ ಮರು ಪರಿಶೀಲನೆ ನಡೆಸಿ, ಪರಭಾಷಾ ಚಿತ್ರಗಳ ಹಾವಳಿ ನಿಯಂತ್ರಿಸುವುದು.

3. ಕನ್ನಡವೇ ಸತ್ಯ- ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಏರ್ಪಡಿಸಿ, ಕನ್ನಡ ಜಾಗೃತಿ ಹೆಚ್ಚಿಸುವುದು.

4. ಕಬ್ಬಿಣದ ಕಡಲೆಯಲ್ಲದ, ಸರಳವಾದ -ಕನ್ನಡ ಸಾಹಿತ್ಯಕ್ಕೆ ಹೆಚ್ಚು ಉತ್ತೇಜನ ನೀಡುವುದು.

5. ಮನೋರಂಜನೆಯ ಎಲ್ಲ ಕ್ಷೇತ್ರಗಳ ಹೊಸ ಪ್ರತಿಭೆಗಳಿಗೆ, ಅವಕಾಶ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಪ್ರತಿಷ್ಠಿತ ಎನಿಸುವ ಸ್ಪರ್ಧೆಗಳನ್ನು ಆಯೋಜಿಸುವುದು.

6. ಕನ್ನಡಿಗರ ಒಡೆತನದಲ್ಲಿ, ಖಾಸಗಿ ದೂರದರ್ಶನ ವಾಹಿನಿಯ ಸ್ಥಾಪನೆಗೆ ಒತ್ತು ನೀಡುವುದು.

7. ಕನ್ನಡ ಚಲನಚಿತ್ರಗಳನ್ನು, ಈಗಿರುವ ಮಲ್ಟಿಪ್ಲಕ್ಸ್‌ಗಳಲ್ಲಿ ಪ್ರದರ್ಶಿಸಲು ಒತ್ತಡ ತರುವುದು.

8. ಕನ್ನಡ ಪ್ರಧಾನ ಬಡಾವಣೆಗಳಾದ... ರಾಜಾಜಿ ನಗರ, ಜಯನಗರ ಇಂತಹ ಬಡಾವಣೆಗಳಲ್ಲಿ ಕನ್ನಡ ಚಿತ್ರಗಳಿಗೇ ಮೀಸಲಾದ ಮಲ್ಟಿಪ್ಲಕ್ಸ್‌ಗಳ ನಿರ್ಮಾಣಕ್ಕೆ ಶ್ರಮಿಸುವುದು.

ಪ್ರವಾಸೋದ್ಯಮ ಕ್ಷೇತ್ರ :

1. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಇರುವ ವಿಪುಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಕೆಲವು ಯೋಜನೆಗಳನ್ನು ಹಮ್ಮಿಕೊಳ್ಳುವುದು.

2. ಪ್ರವಾಸೋದ್ಯಮಕ್ಕೆ ಮುಖ್ಯವಾಗಿ ಬೇಕಾದ ಪ್ರವಾಸಿ ತಾಣಗಳಿಗೆ ಉತ್ತಮ ರಸ್ತೆ ಸಂಪರ್ಕ, ಎಲ್ಲ ಸ್ತರದ ಪ್ರವಾಸಿಗರಿಗೆ ಕೈಗೆಟುಕುವ ಬೆಲೆಯಲ್ಲಿ ಊಟ ಮತ್ತು ವಸತಿ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯ ಖಾಸಗಿ ಬಂಡವಾಳದಾರರೊಂದಿಗೆ ಒಪ್ಪಂದ ಮಾಡಿಕೊಂಡು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸುವುದು. ಪ್ರವಾಸಿ ತಾಣಗಳಲ್ಲಿ ಕನ್ನಡಿಗರಿಗೆ ಪೂರಕ ಉದ್ಯಮಗಳನ್ನು ಸ್ಥಾಪಿಸಲು ಆದ್ಯತೆ ನೀಡುವುದು.

3. ರಾಜ್ಯದ ಪ್ರಖ್ಯಾತ ಪ್ರವಾಸಿತಾಣಗಳಾದ ಜೋಗ ಜಲಪಾತ, ಶಿವನಸಮುದ್ರ, ಪ್ರಸಿದ್ಧ ಗಿರಿಧಾಮಗಳಾದ ಬಾಬಾಬುಡನ್‌ಗಿರಿ/ಕೆಮ್ಮಣ್ಣುಗುಂಡಿ, ಕುದುರೆಮುಖ, ಬಿಳಿಗಿರಿರಂಗನ ಬೆಟ್ಟ, ಮಡಿಕೇರಿ, ತಲಕಾವೇರಿ ಮತ್ತು ಬಂಡೀಪುರ, ನಾಗರಹೊಳೆ, ಮುತ್ತೋಡಿ ವನ್ಯಜೀವಿಧಾಮಗಳು ಹಾಗೂ ಸುಂದರ ಕರಾವಳಿ ತೀರಗಳಾದ ಮಲ್ಪೆ, ಮರವಂತೆ, ಮುರುಡೇಶ್ವರ, ಗೋಕರ್ಣ, ಕಾರವಾರ ಇತ್ಯಾದಿ ಸ್ಥಳಗಳನ್ನು ಹೆಚ್ಚು ಅಭಿವೃದ್ಧಿಪಡಿಸುವುದು.

4. ರಾಜ್ಯದ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಜಗದ್ವಿಖ್ಯಾತ ಹಂಪಿ, ಬೇಲೂರು-ಹಳೇಬೀಡು, ಸೋಮನಾಥಪುರ, ತಲಕಾಡು, ನಂಜನಗೂಡು ದೇವಾಲಯಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವುದು.

5. ಆಧುನಿಕ ತಂತ್ರಜ್ಞಾನವನ್ನು ಬಳಸಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸುವುದು. ಉದಾಹರಣೆಗೆ ಆಂತರ್ಜಾಲದಲ್ಲಿ ಕರ್ನಾಟಕದ ಪ್ರಖ್ಯಾತ ಪ್ರವಾಸಿತಾಣಗಳ ಬಗ್ಗೆ ಚಿತ್ರಸಮೇತ ಮಾಹಿತಿ ಒದಗಿಸುವುದು, ಪ್ರವಾಸಿ ತಾಣಗಳ ವೀಡಿಯೋ ಚಿತ್ರಣ ಮಾಡಿ ಬಹುಮಾದ್ಯಮ ತಂತ್ರಜ್ಞಾನದಿಂದ ಪ್ರಚುರಗೊಳಿಸಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತಮ ಮಾರುಕಟ್ಟೆ ದೊರಕಿಸಿಕೊಡುವುದು.

6. ಪ್ರವಾಸೋದ್ಯಮದಿಂದ ನಮ್ಮ ಸ್ಥಳೀಯ ಜನರಿಗೆ ಹೆಚ್ಚು ಉದ್ಯೋಗಾವಕಾಶ ಹಾಗೂ ವ್ಯಾಪಾರದ ಅವಕಾಶ ಒದಗಿದರೆ ನಮ್ಮ ಜನರ ಜೀವನಮಟ್ಟ ಉತ್ತಮವಾಗುವದರಲ್ಲಿ ಸಂಶಯವಿಲ್ಲ.

ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ- ಕನ್ನಡದ ಆದಿಕವಿ ಪಂಪನನ್ನು ನೆನೆಯುತ್ತ...ಚಿಂತನೆಯನ್ನು ಬೆಳೆಸೋಣವೇ?

English summary
The most general view of globalization is of the dominant power. Banavasi Balaga analyses How to protect Karnataka and Kannada and effects of Globalization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X