ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಯದುಗಿರಿಯ ಬೆಳಕು’ -ಅಮೆರಿಕ ಕನ್ನಡಿಗರ ಇನ್ನೊಂದು ಸಾಹಿತ್ಯ ಕೊಡುಗೆ

By ಅಹಿತಾನಲ
|
Google Oneindia Kannada News

ಅಂದು ಮಾರ್ಚ್‌ 17ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಡಗರವೋ ಸಡಗರ. ಅಲ್ಲಿ ಪುತಿನ ಪ್ರತಿಷ್ಠಾನವು ಕರ್ನಾಟಕದ ಹೆಸರಾಂತ ಸಾಹಿತಿ ಪು. ತಿ. ನರಸಿಂಹಾಚಾರ್ಯರ ಜನ್ಮ ಶತಾಬ್ದಿಯ ಸಮಾರೋಪ ಸಮಾರಂಭವನ್ನು ಹೊಮ್ಮಿಕೊಂಡಿತ್ತು. ದಿನವಿಡೀ ಅಂದು ಹಲವಾರು ಕಾರ್ಯಕ್ರಮಗಳು ನಡೆದವು.

ಬೆಳಗ್ಗೆ 'ಪುತಿನ ಕೃತಿ ಸಮೀಕ್ಷೆ'ಯ ಮೇಲೆ ವಿಚಾರ ಸಂಕಿರಣ ನಡೆದಿತ್ತು. ಅದರಲ್ಲಿ ಡಾ. ಸಿ. ಎನ್‌. ರಾಮಚಂದ್ರನ್‌, ಡಾ. ಎಚ್‌ ವಿ. ರಂಗಾಚಾರ್‌, ಪ್ರೊ. ಓ. ಎಲ್‌. ನಾಗಭೂಷಣಸ್ವಾಮಿ, ಪ್ರೊ. ಎಚ್‌. ಎಸ್‌. ವೆಂಕಟೇಶಮೂರ್ತಿ ಮತ್ತು ಸಿ. ಆರ್‌. ಸಿಂಹ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಮಧ್ಯಾಹ್ನ ಡಾ. ಚಂದ್ರಶೇಖರ ಕಂಬಾರರು ನಿರ್ದೇಶಿಸಿದ 'ಡಾ. ಪುತಿನ ಸಾಕ್ಷ್ಯಚಿತ್ರ' ಪ್ರದರ್ಶನವಾದ ಮೇಲೆ, ಪುತಿನ ಅವರು ರಚಿಸಿದ ಗೀತ ಗಾಯನ ನಡೆಯಿತು. ಅದರಲ್ಲಿ ಸಿ. ಅಶ್ವಥ್‌, ಎಮ್‌. ಡಿ. ಪಲ್ಲವಿ, ಎಮ್‌. ಎಸ್‌. ಶೀಲಾ, ಅರ್ಚನ ಉಡುಪ, ಮಂಗಳಾ, ಅಜಯ್‌ ವಾರಿಯರ್‌, ಮುಂತಾದವರು ಪಾಲ್ಗೊಂಡಿದ್ದರು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಬೇಕಾಗಿದ್ದ ಸಚಿವ ಎಂ. ಪಿ. ಪ್ರಕಾಶ್‌ರ ಗೈರುಹಾಜರಿಯಲ್ಲಿ ಸಾಹಿತಿ ಯು. ಆರ್‌. ಅನಂತಮೂರ್ತಿಯರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಪುತಿನ ಅವರಿಗೆ ಸಂಬಂಧಿಸಿದಂತೆ ಮೂರು ಗ್ರಂಥಗಳೂ ಬಿಡುಗಡೆಯಾದುವು -'ಭೃಂಗ ಮಾರ್ಗ', 'ಯದುಗಿರಿಯ ಬೆಳಕು' ಮತ್ತು 'ಪು.ತಿ.ನ. ನೂರರ ನೆನಪು'. 'ಭೃಂಗ ಮಾರ್ಗ' ಬಿಡುಗಡೆ ಮಾಡಿದ ಅನಂತಮೂರ್ತಿಯವರು ಆ ಗ್ರಂಥದ ಮೇಲಿನ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಮೆಚ್ಚುಗೆಯ ಮಾತುಗಳನ್ನಾಡಿದರು.

'ಯದುಗಿರಿಯ ಬೆಳಕು' ಮತ್ತು 'ಪುತಿನ ನೂರರ ನೆನಪು' ಕೃತಿಗಳನ್ನು ಮಾಜಿ ಸಚಿವ ಪ್ರೊ. ಬಿ ಕೆ. ಚಂದ್ರಶೇಖರ ಅವರು ಬಿಡುಗಡೆ ಮಾಡಬೇಕಿತ್ತು. ಆದರೆ, ಅನಾರೋಗ್ಯದಿಂದಾಗಿ ಅವರು ಅಂದು ಹಾಜರಾಗಿರಲಿಲ್ಲ. ಅವರ ಬದಲಿಗೆ ಮುಖ್ಯ ಅತಿಥಿಗಳಾದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ವಿವೇಕ ರೈಯವರು ಆ ಎರಡು ಕೃತಿಗಳನ್ನು ಬಿಡುಗಡೆ ಮಾಡಿದರು. ಆದರೆ, ಅವರ ಭಾಷಣದಲ್ಲಿ ಆ ಎರಡೂ ಕೃತಿಗಳ ಮೇಲಿನ ಪ್ರಸ್ತಾಪವೇ ಇಲ್ಲದಿದ್ದುದು ಒಂದು ಗಮನಾರ್ಹ ಸಂಗತಿ.

ಇದೇ ಸಮಾರಂಭದಲ್ಲಿ 'ರಾಗ-ರಾಗಿಣಿ', (ನಿರ್ವಹಣೆ: ಡಿ. ಬಾಲಕೃಷ್ಣ) ಮತ್ತು 'ಹೊನಲ ಹಾಡು' (ಸಂಗೀತ: ಸಿ. ಅಶ್ವಥ್‌) ಎಂಬ ಎರಡು ಧ್ವನಿಸುರುಳಿಗಳ ಬಿಡುಗಡೆಯನ್ನು ಡಾ. ವಿಜಯಾ ಅವರು ಬಿಡುಗಡೆ ಮಾಡಿದರು.

ಅಮೆರಿಕನ್ನಡಿಗರ ಕಿರುಕಾಣಿಕೆಯಾದ ಈ ಗ್ರಂಥದ ಬಿಡುಗಡೆಯ ಕಾರ್ಯಕ್ರಮವನ್ನು ಪುತಿನ ಟ್ರಸ್ಟ್‌ ಅವರು ತಮ್ಮ 'ಪುತಿನ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭ'ದಲ್ಲಿ ಸೇರಿಸಿಕೊಂಡು ಅಮೆರಿಕನ್ನಡಿಗರ ಎದೆಯುಬ್ಬುವಂತೆ ಮಾಡಿದ್ದಾರೆ. ಅದಕ್ಕಾಗಿ ಅಮೆರಿಕನ್ನಡಿಗರು ಪುತಿನ ಟ್ರಸ್ಟ್‌ಗೆ ಕೃತಜ್ಞರು.

'ಯದುಗಿರಿಯ ಬೆಳಕು' ಗ್ರಂಥವು ಅಮೆರಿಕನ್ನಡಿಗರ ಸಾಹಿತ್ಯ ಕೊಡುಗೆ. ಪರಕೀಯ ಪರಿಸರದಲ್ಲಿದ್ದು, ದೂರವಿದ್ದರೂ ತಾಯ್ನಾಡಿನ ಮೇಲಿನ ತುಡಿತ ಈ ಗ್ರಂಥದ ಮೂಲಕ ವ್ಯಕ್ತವಾಗಿದೆ. ಪು.ತಿ.ನ. ಜನ್ಮ ಶತಾಬ್ಧಿಯ ಸಂಭ್ರಮದ ಸಡಗರದ ಮಧ್ಯೆಯೂ ಸದ್ದು ಸಡಗರವಿಲ್ಲದೆ ಬಿಡುಗಡೆಯಾದ ಈ ಗ್ರಂಥ, ಸಹೃದಯ ಸಾಹಿತಿಗಳ ಗಮನ ಸೆಳೆಯುವಂತಹ ಒಂದು ಕೃತಿಯೆಂದರೂ ತಪ್ಪಾಗಲಾರದು.

ಈ ಗ್ರಂಥದಲ್ಲಿ ಅಮೆರಿಕದ ಕನ್ನಡಿಗರು ಕನ್ನಡ ಸಾಹಿತ್ಯದ ಒಬ್ಬ ದಿಗ್ಗಜ, ಪು. ತಿ. ನರಸಿಂಹಾಚಾರ್ಯರ ಸಾಹಿತ್ಯದ ಮೇಲಿನ ತಮ್ಮ ಪ್ರಾಮಾಣಿಕ ಅನಿಸಿಕೆಗಳು ವ್ಯಕ್ತವಾಗಿವೆ. ಅಮೆರಿಕನ್ನಡಿಗರಲ್ಲದೆ, ಶ್ರೀಯುತರುಗಳಾದ ಶಿವರುದ್ರಪ್ಪ, ಪ್ರಭುಶಂಕರ, ಅ.ರಾ. ಮಿತ್ರ, ಲಕ್ಶ್ಮಿನಾರಾಯಣ ಭಟ್ಟ, ಶ್ರೀಮತಿ ಎಲ್‌.ಜಿ. ಸುಮಿತ್ರ ಇವರುಗಳ ಆಹ್ವಾನಿತ ಲೇಖನಗಳೂ ಈ ಗ್ರಂಥದಲ್ಲಿವೆ. ಅರ್ಥವತ್ತಾದ, ಸುಂದರ ಮುನ್ನುಡಿಯನ್ನು ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಬರೆದಿದ್ದಾರೆ. ಈ ಗ್ರಂಥದ ಪ್ರಧಾನ ಸಂಪಾದಕರು, ಆಹಿತಾನಲ (ನಾಗ ಐತಾಳ). ಶ್ರೀಮತಿ ಅಲಮೇಲು ಅಯ್ಯಂಗಾರ್‌, ಶ್ರೀಯುತರಾದ ಎಚ್‌. ವಿ. ರಂಗಾಚಾರ್‌ ಮತ್ತು ರಾಜ್‌ ಅಯ್ಯಂಗಾರ್‌ ಸಂಪಾದಕ ಮಂಡಳಿಯಲ್ಲಿದ್ದು ದುಡಿದಿದ್ದಾರೆ.

ಬೆಂಗಳೂರಿನ 'ಅಭಿನವ' ಮತ್ತು ಅಮೆರಿಕದ 'ಸಾಹಿತ್ಯಾಂಜಲಿ' ಈ ಗ್ರಂಥದ ಜಂಟಿ ಪ್ರಕಾಶಕರುಗಳು. ಇದು 'ಸಾಹಿತ್ಯಾಂಜಲಿ'ಯ ಚೊಚ್ಚಲು ಪ್ರಕಾಶನ.
ಈ ಗ್ರಂಥವನ್ನು ಕೊಳ್ಳಲು ಇಚ್ಛಿಸುವವರು (ಬೆಲೆ: 10 ಡಾಲರು) ದಯವಿಟ್ಟು ಈ ಕೆಳಗಿನ ಈ-ಅಂಚೆಯನ್ನು ಸಂಪರ್ಕಿಸಬೇಕಾಗಿ ಕೋರಿಕೆ:

English summary
Yadugiriya Belaku, Pu.Thi.Na. Noorara Nenapu, Bhurnga marga - books released in Bangalore on March.16. Function report by Naga Aithal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X