ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಿಗಳಿಗೊಂದು ಮನೆಯ ಕಟ್ಟಿಕೊಟ್ಟೆವು!

|
Google Oneindia Kannada News

Sparrows built a SPA in my home
* ರಘುನಾಥ ಚ. ಹ

ಮನೆಯ ಉತ್ತರಕ್ಕೆ ಸಮುದ್ರ, ದಕ್ಷಿಣಕ್ಕೆ ಮರುಭೂಮಿ, ಪೂರ್ವಕ್ಕೆ ಬೆಟ್ಟ , ಪಶ್ಚಿಮಕ್ಕೆ ಕಾಡು !

ಆಗಷ್ಟೇ ಎದ್ದುನಿಲ್ಲುತ್ತಿದ್ದ ಊರಾಚೆಯ ಬಡಾವಣೆಯಲ್ಲಿ ಕಟ್ಟಿದ ಹೊಸಮನೆಯನ್ನು ನಾವು ತಮಾಷೆ ಮಾಡಿಕೊಳ್ಳುತ್ತಿದ್ದುದು ಹೀಗೆ. ನಮ್ಮ ವರ್ಣನೆಯಲ್ಲೂ ಒಂದಿಷ್ಟು ಸತ್ಯವಿತ್ತು : ಸುತ್ತಲ ಪ್ರದೇಶಕ್ಕೆ ಜೀವವುಣಿಸುತ್ತಿದ್ದ ಸಣ್ಣಕೆರೆ ನಮ್ಮ ಪಾಲಿಗೆ ಸಮುದ್ರವಾಗಿತ್ತು , ಮನೆಯ ಪಕ್ಕದ ಬಂಡೆಕಲ್ಲುಗಳ ಪ್ರದೇಶ ಬೆಟ್ಟವಾಗಿತ್ತು , ಇನ್ನೊಂದು ಕಡೆಯ ತೆಂಗಿನ ತೋಟ ನಮ್ಮ ಪಾಲಿನ ಕಾಡು, ಮನೆಯ ಹಿಂಭಾಗದ ಜಾಲಿಗಿಡಗಳ ಬಯಲು ಮರುಭೂಮಿಯಲ್ಲದೆ ಮತ್ತೇನು ?

ಬಯಲಿಗೆ ದೃಷ್ಟಿಬೊಟ್ಟಿನಂತೆ ಅಲ್ಲೊಂದು ಇಲ್ಲೊಂದು ಮನೆಗಳು. ನಮ್ಮ ಮನೆ ಅಂತದೊಂದು ದೃಷ್ಟಿಬೊಟ್ಟು. 'ಬೆಟ್ಟದುದ್ದಕೂ ಬರೆದ ನೀರ ಎಳೆಯಂತೆ ಬಯಲಿನಲ್ಲಿ ಮೂಡಿದ ಹೆಜ್ಜೆಜಾಡಿನಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಹಳ್ಳಿಯ ದಾರಿಯ ಪಥಿಕರು, ದನಕರು ಕುರಿಗಳು ಹಾಗೂ ಅವುಗಳನ್ನು ಮೇಯಿಸಲು ಬಂದ ಚಿಳ್ಳೆಪಿಳ್ಳೆ- ಇವರುಗಳನ್ನು ನೋಡುತ್ತ ಹಗಲನ್ನು ಹೇಗಾದರೂ ಕಳೆಯಬಹುದು; ರಾತ್ರಿಯನ್ನು ಕಳೆಯುವುದು ಹೇಗೆ ? ಮನೆಯ ಹೊರಗೆ ಹುಳುಹುಪ್ಪಡಿಗಳ ಕಾಟ. ಒಳಗಿದ್ದರೂ ನೆಮ್ಮದಿಯಿಲ್ಲ ; ಊರ ಹೊಕ್ಕಳಲ್ಲಿನ ಕೋಟೆಗಳಂಥ ಮನೆಗಳಿಗೇನೆ ಕೇರು ಮಾಡದೆ ಕಳ್ಳರು ನುಗ್ಗುವಾಗ, ಈ ಬಯಲಿನ ಮನೆಯನ್ನು ಬಿಟ್ಟಾರೆಯೆ?" ಎನ್ನುವ ಭಯ ಅಪ್ಪನಿಗೆ. ಗಂಡಸಾದ ಅಪ್ಪನೇ ಅಂಜುವಾಗ ಅಮ್ಮ ಅಂಜದಿರಲಾದೀತೆ ? ಈ ಭಯದ ನಡುವೆಯೂ ಒಂದು ಧೈರ್ಯವಿತ್ತು . ಅಪ್ಪ ಅಮ್ಮ ಸಂಪಾದಿಸಿದ ಚೂರುಪಾರು ಬಂಗಾರ ನಗದೆಲ್ಲ ಇಟ್ಟಿಗೆ ಕಲ್ಲು ಸಿಮೆಂಟುಗಳಾಗಿ 'ಮನೆ"ಯ ರೂಪ ತಳೆದಿರುವಾಗ, ಕಳ್ಳರು ಮನೆಗೆ ನುಗ್ಗಿದರೂ ಏನನ್ನು ಹೊತ್ತಾಯ್ದಾರು ಎನ್ನುವ ತರ್ಕವದು. ಆದರೆ, ಅಪ್ಪ ಇಷ್ಟಕ್ಕೇ ಸಮಾಧಾನ ಮಾಡಿಕೊಳ್ಳುವ ಜೀವವಲ್ಲ ; ಏನೂ ಸಿಗಲಿಲ್ಲ ಎನ್ನುವ ಕೋಪಕ್ಕೆ ಮನೆಯವರಿಗೆ ಚಚ್ಚಿದರೆ ಎಂದು ಆತಂಕಪಡುತ್ತಿದ್ದರು.

ಆ ಮನೆ ನಮ್ಮ ಪಾಲಿಗೆ ಬರಿ ಮನೆಯಷ್ಟೇ ಆಗಿರಲಿಲ್ಲ . ಅಪ್ಪನೊಂದಿಗೆ ಸಪ್ತಪದಿ ತುಳಿದ ಅಮ್ಮನ ನಲವತ್ತು ವರ್ಷಗಳ ಪ್ರತಿದಿನದ ಕನವರಿಕೆಯ ಸಾಕಾರ ರೂಪವಾಗಿತ್ತು. ಮೇಷ್ಟ್ರು ಚಾಕರಿಯಿಂದ ನಿವೃತ್ತರಾದ ಅಪ್ಪ , ತಮ್ಮ ಈವರೆಗಿನ ಉಳಿಕೆಯನ್ನೆಲ್ಲ ಸುರಿದು- ಗೋಡೆಗಳನ್ನು ಹಾಗೂ ಕಾಂಕ್ರೀಟ್‌ ಸೂರನ್ನು ನಿಲ್ಲಿಸಿದ್ದರು. ಉಳಿದ ಬಾಗಿಲು, ಕಿಟಕಿ, ಸುಣ್ಣ , ನೆಲಕ್ಕೆ ಕಲ್ಲು ಇತ್ಯಾದಿ ಹೆಸರಲ್ಲಿ ಮೈತುಂಬಾ ಸಾಲ ಮಾಡಿದ್ದರು. ಮನೆಯೆಂದರೇನು ತಮಾಷೆಯಾ ? (ಎಷ್ಟೆಲ್ಲಾ ಕಷ್ಟದ ನಂತರ ಸ್ವಂತ ಗೂಡೆಂಬ ನೆಮ್ಮದಿಯ ಮನೆಗೆ ಸೇರಿಕೊಂಡರೆ, ನಿದ್ದೆಯಲ್ಲಿ ಬೀಳುವುದು ಸಾಲದ ದುಸ್ವಪ್ನಗಳು ಮಾತ್ರ ಎನ್ನುವುದು ಬೇರೆಯ ವಿಷಯ).

ಈ ಮನೆಯಲ್ಲಿ ಸಕಲ ಸುಖಗಳೂ ನೆಲೆಗೊಳ್ಳಲಿ ಎನ್ನುವ ಆಸೆಯಿಂದ ಅಮ್ಮ ತನಗೆ ಗೊತ್ತಿರುವ ಮತ್ತು ಎಟುಕುವ ಎಲ್ಲ ಶಾಸ್ತ್ರಪೂಜೆಗಳನ್ನೂ ಮಾಡಿಸಿದ್ದರು. ಗೃಹಪ್ರವೇಶ ಶಾಸ್ತ್ರ ನಡೆಸಿಕೊಟ್ಟ ಅರ್ಚಕ, ಮಂತ್ರಿಸಿದ ಕುಂಬಳಕಾಯಿಯನ್ನು ಹಗ್ಗದ ಬಲೆಯಲ್ಲಿ ಮಲಗಿಸಿ ತೆರೆದ ಅಂಗಳದ ಸೂರಿನ ದೇವಮೂಲೆಯಲ್ಲಿನ ಕೊಕ್ಕೆಗೆ ಕಟ್ಟಿಸಿದ್ದರು.

ಅಣ್ಣನಿಗೆ ಮದುವೆಯಾಗಿ ಅತ್ತಿಗೆ ಮನೆ ತುಂಬಿದ ದಿನಗಳವು. ಮನೆ ತುಂಬಿದ ಅತ್ತಿಗೆ ಸ್ವಲ್ಪ ದಿನಗಳಲ್ಲಿ ಒಡಲನ್ನೂ ತುಂಬಿಕೊಂಡಳು. ತವರಿನಲ್ಲಿ ಕೂಡ ಹೊಲಕ್ಕೆ ಸಮೀಪದ ಮನೆಯಲ್ಲಿ ಇದ್ದ ಅತ್ತಿಗೆಗೆ ಈ ಬಯಲು ಬೋಳು ಅಂತಲೇನೂ ಅನ್ನಿಸುತ್ತಿರಲಿಲ್ಲ . ಆದರೆ, ನಾವು ಸಂತೆಯಲೊಂದು ಮನೆಯ ಮಾಡಿಕೊಂಡು ಬದುಕಿದ್ದವರು!

ಹಗಲು ಇರುಳಾಗುತ್ತ ಇರುಳು ಕಳೆದು ಹಗಲಾಗುತ್ತ ಮನೆಗೆ ನಾವು ಹಳಬರಾಗಿ, ಬಯಲಿನೊಂದಿಗೆ ಸ್ನೇಹ ಕುದುರಿ, ಆ ಬಯಲಿನಲ್ಲಿ ಅಪೂರ್ವವಾದ ಸೌಂದರ್ಯ ಕಾಣತೊಡಗಿ, ಮುಂಜಾನೆ ಸಂಜೆಯ ತಂಪುಗಾಳಿ- ಹಕ್ಕಿಗಳ ಕಿಚಿಕಿಚಿ- ಬಯಲ ಮೌನದ ಪ್ರಶಾಂತತೆ- ಇವೆಲ್ಲವುಗಳನ್ನು ಆಸ್ವಾದಿಸತೊಡಗಿದೆವು. ಒಂಟಿ ಒಂಟಿಯಾಗಿರುವುದೇ ಸುಖ ಎಂದು ಅನ್ನಿಸತೊಡಗಿದರೂ, ಪಕ್ಕದಲ್ಲೊಂದು ಮನೆಯಿರಬೇಕಿತ್ತು , ಆಸರಿಕೆ ಬೇಸರಿಕೆಗೆ ನೆರೆಹೊರೆ ಬೇಕಿತ್ತು ಎಂದು ಅಮ್ಮನಿಗೆ ಆಗಾಗ ಅನ್ನಿಸುತ್ತಿತ್ತು .

ಬಯಲ ತುಂಬ ಬಿಸಿಲು ಚೆಲ್ಲಿದ ಒಂದು ಮಧ್ಯಾಹ್ನ , ಅಂಗಳದಲ್ಲಿ ಅಮ್ಮ ಅಕ್ಕಿ ಆರಿಸುತ್ತ ಕುಳಿತಿದ್ದಳು. ಆಗ ಕೇಳಿಬಂದಿದ್ದು ಕಿಚಿಕಿಚಿ ಚಿಂವ್‌ ಚಿಂವ್‌ ಚಿಂವ್‌. ತಲೆಯೆತ್ತಿ ನೋಡಿದರೆ ಜೋಡಿ ಗುಬ್ಬಚ್ಚಿಗಳು. ಅಮ್ಮನಿಂದ ದೂರಬಿದ್ದಿದ್ದ ಅಕ್ಕಿಕಾಳುಗಳನ್ನು ಕಚ್ಚಿಕೊಂಡ ಗುಬ್ಬಚ್ಚಿಗಳು ಪುರ್ರನೆ ಹಾರಿ ಸೂರಿನ ಕುಂಬಳ ಕಾಯಿಯ ಮೇಲೆ ಹೋಗಿ ಕೂತವು. ಅಮ್ಮನಿಗೆ ಅನುಮಾನ ಬಂದು ಕುಂಬಳಕಾಯಿಯನ್ನು ಗಮನವಿಟ್ಟು ನೋಡಿದಳು. ಅಲ್ಲಿತ್ತು ಗುಬ್ಬಚ್ಚಿಗಳ ಸಂಸಾರ! ಸೊರಗಿದ ಕುಂಬಳಕಾಯಿಯ ಮೇಲ್ಭಾಗ ದೊಗರಾಗಿ, ಆ ದೊಗರಲ್ಲಿ ಹುಲ್ಲಿನೆಸಳುಗಳನ್ನು ಪೇರಿಸಿದ ಗುಬ್ಬಚ್ಚಿ ಜೋಡಿ ಕುಂಬಳಕಾಯಿಯನ್ನು ಮನೆಯಾಗಿಸಿಕೊಂಡಿದ್ದವು. ಅಮ್ಮನಿಗೆ ಖುಷಿಯೋ ಖುಷಿ. ಅವತ್ತು ಮನೆಯಲ್ಲೆಲ್ಲಾ ಗುಬ್ಬಚ್ಚಿಗಳ ಸಂಸಾರದ್ದೇ ಮಾತು. ಎಮ್ಮ ಮನೆಯಂಗಳದಿ ಗುಬ್ಬಚ್ಚಿಗಳು ಸಂಸಾರ ಹೂಡಿ ಅದೆಷ್ಟು ದಿನಗಳಾಗಿದ್ದವೋ ಏನೋ. ಅಂಗಳದಲ್ಲಿ ಒಣ ಹುಲ್ಲು , ಹತ್ತಿ , ಚಿಂದಿಬಟ್ಟೆ ಆಗಾಗ ಕಾಣಿಸಿಕೊಳ್ಳುತ್ತಿದ್ದರೂ ಕುಂಬಳಕಾಯಿಯಲ್ಲಿ ಹಕ್ಕಿಗಳ ಸಂಸಾರವಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ .

ಸ್ವಲ್ಪ ದಿನಗಳ ನಂತರ ಮನೆಯವರ ಮುಖ, ವಾಸನೆ ಪರಿಚಿತವಾಗಿ ಗುಬ್ಬಚ್ಚಿಗಳು ತಮ್ಮ ಭಯ ಅಂಜಿಕೆ ತೊರೆದವು. ಅಮ್ಮ ಅಕ್ಕಿಯನ್ನೋ ಗೋಧಿಯನ್ನೋ ಬೇಳೆಯನ್ನೋ ಸ್ವಚ್ಛ ಮಾಡುತ್ತಿದ್ದರೆ, ಗುಬ್ಬಚ್ಚಿಗಳು ನಿರ್ಭಯದಿಂದ ಬಂದು ಕಾಳು ಕಚ್ಚಿಕೊಂಡು ಹೋಗುತ್ತಿದ್ದವು. ಅಪ್ಪನಿಗೂ ಗುಬ್ಬಚ್ಚಿಗಳನ್ನು ಕಂಡರೆ ಪ್ರೀತಿ. ಅಪ್ಪ ನುಚ್ಚು ತುಂಬಿದ ಬಟ್ಟಲನ್ನು ಗುಬ್ಬಚ್ಚಿಗಳಿಗೆ ಕಾಣುವಂತೆ ಕಿಟಕಿಯಲ್ಲಿಟ್ಟರೆ, ಅಮ್ಮ ಪ್ಲಾಸ್ಟಿಕ್‌ ಬಟ್ಟಲಲ್ಲಿ ಕುಡಿಯಲು ನೀರಿಡುತ್ತಿದ್ದಳು. ಅಮ್ಮ ನೀರಿಡುವುದು ಮರೆತರೆ ಗುಬ್ಬಚ್ಚಿಗಳು ಕಿಚಿಕಿಚಿ ಮಾಡುವುದನ್ನು ಕಲಿತುಕೊಂಡವು. ಅವುಗಳಿಗೆ ಜಂಭ ಬಂತು ನೋಡು ಎಂದು ಅಪ್ಪ ಅಣ್ಣ ತಮಾಷೆ ಮಾಡುತ್ತಿದ್ದರು.

ಚೊಚ್ಚಿಲ ಹೆರಿಗೆಗಾಗಿ ಅತ್ತಿಗೆ ತವರಿಗೆ ಹೊರಟಾಗ, 'ನೀನು ಮಗುವಿನೊಂದಿಗೆ ಬರುವ ಹೊತ್ತಿಗೆ ಗುಬ್ಬಚ್ಚಿಗಳ ಸಂಸಾರವೂ ಬೆಳೆದಿರುತ್ತದೆ" ಎಂದು ಅಮ್ಮ ಹೇಳಿದ್ದಳು. ಮನೆಯಲ್ಲಿ ಪಶುಪಕ್ಷಿಗಳ ಸಂತಾನ ವೃದ್ಧಿಸುವುದು ಆ ಮನೆಗೆ ಒಳ್ಳೆಯದೆನ್ನುವ ನಂಬಿಕೆಯಿದೆ. ಅಮ್ಮನ ನಿರೀಕ್ಷೆಯಂತೆ, ಅಲ್ಲಿ ಅತ್ತಿಗೆಗೆ ಹೆರಿಗೆಯಾಯಿತು, ಇಲ್ಲಿ ಕುಂಬಳದ ಗೂಡಿನಲ್ಲಿ ಗುಬ್ಬಚ್ಚಿ ಮರಿಗಳ ಚಿಂವ್‌ ಚಿಂವ್‌ ಕೂಡ ತುಂಬಿಕೊಂಡಿತು. ಹಸಿವಿನಿಂದ ಮರಿಗಳು ಅತ್ತಾಗಲೆಲ್ಲ ಅಮ್ಮನಿಗೆ ಮೊಮ್ಮಗಳ ನೆನಪು. ಕಾಳುಕಡಿಯನ್ನು ಗುಬ್ಬಚ್ಚಿಗಳು ಕಚ್ಚಿತಂದು ಗುಟುಕು ನೀಡುವಾಗ ಅವಳಿಗೆ ಏನೆಲ್ಲ ನೆನಪಾಯಿತೊ ?

ಒಂದು ದಿನ, ಅದ್ಯಾವ ಕ್ಷಣದಲ್ಲೋ ಗುಬ್ಬಚ್ಚಿಗಳು ಗೂಡುಬಿಟ್ಟು ಹಾರಿದ್ದವು. ಮರಿಗಳ ರೆಕ್ಕೆ ಬಲಿತಿತ್ತು . ಮಡಿಲಿನಂತಿದ್ದ ಗೂಡನ್ನು , ಕಾಳುನೀರು ಕೊಟ್ಟ ಅಮ್ಮನನ್ನು ತೊರೆದು ಹೋಗಲು ಗುಬ್ಬಚ್ಚಿಗಳಿಗೆ ಹೇಗೆ ಸಾಧ್ಯವಾಯಿತು ?

***

ಗುಬ್ಬಚ್ಚಿಗಳೊಂದಿಗಿನ ನಂಟು ನಮಗೆ ಹೊಸತೇನೂ ಅಲ್ಲ . ಪಟ್ಟನಾಯಕನಹಳ್ಳಿ ಎನ್ನುವ ಊರಿನಲ್ಲಿ ಅಪ್ಪ ಮೇಷ್ಟ್ರಾಗಿದ್ದರು. ಅಲ್ಲಿ ನಾವು ಬಾಡಿಗೆಗಿದ್ದ ಮನೆಯ ಹಜಾರದ ಸೂರಿನ ಜಂತೆಗಳ ಸಂದಿಯಲ್ಲೂ ಗುಬ್ಬಚ್ಚಿಗಳು ಮನೆ ಮಾಡಿದ್ದವು. ಯಾರು ನೋಡಿದರೂ ಅಸೂಯೆ ಪಡಬಲ್ಲಂಥ ಕೈತೋಟವೊಂದನ್ನು ಮನೆಯ ಮುಂದೆ ರೂಪಿಸಿದ್ದೆವು. ಆ ತೋಟದಲ್ಲಿ ನಾಲ್ಕಾರು ಕೆಂಕೇಸರಿ ಮರಗಳೂ ಇದ್ದವು. ಮನೆಯ ಸೂರು ಬೇಜಾರಾದರೆ ಕೆಂಕೇಸರಿ ಮರ, ಕೆಂಬೆ ರೆಂಬೆ ಹಳತನ್ನಿಸಿದರೆ ಮನೆಯ ಸೂರು- ಹೀಗೆ ಗುಬ್ಬಚ್ಚಿಗಳಿಗೆ ಎರಡು ಮನೆ. ಒಂದಕ್ಕೂ ಬಾಡಿಗೆಯಿಲ್ಲ ಸುಂಕವಿಲ್ಲ .

ಗುಬ್ಬಚ್ಚಿಗಳಲ್ಲೊಂದು ವಿಚಿತ್ರ ಅಸ್ಪೃಶ್ಯತೆಯ ಆಚರಣೆಯಿದೆ. ಅಪ್ಪ ಹೇಳಿದ ಪ್ರಕಾರ- ಯಾವುದಾದರೂ ಗುಬ್ಬಚ್ಚಿಯನ್ನು ಮನುಷ್ಯರು ಮುಟ್ಟಿದರೆ, ಆ ಗುಬ್ಬಚ್ಚಿಯನ್ನು ಇತರ ಗುಬ್ಬಚ್ಚಿಗಳು ತಮ್ಮ ಗುಂಪಿನಿಂದ ದೂರವಿಡುತ್ತವೆ. ಒಂಟಿ ಗುಬ್ಬಚ್ಚಿ ಎಷ್ಟು ರೋದಿಸಿದರೂ ಅದು ಅರಣ್ಯರೋದನವೇ. ನಮ್ಮ ಮನೆಯ ಹಜಾರದಲ್ಲಿ ವಾಸವಾಗಿದ್ದ ಗುಬ್ಬಚ್ಚಿ ಮರಿಗಳು ಕೆಲವೊಮ್ಮೆ ಜಂತೆಯಿಂದ ಜಾರಿ ನೆಲಕ್ಕೆ ಬೀಳುತ್ತಿದ್ದವು. ಆಗ ಆ ಮರಿಗಳನ್ನು ಮುಟ್ಟದಿರುವಂತೆ ಅಮ್ಮ ಎಚ್ಚರಿಸುತ್ತಿದ್ದಳು. ನೆಲಕ್ಕೆ ಬಿದ್ದ ಮರಿ ಅತ್ತೂ ಅತ್ತೂ ಅಳುತ್ತಿತ್ತು . ನೆಲಕ್ಕೆ ಬಿದ್ದ ಮರಿಯನ್ನು ಗುಬ್ಬಪ್ಪ ಗುಬ್ಬಮ್ಮ ಬಹು ಕಷ್ಟದಿಂದ ಗೂಡು ಸೇರಿಸುತ್ತಿದ್ದವು.

ನಮ್ಮ ಮನೆಯ ಪಕ್ಕದಲ್ಲೇ ಇನ್ನೊಂದು ಮನೆಯಿತ್ತು . ಎರಡೂ ಮನೆಗಳಿಗೂ ಗಡಿ ಗೋಡೆಯಿಲ್ಲದ ಒಂದೇ ಹಜಾರ. ಆ ಹಜಾರದಲ್ಲಿಯೇ ಗುಬ್ಬಚ್ಚಿಗಳ ಚಿಂವ್‌ ಚಿಂವ್‌. ಒಂದು ಬೇಸಗೆಯಲ್ಲಿ , ಸುತ್ತಮುತ್ತಲ ಹಳ್ಳಿಗಳ ನಾಲ್ಕೈದು ಹುಡುಗರು ಪಕ್ಕದ ಮನೆಗೆ ಬಾಡಿಗೆಗೆ ಬಂದರು. ಅವರು ಬಂದುದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿಕ್ಕೆ. ಸುತ್ತಮುತ್ತಲಿನ ಏಳೆಂಟು ಹಳ್ಳಿಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಕ್ಕೆ ಪಟ್ಟನಾಯಕನಹಳ್ಳಿಗೇ ಬರಬೇಕಿತ್ತು . ಪರೀಕ್ಷೆಯೆಂಬುದು ದೊಡ್ಡ ಸಂಭ್ರಮವಾಗಿದ್ದ ದಿನಗಳವು. ಹೆಚ್ಚು ಕಮ್ಮಿ ಸಾವಿರ ಸಂಖ್ಯೆಯಲ್ಲಿ ಹುಡುಗ ಹುಡುಗಿಯರು ಪರೀಕ್ಷೆ ಬರೆಯಲು ಬರುತ್ತಿದ್ದರು. ಪರೀಕ್ಷೆಗೆ ತಿಂಗಳಿರುವಾಗಲೇ ಬಂದು, ರೂಮೋ ಮನೆಯೋ ಬಾಡಿಗೆಗೆ ಹಿಡಿದು ಪಟ್ಟಾಗಿ ಕೂತು ಓದುವವರೂ ಇದ್ದರು. ಇನ್ನು ಪರೀಕ್ಷೆಯ ಸಮಯದಲ್ಲಂತೂ ಹಿತೈಷಿಗಳು ಆಗಮಿಸಿ- ಅಡುಗೆ ಮಾಡುವುದರಿಂದ ಹಿಡಿದು, ನಕಲುಚೀಟಿ ಸಿದ್ಧಪಡಿಸಿಕೊಡುವವರೆಗೆ ಸಾಧ್ಯವಿರುವ ಎಲ್ಲ ಸಹಾಯವನ್ನೂ ಮಾಡುತ್ತಿದ್ದರು. ಪರೀಕ್ಷೆಯ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆಯೂ ಇರುತ್ತಿತ್ತು . ಇಂತಹ ದಿನಗಳಲ್ಲಿ ಪರೀಕ್ಷೆಗೆ ಓದಲಿಕ್ಕೆಂದು ನಮ್ಮ ಪಕ್ಕದ ಮನೆಯಲ್ಲಿ ಠಿಕಾಣಿ ಹೂಡಿದ ಹುಡುಗರು ಗುಬ್ಬಚ್ಚಿಗಳ ಅವಿಭಕ್ತ ಕುಟುಂಬದಲ್ಲಿ ಅಲ್ಲಕಲ್ಲೋಲ ಏಳಿಸಬೇಕೆ ?

ಹಜಾರದ ಜಂತೆಯಲ್ಲಿ ಬೆಚ್ಚಗೆ ಮಲಗುತ್ತಿದ್ದ ಗುಬ್ಬಚ್ಚಿಗಳನ್ನು ಆ ಹುಡುಗರು ರಾತ್ರಿಯ ಹೊತ್ತು ಹಿಡಿದು ತಿನ್ನತೊಡಗಿದರು. ಹೀಗೇ ಎರಡು ಮೂರು ರಾತ್ರಿ ಗುಬ್ಬಚ್ಚಿಗಳ ಬೇಟೆ ನಡೆಯಿತು. ಹುಡುಗರ ಕೈ ಜಂತೆಗೆ ಬಂದಾಗಲೆಲ್ಲ ಮೊದ್ದು ಗುಬ್ಬಚ್ಚಿಗಳು ಗಂಟಲು ಒಡೆದುಹೋಗುವಂತೆ ಭಯದಿಂದ ಚೀರುತ್ತಿದ್ದವು. ಮುಟ್ಟಿದರೆ ಸವೆಯುತ್ತವೆ ಅನ್ನುವಂತಿರುವ ಮುದ್ದು ಗುಬ್ಬಚ್ಚಿಗಳನ್ನು ತಿನ್ನಲಿಕ್ಕೆ ಹುಡುಗರಿಗೆ ಮನಸ್ಸಾದರೂ ಹೇಗೆ ಬರುತ್ತದೆ ಎಂದು ಶಪಿಸುತ್ತಿದ್ದೆವು. ಕೊನೆಗೆ ಆ ಹುಡುಗರನ್ನು ಅಪ್ಪ ಬೈದರು. ಮೇಷ್ಟ್ರಲ್ಲವಾ ? ಹುಡುಗರ ಹಕ್ಕಿ ಶಿಕಾರಿ ಬಂದಾಯಿತು. ಹುಡುಗರು ಗುಬ್ಬಚ್ಚಿಯನ್ನು ಸುಟ್ಟು ತಿನ್ನುವ ದೃಶ್ಯ ಕಲ್ಪಿಸಿಕೊಂಡಾಗ ವಾಕರಿಕೆ ಬರುತ್ತಿತ್ತು .

***

ಕುಂಬಳಕಾಯಿ ಗೂಡಿನಿಂದ ಗುಬ್ಬಚ್ಚಿಗಳು ರಾತ್ರೋರಾತ್ರಿ ನಾಪತ್ತೆಯಾಗಿದ್ದವಲ್ಲ ; ಆ ಗುಬ್ಬಚ್ಚಿಗಳು ಮತ್ತೆ ವಾಪಸ್ಸು ಬರಬೇಕೆ ? ಬಂದುದು ಆ ಗುಬ್ಬಚ್ಚಿಗಳೋ ಅಥವಾ ಬೇರೆ ಗುಬ್ಬಚ್ಚಿಗಳೊ ಯಾರಿಗೆ ಗೊತ್ತು . ಅಮ್ಮ ಮಾತ್ರ ಅವೇ ಗುಬ್ಬಚ್ಚಿಗಳು, ಮತ್ತೆ ಮರಿ ಮಾಡಲಿಕ್ಕೆ ಬಂದಿವೆ ಎಂದಳು. ಈ ನಡುವೆ ಕುಂಬಳಕಾಯಿ ಪೂರ್ತಿ ಸೊರಗಿ ಹೋಗಿತ್ತು. ಜೋರಾಗಿ ಗಾಳಿಬೀಸಿದರೆ ಹಕ್ಕಿಗೂಡು ದಿಕ್ಕಾಪಾಲಾಗುವ ಭಯವಿತ್ತು . ಗುಬ್ಬಚ್ಚಿಗೊಂದು ಭದ್ರವಾದ ಮನೆ ಕಟ್ಟಿ ಕೊಡುವ ಐಡಿಯಾ ಅಪ್ಪನಿಗೆ ಹೊಳೆಯಿತು. ಇಂಥ ತಂತ್ರಗಾರಿಕೆಯ ಕೆಲಸದಲ್ಲಿ ನನ್ನ ತಮ್ಮನಿಗೆ ಯಾವತ್ತೂ ಆಸಕ್ತಿ ಜಾಸ್ತಿ . ಅಗಲ ಬಾಯಿಯ ಪಾತ್ರೆಯಾಂದರ ತುಟಿಗಳಲ್ಲಿ ರಂಧ್ರ ಮಾಡಿ, ಆ ರಂಧ್ರಗಳಲ್ಲಿ ತಂತಿ ತೂರಿಸಿದ. ಆ ತೊಟ್ಟಿಲಂತಹ ಪಾತ್ರೆಯನ್ನು ಕುಂಬಳಕಾಯಿಯಿದ್ದ ಸ್ಥಳದಲ್ಲಿ ಕಟ್ಟಿದ. ಪಾತ್ರೆಯ ತಳದಲ್ಲಿ ಹಳೆಯ ಬಟ್ಟೆಗಳ ಹಾಸಿಗೆಯನ್ನು ಅಮ್ಮ ಸಿದ್ಧಪಡಿಸಿದ್ದಳು. ಪಾತ್ರೆಯಲ್ಲಿ ಒಂದಷ್ಟು ಕಾಳುಗಳೂ ಇದ್ದವು. ಆದರೆ, ಹೊಸಮನೆಯನ್ನು ಒಪ್ಪಿಕೊಳ್ಳಲು ಗುಬ್ಬಚ್ಚಿಗಳು ಸಿದ್ಧವಿರಲಿಲ್ಲ . ಕುಂಬಳಕಾಯಿ ಮನೆ ಕಾಣದೆ, ಆ ಸ್ಥಳದಲ್ಲಿ ಕಾಣಿಸಿದ ನಾಜೂಕು ಮನೆಯ ಬಗ್ಗೆ ಅನುಮಾನ ತಾಳಿ ಕಿರುಚಿಕೊಳ್ಳತೊಡಗಿದವು. ಸ್ವಲ್ಪ ಹೊತ್ತು ರೋದಿಸಿದ ಗುಬ್ಬಿಗಳು ಮತ್ತೆ ಬಯಲಿಗೆ ಹೊರಟುಹೋದವು. ಮರುದಿನವೂ ವಾಪಸ್ಸು ಬರಲಿಲ್ಲ . ಕುಂಬಳಕಾಯಿಯನ್ನು ಕೀಳುವ ದುರ್ಬುದ್ಧಿ ಯಾಕೆ ಬಂತೋ ಎಂದು ಅಮ್ಮ ಎಲ್ಲರ ಮೇಲೂ ರೇಗಿದಳು. ನಮ್ಮ ಒಳ್ಳೆಯತನವನ್ನು ಅರ್ಥ ಮಾಡಿಕೊಳ್ಳದ ಗುಬ್ಬಚ್ಚಿಗಳ ಬಗ್ಗೆ ಅಪ್ಪನಿಗೂ ತಮ್ಮನಿಗೂ ಸಿಟ್ಟು ಬಂದಿತ್ತು.

ಮುನಿಸಿಕೊಂಡು ದೂರವಾದ ಮಕ್ಕಳು ವಾಪಸ್ಸಾದಂತೆ ಮೂರು ದಿನಗಳ ನಂತರ ಗುಬ್ಬಚ್ಚಿಗಳು ಮರಳಿ ಮನೆಗೆ ಬಂದವು. ಆಗ ನೋಡಬೇಕಿತ್ತು ಅಮ್ಮನ ಮುಖದಲ್ಲಿನ ನೆಮ್ಮದಿ !

***

ಕೇವಲ ಐದಾರು ವರ್ಷಗಳ ಅಂತರದಲ್ಲೇ ಊರು ಬದಲಾಗಿದೆ. ಕಾಡು, ಸಮುದ್ರ, ಮರುಭೂಮಿ, ಬೆಟ್ಟದ ತಮಾಷೆ ಈಗ ನಡೆಯುವುದಿಲ್ಲ . ಅಣ್ಣನ ಮಗಳು ಶಾಲೆಗೆ ಹೋಗುತ್ತಿದ್ದಾಳೆ ; ಮಗ ನಡೆಯುವುದನ್ನು ಕಲಿಯುತ್ತಿದ್ದಾನೆ. ಅಮ್ಮನ ನೆರೆಹೊರೆಯ ಆಸೆ ಪೂರೈಸಿದೆ. ಆದರೆ, ಬಯಲ ಚಿತ್ರಗಳು ಬದಲಾದ ಕುರಿತು ಯಾರಿಗೂ ಪೂರ್ಣ ನೆಮ್ಮದಿಯಿಲ್ಲ . ಬದಲಾಗದ ಚಿತ್ರವೆಂದರೆ ಗುಬ್ಬಚ್ಚಿಗಳದು. ನಾವು ಕಟ್ಟಿಕೊಟ್ಟ ಮನೆಗೆ ಗುಬ್ಬಿಗಳು ಈಗಲೂ ಬರುತ್ತಿವೆ. ಮರಿ ಮಾಡುತ್ತವೆ. ಎತ್ತಲೋ ಹೋಗುತ್ತವೆ ; ಮತ್ತೆ ಬರುತ್ತವೆ. ಅವುಗಳ ಮನಸ್ಸಿನಲ್ಲಿ ಮನೆಯ ವಿಳಾಸ ಅಚ್ಚಾಗಿದೆ. ಇಲ್ಲೊಂದು ಬೆಚ್ಚಗಿನ ಮನೆಯಿದೆ ; ಅಲ್ಲಿ ನೀರು ಸಿಗುತ್ತದೆ ; ಕಾಳು ಸಿಗುತ್ತದೆ ಎಂದು ಗುಬ್ಬಚ್ಚಿಗಳಿಗೆ ತಿಳಿದಿದೆ ಅನ್ನಿಸುತ್ತದೆ. ರಜೆಯಲ್ಲಿ ಊರಿಗೆ ಹೋದಾಗ ಹೀಗೆ ಅನ್ನಿಸಿದಾಗಲೆಲ್ಲ ನನ್ನ ನಗರವಾಸದ ನೆನಪಾಗಿ ಮನಸ್ಸು ತೇವವಾಗುತ್ತದೆ.
ಗುಬ್ಬಚ್ಚಿಗಳಿಗೆ ನೀರಿಡುವುದು ಹಾಗೂ ಕಾಳು ಹಾಕುವುದೆಂದರೆ ಶಾಲೆಗೆ ಹೋಗುವ ಪುಟ್ಟಿಗೆ ತುಂಬಾ ಇಷ್ಟ . ಮೊನ್ನೆ ಊರಿಗೆ ಹೋದಾಗ- ಪುಟ್ಟಿಗೆ ಊಟ ಮಾಡಿಸಲು ಅತ್ತಿಗೆ ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡುತ್ತಿದ್ದರು. ಕೊನೆಗೂ ಊಟ ಮಾಡದ ಪುಟ್ಟಿ , ಪ್ಲಾಸ್ಟಿಕ್‌ ಬಟ್ಟಲನ್ನು ಹಿಡಿದು ಅಜ್ಜಿಯ ಬಳಿಗೆ ಬಂದು, 'ಗುಬ್ಬಚ್ಚಿಗೆ ಕಾಳು" ಎಂದಳು. ಆ ದೃಶ್ಯವನ್ನು ನೋಡುವುದೇ ಒಂದು ಸುಖ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X