ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಜ್ಜು ಭಾರವಾ? ಸಪೂರವಾಗುವ ಆಸೆಯಾ?

By Staff
|
Google Oneindia Kannada News

ಇತ್ತೀಚೆಗೆ ನೀವೂ ಗಮನಿಸಿರಬಹುದು- ಪತ್ರಿಕೆಗಳಲ್ಲಿ (ನಮ್ಮ ದೆಹಲಿಯ ದೈನಿಕ ಹಿಂದುಸ್ತಾನ್‌ ಟೈಮ್ಸ್‌ ಇತ್ಯಾದಿ), ಅಷ್ಟೇ ಏಕೆ, ಅಂತರ್ಜಾಲದಲ್ಲಿ ಕೂಡ ತೂಕ ಕಡಿಮೆಮಾಡುವ ಕೇಂದ್ರಗಳ ಜಾಹಿರಾತುಗಳು ನೀವು ಕೇಳದೆಯೆ ನಿಮ್ಮ ಅಂಚೆಪೆಟ್ಟಿಗೆಗೆ ಕಳಿಸಿರುತ್ತಾರೆ. ಯಾವುದೇ ಸೈಟನ್ನು ಸರ್ಫ್‌ ಮಾಡಿದಿರೋ ಆಯಿತು, ಹಿಂಡು-ಹಿಂಡಾಗಿ ಜಾಹಿರಾತುಗಳು ನಿಮ್ಮ ಅಂಚೆಪೆಟ್ಟಿಗೆ ತುಂಬಿಕೊಳ್ಳುತ್ತವೆ. ಇದೊಂದು ತಲೆನೋವು, ಆದರೆ ಅನಿವಾರ್ಯ.

ದಪ್ಪಗಿದ್ದವರು ತೆಳ್ಳಗಾಗಲು ಪಡುವ ಪಾಡು ಅವರಿಗಷ್ಟೇ ಗೊತ್ತು. ಬೊಜ್ಜು ಬೆಳೆಯುವಾಗ ಗೊತ್ತೇ ಆಗದೆ ನಂತರ ಗೋಳಾಡುವವರನ್ನು ನೋಡಿದ್ದೇವೆ. ತೆಳ್ಳಗಿದ್ದವರಿಗೆ ದಪ್ಪಗಾಗಲು ಆಸೆ. ಆದರೆ ಅವರು ಹೇಳಿಕೊಳ್ಳುವುದಿಲ್ಲ , ಆದ್ದರಿಂದ ಬೇರೆಯವರಿಗೆ ಗೊತ್ತೂ ಆಗುವುದಿಲ್ಲ. ಮೊದಲನೇ ಗುಂಪಿನವರು ಮಾಡುವ ಎಲ್ಲಾ ಕಸರತ್ತುಗಳು ಜಗಜ್ಜಾಹೀರಾಗಿಬಿಡುತ್ತದೆ. ಹಾಗೇ ಬೇರೆಯವರಿಗೆ ಆರೋಗ್ಯದ ಬಗೆಗಿನ ತಮ್ಮ ಕಳಕಳಿ ಗೊತ್ತಾಗಿದೆಯಂತಾದರೂ ಸ್ವಲ್ಪ ಸಮಧಾನಪಟ್ಟುಕೊಳ್ಳಬಹುದು.

Do you want to lose weight ?ಮದುವೆ ಕಾಲಕ್ಕೆ ತೆಳ್ಳಗೆ ಬಳ್ಳಿಯಂತಿದ್ದವಳು ಈಗ ಡ್ರಮ್ಮಾಗಿ ಹೋದೆ ಅಂತ ಪರಿತಪಿಸುವರನ್ನು ಕಂಡು ದಯೆ ಬರುತ್ತದೆ. ನಾವು ಮೊದಲಿಂದಲೂ ಹಿತ-ಮಿತವಾದ ವ್ಯಾಯಾಮ, ಆಹಾರ ಸೇವನೆ ಬಗ್ಗೆ ಕಾಳಜಿ ವಹಿಸಿದರೆ ಈ ಸ್ಥಿತಿ ಬರುವುದೇ? ಇಲ್ಲವೇ ಇಲ್ಲ ಅಲ್ಲವೇ..? ಡ್ರಮ್ಮಾಗುವ ಬದಲಿಗೆ ಟ್ರಿಮ್ಮಾಗಿ, ಸ್ಲಿಮ್ಮಾಗಿ ಬೇರೆ ಹೆಂಗಸರು ಹೊಟ್ಟೆಕಿಚ್ಚುಪಡುವಂತೆ ಇರಬೇಕು ಅಲ್ಲವಾ? ಸರಿ.....ಇನ್ನು ಮುಂದೆಯಾದರೂ ನೀವು ಎಚ್ಚರವಹಿಸುತ್ತೀರೆಂದು ನಂಬುತ್ತೇನೆ. ಹಾಗೆ ನಿಮ್ಮ ಫಿಗರ್‌ ಬಗ್ಗೆ ಕಾಳಜಿ ವಹಿಸುತ್ತೀರೆಂದು ತಿಳಿಯುತ್ತೇನೆ. ಹ್ಹಾ ! ಆದರೆ ಸ್ಲಿಮ್ಮಿಂಗ್‌ ಸೆಂಟರುಗಳ ಮೋಹಪಾಶದಲ್ಲಿ ಬಿದ್ದೀರಾ, ಜೋಕೆ. ನಮ್ಮ ಆರೋಗ್ಯದ ವಿಚಾರ, ಅವರಿಗೊಂದು ವ್ಯಾಪಾರ. ಸ್ಲಿಮ್ಮಿಂಗ್‌ ಸೆಂಟರ್‌ಗಳಿಗೆ ಗಂಟುಬಿದ್ದ ನಮ್ಮ ಮಿಸೆಸ್‌ ಅಯ್ಯರ್‌ ಏನೆಲ್ಲಾ ಅನುಭವಿಸಿದರು ಗೊತ್ತಾ ? ಹೇಳ್ತೇನೆ ಕೇಳಿ.....

ದಿಲ್ಲಿಯಲ್ಲಿ ವಿ.ಎಲ್‌.ಸಿ.ಸಿ. , ಬಾಡಿ ಕೇರ್‌, ಪರ್ಸ್‌ನಲ್‌ ಪಾಯಿಂಟ್‌ಗಳಂಥ ಸ್ಲಿಮ್ಮಿಂಗ್‌ ಸೆಂಟರ್‌ಗಳು ಎಲ್ಲಾ 'ಪಾಷ್‌" ಕಾಲೋನಿಗಳಲ್ಲೂ ತಲೆಯೆತ್ತಿವೆ. ಇಲ್ಲಿ ಬರುವವರೆಲ್ಲ ಮೇಲ್ವರ್ಗದ ಹೆಂಗಸರು, ಗಂಡಸರು. ಅವರಿಗೋ ಮಾಡಲು ಕೆಲಸವಿಲ್ಲ . ಅಡುಗೆಯವರು, ಕೆಲಸದವರು, ಮಕ್ಕಳನ್ನು ನೋಡಿಕೊಳ್ಳಲು ಹೀಗೆ ಎಲ್ಲದಕ್ಕೂ ಆಳು-ಕಾಳು. ಹೀಗಿರುವಾಗ ಬೊಜ್ಜು ಬಾರದೆ ಏನು ? ಬರೀ ಗಾಡಿಯಲ್ಲಿ ಓಡಾಟ, ಕಿಟ್ಟಿ ಪಾರ್ಟಿಯ ನೆವದಲ್ಲಿ ಸಿಕ್ಕಾಪಟ್ಟೆ ತಿನ್ನುವ ಆಟ, ಹಾಗಾಗಿ ಬೊಜ್ಜಿನದು ಇದ್ದದ್ದೇ ಕಾಟ.

ಈ ಕೇಂದ್ರಗಳ ವೈಖರಿಯಾದರೂ ಹೇಗಿದೆ ಗೊತ್ತೇ? ಶುಲ್ಕಗಳ ಪಟ್ಟಿಯೇ ಇದೆ. 5 ಕೆ.ಜಿ. ತೂಕ ಇಳಿಸಲು 5000/- + ಆಕರ್ಷಕ ಕಾಣಿಕೆಯಾಗಿ ಉಚಿತ ಸೌಂದರ್ಯ ವರ್ಧನೆ ಆರೈಕೆ. 10 ಕೆ.ಜಿ ಹಗುರವಾಗಬೇಕಾ? ಪರ್ಸಲ್ಲಿ ಹತ್ತು ಸಾವಿರ ರೂಪಾಯಿ ಹಗುರಮಾಡಿಕೊಳ್ಳಿ. ಹೀಗೆ ಇರುತ್ತದೆ ಅವರ ವ್ಯಾಪಾರ. ಅಲ್ಲಿ ಚಿಕ್ಕ ಚಿಕ್ಕ ಪ್ರಾಯದ ಹುಡುಗಿಯರು - ಕೌನ್ಸೆಲರ್ಸ್‌ ಆಗಿ ಗ್ರಾಹಕರಿಗೆ ತಮ್ಮ ಅಂದ-ಚೆಂದದ ಮಾತುಗಳಿಂದ, ಮೋಹಕವಾಗಿ ನಯವಾಗಿ ಬಕರಾ ಮಾಡಿಯೇ ಬಿಡುತ್ತಾರೆ. ಯಾರು ಎಷ್ಟು ಬಕರಾಗಳನ್ನು ಸಂಸ್ಥೆಗೆ ಸೇರಿಸಿದರು ಅನ್ನುವದರಲ್ಲಿ ಅವರ ಭತ್ಯೆ ಸಿಗುತ್ತದೆ.

ನಮ್ಮ ಮಿಸೆಸ್‌ ಅಯ್ಯರ್‌ ಸುಮ್ಮನೆ ನೋಡಿ ಬರುವ ಅಂತಾ ಹೋಗಿ, ಹೆಸರನ್ನು ನೋಂದಾಯಿಸಿಯೇ ಬಂದರು. ಸರಿ ಅವರ ಡಯೆಟಿಂಗ್‌ ಶುರುವಾಯಿತು, ಮನೆಮಂದಿಗೆಲ್ಲ ದಿನವೂ ಏಕಾದಶಿಯಾಯಿತು. ಮನೆಗೆ ಬರುತ್ತಿದ್ದ ಸಮೋಸ, ಬ್ರೆಡ್‌ ಪಕೋಡಗಳು ದಾರಿತಪ್ಪಿದವು. ಅವುಗಳ ಮಾರಾಟದಲ್ಲಿ ಇಳಿತವಾದದ್ದು ಕಂಡ 'ಆಗ್ಗರ್‌ವಾಲ್‌ ಸ್ವೀಟ್ಸ್‌" ನವರಿಗೆ ಚಿಂತೆಯಾಗಿದ್ದು ಸಹಜವೇ. ಮಿಸೆಸ್‌ ಅಯ್ಯರ್‌ ಎಲ್ಲೇ ಕಣ್ಣಿಗೆ ಬೀಳಲಿ, ಹಲ್ಲುಗಿಂಜುತ್ತಾ, ಕ್ಯಾ ಬಾತ್‌ ಹೈ ಬೆಹೆನ್‌ ಜೀ, ನಾರಾಜ್‌ ಹೊ ಕ್ಯಾ ? ಆಜ್‌ ಕಲ್‌ ಕುಚ್‌ ನಹೀ ಖರೀದ್‌ ರಹೆ ಹೊ...? ಎನ್ನುತ್ತಾರೆ ಸಿಹಿ ಅಂಗಡಿಯವರು. ಪಾಪ ! ಐ... ಏನು ಹೇಳಿಯಾರು ? ಮನೆಯಲ್ಲಿ ಒಣ ಚಪಾತಿ, ಎಣ್ಣೆ ಕಾಣದ ತರಕಾರಿಗಳು, ಹುಳಿ, ಗೊಡ್ಡುಸಾರು ತಿಂದು ಗಂಡ- ಮಕ್ಕಳು, ಕಣ್ಣು ತಪ್ಪಿಸಿ ಹೊಟೆಲ್‌ಗೆ ಹೋಗತೊಡಗಿದರು. ಯಾರಾದರೂ ಕರೆದರೆ ಸಾಕು, ನಾಲಿಗೆ ಕೆಟ್ಟು, ಸ್ವಾದವನ್ನೇ ಕಳೆದುಕೊಂಡ ಬಾಯಿಗೆ ರುಚಿಯಾಗಿ ತಿನ್ನಲು ಸಿಕ್ಕೀತಾ ಅಂತಾ ಕಾಯತೊಡಗಿದರು. ಆದರೆ ಮಿಸೆಸ್‌ ಐಯರ್‌ ಮಾತ್ರಾ ನಿಷ್ಠೆಯಿಂದ, ಭಕ್ತಿಯಿಂದ ತಮ್ಮ ಮಹಾಸಾಧನೆಗೆ ತೊಡಗಿದ್ದಲ್ಲದೇ, ಬೇರೆಯವರನ್ನೂ ಸುಧಾರಿಸುವ ಪ್ರಯತ್ನ ಮಾಡುತ್ತಿರುತ್ತಾರೆ.

ಡಟೆಯಿಂಗ್‌ ಪಠ್ಯ(ಪಥ್ಯ)ದ ಪ್ರಕಾರ ಮಿಸೆಸ್‌ ಶರ್ಮಾ ಒಂದು ದಿನ ಬ್ರಿಸ್ಕ್‌ ವಾಕಿಂಗ್‌ (ದಾಪುಗಾಲು ನಡಿಗೆ) ಮಾಡಿಬಂದರು. ಪರಿಣಾಮ, 4 ದಿನ ಕಾಲುನೋವು ಅಂತಾ ಒದ್ದಾಡಿದರು. ಸ್ಲಿಮ್ಮಿಂಗ್‌ ಪರಿಣಿತರಿಗೆ ಮಿಸೆಸ್‌ ಅಯ್ಯರ್‌ ಮನಸಾ ಶಾಪಹಾಕಿದರು.

ಕೆಲವು ಗಂಡಸರು ಈ ಸ್ಲಿಮ್‌ ಸೆಂಟರ್‌ಗಳ ಚೆಂದದ ಹುಡುಗಿಯರನ್ನು ಹೆಂಡತಿಯ ಭಯವಿಲ್ಲದೇ ನೋಡಬಹುದು ಅಂದುಕೊಂಡು ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅಲ್ಲಿ ಸ್ವಲ್ಪ ಹೊತ್ತು ಹಾಯಾಗಿರಬಹುದು ಅಂತ ಸೇರಿಕೊಂಡಿರುತ್ತಾರೆ. ಪಾರ್ಕಿನಲ್ಲಿ ಒಬ್ಬ ಧಡೂತಿ ಮನುಷ್ಯ ದಾಪುಗಾಲು ಹಾಕಿ ನಡೆಯುವುದನ್ನು ಸುಮಾರು ವರ್ಷದಿಂದ ನೋಡುತ್ತಿದ್ದೇನೆ, ಆದರೆ ಆತನ ದೇಹದಲ್ಲಿ ಯಾವ ವ್ಯತ್ಯಾಸವೂ ಕಂಡಿಲ್ಲ. ಈ ಪಾರ್ಕಿನಲ್ಲೂ ವಾಕಿಂಗ್‌, ಜಾಗಿಂಗ್‌ ಓಟದಲ್ಲಿ ಎಷ್ಟೋ ಮನಗಳು ಅರಳಿ, ಕಣ್ಣುಗಳು ಮಾತಾಡಿ ಸ್ನೇಹಿತರು, ಪ್ರೇಮಿಗಳು ಆಗಿದ್ದಾರೆ. ಇಂಥ ವಿಷಯಗಳನ್ನೇ ನಮ್ಮ ಚಿತ್ರ ನಿರ್ಮಾಪಕರು ದುರ್ಬಿನಿಂದ ನೋಡಿ ಗುರುತಿಸಿ, 'ಜಾಗರ್ಸ್‌ ಪಾರ್ಕ್‌" ನಂತಹ ಸಿನೆಮಾಗಳನ್ನು ತೆರೆಗೆ ತಂದಿದ್ದಾರೆ ಅನಿಸುತ್ತೆ. ರಾತ್ರೊರಾತ್ರಿ ಚಿತ್ರದ ನಾಯಕಿ 'ಪೆರಿಜ್ಹಾದ್‌ ಜೊರಬಿಯನ್‌" ಹೆಸರು ಮಾಡಿದ್ದು ಎಲ್ಲರಿಗೂ ನೆನಪಿದೆ.

ಪಾರ್ಕ್‌ನಲ್ಲಿ ಜಾಗ್‌ ಮಾಡುವವರಿಗೊಂದು ಕಳೆಯೇ ಇರುತ್ತೆ. ಮಕ್ಕಳು, ಮುದುಕರು, ನಮ್ಮ ಪೆರಿಜ್ಹಾದ್‌ನಂತಹ ಹುಡುಗಿಯರು, ಮನೆಯಲ್ಲಿ ಅತ್ತೆಯ ಕಾಟವನ್ನು ಬಣ್ಣಿಸುವ ಸೊಸೆಯಂದಿರು, ಸೊಸೆಯ ಸೋಮಾರಿತನವನ್ನು ಹಳಿಯುವ ಅತ್ತೆಯರೂ ಈ ಓಟದಲ್ಲಿ ಭಾಗವಹಿಸುವ ಸ್ಪರ್ಧಿಗಳು. ಇಲ್ಲಿ ಯಾರು ಸ್ಲಿಮ್‌ ಆದರು, ಯಾರಿಲ್ಲ ಅನ್ನುವುದು ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಒಂದೊಂದು ಕಾರಣಗಳಿವೆ. ಯಾರೋ ವೈದ್ಯರು ಹೇಳಿದ್ದಕ್ಕೆ, ಅವರ ಕಾಟಕ್ಕಾಗಿಯಾದರೂ ಎಂಬಂತೆ ದಾಪುಗಾಲು ಹಾಕುತ್ತಿರುತ್ತಾರೆ, ಯಾರು ಯಾರದೋ ಕೆಲ ಹೊತ್ತಾದರೂ ದರ್ಶನವಾಗುತ್ತದೆಂದು ನಿಯಮವನ್ನು ಪಾಲಿಸುತ್ತಿರುತ್ತಾರೆ, ಮನೆಯವರ ಕಣ್ಣು ತಪ್ಪಿಸಿ ವಾಕ್‌ ನೆಪದಲ್ಲಿ ಬರುವ ಹುಡುಗ-ಹುಡುಗಿಯರು, ಯಾರಾದರೂ ಜೋಡಿಗಳು ಕಂಡರೆ ಸಾಕು ತಮ್ಮ ಅಂದಿನ ಕಮಾಯಿ ಆಯಿತೆಂದು ಅವರನ್ನು ಸುಲಿಯುವ 'ಹಿಜಡಾ"ಗಳು- ಕಾಟ ತೊಲಗಲೆಂದು ದುಡ್ಡು ಕೊಟ್ಟು ಕಳಿಸುವ ಜೋಡಿಗಳಾದರೆ ಅವರಿಗೆ ಮನಸಾರೆ ಹರಸುತ್ತಾರೆ, ಕೊಡದವರನ್ನು ಹಾಯ್‌...ಹಾಯ್‌...ಅನ್ನುತ್ತಾ ಸರ್ವವಿಧದ ಶಾಪಹಾಕುತ್ತರೆ. ಕೆಲವರು ನಿಜವಾಗಲೂ ತುಂಬಾ ಶ್ರದ್ಧೆಯಿಂದ ತಮ್ಮ ತೂಕವನ್ನು ಕಡಿಮೆಮಾಡಲು ಶ್ರಮಿಸುತ್ತಿರುತ್ತಾರೆ 'ಹಮ್‌ ಹೊಂಗೆ ಕಾಮಯಾಬ್‌....ಎಕ್‌ ದಿನ್‌.." ಅನ್ನುತ್ತಾ.

ಮಿಸೆಸ್‌ ಅಯ್ಯರ್‌, ತಮ್ಮ ಆಸುಪಾಸಿಗಷ್ಟೆ ಪ್ರಯತ್ನ ಸೀಮಿತವಾಗಿಟ್ಟಿಲ್ಲ . ಅವರ ಸ್ಲಿಮ್ಮಿಂಗ್‌ ಪ್ರೊಗ್ರಾಮ್‌ ಆಫೀಸ್‌ಗೂ ಹರಡಿಕೊಂಡಿದೆ. ಮಿಸೆಸ್‌ ಅಯ್ಯರ್‌ ತಮ್ಮ ಬಾಸ್‌ನ್ನು ಕೂಡ ವಿ.ಎಲ್‌.ಸಿ.ಸಿ ಯ ಸದಸ್ಯರನ್ನಾಗಿ ಮಾಡಿಯೇ ಬಿಟ್ಟರೆನ್ನಿ. ಅವರಿಗೂ ಡಯಟ್‌ ಪ್ಲ್ಯಾನ್‌ ಕೊಡಿಸಿದರು.

* ಆಲೂ, ಅರಬಿ, ಎಲ್ಲಾ ತರದ ಗಡ್ಡೆ-ಗೆಣಸು, ತಿನ್ನುವ ಹಾಗಿಲ್ಲ
* ಮಾವಿನಹಣ್ಣು, ಬಾಳೇ ಹಣ್ಣು, ಚಿಕ್ಕು, ದ್ರಾಕ್ಷೀ, ತಿನ್ನುವಂತಿಲ್ಲ (ಉಳಿದದ್ದು ಇಷ್ಟವಿಲ್ಲದ್ದು)
* ಕೇಕು, ಪೇಸ್ಟ್ರಿ, ಬ್ರೆಡ್‌, ಪಾಸ್ತಾ, ಪಿಜ್ಜಾ, ಬರ್ಗರ್‌, ಚೌಮೀನ್‌, ಬಾಂಬೆ ರವೆ ಉಪ್ಪಿಟ್ಟು, ಇತ್ಯಾದಿ ಮೈದಾವುಳ್ಳ ಪದಾರ್ಥವನ್ನು ಮರೆತುಬಿಡಿ.
* ಸಿಹಿ ತಿಂಡಿಗಳನ್ನು ಮುಟ್ಟಬೇಡಿ, ಮಕ್ಕಳಿಗೆ ಹಂಚಿ. ಇಲ್ಲಾಂದ್ರೆ, 'ಈಕ್ವಲ್‌", 'ಶುಗರ್‌ ಫ್ರೀ" ನಂಥ ಲೋ ಕ್ಯಾಲೊರಿ ಸಿಹಿಗುಳಿಗೆ ಹಾಕಿ ಪಾಯಸ ಹೊಡಿಬಹುದು.
* ಕರಿದ ತಿಂಡಿಗಳಿಲ್ಲ....ಬೆಣ್ಣೆ, ತುಪ್ಪಗಳಿಗೆ.. ಮೂಗು ಮುಚ್ಚಿಕೊಳ್ಳಿರಿ.
* ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಎಲ್ಲಾ ಅಟ್ಟದ ಮೇಲೆ ಮುಚ್ಚಿಡಿ.....
* ಅನ್ನಕ್ಕೆ ಮಜ್ಜಿಗೆಹುಳಿ ಕಲಸಿ ಹೊಡೆಯುವವರಿಗೆ ಜೇಲ್‌ ಶಿಕ್ಷೆ. ಒಣ ಚಪಾತಿಯೇ ಗತಿ.

ಈ ಉದ್ದದ ಲಿಸ್ಟ್‌ ನೋಡಿ ಭಯಗೊಂಡ ಬಾಸ್‌ ಬಿ.ಪಿ. ಏರತೊಡಗಿ, ಗುಡುಗಿದರು- ಮತ್ತೆ ತಿನ್ನುವದಾದರೂ ಏನನ್ನು, ಆ ಲಿಸ್ಟ್‌ನಲ್ಲಿಯೇನಾದರೂ ಇದೆಯಾ? ನಿಂಗೊತ್ತಲ್ಲಮ್ಮಾ ನಂಗೆ 'ಡೊಮಿನೋ ಪಿಜ್ಜಾ" ಅಂದ್ರೆ ಪ್ರಾಣ, ಗೋಲ್ಫ್‌ ಕ್ಲಬ್‌ನಲ್ಲಿ ಮಾಡೋ ಸಮೋಸಾ ಎಲ್ಲೂ ಸಿಗಲ್ಲ, ನಮ್ಮಂಥವರು ಮೌರ್ಯ ಶೆರಟನ್‌, ತಾಜ್‌ ಪ್ಯಾಲೇಸ್‌, ಒಬೆರಾಯ್‌ ಹೋಟಲ್‌ಗೆ ಹೋಗದಿದ್ದರೆ ಮತ್ಯಾರು ಹೋಗ್ಬೇಕು ? (ನಮ್ಮಂಥ ಬಡವರಿಗೆ, ಮಧ್ಯದ ವರ್ಗದವರಿಗೆ ಉಡುಪಿ ಹೋಟೆಲ್ಲುಗಳಿವೆ. ಚಿಂತಿಸಬೇಡಿ...) ನಮ್ಮ ಫಾರ್ಮ್‌ನ ಮಾವಿನಹಣ್ಣುಗಳನ್ನು ನಾನು ತಿನ್ನದಿದ್ದರೆ ಮತ್ಯಾರು ತಿನ್ನಬೇಕು? (ಅವರ ಒಬ್ಬನೇ ಮಗ ಅಮೇರಿಕೆಯ 'ಎಕ್ರೊನ್‌ ಯೂನಿವರ್ಸಿಟಿಯಲ್ಲಿ" ಓದಲು ಹೋಗಿದ್ದಾನೆ) .... ಈ ವೆಯಿಟ್‌ ಲಾಸ್‌ ಪ್ರೋಗ್ರಾಮ್‌ - ಗ್ರೀಗ್ರಾಮ್‌ ಅವರಿಗೆ ಸೂಟ್‌ ಆಗಲ್ಲಾಂತ ಸಖತ್ತಾಗಿ ಹೇಳಿ ಭಾರವಾದ ಮೈಯನ್ನು ಕಷ್ಟಪಟ್ಟು ಕುರ್ಚಿಯಲ್ಲಿ ತುರುಕಿಸಿ ಕೆಲಸದಲ್ಲಿ ಮಗ್ನರಾದರು. ಅಂಥಾ ದೊಡ್ಡ ಕೊಟ್ಯಾಧೀಶನಿಗೆ ಸದಸ್ಯತ್ವಕ್ಕೆ ಕೊಟ್ಟ ದುಡ್ಡು ಮರಳಿಬಾರದಿದ್ದರೆ ಏನಂತೆ? ಅಲ್ಲವಾ?

ಮತ್ತೆ ನೀವು ಸಿಹಿ ತಿನ್ನಲ್ಲಾ ಅಂತಾ ಸಕ್ಕರೆ ಬದಲು 'ಈಕ್ವಲ್‌" ಹಾಗೂ 'ಶುಗರ್‌ ಫ್ರೀ" ಜಾಸ್ತಿ ಬಳಸಲು ತೊಡಗಬೇಡಿ. ಅದರ ತಯಾರಿಕೆಯಲ್ಲಿ ಬಳಸುವ 'ಅಸ್ಪಾರ್‌ಟೆಮ್‌" ಆನ್ನುವ ಪದಾರ್ಥ ಶರೀರಕ್ಕೆ ಎಷ್ಟು ಹಾನಿಕಾರಕ ಅಂತಾ ನಿಮಗೆ ಗೊತ್ತಾಗಲು ಗೂಗಲ್‌ನಲ್ಲಿ ಸುಮ್ಮನೆ 'ಅಸ್ಪಾರ್ಟೆಮ್‌ ಸೈಡ್‌ ಎಫೆಕ್ಟ್ಸ್‌" ಅಂತಾ ಟೈಪಿಸಿ ನೋಡಿ, ನಿಮಗೆ ಬೇಕಾದಷ್ಟು ವಿವರಣೆ ಸಿಗುತ್ತದೆ.

ಬೊಜ್ಜು ಮೈ, ಮೋಟಾಪಾ, ಒಬೆಸಿಟಿ, ಎಂದು ಎಲ್ಲೆಡೆಯೂ ಹಬ್ಬಿರುವ ಪಾಚಿ ಇದು. ಭಾರತ ಮತ್ತು ದಿಲ್ಲಿಗಷ್ಟೇ ಅಂಟಿದ ಪಿಡುಗಲ್ಲ , ಜಾಗತಿಕವಾಗಿ ಜನರಲ್ಲಿ ಈ ಬಗ್ಗೆ ಪ್ರಜ್ಞೆ ಮೂಡುತ್ತಿದೆ ಅಂತ ನನ್ನ ಧೋರಣೆ. ಅಮೇರಿಕದಂಥ ಮಹಾ ದೇಶದಲ್ಲೂ ಮಕ್ಕಳಲ್ಲಿ ಕೂಡ 'ಒಬೆಸಿಟಿ" ಅತೀ ಹೆಚ್ಚು ಪ್ರಮಾಣದಲ್ಲಿದೆ. ಹಾಗೆ ನೋಡಿದರೆ ನಾವು ಕರ್ನಾಟಕದಲ್ಲಿ ಹುಟ್ಟಿದುದು ನಮ್ಮ ಪುಣ್ಯವೇ.. ಯಾಕೆಂದರೆ ನಮ್ಮ ಆಹಾರವೇ ಹಿತ-ಮಿತವಾಗಿರುತ್ತದೆ. ನಾವು ತಿನ್ನುವ ಅವಲಕ್ಕಿ- ಚುರುಮುರಿಗಳು ಕೊಬ್ಬುರಹಿತ. ನಮ್ಮ ಧಾರವಾಡದ ಜೋಳದ ರೊಟ್ಟಿ, ಹುಚ್ಚೆಳ್ಳು ಚಟ್ನಿಯ ರುಚಿ ಕೇಳಲೇ ಬೇಡಿ. ಅನ್ನಕ್ಕಿಂತ ಜೋಳದ ರೊಟ್ಟಿ ಡಯಟ್‌ ಬೊಜ್ಜುಳ್ಳವರಿಗೆ ಒಳ್ಳೇದು. ಅಲ್ಲದೆ ಈ ವಿ.ಎಲ್‌.ಸಿ.ಸಿ.ಯ ತೂಕವಿಳಿಸುವ ಕಾರ್ಯಕ್ರಮದಲ್ಲಿ ಅವರೂ ಹುರಿಗಡಲೆ, ಅವಲಕ್ಕಿ, ಚುರುಮುರಿಗಳನ್ನು ಧಾರಾಳವಾಗಿ ಸಂಜೆಯ ತಿಂಡಿಗೆ ತಿನ್ನಲು ಹೇಳುತ್ತಾರೆ.

ಯಾರು ಪ್ರಯತ್ನ ಪಡಲಿ ಬಿಡಲಿ, ನನ್ನ ತಾಯಿ ಬರೀ ಕಾಲು ನೋವೆಂದು ಕಂಪ್ಲೇಟಿಸುತ್ತಿದ್ದವಳು, ನನ್ನ ಸಲಹೆಯ ಪ್ರಕಾರ ಈಗ ದಿನವೂ 'ವಾಕ್‌" ಮಾಡಲು ಹೋಗುತ್ತಾರೆ. ಈಗ ಕಾಲುನೋವಿನ ದೂರಿಲ್ಲ, ಈಗ ಒಂದು ನಿಮಿಷವೂ ಸುಮ್ಮನೆ ಕೂಡುವದಿಲ್ಲಾ, ನಡೆದಾಡಿಕೊಂಡಿರುತ್ತಾರೆ. ನಾವೇ ಹಿಡಿದು ಕೂಡಿಸಬೇಕಷ್ಟೇ....

ನನಗೆ ಮಾತ್ರ ಮಿಸೆಸ್‌ ಅಯ್ಯರ್‌ ಅಂದ್ರೆ ಪ್ರಾಣ. ಅವರು 5000 ರೂ ಕೊಟ್ಟು ಸ್ಲಿಮ್ಮಿಂಗ್‌ ಪ್ರೋಗ್ರಾಂ ಮಾಡ್ತಾ ಇದ್ದರೆ ನಾನು ಪುಕ್ಕಟೆಯಾಗಿ ಅವರ ಶಿಷ್ಯೆಯಾಗಿ ಉಚಿತ ಮಾಹಿತಿ ಪಡೆಯುತ್ತಿದ್ದೇನೆ. ನೀವು ಬಾಯಿ ಬಿಟ್ಟೀರಿ ಜೋಕೆ..!!! ನಾನೂ ನೋಡೆ ಬಿಡುವ ಅಂತಾದರೂ ಒಂದು ಕೆಟ್ಟ ಕುತೂಹಲವನ್ನು ತಣಿಸಲು, ನಾನು ಅವರೊಂದಿಗೆ ವಿ.ಎಲ್‌.ಸಿ.ಸಿ.ಗೆ ಭೇಟಿಯಿತ್ತೆ. ವಾವ್‌ !! ಎಂತಾ ಸುವ್ಯವಸ್ಥಿತ, ಯಾವ್‌ ಥ್ರೀ ಸ್ಟಾರ್‌ಗೂ ಕಡಿಮೆಯಲ್ಲದ ವೈಭವ. ಸೆಂಟ್ರಲ್‌ ಏರ್‌ಕಂಡಿಶನ್‌, ಅತ್ತಿಂದಿತ್ತ ಓಡಾಡಿಕೊಂಡಿರುವ ರೂಪಸಿಯರು, ಸ್ವಾಗತಕಕ್ಷೆಯಲ್ಲಿ ಗಣೇಶನ ಮೂರ್ತಿ, ಧೂಪ, ದೀಪ, ಆರತಿಯಿಂದ ಪವಿತ್ರವೆನಿಸುವ, ಮನಸ್ಸಿಗೆ ಹಾಯೆನಿಸುವ ವಾತಾವರಣ. ಎಲ್ಲೆಲ್ಲೂ ಸಂಗೀತದ ಅಲೆಗಳು ಒಂದು ಕಡೆ 'ಜಿಮ್‌", ಇನ್ನೊಂದೆಡೆ ಬ್ಯೂಟಿ ಪಾರ್ಲರ್‌, ಮಗದೊಂದೆಡೆ, ತೂಕ ಕಡಿಮೆ ಮಾಡುವ ಶಾಖೆ, ಅಲ್ಲಿನ ಉಪಕರಣಗಳು, ಮಷೀನುಗಳು ಪ್ರತಿಯಾಂದು ಕೋಣೆಗೂ ಟೀವಿ. ಇಷ್ಟೆಲ್ಲ ಸೌಕರ್ಯವಿರುವ ಸಂಸ್ಥೆ, ನಿಮ್ಮ ಭಾರವಿಳಿಸುವ ಹೊಣೆಹೊತ್ತುಕೊಂಡಿದ್ದಕ್ಕೆ, ನೀವು ತೆರಬೇಕಾದ ಬೆಲೆಯೇನು ಸಮವಲ್ಲ ಬಿಡಿ. ಅಲ್ಲಿ ಬರುವ ಎಲ್ಲರೂ ಭಾರವಿಳಿಸಲಿ, ಬಿಡಲಿ ಆದರೆ ಅಲ್ಲಿ ಅವರು ತುಂಬುವ ಆತ್ಮವಿಶ್ವಾಸ ಯಾರಿಗೂ ದಂಗುಬಡಿಸುತ್ತದೆ. ಆ ಆತ್ಮವಿಶ್ವಾಸ, ಛಲ ನಿಮ್ಮಲ್ಲಿದ್ದರೆ ನೀವು ಎಂಥ ಕಷ್ಟವಾದ ಕೆಲಸವನ್ನೂ ಮಾಡೇ ಮಾಡುತ್ತಿರಿ. ಧನಾತ್ಮಕ ಆಶ್ವಾಸನೆ ನಿಮ್ಮಲ್ಲಿ ಮೂಡಬೇಕು, ನಿಮ್ಮ ಅತೀ ಹತ್ತಿರದವರು ಆ ಆಶ್ವಾಸನೆ ಮೂಡಿಸಿದರೆ ನಿಮ್ಮಲ್ಲಿ ಆಗುವ ಬದಲಾವಣೆಯನ್ನು ಕಂಡು ನೀವೇ ್ಫಮೂಗಿನ ಮೇಲೆ ಬೆರಳಿಡುತ್ತೀರಿ.

ಕೊರೆದಿದ್ದು ಜಾಸ್ತಿಯಾಗಿ 1 ಕೆ.ಜಿ.ತೂಕ ಏರಿದರೆ ನನ್ನನ್ನು ಬೈಯಬೇಡಿ. ಆರೋಗ್ಯವೇ ಭಾಗ್ಯ. ಮನೆ ಕೆಲಸವನ್ನು ನೀವೇ ಮಾಡಿ, ಕೆಲಸದವಳಿಗೆ ಕೊಡುವ ದುಡ್ಡು ಉಳಿಯುತ್ತದಲ್ಲದೆ, ನಿಮ್ಮ ಫಿಗರೂ ಸರಿಯಾಗಿರುತ್ತದೆ. ಸಂದುನೋವು, ಗಂಟುನೋವು, ಸಕ್ಕರೆರೋಗ, ಹೃದಯರೋಗದಿಂದ ದೂರವಿರಿ. ಸಕ್ಕರೆ ರೋಗದವರಿಗೆ ದಿನಾಲು ವಾಕಿಂಗ್‌ ಉಪಯುಕ್ತವಾಗಿರುತ್ತದೆ. ಈವತ್ತಿನಿಂದ ಓಡಲು, ವಾಕ್‌ ಮಾಡಲು ಪ್ರಾರಂಭಿಸಿ. ಓಕೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X