ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತೇಜಸ್ವಿ ಹೇಳಿದ್ದು ಹಸಿ ಸುಳ್ಳು, ಅವರು ಕ್ಷಮೆ ಯಾಚಿಸಲಿ... ’

By Super
|
Google Oneindia Kannada News

‘ದಲಿತರು ಮತ್ತು ಶೂದ್ರರನ್ನು ಮಧ್ವಾಚಾರ್ಯರು ನಿತ್ಯ ನಾರಕಿಗಳೆಂದು ವರ್ಗೀಕರಿಸಿದರು' ಎನ್ನುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹೇಳಿಕೆಗೆ ಕರ್ನಾಟಕದಾದ್ಯಂತ ಭಾರೀ ಪ್ರತಿರೋಧ ಎದುರಾಗಿದ್ದು , ನಾಸ್ತಿಕ ತೇಜಸ್ವಿ ಅವರ ವಿರುದ್ಧ ಸ್ವಾಮೀಜಿಗಳು ಹಾಗೂ ಭಕ್ತಗಣ ( ಮಾಧ್ವ ಲಾಬಿ) ತಿರುಗಿಬಿದ್ದಿದೆ.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳುತ್ತಾರೆ ಕೇಳಿ-

‘‘ಜಯಭಾರತ ಜನನಿಯ ತನುಜಾತೆ ನಾಡಗೀತೆಯ ಮೂಲ ಸಾಹಿತ್ಯದಲ್ಲಿ ಮಧ್ವಾಚಾರ್ಯರ ಹೆಸರು ಇರಲಿಲ್ಲವೆಂಬುದು ನಿಜ. ಆದರೆ ಆನಂತರದಲ್ಲಿ ಸ್ವತಃ ಕುವೆಂಪು ಅವರೇ ಮಧ್ವಾಚಾರ್ಯರ ಹೆಸರನ್ನು ನಾಡಗೀತೆಯಲ್ಲಿ ಸೇರಿಸಿ ಎರಡು ಸಾಲುಗಳನ್ನು ಪರಿಷ್ಕರಿಸಿದ್ದಾರೆ. ಈ ಕುರಿತು ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ.

1971 ನೇ ಇಸವಿ. ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರನ್ನು ಸೇರಿಸಬೇಕೆಂದು ನಾಡಿನ ಅನೇಕ ಕನ್ನಡಿಗರು ನೀಡಿದ ಸೂಚನೆಗಳನ್ನು ಕುವೆಂಪು ಅವರ ಗಮನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ತಂದಿತು. ಈ ಒತ್ತಾಯದ ಮೇರೆಗೆ ಕುವೆಂಪು ಅವರ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹಾಗೂ ಕುಮಾರವ್ಯಾಸರ ಹೆಸರುಗಳನ್ನು ಸ್ವತಃ ಸೇರಿಸಿದರು. ಜನತೆಯ ಅಭಿಪ್ರಾಯಕ್ಕೆ ಕವಿ ಮಣಿದ ಪ್ರಸಂಗ ಅದಾಗಿತ್ತು . ಈ ಪರಿಷ್ಕೃತ ಕವಿತೆ ಪರಿಷತ್ತಿನ ಮುಖವಾಣಿ ‘ಕನ್ನಡ ನುಡಿ'ಯಲ್ಲಿ ಪ್ರಕಟವಾಗಿದೆ.
ತೇಜಸ್ವಿ ಸುಳ್ಳು ಹೇಳಬಾರದು ! ಅವರು ವಿಷಯವನ್ನು ಬೇರೆಡೆಗೆ ಸೆಳೆಯುವ ಅತ್ಯುತ್ಸಾಹದಲ್ಲಿ ಇರುವಂತೆ ಕಾಣುತ್ತಿದೆ.''

ಇಂಥವರು ಸುಳ್ಳು ಹೇಳಿದರೆ ಹೇಗೆ ?

ವಿಚಾರವಾದಿ ಬನ್ನಂಜೆ ಗೋವಿಂದಾಚಾರ್ಯರು ಕೂಡ ತೇಜಸ್ವಿ ಅವರ ಹೇಳಿಕೆ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ತೇಜಸ್ವಿ ಅವರ ಕುರಿತು ತಮಗೆ ಅಪಾರ ಗೌರವವಿತ್ತು . ಮಧ್ವಾಚಾರ್ಯರ ಕುರಿತು ಸುಳ್ಳು ಹೇಳುವ ಮೂಲಕ ತೇಜಸ್ವಿ ಆ ಗೌರವವನ್ನು ಕಳಕೊಂಡಿದ್ದಾರೆ. ತೇಜಸ್ವಿ ಅಂಥವರು ಸುಳ್ಳು ಹೇಳಬಾರದು. ಅವರು ಹೇಳುವ ಸುಳ್ಳನ್ನು ಜನ ನಂಬುತ್ತಾರೆ ಎಂದು ಬನ್ನಂಜೆ ಮರುಗಿದ್ದಾರೆ.

ತೇಜಸ್ವಿಯವರ ಸಂಯಮ ಹಾಗೂ ಬರವಣಿಗೆ ನನಗೆ ತುಂಬಾ ಇಷ್ಟ . ಆದರೆ, ಯಾರೋ ಅವರ ತಲೆ ಕೆಡಿಸಿದ್ದಾರೆ. ದಾರಿ ತಪ್ಪಿಸಿದ್ದಾರೆ. ತೇಜಸ್ವಿ ಅವರ ಹೇಳಿಕೆ ಅಪ್ಪಟ ಸುಳ್ಳು. ಸತ್ಯ ಸಂಗತಿಯೇ ಬೇರೆಯಾಗಿದೆ ಎನ್ನುತ್ತಾರೆ ಬನ್ನಂಜೆ.

ಶೂದ್ರರು ಹಾಗೂ ದಲಿತರ ಬಗ್ಗೆ ಮಧ್ವಾಚಾರ್ಯರಷ್ಟು ಸಹೃದತೆಯಿಂದ ಮಾತನಾಡಿದ ಮತ್ತೊಬ್ಬ ಆಚಾರ್ಯರನ್ನು ನಾವು ಕಾಣಲಾರೆವು. ಚತುರ್ವರ್ಣಗಳು ಮನುಷ್ಯ ಸ್ವಭಾವದ ವಿಶ್ಲೇಷಣೆಯೇ ಹೊರತು ಜಾತಿಪದ್ಧತಿಯ ವಿಶ್ಲೇಷಣೆ ಅಲ್ಲ ವೆಂದು ಮಧ್ವರು ಹೇಳಿದ್ದರು. ಈ ಪರಿಯ ಮಧ್ವರ ಕುರಿತು ತೇಜಸ್ವಿ ಹಸಿಹಸಿ ಸುಳ್ಳು ಹೇಳಬಾರದಿತ್ತು ಎಂದು ಬನ್ನಂಜೆ ಹೇಳಿದ್ದಾರೆ.

ನಿಲುವು ಬದಲಿಸಿಕೊಳ್ಳಿ, ಇಲ್ಲವೇ ಕ್ಷಮೆ ಕೇಳಿ....

ಮಧ್ವಾಚಾರ್ಯರ ವಿರುದ್ಧ ತೇಜಸ್ವಿ ಅವರು ಎತ್ತಿರುವ ಆಪಾದನೆಗಳು ಆಧಾರರಹಿತ, ಶುದ್ಧಾಂಗ ಸುಳ್ಳು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಹಾಗೂ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಅಭಿಪ್ರಾಯಪಟ್ಟಿದ್ದಾರೆ.

ತೇಜಸ್ವಿ ಅವರು ತಮ್ಮ ಆಪಾದನೆಗಳಿಗೆ ಆಧಾರ ತೋರಿಸಬೇಕು, ಇಲ್ಲವೇ ಕ್ಷಮೆ ಕೋರಬೇಕು ಎನ್ನುವುದು ವಿಶ್ವೇಶತೀರ್ಥರ ಪಟ್ಟು. ಹುಟ್ಟಿನ ಆಧಾರದ ಮೇಲಿನ ವರ್ಣವ್ಯವಸ್ಥೆಯನ್ನು ವಿರೋಧಿಸಿದ ವೈದಿಕ ಆಚಾರ್ಯರು ಮಧ್ವಾಚಾರ್ಯರೊಬ್ಬರೇ. ಅವರು ಗುಣನಡತೆಯ ಆಧಾರದ ಮೇಲೆ ವರ್ಣಾಶ್ರಮ ವ್ಯವಸ್ಥೆಯನ್ನು ಪ್ರತಿಪಾದಿಸಿದರು. ಮಧ್ವರ ಈ ಹೆಗ್ಗಳಿಕೆಯನ್ನು ಮರೆ ಮಾಚಿ ತೇಜಸ್ವಿ ಸುಳ್ಳುಬುರುಕರಾಗಿದ್ದಾರೆ ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಮಧ್ವಾಚಾರ್ಯರ ಹೆಸರನ್ನು ನಾಡಗೀತೆಯಲ್ಲಿ ಸೇರಿಸುವುದರ ಜೊತೆಗೆ ಕುರುಬ ಜನಾಂಗಕ್ಕೆ ಸೇರಿದ ಕನಕದಾಸರ ಹೆಸರನ್ನೂ ಸೇರಿಸಬೇಕು. ಒಂದುವೇಳೆ, ಕರ್ನಾಟಕದ ಮಧ್ವಾಚಾರ್ಯರ ಹೆಸರನ್ನು ನಾಡಗೀತೆಯಿಂದ ಕೈ ಬಿಡುವುದಾದರೆ, ಹೊರರಾಜ್ಯದ ಶಂಕರ ಹಾಗೂ ್ಫರಾಮಾನುಜರ ಹೆಸರನ್ನೂ ನಾಡಗೀತೆಯಿಂದ ಕೈಬಿಡಬೇಕು ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ತೇಜಸ್ವಿ ಸುಳ್ಳುಬುರುಕುತನದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಪುತ್ತಿಗೆ ಶ್ರೀಗಳು, ತಮ್ಮ ಅಭಿಪ್ರಾಯವನ್ನು ಪುನರ್‌ ವಿಮರ್ಶಿಸಿಕೊಳ್ಳುವಂತೆ ತೇಜಸ್ವಿ ಅವರಿಗೆ ಸೂಚಿಸಿದ್ದಾರೆ.

ಪ್ರತಿಯಾಬ್ಬ ಸಾಧಕನೂ ಮಾನವ ಜನಾಂಗಕ್ಕೆ ಮಾಡುವ ಸೇವೆ ಭಗವಂತನಿಗೆ ಸಲ್ಲಿಸುವ ಪೂಜೆ ಎಂದು ಮಧ್ವರು ಹೇಳಿದ್ದಾರೆ. ಇಂಥಹ ಆಚಾರ್ಯರು ಮಾನವ ಜನಾಂಗದ ಭಾಗವೊಂದನ್ನು ತಮೋಯೋಗ್ಯರೆಂದು ಹೇಳಿದ್ದಾರೆ ಎನ್ನುವ ಹೇಳಿಕೆ ಅವಾಸ್ತವ ಹಾಗೂ ಅಸಂಮಜಸ ಎಂದು ಪುತ್ತಿಗೆ ಶ್ರೀ ಹೇಳಿದ್ದಾರೆ.

ಮೂಲದಲ್ಲಿ ಇದ್ದಂತೆಯೇ ಇರಲಿ !

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಾಡಗೀತೆಯ ಕುರಿತು ನಡೆಯುತ್ತಿರುವ ಮಾತುಕತೆಯ ಕುರಿತು ಪ್ರತಿಕ್ರಿಯಿಸಿದ್ದು , ಕವಿತೆಯ ಮೂಲದಲ್ಲಿ ಇರುವುದನ್ನೇ ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.

ಸೇರ್ಪಡೆ ಅಥವಾ ತೆಗೆದುಹಾಕುವ ಕೃತ್ಯಗಳು ಕವಿಗೆ ಮಾಡುವ ಅವಮಾನವಾಗುತ್ತದೆ. ಆ ಕಾರಣದಿಂದಾಗಿ ಕುವೆಂಪು ಅವರು ಏನು ಬರೆದಿದ್ದರೋ ಅದು ಅಕ್ಷರಶಃ ಉಳಿಯಬೇಕು. ನಾಡಗೀತೆಗೆ ಅವಮಾನವಾಗುವಂಥ ಕೃತ್ಯಗಳು ನಡೆಯಬಾರದು ಎಂದು ಪರಿಷತ್ತಿನ ಹೇಳಿಕೆ ತಿಳಿಸಿದೆ.

ಕಥೆಗಾರ, ಲೇಖಕ ಬಿ.ವಿ.ವೀರಭದ್ರಪ್ಪ ಕೂಡ ನಾಡಗೀತೆಯ ಮೂಲವನ್ನು ಉಳಿಸಿಕೊಳ್ಳುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ. ಮೂಲ ಸಾಹಿತ್ಯದಲ್ಲಿ ಏನಿತ್ತು ಎನ್ನುವ ಕುರಿತು ಸಂಶೋಧನೆ ನಡೆಯಬೇಕು ಎನ್ನುವುದು ಅವರ ಅಭಿಮತ.

ನಾಡಗೀತೆಯ ಚರ್ಚೆ ಇದೀಗ ಮಧ್ವಾಚಾರ್ಯರ ಕುರಿತ ಚರ್ಚೆಯಾಗಿ ಬದಲಾಗಿದೆ. ವೈದಿಕ/ ಅವೈದಿಕ , ದ್ವೆತ/ ಅದ್ವೆತ/ ವಿಶಿಷ್ಠಾದ್ವೆತದ ವಾಸನೆಯೂ ಮೂಗಿಗೆ ಬಡಿಯುತ್ತಿದ್ದು , ಮಾತು- ಪ್ರತಿಮಾತು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ . ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಿ........

English summary
Madvacharyas deciples condemn Poornachandra Tejasvis statement about Madvacharya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X