ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿನಾಡಲ್ಲಿ ಕನ್ನಡಿಗರ ಸಾಧನೆಗಳನ್ನು ಮುಚ್ಚಿಕೊಂಡ ನಿರಭಿಮಾನ

By Staff
|
Google Oneindia Kannada News
ಪ್ರಪಂಚದ ಎಲ್ಲ ಮೂಲೆಯಲ್ಲಿರುವ ಕನ್ನಡಿಗರಿಗೆ 47ನೆಯ ರಾಜ್ಯೋತ್ಸವದ ಶುಭಾಶಯಗಳು! 1956-ರಲ್ಲಿ ಮೈಸೂರು ರಾಜ್ಯವಾಗಿ ರಚಿಸಲ್ಪಟ್ಟು 1973-ರಲ್ಲಿ ಕರ್ನಾಟಕವಾಗಿ ಅರಳಿದ ನಮ್ಮ ರಾಜ್ಯ ಇಂದಿಗೂ ದೇಶದ ಅತ್ಯಂತ ಶಾಂತಿಯುತ ರಾಜ್ಯವೆನ್ನುವುದರಲ್ಲಿ ಎರಡು ಮಾತಿಲ್ಲ.

ನಮ್ಮ ರಾಜ್ಯದ ಗಡಿಯನ್ನು ಕುರಿತು ಅನೇಕಾನೇಕ ವಿವಾದಗಳಿದ್ದು ಹಲವು ಕನ್ನಡ ಪ್ರದೇಶಗಳು ಸುತ್ತಲೂ ಇರುವ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಮತ್ತು ಕೇರಳಗಳಲ್ಲಿ ಸೇರಿಹೋದ ಎಂದಿಗೂ ಮಾಸದ ನೋವು ನಮ್ಮನ್ನು ಬಾಧಿಸುತ್ತಿದ್ದರೂ ಇಂದಿನ ದೇಶದ ಪರಿಸ್ಥಿತಿಯನ್ನು ಗಮನಿಸಿದರೆ ಈ ವಿಷಯವನ್ನು ಮರೆಯಲೇಬೇಕಾಗಿದೆ.

‘ಎಲ್ಲಾದರು ಇರು
ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು’

Kannadave Shakthi...- ಎನ್ನುವ ಕವಿಯಾಶಯಕ್ಕೆ ನಮನ ಸಲ್ಲಿಸುತ್ತ ನಮ್ಮ ಕನ್ನಡದೇಶಕ್ಕೆ ಸಂಬಂಧಿಸಿದ ಕೆಲವು ಮುಖ್ಯವಿಷಯಗಳನ್ನು ನೆನಪಿಸಿಕೊಳ್ಳೋಣ.

ಇವೇನೂ ನಾನು ಸಂಶೋಧಿಸಿದ್ದಲ್ಲ ! ಆದರೆ ನನ್ನ ಕನ್ನಡಿಗ ಗೆಳೆಯರ ಬಳಗದಲ್ಲೇ ಈ ವಿಷಯಗಳು ಯಾರಿಗೂ ತಿಳಿಯದಿರುವುದನ್ನು ಗಮನಿಸಿ ಓದಿದ ಕೆಲ ಪುಸ್ತಕಗಳಿಂದ ಹೆಕ್ಕಿ ತೆಗೆದು ಹಂಚಿಕೊಳ್ಳುತ್ತಿದ್ದೇನೆ. ಸ್ವಾಗತಿಸುತ್ತೀರಲ್ಲ ?

1. ಭಾರತದಲ್ಲಿ ಸಂಸ್ಕೃತದ ಹೊರತಾದ ಅತಿಪ್ರಾಚೀನ ಭಾಷೆ ತಮಿಳು. ಇದು ಎಲ್ಲ ಕನ್ನಡಿಗರಿಗೂ ತಿಳಿದಿದೆ! ಆದರೆ ಆ ನಂತರದ ಅತಿ ಪ್ರಾಚೀನ ಭಾಷೆ ಎಂಬ ಅಗ್ಗಳಿಕೆ ‘ಕನ್ನಡ’ಕ್ಕಿದೆ. ಹೌದು-ನಮ್ಮ ಭಾಷೆಗೂ ಅಷ್ಟು ಪ್ರಾಚೀನ ಹಿನ್ನೆಲೆಯಿದೆ.

2. ಕನ್ನಡಭಾಷೆಯಲ್ಲಿ ಸಿಕ್ಕಿರುವ ಶಾಸನಗಳಲ್ಲಿ ಅತಿಪ್ರಾಚೀನವೆಂದು ಹೆಸರಾಗಿರುವುದು ‘ಹಲ್ಮಿಡಿ ಶಾಸನ’. ಇದು ಕ್ರಿ.ಶ. 450-ರದ್ದು. ಎಂದರೆ ನಮ್ಮ ಬರಹದ ಮೂಲರೂಪ 1,500 ವರ್ಷಗಳಿಗೂ ಹಳೆಯದು!

3. ಈಗ ನಾವು ಬಳಸುವ ಕನ್ನಡವು ‘ಹೊಸಗನ್ನಡ’ವೆನಿಸಿದ್ದು ಇದರ ಬಳಕೆ 15ನೆಯ ಶತಮಾನದ ನಂತರ ಕಂಡುಬಂದಿದೆ.

4. ಕರ್ನಾಟಕದ ಪ್ರದೇಶವು ಒಂದುಕಾಲದಲ್ಲಿ ಈಗಿನ ಆಂಧ್ರ-ಮಹಾರಾಷ್ಟ್ರ-ಗುಜರಾತ್‌-ಮಧ್ಯಪ್ರದೇಶಗಳವರೆಗೆ ವಿಸ್ತರಿಸಿತ್ತು. ಆದರೆ ಅಲ್ಲೆಲ್ಲೂ ನಮ್ಮ ಅರಸರಿಂದ ‘ಕನ್ನಡ ಹೇರಿಕೆ’ ನಡೆಯಲಿಲ್ಲವೆಂಬುದು ಗಮನಾರ್ಹ.

5. ಕನ್ನಡಿಗರ ಸಹನಶೀಲತೆಗೆ ವಿಶೇಷ ಪ್ರಮಾಣಗಳೇನೂ ಬೇಕಿಲ್ಲ. ಒಂದು ಚಿಕ್ಕ ಐತಿಹಾಸಿಕ ಉದಾಹರಣೆ ಕೊಡುವುದಾದರೆ- ಪಲ್ಲವರು ಹಿಂದೆ ಬಾದಾಮಿಯನ್ನು ಗೆದ್ದು ಸುಟ್ಟರು. ಆದರೆ ಚಾಲುಕ್ಯ ದೊರೆಗಳು ಕಂಚಿಯನ್ನು ಹಾಳುಮಾಡದೆ ಅಲ್ಲಿನ ದೇವಾಲಯಗಳಿಗೆ ಅಪಾರ ಧನವನ್ನು ಕೊಟ್ಟರು!

6. ಅಜಂತ-ಎಲ್ಲೋರ-ಎಲಿಫೆಂಟಾ ಗುಹೆಗಳು ಕನ್ನಡ ದೊರೆಗಳಾದ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲ್ಪಟ್ಟವು.

7. ಮುಂಬೈಯಿಂದ ಸ್ವಲ್ಪ ಮೇಲಿರುವ ಔರಂಗಾಬಾದ್‌ ಜಿಲ್ಲೆಯಲ್ಲಿ ‘ಕನ್ನಡ’ ಎಂಬ ತಾಲ್ಲೂಕೇ ಇದೆ !

8. ಇನ್ನೂ ಕೊಂಚ ಹಿಂದೆ ಹೋದರೆ ಭರತಮುನಿಯ ‘ನಾಟ್ಯಶಾಸ್ತ್ರ’ ಕ್ಕೆ ವ್ಯಾಖ್ಯಾನ ಬರೆದ ನಾನ್ಯದೇವ, ಶಾರ್ಙ್ಞದೇವ, ಅವನ ವ್ಯಾಖ್ಯಾನಕಾರ ಕಲ್ಲಿನಾಥ ಎಲ್ಲರೂ ಕನ್ನಡಿಗರೇ!

9. ಈಗಿನ ‘ಹಿಂದೂಸ್ತಾನಿ’ ಅಥವಾ ‘ಉತ್ತರಾದಿ’ ಸಂಗೀತ ಪದ್ಧತಿಗೆ ಮೂಲ ಪುರುಷರಲ್ಲಿ ಒಬ್ಬನಾದ ಪುಂಡರೀಕ ವಿಠ್ಠಲನು ತನ್ನನ್ನು ‘ಕರ್ನಾಟಕಿ’ಯೆಂದೇ ಕರೆದುಕೊಂಡಿದ್ದಾನೆ.

ವಿಜಯನಗರದ ಅವನತಿಯಾಂದಿಗೆ (ಸುಮಾರು 16-ನೆಯ ಶತಮಾನದಲ್ಲಿ) ಕನ್ನಡಿಗರ ಸ್ವಾಭಿಮಾನದ ಅವನತಿಯೂ ಆಯಿತೆಂಬ ಮಾತಿದೆ. ಕಳೆದ ನೂರಿನ್ನೂರು ವರ್ಷಗಳ ಇತಿಹಾಸವು ಇದನ್ನು ಖಾತ್ರಿಪಡಿಸುತ್ತದೆ.

ಸ್ವಾನುಭವದಿಂದ ಬುತ್ತಿಯಿಂದ ಒಂದೆರಡು ವಿಷಯಗಳು-

‘ದೇಶ ಸುತ್ತು-ಕೋಶ ಓದು’ ಎಂಬ ಮಾತಿನಂತೆ ನನ್ನ ನಿಯಮಿತ ಸುತ್ತಾಟ-ಮಾತುಕತೆಗಳಿಂದ ತಿಳಿದುಕೊಂಡಿರುವ ಕೆಲ ವಿಷಯಗಳನ್ನು ಚರ್ಚಿಸಲು ಕೆಳಗೆ ಯತ್ನಿಸಿದ್ದೇನೆ.

ಕನ್ನಡಿಗರಲ್ಲಿನ ಉದ್ಯಮಶೀಲತೆಯ ಕೊರತೆ

ಕರ್ನಾಟಕ ರಾಜ್ಯವಾದ ಮೇಲೆ ಎಲ್ಲ ಕೈಗಾರಿಕೆಗಳು ಬೆಂಗಳೂರಿಗೆ ಬಂದುದರಿಂದ ವಿಶೇಷವಾಗಿ ಪ್ರತಿ ಹಳೆ ಮೈಸೂರು ಕನ್ನಡಿಗನೂ ಬೆಂಗಳೂರಲ್ಲೊಂದು ಕೆಲಸ-ಮನೆ ದೊರೆತುದೇ ತಡ ‘ಇನ್ನುಸಾಕು’ ಎಂದು ಆರಾಮವಾಗಿ ಕೈಚೆಲ್ಲಿ ಕುಳಿತುಕೊಳ್ಳುತ್ತಾನೆ ! ಇಲ್ಲವೇ ಅಮೆರಿಕದಂತಹ ದೂರದೇಶವನ್ನು ಸೇರಿ ‘ಔಟ್‌ ಆಫ್‌ ಸೈಟ್‌ ಈಸ್‌ ಔಟ್‌ ಆಫ್‌ ಮೈಂಡ್‌’ ಆಗುತ್ತಾನೆ. (ಹೊರದೇಶಗಳಲ್ಲಿರುವ ಕನ್ನಡಿಗರು ಕ್ಷಮಿಸಬೇಕು!)

ಆದರೆ ಮಂಗಳೂರು ಮತ್ತು ಇತರ ಉತ್ತರ ಕರ್ನಾಟಕ ಸೀಮೆಯ ಜನರು ಬೆಂಗಳೂರಿನ ಅತಿ ಇಂಗ್ಲೀಷ್‌ ಸಂಸ್ಕೃತಿಯಿಂದ ಬೇಸತ್ತು ಕೆಲಸದ ಅವಕಾಶಗಳಿಗೆಂದು ಮುಂಬೈ-ಮದರಾಸು-ದಿಲ್ಲಿಗಳತ್ತ ನಡೆಯುತ್ತಾರೆ. ಮತ್ತು ಕನ್ನಡಿಗನ ಸಹಜ ಪ್ರವೃತ್ತಿಯಂತೆ ತಾವು ನೆಲೆಸಿದ ನೆಲದ ಭಾಷೆಯನ್ನು ಪ್ರೀತ್ಯಾದರಗಳಿಂದ ಕಲಿತು ಅವರಲ್ಲೊಬ್ಬರಾಗುತ್ತಾರೆ. ತಮ್ಮ ಕನ್ನಡತನವನ್ನೂ ಕೈಲಾದಷ್ಟು ಮಟ್ಟಿಗೆ ಉಳಿಸಿಕೊಳ್ಳುತ್ತಾರೆ. ಇದನ್ನು ಅರ್ಥಮಾಡಿಕೊಳ್ಳದ ಈ ರಾಜ್ಯಗಳ ಜನರು ಕನ್ನಡಿಗರಿಗೆ ಭಾಷಾಭಿಮಾನವಿಲ್ಲ ಎಂದು ತೀರ್ಪು ನೀಡುತ್ತಾರೆ! ಮತ್ತು ಕನ್ನಡವೆಂದರೆ ‘ಏನು ಮಹಾ’ ಎಂಬ ಭಾವನೆ ತಳೆಯುತ್ತಾರೆ.

ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು ಸುಲಭದ ಮಾತಲ್ಲವಾದ್ದರಿಂದ ಅವಕಾಶ ದೊರೆತಾಗಲೆಲ್ಲಾ ಅಥವಾ ಸಾಂದರ್ಭಿಕವಾಗಿ ನಮ್ಮ ಭಾಷೆ-ನಾಡಿನ ಮಾತುಗಳನ್ನು ಇತರರಿಗೆ ತಿಳಿಸುವ ಅಗತ್ಯವಾದ ಕೆಲಸ ನಮ್ಮಿಂದಾಗಬೇಕಿದೆ.

*

ಓದುಗರಿಲ್ಲದ ಕನ್ನಡ ?

ನಮ್ಮ ಭಾಷೆಯನ್ನು ಓದುವ ಹವ್ಯಾಸದಲ್ಲೂ ನಾವು ಎಷ್ಟು ಹಿಂದಿದ್ದೇವೆ ಎಂದರೆ 6-ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಅತಿ ಹೆಚ್ಚು ಓದುಗರನ್ನುಳ್ಳ ದೈನಿಕದ ಪ್ರಸಾರ ಸಂಖ್ಯೆ ಸುಮಾರು 40-ಲಕ್ಷ ಮಾತ್ರ ! ಮತ್ತು ಕೇವಲ ಒಂದು-ಎರಡು ದೈನಿಕಗಳು ಮುಂಬೈ-ಹೈದರಾಬಾದ್‌ಗಳಿಂದ ಪ್ರಕಟಗೊಳ್ಳುತ್ತಿದ್ದು ಅವುಗಳ ಓದುಗರ ಸಂಖ್ಯೆ ಕೆಲವೇ ಸಾವಿರ.

ಅದೇ ತಮಿಳು-ತೆಲುಗು-ಮಲಯಾಳಂ-ಹಿಂದಿ-ಗುಜರಾತಿ-ಮರಾಠಿ ರೀತಿಯ ನಮ್ಮ ಸೋದರಭಾಷೆಗಳು ತಮ್ಮ ರಾಜ್ಯಗಳಲ್ಲಿ ಅತ್ಯಧಿಕ ಪತ್ರಿಕೆಗಳನ್ನು ಮಾರಾಟ ಮಾಡುವುದೇ ಅಲ್ಲದೆ ಬೆಂಗಳೂರಿನಿಂದಲೂ ಅಧಿಕ ಸಂಖ್ಯೆಯಲ್ಲಿ ತಮ್ಮ ಪತ್ರಿಕೆಗಳನ್ನು ಮಾರಾಟಮಾಡುತ್ತಿವೆ. ಎಂದರೆ ಇತರ ರಾಜ್ಯಗಳಿಂದ ದಿನನಿತ್ಯವೂ ಬೆಂಗಳೂರಿಗೆ ಬಂದು ತುಂಬಿಕೊಳ್ಳುತ್ತಿರುವ ಅನ್ಯಭಾಷೆಯವರಿಗಿರುವ ಕಾಳಜಿ ಕನ್ನಡಿಗರಿಗೆ ಕನ್ನಡ ನಾಡಿನಲ್ಲೇ ಇಲ್ಲವೆಂಬುದು ಸ್ಪಷ್ಟವಲ್ಲವೇ?

ಒಂದು ಅಂದಾಜಿನ ಪ್ರಕಾರ ಮುಂಬೈ ನಗರವೊಂದರಲ್ಲೇ ಸುಮಾರು 15-ಲಕ್ಷ ಕನ್ನಡಿಗರಿದ್ದಾರೆ. ಇನ್ನು ಪುಣೆ-ನಾಸಿಕ್‌-ಕೊಯಮತ್ತೂರು-ಹೈದರಾಬಾದ್‌ ನಗರಗಳಲ್ಲಿರುವ ಕನ್ನಡಿಗರ ಸಂಖ್ಯೆ ಸೇರಿದರೆ ಸುಮಾರು ಅರ್ಧ ಕೋಟಿ ಮೀರುವಲ್ಲಿ ಸಂಶಯವಿಲ್ಲ. ನಮ್ಮ ಪತ್ರಿಕೆ-ಪುಸ್ತಕ ಪ್ರಕಾಶಕರು ಈ ವಿಶಾಲ ಮಾರುಕಟ್ಟೆಯ ಬಗೆಗೆ ಇನ್ನಾದರೂ ಯೋಚಿಸಿದಲ್ಲಿ ಅದು ಅವರ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ ನಮ್ಮ ಭಾಷೆಗೂ ಇತರ ಸ್ಥಳಗಳಲ್ಲಿ ಒಂದು ಇರುವಿಕೆ (ಪ್ರೆಸೆನ್ಸ್‌)ಯನ್ನು ನೀಡುತ್ತದೆ.

ವಲಸಿಗರೆಲ್ಲರೂ ಬುದ್ಧಿವಂತರಾ ?

ಕರ್ನಾಟಕವೆಂದರೆ ಬೆಂಗಳೂರು ಎನ್ನುವ ವಿಪರ್ಯಾಸದ ಪರಿಸ್ಥಿತಿಯ ಇಂದಿನ ದಿನಗಳಲ್ಲಿ ಇಲ್ಲಿರುವ ಪ್ರತಿಯಾಂದು ದೊಡ್ಡ ಉದ್ಯಮಿಯೂ ಬೇರೆಡೆಯಿಂದ ಬಂದು ನೆಲೆ ನಿಂತವರೇ. ಇವರಲ್ಲಿ ಬೆರಳೆಣಿಕೆಯಷ್ಟು ಮಂದಿ ಕನ್ನಡಿಗರೊಂದಿಗೆ ಬೆರೆತಿದ್ದರೆ ಇತರರು ಕನ್ನಡಕ್ಕೂ-ತಮಗೂ ಯಾವ ಸಂಬಂಧವೂ ಇಲ್ಲವೆನ್ನುವಂತಿದ್ದಾರೆ.

ಮತ್ತು ಬೆಂಗಳೂರಿಗೆ ಅಂಟಿಕೊಂಡಿರುವ ತಮಿಳುನಾಡು- ಆಂಧ್ರ ಮತ್ತು ಕೊಂಚ ದೂರದ ಕೇರಳಗಳಿಂದ ದಿನಂಪ್ರತಿ ತಂಡೋಪತಂಡವಾಗಿ ಕೆಲಸಕ್ಕೆಂದು ಬರುತ್ತಿರುವ ವಲಸಿಗರು ಇಲ್ಲಿನ ಭಾಷೆಯನ್ನು ಕಲಿಯಲು ಕನ್ನಡಿಗರೇ ಕಾಳಜಿ ವಹಿಸುತ್ತಿಲ್ಲ ! ಹೋಗಲಿ-ಈ ವಲಸಿಗರೆಲ್ಲರೂ ಬುದ್ಧಿವಂತರೇ ? ನನ್ನ ಅನುಭವದಲ್ಲಿ ಖಂಡಿತ ಇಲ್ಲ. ಏಕೆಂದರೆ ತಮ್ಮ-ತಮ್ಮ ಮಾತೃಭಾಷೆಯನ್ನು ಬಿಟ್ಟು ಇತರ ಯಾವ ಭಾಷೆಯ (ಆಂಗ್ಲ-ಹಿಂದಿ ಸಹಿತ) ಗಂಧವೂ ಇಲ್ಲದ ಸಹಸ್ರಾರು ಜನರು ಬೆಂಗಳೂರಿನ ಇಂಚಿಂಚಿನಲ್ಲೂ ಇದ್ದಾರೆ. ಪರವೂರಿನಿಂದ ಬಂದ ಪ್ರತಿಯಾಬ್ಬ ವ್ಯಕ್ತಿಯೂ ತನ್ನ ಹಿಂದೆ ಒಂದು ದೊಡ್ಡ ತಂಡವನ್ನೇ ಕರೆಸಿಕೊಳ್ಳುತ್ತಾನೆ. ಇದಕ್ಕೆ ವಿರುದ್ಧವಾಗಿ ನಿರಭಿಮಾನಿ ಕನ್ನಡಿಗರು ಮಾತ್ರ ಆಂಗ್ಲ-ಹಿಂದಿ ಬಾರದ ಕನ್ನಡಿಗರನ್ನು ತಮ್ಮವರೆಂದು ಹೇಳಿಕೊಳ್ಳಲೂ ಸಂಕೋಚಿಸುತ್ತಿದ್ದಾರೆ. (ಇನ್ನು ಎಲ್‌.ಟಿ.ಟಿ.ಇ.ಯ ಮಹದಾಸೆಯ ‘ತಮಿಳುರಾಜ್ಯ’ದಲ್ಲಿ ಬೆಂಗಳೂರು ಸೇರಿದೆ-ಎಂಬುದು ನಿಮಗೆ ತಿಳಿದಿರಬಹುದು).

ಇಂದಿನ ಪರಿಸ್ಥಿತಿಯನ್ನು ಕಂಡರೆ ನಮ್ಮ ರಾಜಧಾನಿ ನಮ್ಮ ಕೈ ತಪ್ಪುವ ದಿನಗಳು ದೂರವಿಲ್ಲವೆನಿಸದು.

*

ಎದ್ದೇಳಿ ಕನ್ನಡಿಗರೇ!

ಬೇರೆಯವರಿಗೆ ಬೋಧಿಸುವುದನ್ನು ನಿಲ್ಲಿಸಿ ಕರ್ತವ್ಯ ಪರರಾಗಬೇಕು. ಇದೇ ಇಂದಿನ ಪ್ರತಿ ಕನ್ನಡಿಗನ ಮೂಲಮಂತ್ರವಾಗಬೇಕು. ಹೌದು-ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲೇಬೇಕು. ಪ್ರತಿ ಕನ್ನಡಿಗನೂ ತನ್ನ ಮುಂದಿನ ಪೀಳಿಗೆಯನ್ನು ಕೇವಲ ಇಂಜಿನಿಯರ್‌-ಡಾಕ್ಟರ್‌ ಮಾಡಲು ಪ್ರಯತ್ನಿಸದೆ ಐ.ಎ.ಎಸ್‌./ಐ.ಪಿ.ಎಸ್‌./ಐ.ಎಫ್‌.ಎಸ್‌. ರೀತಿಯ ಉನ್ನತ ಹುದ್ದೆಗಳಿಗೆ ಏರುವಂತೆ ಪ್ರೋತ್ಸಾಹಿಸಬೇಕು. ನಿಮಗೇ ತಿಳಿದಿರುವಂತೆ ಈ ಅಧಿಕಾರಿಗಳು ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯರಾಗಿರುತ್ತಾರೆ. ಕನ್ನಡಿಗರಲ್ಲಿ ಇಂತಹವರ ಸಂಖ್ಯೆ ಹೆಚ್ಚಾಗಿಲ್ಲದಿರುವುದರಿಂದ ಇಲ್ಲಿನ ಭಾಷೆ-ಸಂಸ್ಕೃತಿಯ ಅರಿವಿಲ್ಲದ ಅಧಿಕಾರಿಗಳು ಕರ್ನಾಟಕದೆಲ್ಲೆಡೆ ತುಂಬಿದ್ದಾರೆ! ವಿಜಯಲಕ್ಷ್ಮಿ ಬಿದರಿ-ಎರಡು ವರ್ಷಗಳ ಹಿಂದೆ ಐ.ಎ.ಎಸ್‌.ನಲ್ಲಿ ಮೊದಲ ರ್ಯಾಂಕ್‌ ಗಳಿಸಿ ಕನ್ನಡಿಗರ ಪತಾಕೆಯನ್ನು ಹಾರಿಸಿದ್ದರೆನ್ನುವುದು ಗಮನಾರ್ಹ. ಆಕೆಯ ಸಾಧನೆ ನಮಗೆ ಆದರ್ಶವಾಗಲಿ.

ಭಾರತೀಯ ನೆಲ/ಜಲ/ವಾಯುಸೇನೆಗಳಲ್ಲಿರುವ ಕನ್ನಡಿಗರ ಸಂಖ್ಯೆ ಬೆರಳೆಣಿಕೆಗಿಂತ ಕಡಿಮೆ. ಈ ಉದ್ಯೋಗಗಳಲ್ಲಿ ಸಾಕಷ್ಟು ಹಣ-ಪ್ರತಿಷ್ಠೆ-ಅಧಿಕಾರಗಳಿದ್ದರೂ ಕನ್ನಡಿಗರ ಕಣ್ಣಿಗೆ ಮಾತ್ರ ಇವು ಕಾಣುವುದಿಲ್ಲ.

‘ಅಯ್ಯೋ-ಕೆಲಸ ಯಾವುದಾದರೂ ಸರಿ. ನಮ್ಮ ಹುಡುಗ/ಹುಡುಗಿ ನಮ್ಮ ಕಣ್ಣಮುಂದಿದ್ದರೆ ಸಾಕಪ್ಪ’ ಎನ್ನುವ ಪ್ರವೃತ್ತಿ ಬದಲಾಗುವವರೆಗೂ ನಮ್ಮ ಏಳಿಗೆ ಸಾಧ್ಯವಿಲ್ಲ. ವಿಪರ್ಯಾಸವೆಂದರೆ ಕನ್ನಡಭಾಷಿಕ ಪ್ರದೇಶಗಳು ಹಂಚಿಹೋಗಿದ್ದ ಕಾಲದಲ್ಲಿ ಕನ್ನಡಿಗರು ಮುಂಬೈ-ಮದ್ರಾಸ್‌-ಹೈದರಾಬಾದ್‌ ಆಡಳಿತಗಳಲ್ಲಿ ಅನೇಕ ಉನ್ನತಹುದ್ದೆಗಳನ್ನು ಅಲಂಕರಿಸಿದ್ದರು. ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಜನರಲ್‌ ಕರಿಯಪ್ಪ, ತಿಮ್ಮಯ್ಯ, ಸರ್‌.ಎಂ.ವಿ. ತಕ್ಷಣ ನೆನಪಿಗೆ ಬರುವ ಕೆಲ ಹೆಸರುಗಳು.

ಆದರೆ ನಮ್ಮ ರಾಜ್ಯದ ನಿರ್ಮಾಣವಾದ ಮೇಲೇಕೋ ಆಲಸ್ಯ ಎಂಬುದು ಕನ್ನಡಿಗರ ಮತ್ತೊಂದು ಹೆಸರಾಗಿದೆ. ಫಲವಾಗಿ ಹೆಸರಿಗೆ ಕರ್ನಾಟಕ ವಾಗಿದ್ದರೂ ಇಲ್ಲಿ ಕನ್ನಡಿಗ ಅಧಿಕಾರಿಗಳು ಎಲ್ಲೆಂದು ಹುಡುಕುವ ಪರಿಸ್ಥಿತಿ ಬಂದಿದೆ.

ರಾಜಕೀಯದಲ್ಲಿ

ಇನ್ನು ಒಂದು ಜನಸಮೂಹದ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ರಾಜಕೀಯ ರಂಗದಲ್ಲೂ ಕರ್ನಾಟಕದ ಪರಿಸ್ಥಿತಿ ಶೋಚನೀಯ. ಕಾಂಗ್ರೆಸ್‌ನಲ್ಲಿದ್ದೂ ಅಸಹನೆ ವ್ಯಕ್ತಪಡಿಸಿದ ನಿಜಲಿಂಗಪ್ಪನವರು, ಒಂದೊಮ್ಮೆ ಇಂದಿರಾಗಾಂಧಿಯವರನ್ನು ಎದುರು ಹಾಕಿಕೊಂಡ ದೇವರಾಜ ಅರಸ್‌ ಬಿಟ್ಟರೆ ಹೈಕಮಾಂಡ್‌ಗೆ ಸಲಾಮು ಹಾಕುವ ಎಲ್ಲ ಪಕ್ಷಗಳ ಮುಖಂಡರಿಂದ ನಮ್ಮ ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಯಾವ ಪ್ರಾಮುಖ್ಯತೆಯೂ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಒಂದೋ-ಎರಡೋ ಮಂತ್ರಿಪದವಿ ಕೊಟ್ಟು ಕನ್ನಡಿಗರನ್ನು ಸುಮ್ಮನಿರಿಸುವ ಕೆಲಸ ದಶಕಗಳಿಂದ ನಡೆಯುತ್ತಲೇ ಇದೆ.

ಮುಖ್ಯವಾಗಿ ಜಾತಿ ರಾಜಕೀಯದ ಫಲವಾಗಿ ರಾಷ್ಟ್ರಮಟ್ಟದಲ್ಲಿ ಗೌಣವಾಗಿರುವ ಕನ್ನಡಿಗರು ದೇವೇಗೌಡರು ಪ್ರಧಾನಿಗಳಾದಾಗ ಅದನ್ನು ಸ್ವಾಗತಿಸುವಲ್ಲೂ ಜಿಪುಣತನ ತೋರಿದರು! ಅವರ ಸಾಧನೆಗಳ ಪಟ್ಟಿಮಾಡುವುದು ಇಲ್ಲಿನ ಉದ್ದೇಶವಲ್ಲ. ಆದರೆ ಮನಸ್ಸು ಮಾಡಿದರೆ ಕನ್ನಡಿಗರಿಗೂ ಉನ್ನತಪಟ್ಟ ದೊರೆಯುತ್ತದೆ ಎನ್ನುವುದನ್ನು ಅವರು ತೋರಿಸಿದ್ದೇನೂ ಕಡಿಮೆ ಸಾಧನೆಯಲ್ಲ. ಒಂದುಕಾಲಕ್ಕೆ ಪ್ರಧಾನಿಗಳಾಗಿ ಯಾವ ಸಾಧನೆಯನ್ನೂ ಮಾಡದಿದ್ದ ಚಂದ್ರಶೇಖರ್‌-ವಿ.ಪಿ.ಸಿಂಗ್‌ ಅವರಿಗಿಂತ ಗೌಡರು ಯಾತರಲ್ಲಿ ಕಡಿಮೆಯಾದರೋ? ಇನ್ನು ಶೀಘ್ರದಲ್ಲೇ ಪ್ರಧಾನಿಗಳಾಗುವ ಪಟ್ಟಿಯಲ್ಲಿ ಮುಲಾಯಂ-ಲಾಲೂ ಹೆಸರುಗಳು ರಾರಾಜಿಸುತ್ತಿವೆ! ನಮ್ಮ ವಿವಿಧ ರಾಜಕೀಯ ಪಕ್ಷಗಳಿಗೆ ಇದನ್ನು ಆಲೋಚಿಸುವಷ್ಟು ವ್ಯವಧಾನವೂ ಇಲ್ಲವೇ?

ಮನರಂಜನೆ ಮತ್ತು ಪ್ರಚಾರ ಕ್ಷೇತ್ರದಲ್ಲಿ

ಇಂದಿನ ಜನಜೀವನದ ಮುಖ್ಯ ಅಂಗವಾದ ಮನರಂಜನೆಯ ವಿಷಯದಲ್ಲಂತೂ ಕನ್ನಡಿಗರು ಪ್ರಚಾರದಿಂದ ಗಾವುದ ದೂರ! ಕೇವಲ ರಾಜ್ಯಮಟ್ಟದಲ್ಲಲ್ಲದೇ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದ ಗುಬ್ಬಿ-ಸಂಸ್ಥೆಯಂತಹವುಗಳ ಇತಿಹಾಸವಿದ್ದರೂ ಇಂದು ನಮ್ಮ ಚಲನಚಿತ್ರರಂಗದ ಸ್ಥಿತಿ ಶೋಚನೀಯ. ಎಲ್ಲ ಭಾಷೆಗಳ ಶೇ.95-ರಷ್ಟು ಚಲನಚಿತ್ರಗಳು ದಯನೀಯವಾಗಿ ಸೋಲುತ್ತಿದ್ದರೂ ಅಲ್ಲಿನ ವೃತ್ತಿಪರತೆ-ಪ್ರಚಾರತಂತ್ರಗಳಿಂದ ಅವು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಲೇ ಇವೆ. ಅದೇ ಶೇ.99ರಷ್ಟು ಕನ್ನಡ ಚಿತ್ರಗಳು ನಾವುಗಳು ತಲೆತಗ್ಗಿಸುವಂತೆ ಮಾಡುತ್ತಿವೆ. ಜೊತೆಗೆ ಅಪರೂಪಕ್ಕೊಮ್ಮೆ ಬರುವ ಒಳ್ಳೆಯ ಚಿತ್ರಗಳನ್ನು ಸಮರ್ಥವಾಗಿ ರಾಷ್ಟ್ರಮಟ್ಟದಲ್ಲಿ ಬಿಂಬಿಸುವಲ್ಲಿ ನಾವುಗಳು ಸಂಪೂರ್ಣ ಸೋತಿದ್ದೇವೆ.

ಸರಳವಾಗಿ ಹೇಳಬೇಕೆಂದರೆ ಪ್ರತಿ ಕನ್ನಡಿಗನೂ ತನ್ನ ಜೀವನದ ಪ್ರತಿ ಮಜಲಿನಲ್ಲೂ ಕನ್ನಡತನವನ್ನು ಅಳವಡಿಸಿಕೊಳ್ಳುವುದರ ಜೊತೆಗೇ ತನ್ನ ಅಲ್ಪತೃಪ್ತನಾಗುವ ಸ್ವಭಾವವನ್ನು ಬಿಡುವ ತನಕ ಕನ್ನಡ ಭಾಷೆಗೆ-ಕನ್ನಡಿಗನಿಗೆ ಸಿಗಬೇಕಾದ ಪ್ರಾಧಾನ್ಯತೆ ದೊರೆಯದು. ಈ ಕ್ಷಣದಿಂದಲಾದರೂ ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗೋಣ. ಅದರಿಂದ ಕನಿಷ್ಠ ಮುಂದಿನ ನೂರು ವರ್ಷಗಳಲ್ಲಿ ಕನ್ನಡ ಭಾಷೆ-ಜನ ತಮಗೆ ಇತಿಹಾಸ ಕಾಲದಲ್ಲಿದ್ದ ಪ್ರಾಮುಖ್ಯತೆಯನ್ನು ಮತ್ತೆ ಗಳಿಸಿಕೊಂಡರೂ ನಮ್ಮ ಕಿಂಚಿತ್‌ ಸೇವೆಗೆ ಫಲಸಿಕ್ಕಂತೆ.

ಕನ್ನಡಿಗರು ನಿರಭಿಮಾನಿಗಳೆ ? ನೀವೇನಂತೀರಿ ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X