ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡುಗಾಯಕಿ ಮಂಜುಳಾ ಹಾಡುಹಾದಿ

By Staff
|
Google Oneindia Kannada News
‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು...’
ಈ ಹಾಡು ಕೇಳಿದವರು ಗುಂಡು ಹಾಕದೆಯೂ ಮತ್ತಿನಲ್ಲಿ ತೇಲಾಡುವಂತಹ ಕಾಲವೊಂದಿತ್ತು. ‘ನಂಜುಂಡಿ ಕಲ್ಯಾಣ’ ಚಿತ್ರದ ಈ ಹಾಡಿನಿಂದ ಗಾಯಕಿ ಮಂಜುಳಾ ಗುರುರಾಜ್‌ ಮತ್ತು ಆ ಹಾಡಿಗೆ ನಟಿಸಿದ ಮಾಲಾಶ್ರೀ ದಿನಬೆಳಗಾಗುವುದರೊಳಗೆ ಜನಪ್ರಿಯರಾದರು. ಎಲ್‌.ಆರ್‌. ಈಶ್ವರಿ ಬಿಟ್ಟು ಹೋದ ಸ್ಥಾನಕ್ಕೆ ಈಕೆ ವಾರಸುದಾರಳು ಎಂಬ ಅಭಿಪ್ರಾಯವೂ ಆ ದಿನಗಳಲ್ಲಿ ಕೇಳಿಬಂತು. ಗುಂಡು ಹಾಡಿಗೂ ಮುಂಚೆ ಮತ್ತು ನಂತರ ಅನೇಕ ಒಳ್ಳೆಯ ಹಾಡುಗಳನ್ನು ಮಂಜುಳಾ ಹಾಡಿದ್ದಾರೆ. ಆದರೂ, ಈಗಲೂ ಮಂಜುಳಾ ಗುರುರಾಜ್‌ ಎಂದೊಡನೆ ಜನ ನೆನೆಯುವುದು ಗುಂಡು ಹಾಡನ್ನು.

ಮಂಜುಳಾ ಗುರುರಾಜ್‌ ಅಚ್ಚ ಕನ್ನಡದ ಪ್ರತಿಭೆ. ಕನ್ನಡದ ಗಾಯಕಿಯರಿಗೆ ಪರಭಾಷಾ ಗಾಯಕಿಯರ ಮುಂದೆ ಅವಕಾಶ ಬಹಳ ಕಡಿಮೆ ಇದ್ದಾಗ ಒಂದು ಹಾಡಿನಿಂದ ಜನಪ್ರಿಯರಾಗಿ ನಂತರ ತಮ್ಮ ಮಾದಕ ಕಂಠದಿಂದ ಬಹಳ ವರ್ಷಗಳ ಕಾಲ ತಮ್ಮ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡವರು. ಜನಪ್ರಿಯ ಗಾಯಕಿಯಾಗಿದ್ದರೂ ವಾದ್ಯವೃಂದದಲ್ಲಿ ಹಾಡಿ, ತಮ್ಮ ಗಾಯನ ಶಾಲೆಯಲ್ಲಿ ಶಿಕ್ಷಕಿಯಾಗಿ, ವಾರ್ತಾ ವಾಚಕಿಯಾಗಿಯೂ ಹೆಸರು ಮಾಡಿದವರು. ಮಾಲಾಶ್ರೀ ನಾಯಕಿಯಾಗಿ ಉತ್ತುಂಗದಲ್ಲಿರುವಾಗ ಅವರ ಖಾಯಂ ಕಂಠವಾಗಿದ್ದ ಮಂಜುಳಾ- ದಟ್ಸ್‌ಕನ್ನಡ.ಕಾಂನೊಂದಿಗೆ ತಮ್ಮ ವಾದ್ಯವೃಂದ, ಸಂಗೀತ ಶಾಲೆ, ಇಂದಿನ ಚಿತ್ರ ಸಂಗೀತ ಮೊದಲಾದ ವಿಷಯಗಳ ಕುರಿತು ಮಾತನಾಡಿದರು.

ಹಾಡುಹಾದಿಯ ಟಿಪ್ಪಣಿ

ಮೂರುವರೆ ವರ್ಷ ವಯಸ್ಸಲ್ಲೇ ಬಾಲ ಗಾಯಕಿಯಾಗಿ ‘ಜಾಗೃತಿ’ ಚಿತ್ರಕ್ಕೆ ಹಾಡುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮಂಜುಳಾ ಗುರುರಾಜ್‌ ಅವರದ್ದು ಸಂಗೀತಗಾರರ ಮನೆತನ. ಈಕೆಯ ತಾಯಿ ಹಾಡುತ್ತಿದ್ದರೆ, ತಂದೆ ಮೃದಂಗ ನುಡಿಸುತ್ತಿದ್ದರು. ವಾದ್ಯವೃಂದದಲ್ಲಿ ಮಂಜುಳಾರಿಗೆ ಅಕ್ಕ ಜತೆಯಾದರೆ, ತಾತ ಮೈಸೂರು ಗುರುಮೂರ್ತಿ ಸಂಗೀತದ ಬಗ್ಗೆ ಗ್ರಂಥ ರಚಿಸಿದ್ದವರು. ಮೆಚ್ಚಿ ಮದುವೆಯಾದ ಗಂಡ ಗುರುರಾಜ್‌ ಗಾಯಕನಾದರೆ, ಮಗಳು ಸಂಗೀತ ಕೂಡ ಉದಯೋನ್ಮುಖ ಗಾಯಕಿ. ಹೀಗೆ ಮಂಜುಳಾ ಗುರುರಾಜ್‌ ಅವರ ಮನೆ- ಮನ ಎಲ್ಲವೂ ಸಂಗೀತಮಯ.

ಚಿಕ್ಕಂದಿನಿಂದಲೂ ಮಂಜುಳಾಗೆ ಎಲ್‌. ಆರ್‌. ಈಶ್ವರಿ ಹಾಡುಗಳು ಬಲು ಇಷ್ಟ . 7 ವರ್ಷದವಳಿದ್ದಾಗ ವಾದ್ಯವೃಂದದಲ್ಲಿ ಹಾಡಲು ಪ್ರಾರಂಭ ಮಾಡಿದ ಮಂಜುಳಾ, ಆಗ ಮೈಕು ಕೈಗೆ ಬಂತೆಂದರೆ ಎಲ್‌.ಆರ್‌.ಈಶ್ವರಿಯವರನ್ನು ಆವಾಹಿಸಿಕೊಳ್ಳುತ್ತಿದ್ದರು. ಗಾನ ಶಾರದ, ಸತ್ಯವಾಣಿ ಮತ್ತು ಮುರಳಿಯವರ ವಾದ್ಯವೃಂದದಲ್ಲಿ ಹಾಡಿ ಅನುಭವ ಗಿಟ್ಟಿಸಿಕೊಂಡ ನಂತರ 1973-74ರಲ್ಲಿ ‘ಮಂಜಳಾ ಅಂಡ್‌ ಪಾರ್ಟಿ’ ಎಂಬ ವಾದ್ಯವೃಂದವನ್ನು ತಾವೇ ಪ್ರಾರಂಭ ಮಾಡಿದರು. ಓದಿನ ಜತೆಜತೆಗೆ ವಾದ್ಯವೃಂದವನ್ನು ಸಮರ್ಥವಾಗಿ ನಡೆಸಿ, 1977ರಲ್ಲಿ ಡಿಸೆಂಬರ್‌ನಲ್ಲಿ ‘ಸೌಂಡ್‌ ಆಫ್‌ ಮ್ಯೂಸಿಕ್‌’ ವಾದ್ಯವೃಂದ ಪ್ರಾರಂಭ ಮಾಡಿದರು.

ತಮ್ಮ 19ನೇ ವಯಸ್ಸಿನಲ್ಲೇ ಗುರುರಾಜ್‌ ಅವರನ್ನು ಮದುವೆಯಾದ ಮಂಜುಳಾ, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ‘ಎ’ ಶ್ರೇಣಿಯ ಕಲಾವಿದೆಯಾಗಿ, ಸುದ್ದಿ ವಾಚಕಿಯಾಗಿ ಕೆಲಸ ಮಾಡುವ ಜತೆಜತೆಗೆ ಅನೇಕ ಧ್ವನಿಸುರುಳಿಗಳಿಗೆ ಗೀತ ರಚನೆ ಮಾಡಿ, ಸಂಗೀತ ನೀಡಿ, ಹಾಡುತ್ತಿದ್ದರು. ಇವರ ಕಂಠ ಕೇಳಿದ ಖ್ಯಾತ ನಿರ್ದೇಶಕ ಜೋಸೈಮನ್‌ 1983ರಲ್ಲಿ ‘ರೌಡಿ ರಾಜ’ ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯ ಮಾಡಿಸಿದರು.

I am not happy with lyrics of these daysರೌಡಿ ರಾಜ ಚಿತ್ರದಿಂದ ಪ್ರಾರಂಭವಾದ ಅವರ ಗೀತಯಾತ್ರೆ ಇದುವರೆವಿಗೂ ನಿಂತಿದ್ದೇ ಇಲ್ಲ. ಕನ್ನಡವಲ್ಲದೆ ಕೊಂಕಣಿ, ತೆಲುಗು, ತಮಿಳು, ಮಲಯಾಳಂ, ತುಳು ಮುಂತಾದ ಭಾಷೆಗಳಲ್ಲಿ ಸುಮಾರು 1600 ಹಾಡುಗಳನ್ನು ಹಾಡಿದ್ದಾರೆ. ಇದಲ್ಲದೆ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಡುವುದರ ಜತೆಗೆ ನಾಡಿನ ಖ್ಯಾತ ಕವಿಗಳ ರಚನೆಗಳಿಗೆ ತಾವೇ ಮಟ್ಟು ಹಾಕಿ ಹಾಡಿದ್ದಾರೆ. ಒಂಭತ್ತು ಭಾಷೆಗಳಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚಿನ ಗೀತೆಗಳನ್ನು ಹಾಡಿ ಬಂಗಾರ ಮತ್ತು ಪ್ಲಾಟಿನಮ್‌ ಡಿಸ್ಕ್‌ ಪ್ರಶಂಸೆಗೆ ಪಾತ್ರರಾದ ಮಂಜುಳಾ, ‘ಚಿನ್ನಾರಿ ಮುತ್ತ’ ಚಿತ್ರದ ‘ಮ್ಯಾಲೆ ಕವುಕೊಂಡ ಮುಂಗಾರ ಮೋಡ/ ತೂರಿ ಬರ್ತಾನೆ ಚಂದ್ರಾಮ ನೋಡ..’ ಹಾಡಿಗೆ ರಾಜ್ಯ ಸರ್ಕಾರದ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಪಡೆದರು. ಮಂಜುಳಾ ನೆನಪಿಸಿಕೊಳ್ಳುವಂತೆ ಅವರಿಗೆ ತರಂಗಿಣಿ ಬರ್ಕ್‌ಲಿ, ಚಿತ್ರ ಪ್ರೇಮಿಗಳ ಪ್ರಶಸ್ತಿ, ಕನ್ನಡ ಪ್ರಭ, ಆರ್ಯಭಟ, ಚಿತ್ರರಸಿಕರ ಪ್ರಶಸ್ತಿ ಸಿಕ್ಕಿದೆ. ಅದಲ್ಲದೆ ನಾಯಕಿಯೇ ಇಲ್ಲದೆ, ಬರೀ ಧ್ವನಿಯೇ ನಾಯಕಿಯಾಗಿರುವ ‘ಬೆಳದಿಂಗಳ ಬಾಲೆ’ ಚಿತ್ರದಲ್ಲಿ ಅತ್ಯುತ್ತಮ ಕಂಠದಾನಕ್ಕಾಗಿ ಇವರಿಗೆ ವಿಶೇಷ ರಾಜ್ಯಪ್ರಶಸ್ತಿ ಬಂದಿದೆ.

ಗಾಯಕಿಯಾಗಿ, ಸುದ್ದಿವಾಚಕಿಯಾಗಿ, ಕಂಠದಾನ ಕಲಾವಿದೆಯಾಗಿ ಹಂಚಿಹೋಗಿದ್ದ ಮಂಜುಳಾ ಗುರುರಾಜ್‌, ಏನಾದರೂ ಹೊಸದು ಮಾಡಬೇಕೆಂದು ‘ಸಾಧನ ಮ್ಯೂಸಿಕ್‌ ಸ್ಕೂಲ್‌’ ಪ್ರಾರಂಭ ಮಾಡಿದರು. ಹಿನ್ನಲೆ ಗಾಯಕಿ ಎಸ್‌.ಜಾನಕಿ ಜೂನ್‌ 21,1991ರಂದು ಈ ಸಂಗೀತ ಶಾಲೆಯನ್ನು ಉದ್ಘಾಟಿಸಿದರು. ಏನು ಕಲಿಸಬೇಕು ಎಂಬ ಗೊಂದಲದಲ್ಲಿ ಗುರು ದಂಪತಿಗಳಿರುವಾಗಲೇ, ಅನೇಕ ವಿದ್ಯಾರ್ಥಿಗಳು ಸಂಗೀತ ಶಾಲೆಗೆ ಸೇರಿಬಿಟ್ಟಿದ್ದರು. ಶಾಲೆ ಪ್ರಾರಂಭವಾದದ್ದು ಬೆಂಗಳೂರಿನ ಬಸವನಗುಡಿಯ ಕೊಹಿನೂರ್‌ ಮೈದಾನದ ಪಕ್ಕದ ಒಂದು ಕಟ್ಟಡದಲ್ಲಿ. ಮೊದಲು ಒಂದು ಮಹಡಿಯನ್ನು ಭೋಗ್ಯಕ್ಕೆ ಪಡೆದು ತರಗತಿಗಳನ್ನು ಪ್ರಾರಂಭ ಮಾಡಿದರು. ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಜಾಸ್ತಿಯಾಗುತ್ತಿದ್ದಂತೆ, ಇಡೀ ಕಟ್ಟಡವನ್ನು ಕೊಳ್ಳಬೇಕಾಯಿತು. ಈಗ ಬೆಂಗಳೂರಿನ ಇತರೆ ಸ್ಥಳದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಮಲ್ಲೇಶ್ವರಂನಲ್ಲಿ ಕೂಡ ಸಾಧನ ಮ್ಯೂಸಿಕ್‌ ಸ್ಕೂಲ್‌ನ ಶಾಖೆ ತೆರೆದಿದ್ದಾರೆ.

ಸಾಧನ ಶಾಲೆಯಲ್ಲಿ ಏನೇನು ಹೇಳಿಕೊಡ್ತಾರೆ?

ನವ ಪ್ರತಿಭೆಗಳನ್ನು ಶೋಧಿಸುವುದು, ಪ್ರತಿಭಾಶಾಲಿಗಳನ್ನು ಪ್ರೋತ್ಸಾಹಿಸುವುದು ಸಾಧನಾ ಮ್ಯೂಸಿಕ್‌ ಸ್ಕೂಲ್‌ನ ಗುರಿ. ತಮ್ಮ ಶಾಲೆಯಲ್ಲಿ ಹಾಡು, ನೃತ್ಯ, ಕೀಬೋರ್ಡ್‌, ಗಿಟಾರ್‌, ಹಾರ್ಮೋನಿಯಂ, ಕೊಳಲು, ವಯೋಲಿನ್‌ನ್ನು ಕಲಿಸಿಕೊಡುವ ಮಂಜುಳಾ, ಪ್ರತಿ ವರ್ಷ ದೇಶದ ಖ್ಯಾತ ಸಂಗೀತ ನಿರ್ದೇಶಕರು, ಗಾಯಕ-ಗಾಯಕಿಯರು, ಕವಿಗಳು, ವಾದ್ಯಗಾರರನ್ನು ಶಾಲೆಗೆ ಆಹ್ವಾನಿಸಿ ಅವರಿಂದ ಸಂಗೀತ ಸಂವಾದಗಳನ್ನು ಏರ್ಪಡಿಸುತ್ತಾರೆ. ಆಗಾಗ ರಾಜ್ಯಮಟ್ಟದ ಗಾಯನ, ಕವನ ರಚನೆ ಸ್ಪರ್ಧೆಗಳನ್ನು ಹಮ್ಮಿಕೊಂಡು, ಪ್ರತಿಭೆಗಳನ್ನು ಹೆಕ್ಕುತ್ತಾರೆ. ತರಬೇತಿ ಪೂರ್ಣವಾದ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಿ, ಜನರೆದುರಿಗೆ ನಿರ್ಭಯವಾಗಿ ಕಲಾ ಪ್ರದರ್ಶನ ನೀಡಲು ಪ್ರದರ್ಶನದ ಅವಕಾಶ ಕೊಡುತ್ತಾರೆ. ಸೌಂಡ್‌ ಆಫ್‌ ಮ್ಯೂಸಿಕ್‌ ವಾದ್ಯವೃಂದದ 25ನೇ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚಿಗೆ ಗುರು ದಂಪತಿಗಳು ಅತ್ಯಾಧುನಿಕ ಸಾಧನಾ ಡಿಜಿಟಲ್‌ ರೆಕಾರ್ಡಿಂಗ್‌ ಸ್ಟೂಡಿಯೋ ಕೂಡ ಪ್ರಾರಂಭಿಸಿದ್ದಾರೆ.

ಸಾಧನ ಶಾಲೆಯಲ್ಲಿ ಕಂಠ ಪಾಲಿಷ್‌

ಸಾಧನ ಮ್ಯೂಸಿಕ್‌ ಸ್ಕೂಲ್‌ ಬಗ್ಗೆ ಮಾತನಾಡುತ್ತಾ, ಒಳ್ಳೆಯ ಧ್ವನಿಯಿರುವಾಗ ನಾವು ಅದನ್ನು ಪಾಲಿಷ್‌ ಮಾಡುತ್ತೇವೆ. ಗಾಯಕರಿಗೆ ಹಾಡುವ ಕಲೆ ಬಹಳ ಮುಖ್ಯ, ಅದರ ಜತೆ ಹಾಡುವಾಗ ಏಕಾಗ್ರತೆ, ಧ್ವನಿಯನ್ನು ಹೇಗೆ ಪಳಗಿಸುವುದು, ಸ್ಟುಡಿಯೋ ಗಾಯನ, ವೇದಿಕೆಯಲ್ಲಿ ಅಭಿನಯ ಮುಂತಾದವುಗಳ ಬಗ್ಗೆ 6 ತಿಂಗಳಿಂದ 1 ವರ್ಷದ ತರಬೇತಿ ನೀಡಲಾಗುತ್ತದೆ. ಸಂಗೀತ ನಿದೇರ್ಶಕರ ಅಭಿಪ್ರಾಯ ಪಡೆದು ಸಿಲಬಸ್‌ ತಯಾರಿಸಿ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿದೆ. ಏನೇ ಆದರೂ ಸ್ವಂತ ಪರಿಶ್ರಮ ಮುಖ್ಯ ಎನ್ನುತ್ತಾರೆ ಮಂಜುಳಾ. ಇಂದಿನ ಖ್ಯಾತ ಗಾಯಕ-ಗಾಯಕಿಯರು ಮತ್ತು ಸಂಗೀತ ನಿರ್ದೇಶಕರಾದ ರಮೇಶ್‌ ಚಂದ್ರ, ನಂದಿತಾ, ದಿವ್ಯ ರಘುರಾಮ್‌, ವಿ. ಮನೋಹರ್‌, ಫಾಲ್ಗುಣ, ಅಶೋಕ್‌ ಶರ್ಮ ಮುಂತಾದವರು ಸಾಧನಾ ಮ್ಯೂಸಿಕ್‌ ಸ್ಕೂಲ್‌ನ ಪ್ರಾಡಕ್ಟುಗಳೆಂಬುದು ಮಂಜುಳಾ ಹೆಮ್ಮೆ.

ನಮ್ಮವರೇಕೆ ಇವರಿಗೆ ಬೇಡ

ಇವತ್ತು ಗಾಯನವನ್ನು ಹೇಳಿಕೊಡುವ ಅನೇಕ ಶಾಲೆಗಳಿವೆ. ಗಾಯನವನ್ನೇ ವೃತ್ತಿಯಾಗಿಸಿಕೊಳ್ಳುವ ಅನೇಕರು ಇದ್ದಾರೆ. ಆದರೂ ಕನ್ನಡದ ಗಾಯಕರಿಗೆ ಚಿತ್ರಗಳಲ್ಲಿ ಹಾಡಲು ಅವಕಾಶ ಸಿಗುತ್ತಿಲ್ಲ ಎಂಬುದು ಮಂಜುಳಾ ವಿಷಾದ.

ಚಿತ್ರರಂಗದಲ್ಲಿ ಅನ್ಯಾಯ ನಡೆಯುತ್ತಿದೆ, ರಿಸ್ಕ್‌ ತೆಗೆದುಕೊಳ್ಳುವುದಕ್ಕೆ ಯಾರೂ ತಯಾರಿಲ್ಲ. ನಮ್ಮಲ್ಲಿ ಒಳ್ಳೆಯ ಕಥೆ ಇಲ್ಲ. ಗಾಯಕರಿಲ್ಲ ಎನ್ನುತ್ತಾರೆ. ಬೇರೆ ಭಾಷೆಯವರ ಹತ್ತಿರ ಹಾಡಲು ಬೇಡಿಕೊಳ್ಳುತ್ತಾರೆ. ಇರುವ ಪ್ರತಿಭಾನ್ವಿತರಿಗೇ ಅವಕಾಶ ಕೊಡುತ್ತಿಲ್ಲ. ಕನ್ನಡಿಗರಿಗೆ ಸ್ವಾಭಿಮಾನವಿಲ್ಲ. ಹಿಂದಿಯವರದ್ದು ನಖರಾ ಜಾಸ್ತಿ. ಹಾಗಿದ್ದೂ ಅಂಥವರನ್ನೇ ಕರೆಸುತ್ತಾರೆ. ಬೇರೆಯವರು ಇಲ್ಲಿ ಬಂದು ಹಾಡಿದರೆ ನಮಗೆ ಲಾಭವಾದರೂ ಏನು? ನಮಗೆ ಅದರ ಅವಶ್ಯಕತೆ ಕೂಡ ಇಲ್ಲ. ನಮ್ಮವರಿಗೆ ದೇಶೀಯತೆ ಎನ್ನುವುದಿಲ್ಲ. ತಮ್ಮ ಮೇಲೆ ಭರವಸೆ ಹೋಗಿದೆ. ನಮ್ಮತನ ಉಳಿಸಿಕೊಳ್ಳಬೇಕು. ಸಂಗೀತ ಮತ್ತು ಗಾಯನ ಬಿಸಿನೆಸ್‌ ಆಗಿದೆ. ಅಭಿರುಚಿ ಮತ್ತು ಮಹತ್ವ ಗೊತ್ತಿರುವವರು ಚಿತ್ರ ಮಾಡಬೇಕು. ನಮ್ಮ ಜವಾಬ್ದಾರಿ ಅರಿತಿರಬೇಕು ಮತ್ತು ಅನಾಥಪ್ರಜ್ಞೆ ಕಾಡಬೇಕು. ನಮ್ಮ ಸಮಕಾಲೀನರು ವಿರಾಗಿಗಳಾಗಿದ್ದಾರೆ. ಯಾರು ಇದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ... ಭಾಷಣ ರೂಪದ ಮಂಜುಳಾ ಅಳಲಲ್ಲಿ ಅವರಿಗೆ ಹಾಡುವ ಅವಕಾಶ ಕಡಿಮೆಯಾಗಿರುವ ಕೊರಗೂ ಬೆರೆತಿರುವುದು ಸ್ಪಷ್ಟವಾಗುತ್ತಿತ್ತು.

ಹಾಡುಹಕ್ಕಿಗಳಿಗೆ ಪ್ರಶಸ್ತಿ ಕೊಡಿಸಿದ ಹೆಮ್ಮೆ : ಹಿಂದೆ ರಾಜ್ಯ ಸರ್ಕಾರ ಗಾಯನ ಬಿಟ್ಟು, ಮಿಕ್ಕೆಲ್ಲಾ ವಿಭಾಗಗಳಲ್ಲಿ ಪ್ರಶಸ್ತಿ ಕೊಡುತ್ತಿತ್ತು. ಗಾಯನಕ್ಕೆ ಸರ್ಕಾರ ಪ್ರಶಸ್ತಿ ಕೊಡುವ ನಿರ್ಣಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಮಂಜುಳಾ ಅವರ ಪಾತ್ರವೂ ಇದೆ. ಸಾಧನಾ ಮ್ಯೂಸಿಕ್‌ ಸ್ಕೂಲ್‌ ಪ್ರಾರಂಭೋತ್ಸವಕ್ಕೆ ಬಂದಿದ್ದ ಎಸ್‌.ಜಾನಕಿ ಮೂಲಕ ರಾಜ್ಯ ಪ್ರಶಸ್ತಿಯನ್ನು ಗಾಯಕರಿಗೂ ಕೊಡಿ ಎಂದು ಪತ್ರಿಕಾ ಗೋಷ್ಠಿ ನಡೆಸಿ ಸರ್ಕಾರಕ್ಕೆ ಮನವಿ ನೀಡಿದರು. ಇದಕ್ಕೆ ಒಪ್ಪಿದ ಆಗಿನ ವೀರಪ್ಪ ಮೊಯಿಲಿ ಸರ್ಕಾರ ಗಾಯಕ ಗಾಯಕಿಯರಿಗೂ ಪ್ರಶಸ್ತಿ ನೀಡಲು ಪ್ರಾರಂಭಿಸಿತು. ಆದರೆ ಅಲ್ಲೂ ಒಂದು ತಗಾದೆ ತೆಗೆದ ಸರ್ಕಾರ, ಪರಭಾಷಾ ಗಾಯಕ/ಗಾಯಕಿಯರು ರಾಜ್ಯ ಪ್ರಶಸ್ತಿಗೆ ಅರ್ಹರಲ್ಲ ಎಂಬ ಶಾಸನ ಬೇರೆ ತಂದಿತು.

Has a dream to start a theatre and Gurukulaಡಾ.ರಾಜ್‌ಕುಮಾರ್‌ ಹಾಡುಗಳನ್ನು ಹೊರತುಪಡಿಸಿದರೆ ಕನ್ನಡದಲ್ಲಿರುವ ಬಹುತೇಕ ಅತ್ಯುತ್ತಮ ಹಾಡುಗಳನ್ನು ಹಾಡಿರುವುದು ಪರಭಾಷಾ ಗಾಯಕ/ಗಾಯಕಿಯರು. ಅವರಿಗೂ ಇದುವರೆವಿಗೂ ಕರ್ನಾಟಕ ರಾಜ್ಯದ ಪ್ರಶಸ್ತಿ ಬಂದಿಲ್ಲ ಎಂಬ ಕೊರಗಿದೆ. ಈ ಬಗ್ಗೆ ಖ್ಯಾತ ಹಿನ್ನಲೆ ಗಾಯಕರಾದ ಎಸ್‌.ಪಿ. ಬಾಲಸುಬ್ರಮಣ್ಯಂ ಮತ್ತು ಎಸ್‌. ಜಾನಕಿ ಸಾರ್ವಜನಿಕವಾಗಿ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. ಅಂತಹ ಗಾಯಕರನ್ನು ನಿರ್ಲಕ್ಷಿಸಿ ನಮ್ಮ ಕಲಾವಿದರು ಎಂಬ ಕಾರಣಕ್ಕೆ ಪ್ರತಿ ವರ್ಷ ನಮ್ಮ ಗಾಯಕರಿಗೆ ಪ್ರಶಸ್ತಿ ಮೀಸಲಿಡಬೇಕು ಎನ್ನುವುದು ತಪ್ಪಲ್ಲವೇ ಎಂದು ಕೇಳಿದಾಗ, ‘ಹಿರಿಯ ಗಾಯಕರಿಗೆ ಜೀವಮಾನದ ಸಾಧಕರು ಪ್ರಶಸ್ತಿ ಕೊಡಬೇಕು. ಹೊಸ ಹೊಸ ಗಾಯಕರಿಗೆ ಇಂತಹ ಅತ್ಯುನ್ನತ ಪ್ರಶಸ್ತಿ ಬೇಗ ಸಿಕ್ಕಿದಾಗ ತಾವು ಬಹಳ ಸಾಧಿಸಿದ್ದೀವಿ ಅನ್ನಿಸಿಬಿಡುತ್ತದೆ. ನವ ಕಲಾವಿದರು ಸ್ವಲ್ಪ ಕಷ್ಟ ಪಡಬೇಕು. ಸಾಧಕರಿಗೆ ಮತ್ತು ಹೊಸಬರಿಗೆ ಬೇರೆ ಬೇರೆ ಪ್ರಶಸ್ತಿ ನೀಡುವಂತಾಗಬೇಕು’ ಎಂದು ಹೇಳಿದರು.

ಥೂ.. ಎಂಥಾ ಸಾಹಿತ್ಯಾನಪ್ಪ !

ಇತ್ತೀಚಿಗೆ ತೆರೆಕಾಣುತ್ತಿರುವ ಚಿತ್ರಗಳಲ್ಲಿ ಮಂಜುಳಾ ಗುರುರಾಜ್‌ ಹಾಡುತ್ತಿರುವ ಹಾಡುಗಳು ಬಹಳ ಕಡಿಮೆ. ಯಾಕೆ?
ಅಶ್ಲೀಲ ಸಾಹಿತ್ಯ ಇರುವ ಕಾರಣಕ್ಕೆ ನಾನೇ ಹೆಚ್ಚಾಗಿ ಹಾಡುತ್ತಿಲ್ಲ. ಇಂಥಾ ಸಾಹಿತ್ಯ ಖುಷಿ ತರುವುದಿಲ್ಲ , ಬದಲಿಗೆ ಮಾನಸಿಕ ಹಿಂಸೆ ನೀಡುತ್ತದೆ. ಆದರೂ ನಾವು ಹಾಡುವುದಿಲ್ಲ ಅಂದರೆ ಬೇರೆಯವರ ಹತ್ತಿರ ಹಾಡಿಸುತ್ತಾರೆ. ಜನ ಇಂತಹವರೇ ಹಾಡಬೇಕು ಎಂದು ಕೇಳುವುದಿಲ್ಲ. ಒಟ್ಟಿನಲ್ಲಿ ಅವರಿಗೆ ಹಾಡು ಚೆನ್ನಾಗಿರಬೇಕು. ಹಾಗಾಗಿ ಇತ್ತೀಚೆಗೆ ಹೆಚ್ಚಾಗಿ ಹಾಡುತ್ತಿಲ್ಲ ಅನ್ನೋದು ಮಂಜುಳಾ ಕೊಡುವ ಕಾರಣ.

ಆಸೆಗಳು, ಕನಸುಗಳು

ಒಂದು ಸುಸಜ್ಜಿತ ರಂಗಮಂದಿರ ಕಟ್ಟಿಸುವ ಆಸೆ ಇಟ್ಟುಕೊಂಡಿರುವ ಮಂಜುಳಾ ಗುರುರಾಜ್‌, ಈ ಬಗ್ಗೆ ಹಣಕಾಸಿನ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ನಮ್ಮಲ್ಲಿ ಇಲ್ಲದ ಶೆಹನಾಯ್‌ ಮತ್ತು ಸಂತೂರ್‌ ಗುರುಗಳನ್ನು ಕರೆಸಿ, ತರಪೇತಿ ಕೊಡಿಸುವ ಬಯಕೆಯಿದೆ. ಬುದ್ಧಿಮಾಂದ್ಯರಿಗೆ Musical therapy ನೀಡುವ ಕನಸಿದೆ. ಸಂಗೀತ ವಿದ್ಯಾರ್ಥಿಗಳಿಗೆ ಗುರುಕುಲ ಪ್ರಾರಂಭ ಮಾಡಿ, 6 ತಿಂಗಳು ಬರೀ ಸಂಗೀತ ಕಲಿಸಿಕೊಡುವ ಆಸೆಯಿದೆ. ಇವು ಮಂಜುಳಾ ಗುರುರಾಜ್‌ ಅಂದುಕೊಂಡಿರುವ ಯೋಜನೆಗಳು.

ಮಟ್ಟು ಹಾಕಲು ತಯಾರ್‌ : ಚಿತ್ರಗಳಿಗೆ ಸಂಗೀತ ಸಂಯೋಜಿಸುವ ಆಸೆ ಇಲ್ಲವೇ ಎಂಬ ಪ್ರಶ್ನೆಗೆ, ಇದುವರೆವಿಗೂ ಚಿತ್ರಗಳಿಗೆ ಸಂಗೀತ ಕೊಟ್ಟಿಲ್ಲ. ಸಂಗೀತ ಕೊಡುವುದಕ್ಕೆ ನಾನು ತಯಾರು. ಆದರೆ ನನಗೆ ಸ್ವಾತಂತ್ರ್ಯ, ಸಮಯ ಕೊಟ್ಟರೆ ಮಾತ್ರ ಸಾಧ್ಯ ಎನ್ನುತ್ತಾರೆ. ಜರ್ಮನಿಯ ಡಾ. ಹಾನ್ಸ್‌ ರೈನರ್‌ ನಿರ್ಮಾಣದ The Five Elements – Ayurveda Symphony ಎಂಬ ಪಂಚಭೂತಗಳನ್ನೊಳಗೊಂಡ ಸಂಗೀತ ಸಿ.ಡಿ.ಗೆ ಸಂಗೀತ ನೀಡಿದ ಅನುಭವ ಇವರಿಗಿದೆ. ನಿರ್ಮಾಪಕರಾದ ಪಾರ್ವತಮ್ಮ ರಾಜ್‌ಕುಮಾರ್‌ ಮತ್ತು ದ್ವಾರಕೀಶ್‌ ತಮ್ಮ ಚಿತ್ರಗಳಿಗೆ ಸಂಗೀತ ನೀಡಲು ಒತ್ತಾಯಿಸುತ್ತಿದ್ದಾರೆ ಅಂತ ಮಂಜುಳಾ ಹೆಮ್ಮೆಯಿಂದ ಹೇಳಿದರು.

ಚಲನಚಿತ್ರ ಗಾಯನಕ್ಕೆ ಶಾಸ್ತ್ರೀಯ ಸಂಗೀತದ ಜ್ಞಾನ ಬೇಕೆ ಎಂದು ಕೇಳಿದಾಗ, ಶಾಸ್ತ್ರೀಯ ಸಂಗೀತದ ಜ್ಞಾನ ಇರಲೇಬೇಕು ಅನುವುದಕ್ಕಿಂತ, ಇದ್ದರೆ ಒಳ್ಳೆಯದು. ಆದರೂ ಬಹಳಷ್ಟು ಮಂದಿ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿಲ್ಲ. ಎಲ್ಲಕ್ಕಿಂತಲೂ ಕ್ರಿಯಾಶೀಲತೆ ಮುಖ್ಯ ಎನ್ನುತ್ತಾರೆ.

ಕನ್ನಡ ಗೀತೆಗಳು ಹೊರದೇಶಗಳಲ್ಲಿ ಅಪರೂಪ ಎಂಬ ಸನ್ನಿವೇಶವಿದ್ದಾಗ, ಹೊರದೇಶಗಳಲ್ಲಿ ತಮ್ಮ ವಾದ್ಯವೃಂದದಿಂದ ಕನ್ನಡದ ಕಂಪನ್ನು ಹರಡಿದ ಕೀರ್ತಿ ಮಂಜುಳಾರಿಗೆ ಸಲ್ಲಬೇಕು. ತಮ್ಮ ವಾದ್ಯವೃಂದ ಮತ್ತು ಹೊರದೇಶಗಳಲ್ಲಿ ಗಾಯನದ ಕುರಿತು ಕೇಳಿದಾಗ, ವಾದ್ಯವೃಂದಕ್ಕೆ ಜೀವಂತಿಕೆ ಇದೆ. ಆದರೆ ಮಷೀನ್‌ ಸಂಗೀತಕ್ಕೆ ಜೀವಂತಿಕೆ ಇರುವುದಿಲ್ಲ ಎಂದು ವಾದ್ಯವೃಂದದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ತಮ್ಮ ತಂಡದೊಂದಿಗೆ ಸುಮಾರು 3 ಸಾವಿರ ಕಾರ್ಯಕ್ರಮಗಳನ್ನು, ದೇಶ ವಿದೇಶಗಳಲ್ಲಿ ನೀಡಿದ ಹೆಗ್ಗಳಿಕೆ ಪಡೆದಿರುವ ಮಂಜುಳಾ, ಅಮೆರಿಕಾದ ಪಂಪ ಕನ್ನಡ ಕೂಟದ 25ನೇ ವಾರ್ಷಿಕೋತ್ಸವದ ಅಂಗವಾಗಿ 13 ಜನರ ತಂಡ ಕಾರ್ಯಕ್ರಮ ನೀಡಿದೆ.

ಮಂಜುಳಾ ಗುರುರಾಜ್‌ ಇ- ಮೇಲ್‌ :

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X