ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ತ್ರೀಯರಿಗೆ ಬೆನ್ನು ತೋರಿದ ಕಸಾಪ

By Staff
|
Google Oneindia Kannada News
  • ಅರವಿಂದ ನಾವಡ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲು ಒದಗಿಸುವ ತಿದ್ದುಪಡಿ ಕಾರ್ಯಕಾರಿ ಸಮಿತಿಯಲ್ಲಿ ಸಂಪೂರ್ಣ ತಿರಸ್ಕೃತವಾಗಿದೆ.

ಬೀದರ್‌ನಲ್ಲಿ ಆ. 9 ಮತ್ತು 10ರಂದು ನಡೆದ ಜಿಲ್ಲಾಧ್ಯಕ್ಷರ ಸಮಾವೇಶ ಸಂದರ್ಭದಲ್ಲಿ ಮಹಿಳಾ ತಿದ್ದುಪಡಿ ಚರ್ಚೆಗೆ ಬಂದಿತ್ತು. ಆದರೆ ಬಹುತೇಕ ಜಿಲ್ಲಾಧ್ಯಕ್ಷರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಉದ್ದೇಶಿತ ತಿದ್ದುಪಡಿಯನ್ನು ಕೈಬಿಡಲಾಗಿದೆ.

Kannada sahithya Parishathತಿದ್ದುಪಡಿ ಒಂದುವೇಳೆ ಜಾರಿಗೆ ಬಂದಿದ್ದರೆ 27 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಪೈಕಿ 5 ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಿಡಬೇಕಿತ್ತು. ಇದರೊಂದಿಗೆ ಕೇಂದ್ರ ಹಾಗೂ ಜಿಲ್ಲಾ ಘಟಕಗಳಲ್ಲಿರುವ 2 ಗೌರವ ಕಾರ್ಯದರ್ಶಿ ಹುದ್ದೆಯ ಪೈಕಿ ಒಂದು ಹುದ್ದೆ ಕಡ್ಡಾಯವಾಗಿ ಮಹಿಳೆಯರಿಗೆ ನೀಡಬೇಕಿತ್ತು.

ತಿದ್ದುಪಡಿ ಬಗ್ಗೆ ಸಾಕಷ್ಟು ಚರ್ಚೆ ನಡೆದರೂ ಅದಕ್ಕೆ ಒಪ್ಪಿಗೆ ನೀಡುವ ಮನಸ್ಸು ಬಹುತೇಕ ಜಿಲ್ಲಾಧ್ಯಕ್ಷರು ಮಾಡಲಿಲ್ಲ. ಇದೊಂದು ವಿಪರ್ಯಾಸ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರತಿಕ್ರಿಯಿಸಿದ್ದಾರೆ.

‘ನಾಡಿನ ಬೌದ್ಧಿಕ ಸಂಸ್ಥೆ ಎಂದು ಹೇಳಿಕೊಳ್ಳುವ ಸಾಹಿತ್ಯ ಪರಿಷತ್ತಿನಲ್ಲೇ ಹೀಗಾದರೆ ಹೇಗೆ ? ಮಹಿಳೆಯರಿಗೂ ಪುರುಷರಂತೆ ಸಮಾನ ಕಾರ್ಯ ಗೌರವ ನೀಡುವ ಉದ್ದೇಶದಿಂದ ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿತ್ತು. ಇದು ಪ್ರಗತಿಪರ ನಿಲುವು. ಕಾರ್ಯಕಾರಿ ಮಂಡಳಿ ಹಾಗೂ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಮಹಿಳೆಯರೂ ಪಾತ್ರ ವಹಿಸುವ ಮೂಲಕ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಸಹಕರಿಸುವಂತಾಗಲಿ ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು . ಆದರೆ ಕಾರ್ಯಕಾರಿ ಸಮಿತಿಯೇ ಒಪ್ಪಿಗೆ ನೀಡಲಿಲ್ಲ ’ ಎಂದು ವಿವರಿಸಿದರು.

ಈ ಬೆಳವಣಿಗೆಯಿಂದ ಸಾಹಿತ್ಯ ಪರಿಷತ್ತು ಮಹಿಳೆಯರನ್ನು ಪುನಃ ದೂರ ಇಟ್ಟಂತಾಗಿದೆ. ಸದ್ಯದಲ್ಲಿ 27 ಜಿಲ್ಲೆ ಘಟಕ ಹಾಗೂ 3 ಗಡಿನಾಡ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಕೇರಳ ಗಡಿನಾಡ ಘಟಕದ ಅಧ್ಯಕ್ಷೆ ಲಲಿತಾ ಎಸ್‌. ಎನ್‌. ಭಟ್‌ ಬಿಟ್ಟರೆ ಮತ್ಯಾರೂ ಮಹಿಳೆಯರಿಲ್ಲ. ಇದರಿಂದ ಮಹಿಳಾ ಪ್ರಾತಿನಿಧ್ಯ ಸಂಪೂರ್ಣ ಅಳಿಸಿ ಹೋದಂತಾಗಿದೆ. ಲಲಿತಾ ಎಸ್‌. ಎನ್‌. ಭಟ್‌ ಎರಡನೇ ಬಾರಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಹಿಳಾ ವೇದಿಕೆ : ಮಹಿಳಾ ಸಾಹಿತ್ಯ ಚಟುವಟಿಕೆಗಳಿಗೂ ಪ್ರಾತಿನಿಧ್ಯ ನೀಡಬೇಕೆಂಬ ಉದ್ದೇಶದಿಂದ ಜಿ. ನಾರಾಯಣ ಅವರುಅಧ್ಯಕ್ಷರಾಗಿದ್ದಾಗ ಉಳಿದ ಉಪ ಸಮಿತಿಗಳಂತೆ ಮಹಿಳಾ ಸಮಿತಿಯಾಂದನ್ನು ರಚಿಸಿದ್ದರು. ಈ ಮಹಿಳಾ ಸಮಿತಿಯ ಸದಸ್ಯರು ಮಹಿಳಾ ಸಾಹಿತ್ಯ, ದೇವರನಾಮ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ಜಿ. ನಾರಾಯಣ ಅವರ ಅವಧಿ ಮುಗಿದ ಕೂಡಲೇ ಮಹಿಳಾ ಸಮಿತಿಯೂ ಮೂಲೆ ಗುಂಪಾಯಿತು. ಅದರ ಸಂಪೂರ್ಣ ಚೇತರಿಕೆಗೆ ಯಾರೂ ಪ್ರಯತ್ನಿಸಲಿಲ್ಲ.

ಶೇ.20ರಷ್ಟು ಬಲಕ್ಕೆ ಅವಕಾಶವೇ ಇಲ್ಲ :

ಸಾಹಿತ್ಯ ಪರಿಷತ್ತನ 42 ಸಾವಿರ ಸದಸ್ಯರ ಪೈಕಿ ಸುಮಾರು ಶೇ.20ರಷ್ಟು ಮಹಿಳೆಯರಿದ್ದಾರೆ. ಸಾಹಿತ್ಯ ಪರಿಷತ್ತಿನಲ್ಲಿ ಮಹಿಳಾ ಸಾಹಿತಿಯಾಬ್ಬರ ನಾಮ ನಿರ್ದೇಶನಕ್ಕೆ ಅವಕಾಶವಿದ್ದು ಪ್ರಸ್ತುತ ಟಿ. ಸಿ. ಪೂರ್ಣಿಮಾ ಪದ ನಿಮಿತ್ತ ಸದಸ್ಯರಾಗಿದ್ದಾರೆ.

ಇದನ್ನು ಹೊರತು ಪಡಿಸಿದರೆ ಪರಿಷತ್ತಿನ ಆಡಳಿತ ವ್ಯವಸ್ಥೆಯಲ್ಲಿ ಎಲ್ಲಿಯೂ ಮಹಿಳೆಯರಿಗೆ ಅವಕಾಶ ಇಲ್ಲ ಎಂಬುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X