• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್ಚೆನ್‌ ಕಲಾಕ್ಷೇತ್ರದ ಜನ ಸಾಗರದಲ್ಲಿ ನಗೆಯ ಹಾಯಿದೋಣಿ

By Staff
|
  • ದಟ್ಸ್‌ಕನ್ನಡ ಬ್ಯೂರೋ
ಬೆಂಗಳೂರಿನ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಕ್ರಿಸ್‌ಮಸ್‌ ದಿನ ಹೊರಗಡೆ ಆಗಾಗ ತುಂತುರು ಮಳೆ ಹನಿ ಕಾಡುತ್ತಿದ್ದರೆ, ಅಂಗಳದ ಶಾಮಿಯಾನ ಕೆಳಗೆ ಜೋಕ್‌ಫಾಲ್ಸ್‌ ! ಕಲಾಕ್ಷೇತ್ರದ ಒಳಗೆ ದೊಡ್ಡ ಪರದೆಯ ಮೇಲೂ ‘ಜೋಕು’ಮಾರರ ದರುಶನ.

ವೈಯೆನ್ಕೆ ಮತ್ತು ಟಿಯೆಸ್ಸಾರ್‌ ನೆನಪು ನಗಲು ನೆವವಾಯಿತು. ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ಟರು ವೈಯೆನ್ಕೆಯವರನ್ನು ಆವಾಹಿಸಿಕೊಂಡರು. ಜಿ.ವಿ.ಅಯ್ಯರ್‌ ಉದ್ಘಾಟಿಸಬೇಕಿದ್ದ ಕಾರ್ಯಕ್ರಮಕ್ಕೆ ಹಾಸ್ಯ ಸಾಹಿತಿ ಶ್ರೀನಿವಾಸ್‌ ವೈದ್ಯ ಚಾಲನೆ ಕೊಟ್ಟರು. ಅ.ರಾ.ಮಿತ್ರ ನೇತೃತ್ವದ ತಂಡದ ಸದಸ್ಯರು ಪುಂಖಾನುಪುಂಖವಾಗಿ ಕಚಗುಳಿ ಇಡತೊಡಗಿದರು. ಕೆಲವು ಜೋಕುಗಳನ್ನು ನೀವೂ ಓದಿಕೊಳ್ಳಿ...

ಶ್ರೀನಿವಾಸ್‌ ವೈದ್ಯ ಸಿಡಿಸಿದ ಅನುಭವದ ಜೋಕು- ಜಿ.ವಿ. ಅಯ್ಯರ್‌ ಮರಣದಿಂದ ಈ ಜವಾಬ್ದಾರಿ ನನಗೆ ಬಂತು. ನಾನು ಕಾರ್ಯಕ್ರಮಕ್ಕೆ ಹೊರಡುವಾಗ, ಮಗ ಹೋಗಬೇಡಿ ಅಂದ. ಮೊದಲು ಈ ಕಾರ್ಯಕ್ರಮಕ್ಕೆ ಕೀರ್ತಿನಾಥ ಕುರ್ತುಕೋಟಿಯವರನ್ನು ಕರೆಯಬೇಕೆಂದಿದ್ದರು. ಆದರೆ ಅವರು ಮರಣ ಹೊಂದಿದರು. ಆಮೇಲೆ ಈಶ್ವರ ಭಟ್ಟರನ್ನು ಕರೆದರು. ಭಟ್ಟರೂ ತೀರಿಹೋದರು. ನಂತರ ಜಿ.ವಿ. ಅಯ್ಯರ್‌ ಅವರನ್ನು ಕರೆದರು. ಅವರೂ ಕೂಡ ಇವರಿಬ್ಬರ ದಾರಿಯನ್ನೇ ಹಿಡಿದರು. ಈಗ ನನ್ನನ್ನು ಕರೆದಿದ್ದಾರೆ. ನಾನು ಕೂಡ ಎಲ್ಲಿ ಅವರ ಹಾದಿ ತುಳಿಯುತ್ತೇನೋ ಮಗ ಹೆದರಿದ್ದ. ಎಷ್ಟು ಹೇಳಿದರೂ ಅವನ ಮಾತನ್ನು ನಾನು ಕೇಳದೇ ಇದ್ದುದಕ್ಕೆ, ಹೋಗಲೇ ಬೇಕೆಂದರೆ ಗೋದ್ರೇಜ್‌ ಬೀರು ಬೀಗದ ಕೈ ಮತ್ತು ಬ್ಯಾಂಕಿನ ಪಾಸ್‌ ಬುಕ್‌ ಇಟ್ಟು ಹೋಗು ಅಂತ ಹೇಳಿದ.’

ವೈದ್ಯರ ಇನ್ನೂ ಒಂದು ಜೋಕ್‌- ‘ನನಗೆ ಇತ್ತೀಚಿಗೆ ಒಂದು ಪ್ರಶಸ್ತಿ ಬಂತು. ಅನೇಕರು ಅಭಿನಂದಿಸಿದರು. 20 ವರ್ಷದಿಂದ ಬರೆಯುತ್ತಿದ್ದೀರ ಈಗಲಾದರೂ ಪ್ರಶಸ್ತಿ ಬಂತಲ್ಲ ಎಂದು ಕೆಲವರು ಮರುಕಪಟ್ಟರೆ, ನೀವು ಹಿರಿಯರು ಅದಕ್ಕೇ ಪ್ರಶಸ್ತಿ ಬಂದಿದೆ ಎಂದು ಇನ್ನಷ್ಟು ಜನ ಸಮಜಾಯಿಷಿ ನೀಡಿದರು. ಇನ್ನೂ ಕೆಲವರು ಈಗ ಪ್ರಶಸ್ತಿ ಬಂದಿದೆಯಲ್ಲಾ, ಇನ್ನಾದರೂ ಚೆನ್ನಾಗಿ ಬರೆಯಿರಿ ಎಂದು ಉಪದೇಶ ಕೊಟ್ಟರು. ಧಾರವಾಡದ ಸ್ನೇಹಿತರೊಬ್ಬರು , ಪ್ರಶಸ್ತಿ ಹೊಡದೆಯಂತಲ್ಲೋ, ಯಾರನ್ನ ಹಿಡದಿ. ಬಾಳ ಬೆರಕಿ ಇದ್ದೀಯೋ ಅಂದರು’.

*

ವೈಯೆನ್ಕೆ ಬಳಿ ಒಬ್ಬ ಕವಿ ಬಂದು ತನ್ನ 6 ಕವನ ಸಂಕಲನಗಳನ್ನು ಕೊಟ್ಟ. ವೈಯೆನ್ಕೆ ‘ಏನಾದ್ರೂ ಮಾರಿದ್ದುಂಟೆ’ ಅಂತ ವಿಚಾರಿಸಿದರು. ಅದಕ್ಕೆ ಕವಿ, ‘ಹೌದು, ಮಾರಿದೆ. ಹೆಂಡತಿಯ ಕೈಬಳೆ, ಮನೆಯ ಫ್ರಿಜ್‌ ಇನ್ನೂ ಏನೇನೋ’ ಅಂದ.

*

ಪಕ್ಕದ ಮನೆಯಾಕೆಗೆ ಒಬ್ಬಳು ಕೇಳಿದಳು- ‘ನಿಮ್ಮ ಮನೇಲಿ ನಾಯಿ ಇತ್ತಲ್ಲ, ಎಲ್ಲಿ ?’ ಅಂತ. ‘ನಾಯಿ ಮಾರಿಬಿಟ್ಟೆ. ನಮ್ಮ ಯಜಮಾನ್ರು ರಿಟೈರ್‌ ಆದ್ರಲ್ಲ’ ಎಂದಳು ಪಕ್ಕದ ಮನೆಯಾಕೆ.

*

ಸರ್ಕಾರ ಕೊಡೋದೇ ಮೂವತ್ತು ನಲವತ್ತು ಸೈಟು. ಮತ್ತೆ ಅದರಲ್ಲೇ ಆ ಕಡೆ ಮೂರಡಿ ಬಿಡಿ, ಈ ಕಡೆ ಮೂರಡಿ ಬಿಡಿ, ಮಧ್ಯೆ ಪ್ರಾಣ ಬಿಡಿ...ಅಂತಾರೆ.

*

ಭಟ್ಟರು ಹೇಳಿದ ‘ಪನ್‌’ಡಿತ ವೈಯೆನ್ಕೆಯವರ ಕೆಲವು ಪನ್‌ಗಳು...

  1. ನಗಿ- ಬೇಕಿಲ್ಲ ಪರವಾ‘ನಗಿ’
  2. ‘ಕೊಟ್ಟ’ ಕಾದಂಬರಿ ಕನ್ನಡ ಸಾಹಿತ್ಯದಲ್ಲೊಂದು ‘ಮೊಯ್ಲಿ’ಗಲ್ಲು
  3. ಕುತ್ತಿಗೆ ಕೊಯ್ದು ಕೊಲ್ಲುವುದು ಅತಿಯಾಗಿದ್ದಾಗ ವೈಯೆನ್ಕೆ ಕೊಟ್ಟಿದ್ದ ಹೆಡ್‌ಲೈನು- ‘ಕಟ್‌ ಥ್ರೋಟ್‌ ಕಾಂಪಿಟೇಷನ್‌’
  4. ಬಸ್ಸಿನಲ್ಲಿ ನಿಂತು ಪ್ರಯಾಣಿಸುವವರಿಗೆ ಏನನ್ನುತ್ತಾರೆ? - ಸ್ವಂತ ಕಾಲ ಮೇಲೆ ನಿಲ್ಲುವವರು.
  5. ಪರೀಕ್ಷೆಯಲ್ಲಿ ಬರೆಯುತ್ತಾ ಸತ್ತವರಿಗೆ ಏನನ್ನುತ್ತಾರೆ? - ಮರಣೋತ್ತರ ಪರೀಕ್ಷೆ.
  6. ಚಿತ್ರನಟಿ ರೇಖಾ ಅತಿಯಾದ ನಟನೆ ಮಾಡಿದರೆ ಅವಳಿಗೆ ಏನನ್ನುತ್ತಾರೆ? - ಅತಿರೇಖಾ.
  7. ಮಾವನ ಮನೇಲಿ ಬಿಡಾರ ಹೂಡೋನಿಗೆ ಏನನ್ನುತ್ತಾರೆ?- ಮಾವ ವಾದಿ.
  8. ಓದಿದ್ದೆಲ್ಲವನ್ನೂ ಅರ್ಥ ಮಾಡಿಕೊಂಡವನಿಗೆ ಏನನ್ನುತ್ತಾರೆ? ರೀಡರ್ಸ್‌ ಡೈಜಸ್ಟ್‌.
  9. ತಾರಾ ಹೊಟೇಲೊಂದರ ಗುಂಡುಪಾರ್ಟಿಯಲ್ಲಿ ನಟ ಅನಂತನಾಗ್‌, ವೈಯನ್ಕೆಯವರನ್ನು ಏನ್‌ ಸಾರ್‌ ಇಲ್ಲಿ ಮಕ್ಕಳೇ ಇಲ್ಲ ಅಂತ ಪ್ರಶ್ನಿಸಿದರಂತೆ. ಆಗ ವೈಯನ್ಕೆ ಹೇಳಿದ್ದು- ಇಲ್ಲಿ ಮಕ್ಕಳಿಲ್ಲ, ಕಳ್‌ನನ್ಮಕ್ಕಳಿದ್ದಾರೆ !
**

ಪ್ರೇಕ್ಷಕರಾಗಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸಪತ್ನೀಕರಾಗಿ ಹಾಸ್ಯೋತ್ಸವಕ್ಕೆ ಬಂದಿದ್ದು ಅನೇಕರಿಗೆ ಸಿಕ್ಕ ಶಾಕ್‌. ಆಮೇಲೆ ಖುದ್ದು ಕೃಷ್ಣ ಹಾಸ್ಯದ ವಸ್ತುವಾದಾಗ ಅವರಿಗೆ ಶಾಕ್‌ ಆಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಹೊಟ್ಟೆ ಹುಣ್ಣಾಗುವಂತೆ ಅವರು ಬಿದ್ದುಬಿದ್ದು ನಕ್ಕಿದ್ದಂತೂ ದಿಟ. ವಿಡಂಬನೆಯ ವ್ಯಂಗ್ಯವನ್ನೂ ಸವಿದದ್ದು ಅವರ ಸ್ಪೋರ್ಟಿವ್‌ ವ್ಯಕ್ತಿತ್ವಕ್ಕೆ ಸಾಕ್ಷಿ.

‘ನಗರಕ್ಕೆ ಬಂದಾಗ, ನರಕವಿದು ಎನಿಸಿದಾಗ, ಕೃಷ್ಣ ಎನಬಾರದೇ..., ಹಾದಿ-ಬೀದಿ ತಿರುಗುವಾಗ, ರೋಡು ಕ್ರಾಸು ಮಾಡುವಾಗ, ವಾಹನ ಹೊಗೆ ಉಗುಳಿ, ಉಸಿರುಕಟ್ಟಿ ಒದ್ದಾಡುವಾಗ ಕೃಷ್ಣ ಎನಬಾರದೇ... ಎಸ್‌ಎಂ ಕೃಷ್ಣ ಎನಬಾರದೇ...’ ಎಂಬ ಹಾಡಿಗೆ ಅತ್ತಿತ್ತ ನೋಡದೆ ಕೃಷ್ಣ ಗೊಳ್ಳನೆ ನಕ್ಕರು.

ಸಮಾರಂಭದಲ್ಲಿ 18 ಹಾಸ್ಯ ಪುಸ್ತಕಗಳು ಬಿಡುಗಡೆಯಾದವು. ಗುಂಡೂರಾವ್‌ ‘ಪನ್‌ಸೈಕ್ಲೋಪೀಡಿಯಾ’ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಮಧ್ಯೆ ಗಾನ ವಿನೋದಿನಿ ತಂಡ ‘ಛೀ ಟಿ.ವಿ.’ ನಾಟಕ ನಡೆಸಿಕೊಟ್ಟಿತು. ‘ಉಂಡನೀರ ಉಗಳೋದ್ರಾಗ’ ಮತ್ತು ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡುಗಳಿಗೆ ಚಪ್ಪಾಳೆಯ ಮಳೆ. ಅಷ್ಟು ಹೊತ್ತಿಗೆ ಹೊರಗಡೆ ಮಳೆ ಪೂರ್ತಿ ನಿಂತಿತ್ತು, ಸೂರ್ಯ ಕೂಡ ಜೋರಾಗಿ ನಗುತ್ತಿದ್ದ !

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more